ನವಿಲುಗಣ್ಣಿನ ಗೆಳತಿಗೆ...

ನವಿಲುಗಣ್ಣಿನ ಗೆಳತಿಗೆ...

ಕವನ

ನವಿಲುಗಣ್ಣಿನ ಗೆಳತಿಗೆ...

ಭಾಷೆಯಾವುದಾದರೇನು ಭಾವ ನವನವೀನ ಎಂದಂದುಕೊಂಡು ತೆಲುಗು ಸಿನಿಮಾಕ್ಕೊಂದಕ್ಕೆ ಹೋಗಿದ್ದೆ. ಮಿಸ್ಟರ್ ಫರ್ಫೆಕ್ಟ್ ಎಂಬ ಹೆಸರಿನ ಆ ಸಿನಿಮಾ ಎಲ್ಲಾ ತೆಲುಗು ಸಿನಿಮಾಗಳಂತೆ ಹೀರೋವನ್ನು ಫರ್ಫೆಕ್ಟ್ ಎಂಬರ್ಥದಲ್ಲಿ ಬಿಂಬಿಸಿದರೂ, ಅದರ ಆ ಬಣ್ಣ, ತಾಂತ್ರಿಕ ವರ್ಗದವರ ಕೈಚಳಕ,ಯಾವಾಗಲೂ ಹೊಸದಾಗೇ ಕಾಣುವ ಮುಖಗಳು, ಹಿನ್ನೆಲೆಯಲ್ಲಿ ಜನರ ಶಿಳ್ಳೆ ಇತ್ಯಾದಿ ಕಾರಣಗಳಿಂದ ಇಷ್ಟವಾಯಿತು. ಅದರ ಒಂದು ಹಾಡನ್ನು ಶ್ರೇಯಾ ಘೋಷಾಲ್ ಮಾಂತ್ರಿಕವಾಗಿ ಹಾಡಿ, ಗುಂಗಿಗೆ ಕಾರಣವಾಗಿದ್ದರಿಂದಲೇ ಅದೇ ಧಾಟಿಗೆ ನನ್ನ ಶಬ್ದಗಳ ಪೋಣಿಸಿ ಈ ರೀತಿ ನವಿಲುಗಣ್ಣಿನ ಗೆಳತಿಗೆ ಕಾವ್ಯವರ್ಪಿಸಿದ್ದು..

ಮೂಲ ಹಾಡು : ಇಲ್ಲಿದೆ

ಚಳಿಚಳಿಯಾ ಸಂಜೆಯಲಿ ಮಳೆಬರುವಾ ವೇಳೆಯಲಿ ಕೊಡೆಯಿಲ್ಲದೆ ನಡೆಯುವುದೇ ಸೊಗಸು
ಬಳಿಬರುವಾ ತಂಗಾಳಿ ನಿನ್ನಾ ರೂಪವ ತಾಳಿ ಹಚ್ಚಿದೆ ಎದೆಯಲಿ ಬಾಣ ಬಿರುಸು

ಅಧರದ ಅಂಚಿನಲ್ಯಾವುದೆ ಮಾತಿಲ್ಲ 
ಮಿನುಗುವ ನಕ್ಷತ್ರಗಳ ರೀತಿ 
ವಿಧವಿಧ ಬಣ್ಣಗಳ್ಯಾವುದು ಬೇಕಿಲ್ಲ 
ಮಳೆಬಿಲ್ಲಿನ ತರಹ ಪ್ರೀತಿ

ನಿನ್ನ ಕಣ್ಣೀಗ ಮಧುಗಡಲು,ಮುದ್ದಾದ ಮುಂಗುರುಳು,ಚಂದ್ರನೆ ನಿನ್ನಾ ನೆರಳು,ನೀನೆ ನವಿಲು 
ನೀನು ಬರುತಿದ್ದರದೇ ಹಗಲು,ಬರದೇ ಇದ್ದರೆ ದಿಗಿಲು, ಮಳೆಯಾಯ್ತು ಕರಿಮುಗಿಲು,ನೀನು ನಗಲು

ಭಾವದ ಲೇಪನಕೆ ಕುಂಚದ ನೇವರಿಕೆ
ಇತ್ತೀಚಿಗೆ ಶುರುವಾಗಿದೆ ಕನಸಿನ ಗಳಿಕೆ
ಪ್ರೀತಿಯ ವಿಹಗಕ್ಕೆ, ಮೂಡಿದೆ ಹೊಸ ರೆಕ್ಕೆ
ಆಕಾಶವೇ ಸಾಕಾಗದು ಹಾರಲು ಅದಕೆ.

ನಿನ್ನ ರೂಪ, ಬಹಳ ಅಪರೂಪ 
ಶಶಿಯಲ್ಲೂ ಲೋಪ , ಯಾರದೋ ಶಾಪ 
ಬಾಗಿರುವುದು ಬಾನು,ಗುಂಯ್ ಗುಟ್ಟಿದೆ ಜೇನು 
ಮನದಾ ಕೊಳದಲ್ಲೀಗ ಬಣ್ಣದ ಮೀನು

ನಿನ್ನ ಕಣ್ಣೀಗ ಮಧುಗಡಲು,ಮುದ್ದಾದ ಮುಂಗುರುಳು,ಚಂದ್ರನೆ ನಿನ್ನಾ ನೆರಳು,ನೀನೆ ನವಿಲು 
ನೀನು ಬರುತಿದ್ದರದೇ ಹಗಲು,ಬರದೇ ಇದ್ದರೆ ದಿಗಿಲು, ಮಳೆಯಾಯ್ತು ಕರಿಮುಗಿಲು,ನೀನು ನಗಲು

ಬೆಳದಿಂಗಳ ಸೆಳೆತ ಕಾಡುತಲಿದೆ ಸತತ 
ಇರಲಾರೆ ಕ್ಷಣಕೂಡಾ ನಿನ್ನಾ ರಹಿತ 
ನೆನಪೇ ಅನವರತ,ತೀರದ ಹೊಸ ಮೊರೆತ 
ನಾವಿಬ್ಬರು ಒಂದಾಗಿ ಬಾಳುವುದುಚಿತ

ಇಂದ್ರ ಚಾಪ ,ಬರದೇ ಸಂತಾಪ 
ನೀ ತಂದೆ ಬದಲಾಗಿ ಭಾವಾಲಾಪ 
ಪದಗಳ ಸಮ್ಮಿಲನ, ಹದವರಿತ ಮೌನ 
ವಿವರಣೆಯೇ ಬೇಕಿರದ ಸುಂದರ ಕವನ

ನಿನ್ನ ಕಣ್ಣೀಗ ಮಧುಗಡಲು,ಮುದ್ದಾದ ಮುಂಗುರುಳು,ಚಂದ್ರನೆ ನಿನ್ನಾ ನೆರಳು,ನೀನೆ ನವಿಲು 
ನೀನು ಬರುತಿದ್ದರದೇ ಹಗಲು,ಬರದೇ ಇದ್ದರೆ ದಿಗಿಲು, ಮಳೆಯಾಯ್ತು ಕರಿಮುಗಿಲು,ನೀನು ನಗಲು

Comments