ಒಂದೇ ಒಂದು ಪತ್ರ.. ಅವತ್ತು ಹೇಳಲಾಗದ್ದನ್ನು ಇವತ್ತು ಬರೆದಿದ್ದೇನೆ..
ಮೊನ್ನೆ ಸೋಮವಾರ ಅದ್ಹೆಂಗೆ ನನ್ ಕಣ್ಣಿಗೆ ಬಿದ್ಯೆ ನೀನು? ನಿನ್ನ ನೋಡಿದ ಕೂಡಲೇ ನಂಗೆ ಅನುಮಾನ ಅದು ನೀನೇನಾ ಇಲ್ಲ ಬೇರೆ ಯಾರೋ ಅಂತಾ.. ಅಯ್ಯೋ ಕೋತಿ, ನೀ ನನ್ ನೋಡಿ ಪಿಳಿ ಪಿಳಿ ಕಣ್ ಬಿಟ್ಟಾಗಲೇ ಕನ್ ಫರ್ಮ್ ಆಗೋಯ್ತು ಅದು ನೀನೇ ಅಂತಾ.. ಈಗಲೂ ಅದೇ ಸ್ಮೈಲ್.. ನಗಬೇಕಾದರೆ ಹಲ್ಲು ಬಿಡೋದು ಮಾತ್ರ ನೀನು ಇನ್ನೂ ಮರೆತಿಲ್ಲ ನೋಡು..
ನಾನು ನೀನು ಚಿಕ್ಕೋರಾಗಿದ್ದಾಗಿನಿಂದಲೂ ಹೆಂಗಿದ್ವಿ ಅಲ್ವೇನೇ? ಐದನೇ ಕ್ಲಾಸಿನಿಂದ ಹಿಡಿದುಕೊಂಡು ಸೆಕೆಂಡ್ ಪಿ.ಯು.ಸಿ. ವರೆಗೂ ಜೊತೆಯಲ್ಲೇ ಓದಿದ್ದು ನಾವಿಬ್ಬರೇ ತಾನೆ?? ಏಳನೇ ಕ್ಲಾಸ್ ಪಾಸಾದ ಮೇಲೆ ಮುಂದೆ ಯಾವ ಹೈಸ್ಕೂಲಿಗೆ ಸೇರಬೇಕು ಅಂತಾ ಗೊತ್ತಾಗದೇ, ನೀನ್ಯಾವ ಸ್ಕೂಲಿಗೆ ಸೇರಿದ್ಯೋ ನಾನೂ ಸಹ ಅದೇ ಸ್ಕೂಲಿಗೆ ಸೇರಿದ್ದು ನಿಂಗೆ ಇನ್ನೂ ನೆನಪಿದ್ಯಾ?
ಒಂದು ಸಾರಿ ನೀನು ನಾನು ಕುಂಟಬಿಲ್ಲೆ ಆಟ ಆಡಬೇಕಾದರೆ, ಇಬ್ಬರೂ ಕಿತ್ತಾಡಿದ್ದು, ನಿನ್ ಹತ್ತಿರ ಇದ್ದ ಕಾಫಿ ಬೈಟ್ ಚಾಕಲೇಟನ್ನು ನೀನು ಕಾಗೆ ಎಂಜಲು ಮಾಡಿ ತಿನ್ನಲು ಕೊಟ್ಟಿದ್ದು, ನೀನಿಲ್ಲದಿದ್ದ ಸಮಯ ನೋಡ್ಕೊಂಡು ನಾನೊಬ್ಬನೇ ಪೆಪ್ಸಿ ಆಲೈಸ್ ತಿಂದಿದ್ದು, ನೀ ನೋಡಿ ಅದನ್ನು ಕಿತ್ತು ಬಿಸಾಕಿದ್ದು... ಇನ್ನೂ ಏನೇನೋ...... ನಿನ್ನ ನೋಡಿದ ಕೂಡಲೇ ಫಳ್ ಅಂತಾ ಎಲ್ಲವೂ ನನ್ ಕಣ್ ಮುಂದೆ ಬಂದು ಹೋದ್ವು ಕಣೇ..
ಐದನೇ ಕ್ಲಾಸಿಂದನೂ ನೀನು ಯಾವುದೇ ಹುಡುಗರ ಜೊತೆ ಮಾತನಾಡದೇ ಇರೋ ನೀನು ನನ್ ಒಬ್ಬನ್ ಜೊತೆ ಯಾಕೆ ಮಾತಾಡ್ತಿದ್ದೆ? ಕಿತ್ತಾಡ್ತಿದ್ದೇ? ಅವತ್ಯಾವತ್ತೂ ಕೇಳಬೇಕು ಅನ್ನಿಸಿರದ ಪ್ರಶ್ನೆ ಇವತ್ತು ಕೇಳಬೇಕು ಅನ್ನಿಸ್ತಿದೆ ಕಣೇ.. ಆದರೆ, ಅದ್ಯಾವೂ ಬಾಲ ಇಲ್ಲದ ಪ್ರಶ್ನೆ ಗಳು ಅಲ್ವಾ?
ನಮ್ ಹಳೇ ದಿನಗಳನ್ನು ನೆನಪಿಸಿಕೊಳ್ತಾ ಹೋದ್ರೆ, ಎಷ್ಟೊಂದು ಖುಷಿ ಆಗುತ್ತೆ ಗೊತ್ತಾ? ನಾನು ನೀನು ಶೇರ್ ಮಾಡಿದ ಪೆನ್ನುಗಳೆಷ್ಟೋ, ಮುರಿದು ಹಾಕಿದ ಪೆನ್ಸಿಲ್ಲುಗಳು, ಕಳೆದುಹಾಕಿದ ರಬ್ಬರ್ ಗಳು, ಏನೆಲ್ಲಾ ನೆನಪಾಗುತ್ತೆ ಕಣೇ.. ಆದರೆ,
ಇವತ್ತು ಸೀರಿಯಸ್ಸಾಗಿ ಒಂದು ಪ್ರಶ್ನೆ ಕೇಳಬೇಕಾಗಿದೆ.. ಪಿ.ಯು.ಸಿ. ಗೆ ಸೇರಿದ ಮೇಲೆ ನನ್ ಜೊತೆ ಯಾಕೆ ನೀನು ಮಾತು ಬಿಟ್ಟಿದ್ದು, ಹೋಗ್ಲಿ, ಯಾವ್ ಹುಡುಗನ ಜೊತೇನೂ ಮಾತಾಡ್ತಿರ್ಲಿಲ್ಲವಲ್ಲಾ ಯಾಕೆ? ಮೋಸ್ಟ್ಲಿ ನಿಮ್ಮ ಅಮ್ಮನ ಭಯ ಅನ್ಸುತ್ತೆ ನಿಂಗೆ.. ನಂಗೆ ಇವಾಗಲೂ ನಿನ್ ಅಮ್ಮನ್ನ ಕಂಡ್ರೆ ಭಯ ಆಗುತ್ತೆ ಕಣೆ.. ಅದ್ಯಾಕೆ ಅಂತಾ ಗೊತ್ತಿಲ್ಲ..
ಇದ್ದೂರು ಬಿಟ್ಟು ಎಲ್ಲೂ ಹೋಗದ ನೀನು ಇದ್ದಕ್ಕಿದ್ದಂತೆ ಅಚಾನಕ್ ಆಗಿ ಬೆಂಗಳೂರಿನಲ್ಲಿ ಒಬ್ಬಳೇ ಕಂಡ್ಯಲ್ಲಾ ಅದೇ ನಂಗೆ ದೊಡ್ಡ ಆಶ್ಚರ್ಯ..ಇವತ್ತೂ ಸಹ ನೀನು ಅವತ್ತಿನ ಹಾಗೇನೇ ಇದ್ದೀಯ.. ಬೆಂಗಳೂರಿನ ಕಾವೇರಿ ನೀರು ನಿಂಗೆ ಚನ್ನಾಗಿ ಹಿಡಿಸಿದೆ ಅನ್ಸುತ್ತೆ, ಬೆಳ್ಳಗಾಗಿಬಿಟ್ಟಿದ್ದೀಯಲ್ಲಾ? ಮನೇಲಿ ನಿಮ್ ಆಂಟಿ ಸರಿಯಾಗಿ ಅಡಿಗೆ ಮಾಡಿ ಹಾಕ್ತಾರೆ ಅನ್ಸುತ್ತೆ, ಗುಂಡ ಗುಂಡಗೆ ಟಮಾಟೋ ಹಣ್ಣಿನ ಥರಾ ಆಗಿದ್ದೀ.. ಜಾಸ್ತಿ ತಿನ್ನಬೇಡ್ವೇ.. ಡುಮ್ಮಿ ಥರಾ ಕಾಣ್ತೀಯ..
ಸುಮಾರು ಎಂಟು ವರ್ಷ ಆದಮೇಲೆ ನಿನ್ನನ್ನು ನೋಡಿ ಸಕತ್ ಖುಷಿ ಆಯ್ತು.. ಅದಕ್ಕೇ ನಿನ್ ಬಳಿ ಬಂದು ಮಾತಾಡ್ಸಿದ್ದು, ಹೇಗಿದ್ದೀಯ? ಅಂತಾ ಕೇಳಿದಾಗ, ನಗುತ್ತಿದ್ದವಳು (ಆ ಥರಾ ನಟನೆ ಮಾಡ್ತಿದ್ದೆ ಅಲ್ವಾ?) ಇದ್ದಕ್ಕಿದ್ದಂತೆ ಕಣ್ ತುಂಬಿಕೊಂಡು ಅಳೋಕೆ ಶುರು ಮಾಡಿದ ಮೇಲೆ ನನಗೆ ಸಕತ್ ದಿಗಿಲಾಯ್ತು..
"ನೋಡೋ ಹೀಗಿದ್ದೀನಿ.. ಇನ್ನೂ ಸಾಯದೇ ಬದ್ಕಿದ್ದೀನಿ" ಅಂದ್ಯಲ್ಲಾ..
ಯಾಕೇ ಕೋತಿ ಹೀಗಂತೀಯ? ಹ್ಞಾಂ?
"ಇಷ್ಟು ದಿನ ಬೇಕಾಯ್ತೇನೋ ನೀನು ನನ್ನ ನೆನಪಿಸಿಕೊಳ್ಳೋಕೆ? ಅಥವಾ ಪೂರ್ತಿ ನೀನು ನನ್ನ ಮರೆತುಬಿಟ್ಟಿದ್ಯಾ? ಇಲ್ಲಾ ನನ್ನಂಥೋಳು ಯಾಕಾದ್ರೂ ಫ್ರೆಂಡ್ ಆಗಿದ್ಲು ಅಂತಾ ನನ್ ಮೇಲೆ ನಿಂಗೆ ಏನಾದ್ರೂ ಕೋಪ ಇತ್ತೇನೋ" ಅಂತಾ ನನ್ನ ಕೇಳ್ತೀಯಲ್ಲೇ ನೀನು?
ಹೀಗ್ಯಾಕೆ ಅಂತೀ? ನಿನ್ ಮೇಲೆ ನಾನ್ಯಾಕೇ ಕೋಪ ಮಾಡಿಕೊಳ್ಳಲಿ? ಪಿ.ಯು.ಸಿ. ಮುಗಿಸಿ ಬೇರೆ ಊರಿನಲ್ಲಿ ಕೆಲಸಕ್ಕೆ ಸೇರಿದ ಮೇಲೆ ಅಲ್ವಾ ನಿನ್ನ ಕಾಂಟ್ಯಾಕ್ಟ್ ತಪ್ಪಿದ್ದು? ಆಮೇಲೆ ನಾನು ಸುಮಾರು ಐನೂರು ಕಿಲೋಮೀಟರ್ ದೂರ ಹೋದ ಮೇಲೆ ಇದೇ ನನ್ ಪ್ರಪಂಚ ಆಗಿತ್ತು. ಹಿಂಗೆ ಬೆಂಗಳೂರಿಗೆ ಕೆಲಸದ ಮೇಲೆ ಬಂದಾಗ ನೀನು ಸಿಕ್ಕಿದ್ದು..
ನಿನ್ನ ನೋಡಿ ಎಷ್ಟು ಸಂತೋಷ ಆಯ್ತೋ, ಅಷ್ಟೇ ದುಃಖ ಕೂಡಾ ಆಯ್ತು ಕಣೇ.. ಈ ಹಾಳು ವಿಧಿ ನಿನ್ ಲೈಫಲ್ಲಿ ಏನೇನೆಲ್ಲಾ ಆಟ ಆಡ್ತು.. ಒಹ್..!! ನೆನಸಿಕೊಂಡರೆನೇ ಭಯ ಆಗುತ್ತೆ. ಸೋದರ ಮಾವನ ಜೊತೆ ನಿನ್ ಮದ್ವೆ ಹೇಗೆ ಆಯ್ತು ಅನ್ನೋದು ನಿಂಗೆ ಎಷ್ಟು ಆಶ್ಚರ್ಯಾನೋ ನಂಗೂ ಅಷ್ಟೇ ಆಶ್ಚರ್ಯ.. ಹತ್ತೊಂಬತ್ತು ವರ್ಷಕ್ಕೇ ನಿಂಗೆ ಮದ್ವೆ ಮಾಡಿದ್ರು ಅಲ್ವಾ? ನನ್ ಫ್ರೆಂಡ್ಸ್ ಗಳ ಪೈಕಿ ಅಷ್ಟು ಬೇಗ ಮದ್ವೆ ಆಗಿದ್ದು ನಿಂದೇ..? ನಿಮ್ ಮಾವ ತುಂಬಾ ಒಳ್ಳೇವ್ರಂತೆ, ಹೆಂಗೂ ಸರಕಾರಿ ಕೆಲಸ ಇತ್ತಲ್ವಾ? ಒಳ್ಳೇದೇ ಆಯ್ತು ಬಿಡು ಅನ್ಕೊಂಡಿದ್ದೆ...
ಆ ವಯಸ್ಸಿನಲ್ಲಿ ನಿನ್ನ ಅಂದ ಚಂದಕ್ಕೆ ಬೆರಗಾಗಿ, ನಿನ್ನ ಒಲಿಸಿಕೊಳ್ಳೋಕೆ ಅಂತಾ ನಿಮ್ ಮನೆ ಬೀದೀಲಿ ಎಷ್ಟೊಂದು ಜನ ಹುಡುಗರು ಓಡಾಡ್ತಿದ್ರು ಸಹ ಒಮ್ಮೇನೂ ನೀನು ಅವರನ್ನು ಕಣ್ ಎತ್ತಿ ನೋಡಿರ್ಲಿಲ್ಲ ಅಂತಾ ನನಗೂ ಗೊತ್ತು..
ಮಧ್ಯಮ ವರ್ಗದ ಹುಡುಗಿಯರು ಸುಂದರವಾಗಿರೋದೂ ಒಮ್ಮೊಮ್ಮೆ ಶಾಪ ಅನ್ನಿಸಿಬಿಡುತ್ತೆ.. ಪಿ.ಯು.ಸಿ. ನಲ್ಲಿ ನಮ್ ಜೊತೆ ಓದ್ತಿದ್ಲಲ್ಲಾ "ಕಿಜ" ಅಂತಾ, ಅವಳ ಅಂದ ಚಂದಕ್ಕೆ ಎಷ್ಟು ಜನ ಹುಡುಗರು ಪ್ರಪೋಸ್ ಮಾಡಿದ್ರು, ಗುಲಾಬಿ ಕೊಟ್ಟಿದ್ರು, ಅವಳಿಗೋಸ್ಕರ ಕಿತ್ತಾಡ್ತಿದ್ರು, ಅವಳನ್ನು ಎಷ್ಟು ಸತಾಯಿಸಿದ್ರು ಅಂತಾ ನಿಂಗೂ ಗೊತ್ತಲ್ಲ.. ನಿನ್ ಪುಣ್ಯ ನೀನು ಅವಳಷ್ಟು ಸೂಪರ್(?) ಇರಲಿಲ್ಲ ಬಿಡು.. ಅವಳೂ ಸಹ ನಿಂಥರಾನೇ, ನೆಲ ನೋಡ್ಕೊಂಡೇ ಓಡಾಡ್ತಿದ್ಲು, ನಮ್ ಚೇತ ಅವಳ ಮೇಲೆ ಕಾಲೇಜಿನ ಗೋಡೆ ಪತ್ರಿಕೆಯಲ್ಲಿ ಕವನ ಬರೆದಿದ್ದ.. ಅವನೂ ಸಹ ಅವಳ ಮೇಲೆ ಫಿದಾ ಆಗಿದ್ದ.. ಒಂದೆರಡು ಕಾಲೇಜಿನ ಪ್ರೊಗ್ರಾಮ್ ಗಳಲ್ಲಿ ಅವಳು ಭಾಗವಹಿಸಿ ಭಾಷಣ ಮಾಡಿದ್ಲಲ್ಲ.. ಅವತ್ತು ಅನ್ಸಿತ್ತು, ಓಹೋ ಇದು ನಮ್ ಥರಾ ಪುಸ್ತಕಕ್ಕೆ ಅಂಟಿಕೊಂಡು ಹುಟ್ಟಿರೋ ಪ್ರಾಣೀನೇ ಅಂತಾ.. ನಾನೂ ಅವಳನ್ನು ಮಾತಾಡ್ಸೋಣ ಅನ್ಕೊಂಡಿದ್ದೆ.. ಎಲ್ಲಿ ಅವಳು ನನ್ನನ್ನು ಬೇರೆ ಹುಡುಗರ ಥರಾ ತಿರಸ್ಕಾರ ದೃಷ್ಟಿಯಿಂದ ನೋಡ್ತಾಳೋ ಅಂತಾ ಸುಮ್ಮನಿದ್ದುಬಿಟ್ಟಿದ್ದೆ.. ಆಕೆ ಮತ್ತು ಅವರಮ್ಮ ನಮ್ಮ ಮನೆಗೆ ಒಂದೆರಡು ಸಲ ಬಂದಿದ್ದರಂತೆ, ನನ್ ಅಮ್ಮನಿಗೆ ಅವಳಮ್ಮ ಪರಿಚಯ ಅಂತೆ.. ಅವಳ ಚಂದಾನೇ ಅವಳಿಗೆ ಮಾರಕ ಆಯ್ತು ಅನ್ಸುತ್ತೆ, ಸಾಕಷ್ಟು ಹುಡುಗರು ಅವಳ ಬೆನ್ನಿಗೆ ಬಿದ್ದಿದ್ದರಿಂದ ಪಾಪ ಅವಳನ್ನು ಕಾಲೇಜು ಬಿಡಿಸಿ, ನಿಂ ಥರಾ ಸೋದರ ಮಾವನಿಗೆ ಕೊಟ್ಟು ಮದುವೆ ಮಾಡಿದ್ರಂತೆ.. ನೆನಸಿಕೊಂಡ್ರೆ ಏನೋ ಒಂಥರಾ ಬೇಜಾರು ಕಣೇ..
ಹೋಗಲಿ ಬಿಡು.. ನಿನ್ ಪುಣ್ಯಕ್ಕೆ ನೀನು ಅವಳಷ್ಟು ಜಾಸ್ತಿ ಚಂದ ಇರಲಿಲ್ಲ.. ಅದಕ್ಕೆ ನಿಂಗೆ ಹುಡುಗರ ಕಾಟ ಸ್ವಲ್ಪ ಕಮ್ಮಿ.. ಒಮ್ಮೆ ನಾನು ಊರಿಗೆ ಬಂದಾಗ ನೀನು ಸಿಕ್ಕಾಗ, ಟಿ.ಸಿ.ಎಚ್. ಮಾಡ್ತಿದ್ದೀನಿ ಅಂದೆ ಅಲ್ವಾ? ಜೊತೆಗೆ ಬಗಲಲ್ಲಿದ್ದ ಮುದ್ದು ಹುಡುಗೀನ ಮಗಳು ಅಂತಾ ನೀನು ತೋರಿಸಿದಾಗ ನಂಗೆ ನಂಬೋಕೇ ಆಗಲಿಲ್ಲ.. ನೀನೇ ಇನ್ನೂ ಒಂದು ಮಗು ಥರಾ ಇದ್ದೀಯ.. ಮಗೂಗೆ ಒಂದು ಮಗೂನ ಅಂತಾ ನಿನ್ನ ರೇಗಿಸಿದ್ದೆ ನಾನು..
ಈಗ್ಗೆ ಒಂದು ವರ್ಷದ ಹಿಂದೆ ನಿನ್ನ ಗಂಡ ಬೈಕಲ್ಲಿ ಹೋಗ್ಬೇಕಾದ್ರೆ, ಕಾಡೇನಹಳ್ಳಿ ಹತ್ರ ಭಯಂಕರವಾದ ಆಕ್ಸಿಡೆಂಟ್ ಆಗಿ, ಸ್ಪಾಟಲ್ಲೇ ತೀರ್ಕೊಂಡಿದ್ದು ಕೇಳಿ ಸಕತ್ ದುಃಖ ಆಯ್ತು ಕಣೇ.. ನೇತ್ರಾ ಮತ್ತು ಅನಿತ ಫೋನ್ ಮಾಡಿ ಸಕತ್ ಅತ್ಕೊಂಡು ಬಿಟ್ರು.. ಅನಿತ, ನೇತ್ರಾ ನಾನು ಎಲ್ಲರೂ ಹೊರಟಿದ್ವಿ.. ಆದರೆ, ನಾವು ಬರೋ ವೇಳೆಗಾಗಲೇ ಎಲ್ಲ ಮುಗಿದು ಹೋಗಿರುತ್ತಿತ್ತು.. ನಿನ್ ನಗು ಮುಖಾನ ನೋಡಿದ ನಮಗೆ ನಿನ್ ಅಳುವನ್ನ ನೋಡೋಕೆ ಇಲ್ಲಾ ಕಲ್ಪನೆ ಮಾಡಿಕೊಳ್ಳೋಕೆ ಆಗಲಿಲ್ಲ ಕಣೇ.. ಅದಕ್ಕೇ ನಾವ್ಯಾರೂ ಬರೋಕೆ ಆಗಲಿಲ್ಲ.. ಇದೆಲ್ಲಾ ಆಗಿ ಒಂದೂವರೆ ವರ್ಷ ಆಯ್ತು..
ಈಗ ನೀನು ಸ್ವತಂತ್ರವಾಗಿ ಒಂದ್ ಕೆಲಸ ಮಾಡ್ಕೊಂಡು ಹೇಗೋ ಜೀವನ ಸಾಗಿಸ್ತಿದ್ದೀಯಲ್ಲಾ. ಅಷ್ಟೇ ಸಾಕು. ನಿನ್ನ ಗಂಡ ತೀರಿಕೊಂಡ ದಿನವೇ ನಿಮ್ಮ ಮನೆ ಮಹಡಿ ಮೇಲಿಂದ ಬಿದ್ದು ಬಿಟ್ಟಿದ್ಯಂತಲ್ಲಾ? ಅಬ್ಬಾ.. ನನಗೆ ಮೇಲಿಂದ ಕೆಳಗೆ ನೋಡೋಕೇ ಭಯ.. ಬಿದ್ದಿದ್ದಕ್ಕೆ ಒಂದಿಷ್ಟು ದಿನ ಆಸ್ಪತ್ರೆಯಲ್ಲಿ ಕಳೆದಂತ್ಯಲ್ಲಾ?? ಇದೆಲ್ಲಾ ಬೇಕಾಗಿತ್ತಾ?? ಸುಮಾರು ಇಪ್ಪತ್ತು ವರುಷಕ್ಕೆ ನಿನಗೆ ಆ ಯೋಚನೆ ಬಂದಿದ್ದು ಸಹಜ. ಜೀವನ ಇಷ್ಟಕ್ಕೇ ಮುಗಿದಿಲ್ಲ. ಇನ್ನೂ ನೀನು ಸಾಧಿಸಬೇಕಾದ್ದು ಬಹಳ ಇದೆ. ಇನ್ನೂ ಯುದ್ಧವೇ ಶುರುವಾಗಿಲ್ಲ.. ಆಗಲೇ ಶಸ್ತ್ರಾಸ್ತ್ರ ಇಟ್ಟು ಶರಣಾಗೋದು ಬೇಡ ಕಣೀ.. ನೀನು ಸಿಕ್ಕಾಗಿನಿಂದ ತಲೆಯಲ್ಲಿ ನಿನ್ನದೇ ಗುಂಗು.. ನಿನ್ನೆಲ್ಲಾ ಕಷ್ಟಗಳನ್ನು ನೆನಸಿಕೊಂಡರೆ, ಬೆಂಬಲಕ್ಕಾಗಿ ನಿನಗೆ ನನ್ನಂಥ ಅಣ್ಣ ಸಿಗಬೇಕಿತ್ತು ಅಥವಾ ನಾನೇ ನಿನ್ನ ಅಣ್ಣನಾಗಬೇಕಿತ್ತು ಅಂತಾ ಅನ್ನಿಸಿದ್ದು ಸುಳ್ಳಲ್ಲ.. ಈಗಲೂ ನೀನು ಭಯ ಪಡೋ ಅಗತ್ಯ ಇಲ್ಲ.. ನಿನ್ನ ಬೆಂಬಲಕ್ಕೆ ಎಲ್ಲರೂ ಇದ್ದೀವಿ.
ಇನ್ನೋಂದು ಬಾರಿ "ಸತ್ತು ಹೋಗ್ತೀನಿ" ಅನ್ನು ಬೆಂಗಳೂರಿಗೆ ಬಂದು ಜಾಡಿಸಿ ಒದೀತೀನಿ ನಿಂಗೆ..
-ಇಂತಿ ನಿನ್ನ ಲಂಗ ದೋಸ್ತ್..
Comments
ಉ: ಒಂದೇ ಒಂದು ಪತ್ರ.. ಅವತ್ತು ಹೇಳಲಾಗದ್ದನ್ನು ಇವತ್ತು ಬರೆದಿದ್ದೇನೆ..
ಉ: ಒಂದೇ ಒಂದು ಪತ್ರ.. ಅವತ್ತು ಹೇಳಲಾಗದ್ದನ್ನು ಇವತ್ತು ಬರೆದಿದ್ದೇನೆ..