ಕಗ್ಗ - ಯೋಚನಾ ಲಹರಿ
ದಿನವೂ ಬಸ್ನಲ್ಲಿ ಓಡಾಡುವ ನನಗೆ ಕೆಲವು ಮುಖಗಳ ಪರಿಚಯವಿದೆ. ಅಂಥವರೊಬ್ಬರು ಮಂಕುತಿಮ್ಮನ ಕಗ್ಗ ಪುಸ್ತಕ ಕೈಗಿತ್ತರು. ಕೇವಲ ಕೆಲವು ಪದ್ಯಗಳನ್ನಷ್ಟೇ ಪಠ್ಯವಾಗಿ ಓದಿದ ನನಗೆ ಕಗ್ಗದ ಬಗ್ಗೆ ಅಪಾರ ಗೌರವವಿದೆ. ಒಂದೊಂದು ಪದ್ಯವನ್ನೂ ಓದಬೇಕು. ಅರ್ಥ ತಿಳಿದುಕೊಳ್ಳಬೇಕೆಂಬ ಮಹದಾಸೆ.
ಅವರ ಜೀವನ, ದೇವರು ಬಗೆಗಿನ ಸಾಲುಗಳಿಗೆ ಮನಸೋತಿದ್ದೇನೆ. ಭಾಷಾ ಪಾಂಡಿತ್ಯ, ಹಳೆಗನ್ನಡದ ಸೊಗಡು, ತತ್ವದ ಒಳಾರ್ಥ ವ್ಯಕ್ತಪಡಿಸುವ ರೀತಿ.. ಒಹ್! ಅವುಗಳನ್ನು ಓದುವುದೇ ಒಂದು ಸೊಗಸು.
ಏನು ಭೈರವ ಲೀಲೆಯೀ ವಿಶ್ವ ವಿಭ್ರಮಣೆ!
ಏನು ಭೂತಗ್ರಾಮನರ್ತನೋನ್ಮಾದ!!
ಏನಗ್ನಿಗೋಳಗಳು! ಏನಂತರಾಳಗಳು!
ಏನು ವಿಸ್ಮಯ ಸೃಷ್ಟಿ ! - ಮಂಕುತಿಮ್ಮ ||
ಎಷ್ಟು ಸುಂದರ ಬರವಣಿಗೆ. "ನರ್ತನೋನ್ಮಾದ" - ನನ್ನನ್ನು ಆಕರ್ಷಿಸಿದ ಪದ. "ಏನಗ್ನಿಗೋಳಗಳು ! ಏನಂತರಾಳಗಳು " ಎತ್ತಣಿಂದೆತ್ತ ಹೋಲಿಕೆ. ಆದರೂ ಅಂತರಾಳಗಳಲ್ಲಿನ ಕಾವು ಅಗ್ನಿಗೋಳಗಳಿಗಿಂತ ಕಡಿಮೆಯೆ? ದ್ವೇಷ, ಅಸೂಯೆ, ಕೋಪ, ತಾಪ - ಇವುಗಳೆಲ್ಲದರ ಫಲ - ಅಗ್ನಿಗೋಳಗಳಾಗುವ ನಮ್ಮ ಅಂತರಾಳ.
ಹೊನ್ನೆಂದು ಜಗದಿ ನೀಂ ಕೈಗೆ ಕೊಂಡುದನು ವಿಧಿ |
ಮಣ್ಣೆನುವನ್ ; ಅವನ ವರ ಮಣ್ಣೆನುವೆ ನೀನು ||
ಭಿನ್ನಮಿಂತಿರೆ ವಸ್ತು ಮೌಲ್ಯಗಳ ಗಣನೆಯೀ |
ಪುಣ್ಯಕ್ಕ್ ಗತಿಯೆಂತೋ - ಮಂಕುತಿಮ್ಮ ||
ಭಿನ್ನ ವಸ್ತು ಮೌಲ್ಯಗಳು, ಮಾಪನಗಳು ಕೇವಲ ದೈವ - ಮನುಷ್ಯರಿಗೆ ಮಾತ್ರ ಸೀಮಿತವಾಗಿರಿಸದೆ ಅದರಿಂದಾಚೆಗೂ ಗಮನಿಸಿದರೆ; ಸಂಬಂಧ ಸಂಬಂಧಗಳಲ್ಲೂ ಕಾಣಸಿಗುತ್ತವೆ.
ನಾನು ಒಪ್ಪುವ ಮಾತು ನೀನೊಪ್ಪದಿರಬಹುದು
ನಾನು ನೆಚ್ಚುವ ದೈವ ನಿನಗೆ ಸರಿ ಬರದು
ನಾನು ನೋಡುವ ಕೆಂಪು ನಿನಗೆ ಕಪ್ಪಿರಬಹುದು
ನಾನು ನೀನುಗಳು ಕಡೆಗೆ ಎರಡುಳಿಯಬಹುದು
ನರರ ಭಯ ಬಯಕೆಗಳೆ ಸುರರ ತಾಯ್ತಂದೆಗಳೋ
ಸುರರಟ್ಟಹಾಸದಿನೆ ನರಭಕ್ತಿಯೊರಲೋ
ಪರಿಕಿಸುವರೇನವರ್ಗಳನ್ಯೋನ್ಯ ಶಕ್ತಿಗಳ? |
ಧರುಮವೆಲ್ಲಿದರಲ್ಲಿ? - ಮಂಕುತಿಮ್ಮ ||
ಎಷ್ಟು ಸತ್ಯ ಈ ಯೋಚನಾ ಲಹರಿ? ನಿಜಕ್ಕೂ ನಮ್ಮ ಭಯ ಬಯಕೆಗಳೇ ದೈವಕ್ಕೊಂದು ಅಸ್ತಿತ್ವ ಕೊಟ್ಟಿದೆಯೇನೋ ಅನ್ನಿಸುತ್ತದೆ. ಈ ಸಂದೇಹ ನನ್ನನ್ನೂ ಬಹಳಷ್ಟು ಕಾಡಿದೆ. "ದೈವ" ಎನ್ನುವ concept ಗೆ (ಭಾವಕ್ಕೆ) ಅತ್ಯುಚ್ಛ ಸ್ಥಾನ ದೊರಕುವುದು ಎಷ್ಟು ಎಂದರೆ, ಪ್ರಪ್ಂಚದ ಅತಿ ಬುದ್ಧಿವಂತ (intelligent) ವ್ಯಕ್ತಿ ಯೋಚಿಸುವಷ್ಟು, ಅವನ/ಅವಳ ತರ್ಕಕ್ಕೆ ನಿಲುಕುವಷ್ಟು, ಅವನ/ಅವಳ ಮಿದುಳಿನ ರಚನೆಗೆ ಸಂಬಂಧ ಪಟ್ಟಷ್ಟು. ಅದರಿಂದಾಚೆ ಯೋಚಿಸಲು ನಮಗೆ ಸಾಮರ್ಥ್ಯವಿಲ್ಲ. ಆದರೆ ಈ ಚೈತನ್ಯ/ಶಕ್ತಿ ಅಷ್ಟೇನೇ? ಅದರಿಂದಾಚೆಯ ಸತ್ಯ ಕಣ್ಮರೆಯಾಗಿಯೇ, ರಹಸ್ಯವಾಗಿಯೇ ಉಳಿಯುತ್ತದೆ. ನಾವು ನಮಿಸುವುದಾದರೆ, ಆ ರಹಸ್ಯ ಇದೆ ಎಂದಾದರೆ, ನಮ್ಮ ಸಾಮರ್ಥ್ಯದಳತೆಗೆ ಸಿಗಲಿಲ್ಲವಾದ್ರೆ - ಅದು ದೈವವೇ? ನಮಿಸುವುದರಿಂದುಂಟಾಗುವುದೇನು? ಆ ನಮಸ್ಕಾರ ನಿರೀಕ್ಷೆಗಳ ಹಿನ್ನಲೆಯುಳ್ಳದ್ದಾಗಿರಬೇಕೆ? ಆ ಹಿನ್ನಲೆ ಇಲ್ಲವೆಂದಾದಲ್ಲಿ ನಮಸ್ಕರಿಸಲು ಸಾಧ್ಯವೇ? ನಮ್ಮ ಸಾಮರ್ಥ್ಯದೊಳಗಿರುವುದರಲ್ಲಿ ಚೈತನ್ಯ ಇಲ್ಲವೇ? ಇದೆ ಎಂದಾದಲ್ಲಿ ನಮಿಸುವ ದೊಡ್ಡತನ ನಮಗಿದೆಯೇ?
ಮಣಿಮಂತ್ರತಂತ್ರ ಸಿದ್ಧಿಗಳ ಸಾಕ್ಷ್ಯಗಳೇಕೆ? |
ಮನಗಾಣಿಸಲು ನಿನಗೆ ದೈವದದ್ಭುತವ? ||
ಮನುಜರೊಳಗಾಗಾಗ ತೋರ್ಪ ಮಹನೀಯಗುಣ |
ವನುವಾದ ಬೊಮ್ಮನದು - ಮಂಕುತಿಮ್ಮ ||
ಎಂಥ ಸರಳತೆ? ಎಂಥ ನೇರ ನುಡಿ? ಆ ಕಿರಣ, ಈ ಗೆಳಕು, ಈ ಥಳುಕು, ಈ ಮಿಂಚು - ಯಾವುದರ ಹಿಂದೆ ನಡೆದರೂ ದೈವದ ಅರಿವಾಗಲಾರದು. ಮಂತ್ರ ತಂತ್ರ ಸಿದ್ಧಿಗಳು ತತ್ವದ ಯಥಾರ್ಥಕ್ಕೆ ಪ್ರಮಾಣವಲ್ಲ. ದೈವಶಕ್ತಿಯ ಇರುವು/ಅರಿವುಗಳನ್ನು ಈ ತಂತ್ರಶಕ್ತಿಗಳಿಂದ, ಪವಾಡಗಳಿಂದ ನಿಶ್ಚಯಿಸಲಾಗದು. ಒಂದೊಂದು ಮನುಜನಲ್ಲಿ ಒಂದೊಂದು ರೀತಿಯ ಮಹೋನ್ನತ ಗುಣಗಳಿವೆ. ಅವುಗಳ ತೋರ್ಪಡಿಕೆಯೇ ನಿಜವಾದ ಬೊಮ್ಮ ! ಎಂಥ ಅದ್ಭುತ ವಿಚಾರಧಾರೆ. ತಲೆತೂಗಿಸಿಬಿಡುವ ಡಿವಿಜಿಯವರ ಕಗ್ಗದ ಸಾಲುಗಳು ಕಣ್ಣಲ್ಲಿ ಕಂಬನಿಯನ್ನೇ ತರಿಸುತ್ತವೆ.
ಚಿತ್ರ: ಹರಿ ಪ್ರಸಾದ್ ನಾಡಿಗ್
Comments
ಉ: ಕಗ್ಗ - ಯೋಚನಾ ಲಹರಿ
In reply to ಉ: ಕಗ್ಗ - ಯೋಚನಾ ಲಹರಿ by partha1059
ಉ: ಕಗ್ಗ - ಯೋಚನಾ ಲಹರಿ
ಉ: ಕಗ್ಗ - ಯೋಚನಾ ಲಹರಿ
In reply to ಉ: ಕಗ್ಗ - ಯೋಚನಾ ಲಹರಿ by abdul
ಉ: ಕಗ್ಗ - ಯೋಚನಾ ಲಹರಿ
ಉ: ಕಗ್ಗ - ಯೋಚನಾ ಲಹರಿ
ಉ: ಕಗ್ಗ - ಯೋಚನಾ ಲಹರಿ
In reply to ಉ: ಕಗ್ಗ - ಯೋಚನಾ ಲಹರಿ by nagarathnavina…
ಉ: ಕಗ್ಗ - ಯೋಚನಾ ಲಹರಿ
ಉ: ಕಗ್ಗ - ಯೋಚನಾ ಲಹರಿ
ಉ: ಕಗ್ಗ - ಯೋಚನಾ ಲಹರಿ
ಉ: ಕಗ್ಗ - ಯೋಚನಾ ಲಹರಿ