ಸಂಸ್ಕೃತ ಕಲಿತರೆ ಕನ್ನಡಕ್ಕೇ ಒಳ್ಳೆಯದು

ಸಂಸ್ಕೃತ ಕಲಿತರೆ ಕನ್ನಡಕ್ಕೇ ಒಳ್ಳೆಯದು

ಸಂಸ್ಕೃತ ಭಾಷೆಯು ಪ್ರಾಚೀನವೂ, ವಿಸ್ತೃತವೂ, ಪರಿಷ್ಕೃತವೂ ಆಗಿರುವ ಭಾಷೆ. ಇದರಲ್ಲಿರುವ ವೈದಿಕ, ಲೌಕಿಕ, ಆಧ್ಯಾತ್ಮಿಕ, ಖಗೋಳ, ಆಯುರ್ವೇದ, ಮನೋವೈಜ್ಞಾನಿಕ ಹಾಗೂ ಮಾನವೀಯ ಸಾಹಿತ್ಯ ಭಂಡಾರವು ಅಪಾರ.

ಇದೆಲ್ಲಾ ಇರ್ಲಿ ಸ್ವಾಮಿ, ಹಳೇದು, ಶುದ್ಧ ಅಂತೆಲ್ಲಾ ಒಪ್ಪಿಕೊಳ್ಳೋಣ. ಆದರೆ ಇಂದು ಈ ಸಂಸ್ಕೃತ ಎಷ್ಟು ಪ್ರಸ್ತುತವಾಗಿದೆ? ಸಂಸ್ಕೃತದಲ್ಲಿರುವ ಎಲ್ಲ ಜ್ಞಾನವೂ ಈಗ ಎಲ್ಲ ಭಾಷೆಗಳಲ್ಲಿಯೂ ಲಭ್ಯ. ಹೀಗಿದ್ದೂ ಕಬ್ಬಿಣದ ಕಡಲೆಯಂತಿರುವ, ಶುಷ್ಕ ವ್ಯಾಕರಣ, ಕ್ಲಿಷ್ಟ ಪದಗಳಿಂದ ಕೂಡಿರುವ, ಸಂಧಿ ಸಮಾಸ ಛಂದಸ್ಸುಗಳಿಂದ ನಿಬಿಡವಾಗಿರುವ ಇದು ನಮಗೆ ಯಾಕೆ ಬೇಕು? ಭಾಷೆ ಎಂದರೆ ಅಭಿಪ್ರಾಯ, ಮಾಹಿತಿ ವಿನಿಮಯಕ್ಕೆ ಮಾಧ್ಯಮವಾಗಿ ಬಳಸುವ, ಅರ್ಥವುಳ್ಳ ವಾಕ್ಯ ಸಮುದಾಯ ತಾನೆ? ಅದಕ್ಕೆ ಕನ್ನಡ, ಹಿಂದಿ, ಇಂಗ್ಲೀಷ ಇವೆಲ್ಲಾ ಇರುವಾಗ ಮತ್ತೊಂದು ಭಾಷೆಯ ಹೊರೆ ಏಕೆ? ಎಂದು ಕೇಳುವವರು ಬಹಳ ಮಂದಿ. ಅಲ್ಲದೆ ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮಾತ್ರ ಪ್ರಾಶಸ್ತ್ಯ, ಸ್ಥಾನ, ಸಂಸ್ಕೃತ ಕಲಿತರೆ ಉಪಯೋಗವಿಲ್ಲ, ಕೆಲಸ ಸಿಗುವುದಿಲ್ಲ, ಅಲ್ಲದೆ ಇದು ಒಂದು ವರ್ಗದ ಜನರಿಗೆ ಮಾತ್ರ ಅನುಕೂಲವಾಗುವ, ಒಂದು ವರ್ಗದವರು ಬಳಸುವ ಭಾಷೆ ಎನ್ನುವವರಿಗೇನು ಕಡಿಮೆಯಿಲ್ಲ.

ಆದರೆ ಈ ವಿಷಯ ಗಮನದಲ್ಲಿ ಇಟ್ಟುಕೊಳ್ಳಬೇಕು. ಸಂಸ್ಕೃತದ ಪ್ರಭಾವ, ಹಿಡಿತ ಅನೇಕ ಭಾರತೀಯ, ವಿದೇಶೀ ಭಾಷೆಗಳ ಮೇಲೂ ಇರುವುದರಿಂದ ಸಂಸ್ಕೃತ ಪದಗಳ ಪದಚ್ಛೇದ, ಅರ್ಥ , ಸಂಧಿ, ಸಮಾಸ ಇತ್ಯಾದಿಗಳನ್ನು ಕಲಿತವರು ಅವರವರ ಭಾಷೆಯನ್ನು ಸರಿಯಾಗಿ ನುಡಿಯುತ್ತಾರೆ, ಓದುತ್ತಾರೆ ಮತ್ತು ಬರೆಯುತ್ತಾರೆ ಎಂಬುದರಲ್ಲಿ ಇನ್ನೊಂದು ಮಾತಿಲ್ಲ. ಅವರ ಮಾತು, ಓದು, ಬರಹದಲ್ಲಿ ಒಂದು ಆಕರ್ಷಣೆ, ಮಾಧುರ್ಯ, ಸ್ವಷ್ಟತೆ ಇರುತ್ತದೆ. ಸಂಸ್ಕೃತವನ್ನು ಕಲಿಯಲು ಹಿಂದೇಟು ಹಾಕುವವರು ಮೊದಲು ಕೊಡುವ ಕಾರಣವೆಂದರೆ ಅದು ಕಷ್ಟ ಎಂದು. ಆದರೆ ಅದನ್ನು ಕಲಿಯಲು ಹಿಂಜರಿಯುವವರು ಅನಿವಾರ್ಯವಾಗಿ ಕನ್ನಡದಲ್ಲಿ ಹೇರಳವಾಗಿರುವ ಸಂಸ್ಕೃತ ಪದಗಳನ್ನು ತಪ್ಪಾಗಿ ಬಳಸುತ್ತಾರೆ. ಅದರಿಂದ ಕನ್ನಡವನ್ನು ಹಾಳುಗೆಡವುತ್ತಾರೆ.

ನಮ್ಮ ಮದುವೆಗೆ ’ಸಕುಟುಂಬ ಸಮೇತ’ ಬನ್ನಿ ಎಂದು ಬರೆಯುತ್ತರೆ. ಸಕುಟುಂಬ ಎಂದರೆ ಕುಟುಂಬ ಸಮೇತವೆಂದೇ ಅರ್ಥ. ಅದೇ ರೀತಿ ಜಯಂತ್ಯೋತ್ಸವ(ಜಯಂತ್ಯುತ್ಸವ), ಅನುಸೂಯಮ್ಮ(ಅನಸೂಯಮ್ಮ), ಗಾಯಿತ್ರಿ(ಗಾಯತ್ರಿ), ಶುಭಾಷಯ(ಶುಭಾಶಯ), ಕೋಟ್ಯಾಂತರ(ಕೋಟ್ಯಂತರ) ಇತ್ಯಾದಿ. ಅಜೀವ ಸದಸ್ಯ ಎಂದರೆ ಜೀವವಿಲ್ಲದ ಸದಸ್ಯ ಎಂದಾಗುತ್ತದೆ, ಆಜೀವ ಸದಸ್ಯ ಎಂದರೆ ಜೀವವಿರುವವರೆಗೂ ಸದಸ್ಯ ಎಂದಾಗುತ್ತದೆ. ಅನುಕೂಲ ಇಲ್ಲದಿರುವುದು ಅನನುಕೂಲವೇ ಹೊರತು ಅನಾನುಕೂಲವಲ್ಲ. ಇದೇ ರೀತಿ ಅ(ಆ)ಜಾನುಬಾಹು, ಜನಾರ್ದ(ರ್ಧ)ನ. ಹೀಗೆ ದಿನಬಳಕೆಯ ನೂರಾರು ಪದಗಳು ಸಂಸ್ಕೃತದಾಗಿದ್ದು ಅದನ್ನು ತಪ್ಪು ಬಳಸುವ ಬದಲು ಕನ್ನಡ ಪದಗಳನ್ನೇ ತದ್ಭವಗಳನ್ನೇ ಬಳಸಬಹುದು ಎಂಬ ಪ್ರಶ್ನೆಗೆ ಉತ್ತರವೇನೆಂದರೆ ಅಂತಹ ಪದಗಳನ್ನು ಅರ್ಥೈಸುವುದು ಇನ್ನೂ ಕಷ್ಟವಾಗುತ್ತದೆ ಎಂಬುದು. ಉದಾಹರಣೆಗೆ ಗೋಪಾಲಕೃಷ್ಟನನ್ನು ಗೋವಳಕಣ್ಣನೆಂದೂ , ಸಂಸ್ಕೃತಕ್ಕೆ ಸಕ್ಕದವೆಂದೂ ಹೇಳಬೇಕಾಗುತ್ತದೆ.

ಇನ್ನು ಸಂಸ್ಕೃತದಲ್ಲಿ ಪ್ರತಿಯೊಂದು ಪದವೂ ಕೂಡ ಅರ್ಥಬಾಹುಳ್ಯದಿಂದ ಕೂಡಿದೆ. ಅಷ್ಟು ಮಾತ್ರವಲ್ಲ ಆ ಪದಗಳನ್ನು ಕೇಳಿದ ಕೂಡಲೇ ಆ ಪದದ ಅಥವಾ ಹೆಸರುಳ್ಳವನ ದೇಶ, ವಂಶ, ಗುಣ, ಸ್ವಭಾವ ಎಲ್ಲಾ ಗೊತ್ತಾಗುತ್ತದೆ. ಉದಾ: ರಮಯತೇ ಇತಿ ರಾಮಃ(ರಮಿಸುವನೇ ರಾಮ), ಕೃಷ್ ಧಾತುವಿನಿಂದ ವ್ಯುತ್ಪನ್ನವಾದುದು ಕರ್ಷಯತಿ, ಅಂದರೆ ಆಕರ್ಷಿಸುವವನು ಕೃಷ್ಟ, ಶತ್ರುಘ್ನ ಶತ್ರುಗಳನ್ನು ನಾಶಮಾಡುವವನು, ದ್ರುಪದನ ಮಗಳು ದ್ರೌಪದಿ, ಅದೇ ರೀತಿ ಪಾಂಚಾಲಿ, ಸೌಮಿತ್ರಿ, ವೈನತೇಯ ಇತ್ಯಾದಿ. ’ಪಕ್ಷ’ ಅಂದರೆ ರೆಕ್ಕೆ ಇರುವಂತಹುದು ಪಕ್ಷಿ.

ಸಂಸ್ಕೃತದ ಕ್ಲಿಷ್ಟ ಪದಗಳ ಉಚ್ಛಾರಣೆಯಿಂದ ನಾಲಗೆ ಹರಿತವಾಗುತ್ತದೆ.
ಉದಾ: ಪ್ರಜ್ಞಾ, ಪ್ರದ್ಯುಮ್ನ, ವಾಂಛಿತ, ಸಂಜ್ಞಾ ಇತ್ಯಾದಿ.
ಒಂದು ಭಾಷೆಯ ಜ್ಞಾನ ಇನ್ನೊಂದು ಭಾಷೆಯ ಸ್ವಷ್ಟತೆಗೆ , ಸೊಗಡಿಗೆ, ಶುದ್ಧತೆಗೆ , ಬೆಳವಣಿಗೆಗೆ ಸಹಾಯಕವಾಗುವುದಾದಲ್ಲಿ, ನಾವು ನಮ್ಮ ಕನ್ನಡವನ್ನು ತಪ್ಪಿಲ್ಲದೆ ಬಳಸುವುದಕ್ಕೆ ಸಹಾಯಕವಾಗುವುದಾದಲ್ಲಿ ಸಂಸ್ಕೃತದ ಬಗ್ಗೆ ತಾತ್ಸಾರ, ಮಡಿವಂತಿಕೆ ತೋರಬೇಕೆ?

ಸಂಸ್ಕೃತವು ನಮ್ಮ ಭಾರತೀಯರ ಅಮೂಲ್ಯ ನಿಧಿ. ಇದನ್ನು ಉಳಿಸುವುದು, ಬೆಳೆಸುವುದು, ಗೌರವಿಸುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಲಿ.

ಲೇಖನ, ಮಾಹಿತಿ ಕೃಪೆ: ಕೆ.ಜಿ.ಬಿ ಮೇಸ್ಟ್ರು

Rating
No votes yet

Comments