ಜೀವನ....ಜಾತ್ರೆ ಮತ್ತು ನಂತರ.........!

ಜೀವನ....ಜಾತ್ರೆ ಮತ್ತು ನಂತರ.........!

ಕವನ

        ತೆರೆದಿಟ್ಟ ಸಿಹಿತಿಂಡಿಗಳ ಮುತ್ತಿದ ನೊಣಗಳಂತೆ

        ಜಾತ್ರೆಯಲ್ಲಿ   ಜನ......

        ವರುಷದ ಸಂತಸವೆಲ್ಲ ಮೈಚೆಲ್ಲಿ  ಮಲಗಿದೆ.!

 

        ಬಳೆ ಅಂಗಡಿಯ ಸುತ್ತ ಸುತ್ತುವ

        ಪಡ್ಡೆ ಹುಡುಗರ ಹಿಂಡು...

        ಕನಸುಗಳ ಮಾರಾಟ..ಹರಾಜು

        ಬಳೆಗೆ ಕೈ ಹಾಕುವವರು,ಕೈಗೆ ಬಳೆ ಹಾಕುವವರು..!

        ಬಳೆಯ ನಡುವಿನ  ದೊಡ್ಡ ರಂದ್ರಗಳ

        ನಡುವೆ ಮೆತ್ತನೆ ಕೈ ಜಾರುತ್ತಿರಲು

        ಸ್ಪರ್ಶವಾದರೂ ಸಾಕು...........

        ಮೈ ತುಂಬ ರೋಮಾಂಚನ  !

 

        ಹರಕೆ ಹೊತ್ತವರ ಶಪಿಸುತ್ತ ಬಿದ್ದಿರುವ

        ಕುರಿ  ಕೋಳಿ  ರುಂಡಗಳು...

        ಧ್ವನಿವರ್ಧಕದ ಗದ್ದಲ ತುತ್ತೂರಿಗಳ ಚೀರಾಟ

        ಮಕ್ಕಳ ಹಠ, ಅಪ್ಪನ ಚಟ-ಅಮ್ಮನ ಆರ್ಭಟ..

        ಕೆಲವರ ಮನಸ್ಸು ಹೊಸ ಬಟ್ಟೆ ತೊಟ್ಟ ಮದುವಣಗಿತ್ತಿ

        ಅದಕ್ಕೆ ಅಲ್ಲವೇ ಅದು...ಜಾತ್ರೆಯಾಗುವದು.?

 

         ಜಾತ್ರೆ ಮುಗಿದ ಮರುದಿನ  ಏನಿದೆ ಅಲ್ಲಿ.?

         ನೀರವ ಮೌನ...ಜೊತೆಗೊಂದಿಷ್ಟು..

         ಗಾಳಿಗೆ ತೂರಾಡುವ ಹರಿದ ಪ್ಲಾಸ್ಟಿಕ್ ಗಳು

         ಕೊಳೆತು ನಾರುವ ಚರಂಡಿಗಳು,

         ವ್ಯಾಪಾರವಿಲ್ಲದ ಸೋತ ಕೆಲವು ಮುಖಗಳು

        ಕಟ್ಟಿದ ಗಂಟು ಮೂಟೆಗಳು ....

        ಅಸ್ಥಿಪಂಜರವಾದ  ನಾಟಕದ ಟೆಂಟುಗಳು

        ಕೈ ಜಾರಿದ ರೂಪಾಯಿ ಪಾವಲಿಗಳ ಹುಡುಕಾಡುವ ಪೋರರು

        ಜಾತ್ರೆಯಿಂದ ಈಗ ದೇವತೆಗಳೂ.. ನಾಪತ್ತೆಯಾಗಿದ್ದಾರೆ !

       

        ಮತ್ತೆ.................

       ಎಂದಿನ ಬದುಕಿಗೆ ಮರಳುತ್ತಿರುವ

       ಬೀದಿಬದಿಯ ವ್ಯಾಪಾರಿ...

        ಮೊಗದಲ್ಲೊಂದಿಷ್ಟು ಸಂತಸ..!

        ಬರುತ್ತಾನಲ್ಲವೇ ಮತ್ತೆ ಎಂದಿನ ಹಳೆ ಗಿರಾಕಿ...

        ಬದುಕೂ ಸಹ........ ಜಾತ್ರೆಯಂತೆ......!!!

        ಅಲ್ಲವೇ ?.........................!

       

        

Comments