ವೇಸ್ಟ್ ಬಾಡಿ ಕಥಾನಕ !
ಈ ವೇಸ್ಟ್ ಬಾಡಿ ಕಥಾನಕ ’ಕೋದಂಡ ರಾಮ’ನಿಗೆ ಸಂಬಂಧಪಟ್ಟಿದ್ದು ... ಅಂದ ಮೇಲೆ, ’ಹೂ ಈಸ್ ಕೋದಂಡ ರಾಮ?’ ಅಂತ ತಿಳಿದುಕೊಳ್ಳಲೇಬೇಕು !!!
ಹುಟ್ಟಿದಾಗ ಹೇಳಹೆಸರಿಲ್ಲದೆ ಹುಟ್ಟಿದರೂ, ಮೂರನೇ ತಿಂಗಳಿಗೆ ’ಕೋದಂಡರಾಮ’ ಎಂದು ಹೆಸರಿಗೆ ಅಂಟಿಕೊಂಡವನು, ಬಲು ಬೇಗ ಬರೀ ’ಕೋಡಂಡ’ನಾದ ... ಉಪಗ್ರಹ ವೇಗ ಪಡೆದುಕೊಂಡ ಮೇಲೆ ರಾಕೆಟ್ ಕಳಚಿಕೊಂಡಂತೆ !!
ಶಾಲೆಗೆ ಹೋಗುವ ಮುನ್ನವೇ ಅರ್ಧನಾಮನಾದವನು, ಶಾಲೆಯಲ್ಲಿ ಇವನ ಹೆಸರನ್ನು ತಪ್ಪಾಗಿ ದಾಖಲಿಸಿದ ಮೇಲಂತೂ ಕೇವಲ "ಕೆ.ದಂಡ" ನಾದ ... ಇದು ನಮ್ಮ ’ದಂಡದೇಹಿ’ ಅರ್ಥಾತ್ ’ವೇಸ್ಟ್ ಬಾಡಿ’ ಹೀರೋ’ನ ಹೆಸರ ಹಿಂದಿನ ಕಥೆ .... ಈಗ ಮುಂದಿನ ಕಥೆ ಕೇಳಿ ...
ಕೋದಂಡನು ಕೆ.ದಂಡ ಆಗಿದ್ದು ಸರಿ ... ಆದರೆ ಆಂಗ್ಲ ಹೆಸರು ಹೇಗೆ ಬಂತು? ಇದೇ ಆ ಕಥೆ ...
ಅದು ಸೈಕಲ್ ಕಾಲ ... ಕೋದಂಡ ಒಮ್ಮೆ ತನ್ನಪ್ಪ ಕೆಲಸ ಮಾಡೋ ಫ್ಯಾಕ್ಟರಿಗೆ ಊಟ ತೆಗೆದುಕೊಂಡು ಹೋಗಿ ಕೊಟ್ಟಿದ್ದ ... ಅಪ್ಪ ಕೊಡಿಸಿದ ಕಳ್ಳೇಕಾಯಿ ತಿನ್ನುತ್ತ ವಾಪಸ್ ಬರುವಾಗ, ಮನೆ ಕಡೆ ಹೊರಟಿದ್ದ ಅಪ್ಪನ ಸ್ನೇಹಿತರು ಸಿಕ್ಕರು ... ಸಿಟಿ ಕಡೆ ಹೋಗುವುದು ಇದ್ದುದರಿಂದ, ಮನೆಗೆ ಹೋಗಿ ಸೈಕಲ್ ಇಟ್ಟು ಹೋಗುವುದು ತಪ್ಪಿತು ಎಂದುಕೊಂಡು ತಮ್ಮ ಸೈಕಲನ್ನು ಅವನಿಗೆ ಕೊಟ್ಟು ಮನೆಗೆ ತಲುಪಿಸು ಎಂದು ತಿಳಿಸಿ, ತಾವು ಬಸ್ ಹಿಡಿಯಲು ಹೊರಟು ಹೋದರು. ಘನಂಧಾರಿ ಕೆಲಸಕ್ಕೆ ಸಿಟಿ ಕಡೆ ಹೋಗೋದಿತ್ತಂತೆ ..
ಘನಂಧಾರಿ ಎಂದರೇನು? ತಮ್ಮ ಕಣ್ಣಿಗೆ ಹಾಕಿಕೊಂಡಿದ್ದ ದಪ್ಪ ಗಾಜಿನ ಟೆಸ್ಟ್’ಗೆ ಪೇಟೆಗೆ ಹೋದರು ಅಂತ ನಾನು ಹೇಳಿದ್ದು ... ಇದನ್ಯಾರು ಘನಂಧಾರಿ ಅಂತಾರೆ, ಅಂದಿರಾ ... ಅವರು ’ಘನ ಅಂಧ ರ್ರೀ’ ಅದಕ್ಕೇ ಅವರು ಸಂಜೆಗೆ ಹೊರಗೆ ಹೋಗೋಲ್ಲ !!!
ಇರಲಿ, ಅವರೇನೋ ಅತ್ತ ಹೊರಟೇ ಹೋದರು ... ’ಟಾಟಾ’ ಮಾಡಿದ ನಂತರ ನಮ್ಮ ಕೋದಂಡ, ಸೈಕಲ್ ತಳ್ಳಿಕೊಂಡು ನೆಡೆದ .... ನೆಡೆದ ... ನೆಡೆದ .... ನಾನೇನ್ರೀ ಮಾಡಲಿ? ... ಕೋದಂಡನಿಗೆ ಸೈಕಲ್ ತುಳಿಯೋಕ್ಕೆ ಬರೋಲ್ಲ, ಅದಕ್ಕೆ ನೆಡೆದ !! ಇವನಿಗೆ ಸೈಕಲ್ ತುಳಿಯೋಕ್ಕೆ ಬರೋದಿಲ್ಲ ಅಂತ ಆ ಸ್ನೇಹಿತರಿಗೆ ಗೊತ್ತಿಲ್ಲ !! ಪಾಪ, ಐದು ಕಿಲೋಮೀಟರ್ ನೆಡೆದಿದ್ದ ನಮ್ ಕೆ.ದಂಡ !!!
ನಂತರ ಆ ಸ್ನೇಹಿತರಿಗೆ ವಿಷಯ ತಿಳಿದು, ಬೇಸರ ಮಾಡಿಕೊಳ್ಳದೆ ’ನಾನು ಸೈಕಲ್ ಕೊಟ್ಟಾಗಲೇ ಹೇಳೋದಲ್ವೇನೋ? ಸೈಕಲ್ ತುಳಿಯೋದಕ್ಕೆ ಬರೋದಿಲ್ವಾ? ನೀನು ಒಂದು ವೇಸ್ಟ್ ಬಾಡಿ ಕಣೋ’ ಅಂದರು ... ಅಂದು ಆ ಶುಭ ನಕ್ಷತ್ರದಲ್ಲಿ ಅವರು ನುಡಿದ ಈ ಮಾತುಗಳು ಇವನ ಹೆಸರನ್ನು ’ವೇಸ್ಟ್ ಬಾಡಿ’ ಎಂದು ಪರ್ಮನೆಂಟಾಗಿಸಿತು ...
ಒಮ್ಮೆ ಹೀಗೆ, ಕೋದಂಡ, ಯಾವುದೋ ಮದುವೆ ಅಂತ ಅಪ್ಪ್-ಅಮ್ಮ’ನ ಜೊತೆ ಹಳ್ಳಿ ಕಡೆ ಹೋಗಿದ್ದ. ಹಾಗೇ ಕೆರೆ ದಂಡೆಗೆ ಸ್ನಾನಕ್ಕೆ ಹೋದ, ಸ್ಟೀಲ್ ತಂಬಿಗೆ ತೆಗೆದುಕೊಂಡು !!! ಹಳ್ಳೀ ಸುಂದರಿ ಒಬ್ಬಳು ಅಲ್ಲೇ ಸೋಪ್ ಉಜ್ಜಿ ತನ್ನ ಎಮ್ಮೆ ತೊಳೆಯುತ್ತಿದ್ದಳು ... ಇವನೇನೂ ಮೈ ಒಡ್ಡಿ ನಿಲ್ಲಲಿಲ್ಲ ಬಿಡಿ...
ಆ ಹುಡುಗಿಯ ಕೈಯಿಂದ ಸೋಪು ಜಾರಿತು ... ಇವನ ರೂಪು ಕಂಡೇನಲ್ಲ ... ಸೋಪು ನುಣುಪಾಗಿತ್ತು, ಜಾರಿತು ಅಷ್ಟೇ!
ಎಮ್ಮೆಯನ್ನು ಬಿಟ್ಟರೆ ಹಾಗೇ ಓಡಿಬಿಟ್ಟೀತು ಎಂದುಕೊಂಡು ಇವನ ಸಹಾಯ ಕೇಳಿದಳು ...
ಹುಡುಗಿ ಕೇಳಿದಳು ಅಂತ ಹುರುಪಿನಲ್ಲಿ ನೀರಿನ ಒಳಗೆ ಹೋದವನು ಮಿಂಚಿನ ವೇಗದಲ್ಲಿ ... ಸೋಪು ಹಿಡ್ಕೊಂಡ್ ಬರಲಿಲ್ಲ ಕಣ್ರೀ ... ನೀರಿನೊಳಗೆ ಹೋಗಲು ಹೋದವನು ಮಿಂಚಿನ ವೇಗದಲ್ಲಿ ಹಾಗೇ ಹೊರ ಬಂದು, ಹಲ್ಕಿಸಿದು ’ನಂಗೆ ಈಜು ಬರಲಲ್ಲ’ ಅಂದು ’ಎಮ್ಮೆ ಹಿಡ್ಕೊಳ್ಳ?’ ಅಂದ.
ಹಿಮ್ಮಡಿ ತನಕವೂ ಇರದ ಆಳದಲ್ಲಿ ಇಳಿಯಲು, ಈಜು ಬರೋಲ್ಲ ಅಂದದ್ದಕ್ಕೆ ದಂಗಾದ ಆ ಹುಡುಗಿ ಹೇಳಿದಳು ’ಈಟುದ್ದ ಸೋಪು ಹಿಡಿಯೋಕ್ಕೆ ಬರೋಲ್ಲ. ಈ ಪಾಟಿ ದೊಡ್ಡ ಎಮ್ಮೆ ಹಿಡೀತೀಯಾ? ವೇಸ್ಟ್ ಬಾಡಿ’ ಅನ್ನೋದೇ?
ಹುಡುಗಿ ಬೈದಿದ್ದಕ್ಕೆ ಇವನಿಗೆ ಬೇಜಾರಾಗಲಿಲ್ಲ ... ಅವಳಿಗೆ ತನ್ನ ಹೆಸರು ಹೇಗೆ ಗೊತ್ತಾಯ್ತು ಅಂಬೋದೇ ಇವನಿಗೆ ಬಂದ ಯೋಚನೆ.
ಕೋದಂಡನೂ ಕಾಲೇಜು ಮೆಟ್ಟಿಲು ಹತ್ತಿದ ... ಇವನು ಮಿಡ್ಲ್-ಸ್ಕೂಲಿನಲ್ಲಿ ಇದ್ದಾಗಲೇ ಕಾಲೇಜ್ ಮೆಟ್ಟಿಲು ಹತ್ತಿದ್ದ, ಇವನ ಜೊತೆ ಸ್ನೇಹಿತರ ಜೊತೆ ಹರಟೆ ಹೊಡೆಯುವಾಗ ... ಇವರೆಲ್ಲ ಸೇರುತ್ತಿದ್ದುದು ಕಾಲೇಜಿನ ಮೆಟ್ಟಿಲಿನ ಬಳಿ. ಆದರೆ, ಈಗ ನಿಜಕ್ಕೂ ಕಾಲೇಜು ವಿದ್ಯಾರ್ಥಿಯಾಗಿದ್ದ.
ಬೈಕ್ ಓಡಿಸಬೇಕೂ ಅಂತ ಆಸೆ ಕೋದಂಡನಿಗೆ ... ಆದರೆ ಇವನ ಕೈಗೆ ಬೈಕ್ ಕೊಡುವ ಧೈರ್ಯ ಯಾರಿಗೂ ಇರಲಿಲ್ಲ. ಒಮ್ಮೆ ಮನೆಗೆ ಇವನ ಚಿಕ್ಕಪ್ಪ ಬಂದಿದ್ದರು, ಬೈಕ್ ತೆಗೆದುಕೊಂಡು. ಬಾಯಿಬಿಟ್ಟು ಕೇಳಿಯೇಬಿಟ್ಟ. ’ಆಯ್ತು ತೊಗೋ, ಹುಷಾರು’ ಎಂದು ಹೇಳಿ ಕೀ ಕೊಟ್ಟೇಬಿಟ್ಟರು ... ಅವರು ಅದೂ ಇದೂ ಮಾತನಾಡುತ್ತ, ತಿಂಡಿ ಕಾಫೀ ಮುಗಿಸಿ ಹೊರಟು ಹೊರಗೆ ಬಂದರು. ಬೈಕ್ ಎಲ್ಲಿತ್ತೋ ಅಲ್ಲೇ ಇತ್ತು !
ಕೋದಂಡ ಇನ್ನೂ ಕಿಕ್ಕುತ್ತಲೇ ಇದ್ದ ... "ಏನಾಯ್ತೋ" ಅಂದರೆ "ಗಾಡಿ ಸ್ಟಾರ್ಟ್ ಆಗ್ತಾನೇ ಇಲ್ಲ" ಎಂದ ... ಚಿಕ್ಕಪ್ಪ ನುಡಿದರು "ನಿನ್ ಜೇಬಿನಲ್ಲಿ ಕೀ ಇಟ್ಕೊಂಡರೆ ಗಾಡಿ ಸ್ಟಾರ್ಟ್ ಆಗಲ್ಲ ಕಣೋ, ವೇಸ್ಟ್ ಬಾಡಿ" ಅಂದು ಕೀ ತೆಗೆದುಕೊಂಡು ಗಾಡಿ ಸ್ಟಾರ್ಟ್ ಮಾಡಿದರು. ಗಾಡಿ ಸ್ಟಾರ್ಟ್ ಮಾಡಲೇ ಅರಿವಿಲ್ಲದವನು ಇನ್ನು ಓಡಿಸಲು ಹೋಗಿ ಏನಾದರೂ ಮಾಡಿಕೊಂಡು ಬಿಟ್ಟಾನು ಎಂದು ಯೋಚಿಸಿ, ಅವನ ಕೈಗೆ ಕೊಡದೆ, ಹೊರಟೇ ಹೋದರು.
ಕೋದಂಡನಿಗೆ ಗಾಡಿ ಓಡಿಸುವ ಆಸೆಯೂ ಅವರೊಂದಿಗೇ ಹೊರಟು ಹೋಯಿತು !
ಕಾಲೇಜು ಸೇರಿದ ಮೇಲೆ, ಕೋದಂಡನಿಗೆ ಜೀನ್ಸ್ ಧರಿಸೋ ಆಸೆ ಬಂತು ... ಸಿದ್ದ ಉಡುಪಗಳ ಭರಾಟೆಯ ಈ ದಿನಗಳಲ್ಲಿ ಕೆಲಸವಿಲ್ಲದೆ ಕುಳಿತಿದ್ದ ಮೂಲೆ ಅಂಗಡಿಯಾದ ’ಸಿದ್ರಾಮ ಟೈಲರ್ಸ್’ಗೆ ನೆಡೆದ. ’ಒಂದು ಪ್ಯಾಂಟ್ ಹೊಲಿಸೋದಿತ್ತು’ ಅಂದ ಮೆಲ್ಲಗೆ ... ಜೋರಾಗಿ ಮಾತನಾಡಿದರೆ ಯಾರೇನು ಅಂದುಕೊಳ್ಳುತ್ತಾರೋ ಎಂಬ ಅಳುಕು ....
ಸಿದ್ರಾಮ, ಏನೂ ಯೋಚನೆ ಮಾಡದೆ, ಸೀದ ಟೇಪ್ ತೆಗೆದುಕೊಂಡು ಅಳೆಯಲು ಶುರು ಮಾಡೆ ಬಿಟ್ಟ ... ಮೊದಲು ಸೊಂಟದ ಅಳತೆ ತೆಗೆದುಕೊಳ್ಳುವಾಗ ಸಂಕಟದಿಂದ ನುಡಿದ "ನಿಂದು ವೇಸ್ಟ್ ಇಲ್ದೇ ಇರೋ ಬಾಡಿ" ಅಂದ
ಕೋದಂಡನಿಗೆ ಖುಷಿಯಾಯ್ತು ... ಒಬ್ಬನಾದರೂ ತನ್ನನ್ನು ವೇಸ್ಟ್ ಅನ್ನಲಿಲ್ಲವಲ್ಲ ಅಂತ ... ಸಿದ್ರಾಮ ಮರು ನುಡಿದ "Waist ಇಲ್ದೆ ಇರೋ ವೇಸ್ಟ್ ಬಾಡಿ ಕಣೋ ನಿಂದು ... ತಿಂದಿದ್ದೆಲ್ಲ ಎಲ್ಲಿ ಹೋಗುತ್ತೆ?" ...
ಕೋದಂಡ ಆಮೇಲೆ ನುಡಿದ "ನನಗೆ ಜೀನ್ಸ್ ಪ್ಯಾಂಟ್ ಹೊಲೆಸಿಕೊಳ್ಳೋದು ಇತ್ತು" ಅಂತ ... ಸಿದ್ರಾಮ ನುಡಿದ "ನಿನ್ ಜೀನ್ಸ್ ಹೊಲೆಯೋಕ್ಕೆ ನಮ್ ಅಂಗಡಿ ಮೆಷೀನ್’ಗೆ ಶಕ್ತಿ ಇಲ್ಲ ... ರೆಡಿಮೇಡ್ ಸಿಗುತ್ತೇನೋ ನೋಡು ... ಸುಮ್ನೆ ಟೈಮ್ ವೇಸ್ಟು" ಎಂದು ಟೇಪನ್ನು ಅಲ್ಲಿಟ್ಟು, ಹೊರ ನೆಡೆದು ಬೀಡಿ ಹಚ್ಚಿದ ...
ಒಟ್ಟಿನಲ್ಲಿ ಕೋದಂಡ ಇದ್ದ ಕಡೆ ಏನೋ ಒಂದು ದಂಡ ...
ಕೋದಂಡನಿಗೂ ವೇಸ್ಟ್’ಗೂ ಸಿಕ್ಕಾಪಟ್ಟೆ ನಂಟು ಅಂತ ಅರ್ಥವಾಯ್ತಲ್ಲ ... ಅದೆಂತಹ ನಂಟು ಎಂದರೆ, ಬೇರೆಲ್ಲೋ ಕೆಲಸ ಸಿಗದೆ, ಯಾವುದೋ ಗ್ರಹ ವಕ್ರ/ಶುಕ್ರ ದೃಷ್ಟಿಯ ಸಹಾಯದಿಂದ ಸರಕಾರಿ ಕೆಲ್ಸ ಸಿಕ್ಕಿತು ... ಎಲ್ಲಿ ಅಂದಿರಾ? "BWSSB"’ನಲ್ಲಿ ಒಂದು ಪುಟ್ಟ ಕೆಲಸ ...
ಕೆಲಸ ಅಂತೂ ಆಯ್ತು ... ನಂತರ ಮದುವೆ ... ಯಾವ ಹುಡುಗಿಯೂ ಇವನಿಗೆ ಸರಿ ಹೋಗಲಿಲ್ಲ, ಯಾಕೆಂದ್ರೆ ಇವನನ್ನು ಯಾರೂ ಇಷ್ಟ ಪಡುತ್ತಿರಲಿಲ್ಲ !!! ಗೊತ್ತೇ ಇದೆಯಲ್ಲ, ಮುಂದಿನ ಹಾದಿ ...
ಪಾದ, ಸೀದ ಜ್ಯೋತಿಷಿಯ ಬಳಿ ....
ಇತ್ತೀಚೆಗೆ ’ಕ್ರೈಮ್ ಡೈರಿಯಲ್ಲಿ’ ಕಾಣಿಸಿಕೊಂಡಿದ್ದರಿಂದ ಸಿಕ್ಕಾಪಟ್ಟೆ ಪ್ರಚಾರ ಸಿಕ್ಕಿ ಬಹಳ ಫೇಮಸ್ ಆಗಿದ್ದ ಜ್ಯೋತಿಷಿಯ ಬಳಿ ಸುಮಾರು ಜನ ಕ್ಯೂ ನಿಂತಿದ್ದರು ...
ಜ್ಯೋತಿಷಿ ಯಾರಿಗೋ ಹೇಳುತ್ತಿದ್ದ "ವ್ಯಾಪಾರದಲ್ಲಿ ಸ್ವಲ್ಪ ನಷ್ಟ ಇದೆ ಅಂತ ಕಾಣ್ತಿರೋದ್ರಿಂದ, ಶಾಂತಿ ಮಾಡಿಸಿ, ಅಂಗಡಿಯನ್ನು ಒಂದು ಘಂಟೆ ತಡವಾಗಿ ತೆರೆಯಿರಿ ... " ... ಕೋದಂಡನಿಗೆ ಏನೂ ಅರ್ಥವಾಗಲಿಲ್ಲ... ಒಂದು ಘಂಟೆ ತಡವಾಗಿ ತೆರೆದರೆ, ಅಷ್ಟು ನಷ್ಟ ಕಡಿಮೆ ಆಗುತ್ತದೆ ಎಂದು ಜ್ಯೋತಿಷಿ ಹೇಳಿದ್ದು !!
ಇವನ ಸರದಿ ಬಂತು. ಇವನ ಜಾತಕ ದೀರ್ಘವಾಗಿ ನೋಡಿದ ಜ್ಯೋತಿಷಿ "ಬಹಳ ಅಪರೂಪವಾದ ಜಾತಕ .." ಎಂದರು ... ಕೋದಂಡನಿಗೆ ಖುಷಿಯಾಯಿತು ... ತನ್ನ ಜೀವನದಲ್ಲೂ ಒಂದು ಹೆಣ್ಣು ಬರುವ ಶುಭ ಘಳಿಗೆ ಬರಲಿದೆ ಅಂತ ...
ಜ್ಯೋತಿಷಿ ಮುಂದುವರೆಸಿದರು "ಯಾವ ಗ್ರಹಗಳೂ ಏನೂ ಕೆಲಸ ಮಾಡದೆ ಸ್ಟ್ರೈಕ್ ಮಾಡುತ್ತಿದೆ ... ಉತ್ತರ-ದಕ್ಷಿಣ-ಈಸ್ಟು-ವೇಸ್ಟು ಎಲ್ಲೂ ಏನೂ ನೆಡೀತಿಲ್ಲ ... ಈ ಜಾತಕ ಇರೋವ್ರ್ದಾ? ಹೋಗಿರೋವ್ರ್ದಾ?"
ಕೋದಂಡನಿಗೆ ತಲೆ ಕೆಟ್ ಹೋಯ್ತು ... ಸೀದ ಎದ್ದು ಬಂದ ... ಇನ್ಸುಲ್ಟೇಷನ್ ಆದರೂ, ಕನ್ಸಲ್ಟೇಷನ್ ದುಡ್ಡು ಕೊಟ್ಟ ನಂತರ ....
ಅದೇನು ಆಯ್ತೋ ಏನೋ ಮದುವೆಗೆ ಮುಂಚೇನೇ ಕಾಯಿಲೆಗಳು ಅಟಕಾಯಿಸಿಕೊಂಡಿತು ... ಹೋದ ಮೇಲಾದರೂ, ಜಗತ್ತಿಗೆ ತನ್ನಿಂದ ಉಪಯೋಗವಾಗಲಿ ಎಂದು ತನ್ನ ದೇಹವನ್ನು ದಾನ ಮಾಡಿದ್ದ ...
ಒಂದು ಶುಭ ದಿನ ಶಿವನ ಪಾದ ಸೇರಿದ್ದ ... ಸಂಬಂಧಪಟ್ಟವರು, ಇವನ ದೇಹವನ್ನು ತೆಗೆದುಕೊಂಡು ಹೋದರು ... ಕಣ್ಣು ತೆಗೆದುಕೊಳ್ಳೋಣವೆಂದರೆ ಇವನ ಜೀವ ಹೋಗೋ ವೇಳೆಗೆ ಜಾಂಡೀಸ್ ಆಗಿತ್ತು ... ಸಕ್ಕರೆ ಖಾಯಿಲೆ ಇದ್ದುದರಿಂದ ಬದುಕಿರುವಾಗ ರಕ್ತ ಕೊಡಲಾಗಲಿಲ್ಲ ... ಈಗಂತೂ ಆಗುವುದೇ ಇಲ್ಲ ... ರಕ್ತ ಪರೀಕ್ಷೆ ಮಾಡಿದ ಸಂಬಂಧಪಟ್ಟವರು ದೇಹವು ಬಳಕೆಗೆ ಯೋಗ್ಯವಲ್ಲ ಎಂದು ನಿರ್ಧರಿಸಿದರು ...
ಒಟ್ಟಿನಲ್ಲಿ ಸತ್ತ ಮೇಲೂ ನಮ್ ಕೋದಂಡ ’ವೇಸ್ಟ್ ಬಾಡಿ’ಯೇ ಆದ ...
(ದೈಹಿಕ ಪ್ರತಿಕೂಲಗಳಿಂದ, ತಮ್ಮದಲ್ಲದ ತಪ್ಪಿನಿಂದಾಗಿ ಇನ್ನೊಬ್ಬರಿಗೆ ಸಹಾಯ ಮಾಡಬೇಕೆಂದಿದ್ದರೂ ಸಾಧ್ಯವಾಗದೆ ಇರುವ, ತಮ್ಮಾಸೆಗಳನ್ನು ಪೂರೈಸಿಕೊಳ್ಳಲಾಗದೆ ಬೂದಿಯಾಗುವ ಇಂತಹ ಕೋದಂಡರು ನಮ್ಮ ನಡುವೆ, ಇದ್ದರು .. ಇದ್ದಾರೆ .. ಇರುತ್ತಾರೆ ... )
Comments
ಉ: ವೇಸ್ಟ್ ಬಾಡಿ ಕಥಾನಕ !
In reply to ಉ: ವೇಸ್ಟ್ ಬಾಡಿ ಕಥಾನಕ ! by kamath_kumble
ಉ: ವೇಸ್ಟ್ ಬಾಡಿ ಕಥಾನಕ !
ಉ: ವೇಸ್ಟ್ ಬಾಡಿ ಕಥಾನಕ !
In reply to ಉ: ವೇಸ್ಟ್ ಬಾಡಿ ಕಥಾನಕ ! by pramods1729
ಉ: ವೇಸ್ಟ್ ಬಾಡಿ ಕಥಾನಕ !
ಉ: ವೇಸ್ಟ್ ಬಾಡಿ ಕಥಾನಕ !
In reply to ಉ: ವೇಸ್ಟ್ ಬಾಡಿ ಕಥಾನಕ ! by Chikku123
ಉ: ವೇಸ್ಟ್ ಬಾಡಿ ಕಥಾನಕ !
In reply to ಉ: ವೇಸ್ಟ್ ಬಾಡಿ ಕಥಾನಕ ! by bhalle
ಉ: ವೇಸ್ಟ್ ಬಾಡಿ ಕಥಾನಕ !
ಉ: ವೇಸ್ಟ್ ಬಾಡಿ ಕಥಾನಕ !
In reply to ಉ: ವೇಸ್ಟ್ ಬಾಡಿ ಕಥಾನಕ ! by manju787
ಉ: ವೇಸ್ಟ್ ಬಾಡಿ ಕಥಾನಕ !
ಉ: ವೇಸ್ಟ್ ಬಾಡಿ ಕಥಾನಕ !
In reply to ಉ: ವೇಸ್ಟ್ ಬಾಡಿ ಕಥಾನಕ ! by Shreshta
ಉ: ವೇಸ್ಟ್ ಬಾಡಿ ಕಥಾನಕ !
ಉ: ವೇಸ್ಟ್ ಬಾಡಿ ಕಥಾನಕ !
In reply to ಉ: ವೇಸ್ಟ್ ಬಾಡಿ ಕಥಾನಕ ! by ಗಣೇಶ
ಉ: ವೇಸ್ಟ್ ಬಾಡಿ ಕಥಾನಕ !
ಉ: ವೇಸ್ಟ್ ಬಾಡಿ ಕಥಾನಕ !
In reply to ಉ: ವೇಸ್ಟ್ ಬಾಡಿ ಕಥಾನಕ ! by Iynanda Prabhukumar
ಉ: ವೇಸ್ಟ್ ಬಾಡಿ ಕಥಾನಕ !
ಉ: ವೇಸ್ಟ್ ಬಾಡಿ ಕಥಾನಕ !
In reply to ಉ: ವೇಸ್ಟ್ ಬಾಡಿ ಕಥಾನಕ ! by RAMAMOHANA
ಉ: ವೇಸ್ಟ್ ಬಾಡಿ ಕಥಾನಕ !
In reply to ಉ: ವೇಸ್ಟ್ ಬಾಡಿ ಕಥಾನಕ ! by bhalle
ಉ: ವೇಸ್ಟ್ ಬಾಡಿ ಕಥಾನಕ !
In reply to ಉ: ವೇಸ್ಟ್ ಬಾಡಿ ಕಥಾನಕ ! by gopinatha
ಉ: ವೇಸ್ಟ್ ಬಾಡಿ ಕಥಾನಕ !