ಹಂಸ ಹಾಡುವ ಹೊತ್ತು - ೨

ಹಂಸ ಹಾಡುವ ಹೊತ್ತು - ೨

ಶೃತಿ ಸೇರಿದ ಸಮಯ

ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮೂರ್ತಿಯವರು ತಮ್ಮ ಸ್ವಸಾಮರ್ಥ್ಯದಿಂದಲೇ ಮೇಲೆ ಬಂದಿದ್ದರು. ಸರ್ಕಾರಿ ಕೆಲಸದಲ್ಲಿದ್ದು ಸಂಬಳವೊಂದೇ ಅವರಿಗೆ ಸಂಪಾದನೆಯ ಮೂಲವಾಗಿದ್ದರೂ ಆರ್ಥಿಕವಾಗಿ ಈಗ ಅತ್ಯುತ್ತಮ ಸ್ಥಿತಿಯಲ್ಲಿದ್ದ ಮೂರ್ತಿಯವರಿಗೆ ಸಂಪತ್ತು ಬಹಳ ಅನೀರೀಕ್ಷಿತವಾಗಿ ಲಭಿಸಿತ್ತು. ಅವರ ಅಸಾಧಾರಣ ಪ್ರತಿಭೆ ಬಾಲ್ಯದಿಂದಲೇ ವ್ಯಕ್ತವಾಗಿತ್ತು. ಯಾವುದೇ ವಿಷಯವನ್ನು ಅಭ್ಯಾಸ ಮಾಡುವಾಗ ಅದನ್ನು ಪೂರ್ತಿಯಾಗಿ ಮನನ ಮಾಡಿಕೊಳ್ಳುವತ್ತ ಅವರ ಧ್ಯಾನವಿರುತ್ತಿತ್ತೇ ಹೊರತಾಗಿ ಬೇರೆ ವಿದ್ಯಾರ್ಥಿಗಳಂತೆ ಪಾಠಗಳನ್ನು ಕಂಠಪಾಠಮಾಡಿ ಅಂತರ್ಗತ ಮಾಡಿಕೊಳ್ಳುತ್ತಿರಲಿಲ್ಲ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಹತ್ತನೇ ಸ್ಥಾನ ಗಳಿಸಿ ಉತ್ತೀರ್ಣರಾದಾಗ ಅವರ ಶಿಕ್ಷಕರಿಗಾಗಲೀ ಸ್ನೇಹಿತರಿಗಾಗಲೀ ಏನೂ ಅಚ್ಚರಿಯಾಗಿರಲಿಲ್ಲ. ಬೇರೆಯವರಂತೆ ಕೆಲವು ಪಾಠಗಳನ್ನಾದರೂ ಉರುಹೊಡೆಯುವುದರಲ್ಲಿ ತೊಡಗಿಸಿಕೊಂಡಿದ್ದರೆ ಪ್ರಥಮ ಸ್ಥಾನವನ್ನೇ ಪಡೆಯಬಹುದಿತ್ತೆಂಬುದು ಅವರ ಅಭಿಪ್ರಾಯವಾಗಿತ್ತು. ಮುಂದಿನ ವಿದ್ಯಾಭ್ಯಾಸದ ಸಮಯದಲ್ಲಿಯೂ ಅವರ ಸ್ವಭಾವ ಹಾಗೆಯೇ ಮುಂದುವರೆದಿತ್ತು.

ಬಾಲ್ಯದಲ್ಲಿ, ತುಮಕೂರಿನಲ್ಲಿ ಮೂರ್ತಿಯ ಪಕ್ಕದ ಮನೆಯಲ್ಲಿಯೇ ಇದ್ದ ಸುಮಾರು ಅವರದೇ ಪ್ರಾಯದ ಮುರಳಿ ಅವರ ಜೊತೆಗಾರ. ಜೊತೆಯಾಗಿ ಶಾಲೆಗೆ ಹೋಗುವುದರಿಂದ ಹಿಡಿದು ವಿರಾಮದ ಸಮಯವನ್ನು ಕಳೆಯುವುದರ ತನಕ ಅವರಿಬ್ಬರೂ ಜೊತೆಗಾರರಾಗಿದ್ದರು. ಪ್ರತಿ ಗುರುವಾರ ಸಂಜೆ ಇಬ್ಬರೂ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹೋಗಿ, ಅಲ್ಲಿಯ ಪೂಜಾ ಕಾರ್ಯಕ್ರಮದಲ್ಲಿ ಆರಂಭದಿಂದ ಮಂಗಳಾರತಿಯವರೆಗೂ ಶ್ರದ್ಧೆಯಿಂದ ಭಾಗವಹಿಸುತ್ತಿದ್ದರು. ಆಗೊಮ್ಮೆ ಈಗೊಮ್ಮೆ ತಮಗೆ ಸಿಕ್ಕುತ್ತಿದ್ದ ಪುಡಿಗಾಸನ್ನು ಉಳಿಸಿ
ರಾಯರಿಗೆ ಎರಡು ಬಾಳೆಹಣ್ಣುಗಳನ್ನು ನೇವೇದ್ಯ ಮಾಡಿಸುವಾಗ ಇಬ್ಬರಿಗೂ ಅಪೂರ್ವವಾದ ಧನ್ಯತೆಯ ಅನುಭವ. ಕಾರ್ಯಕ್ರಮದ ಕೊನೆಯಲ್ಲಿ ರಾಯರನ್ನು ಉಯ್ಯಾಲೆಯಲ್ಲಿ ಕೂಡಿಸಿ , "ತೂಗಿರೇ ರಾಯರ, ತೂಗಿರೇ ಯತಿಗಳ......" ಎಂದು ಹಾಡುವಾಗ ಇಬ್ಬರಿಗೂ ಮೈತುಂಬಿ ಬರುತ್ತಿತ್ತು. ಇಬ್ಬರಲ್ಲಿ ಹೆಚ್ಚು ಭಾವೋದ್ವೇಗಕ್ಕೆ ಒಳಗಾಗುತ್ತಿದ್ದುದು ಮೂರ್ತಿಯೇ. ಅವರ ಮನೆಯ ಹತ್ತಿರದಲ್ಲಿಯೇ ಇದ್ದ ವೇಣುಗೋಪಾಲ ಸ್ವಾಮಿಯ ದೇವಸ್ಥಾನದಲ್ಲಿ ಪ್ರವಚನ, ಹರಿಕಥೆಗಳಂತಹ ಕಾರ್ಯಕ್ರಮಗಳಿರುತ್ತಿದ್ದುವು. ಇವರಿಬ್ಬರೂ
ತಪ್ಪದೇ ಹಾಜರಿರುತ್ತಿದ್ದರು.

ಧ್ರುವ, ಚಂದ್ರಹಾಸ, ಶಿಬಿ ಚಕ್ರವರ್ತಿಯ ಕಥೆಗಳನ್ನು ಕೇಳುವಾಗ ಮೂರ್ತಿಯ ಕಣ್ಣುಗಳಿಂದ ಅಶ್ರುಧಾರೆ! ಮಧ್ಯೆ ಮಧ್ಯೆ ಹರಿಕಥೆದಾಸರು ಹೇಳುತ್ತಿದ್ದ ಹಾಸ್ಯದ ಅಡ್ಡಕಥೆಗಳನ್ನು ಕೇಳುವಾಗಲೂ ತುಂಬಾ ಅನುಭವಿಸಿಕೊಂಡು ಕೇಳುತ್ತಿದ್ದರು. ಕೇವಲ ಒಂದು ಸಲ ಕೇಳಿದಕೂಡಲೇ ಅದನ್ನು ನೆನಪಿನಲ್ಲಿಟ್ಟುಕೊಂಡು ಅದರ ಪೂರ್ಣಪಾಠವನ್ನು ಪುನರ್ನುಡಿಯಬಲ್ಲಂಥವರಿಗೆ ಏಕಪಾಠಿ ಎನ್ನುತ್ತಾರೆ. ಇಂತಹುದೊಂದು ಸಾಮರ್ಥ್ಯ ಮೂರ್ತಿಯವರಿಗಿದ್ದುದು ಯಾರ ಗಮನಕ್ಕೂ ಬಂದಿರಲಿಲ್ಲ. ಹರಿಕಥೆ ಕೇಳಿ ಮನೆಗೆ ಬಂದ ಮೇಲೆ, ಅವರ ಅಜ್ಜಿ "ಮೂರ್ತಿ, ಯಾವುದೋ ಹರಿಕಥೆ ಇವತ್ತು " ಎಂದು ಕೇಳುವುದೇ ತಡ, ಹರಿಕಥೆದಾಸರು ತಮ್ಮ ಸೊಂಟಕ್ಕೆ ಶಾಲನ್ನು ಬಿಗಿದು ಕಟ್ಟಿಕೊಳ್ಳುತ್ತಿದ್ದಂತೆ, ಟವೆಲ್ ಒಂದನ್ನು ತಮ್ಮ ಸೊಂಟಕ್ಕೆ ಬಿಗಿದುಕೊಂಡು, ಹರಿಕಥೆ ದಾಸರ ಗತ್ತಿನಲ್ಲಿಯೇ , ಹರಿಕಥೆಯನ್ನು ಪೂರ್ತಿಯಾಗಿ ಒಪ್ಪಿಸುತ್ತಿದ್ದರು. ಮೊಮ್ಮಗನ ಹರಿಕಥೆ ಕೇಳುವಾಗ ಅಜ್ಜಿಯ ಹಿಗ್ಗು ಹೇಳತೀರದು. ರಾತ್ರಿಯ ಫಳಾರಕ್ಕೆ ತಮಗಾಗಿಯೇ ಮಾಡಿಟ್ಟುಕೊಂಡಿದ್ದ ಗೊಜ್ಜವಲಕ್ಕಿಯನ್ನು ಮೊಮ್ಮಗನ ಕೈಗೆ ಹಾಕುತ್ತಿದ್ದರು.

ದೇವರ, ದೈವ ಭಕ್ತರ ಕಥೆಗಳನ್ನು ಕೇಳಿ ಪುಳಕಗೊಳ್ಳುತ್ತಿದ್ದ ಮೂರ್ತಿಯವರಲ್ಲಿ, ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸುವಷ್ಟರಲ್ಲಿಯೇ ಗಣನೀಯ ಪರಿವರ್ತನೆ ಕಂಡುಬಂದಿತ್ತು. ಪ್ರತಿದಿನ ಸ್ನಾನದ ನಂತರ ಒದ್ದೆಬಟ್ಟೆಯಲ್ಲಿಯೇ ಮನೆದೇವರಿಗೆ ನಮಸ್ಕರಿಸಿ, "ಯಾಕುಂದೇಂದು ತುಷಾರಹಾರ ಧವಳಾ..." ದಿಂದ ಆರಂಭ ಮಾಡಿ, "ಪೂಜ್ಯಾಯ ರಾಘವೇಂದ್ರಾಯ....." ವರೆಗೂ ನುಡಿಯುತ್ತಿದ್ದುದನ್ನು ಈಗಲೂ ಮುಂದುವರೆಸಿದ್ದರೂ, ಈ ಕ್ರಿಯೆಯಲ್ಲಿ ಮೊದಲು ಅವರಿಗಿದ್ದ ತನ್ಮಯತೆ ಈಗಿರಲಿಲ್ಲ. ಕೇವಲ ಯಾಂತ್ರಿಕವಾಗಿ ಅದನ್ನು ಮಾಡುತ್ತಿದ್ದರು.

ಪದವಿಪೂರ್ವ ವಿದ್ಯಾಭ್ಯಾಸವನ್ನು ಮುಗಿಸುವವರೆಗೂ ಮೂರ್ತಿ ಗಮನಿಸುತ್ತಿದ್ದುದು ಕೇವಲ ತನ್ನ ಕುಟುಂಬದ ಮತ್ತು ಕುಟುಂಬದ ಹತ್ತಿರದ ವಿದ್ಯಮಾನಗಳನ್ನು ಮಾತ್ರ. ಪದವಿಗಾಗಿ ಅಭ್ಯಾಸಮಾಡುತ್ತಿದ್ದ ನಂತರದ ದಿನಗಳಲ್ಲಿ, ಬೆಂಗಳೂರಿನ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ತನ್ನ ಕಾಲೇಜು ಜೀವನವನ್ನು ಆರಂಭಿಸಿದಿಂದಲೂ ಅವರ ಗಮನ ಕೇವಲ ತನ್ನ ಸುತ್ತುಮುತ್ತಲಿನ ವಿದ್ಯಮಾನಗಳನ್ನಷ್ಟಲ್ಲದೇ ಇಡೀ ಸಮಾಜದ ಮತ್ತು ದೇಶದ ವಿದ್ಯಮಾನಗಳ ಕಡೆ ಹರಿಯಲಾರಂಭಿಸಿತ್ತು. ಅದುವರೆಗೂ ಅವರು ಭದ್ರವಾಗಿ ನಂಬಿಕೊಂಡಿದ್ದ ಕೆಲವು ವಿಚಾರಗಳ ಬಗ್ಗೆ ಮರುಚಿಂತನೆ ಮಾಡುವಂತೆ ಮಾಡಿತ್ತು. ಅವರನ್ನು ತೀವ್ರವಾಗಿ ಕಾಡಲಾರಂಭಿಸಿದ್ದ ಸಮಸ್ಯೆಯೆಂದರೆ ನಮ್ಮ ಸಮಾಜದಲ್ಲಿರುವ ಅಸಮಾನತೆ. ವೈಯುಕ್ತಿಕವಾಗಿ ಅವರಿಗೆ ಯಾವುದೇ ವಿಷಯದಲ್ಲಿ ಕೊರತೆಯಿರಲಿಲ್ಲ. ತಮ್ಮ ಖರ್ಚಿಗೆ ಸಾಕಾಗುವಷ್ಟು ಹಣ ಮನೆಯಿಂದ ಬರುತ್ತಿತ್ತು. ಕಾಲೇಜಿನಲ್ಲಿ ಅವರ ಪ್ರಗತಿಯೂ ತೃಪ್ತಿಕರವಾಗಿತ್ತು. ಆದರೆ, ಅವರ ಸಹಪಾಠಿಗಳನ್ನು ಮತ್ತು ಅವರ ಸಮಸ್ಯೆಗಳನ್ನು ಕಾಣುವಾಗ ಮಾತ್ರ ಅವರಿಗೆ ಬಹಳ ಖೇದವಾಗುತ್ತಿತ್ತು. ವಿದ್ಯಾರ್ಥಿ ನಿಲಯದಲ್ಲಿ ಅವರ ಕೋಣೆಯಲ್ಲಿಯೇ ಸಹಪಾಠಿಯಾಗಿದ್ದ ಶಿವಲಿಂಗಪ್ಪ ಹತ್ತಿರದ ಹಳ್ಳಿಯಿಂದ ಬಂದವನು. ಪ್ರತಿ ತಿಂಗಳೂ ವಿದ್ಯಾರ್ಥಿ ನಿಲಯದ ಮತ್ತು ಕಾಲೇಜಿನ ಫೀಸ್ ಕಟ್ಟುವುದಕ್ಕೆ ಹರಸಾಹಸಪಡುತ್ತಿದ್ದ. ಮೂರ್ತಿಯ ಬಳಿ ಅವರ ಸ್ವಂತದ್ದೇ ಆದ ಎಲ್ಲಾ ಪಠ್ಯಪುಸ್ತಕಗಳಿದ್ದವು. ತಮ್ಮ ಪುಸ್ತಕಗಳನ್ನೇ ಬಳಸಲು ಅವನಿಗೆ ಅವಕಾಶ ಮಾಡಿಕೊಟ್ಟು, ಶಿವಲಿಂಗಪ್ಪನಿಗೆ ಸ್ವಲ್ಪ ಖರ್ಚನ್ನು ತಪ್ಪಿಸಿದ್ದರು. ಅವರಿಬ್ಬರೂ ಆಯ್ದುಕೊಂಡಿದ್ದ ವಿಷಯಗಳಲ್ಲಿ ಒಂದು ವಿಷಯ ಮಾತ್ರ ಬೇರೆಯಾಗಿತ್ತು. ಆ ವಿಷಯದ ಪಠ್ಯಪುಸ್ತಕಕ್ಕೆ ಮಾತ್ರ ಅವನು ಕಾಲೇಜಿನ ಗ್ರಂಥಾಲಯಕ್ಕೇ ಹೋಗಿ ಓದಿಕೊಳ್ಳುತ್ತಿದ್ದ. ಶಿವಲಿಂಗಪ್ಪನ ಬುದ್ಧಿಮತ್ತೆಯ ಬಗ್ಗೆ ಮೂರ್ತಿಗೆ ಚೆನ್ನಾಗಿ ಅರಿವಿತ್ತು. ಅವನಿಗೆ ಹಣದ ತಾಪತ್ರಯವಿಲ್ಲದೆ, ವ್ಯಾಸಂಗದಲ್ಲಿ ಮಾತ್ರ ನೆಮ್ಮದಿಯಿಂದ ಮನ ನೆಡುವಂತಿದ್ದರೆ, ಮೂರ್ತಿಗಿಂತಲೂ ಹೆಚ್ಚಿನ ಸಾಧನೆಯನ್ನು ಸುಲಭವಾಗಿ ಮಾಡಬಲ್ಲವನಾಗಿದ್ದ ಎಂಬುದೂ ಮೂರ್ತಿಗೆ ತಿಳಿದಿತ್ತು. ಮುರಳಿ ಕೂಡ ಬೆಂಗಳೂರಿನಲ್ಲಿಯೇ ಓದುತ್ತಿದ್ದರೂ, ಅವರು ಕಾನೂನು ಪದವಿಯನ್ನು ಆರಿಸಿಕೊಂಡಿದ್ದರಿಂದ ಬೇರೆ ಕಾಲೇಜಿಗೆ ಸೇರಿಕೊಂಡಿದ್ದರು. ಆದರೂ ವಾರಕ್ಕೊಮ್ಮೆಯೋ, ಎರಡು ವಾರಕ್ಕೊಮ್ಮೆಯೋ ಅವರು ಸಂಧಿಸುತ್ತಿದ್ದರು. ಹಾಗೆ ಸಂಧಿಸಿದಾಗಲೆಲ್ಲಾ ಹರಟೆಯ ಜೊತೆಗೆ ಕೆಲವು ಸಲ ಗಂಭೀರ ಚರ್ಚೆಯನ್ನೂ ಮಾಡುತ್ತಿದ್ದರು.

ಹಾಗೊಮ್ಮೆ ಚರ್ಚಿಸುತ್ತಿದ್ದಾಗ ಮೂರ್ತಿ ತಮ್ಮನ್ನು ಕಾಡುತ್ತಿದ್ದ ಸಮಸ್ಯೆಯನ್ನೆತ್ತಿದ್ದರು.
."ಮುರಳೀ, ನನಗೊಂದು ವಿಷಯ ಅರ್ಥವಾಗುತ್ತಿಲ್ಲ. ಆ ಸೃಷ್ಟಿಕರ್ತನ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರು ಎಂದೇ ಎಲ್ಲಾ ಧರ್ಮಗಳು ಹೇಳುತ್ತವೆ. ಆದರೆ, ವಾಸ್ತವದಲ್ಲಿ ನಮ್ಮಲ್ಲಿರುವ ವಿವಿಧ ಬಗೆಯ ಅಂತರಗಳನ್ನು ಗಮನಿಸಿದಾಗ ಅದನ್ನು ಮನಸ್ಸೊಪ್ಪುವುದಿಲ್ಲ. ಅದೇಕೆ ನಮ್ಮಲ್ಲಿ ಇಷ್ಟೊಂದು ಅಸಮಾನತೆ ? ಕೇವಲ ಜೀವ ಹಿಡಿದುಕೊಂಡು ಬದುಕಿರುವುದಕ್ಕೇ ಪ್ರತಿದಿನವೂ ಹೋರಾಟ ನಡೆಸಿ ದಯನೀಯ ಸ್ಥಿಯಿಯಲ್ಲಿರುವವರ ವರ್ಗವೊಂದಾದರೆ, ನಮ್ಮ ಊಹೆಗೂ ನಿಲುಕದ ವೈಭವದಲ್ಲಿ ಜೀವನ ನಡೆಸುತ್ತಿರುವ ಇನ್ನೊಂದು ವರ್ಗ. ಅದೇಕೆ ಹೀಗೆ ?"
"ನಾನು ಈ ವಿಷಯದಲ್ಲಿ ಹೆಚ್ಚು ತಿಳಿದವನಲ್ಲ. ನನಗೆ ತಿಳಿದ ಮಟ್ಟಿಗೆ , ನಮ್ಮ ಹಿಂದೂ ನಂಬಿಕೆಯಂತೆ, ನಮ್ಮ ಪೂರ್ವಜನ್ಮದ ಪಾಪ ಪುಣ್ಯದ ಆಧಾರದ ಮೇಲೆ ನಮ್ಮ ಪ್ರಸ್ತುತ ಜೀವನವಿರುತ್ತದೆ. ನಮ್ಮ ಹಿಂದಿನ ಜನ್ಮದಲ್ಲಿ ನಾವು ಹೆಚ್ಚು ಪುಣ್ಯ ಮಾಡಿದ್ದರೆ ಈಗಿನ ಜನ್ಮದಲ್ಲಿ ಆರಾಮದಾಯಕ ಜೀವನ ದೊರೆಯುತ್ತದೆ, ಹಾಗಲ್ಲದೇ ಪಾಪವೇ ಹೆಚ್ಚಾಗಿದ್ದರೆ ಹೀನ ಜೀವನ ದೊರೆಯುತ್ತದೆ"
"ನನಗೇನೋ ಅದು ಸರಿಯೆನಿಸುವುದಿಲ್ಲ. ಪಾಪ ಕಾರ್ಯ ಮಾಡಿದಾಗ ಶಿಕ್ಷೆಯಾಗಬೇಕೆಂಬುದನ್ನು ನಾನೂ ಒಪ್ಪುತ್ತೇನೆ. ಆದರೆ, ನಮ್ಮ ಹಿಂದಿನ ಜನ್ಮದಲ್ಲಿ ನಾವು ಪಾಪ ಮಾಡುವಾಗಲೇ ಆ ಜೀವನದಲ್ಲಿಯೇ ನಮಗೆ ಶಿಕ್ಷೆ ದೊರೆಯುವಂತೆ ಮಾಡಬಹುದಲ್ಲ? ಮುಂದಿನ ಜನ್ಮದವರೆಗೂ ಕಾಯಬೇಕೇಕೆ ? ಈಗಿನ ಜನ್ಮದಲ್ಲಿ ನಮಗೆ ದುರ್ಗತಿ ದೊರೆತಾಗ ಪೂರ್ವ ಜನ್ಮದಲ್ಲಿ ನಾವು ಮಾಡಿದ ಯಾವ ತಪ್ಪಿಗೆ ಈ ಶಿಕ್ಷೆ ಎಂದು ತಿಳಿದರೆ ತಾನೇ ಶಿಕ್ಷೆಯ ಉದ್ದೇಶ ಸಾರ್ಥಕವಾಗುವುದು ? ನಮ್ಮ ನ್ಯಾಯಾಲಯಗಳಲ್ಲಿ ಅಪರಾಧಿಗೆ ಶಿಕ್ಷೆ ವಿಧಿಸುವಾಗ, ಯಾವ ಕಾರಣಕ್ಕಾಗಿ ಅವನಿಗೆ ಈ ಶಿಕ್ಷೆ ವಿಧಿಸಲಾಗುತ್ತಿದೆ ಎಂಬುದನ್ನು ನ್ಯಾಯಾಧೀಶರು ಅಪರಾಧಿಗೆ ತಿಳಿಸಿಯೇ ಶಿಕ್ಷೆ ವಿಧಿಸುತ್ತಾರೆ. ಹಾಗೆ ಮಾಡುವುದರಲ್ಲಿ ಎರಡು ಉದ್ದೇಶಗಳಿರುತ್ತವೆ. ಮೊದಲನೆಯದಾಗಿ, ಆ ಅಪರಾಧಿ ಮತ್ತೊಮ್ಮೆ ಆ ಅಪರಾಧವನ್ನು ಮಾಡದಂತೆ ಅವನನ್ನು ತಿದ್ದುತ್ತದೆ. ಎರಡನೆಯದಾಗಿ, ಬೇರೆಯವರೂ ಕೂಡ ಇದನ್ನು ಗಮನಿಸಿ ಅಂತಹ ಅಪರಾಧಗಳನ್ನು ಮಾಡದಂತೆ ತಡೆಯುತ್ತದೆ. ಆದರೆ ನಮ್ಮ ಈ ಜನ್ಮದಲ್ಲಿ ಅನುಭವಿಸುತ್ತಿರುವ ದುಃಸ್ಥಿತಿಗೆ ನಮ್ಮ ಹಿಂದಿನ ಜನ್ಮದ ಯಾವ ಪಾಪ ಕಾರ್ಯ
ಕಾರಣವಾಗಿದೆ ಎಂಬುದು ನಮಗೆಂದೂ ತಿಳಿಯಲಾರದು. ಹಾಗೆ ತಿಳಿಯುವಂತಿದ್ದರೆ ನಮ್ಮನ್ನು ತಿದ್ದುವಲ್ಲಿ ಈ ವ್ಯವಸ್ಥೆ ಸಫಲವಾಗುತ್ತಿತ್ತೇನೋ. ತೇನ ವಿನಾ ತೃಣಮಪಿ ಚಲತಿ ಎಂದು ಹೇಳಿ, ಆ ದೇವನ ಆಣತಿಯಿಲ್ಲದೇ ಏನೂ ಜರುಗದು ಎಂದು ಒಂದು ಕಡೆ ಹೇಳುತ್ತಾ, ನಮ್ಮ ಜೀವನದಲ್ಲಿ ಪಾಪ ಕಾರ್ಯವನ್ನಾಗಲೀ ಪುಣ್ಯ ಕಾರ್ಯವನ್ನಾಗಲೀ ಮಾಡಲು ನಾವು ಸಂಪೂರ್ಣ ಸ್ವತಂತ್ರರೇನೋ ಎನ್ನುವಂತೆ ಈ ಕರ್ಮಸಿದ್ಧಾಂತವನ್ನು ನಂಬುತ್ತೇವೆ. ಇವತ್ತೇನಾಯಿತು ಗೊತ್ತಾ ?" ಎಂದು ಮುರಳಿಯ ಪ್ರತಿಕ್ರಿಯೆಗೂ ಕಾಯದೇ ಮೂರ್ತಿ ಮುಂದುವರೆಸಿದ್ದರು,
" ಇವತ್ತು ನಮ್ಮ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಆಕಸ್ಮಿಕ ವಿಭಾಗಕ್ಕೆ ಒಂದು ಮಗುವನ್ನು ಕರೆತಂದಿದ್ದರು. ಕೇವಲ ಒಂದು ವರ್ಷದ ಮುದ್ದಾದ ಹಸುಗೂಸು. ಮೋಟರ್ ಸೈಕಲ್ ಒಂದು ಆ ಮಗುವಿನ ಹೊಟ್ಟೆಯ ಮೇಲೆ ಹಾದು ಹೋಗಿ ಆಸ್ಪತ್ರೆ ತಲುಪುವಷ್ಟರಲ್ಲಿಯೇ ಅದು ಮರಣವನ್ನಪ್ಪಿತ್ತು. ಟೂತ್ ಪೇಸ್ಟ್ ಟ್ಯೂಬೊಂದನ್ನು ಬಲವಾಗಿ ಹಿಸುಕಿದಾಗ ಅದರಿಂದ ಪೇಸ್ಟ್ ಉದ್ದಕ್ಕೆ ಹೊರಬರುವಂತೆ, ಆ ಮಗುವಿನ ಕರುಳುಗಳು ಹೊರಬಂದಿದ್ದವು. ಆ ದೃಶ್ಯವನ್ನು ನನಗೆ ನೋಡಲಾಗಲಿಲ್ಲ. ಕೇವಲ ಒಂದು ವರ್ಷದ ಈ ಮಗು ಇಂತಹ ದುರ್ಗತಿ ಪಡೆಯಲು ತನ್ನ ಪೂರ್ವ ಜನ್ಮದಲ್ಲಿ ಅದೆಂತಹ ಘೋರ ಪಾಪ ಮಾಡಿರಬೇಕು ? ಒಂದು ವೇಳೆ ನಿಜಕ್ಕೂ ಆ ಮಗು ಪೂರ್ವ ಜನ್ಮದಲ್ಲಿ ಅಂತಹ ಯಾವುದೋ ಒಂದು ಘೋರವನ್ನು ಮಾಡಿತ್ತೆಂದೇ ಇಟ್ಟುಕೊಳ್ಳೋಣ. ಯಾವುದನ್ನೂ ಅರಿಯದಂತಹ ಆ ವಯಸ್ಸಿನಲ್ಲಿ ಅದಕ್ಕೆ ಶಿಕ್ಷೆ ವಿಧಿಸುವುದು ಸರಿಯೇ ? ಇಂತಹ ಕ್ರೂರ ಸಾವಿನ ಶಿಕ್ಷೆ ಕೊಡಲು ನಮ್ಮ ಪರಮ ದಯಾಳು ಕೃಪಾಸಾಗರನಾದ ಪರಮಾತ್ಮನಿಗೆ ಹೇಗೆ ಮನ ಬಂದಿತು ? ಇಂತಹುದೊಂದು ಪ್ರಕರಣ ನಮ್ಮ ನ್ಯಾಯಾಲಯದ ಮುಂದೆ ಬಂದಿದ್ದರೆ ? ಬೇಕೆಂದೇ ಒಂದು ಮಗುವಿನ ಮೇಲೆ ಮೋಟರ್ ಸೈಕಲ್ ಹಾಯಿಸಿ ಒಂದು ಮಗುವನ್ನು ಕೊಂದ ಅಪರಾಧಿಗೆ ನಮ್ಮ ನ್ಯಾಯಾಲಯ ಏನು ಶಿಕ್ಷೆ ಕೊಡಬಹುದು. ಅತಿ ಹೆಚ್ಚೆಂದರೆ ಅವನಿಗೆ ಗಲ್ಲು ಶಿಕ್ಷೆ ಯಾಗಬಹುದಿತ್ತು. ಅವನು ಆ ಮಗುವನ್ನು ಕೊಂದಿರುವ ರೀತಿಯಲ್ಲಿಯೇ ಅವನನ್ನೂ ಕೊಲ್ಲಬೇಕು ಎಂದೇನಾದರೂ ನ್ಯಾಯಾಧೀಶರು ತೀರ್ಪು ನೀಡಬಹುದೇ ? "
ಇಷ್ಟು ಹೇಳುವ ಹೊತ್ತಿಗೆ, ಮೂರ್ತಿಯ ಕಣ್ಣುಗಳಲ್ಲಿ ಕಂಬನಿ ಜಿನುಗುತ್ತಿತ್ತು.
ಹೀಗೆ ಅವರ ಚರ್ಚೆ ಕೊನೆಮೊದಲಿಲ್ಲದೆ ಜರುಗುತ್ತಿತ್ತು.

****** ****** *******

ಮಿಲಿಂದನೊಡನೆ ಮನೆಗೆ ಬಂದಾಗ, ಮೂರ್ತಿಯವರ ಪತ್ನಿ ವೈದೇಹಿಯವರು ಅದೇ ತಾನೇ ಮನೆಗೆ ಬಂದು ಸೋಫಾದಲ್ಲಿ ವಿರಮಿಸಿದ್ದರು. ಮೂರ್ತಿಯವರಿಗಿಂತ ಎರಡು ವರ್ಷ ಚಿಕ್ಕವರಾದ ವೈದೇಹಿಯವರು, ಅವರ ತಾರುಣ್ಯದಲ್ಲಿ ಸುಂದರಿಯರ ಸಾಲಿಗೆ ಸೇರುವಂತಿದ್ದರೂ, ಈಗಿನ ಅವರ ತುಸು ಸ್ಥೂಲಕಾಯ ಅದನ್ನು ಮರೆಸಿತ್ತು. ಆದರೆ ತಾರುಣ್ಯದ ಬೆಳದಿಂಗಳ ಮೈಕಾಂತಿ, ಬೊಗಸೆಗಂಗಳ ದುಂಡು ಮುಖ ಅವರನ್ನು ಸುಂದರಿಯರ ಸಾಲಿನಿಂದ ಪೂರ್ಣ ಹೊರದೂಡಿರಲಿಲ್ಲ. ತಮ್ಮ ಮೈಸಿರಿಗೊಪ್ಪುವಂತೆ ಸಿಂಗಾರ ಮಾಡಿಕೊಳ್ಳುವ ಅವರ ಪ್ರಸಾಧನ ಕಲೆ ಅವರ ಒಟ್ಟಾರೆ ಚೆಲುವಿಗೆ ಮೆರುಗು ನೀಡಿತ್ತು.
"ಹೇಗಾಯ್ತು ನಿಮ್ಮ ಭಾಷಣ ?" ಎಂದು ಕೇಳಿದ ವೈದೇಹಿಯವರ ಪ್ರಶ್ನೆಗೆ, "ಓಕೆ" ಎಂದು ಚುಟುಕಾಗಿ ಉತ್ತರವಿತ್ತು, "ಇವರು ಮಿಲಿಂದ್ ಅಂತ, ಮುರಳಿಯ ಕಸಿನ್ ಉಮಾಳ ಮಗ.
ಇವರೂ ಕೂಡ ಬಯೋಕೆಮಿಸ್ಟ್ರಿಯಲ್ಲಿ ಪಿ.ಎಚ್.ಡಿ ತೆಗೆದುಕೊಂಡಿದ್ದಾರೆ" ಎಂದು ಪರಿಚಯಿಸಿದರು. ಇವರಿಬ್ಬರ ಸಂಭಾಷಣೆಯನ್ನು ಗಮನಿಸಿದ ಮಿಲಿಂದನಿಗೆ, ಪತಿಪತ್ನಿಯವರ ನಡುವೆ ಸಾಮಾನ್ಯವಾಗಿ ಕಂಡುಬರುವ ಸಲುಗೆ ಇವರಿಬ್ಬರ ನಡುವೆ ಇರದೆ, ಕೇವಲ ಔಪಚರಿಕ ನಡವಳಿಕೆಯಂತೆ ಕಂಡಿತು.
"ಊಟಕ್ಕೆ ನಿಲ್ಲುವಂತೆ ಹೇಳಿದ್ದೇನೆ. ಸರೋಜಮ್ಮಗೆ ಹೇಳುತ್ತೀಯಾ?" ಎಂದು ಪತ್ನಿಗೆ ಹೇಳಿದರು, "ದಯವಿಟ್ಟು ಊಟದ ತೊಂದರೆ ತೆಗೆದುಕೊಳ್ಳಬೇಡಿ ಸರ್" ಎಂದು ಮಿಲಿಂದ್ ಸಂಕೋಚದಿಂದ ಹೇಳುತ್ತಿದ್ದರೂ. "ಆಯಿತು" ಎಂದು ವೈದೇಹಿಯವರು ಒಳ ನಡೆದರು.
ಮಿಲಿಂದನಿಗೆ ಎದುರು ಬದಿಯ ಸೋಫಾದಲ್ಲಿ ಕೂಡಲು ಹೇಳಿ,
" ರಿಲ್ಯಾಕ್ಸ್. ಹೇಳಿ. ಯಾವುದರ ಬಗ್ಗೆ ಚರ್ಚೆ ಮಾಡಬೇಕಿತ್ತು ?" ಎಂದು ಕೇಳಿದರು.
ಸಭಾಂಗಣದ ಹೊರಗೆ, ದೀಪಗಳ ಮಂದ ಬೆಳಕಿನಲ್ಲಿ ಮಿಲಿಂದನನ್ನು ಸರಿಯಾಗಿ ಗಮನಿಸಿರಲಿಲ್ಲ. ಈಗ ತಮ್ಮ ಮನೆಯ ಹಿತವಾದ ಬೆಳಕಿನಲ್ಲಿ ಸಾವಧಾನವಾಗಿ ಅವನನ್ನು ವೀಕ್ಷಿಸಿದರು. ಮೂರ್ತಿಯವರಿಗಿಂತ ತುಸು ಕಡಿಮೆ ಎತ್ತರದ ನಿಲುವು, ವ್ಯಾಯಾಮದಿಂದ ಧೃಡವಾಗಿಸಿಕೊಂಡ ಮೈಕಟ್ಟು, ಸ್ವಲ್ಪ ಉದ್ದನೆಯ ಮುಖ, ಕಂದು ಬಣ್ಣದ ಹೊಳೆಯುವ ಕಣ್ಣುಗಳು, ನೀಳ ಮೂಗಿನ ಕೆಳಗೆ ಒಪ್ಪವಾಗಿ ಕತ್ತಿರಿಸಿದ ಮೀಸೆ.
"ಸರ್, ತಮ್ಮ ಕೆಳಗೆ ರೀಸರ್ಚ್ ಮಾಡಬೇಕೆಂದು ನನಗೆ ಬಹಳ ಆಸಕ್ತಿಯಿತ್ತು. ಮುರಳಿ ಮಾಮ ಹೇಳಿದ ಹಾಗೆ ದುರ್ದೈವದಿಂದ ಅದು ಸಾಧ್ಯವಾಗಲಿಲ್ಲ. ನಿಮ್ಮ ಲೇಖನಗಳನ್ನು ಬಹಳ ಶ್ರದ್ಧೆಯಿಂದ ಓದಿದ್ದೇನೆ ಮತ್ತು ಕಾನ್ಫರೆನ್ಸ್ ಗಳಲ್ಲಿ ನಿಮ್ಮ ಭಾಷಣಗಳನ್ನು ಎಂದೂ ತಪ್ಪಿಸಿಕೊಂಡಿಲ್ಲ. ಪಿ. ಎಚ್.ಡಿ ಮುಗಿಸಿ, ಸದ್ಯಕ್ಕೆ ಕೆಲಸದ ಬೇಟೆಯಲ್ಲಿದ್ದೇನೆ. ನೆನ್ನೆ ತಾನೇ ಮುರಳಿ ಅಂಕಲ್ ಮನೆಗೆ ಬಂದೆ. ಇಂದು ನಿಮ್ಮ ಭಾಷಣ ಇದೆ ಎಂದು ಕೇಳಿ, ಅವರೊಡನೆ ಭಾಷಣ ಕೇಳಲು ಬಂದಿದ್ದೆ. ಈ ದಿನದ ಭಾಷಣದ ವಿಷಯ ನನಗೆ ತುಂಬಾ ಕುತೂಹಲ ಮೂಡಿಸಿತ್ತು. ನನ್ನ ಕೆಲವು ಸಂದೇಹಗಳನ್ನು ಅಲ್ಲಿಯೇ ಪರಿಹರಿಸಿಕೊಳ್ಳಬಹುದಿತ್ತು. ಆದರೆ, ನಾನು ಕೇಳಬೇಕೆಂದಿದ್ದ ಪ್ರಶ್ನೆಗಳು ತುಂಬಾ ಟೆಕ್ನಿಕಲ್ ಇದ್ದುದರಿಂದ, ಅವುಗಳ ಬಗ್ಗೆ ಚರ್ಚೆಮಾಡಿ, ಸಭಿಕರಿಗೆ ಬೇಸರ ಮಾಡುವುದು ಬೇಡ ಎಂದು ನಿರ್ಧರಿಸಿ, ತಮ್ಮೊಡನೆ ಭೇಟಿ ಮಾಡಿಸಲು ಮುರಳಿ ಅಂಕಲ್ ಗೆ ಕೇಳಿಕೊಂಡೆ"
"ಬಹಳ ಒಳ್ಳೇದು. ಯಾವ ಸಂಕೋಚವೂ ಇಲ್ಲದೆ, ಏನು ಬೇಕಾದರೂ ಕೇಳಿ. ಆದರೆ ಒಂದು ಕಂಡೀಷನ್. ನನಗೆ ಉತ್ತರಗಳು ಗೊತ್ತಿರುವಂತಹ ಪ್ರಶ್ನೆಗಳನ್ನೇ ಕೇಳಬೇಕು" ಎಂದು ನಗುತ್ತಾ ನುಡಿದರು ಮೂರ್ತಿ.
"ತಮ್ಮ ಭಾಷಣದ ಒಂದು ಸಂದರ್ಭದಲ್ಲಿ, ನಮ್ಮ ಚರಮ ದಿನವನ್ನು ತಿಳಿಯುವುದು ಸಾಧ್ಯವಿದೆಯೆಂಬುದಕ್ಕೆ ಸುಳಿವೊಂದು ಸಿಕ್ಕಿದೆ ಎಂದು ಹೇಳಿದಿರಿ. ಈ ಸುಳಿವು ಸೂಪರ್ ಆಕ್ಸೈಡ್ ಡಿಸ್ಮುಟೇಸ್ ಕುರಿತಾದದ್ದೇ ?" ಹಾಗೆ ಕೇಳಿದುದು ಉಚಿತವಾದುದೋ ಅಲ್ಲವೋ ಎಂಬ ಸಂಕೋಚದಿಂದ ಕೇಳಿದ ಮಿಲಿಂದ್.
"ವೆರಿ ಇಂಟೆಲಿಜೆಂಟ್ ಗೆಸ್. ನಿಜ. ಆದರೆ ಸದ್ಯಕ್ಕೆ ಇಷ್ಟು ಮಾತ್ರ ಸಾಕು. ಮುಂದೊಮ್ಮೆ ಇನ್ನೂ ಹೆಚ್ಚಿನ ವಿವರ ತಿಳಿಸುತ್ತೇನೆ"
"ಸರಿ ಸರ್, ಅದರ ಬಗ್ಗೆ ಇನ್ನು ಕೇಳುವುದಿಲ್ಲ. ನಮ್ಮ ಚರಮ ದಿನವನ್ನು ತಿಳಿಯಲು ಸಾಧ್ಯವಾದಾಗ, ಆ ಚರಮದಿನದವರೆಗೂ ಖಂಡಿತವಾಗಿ ಬದುಕಿರುತ್ತೇವೆ ಎಂಬ ಭರವಸೆಯಿರುವುದೇ ?"
"ಹಾಗೆ ಹೇಳಲಾಗುವುದಿಲ್ಲ. ಮತ್ತೊಮ್ಮೆ ನಾವು ಬಳಸುವ ಸರಕುಗಳ ಡೇಟ್ ಆಫ್ ಎಕ್ಸ್ಪೈರಿಗೆ ಹೋಲಿಸುತ್ತೇನೆ. ಒಂದು ಸರಕಿನ ಮೇಲೆ ನಮೂದಿಸಲಾಗಿರುವ ಡೇಟ್ ಆಫ್ ಎಕ್ಸ್ಪೈರಿಯವರೆಗೆ ಆ ಸರಕು ಒಳ್ಳೆಯ ಸ್ಥಿತಿಯಲ್ಲಿಯೇ ಇರುತ್ತದೆ ಎಂದು ಹೇಳಬಹುದಾದರೂ, ಆಕಸ್ಮಿಕವಾಗಿ, ನೀರಿನಲ್ಲಿ ಬಿದ್ದೋ, ಬೆಂಕಿಗೆ ಆಹುತಿಯಾಗಿಯೋ ಅಥವಾ ಕೆಳಗೆ ಬಿದ್ದೋ ಹಾಳಾಗುವ ಸಾಧ್ಯತೆಯಂತೂ ಇದೆ ತಾನೇ ? ಇದು ಕೂಡ ಹಾಗೇನೇ. ಆ ನಿರ್ಧಾರಿತ ದಿನಕ್ಕೂ ಮೊದಲೇ ಸಾವು ಸಂಭವಿಸುವ ಸಾಧ್ಯತೆ ಖಂಡಿತಾ ಇರುತ್ತದೆ"
"ಸರ್, ಹಾಗಾದರೆ ಇದರಲ್ಲಿ ಸಂಭ್ರಮಿಸುವಂತಹ ವಿಷಯವೇನಿದೆ ? ಒಂದು ಭವಿಷ್ಯವಾಣಿಗಿಂತ ಇದರ ಹೆಚ್ಚಳವೇನಿದೆ ?" ಸ್ವಲ್ಪ ಗೊಂದಲಕ್ಕೊಳಗಾದವನಂತೆ ಕೇಳಿದ ಮಿಲಿಂದ್.
"ಅದು ಹಾಗಲ್ಲ. ಯಾವುದೋ ಒಂದು ಔಷಧಿಯ ಡೇಟ್ ಆಫ್ ಎಕ್ಸ್ಪೈರಿಯನ್ನು ತೆಗೆದುಕೊಳ್ಳೋಣ. ಆ ಔಷಧಿಯ ಮೇಲೆ ನಮೂದಿಸಿರುವ ಆ ದಿನಾಂಕದಂದು ಅದು ತಕ್ಷಣವೇ ನಿರುಪಯೋಗಿಯಾಗುತ್ತದೆ ಎಂದರ್ಥವಲ್ಲ. ಆ ದಿನಾಂಕದ ನಂತರವೂ ಅದರಲ್ಲಿ ಔಷಧೀಯ ಗುಣಗಳಿರುತ್ತವೆ. ಆದರೆ ಅದರಲ್ಲಿ ಮೊದಲಿನಷ್ಟು ಸತ್ವವಿರುವುದಿಲ್ಲ ಅಷ್ಟೇ. ಆದರೆ ನಾವು ನಿರ್ಧರಿಸುವ ಮಾನವನ ಚರಮದಿನದ ವಿಷಯ ಹಾಗಲ್ಲ. ನಾವು ನಿರ್ಧರಿಸಿದ ಚರಮದಿನದ ನಂತರ ಆ ವ್ಯಕ್ತಿ ಬದುಕಿರುವ ಸಾಧ್ಯತೆಯೇ ಇಲ್ಲ" ಎಂದು ವಿವರಿಸಿದರು ಮೂರ್ತಿ.
"ಅಂದರೆ, ಒಬ್ಬ ವ್ಯಕ್ತಿ ಬದುಕಿರಬಹುದಾದ ಗರಿಷ್ಠ ಅವಧಿಯನ್ನು ಮಾತ್ರ ಇದು ನಿರ್ಧರಿಸುತ್ತದೆಯೇ? ಆ ರೀತಿ ಗರಿಷ್ಠ ಜೀವನಾವವಧಿಯನ್ನು ನಿರ್ಧಾರ ಮಾಡುವ ಹಲವಾರು ಚಾರ್ಟ್ ಗಳು ಈಗಾಗಲೇ ಲಭ್ಯವಿರುವುದಲ್ಲವೇ ? "
ತಮ್ಮ ಭಾಷಣವನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಅತ್ಯಂತ ಸೂಕ್ತ ಮತ್ತು ಪ್ರಸ್ತುತವಾದ ಪ್ರಶ್ನೆಗಳನ್ನು ಕೇಳುತ್ತಿದ್ದ ಮಿಲಿಂದನನ್ನು ಮೆಚ್ಚುಗೆಯಿಂದ ನೋಡುತ್ತಾ ಮೂರ್ತಿ ಮುಂದುವರೆಸಿದರು.
"ನಿಜ. ಆ ತರಹ ಲೈಫ್ ಎಕ್ಸ್ ಪೆಕ್ಟೆನ್ಸಿ ಚಾರ್ಟ್ ಗಳಿವೆ. ಒಂದು ದೇಶದ ಜನತೆಯ ಜನಾಂಗೀಯ ಲಕ್ಷಣಗಳ ಆಧಾರದ ಮೇಲೆ ಈ ಚಾರ್ಟ್ ಗಳನ್ನು ಸೃಷ್ಟಿಸಲಾಗಿವೆ. ಸಂಖ್ಯಾ ಶಾಸ್ತ್ರದ ಪ್ರಕಾರ ಜನತೆಯಲ್ಲಿ ಎಷ್ಟು ಜನ ಎಷ್ಟು ವಯಸ್ಸಿನ ವರೆಗೆ ಜೀವಿಸಿರಬಹುದು ಎಂಬುದನ್ನು ಇವು ತಿಳಿಸುತ್ತವೆ. ಸಕ್ಕರೆ ಕಾಯಿಲೆ ಮತ್ತು ಅತಿರಕ್ತದೊತ್ತಡದಂತಹ ಸಮಸ್ಯೆಗಳು ಜೀವಿತಾವವಧಿಯನ್ನು ಕಡಿಮೆ ಮಾಡುವ ಸಾಧ್ಯತೆಯಿರುವುದರಿಂದ, ಈ ಕಾಯಿಲೆ ಇರುವವರಿಗಾಗಿಯೇ ವಿಶೇಷ ಚಾರ್ಟ್ ಗಳನ್ನು ತಯಾರಿಸಲಾಗಿದೆ. ಏನಿದ್ದರೂ, ಈ ಚಾರ್ಟ್ ಗಳು ಒಂದು ಸಮೂಹಕ್ಕೆ ಅನ್ವಯವಾಗುತ್ತವೆಯೇ ಹೊರತು, ಒಬ್ಬ ನಿರ್ದಿಷ್ಟ ವ್ಯಕ್ತಿಗೆ ಸಂಬಂಧಿಸಿದಂತೆ, ಇದರ ಉಪಯುಕ್ತತೆ ತೀರಾ ಕಡಿಮೆ. ಆದರೆ ನಾನು ಹೇಳುತ್ತಿರುವ ವಿಧಾನದಿಂದ ಯಾವುದೇ ನಿರ್ದಿಷ್ಟ ವ್ಯಕ್ತಿಯನ್ನು ಕುರಿತು ನಿಖರವಾಗಿ, ಅವನ ಚರಮದಿನವನ್ನು ನಿರ್ಧರಿಸಬಹುದಾದ ಸಾಧ್ಯತೆಯಿದೆ"
"ಸರ್, ಸುಮಾರು ಎರಡು ವರ್ಷಗಳ ಹಿಂದೆ, ನಿಮ್ಮದೊಂದು ಭಾಷಣ ಕೇಳಿದ್ದೆ. ಅದರ ಶೀರ್ಷಿಕೆ ನನಗೆ ಸರಿಯಾಗಿ ನೆನಪಿಲ್ಲ. ಆದರೆ ಅದು ಅಥೆರೋಸ್ಲೆರೋಸಿಸ್ ಎಂಬ ಸ್ಥಿತಿಯನ್ನು ......." ಎಂದು ಮಿಲಿಂದ್ ಹೇಳುತ್ತಿದ್ದಂತೆ,
"ಅಥೆರೋಸ್ಲೆರೋಸಿಸ್- ಮದರ್ ಆಫ್ ಆಲ್ ಇಲ್ ನೆಸಸ್ (atherosclerosis-mother of all illnesses) ಬಗ್ಗೆ ತಾನೇ ನೀವು ಹೇಳುತ್ತಿರುವುದು ?" ಎಂದು ಮೂರ್ತಿ ನೆನಪಿಸಿದರು.
"ಹಾಂ, ಹೌದು ಸರ್. ಅದೇ ಭಾಷಣದ ಬಗ್ಗೆ ನಾನು ಹೇಳುತ್ತಿರುವುದು. ಪ್ರತಿಯೊಂದು ಜೀವಿಯು ತಾಯಿಯ ಗರ್ಭದಿಂದ ಹೊರಬರುವ ಮೊದಲೇ ಅದರ ಅವಸಾನದ ಪೀಠಿಕೆ ಅದರ ಜೀವಕೋಶಗಳಲ್ಲಿ ಬರೆಯಲಾಗಿರುತ್ತದೆ. ಒಂದು ಜೀವಿಯ ಜೀವನಾರಂಭದ ಸಮಯದಲ್ಲಿಯೇ ಅದರ ಜೀವಕೋಶಗಳಲ್ಲಿ ಒಂದು ವ್ಯವಸ್ಥೆ ಜಾಗೃತವಾಗುತ್ತದೆ ಮತ್ತು ಅಂದಿನಿಂದ ಆ ವ್ಯವಸ್ಥೆಯ ಚಟುವಟಿಕೆ ಕ್ರಮೇಣ ಹೆಚ್ಚುತ್ತಲೇ ಹೋಗಿ ಅದು ಮುಂದೊಂದು ದಿನ ಆಸ್ಫೋಟಿಸುವ ಮಟ್ಟಕ್ಕೆ ತಲುಪಿದಾಗ ಆ ಜೀವಿಯ ಅಂತ್ಯವಾಗುತ್ತದೆ ಎಂದು ಹೇಳಿ ನೀವು ಆ ವ್ಯವಸ್ಥೆಯನ್ನು ಪ್ರತಿಯೊಂದು ಜೀವಿಯಲ್ಲಿ ಪ್ರಕೃತಿ ಅಳವಡಿಸಿರುವ ಟೈಮ್ ಬಾಂಬ್ ಎಂದು ಹೇಳಿದ್ದಿರಿ. ಅಂದು ನೀವು ಪ್ರಸ್ತುತ ಪಡಿಸಿದ ಕೆಲವು ವಿಷಯಗಳೂ ಇಂದು ನೀವು ಪ್ರಸ್ತಾಪ ಮಾಡಿದ ಪೂರ್ವನಿರ್ಧಾರಿತ ಚರಮದಿನಕ್ಕೆ ಸಂಬಂಧಿಸಿವೆಯಲ್ಲವೇ ?"
"ಒಂದು ರೀತಿಯಲ್ಲಿ ಹೌದು. ನನ್ನ ಭಾಷಣವನ್ನು ಇಷ್ಟು ಚೆನ್ನಾಗಿ ಮನನ ಮಾಡಿರುವುದನ್ನು ನೋಡಿದರೆ, ನನ್ನ ಮೇಲೇ ನನಗೆ ಅಭಿಮಾನ ಮೂಡುತ್ತಿದೆ" ಎಂದು ನಕ್ಕರು ಮೂರ್ತಿ.
" ಈ ಸಂಶೋಧನೆಯ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು, ಯಾರ ಅಂತ್ಯವನ್ನಾದರೂ ಮೊದಲೇ ನಿರ್ಧರಿಸಿ ತಾಳೆ ನೋಡಿದ್ದೀರಾ ಎಂದು ಸಭಿಕರೊಬ್ಬರು ಪ್ರಶ್ನೆ ಕೇಳಿದರು. ಅದಕ್ಕೆ ನಿಮ್ಮ ಉತ್ತರ..........."
"ನನ್ನ ಉತ್ತರ ಅಷ್ಟು ಸಮಾಧಾನಕರವಾಗಿರಲಿಲ್ಲ ಎಂದು ತಾನೇ ? ಈ ಸಂಶೋಧನೆಯ ಮೊದಲ ಹಂತದಲ್ಲಿ ತಾತ್ವಿಕವಾಗಿ ಒಬ್ಬ ವ್ಯಕ್ತಿಯ ಚರಮದಿನವನ್ನು ನಿರ್ಧರಿಸಬಹುದು ಎಂದು ತಿಳಿದುಬಂತು. ತಾರ್ಕಿಕವಾಗಿ ಮುಂದಿನ ಹಂತದಲ್ಲಿ ಆ ಸಭಿಕರು ಕೇಳಿದಂತೆ ಖಚಿತಪಡಿಸಿಕೊಳ್ಳಬೇಕಾಗಿತ್ತು. ಕೇವಲ ನಿನಗೊಬ್ಬನಿಗೆ ಮಾತ್ರ ಈ ವಿಷಯ ತಿಳಿಸುತ್ತಿದ್ದೇನೆ. ಮೊದಲ ಹಂತದ ಸಂಶೋಧನೆಯಲ್ಲಿ ಹಲವಾರು ಸಂಶೋಧಕರು ಪಾಲ್ಗೊಂಡಿದ್ದರು. ಆದರೆ ಈ ಎರಡನೆ ಹಂತದ ಸಂಶೋಧನೆಯನ್ನು ಮಾತ್ರ ನಾನೊಬ್ಬನೇ ಮಾಡಬೇಕಾಗಿತ್ತು. ಅದಕ್ಕೆ ಕಾರಣ ಮುಂದೆ ನಿನಗೇ ತಿಳಿಯುತ್ತದೆ" ಎಂದು ಹೇಳಿದರು. ಅವರು ಹೇಳಿದ ರೀತಿ ಏಕೋ ಸ್ವಲ್ಪ ನಿಗೂಢವೆನಿಸಿತು ಮಿಲಿಂದನಿಗೆ. ಅವನು ಅದನ್ನು ಹೆಚ್ಚು ಕೆದಕಲಿಲ್ಲ.
"ಸರ್, ಕೊನೆಯ ಪ್ರಶ್ನೆ. ಡೇಟ್ ಆಫ್ ಎಕ್ಸ್ಪೈರಿಯನ್ನು ನಿರ್ಧರಿಸುವ ಸಂಶೋಧನೆ ಸದ್ಯದಲ್ಲಿಯೇ ಯಶ ಕಾಣಲಿದೆ ಎಂದು ಹೇಳಿದಿರಿ. ಆ ಸಂಶೋಧನೆ ಎಲ್ಲಿ ನಡೆಯುತ್ತಿದೆ ಮತ್ತು ಅದು ಈಗ ಯಾವ ಹಂತದಲ್ಲಿದೆ ಎಂದು ತಿಳಿಯಬಹುದೇ ?"
" ಈ ಸಂಶೋಧನೆ ಸಂಪೂರ್ಣ ನನ್ನದೇ ಆಗಿದ್ದಿದ್ದರೆ, ಅದನ್ನು ಬಹಿರಂಗ ಪಡಿಸುವ ಪೂರ್ಣ ಹಕ್ಕೂ ನನಗಿರುತ್ತಿತ್ತು ಅಲ್ಲವೇ ?" ಎಂದು ಮೂರ್ತಿ ನುಡಿದಾಗ ಅದರ ಒಳಾರ್ಥವನ್ನು ಗ್ರಹಿಸಿಕೊಂಡ ಮಿಲಿಂದ್ ಮುಗುಳ್ನಕ್ಕು ಸುಮ್ಮನಾದ.
"ನಡೆಯಿರಿ. ತುಂಬಾ ತಡವಾಯಿತು.ಇನ್ನು ಊಟಕ್ಕೇಳೋಣ. ವೈದೇಹೀ.....ಸರೋಜಮ್ಮಗೆ ಹೇಳ್ತೀಯಾ ಊಟಕ್ಕೆ ಬಡಿಸಲು ?" ಎಂದು ಒಳಗಿದ್ದ ತಮ್ಮ ಪತ್ನಿಗೆ ಕೂಗಿ ಹೇಳಿದರು.
ಸರೋಜಮ್ಮ ಬಂದು ಕರೆಯುವವರೆಗೆ, ಮಿಲಿಂದನ ಪೂರ್ವೋತ್ತರಗಳನ್ನು ಅವನಿಂದ ಕೇಳಿ ತಿಳಿಯುತ್ತಿದ್ದರು.
ಡೈನಿಂಗ್ ಟೇಬಲ್ ನ ಒಂದು ಬದಿಯಲ್ಲಿ ಮೂರ್ತಿ ಮತ್ತು ವೈದೇಹಿಯವರು, ಇನ್ನೊಂದು ಬದಿಯಲ್ಲಿ ಮಿಲಿಂದ ಕುಳಿತ ಮೇಲೆ ಸರೋಜಮ್ಮ ಅಡುಗೆಯನ್ನು ಬಡಿಸಿದರು. ವೈದೇಹಿಯವರು ಊಟದ ಮಧ್ಯೆ ಮಿಲಿಂದನಿಗೆ ಉಪಚಾರ ಮಾಡುತ್ತಿದ್ದರು. ಸುಮಾರು ಹತ್ತೂವರೆ ಗಂಟೆಗೆ ಮೂರ್ತಿಯವರಿಂದ ಬೀಳ್ಕೊಟ್ಟ ಮಿಲಿಂದ ಅನತಿ ದೂರದಲ್ಲಿಯೇ ಇದ್ದ ಮುರಳೀಧರ ರಾವ್ ರವರ ಮನೆಗೆ ನಡೆದುಕೊಂಡೇ ಹೊರಟ. ತಾನು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದ ಮೂರ್ತಿಯವರೊಡನೆ ಅಷ್ಟು ಹೊತ್ತು ಚರ್ಚೆ ಮಾಡಲು ಅವಕಾಶ ದೊರೆತಕ್ಕಾಗಿ ಅವನಿಗೆ ತುಂಬಾ ಖುಷಿಯಾಗಿತ್ತು. ತನ್ನ ಮೆಚ್ಚಿನ ಚಿತ್ರಗೀತೆಯೊಂದನ್ನು ಗುಣುಗುಣಿಸುತ್ತಾ ಹೊರಟಿದ್ದ ಅವನಿಗೆ ಮುಂದಿನ ದಿನಗಳಲ್ಲಿ ಅವನ ಜೀವನ ಮಹತ್ತರ ತಿರುವೊಂದನ್ನು ಪಡೆಯಲಿರುವ ಸೂಚನೆಯೂ ದೊರೆಯಲಿಲ್ಲ !
......................ಮುಂದುವರಿಯುವುದು

Comments