ಪ್ರಪಾತದ ಅಂಚಿನಲ್ಲಿ ಪರಿವರ್ತನೆಯ ಸಂಕಲ್ಪ
ಇಂಡೋನೇಷ್ಯಾದ ಬಾಲಿ ಪಟ್ಟಣದಲ್ಲಿ ಜಗತ್ತಿನ ಹವಾಮಾನ ಬದಲಾವಣೆಯ ಕುರಿತ ವಿಶ್ವಸಂಸ್ಥೆಯ ಜಾಗತಿಕ ಸಮಾವೇಶ ಕಳೆದ ತಿಂಗಳು ನಡೆಯಿತು. ಜಗತ್ತೆಲ್ಲ ಕಳೆದ ಶತಮಾನದಿಂದೀಚೆಗೆ ಭೂಮಿಯ ಮೇಲೆ ಘಟಿಸುತ್ತಿರುವ ಹವಾಮಾನದ ವೈಪರೀತ್ಯಗಳನ್ನು ತಹಬಂದಿಗೆ ತರುವ ನಿಟ್ಟಿನಲ್ಲಿ ಒಂದು ಒಮ್ಮತದ ತೀರ್ಮಾನಕ್ಕೆ ಬರುತ್ತಿದ್ದರೆ, ಜಗತ್ತಿನ ದೊಡ್ಡಣ್ಣ ಅಮೆರಿಕ ಮಾತ್ರ ಹಠ ಮಾಡುತ್ತಿತ್ತು. "ನಾವು ಇಲ್ಲಿ ಕೈಗೊಳ್ಳಲಾಗುತ್ತಿರುವ ನಿರ್ಣಯವನ್ನು ಒಪ್ಪುವುದಿಲ್ಲ; ಇದರ ಬದಲಿಗೆ ನಮ್ಮಂತಹ ಜಗತ್ತಿನ ಇತರ ಶ್ರೀಮಂತ ರಾಷ್ಟ್ರಗಳು ಬಡದೇಶಗಳಿಗೆ ತಂತ್ರಜ್ಞಾನದ ಸಹಾಯ (ಕೃಪೆ!) ಮಾಡಬೇಕು", ಎಂದೆಲ್ಲ ಠೇಂಕಾರದಿಂದ ಬಡಬಡಿಸುತ್ತಿತ್ತು. ಕೊನೆಗಳಿಗೆಯ ತನಕವೂ ಅದು ಬಗ್ಗಲಿಲ್ಲ. ಇನ್ನೇನು ಇಡೀ ಸಮಾವೇಶವೆ ಒಂದು ವ್ಯರ್ಥ ಕಸರತ್ತಿನಂತೆ ಕಾಣಿಸುತ್ತಿದ್ದ ಸಮಯ. ತೃತೀಯ ಜಗತ್ತಿನ ಸ್ವಾಭಿಮಾನಿ ರಾಷ್ಟ್ರಗಳಿಗೆ ಅಮೆರಿಕದ ಮೊಂಡಾಟ ನೋಡಿನೋಡಿ ಸಾಕಾಗಿ ಹೋಯಿತು. ಎಲ್ಲರೂ ಅಮೆರಿಕವನ್ನು ಸಾಧ್ಯವಾದಷ್ಟು ಒಳ್ಳೆಯ ಭಾಷೆಯಲ್ಲಿಯೆ ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದರು.
ಆ ಸಮಯದಲ್ಲಿ "ಪ್ಯಾಪ್ಯುವ ನ್ಯೂ ಗಿನಿ" ಎಂಬ ದ್ವೀಪರಾಷ್ಟ್ರದ ಪ್ರತಿನಿಧಿ ಮಾತನಾಡಲು ಎದ್ದ. ಸುಮಾರು ಅರವತ್ತು ಲಕ್ಷ ಜನಸಂಖ್ಯೆಯ, ಅಂದರೆ ನಮ್ಮ ಬೆಂಗಳೂರಿಗಿಂತ ಕಮ್ಮಿ ಜನಸಂಖ್ಯೆಯ ದೇಶ ಇದು. ಅಮೆರಿಕವನ್ನುದ್ದೇಶಿಸಿ ಪ್ಯಾಪ್ಯುವ ನ್ಯೂ ಗಿನಿಯ ಪ್ರತಿನಿಧಿ ಹೇಳಿದ್ದು ಇಷ್ಟೆ: "ನಮಗೆ ನಿಮ್ಮ ನಾಯಕತ್ವ ಬೇಕು. ಅದರೆ ಯಾವುದೊ ಒಂದು ಕಾರಣಕ್ಕೆ ಅದು ನಿಮ್ಮಿಂದ ಸಾಧ್ಯವಿಲ್ಲವಾದರೆ, ಅದನ್ನು ನಮಗೆ ಬಿಟ್ಟುಬಿಡಿ. ದಯವಿಟ್ಟು ನಮ್ಮ ದಾರಿಯಿಂದ ಅಡ್ಡ ತೊಲಗಿ. (Please, get out of the way)." ಒಂದು ಸ್ವಾಭಿಮಾನಿ ದೇಶ, ಅದು ಎಷ್ಟೇ ಸಣ್ಣದಾಗಿದ್ದರೂ, ಬಡವಾಗಿದ್ದರೂ,
ಪ್ರಾಮಾಣಿಕವಾದ, ನ್ಯಾಯಯುತವಾದ, ನೈತಿಕ ಧರ್ಮದಿಂದ ಕೂಡಿದ ಮಾತನ್ನು ಆಡಿದರೆ, ಎಷ್ಟೆ ಬಲಿಷ್ಠ ರಾಷ್ಟ್ರವೂ ತನ್ನ ಅಹಮ್ಮಿನ ಬಗ್ಗೆ ನಾಚಿಕೆ ಪಡಲೇಬೇಕು. ಬಾಲಿಯಲ್ಲೂ ಅದೇ ಆಯಿತು. ಪ್ಯಾಪ್ಯುವ ನ್ಯೂ ಗಿನಿಯ ನೈತಿಕ ಪೆಟ್ಟಿಗೆ ತಲೆಬಾಗಿದ ಅಮೆರಿಕ ನಂತರ ಸಮಾವೇಶದ ನಿರ್ಣಯಗಳಿಗೆ ಅಡ್ಡ ಮಾಡಲಿಲ್ಲ.
ಹೌದು. ಹೊಟ್ಟೆಪಾಡಿನ ಚಿಂತೆಯೆ ದೊಡ್ಡ ಚಿಂತೆ ಆಗಿರುವ ತೃತೀಯ ಜಗತ್ತಿನ ರಾಷ್ಟ್ರಗಳೆಲ್ಲ ಇವತ್ತು ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಇದು ಬಡತನದ ಬಗ್ಗೆ ಅಲ್ಲ. ಯುದ್ಧದ ಬಗ್ಗೆ ಅಲ್ಲ. ಭಯೋತ್ಪಾದನೆಯ ಬಗ್ಗೆ ಅಲ್ಲ. ಬದಲಿಗೆ ಇಡೀ ಜೀವಸಂಕುಲದ ಅಳಿವುಉಳಿವಿನ ಬಗ್ಗೆ. ಭೂತಾಪಮಾನ ಹಿಂದೆಂದೂ ಏರಿರದ ರೀತಿಯಲ್ಲಿ ಏರುತ್ತಿರುವಂತಹ ಆರ್ಥಿಕ ಅಭಿವೃದ್ಧಿಯಲ್ಲಿ ತೊಡಗಿರುವ ಮನುಷ್ಯ, ಕೊನೆಗೆ ತನ್ನ ಸಂತತಿಯನ್ನೆ ನಾಶಮಾಡಿಕೊಳ್ಳುವ, ಭೂಮಿಯನ್ನು ice age ನತ್ತ ರಭಸವಾಗಿ ತಳ್ಳುತ್ತಿರುವುದರ ಬಗ್ಗೆ.
ಇವತ್ತು ಭೂತಾಪಮಾನ ಏರುತ್ತಿರುವುದು ಮುಖ್ಯವಾಗಿ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸುತ್ತಿರುವ ಘಟಕಗಳಿಂದ, ಹೊಗೆ ಮತ್ತು ಬೆಂಕಿಯನ್ನುಗುಳುವ ಕೈಗಾರಿಕೆಗಳಿಂದ, ಪೆಟ್ರೋಲ್-ಡೀಸಲ್ನಿಂದ ಓಡುವ ವಾಹನಗಳಿಂದ, ಮಲೇಷ್ಯಾ, ಇಂಡೋನೇಷ್ಯಾದಂತಹ ರಾಷ್ಟ್ರಗಳಲ್ಲಿ ಕೃಷಿ ಭೂಮಿಗಾಗಿ ಕಾಡು ಕಡಿದು ಬೆಂಕಿ ಇಡುತ್ತಿರುವುದರಿಂದ (slash and burn agriculture).
ಭೂಮಿಯ ಮೇಲಿನ ಜೀವಸಂತತಿ ಅಳಿದುಹೋಗದಂತೆ ಮುಂಜಾಗರೂಕತೆ ವಹಿಸುವ ಕೆಲಸ ಈಗ ಶ್ರೀಮಂತ ರಾಷ್ಟ್ರಗಳಿಗಷ್ಟೇ ಸೇರಿದ ಜವಾಬ್ದಾರಿಯಾಗಿರದೆ ಭಾರತದಂತಹ ತೃತೀಯ ಜಗತ್ತಿನ ದೇಶಗಳಿಗೂ ಸೇರಿದೆ. ಈಗ ವಾರ್ಷಿಕ 1,38,000 ಮೆಗಾವ್ಯಾಟ್ ವಿದ್ಯುತ್ ಅನ್ನು ನಮ್ಮ ದೇಶ ಉತ್ಪಾದಿಸುತ್ತಿದೆ. ಇದರಲ್ಲಿ ಪರಿಸರಕ್ಕೆ, ವಿಶೇಷವಾಗಿ ತಾಪಮಾನಕ್ಕೆ ತೊಂದರೆಯಾಗದಂತಹ ಸ್ವಚ್ಚ ವಿದ್ಯುತ್ ಉತ್ಪಾದನೆಗೆ ಹೆಸರಾದ ಜಲವಿದ್ಯುತ್ನ ಪಾಲು ಕೇವಲ ಶೇ. 25 ಮಾತ್ರ ಆಗಿದ್ದರೆ, ಪರಿಸರ ಹಾನಿಗೆ ಅಪಾರವೆನಿಸುವಷ್ಟು ಕೆಟ್ಟಕೊಡುಗೆ ಕೊಡುವ ಕಲ್ಲಿದ್ದಲು ಮತ್ತಿತರ ತೈಲಮೂಲದ ಉಷ್ಣವಿದ್ಯುತ್ ಸ್ಥಾವರಗಳ ಕೊಡುಗೆ ಶೇ. 65 ರಷ್ಟು ಇದೆ. ಈ ಕಾಲದ ಕೈಗಾರಿಕೆ-ಸೇವಾವಲಯ-ಐಟಿ-ಪ್ರವಾಸ ಮುಂತಾದ ಆಧುನಿಕ ಉದ್ಯಮವಾಧಾರಿತ ಆರ್ಥಿಕ ಪ್ರಗತಿಯಲ್ಲಿ ದಾಪುಗಾಲಿಡುತ್ತಿರುವ ಭಾರತಕ್ಕೆ ಇದೇ ವೇಗವನ್ನು ಕಾಪಾಡಿಕೊಳ್ಳಬೇಕಾದರೆ ಇನ್ನು ಐದು ವರ್ಷದಲ್ಲಿ 73000 ಮೆಗಾವ್ಯಾಟ್ಗಷ್ಟು ಹೆಚ್ಚಿನ ಹೊಸ ವಿದ್ಯುತ್ಶಕ್ತಿಯನ್ನು ಉತ್ಪಾದಿಸಬೇಕಾದೆಯಂತೆ. ಆ ನಿಟ್ಟಿನಲ್ಲಿ ಕಳೆದ ವರ್ಷ (2007 ರಲ್ಲಿ) ಸುಮಾರು 21000 ಮೆಗಾವ್ಯಾಟ್ ಉತ್ಪಾದಿಸಬಲ್ಲ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆಯಂತೆ. ಇದರಲ್ಲಿ, ಕಲ್ಲಿದ್ದಲು/ನೈಸರ್ಗಿಕ ಅನಿಲ ಬಳಸಿ ತಯಾರಿಸುವ ಉಷ್ಣವಿದ್ಯುತ್ ಘಟಕಗಳ ಪಾಲು ಶೇ. 82 ರಷ್ಟು ಇದೆ.
ಇಂತಹ ತಕ್ಷಣದ ಬೇಡಿಕೆ ಹುಟ್ಟುವಂತಹ ಸಮಯದಲ್ಲಿ ಎಲ್ಲಕ್ಕಿಂತ ಬೇಗ ಉತ್ಪಾದನೆ ಆರಂಭಿಸಬಲ್ಲ ಘಟಕಗಳೆಂದರೆ ಉಷ್ಣ ವಿದ್ಯುತ್ ಘಟಕಗಳೆ. ಇವುಗಳಿಗೆ ನದಿ ಅಳೆಯಬೇಕಿಲ್ಲ; ಜಮೀನು ಸ್ವಾಧೀನ ಪಡಿಸಿಕೊಳ್ಳಬೇಕಿಲ್ಲ; ಡ್ಯಾಮ್ ಕಟ್ಟ ಬೇಕಿಲ್ಲ; ಪರಿಸರ ಇಲಾಖೆಯ ಕಳ್ಳ ಸಮ್ಮತಿಯೂ ಕಷ್ಟವಿಲ್ಲ, ಸಿಕ್ಕಾಪಟ್ಟೆ ನೀರೂ ಬೇಕಾಗಿಲ್ಲ. ಯಾವುದಾದರೂ ಬಂಜರು ಭೂಮಿಯೊ, ಸರ್ಕಾರದ ಅರಣ್ಯ ಪ್ರದೇಶವೊ ಇದ್ದು, ಕಲ್ಲಿದ್ದಲು ಗಣಿಗಳಿಂದ ನೇರ ರೈಲಿನ ವ್ಯವಸ್ಥೆ ಮಾಡಿಕೊಂಡರೆ ಸಾಕು, ಕಮ್ಮಿ ನೀರಿನಲ್ಲಿ ಹೆಚ್ಚು ವಿದ್ಯುತ್ ಉತ್ಪಾದಿಸಬಹುದು. ಬಹುಶ: ಕೆಲಸ ಆರಂಭಿಸಿದ ಎರಡು-ಮೂರು ವರ್ಷಗಳಲ್ಲೆಲ್ಲ ತಂತಿಯಲ್ಲಿ ವಿದ್ಯುತ್ ಹರಿಸಬಹುದು. ಸರ್ಕಾರಕ್ಕೆ ಆರ್ಥಿಕ ಪ್ರಗತಿಗೆ ಹಿನ್ನಡೆಯಾಗದಂತೆ ನೋಡಿಕೊಳ್ಳುವ ಉಮೇದು; ಖಾಸಗಿಯವರಿಗೆ ಆದಾಯಕ್ಕೆ ಹೊಸ ಮೂಲ; ಕೃಷಿಕರಿಗೆ ಉಚಿತ ಇಲ್ಲವೆ ಸಬ್ಸಿಡಿ ವಿದ್ಯುತ್; ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ತಡೆಯಿರದ ವಿದ್ಯುತ್; ಎಲ್ಲರಿಗೂ ತೃಪ್ತಿ. ಪರಿಸರದ ಪ್ರಶ್ನೆ ಆಮೇಲೆ.
ಪರಿಸರಕ್ಕೆ ಹೆಚ್ಚಿನ ಹಾನಿ ಮಾಡದ ಜಲವಿದ್ಯುತ್ ಘಟಕಗಳು ಸುಲಭವಾಗಿ ಆರಂಭಿಸಬಲ್ಲ ಅಥವ ವಿಸ್ತರಿಸಬಲ್ಲ ಯೋಜನೆಗಳಲ್ಲ. ಆದರೆ, ವಿಸ್ತರಿಸುವುದಕ್ಕೆ ಸುಲಭವಾದ ಉಷ್ಣವಿದ್ಯುತ್ ಘಟಕಗಳು ಪರಿಸರಕ್ಕೆ, ಜಾಗತಿಕ ತಾಪಮಾನಕ್ಕೆ ಒಳ್ಳೆಯದಲ್ಲ. ಹೋಗಲಿ ಒಳ್ಳೆಯ ಮಳೆ ಆಗಿ ಅಣೆಕಟ್ಟುಗಳು ತುಂಬಿದಾಗ ಹೆಚ್ಚುಹೆಚ್ಚು ವಿದ್ಯುತ್ ಉತ್ಪಾದಿಸಿ ಅದನ್ನು ಶೇಖರಿಸಿ ಇಟ್ಟುಕೊಳ್ಳೋಣ ಎಂದರೆ ಅದು ಅಷ್ಟು ಸುಲಭವಲ್ಲ. ತತ್ಕ್ಷಣದ ಅಗತ್ಯದಷ್ಟು ವಿದ್ಯುತ್ ಉತ್ಪಾದಿಸಬೇಕೆ ಹೊರತು, ಉತ್ಪಾದಿಸಿದ್ದೆಲ್ಲ ಉಪಯೋಗಿಸಬಹುದು ಅಂತಿಲ್ಲ. ಇನ್ನು, ವಿದ್ಯುತ್ನ ಬೇಡಿಕೆ ಕೇವಲ ಭಾರತದ ಸಮಸ್ಯೆಯಷ್ಟೆ ಅಲ್ಲ. ಪ್ರಪಂಚದ ಬಹುಪಾಲು ದೇಶಗಳದ್ದೂ ಹೌದು. ಅದರಲ್ಲೂ ವಿಶ್ವದ ಅತಿಹೆಚ್ಚು ಜನರನ್ನು ಹೊಂದಿರುವ ಚೀನಾಕ್ಕೂ ಇದು ಸಮಸ್ಯೆಯೆ. ಅಲ್ಲೂ ಇದೆ ಕತೆ. ಅಮೆರಿಕದಲ್ಲೂ ಇದೇ ಕತೆ.
ಹೀಗಾಗಿಯೆ ಇತ್ತೀಚೆಗೆ ಅನೇಕ ದೇಶಗಳಲ್ಲಿನ, ವಿಶೇಷವಾಗಿ ಅಮೆರಿಕದಂತಹ ಮುಂದುವರಿದ ದೇಶಗಳಲ್ಲಿನ ಉದ್ಯಮಿಗಳು ಮತ್ತು ವಿಜ್ಞಾನಿಗಳು ಪರಿಸರಕ್ಕೆ ಹೆಚ್ಚು ಹಾನಿಯಾಗದಂತಹ ಪರ್ಯಾಯ ವಿದ್ಯುತ್ ಮೂಲಗಳನ್ನು ಹುಡುಕುತ್ತಿದ್ದಾರೆ. ಇದರಲ್ಲಿ ಪರಿಸರ ಕಾಳಜಿಗಿಂತ, ಸಮಸ್ಯೆಯನ್ನೂ ಲಾಭಕ್ಕೆ ತಿರುಗಿಸಿಕೊಳ್ಳುವ ಉದ್ಯಮಿಗಳ ಸಂಖ್ಯೆ ಹೆಚ್ಚಿದ್ದರೂ ಕೆಲವು ಜನ ಪ್ರಾಮಾಣಿಕವಾಗಿಯೆ ಇದಕ್ಕೆ ಸ್ಪಂದಿಸುತ್ತಿದ್ದಾರೆ. ಕೆಲವು ಸರ್ಕಾರಗಳು ತಾಪಮಾನದ ವೈಪರೀತ್ಯಕ್ಕೆ ಮೂಲಕಾರಣವಾದ ಗ್ರೀನ್ಹೌಸ್ ಅನಿಲಗಳ ಹೊರಚೆಲ್ಲುವಿಕೆಯನ್ನು ತಹಬಂದಿಗೆ ತರುವಂತಹ ಕಾನೂನುಗಳನ್ನು ಬಿಗಿ ಗೊಳಿಸುತ್ತಿವೆ. ಸೌರ್ ವಿದ್ಯುತ್ಗೆ, ವಿಂಡ್ಪವರ್ ಜನರೇಷನ್ಗೆ ಸಬ್ಸಿಡಿಗಳನ್ನು ಹೆಚ್ಚಿಸಿ ಪ್ರೋತ್ಸಾಹಿಸುತ್ತಿವೆ. ಕಳೆದ ಒಂದೆರಡು ವರ್ಷಗಳಿಂದಂತೂ ಪಾಶ್ಚಾತ್ಯ ವಿಜ್ಞಾನ ಜಗತ್ತು ಪರಿಸರ ಸ್ನೇಹಿ ಹಸಿರು ತಂತ್ರಜ್ಞಾನದ (Green Tech) ಅನ್ವೇಷಣೆಯಲ್ಲಿ ತೊಡಗಿಸಿಕೊಂಡುಬಿಟ್ಟಿದೆ. ಅಮೆರಿಕದ ಮಾಜಿ ಉಪಾಧ್ಯಕ್ಷ ಆಲ್ ಗೋರ್ನಂತಹವರು ಕನಿಷ್ಠ ಈಗಲಾದರೂ ಮನುಷ್ಯ ಎಚ್ಚತ್ತು ವಿನಾಶದಂಚಿನಿಂದ U-ಟರ್ನ್ ತೆಗೆದುಕೊಳ್ಳಲು ಪ್ರೇರೇಪಿಸುತ್ತಿದ್ದಾರೆ.
ಎರವಲು ತಂತ್ರಜ್ಞಾನದ ನಿರೀಕ್ಷೆಯಲ್ಲಿ ಭಾರತ - ಪರೋಕ್ಷ ಗುಲಾಮಿತನದಲ್ಲಿ ರಾಜ್ಯಗಳು
ಇಲ್ಲಿ ಒಂದಂತೂ ನಿಜ; ಅಮೆರಿಕದಂತಹ ರಾಷ್ಟ್ರಗಳಲ್ಲಿನ ವಿಜ್ಞಾನಿಗಳು ಕಂಡುಹಿಡಿಯುವ ತಂತ್ರಜ್ಞಾನವೆ ಬೇರೆ ದೇಶಗಳಿಗೂ ಹರಡುವುದು. ಭಾರತವೂ ಸೇರಿದಂತೆ ವಿಶ್ವದ ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೂ ಅಮೆರಿಕದಿಂದ ಸೋರಿದ ಎಂಜಲು, ಎರವಲು ತಂತ್ರಜ್ಞಾನವೆ ಆಪತ್ತಿಗೆ ಆಗುವುದು. ಇದು ಯಾಕೆ? ವಿಶೇಷವಾಗಿ, ಅಪಾರ ಸಂಖ್ಯೆಯ ಪದವೀಧರರನ್ನು ಉತ್ಪಾದಿಸುವ ಭಾರತಕ್ಕೆ ಯಾಕೆ ಇಂತಹುದು ಸಾಧ್ಯವಾಗುವುದಿಲ್ಲ? ಇವತ್ತು ಸಂಬಳದ ದೃಷ್ಟಿಯಿಂದ ಪ್ರತಿಭಾವಂತರನ್ನು ಆಕರ್ಷಿಸಬಲ್ಲ ತಾಕತ್ತಿರುವ ಭಾರತದ ಯಾವೊಂದು ಖಾಸಗಿ ಉದ್ದಿಮೆಸಂಸ್ಥೆಯೂ ವಿಜ್ಞಾನದ R&D ಯಲ್ಲಿ ತೊಡಗಿಕೊಂಡಂತೆ ಕಾಣಿಸುತ್ತಿಲ್ಲ. ಇನ್ನು ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿನ ವೈಜ್ಞಾನಿಕ ಪ್ರಯೋಗಗಳೂ ಹೆಚ್ಚಿನ ಮಟ್ಟದ ಯಶಸ್ಸು ಕಂಡಂತೆ ಕಾಣಿಸುವುದಿಲ್ಲ. ಎಲ್ಲರೂ ರಿವರ್ಸ್ ಇಂಜಿನಿಯರಿಂಗ್ಗೇ ತೃಪ್ತರಾದಂತೆ ಕಾಣಿಸುತ್ತಿದೆ. ಇನ್ನು ಇಂತಹ ವಿಷಯಗಳಲ್ಲಿ ಭಾರತದ ಯಾವೊಂದು ರಾಜ್ಯಸರ್ಕಾರವೂ ಜವಾಬ್ದಾರಿಯನ್ನೆ ತೆಗೆದುಕೊಂಡಂತೆ ಕಾಣುತ್ತಿಲ್ಲ. ನಮ್ಮ ಕರ್ನಾಟಕ ಸರ್ಕಾರದ ಉದಾಹರಣೆಯನ್ನೆ ತೆಗೆದುಕೊಂಡರೆ, ವೈಜ್ಞಾನಿಕ ಮನೋಭಾವ ಇಲ್ಲದ ಮೂಢ, ವಾಮಾಚಾರಪ್ರೇಮಿಗಳೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರು! ಸರ್ಕಾರಿ ಇಲಾಖೆಗಳನ್ನು ಕಂಪ್ಯೂಟರೀಕರಣ ಮಾಡುವುದನ್ನೆ ವಿಜ್ಞಾನದ ಅಭಿವೃದ್ಧಿ ಎಂದುಕೊಳ್ಳುವ ಮುಟ್ಟಾಳ ಜನ ಇವರು. ರಾಜ್ಯಸರ್ಕಾರದ್ದೆ ಆದ ಒಂದು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾಗಲಿ, ಕೊನೆಗೆ ವಿಶ್ವವಿದ್ಯಾನಿಲಯಗಳಲ್ಲಿನ ವೈಜ್ಞಾನಿಕ ಪ್ರಯೋಗಗಳನ್ನು ಗಮನಿಸಿ, ಪ್ರೋತ್ಸಾಹಿಸುವಂತಹ ವ್ಯವಸ್ಥೆಯಾಗಲಿ ಇದ್ದಂತಿಲ್ಲ. ರಾಜ್ಯಗಳು ಕೇಂದ್ರಸರ್ಕಾರದ ಕೃಪೆಯಲ್ಲಿ; ಕೇಂದ್ರ ವಿದೇಶಗಳ ಕೃಪೆಯಲ್ಲಿ. ಸ್ವಾವಲಂಬಿಯಾದ ವ್ಯವಸ್ಥೆಯನ್ನು ಕಟ್ಟಿಕೊಳ್ಳುವ ಸ್ವಾಭಿಮಾನಿ ಯೋಚನೆಯೆ ನಮ್ಮ ರಾಜ್ಯಗಳನ್ನಾಳುವ ಅಯೋಗ್ಯರಿಗಿಲ್ಲ. ಛೇ.
ಪರಿಸರ ಸ್ನೇಹಿ ಉತ್ಪನ್ನಗಳು ಲಾಭದಾಯಕವೂ ಹೌದು
ಫೋರ್ಡ್ ಮತ್ತು ಜನರಲ್ ಮೋಟಾರ್ಸ್ ಕಂಪನಿಗಳು ಕಳೆದ ಶತಮಾನದ ಆದಿಭಾಗದಲ್ಲಿ ದೊಡ್ಡಮಟ್ಟದಲ್ಲಿ ಕಾರುಗಳನ್ನು ತಯಾರಿಸಲು ಆರಂಭಿಸಿದ ಅಮೆರಿಕದ ಕಂಪನಿಗಳು. ಕ್ರಮೇಣ ಇವು ವಿಶ್ವದ ಎರಡು ಅತಿದೊಡ್ಡ ಆಟೊಮೊಬೈಲ್ ಕಂಪನಿಗಳಾಗಿದ್ದೆ ಅಲ್ಲದೆ ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ ಬಲಿಷ್ಠ ಬಹುರಾಷ್ಟ್ರೀಯ ಕಂಪನಿಗಳೂ ಆಗಿಬಿಟ್ಟವು. ಆದರೆ, ಈ ಎರಡೂ ಕಂಪನಿಗಳು ಕಳೆದ ಒಂದೆರಡು ದಶಕಗಳಲ್ಲಿ ಹೊಸ ಶೋಧನೆ ಮಾಡದೆ ಸ್ವಲ್ಪ ಮೈಮರೆತವು. ಅಮೆರಿಕದಲ್ಲಿ ಕಮ್ಮಿ ಬೆಲೆಗೆ ಸಿಗುವ ಪೆಟ್ರೋಲ್ ನಿಂದಾಗಿ ಮೈಲೇಜ್ ಬಗ್ಗೆ ಯೋಚಿಸದೆ ಸುಮ್ಮನೆ ಪವರ್ಫುಲ್ ಇಂಜಿನ್ಗಳನ್ನು ತಯಾರಿಸುತ್ತ ಬೀಗುತ್ತಿದ್ದವು. ಇದೇ ಸಮಯದಲ್ಲಿ ಜಪಾನಿನ ಟೊಯೊಟ ಮತ್ತು ಹೋಂಡಾ ಕಂಪನಿಗಳು ಒಳ್ಳೆ ಬಾಳಿಕೆ ಬರುವ, ಹೆಚ್ಚು ಮೈಲೇಜೂ ಕೊಡುವ ಗಾಡಿಗಳತ್ತ ದೃಷ್ಟಿ ಹರಿಸಿದರು. ಕಳೆದ ಮೂರುನಾಲ್ಕು ವರ್ಷಗಳಲ್ಲಿ ವಿಪರೀತ ಏರಿದ ಕಚ್ಚಾತೈಲದ ಬೆಲೆಯಿಂದಾಗಿ ಮತ್ತು ಪರಿಸರಪ್ರಜ್ಞೆಯ ಗ್ರಾಹಕರಿಂದಾಗಿ ಜಿಎಮ್ ಮತ್ತು ಫೋರ್ಡ್ಗಳ ಮಾರಾಟ ಇಳಿದುಹೋಗಿ, ಇವತ್ತು ಅವೆರಡೂ ವಿಪರೀತ ನಷ್ಟದಲ್ಲಿ ಅಳಿವುಉಳಿವಿನ ಹೋರಾಟದಲ್ಲಿ ಸಿಕ್ಕಿಹಾಕಿಕೊಂಡಿವೆ. ಫೋರ್ಡ್ ಅಂತೂ ಜಾಗತಿಕ ಆಟೊಮೊಬೈಲ್ ಪ್ರಪಂಚದಲ್ಲಿ ಎರಡನೆ ಸ್ಥಾನದಿಂದ ಮೂರನೆ ಸ್ಥಾನಕ್ಕೆ ಶಾಶ್ವತವಾಗಿ ಹೋಗಿಬಿಟ್ಟಿದೆ. ಈಗ ಜಿಎಮ್ ಅನ್ನು ಹಿಂದಿಕ್ಕೆ ಮೊದಲ ಸ್ಥಾನಕ್ಕೆ ಹೋಗಲು ಟೊಯೋಟ ಕೆಲವೆ ತಿಂಗಳುಗಳ ದೂರದಲ್ಲಿದೆ. ಟೊಯೋಟದವರು ಅಭಿವೃದ್ಧಿ ಪಡಿಸಿದ ಹೈಬ್ರಿಡ್ ಎಲೆಕ್ಟಿಕ್ ಕಾರು "ಪ್ರಿಯಸ್" ಉತ್ತಮ ಮೈಲೇಜು ಕೊಡುವುದರ ಜೊತೆಗೆ ಪರಿಸರ ಸ್ನೇಹಿಯೂ ಹೌದು. ಸುಮಾರು 22000 ಡಾಲರ್ ಬೆಲೆಯ ಈ ಕಾರನ್ನು ಕೊಳ್ಳಲು ತಮ್ಮ ನೌಕರರಿಗೆ ಗೂಗ್ಲ್ ಕಂಪನಿಯೂ ಸೇರಿದಂತೆ ಅಮೆರಿಕದ ಹಲವಾರು ಕಂಪನಿಗಳು 3000 ದಿಂದ 10000 ಡಾಲರ್ ವರೆಗೆ ಸಬ್ಸಿಡಿ ನೀಡುತ್ತಿವೆ. ಈ ಕಾರಿನ ಇಂತಹ ಅಭೂತಪೂರ್ವ ಯಶಸ್ಸು ಜಾಗತಿಕವಾಗಿ ಮೋಟಾರುವಾಹನಗಳ ಮೈಲೇಜ್ ಉತ್ತಮಗೊಳ್ಳಲು ಪ್ರೇರೇಪಿಸುತ್ತಿದೆಯಷ್ಟೇ ಅಲ್ಲದೆ ಅದರಿಂದ ಪರೋಕ್ಷವಾಗಿ ಗ್ರೀನ್ಹೌಸ್ ಅನಿಲಗಳ ನಿಯಂತ್ರಣಕ್ಕೂ, ಹೊಸಹೊಸ ಸಂಶೋಧನೆಗಳಿಗೂ ಪ್ರೇರಕವಾಗಿದೆ.
(ವಿಕ್ರಾಂತ ಕರ್ನಾಟಕ - ಜನವರಿ 11, 2008 ರ ಸಂಚಿಕೆಯಲ್ಲಿನ ಬರಹ)
Comments
ಉ: ಪ್ರಪಾತದ ಅಂಚಿನಲ್ಲಿ ಪರಿವರ್ತನೆಯ ಸಂಕಲ್ಪ