ಪ್ರೇಮವೇ, ನಿನಗೆ ಕೊನೆಯ ನಮಸ್ಕಾರ....ಹೃದಯವೇಕೋ ಭಾರ...

ಪ್ರೇಮವೇ, ನಿನಗೆ ಕೊನೆಯ ನಮಸ್ಕಾರ....ಹೃದಯವೇಕೋ ಭಾರ...

ನೀನನ್ ಹಟ್ಟೀಗ್ ಬೆಳಕಂಗಿದ್ದೆ ನಂಜು,
ಮಾಗೀಲ್ ಉಲ್ ಮೇಲ್ ಮಲಗಿದ್ದಂಗೆ ಮಂಜು,
ಮಾಗಿ ಮುಗ್ತು, ಬೇಸ್ಗೆ ನುಗ್ತು,
ಇದ್ಕಿದ್ದಂಗೆ ಮಾಯ್‌ವಾಗೋಯ್ತು ಮಂಜೂ....
ನಂಗು-ನಿಂಗು ಎಂಗಾಗೋಯ್ತು ನಂಜು...

ನನ್ನ ಇಷ್ಟದ ಕವಿ "ರತ್ನ"ನ ಈ ಪದ ನನ್ನ ಬದುಕಿಗೆ, ನನ್ನ ಪ್ರೀತಿಗೆ ಪೂರಕವೇನೋ ಅನಿಸುತ್ತಿದೆ. ನಂಜು ಅನ್ನೋಳು ಅವರ ಹೆಂಡತಿ, ಹಟ್ಟಿ ಅನ್ನೋದು ಅವರ ಮನೆ ಮತ್ತು ಅದರ ಸುತ್ತಲಿನ ಪರಿಸರ, ಮಾಗಿ ಅನ್ನೋದು ಛಳಿಗಾಲ. ಅವರ ಹೆಂಡತಿ ನಂಜಿ ಅನ್ನೋಳು ಛಳಿಗಾಲದಲ್ಲಿ ಹಸಿರ ಹುಲ್ಲ ಮೇಲೆ ಫಳಫಳನೆ ಹೊಳೆಯುತ್ತ ಮಲಗಿಕೊಳ್ಳುವ ಮಂಜಿನಂತೆ, ಅವಳು ಇಲ್ಲವಾದ ಕ್ಷಣ ಅಂದ್ರೆ ಛಳಿಗಾಲ ಕಳೆದು ಹೋದದ್ದು. ಬೇಸಿಗೆ ನುಗ್ಗಿ ಅವರ ನಂಜಿ ಅನ್ನೋ ಛಳಿಯನ್ನು ಹೊತ್ತೊಯ್ದದ್ದು. ಇದು ನಾನು ಆ ಕವಿತೆಯ ಬಗ್ಗೆ ಅರ್ಥ ಮಾಡ್ಕೊಂಡಿದ್ದು. ಬಹುಶಃ ಈ ಕವಿತೆಯಲ್ಲಿನ ಒಂದೊಂದು ಪದಗಳು, ನನಗೂ ಮತ್ತು ನನ್ನ ಪ್ರೀತಿಗೂ ಸೂಕ್ತ ಅನ್ವಯಿಕೆಯಾಗಿದೆ.

ಈ ಲೇಖನದ ಶೀರ್ಷಿಕೆ ಬರೆಯುತ್ತಿದ್ದಂತೆಯೇ ಹೃದಯದ ಬಡಿತಗಳಲ್ಲಿ ಏನೋ ಕಲರವ, ಬಡಿತಗಳ ವೇಗ ಅಳೆಯಲು ಸಾಧ್ಯವಾಗುತ್ತಿಲ್ಲ ಒಂದೇ ಸವನೆ ಆವೇಗ, ಉದ್ವೇಗ. ಅಕ್ಷರಗಳು ಬೆರಳಚ್ಚಿಸುವಲ್ಲಿ ಏಕೋ ಏನೋ ಅಡೆತಡೆ. ಕಣ್ಣೊಳಗೆ ಕಂಬನಿಯ ಧಾರೆ ಧಾರೆ. ಎವರೆಸ್ಟ್ ಪರ್ವತವೇ ದೇಹದ ಮೇಲೆ ಇಟ್ಟಿರುವಷ್ಟು ಹೃದಯ ಭಾರವಾಗಿದೆ. ಒಂದು ವರ್ಷದೊಳಗಡೆಯೇ ಒಂದು ಜನುಮಕ್ಕಾಗುವಷ್ಟು ಪ್ರೀತಿಸಿದ್ದನ್ನು ಹೀಗೆ ಒಂದೇ ಲೇಖನದೊಳಗೆ ಬರೆದು ಅವಳಿಗೆ ಮತ್ತು ಅವಳ ಪ್ರೀತಿಗೆ "ವಿದಾಯ" ಹೇಳುತ್ತಿರುವ ನನ್ನ ವೇದನೆ, ನೋವು, ಸಂಕಟ, ತಳಮಳ ಬಹುಶಃ ಅವಳಿಗಲ್ಲದೆ ಬೇರೆ ಯಾರಿಗೂ ಅರ್ಥವಾಗಲಿಕ್ಕಿಲ್ಲ. ಯಾಕೆಂದರೆ ಅವಳು ನನ್ನ ದೇವತೆ, ನನ್ನ ಜೀವ. ನನ್ನ ಹೃದಯ. ನನ್ನ ಚೈತನ್ಯ. ಈ ಕ್ಷಣದಿಂದ ನಾನು ಜಿವ, ಹೃದಯ, ಚೈತನ್ಯ ಈ ಮೂರನ್ನೂ ಕಳೆದುಕೊಳ್ಳುತ್ತಿದ್ದೇನೆ ಅಂದಾದ ಮೇಲೆ ನನಗುಳಿಯೋದು ಬರೀ ’ದೇಹ’ ಮಾತ್ರ, ಅದು ಜೀವವಿಲ್ಲದ್ದು!. ಎಂದಿಗಿಂತಲೂ ತುಂಬ ಭಯ, ಭಕ್ತಿ, ಶೃದ್ಧೆಯಿಂದ ಇವತ್ತು ನಾನು ದೇವರ ಮುಂದೆ ದೀಪ ಹಚ್ಚಿ ದೇವರಲ್ಲಿ ಕೇಳಿದ್ದು ಒಂದೇ ಒಂದು "ಅವಳಿಗೆ ಸುಖ ಸಿಗಲಿ, ನನಗೆ ಸಾವು ಬರಲಿ".
ಇಷ್ಟಕ್ಕೂ ನಮ್ಮ ಪ್ರೀತಿ ಹೀಗೆ ವಿದಾಯ ಕಂಡುಕೊಳ್ಳಲು ಕಾರಣವಾದರೂ ಏನೆಂದು ಹೇಳದೇ ಇರಲಾರೆ. ನನ್ನ ಮತ್ತು ಅವಳ ಪ್ರೀತಿಯ ಮಧ್ಯೆ ವಿದಾಯದ ಪೂರ್ಣವಿರಾಮ ಕಾಣಿಸಿಕೊಳ್ಳಲು "ಜಾತಿ"ಯೊಂದೇ ಕಾರಣ. ಬಹುಶಃ ಭಾರತದಂತಹ ದೇಶದಲ್ಲಿ ಎಷ್ಟೋ ಸಂಖ್ಯೆಯ ಪ್ರೇಮಿಗಳು ಮತ್ತು ಅವರ ಪ್ರೇಮಗಳು ಅಮರವಾಗಲು ಜಾತಿಯೇ ಮುಖ್ಯ ಕಾರಣ. I hate caste and castism. ಸ್ವತಂತ್ರ ಸಿಕ್ಕ ಅರವತ್ತು ವರ್ಷಗಳವರೆಗೆ ಜಾತಿ ಮತ್ತು ಅದರ ಪದ್ಧತಿಗಳು ಇನ್ನೂ ಜೀವಂತವಾಗಿರೋದಕ್ಕೆ ಕಾರಣಗಳು ಹುಡುಕಿಕೊಳ್ಳದೇ ಇದ್ದರೆ ಬಹುಶಃ ಯುವ ಪೀಳಿಗೆಗೆ ಜಾತಿ ಅನ್ನೋದು ಭಯಂಕರ ಸಮಸ್ಯೆಯಾಗೋದರಲ್ಲಿ ಸಂದೇಹವೇ ಇಲ್ಲ. Sorry... ನಾನು ಮುಖ್ಯವಾಗಿ ಹೇಳೋಕೆ ಹೊರಟಿರೋ ವಿಷಯವೇ ಬೇರೆಯಾದ್ದರಿಂದ, ವಿಷಯಾಂತರಕ್ಕೆ ಅವಕಾಶ ಕೊಡದೆ ಜಾತಿಯ ಚರ್ಚೆಯನ್ನು ಪೂರ್ಣಗೊಳಿಸಿಬಿಡುತ್ತೇನೆ.
ಅವಳಿಗೆ ಈಗ ಮದುವೆ ನಿಶ್ಚಯವಾಗುತ್ತಿದೆ... ನನ್ನ ಎದೆಯೊಳಗೆ ವಿಷ ಕಲೆಸಿದಂತಾಗುತ್ತಿದೆ. ಸುಮ್ಮನೆ ಎಲ್ಲ ಪ್ರೇಮಿಗಳಂತೆ ಪ್ರೀತಿಸಿರಲಿಲ್ಲ ನಾವು. ತಾಳಿ ಕಟ್ಟದೆಯೇ ಮದುವೆಯಾಗಿದ್ದೆವು. ದೇಹಗಳ ಬೆಸುಗೆ ಇಲ್ಲದೇನೇ ಮಕ್ಕಳು ಹೆತ್ತಿದ್ದೆವು. ಒಂದಷ್ಟು ಸಿಹಿ ಮುತ್ತುಗಳು, ಮತ್ತೊಂದಷ್ಟು ಅಪ್ಪುಗೆಯ ಹೊರತಾಗಿ ನಾವು ಏನನ್ನೂ ಪಡೆದುಕೊಳ್ಳಲಿಲ್ಲ. ನಮ್ಮಿಬ್ಬರಲ್ಲಿದ್ದುದು ಬರೀ ಶುದ್ಧ ಮತ್ತು ಆರೋಗ್ಯಕರ ಪ್ರೀತಿ ಮಾತ್ರ!. ’ನನ್ನ ಬದುಕಿಗೆ ನೀನಿಲ್ಲದೇ ಇದ್ದರೆ, ನನ್ನ ಬಾಳು ಪೂರ್ಣವಾಗುವುದಿಲ್ಲ ಕಣೋ ಪೆದ್ದ’ ಅನ್ನುತ್ತಿದ್ದವಳು, ಇನ್ನೊಬ್ಬನ ಬಾಳಿಗೆ ಬೆಳಕಾಗಲು ಹೊರಟಿದ್ದಾಳೆ. ಯಾಕೆ ಅಂದ್ರೆ ನನ್ನ ಬಾಳು ಪೂರ್ಣವಾಗಲಿಲ್ಲವಲ್ಲೋ... ಅಂತ ಕಣ್ಣೀರಾಗಿ ಉತ್ತರವಲ್ಲದ ಉತ್ತರ ಕೊಟ್ಟಿದ್ದಾಳೆ. ಯಾವತ್ತಿದ್ದರೂ ನನಗೆ ಮತ್ತು ನನ್ನ ಮನಸಿಗೆ ನೀನೇ ಗಂಡ, ಯಾಕಂದ್ರೆ ನಾವಿಬ್ಬರೂ ದೇವರು ಮೆಚ್ಚಿದ ’ಗಂಡ-ಹೆಂಡತಿ’ ಅಂದಿದ್ದಾಳೆ. ನಮ್ಮ ಪ್ರೇಮ, ಪ್ರೀತಿ ಮತ್ತು ಅದರ ಆಳ ದೇವರಿಗೆ ಮಾತ್ರವೇ ಗೊತ್ತಲ್ಲ? ಅನ್ನುತ್ತಿದ್ದವಳ ಮಾತು ಕೇಳುತ್ತಿದ್ದರೆ ಉಬ್ಬಿದ ನನ್ನ ಕೊರಳೊಳಗೆ ಧ್ವನಿಯೇ ಹೊರಟು ಬರಲಿಲ್ಲ. ಈ ಜನುಮ ಪೂರ್ತಿ ನನ್ನೆದೆಯೊಳಗೆ ಹುಟ್ಟಿಕೊಳ್ಳುವ ’ಪ್ರೀತಿ’ ಬರೀ ನಿಂಗಾಗಿ ಮಾತ್ರ. ಅದೆಲ್ಲವನ್ನೂ ಅಳೆದೂ, ಸುರಿದೂ ನಿನಗೇ ಕೊಡುತ್ತೇನೆ. ದಯವಿಟ್ಟು ನೀನು ಬೇರೆ ಹುಡುಗಿಯನ್ನು ಮದ್ವೆ ಮಾಡ್ಕೊಳ್ಳೋ... ಅಂತ ಗೋಗರೆದಿದ್ದಾಳೆ. ಪ್ರೀತಿ ಫಲಿಸದ ನಂತರ ಹುಡುಗಿಯರು ಹೇಳುವ ಮಾತೇ ಇದು, ಅಲ್ಲವೇ?
’ತೊರೆದು ಹೋಗದಿರು ಜೋಗಿ, ಅಡಿಗೆರಗಿದ ಈ ದೀನಳ ಮರೆತು, ಸಾಗುವೆ ಏಕೆ ವಿರಾಗಿ..." ಅನ್ನೋ ಭಾವಗೀತೆಯ ಕನವರಿಕೆ ಈಗ ಅವಳೆದೆಯಲ್ಲಿದೆ. ಅವಳಿಗಾದರೂ ನಾನ್ಯಾಕೆ ಮೋಸ ಮಾಡಬೇಕು ಅನ್ನೋದು ಸಧ್ಯದ ನನ್ನ ತರ್ಕ. ಅವಳ ಅನಿವಾರ್ಯ, ಅವಳ ಮೇಲಿನ ಒತ್ತಡಗಳನ್ನು ಬಲ್ಲವ ನಾನು. ಅದಕ್ಕೆಂದೇ ಭಾರವಾದ ಹೃದಯದೊಂದಿಗೆ ಅವಳಿಷ್ಟದ ಅನಿವಾರ್ಯದ ಬದುಕಿಗೆ ಗುಡ್‌ಲಕ್‌ ಹೇಳುತ್ತ, ನನ್ನ ಪ್ರೇಮಕ್ಕೆ ವಿದಾಯ ಹೇಳುತ್ತಿದ್ದೇನೆ. ನಾವಿಬ್ಬರೂ ಸನಿಹವಿಲ್ಲದಿದ್ದರೂ ಒಬ್ಬರ ಮನಸನೊಬ್ಬರು ಜನುಮಪೂರ್ತಿ ತಲುಪುವೆವು ಅನ್ನೋದಂತೂ ಸತ್ಯ. ಅದನ್ನು ಯಾರಿಂದಲೂ ತಪ್ಪಿಸಲಾಗಲ್ಲ. ನಮ್ಮಿಬ್ಬರ ಪ್ರೀತಿಯೇ ಅಂತಹುದು. ಸಪ್ತ ಸಾಗರದಾಚೆಗಿನ ತೀರಗಳಲ್ಲಿದ್ದರೂ ನಾವು ನಮ್ಮ ಪ್ರೀತಿಯನ್ನು ವಿನಿಮಯಿಸಿಕೊಳ್ಳಬಲ್ಲೆವು. ಅಂತಹುದೊಂದು ಕಲೆ ನಮ್ಮಿಬ್ಬರಿಗೆ ಮಾತ್ರ ಸಿದ್ಧಿಸಿದೆ ಅಂದುಕೊಳ್ಳುತ್ತೇನೆ. ಈ ಲೇಖನದ ಮುಖಾಂತರ ಅವಳಿಗೊಂದು ಮಾತು ಹೇಳಲು ಇಷ್ಟಪಡುತ್ತೇನೆ. ಹುಡುಗೀ.... ನೀನೆಲ್ಲೇ ಇರು, ಯಾವ ಸ್ಥಿತಿಯಲ್ಲೇ ಇರು ನಾನು ನಿನ್ನ ಪಕ್ಕಕ್ಕೆ, ನಿನ್ನ ನೆರಳಿನ ಛಾಯೆಯಾಗಿ ನಾನಿರುತ್ತೇನೆ. ಎಷ್ಟೇ ಆದ್ರೂ ನೀನು ನನ್ನ ’ಮಾನಸ ಪತ್ನಿ’ ಅಲ್ಲವೇ? ಮರೆತುಬಿಡು ಅನ್ನೋದು ಮರೆತಿದ್ದೇನೆ ಅನ್ನೋದು ಯಾವತ್ತಿಗೂ ನಮ್ಮಿಬ್ಬರ ಮಧ್ಯೆ ಸುಳಿಯೋದು ಬೇಡ. ಯಾಕೆಂದ್ರೆ, ಪ್ರೇಮಿಗಳು ಒಬ್ಬರನ್ನೊಬ್ಬರು ಮರೆಯೋದು ಇಬ್ಬರೂ ಸತ್ತ ನಂತರವೇ...!. ಸಧ್ಯಕ್ಕೆ ಪ್ರೀತಿಗೆ ಒಂದದಷ್ಟು ದಿನಗಳವರೆಗೆ ಅಥವ ನಮ್ಮ ಮನಸು ಒಂದು ಹಿಡಿತಕ್ಕೆ ಬರುವವರೆಗೆ ವಿದಾಯ ಹೇಳಿಕೊಳ್ಳೋಣ.
ಮತ್ತೆ ಬರೆಯುತ್ತೇನೆ....

ಪ್ರೇಮ್...

Rating
No votes yet

Comments