ಅಭಿಷೇಕ
ಅಭಿಷೇಕ
------------------------------------------
ನಿಬಿಡ ಕಾನನದಿ ಹರಿಯುವ ನದಿಯಂಚಿನ ಗಿಡದಲಿ
ಭೂಮ ಮರ ಬಳಸಿ ಬೆಳೆದ ಬಳ್ಳಿಯ ವದನದಲಿ
ಸರೋವರದಿ ಹೊಳೆವ ಜಲತರಂಗದೆದೆಯಲಿ
ಸೊಬಗ ಸಿರಿಯನುಟ್ಟು ವರ್ಣ ವೈವಿಧ್ಯವ ತೊಟ್ಟು
ನಳನಳಸಿ ನಗುವ ಪುಷ್ಕಲ ಪುಷ್ಪಗಳಲ್ಲವೇ
ಆ ಮಹಾಶಕ್ತಿಗೆ ಪುಷ್ಪಾಭಿಷೇಕ?
ನಿರ್ಭರ ನೀರ್ಮಣಿಗಳು ರವಿಕಿರಣಕೆ ಹೊಳೆಯುತ
ಸಲಿಲ ಸಿಂಧುವದು ಸುಲಲಿತ ಗಾನಗೈಯುತ
ಮೋಡಗಳು ಕರಗಿ ತಿರೆಗೆ ಮಳೆಯ ಸುರಿಸುತ
ಭುವಿಯೊಡಲಿಂದ ನೀರು ಚಿಮ್ಮುತ ನಡೆಸುವದಲ್ಲವೇ
ಆ ದಿವ್ಯಶಕ್ತಿಗೆ ಪವಿತ್ರ ಅಭಿಶೇಕ?
ಬೋರ್ಗರೆವ ಶರಧಿಯ ರುದ್ರ ತರಂಗದೊಳು
ಧುಮುಧುಮುಕಿ ಹರಿವ ನದಿಯ ಮಂಜುಳ ಗಾನದೊಳು
ತೂಗುವ ತರುಲತೆಗಳ ಮರ್ಮರ ಸದ್ದೊಳು
ಪಕ್ಷಿಕೂಟದಿ ಹೊಮ್ಮವ ಸುರಕಲರವದೊಳು
ಗಗನ ಗರ್ಭದಿ ಸಿಡಿದ ಸಿಡಿಲೊಳು ಅಡಗಿಹುದಲ್ಲವೆ
ಆ ಭವ್ಯ ಶಕ್ತಿಗೆ ಮಂತ್ರಾಭಿಷೇಕ?
ತುಂಬಿ ನೆರೆದ ಜನರ ನೂಕುನುಗ್ಗಲಿನಲಿ
ಗುಂಪು ಘರ್ಷಣೆಯ ಗೊಂದಲದ ಮಡುವಿನಲಿ
ಗುಡಿಯ ದೇವರ ಅಭಿಷೇಕವ ಕಂಡು ಕಾಣದೆ ನೋಡಿ,
ಆತುರಾತುರದಲಿ ಮನಕೆ ತೋಚಿದ್ದು ಬೇಡಿ,
ಭಕ್ತಿ ಏಕಾಗ್ರತೆಗಳು ಬಹುದೂರ ಓಡಿ,
ಮನವು ಚಂಚಲತೆಯ ಬಿರುಗಾಳಿಗೆ
ಸಿಕ್ಕರೆ ಧ್ಯಾನಪೀಠವನಲಂಕರಿಸುವುದೆ?
ನಿನ್ನಾತ್ಮದ ಭಕ್ತಿ, ಆ ದಿವ್ಯ ವಿಶ್ವ ಭವ್ಯ
ಶಕ್ತಿಯನು ಸೇರುವುದೆ?
ಬಾ ಇಲ್ಲಿ ನದಿಯ ತೀರದ ಮರಳ ರಾಶಿಯ ಮೆತ್ತೆಗೆ,
ಶೃಂಗದುತ್ತುಂಗದಿ ನಿಷ್ಪಂದದಿ ನಿಂತ ಬಂಡೆಯ ತುದಿಗೆ,
ಕಡಲಂಚಿನಲಿ ಮೂಡುವ ಸೂರ್ಯೋದಯದೆದುರಿಗೆ,
ಕಣಿವೆಯಲಿ, ಕಾನನದಲಿ ಬೆಳೆದು ನಿಂತ ಹೆಮ್ಮರಗಳ ನೆರಳಿಗೆ,
ಅನುಭವಿಸಿಲ್ಲಿ ಸೃಷ್ತಿಕರ್ತನ ಪರಮ ಪೂಜ್ಯನ,
ಪರಮ ಪವಿತ್ರಾಭಿಷೇಕ.
ನಿನ್ನಾತ್ಮದಾಳದಲಿ ಬೆಳಗುವುದು ಸಂತೃಪ್ತಿಯ ಧ್ಯೋತಕ
- - ಚಂದ್ರಹಾಸ ( ೧೧ ಜೂನ್ ೨೦೧೧ )
Comments
ಉ: ಅಭಿಷೇಕ
In reply to ಉ: ಅಭಿಷೇಕ by ಭಾಗ್ವತ
ಉ: ಅಭಿಷೇಕ