ಹಂಸ ಹಾಡುವ ಹೊತ್ತು - ೪

ಹಂಸ ಹಾಡುವ ಹೊತ್ತು - ೪

ಹಂಸಗಾನ

ಮಿಲಿಂದ್ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಾಪಸು ಹೋದ ಎರಡು ವಾರಗಳಲ್ಲಿ ಅವನಿಗೆ ಮೈಸೂರಿನ ಪ್ರತಿಷ್ಠಿತ ಬಯೋ ಟೆಕ್ನೋಲಜಿ ಕಂಪೆನಿಯೊಂದರಿಂದ ಇಮೇಲ್ ಮೂಲಕ ಸಂದರ್ಶನಕ್ಕೆ ಕರೆ ಬಂದಿತ್ತು. ಶಿವಮೊಗ್ಗದಿಂದ ಮೈಸೂರಿಗೆ ಬಸ್ ಪ್ರಯಾಣ ಮಾಡಿ, ಲಾಡ್ಜಿಂಗ್ ಒಂದರಲ್ಲಿ ತಂಗಿ, ಬೆಳಗಿನ ಹತ್ತು ಗಂಟೆಗೆ ಸಂದರ್ಶನಕ್ಕಾಗಿ ಆ ಕಂಪೆನಿಯ ಪ್ರಧಾನ ಕಚೇರಿಗೆ ಬಂದಿದ್ದ.

ಸಂದರ್ಶನದ ಸಮಯದಲ್ಲಿ ಸಾಮಾನ್ಯವಾಗಿ ಉಂಟಾಗುವ ಆತಂಕದಿಂದ ಮಿಲಿಂದನೂ ಹೊರತಾಗಿರಲಿಲ್ಲ. ತನ್ನ ಆತಂಕವನ್ನು ಸಾಧ್ಯವಿದ್ದಷ್ಟು ಹತೋಟಿಯಲ್ಲಿಟ್ಟುಕೊಂಡು, ಸಮಾಧಾನದಿಂದ ಸಂದರ್ಶನದ ಕೋಣೆಯನ್ನು ಪ್ರವೇಶಿಸಿದ ಮಿಲಿಂದನಿಗೆ, ಕಂಪೆನಿಯ ಅಧಿಕಾರಿಗಳ ಜೊತೆ ಸಬ್ಜೆಕ್ಟ್ ಎಕ್ಸ್ ಪರ್ಟ್ ಆಗಿ ಆಹ್ವಾನಿತರಾಗಿದ್ದ ಡಾ|| ಚಡಗರವರನ್ನು ಕಾಣುತ್ತಲೇ, ಅಧೈರ್ಯದಿಂದ ಕುಸಿದು ಹೋದ. ಹಿಂದಿನ ವರ್ಷ ಕಾನ್ಫರೆನ್ಸ್ ಒಂದರಲ್ಲಿ, ಡಾ|| ಚಡಗರವರು ಮಾಡಿದ ಭಾಷಣವೊಂದನ್ನು ಕೇಳಿದ್ದ. ಭಾಷಣದ ನಂತರ ಪ್ರಶ್ನೋತ್ತರ ಸಮಯದಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿ ಅವರನ್ನು "ಸತಾಯಿಸಿದ್ದ". ಒಂದು ವೇಳೆ ಅವರೇನಾದರೂ ಅದನ್ನು ಇನ್ನೂ ಜ್ಞಾಪಕದಲ್ಲಿಟ್ಟುಕೊಂಡಿದ್ದರೆ, ದೇವರೇ ಗತಿ ಎಂದುಕೊಂಡ.

ಮೊದಲಲ್ಲಿ, ಕಂಪೆನಿಯ ಅಧಿಕಾರಿಗಳು ಇವನನ್ನು ವ್ಯಾವಹಾರಿಕವಾಗಿ ಅನೇಕ ಪ್ರಶ್ನೆಗಳನ್ನು ಕೇಳಿದರು. ಅವುಗಳನ್ನೆಲ್ಲಾ ಸಮರ್ಥವಾಗಿಯೇ ಉತ್ತರಿಸಿದ.
ಕಂಪೆನಿಯ ಆ ಹಿರಿಯ ಅಧಿಕಾರಿಗಳು,
"ಐಯಾಮ್ ಡನ್ ವಿತ್ ಹಿಮ್. ಹಿ ಈಸ್ ಆಲ್ ಯುವರ್ಸ್" ಎಂದು ನುಡಿದು, ಡಾ|| ಚಡಗರವರ ಕಡೆ ನೋಡಿದರು.
ಡಾ|| ಚಡಗರವರು ಸಾವಧಾನವಾಗಿಯೇ ಅನೇಕ ಪ್ರಶ್ನೆಗಳನ್ನು ಕೇಳಿದರು. ಬಳಿಕ,
"ಐ ನೋ ದಿಸ್ ಬಾಯ್. ಹಿ ಈಸ್ ಟೂ ಗುಡ್. ನೌ ಹಿ ಈಸ್ ಯುವರ್ ಬಾಯ್" ಎಂದರು.
"ಬಟ್ ಐ ಆಮ್ ಡನ್ ವಿತ್ ಹಿಮ್. ನಾನಾಗಲೇ ಪ್ರಶ್ನೆಗಳನ್ನ ಕೇಳಿದ್ದಾಯಿತು" ಎಂದು ನುಡಿದಾಗ, ಡಾ|| ಚಡಗರವರು ಅವರೆಡೆಗೆ ಕಣ್ಣು ಮಿಟುಕಿಸಿದರು.

ಅದನ್ನು ಅರ್ಥಮಾಡಿಕೊಂಡ ಆ ಅಧಿಕಾರಿ, "ಓಹ್, ಹಾಗೆ ಹೇಳಿದಿರಾ" ಎಂದು ನಕ್ಕರು.
ಅದೇ ಸಮಯಕ್ಕೆ, ಸೈಲೆಂಟ್ ಮೋಡ್ ನಲ್ಲಿದ್ದ ಮಿಲಿಂದನ ಮೊಬೈಲ್ ಫೋನ್, ಕಂಪಿಸಲಾರಂಭಿಸಿತು. ತಕ್ಷಣವೇ ಜೀಬಿನೊಳಗೆ ಕೈಹಾಕಿ, ಅದನ್ನು ಆಫ್ ಮಾಡಿದ ಮಿಲಿಂದ್. ಅವನ ಸಂದರ್ಶನ ಮುಗಿಯಿತು ಎಂದು ಅವರು ಸೂಚಿಸಿದ ಕೂಡಲೇ, ಕೋಣೆಯಿಂದ ಹೊರಹೊರಟ ಮಿಲಿಂದ್. ಸಂದರ್ಶನ ಕೋಣೆಯಿಂದ ಹೊರಬಂದು, ತನ್ನ ಸಂದರ್ಶನ ತೃಪ್ತಿಕರವಾಗಿ ಜರುಗಿದ್ದನ್ನು ಮೊದಲು ತನ್ನ ತಾಯಿಗೆ ತಿಳಿಸಿದ ನಂತರ ತನ್ನ ಸೋದರಮಾವ ಮುರಳೀಧರರವರಿಗೆ ತಿಳಿಸಬೇಕೆಂದು ಮೊಬೈಲನ್ನು ಕೈಗೆ ತೆಗೆದುಕೊಂಡಾಗ, ಸ್ವಲ್ಪ ಹೊತ್ತಿಗೆ ಮುಂಚೆ ಬಂದಿದ್ದ ಕರೆ ಅವರದ್ದೇ ಆಗಿತ್ತೆಂಬುದನ್ನು ಗಮನಿಸಿದ. ಮುರಳೀಧರರ ಮೊಬೈಲಿಗೆ ಕರೆ ಮಾಡಿದ. ಇವನ ಕರೆಯನ್ನು ಸ್ವೀಕರಿಸಿದ ಮುರಳೀಧರರವರು, ಮಿಲಿಂದ ಬಾಯಿ ತೆಗೆಯುವ ಮುಂಚೆಯೇ, ತಾವು ತಿಳಿಸಬೇಕಿದ್ದ ವಿಷಯವನ್ನು ಆತುರಾತುರವಾಗಿ ತಿಳಿಸಿದರು. ಅವರು ತಿಳಿಸಿದ ಸುದ್ದಿ ಕೇಳಿ, ಮಿಲಿಂದ್ ದಿಗ್ಭ್ರಮೆಗೊಂಡ. ಒಂದೆರಡು ನಿಮಿಷ ಅವನ ಬಾಯಿಂದ ಸ್ವರವೇ ಹೊರಡಲಿಲ್ಲ.

"ನಿಜವೇ ಮಾಮಾ, ನನಗೆ ನಂಬಲಿಕ್ಕೇ ಆಗುತ್ತಿಲ್ಲ. ಯಾವಾಗ, ಹೇಗೆ ?" ಎಂದು ಬಡಬಡಿಸಿದ.
"ಇಂದು ಬೆಳಿಗ್ಗೆ ಏಳೂವರೆ ಗಂಟೆಗೆ ವೈದೇಹಿಯವರು ಕರೆಮಾಡಿ ವಿಷಯ ತಿಳಿಸಿದರು. ನಿನ್ನೆ ರಾತ್ರಿ ಮಲಗುವ ಮುಂಚೆ ಮೂರ್ತಿ ಚೆನ್ನಾಗಿಯೇ ಇದ್ದನಂತೆ. ಸಾಮಾನ್ಯವಾಗಿ ಬೆಳಗಿನ ಏಳು ಗಂಟೆ ಹೊತ್ತಿಗೆ ವಾಕಿಂಗ್ ಮುಗಿಸಿ ಮನೆಗೆ ಹಿಂತಿರುತ್ತಿದ್ದನಂತೆ. ಈ ದಿನ ಏಳು ಗಂಟೆಯಾದರೂ ಇನ್ನೂ ಬೆಡ್ ರೂಮಿನಿಂದ ಹೊರಕ್ಕೇ ಬಂದಿಲ್ಲದಿರುವುದನ್ನು ಗಮನಿಸಿ, ಅವನನ್ನು ಎಚ್ಚರಿಸಲು ಅವನ ಕೋಣೆಗೆ ಹೋಗಿ ನೋಡಿದಾಗ, ಅವನ ದೇಹವಾಗಲೇ ತಣ್ಣಗಾಗಿತ್ತಂತೆ. ನಾನು ತಕ್ಷಣವೇ ಅವನ ಮನೆಗೆ ಹೊರಟೆ. ಅವನನ್ನು ಕಾಣುವವರೆಗೂ ಅವನು ಇನ್ನೂ ಬದುಕಿರುಬಹುದೆಂಬ ಭ್ರಮೆಯಲ್ಲಿಯೇ ಇದ್ದೆ. ಆದರೆ ಯಾವುದಕ್ಕೂ ಸ್ಪಂದಿಸದೆ ಚಿರನಿದ್ರೆಯಲ್ಲಿದ್ದ ಅವನನ್ನು ಕಂಡಾಗ ಈ ಅಪ್ರಿಯ ಸತ್ಯವನ್ನು ಒಪ್ಪಿಕೊಳ್ಳಲೇ ಬೇಕಾಯಿತು.ನಿನ್ನ ಸಂದರ್ಶನ ಮುಗಿದಕೂಡಲೇ ಇಲ್ಲಿಗೆ ಹೊರಟು ಬಾ. ನಿನಗೆ ಒಂದು ಮುಖ್ಯ ವಿಷಯ ತಿಳಿಸುವುದಿದೆ" ಎಂದು ಹೇಳಿ ಅವನ ಪ್ರತಿಕ್ರಿಯೆಗೂ ಕಾಯದೇ ತಮ್ಮ ಮೊಬೈಲ್ ಆಫ್ ಮಾಡಿದ್ದರು. ಅವನ ಸಂದರ್ಶನದ ಬಗ್ಗೆ ಅವರು ಕೇಳಿರಲೂ ಇಲ್ಲ, ಅದನ್ನು ತಿಳಿಸುವ ಉತ್ಸಾಹವೂ ಅವನಲ್ಲಿ ಉಳಿದಿರಲಿಲ್ಲ.

ಮಿಲಿಂದ ಬೆಂಗಳೂರು ತಲುಪಿದಾಗ ಮಧ್ಯಾಹ್ನ ಮೂರು ಗಂಟೆಯಾಗಿತ್ತು. ನೇರವಾಗಿ, ಮೂರ್ತಿಯವರ ನಿವಾಸಕ್ಕೆ ಹೋದಾಗ, ಅವರ ಮನೆಯ ಮುಂದೆ ಭಾರೀ ಜನಸಮೂಹವೇ ನೆರೆದಿತ್ತು. ಸುಲಭವಾಗಿ ಒಳಕ್ಕೆ ಹೋಗಲು ಸಾಧ್ಯವಾಗದೇ ಹೋದಾಗ, ಮುರಳೀಧರ ರಾವ್ ಅವರ ಮೊಬೈಲಿಗೆ ಕರೆ ಮಾಡಿದ. ಮೊಬೈಲಿನಲ್ಲಿ ಕರೆ ಅವನಿಂದ ಬಂದದ್ದನ್ನು ಗಮನಿಸಿದ ರಾವ್,
"ಎಲ್ಲೀದ್ದೀಯಾ ಈಗ" ಎಂದು ಕೇಳಿದರು. "ನಾನು ಮೂರ್ತಿಯವರ ಮನೆಯ ಮುಂದೆಯೇ ಇದ್ದೇನೆ. ಆದರೆ ಒಳಕ್ಕೆ ಬರಲಾಗುತ್ತಿಲ್ಲ" ಎಂದ ಮಿಲಿಂದನಿಗೆ,
"ಒಂದು ನಿಮಿಷ, ಸೆಕ್ಯೂರಿಟಿಯವರೊಡನೆ ನಾನು ಹೊರಗೆ ಬರುತ್ತೇನೆ. ನನ್ನ ಜೊತೆಯಲ್ಲಿ ನೀನು ಒಳಗೆ ಬರಬಹುದು" ಎಂದು ಹೇಳಿದರು. ಸ್ವಲ್ಪ ಸಮಯದಲ್ಲಿಯೇ, ಅವರು ಸೆಕ್ಯೂರಿಟಿ ಗಾರ್ಡ್ ನೊಂದಿಗೆ ಹೊರಬರುತ್ತಿರುವುದನ್ನು ಕಂಡು ಅವರ ಬಳಿ ಸೇರಿದ. ಅವನನ್ನು ಕರೆದುಕೊಂಡು, ಸೆಕ್ಯೂರಿಟಿಯವರ ಸಹಾಯದಿಂದ, ಜನಸಂದಣಿಯ ಮಧ್ಯೆ ದಾರಿ ಮಾಡಿಕೊಂಡು ಒಳ ಹೋದರು.

ಕರ್ನಾಟಕದ ವಿಜ್ಞಾನ ಲೋಕದಲ್ಲಿ ಉನ್ನತ ಸ್ಥಾನದಲ್ಲಿದ್ದ ಅವರ ಅಂತಿಮ ದರ್ಶನಕ್ಕೆ ಪ್ರತಿಷ್ಠಿತರ ಹಿಂಡೇ ಬಂದಿತ್ತು. ಮೂರ್ತಿಯವರೊಡನೆ ಅವನು ಬಹಳ ಅಲ್ಪ ಕಾಲ ಕಳೆದಿದ್ದರೂ, ಅವನ ಅಭಿಮಾನೀ ಶ್ರೇಷ್ಥರಲ್ಲಿ ಒಬ್ಬರಾದ ಮೂರ್ತಿಯವರು ಅವನ ಹೃದಯಕ್ಕೆ ಬಹಳ ಹತ್ತಿರದವರಾಗಿದ್ದರಿಂದ, ಮಿಲಿಂದನಿಗೆ ಅತೀವ ಸಂತಾಪವುಂಟಾಗಿತ್ತು. ಮೂರ್ತಿಯವರ ಅಂತಿಮ ದರ್ಶನ ಪಡೆದ ನಂತರ, ಮುರಳಿಧರರಾವ್ ಅವನಿಗೆ ತಮ್ಮ ಮನೆಗೆ ಹೋಗಲು ಹೇಳಿ, ತಾವು ಅಲ್ಲಿಯೇ ಉಳಿದರು.

ಮೂರ್ತಿಯವರ ಅಂತಿಮಕ್ರಿಯೆಯ ನಂತರ ಮುರಳೀಧರರವರು ಮನೆಗೆ ವಾಪಸ್ಸು ಬರುವ ವೇಳೆಗೆ ರಾತ್ರಿ ಹತ್ತು ಗಂಟೆಯಾಗಿತ್ತು. ಅವರ ನೀರೀಕ್ಷೆಯಲ್ಲಿಯೇ ಇದ್ದ, ಅವರು ಒಳಕ್ಕೆ ಬರುತ್ತಿದ್ದಂತೆ, "ಇದೆಲ್ಲಾ ಹೇಗಾಯ್ತು ಮಾಮಾ ?" ಎಂದು ಕೇಳಿದ.

ಸೋಫಾದ ಮೇಲೆ ಆಯಾಸದಿಂದ ಒರಗಿದ ರಾವ್, " ನಾನಾಗಲೇ ಹೇಳಿದಂತೆ, ರಾತ್ರಿ ಮಲಗುವ ಕೋಣೆಗೆ ಹೋಗುವ ಮುನ್ನ ಲವಲವಿಕೆಯಿಂದಲೇ ಇದ್ದನಂತೆ. ರಾತ್ರಿ ಯಾವುದೋ ಹೊತ್ತಿನಲ್ಲಿ ನಿದ್ದೆಯಲ್ಲಿಯೇ ಸಾವು ಸಂಭವಿಸಿರಬೇಕು. ಆ ರೀತಿ ಸಾವು ಉಂಟಾಗಿರಬೇಕಾದರೆ, ಕೇವಲ ಹೃದಯಾಘಾತದಿಂದ ಮಾತ್ರ ಸಾಧ್ಯ ಎಂದು ನಮ್ಮಿಬ್ಬರ ಸ್ನೇಹಿತ ಡಾ|| ಪಾಟೀಲ್ ಹೇಳಿದರು"

"ಆದರೆ ಮಾಮಾ, ಆ ರೀತಿ ಆಘಾತವಾದಾಗ, ಎದೆನೋವು ಕಾಣಿಸಿಕೊಂಡಿರಬೇಕಲ್ಲವೇ, ಅವರ ಪತ್ನಿಯವರ ಗಮನಕ್ಕೂ ಬಂದಿರಬೇಕಲ್ಲವೇ?" ಎಂದ ಮಿಲಿಂದ್.
"ಒಂದು ವೇಳೆ ವೈದೇಹಿಯವರೂ ಅಲ್ಲಿಯೇ ಮಲಗಿದ್ದಿದ್ದರೆ, ಅವರಿಗೆ ಸೂಚನೆ ಸಿಕ್ಕುತ್ತಿತ್ತೇನೋ. ಆದರೆ ಅವರಿಬ್ಬರೂ ಬೇರೆಬೇರೆ ಮಲಗುವುದು ನಮಗೆಲ್ಲರಿಗೂ ತಿಳಿದ ವಿಷಯವೇ" ಎಂದ ರಾವ್ ರವರ ಕಣ್ಣಲ್ಲಿ ಧಾರಾಕಾರವಾಗಿ ಕಂಬನಿ ಹರಿಯುತ್ತಿತ್ತು.

"ನನಗೆ ನನ್ನ ಸ್ನೇಹಿತ ದೂರವಾದದ್ದಕ್ಕಿಂತ ಹೆಚ್ಚಾಗಿ, ಅವನ ಅಂತಿಮ ಸಮಯದಲ್ಲೂ ಅಸಹಾಯಕನಾಗಿಯೇ ಉಳಿದನಲ್ಲ ಎಂದು ಹೆಚ್ಚು ದುಃಖವಾಗಿದೆ. ಮೂರ್ತಿ ಒಬ್ಬ ಮೇಧಾವಿ ಎಂಬ ಕಾರಣಕ್ಕಾಗಿ ನಿನಗೆ ಅವನ ಮೇಲೆ ಅಭಿಮಾನವಿರಬಹುದು. ಆದರೆ, ಅವನ ಅಂತರಂಗವನ್ನು ಬಲ್ಲ ನನಗೆ ಅವನ ಮಾನವೀಯ ಗುಣಗಳಿಗಾಗಿ ಹೆಚ್ಚು ಅಭಿಮಾನವಿದೆ. ಹಾಗೆ ಹೇಳುವುದಾದರೆ, ಅವನು ತನ್ನ ಲಿವಿಂಗ್ ವಿಲ್ಲನ್ನು ( Living Will ) ಬರೆದಿಟ್ಟಿದ್ದ. ಒಂದೆರಡು ವಾರಗಳ ಕೆಳಗೆ ನನಗೆ ಅದರ ಒಂದು ಪ್ರತಿಯನ್ನು ಕೊಟ್ಟಿದ್ದ. ಬಹುಶಃ ಲಿವಿಂಗ್ ವಿಲ್ ಎಂದರೇನೆಂದು ನಿನಗೆ ತಿಳಿದಿರಲಾರದು. ಇದು ಮಾಮೂಲಿ ವಿಲ್ ನಂತೆ ಆಸ್ತಿಯನ್ನು ಕುರಿತಂತೆ ಮಾಡಿದ ವಿಲ್ ಅಲ್ಲ. ಯಾವುದೇ ವ್ಯಕ್ತಿಯು ತಾನು ಆರೋಗ್ಯದಿಂದಿರುವಾಗಲೇ ಈ ವಿಲ್ ಬರೆದಿಡಬಹುದು. ಮುಂದೊಮ್ಮೆ ಯಾವುದೇ ಕಾರಣದಿಂದಾಗಿ ಆ ವ್ಯಕ್ತಿಯ ಆರೋಗ್ಯ ತೀರ ಹದಗೆಟ್ಟು, ಆಸ್ಪತ್ರೆಯಲ್ಲಿ ದಾಖಲಾಗಿ, ಅವನನ್ನು ಬದುಕುಳಿಸಲು ಆರ್ಟಿಫಿಷಿಯಲ್ ರೆಸ್ಪಿರೇಷನ್ ನಂತಹ ವ್ಯವಸ್ಥೆಗಳನ್ನು ಬಳಸಬೇಕಾಗಿ ಬಂದರೆ, ಅಂತಹ ಕ್ರಮಕ್ಕೆ ಅವನ ಸಮ್ಮತಿಯಿಲ್ಲ ಮತ್ತು ಅಂತಹ ಸಂದರ್ಭಗಳಲ್ಲಿ ಅವನನ್ನು ಬದುಕುಳಿಸಲು ಅಂತಹ ಯಾವುದೇ ಅತಿರೇಕದ ಕ್ರಮಗಳನ್ನು ಬಳಸಬಾರದು ಅರ್ಥಾತ್ ಶಾಂತಿಯುತವಾಗಿ ಅವನು ಮರಣವನ್ನಪ್ಪಲು ಬಿಡಬೇಕು ಎಂದು ಆದೇಶ ನೀಡುವ ದಾಖಲೆಗೆ ಲಿವಿಂಗ್ ವಿಲ್ ಎನ್ನುತ್ತಾರೆ. ಮೂರ್ತಿ ಲಿವಿಂಗ್ ವಿಲ್ ಬರೆದಿಟ್ಟಿದ್ದಲ್ಲದೇ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತಾನೇನಾದರೂ ಬ್ರೇನ್ ಡೆಡ್ (ಮಿದುಳಿನ ಸಂಪೂರ್ಣ ವೈಫಲ್ಯ) ಸ್ಥಿತಿ ತಲುಪಿದ್ದರೆ , ಇನ್ನೂ ತನ್ನ ದೇಹದಲ್ಲಿ ಪ್ರಾಣವಿರುವಾಗಲೇ, ಬೇರೆ ಇನ್ನೊಬ್ಬರಿಗೆ ಉಪಯೋಗಕ್ಕೆ ಬರಬಹುದಾದ ಎಲ್ಲಾ ಅಂಗಗಳನ್ನು, ಅಂದರೆ, ಕಣ್ಣುಗಳು, ಮೂತ್ರಪಿಂಡಗಳು, ಯಕೃತ್ತು,ಶ್ವಾಸಕೋಶ ಮತ್ತು ಹೃದಯಗಳನ್ನು ತೆಗೆದುಕೊಳ್ಳಬಹುದು ಎಂದು ಬರೆದಿದ್ದ, ತನ್ನ ದೇಹಕ್ಕೆ ಅಂಟಿಕೊಂಡಿದ್ದ ಕವಚ, ಕರ್ಣಕುಂಡಲಗಳನ್ನು ದೇಹದಿಂದ ಕಿತ್ತು ದಾನ ಮಾಡಿದ ಕರ್ಣನ ತರಹ. ಸದ್ಯದ ಪರಿಸ್ಥಿಯಲ್ಲಿ ಈ ಲಿವಿಂಗ್ ವಿಲ್ ಗೆ ನಮ್ಮ ದೇಶದಲ್ಲಿ ಕಾನೂನಿನ ಮಾನ್ಯತೆ ಇಲ್ಲ. ಮುಂಬರುವ ದಿನಗಳಲ್ಲಿ ಅದು ಜಾರಿಗೆ ಬರಬಹುದಾದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಆ ರೀತಿ ಬರೆದಿದ್ದ. ಬಹು ವಿಪರ್ಯಾಸದ ಸಂಗತಿಯೆಂದರೆ, ಅವನ ಈ ಇಚ್ಛೆಯ ಅಲ್ಪ ಭಾಗವೂ ನೆರವೇರಲಿಲ್ಲವಲ್ಲಾ ಎಂಬುದು. ಮರಣದ ಒಂದೆರಡು ಗಂಟೆಗಳ ನಂತರವೂ ಕಣ್ಣುಗಳನ್ನು ತೆಗೆದು ಬೇರೆಯವರಿಗೆ ಅಳವಡಿಸಲು ಬಳಸಬಹುದು. ಇನ್ನೂ ಹೆಚ್ಚು ತಡವಾದರೆ, ಕಣ್ಣುಗಳು ಶುಷ್ಕವಾಗಿ ಉಪಯೋಗಕ್ಕೆ ಬಾರವು. ಮೂರ್ತಿಯ ಸಾವು ಗಮನಕ್ಕೆ ಬರುವುದರಲ್ಲಿ ಕನಿಷ್ಠ ಮೂರು ಗಂಟೆಗಳಷ್ಟಾದರೂ ತಡವಾಗಿತ್ತು. ಹಾಗಾಗಿ,ಅವನ ಕಣ್ಣುಗಳನ್ನೂ ಪಡೆಯಲಾಗಲಿಲ್ಲ. ಅಷ್ಟೇಕೆ ಅವನು ಹಂಬಲಿಸಿದ ಆ ಅಂತಿಮ ವಂದನಾರ್ಪಣೆಯ ಅವಕಾಶವೂ ಅವನಿಗೆ ದೊರೆಯಲಿಲ್ಲ. ಇದನ್ನೆಲ್ಲಾ ಕಂಡಾಗ, ಅವನು ಹೇಳುತ್ತಿದ್ದಂತೆ ನಾವೆಲ್ಲಾ ಆರಾಧಿಸುವ ದೇವರು ಇಲ್ಲವೇ ಇಲ್ಲವೇನೋ " ಎಂದು ರಾವ್ ಉದ್ಗರಿಸಿದಾಗ ಮಿಲಿಂದನಿಗೆ ಅವರ ಸಂತಾಪದ ಆಳದ ಪರಿಚಯವಾಗಿತ್ತು.

ಕಡು ಆಸ್ತೀಕರಾದ ರಾವ್, ದೇವರ ಅಸ್ತಿತ್ವವನ್ನೇ ಪ್ರಶ್ನಿಸುವಂತೆ ಹೇಳಿದ್ದು ಅವರು ಎಷ್ಟು ನೊಂದಿದ್ದರೆಂಬುದಕ್ಕೆ ಸಾಕ್ಷಿಯಾಗಿತ್ತು. ಕಟ್ಟಾ ನಾಸ್ತಿಕರಾಗಿದ್ದ ಮೂರ್ತಿ ಮತ್ತು ಅಷ್ಟೇ ಆಸ್ತಿಕರಾಗಿದ್ದ ರಾವ್ ರ ಸ್ನೇಹ ಬಹಳಷ್ಟು ಜನರಿಗೆ ಕುತೂಹಲ ಮೂಡಿಸಿತ್ತು. ದೈಹಿಕವಾಗಿಯೂ ಅವರು ಭಿನ್ನವಾಗಿದ್ದರು. ತೆಳು ನೀಳ ದೇಹದ ಮೂರ್ತಿ ಮತ್ತು ಸ್ಥೂಲ ವಾಮನರೂಪಿಯಾದ ರಾವ್ ರವರು ಆಪ್ತರಲ್ಲಿ "ಲಾರೆಲ್ ಮತ್ತು ಹಾರ್ಡಿ" ಎಂದೇ ಪ್ರಸಿದ್ಧರಾಗಿದ್ದರು. ಮಿಲಿಂದ್ ಮತ್ತು ರಾವ್ ಇಬ್ಬರಿಗೂ ನಿದ್ರೆ ಬಾರದೆ , ಬೆಳಿಗ್ಗೆ ಎದ್ದಾಗ ಎಂಟು ಗಂಟೆಯಾಗಿತ್ತು. ಮುಖ ತೊಳೆದು ಕಾಫಿ ಕುಡಿದಾದ ಬಳಿಕ, ರಾವ್ ಅವರು, ಮನೆಯಲ್ಲಿನ ಒಂದು ಕೋಣೆಯಲ್ಲಿಯೇ ಮಾಡಿಕೊಂಡಿದ್ದ ತಮ್ಮ ಕಚೇರಿಗೆ ಮಿಲಿಂದನನ್ನು ಕರೆದೊಯ್ದರು.ಕಚೇರಿಯಲ್ಲಿ ಅವನಿಗೆ ಕುರ್ಚಿಯೊಂದರಲ್ಲಿ ಕೂಡಲು ಹೇಳಿ, ಅಲ್ಲಿದ್ದ ಒಂದು ಸ್ಟೀಲ್ ಬೀರುವಿನಿಂದ ಒಂದು ಪ್ಯಾಕೆಟ್ ಹೊರತೆಗೆದರು.

"ಮಿಲಿಂದ್, ನಿನಗೆ ಕೆಲವು ವಿಷಯ ಹೇಳುವುದಿತ್ತು. ಕಳೆದ ಸಲ ನೀನು ಮೂರ್ತಿಯವರನ್ನು ಭೇಟಿ ಮಾಡಿದ್ದು ಅಕಸ್ಮಿಕವಾಗಿ ಅಲ್ಲ ಎಂದರೆ ನಿನಗೆ ಆಶ್ಚರ್ಯವಾಗಬಹುದಲ್ಲವೇ ? ನಿನ್ನನ್ನು ಇಲ್ಲಿಗೆ ಕರೆಸಿಕೊಂಡದ್ದು ನಾನೇ ಎಂಬುದಂತೂ ನಿನಗೆ ತಿಳಿದೇ ಇದೆ. ಹಾಗೆ ನಿನ್ನನ್ನು ಇಲ್ಲಿಗೆ ಕರೆಯಲು ಹೇಳಿದ್ದು ಮೂರ್ತೀನೇ. ನಿನ್ನ ಬಗ್ಗೆ ಆಗಾಗ ನನ್ನನ್ನು ವಿಚಾರಿಸಿ ತಿಳಿದುಕೊಳ್ಳುತ್ತಿದ್ದನಷ್ಟೇ ಅಲ್ಲದೆ ಪಿ.ಎಚ್. ಡಿ ಯಲ್ಲಿ ನಿನ್ನ ಗೈಡ್ ಆದ ಮೂರ್ತಿಯವರ ಗೆಳೆಯ ರಾಜೇಂದ್ರ ಪ್ರಸಾದ್ ಮೂಲಕವೂ ತಿಳಿದುಕೊಂಡಿದ್ದರು. ಯಾವ ಕಾರಣಕ್ಕೋ ಅವರಾಗಿಯೇ ನಿನ್ನನ್ನು ಕರೆಸಿಕೊಂಡಿದ್ದೆಂದು ನಿನಗೆ ತಿಳಿಯಬಾರದೆಂದು ನನಗೆ ಮೊದಲೇ ಹೇಳಿದ್ದರು. ಇದಕ್ಕಿಂತಲೂ ನಿನಗೆ ಅಚ್ಚರಿ ಮೂಡಿಸಬಹುದಾದ ವಿಷಯವೆಂದರೆ, ಅವರ ನಿಧನಾನಂತರ ನಿನಗೆ ತಲುಪಿಸಲು ನನ್ನಲ್ಲಿ ಕೆಲವು ಸಿ.ಡಿ.ಗಳನ್ನು ಕೊಟ್ಟಿದ್ದರು. ತೆಗೆದುಕೋ " ಎಂದು ಹೇಳಿ ತಮ್ಮ ಕೈಲಿದ್ದ ಪ್ಯಾಕೆಟ್ಟನ್ನು ಅವನಿಗಿತ್ತರು.

ಮಿಲಿಂದ್ ಆಶ್ಚರ್ಯದಿಂದ, "ನನಗೆ ಕೊಟ್ಟಿದ್ದಾರೆಯೇ ? ಈ ಸಿ.ಡಿ ಗಳಲ್ಲೇನಿದೆ ಮಾಮಾ ?" ಎಂದು ಕೇಳಿದ.
"ಅದರಲ್ಲೇನಿದೆಯೆಂದು ನನಗೆ ತಿಳಿಯದು. ಅವನ ಚರಮದಿನವನ್ನು ಮೊದಲೇ ಅರಿತಿದ್ದ ಎಂದು ಕಾಣುತ್ತದೆ. ನಿನ್ನನ್ನು ಇಲ್ಲಿಗೆ ಕರೆಸಿಕೊಳ್ಳುವ ಒಂದು ದಿನ ಮೊದಲು ನನ್ನ ಬಳಿ ಬಂದು, ಈ ಸಿ.ಡಿ ಗಳಲ್ಲಿ ಬಹಳ ಮಹತ್ವದ ದಾಖಲೆಗಳಿವೆಯೆಂದೂ, ಒಂದು ವೇಳೆ ತನಗೇನಾದರೂ ಅಪಾಯ ಸಂಭವಿಸಿದರೆ ಅದನ್ನು ನಿನಗೆ ಕೊಡಬೇಕೆಂದೂ ತಿಳಿಸಿದ್ದ. ಅವನು ಇದ್ದಕ್ಕಿದ್ದ ಹಾಗೇ ತನಗೆ ಅಪಾಯ ಸಂಭವಿಸಿದರೆ ಎಂದಾಗಲೇ ನಾನು ಊಹಿಸಬೇಕಾಗಿತ್ತು ಅವನಿಗೆ ತನ್ನ ಅಂತಿಮ ದಿನದ ಬಗ್ಗೆ ತಿಳಿದಿತ್ತೆಂದು. ಆದರೆ ಅವನಂತಹ ವಿಖ್ಯಾತ ಸಂಶೋಧಕರಿಗೆ ತಮ್ಮ ಸುರಕ್ಷಿತೆಯ ಬಗ್ಗೆ ಅನುಮಾನಗಳಿರುವುದು ಸಹಜವಾದುದ್ದರಿಂದ ಹಾಗೆ ಹೇಳಿರಬೇಕೆಂದು ನಾನು ಅದಕ್ಕೆ ಹೆಚ್ಚು ಮಹತ್ವ ಕೊಡಲಿಲ್ಲ. ಅದು ಹೇಗೇ ಇರಲಿ ಈ ಸಿ.ಡಿ ಗಳಲ್ಲಿರುವ ಮಹತ್ವದ ದಾಖಲೆಗಳನ್ನು ಅರ್ಥಮಾಡಿಕೊಂಡು ಅವನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ನಿನ್ನಲ್ಲಿದೆ ಎಂದು ಮನನ ಮಾಡಿಕೊಂಡೇ ಅವುಗಳನ್ನು ನಿನಗೆ ಕೊಡುತ್ತಿದ್ದೇನೆ ಎಂದು ತಿಳಿಸಿದ್ದ" ಎಂದು ರಾವ್ ಹೇಳಿದರು.

"ಮಾಮಾ, ನಿಮ್ಮ ಕಂಪ್ಯೂಟರ್ ಬಳಸಬಹುದೇ" ಎಂದು ಔಪಚಾರಿಕವಾಗಿ ಕೇಳಿ, ಅವರು ಸಮ್ಮತಿಸುತ್ತಿದ್ದಂತೆ, ಅವರ ಕಚೇರಿಯಲ್ಲಿದ್ದ ಕಂಪ್ಯೂಟರ್ ನಲ್ಲಿ ಮೊದಲನೆಯ ಸಿ.ಡಿ ಯನ್ನು ಹಾಕಿದ. ಸಿ.ಡಿ ತೆರೆದುಕೊಂಡಾಗ, ಪಾಸ್ ವರ್ಡ್ ನಮೂದಿಸಬೇಕೆಂದು ಕಂಪ್ಯೂಟರ್ ಪರದೆಯ ಮೇಲೆ ಕಾಣಿಸಿತು.

"ಓಹ್, ಪಾಸ್ ವರ್ಡ್ ಬಗ್ಗೆ ಮೂರ್ತಿಯವರೇನಾದರೂ ಹೇಳಿದ್ದರೇ ಮಾಮಾ ?" ಎಂದು ರಾವ್ ಅವರನ್ನು ಕೇಳಿದ.
"ಓ, ಮರೆತೇ ಹೋಗಿತ್ತು. ಪಾಸ್ ವರ್ಡ್ ಹೇಳುತ್ತೇನೆ. ಪ್ರತಿಯೊಂದು ಸಿ.ಡಿ ಗೂ ಹದಿನಾರು ಅಂಕೆಗಳ ಪಾಸ್ ವರ್ಡ್ ಇದೆ. ಮೊದಲನೆಯ ಸಿ.ಡಿ ಯ ಪಾಸ್ ವರ್ಡ್ ಹೇಳುತ್ತೇನೆ. ಎಂಟರ್ ಮಾಡು" ಎಂದರು. ಅವರು ಯಾವ ಚೀಟಿಯನ್ನೂ ಕೈಗೆ ತೆಗೆದುಕೊಳ್ಳದೇ ಇದ್ದುದನ್ನು ಗಮನಿಸಿದ ಮಿಲಿಂದ್,
" ಮಾಮಾ, ಇಷ್ಟು ದೊಡ್ಡ ಸಂಖ್ಯೆಯನ್ನು ಕೇವಲ ನೆನಪಿನಿಂದ ಹೇಳುತ್ತೀರಾ?" ಎಂದು ಅಚ್ಚರಿಯಿಂದ ಕೇಳಿದ.
"ಹದಿನಾರು ಅಂಕೆಗಳ ಸಂಖ್ಯೆಯಾದರೂ, ನೆನಪಿನಲ್ಲಿಟ್ಟುಕೊಳ್ಳಲು ಸುಲಭವಾಗಿರುವಂತೆ ರಚಿಸಬಹುದಲ್ಲವೇ. ಉದಾಹರಣೆಗೆ, ೦೧೦೨೦೩೦೪೦೫೦೬೦೭೦೮"
"ಓಹ್, ಹಾಗೇನಾ, ಹೇಳಿ" ಎಂದು ಅವನು ಕೇಳಿದಕೂಡಲೇ,
"ಮೊದಲನೆ ಸಿ.ಡಿ ಯ ಪಾಸ್ ವರ್ಡ್, ೨೨೧೨೧೯೫೨೦೨೦೬೧೯೫೩
" ಅರೆ ಮಾಮಾ, ನನ್ನ ಕಾಲೆಳೆಯುತ್ತಿದ್ದೀರಾ? ನೆನೆಪಿನಲ್ಲಿಟ್ಟುಕೊಳ್ಳಲು ಸುಲಭವಾದಂತಹುದು ಎಂದು ಹೇಳಿದಿರಿ. ಈ ಅಂಕೆಗಳನ್ನು ನೆನೆಪಿನಲ್ಲಿಟ್ಟುಕೊಳ್ಳಲು ಯಾವ ತರ್ಕವಿದೆ ?" ಎಂದು ಅವನು ಅಚ್ಚರಿಯಿಂದ ಕೇಳಿದ.
"ಅಷ್ಟೇ ಅಲ್ಲ, ಆರು ಸಿ.ಡಿ. ಗಳಿಗೂ ಪ್ರತ್ಯೇಕ ಪಾಸ್ ವರ್ಡ್ ಗಳಿವೆ. ಅವೆಲ್ಲವೂ ಹದಿನಾರು ಅಂಕೆಗಳ ಸಂಖ್ಯೆಗಳು. ಅವೆಲ್ಲವನ್ನೂ ಕೇವಲ ನೆನಪಿನಿಂದಲೇ ಹೇಳಬಲ್ಲೆ" ಎಂದಾಗ,
ಮಿಲಿಂದನ ಮುಖದ ಮೇಲೆ ಮೂಡಿದ ಅತೀವ ವಿಸ್ಮಯವನ್ನು ಕಂಡು, ನಸುನಗುತ್ತಾ,
"ಇದರಲ್ಲಿ ಏನೂ ಕಷ್ಟವಿಲ್ಲ. ಮೊದಲನೆ ಸಿ.ಡಿ ಯ ಪಾಸ್ ವರ್ಡ್ ಗೆ ಮೂರ್ತಿಯ ಜನ್ಮದಿನಾಂಕ ಮತ್ತು ನನ್ನ ಜನ್ಮ ದಿನಾಂಕ ಸೇರಿಸಿದರೆ ಆಯಿತು. ಎರಡನೆಯ ಸಿ.ಡಿ ಗೆ, ಮೊದಲ ಪಾಸ್ ವರ್ಡ್ ನ ಮೊದಲೆರಡು ಸಂಖ್ಯೆಗಳನ್ನು ತೆಗೆದು ಕೊನೆಗೆ ಸೇರಿಸೋದಷ್ಟೆ. ಅಂದರೆ, ಎರಡನೆಯ ಸಿ.ಡಿ ಯ ಪಾಸ್ ವರ್ಡ್ ೧೨೧೯೫೨೦೨೦೬೧೯೫೩೨೨. ಹಾಗೆಯೇ ಮೂರನೇ ಸಿ.ಡಿ ಗೆ ಎರಡನೆಯ ಸಿ.ಡಿಯ ಮೊದಲೆರಡು ಅಂಕೆಗಳನ್ನು ಕೊನೆಗೆ ಸೇರಿಸುವುದು. ನಾಲ್ಕು, ಐದು ಮತ್ತು ಆರನೇ ಸಿ.ಡಿಗಳಿಗೂ ಇದೇ ಕ್ರಮ ಅನುಸರಿಸಿದರಾಯಿತು" ಎಂದು ವಿವರಿಸಿದರು.
ಪಾಸ್ ವರ್ಡ್ ನಮೂದಿಸಿದ ಬಳಿಕ ಮೊದಲ ಸಿ.ಡಿ. ತೆರೆದುಕೊಂಡಿತು. ಅದರ ಮೊದಲ ಪುಟದಲ್ಲಿ ಆ ಸಿ.ಡಿಯಲ್ಲಿರುವ ವಿಷಯಗಳ ಪರಿವಿಡಿಯಿತ್ತು. ಮೊದಲಲ್ಲಿ ಮಿಲಿಂದನಿಗೊಂದು ಪತ್ರ ಎಂದಿತ್ತು.
ಮಿಲಿಂದ್ ಅದನ್ನು ತೆರೆದಾಗ, ಮೂರ್ತಿಯವರ ಪತ್ರ ಕಂಪ್ಯೂಟರ್ ಪರದೆಯ ಮೇಲೆ ಮೂಡಿತು.

"ಪ್ರಿಯ ಮಿಲಿಂದ್,
ಈ ಪತ್ರ ಈಗ ನೀನು ಓದುತ್ತಿದ್ದೀಯೆಂದಾದರೆ, ಈಗಾಗಲೇ ನಿಮ್ಮೆಲ್ಲರಿಗೆ ನಾನು ಅಂತಿಮ ವಿದಾಯ ಹೇಳಿದ್ದೇನೆ ಎಂದೇ ತಾನೇ ? ಮುರಳಿ ನಿನಗಾಗಲೇ ಇದರ ಬಗ್ಗೆ ತಿಳಿಸಿರಬಹುದು. ನಮ್ಮ ಅಂತಿಮ ದಿನವನ್ನು ನಿರ್ಧರಿಸುವ ನನ್ನ ಸಂಶೋಧನೆಯ ಗುರಿ ನಾನು ತಲುಪಿದಾಗ, ನಮ್ಮ ಅಂತಿಮ ದಿನವನ್ನು ಹತ್ತು ದಿನಗಳ ಹೆಚ್ಚು ಕಡಿಮೆ ಅಂತರದಲ್ಲಿ ನಿರ್ಧರಿಸಬಹುದೆಂದು ತಿಳಿದುಕೊಂಡೆ. ಕೆಲವು ಕಾರಣಗಳಿಗಾಗಿ ನನ್ನ ಸಂಶೋಧನೆಯನ್ನು ತಕ್ಷಣವೇ ಬಹಿರಂಗ ಪಡಿಸುವುದು ಉಚಿತವಲ್ಲ ಎಂದೆನಿಸಿತು. ಇಂತಹ ಸಂದರ್ಭದಲ್ಲಿ ಯಾರಿಗಾದರೂ ಉಂಟಾಗಬಹುದಾದಂತೆ ನನಗೂ ನನ್ನ ಅಂತಿಮ ದಿನವನ್ನು ತಿಳಿಯುವ ಬಯಕೆಯಾಯಿತು. ಅದೇನೂ ಅಷ್ಟು ಕಷ್ಟವಾಗಿರಲಿಲ್ಲ. ನನ್ನ ಸದ್ಯದ ದೈಹಿಕ ಆರೋಗ್ಯ ಉತ್ತಮವಾಗಿಯೇ ಇದ್ದುದರಿಂದ ಇನ್ನೂ ಹತ್ತಿಪ್ಪತ್ತು ವರ್ಷಗಳಷ್ಟು ಜೀವನವನ್ನು ನೀರೀಕ್ಷಿಸಬಹುದಾಗಿತ್ತು. ಅಂತಹುದರಲ್ಲಿ, ಅನತಿ ಸಮಯದಲ್ಲಿಯೇ ನನ್ನ ಅವಸಾನವಾಗಲಿದೆಯೆಂದು ತಿಳಿದಾಗ ಸ್ವಲ್ಪ ಸಮಯ ನಾನು ದಿಗ್ಮೂಢನಾದೆನಾದರೂ, ಅದರಿಂದ ಹೊರಬಂದು ವಾಸ್ತವವನ್ನು ಒಪ್ಪಿಕೊಳ್ಳಲು ನನಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಮೊತ್ತಮೊದಲಾಗಿ ನಾನು ಮಾಡಿದ ಕೆಲಸವೆಂದರೆ, ನನ್ನ ಲಿವಿಂಗ್ ವಿಲ್ ಬರೆದಿಟ್ಟು, ಅದರ ಲಿಖಿತ ದಾಖಲೆಯ ಪ್ರತಿಗಳನ್ನು ನನ್ನ ಪತ್ನಿ ಮತ್ತು ಮುರಳಿಗೆ ಕೊಟ್ಟಿದ್ದೆ. ನಾನು ಹೀಗೆ ಮಾಡಿದ್ದು ಅವರಿಬ್ಬರಿಗೂ ಅಚ್ಚರಿ ಮೂಡಿಸಿದರೂ, ಲಿವಿಂಗ್ ವಿಲ್ ಅರ್ಥಪೂರ್ಣವಾಗಲು ನಮ್ಮ ಆರೋಗ್ಯ ಸರಿಯಾಗಿರುವಾಗಲೇ ದಾಖಲಿಸಬೇಕೆಂಬುದನ್ನು ಅವರಿಗೆ ಮನಗಾಣಿಸಿ ಅವರನ್ನು ಒಪ್ಪಿಸಿದೆ. ನನಗೆ ತಿಳಿದುಬಂದಂತೆ ನನ್ನ ಅವಸಾನದ ದಿನ ಇದೇ ವರ್ಷದ ಜೂನ್ ೨೨ ನೇ ದಿನಾಂಕವಾಗಿತ್ತು. ಅರ್ಥಾತ್ ನನ್ನ ಸಾವು, ಜೂನ್ ೧೨ ರಿಂದ ಜುಲೈ ೧ ರೊಳಗೆ ಒಳಗೆ ಸಂಭವಿಸುವ ಸೂಚನೆಯಿತ್ತು. ಮೇ ತಿಂಗಳ ೨೮ ರಂದು ನನ್ನ ಭಾಷಣವನ್ನು ಆಯೋಜಿಸಲಾಗಿತ್ತು. ಅಂದಿನ ಭಾಷಣಕ್ಕೆ ಉದ್ದೇಶ ಪೂರ್ವಕವಾಗಿಯೇ " ಹಂಸ ಹಾಡುವ ಹೊತ್ತು " ವಿಷಯವನ್ನು ಆರಿಸಿಕೊಂಡೆ. ನಿನ್ನನ್ನು ಆ ದಿನ ಭಾಷಣಕ್ಕೆ ಕರೆದುಕೊಂಡುಬರಲೂ ನಾನೇ ಹೇಳಿದ್ದೆ. ಒಂದುವೇಳೆ ನಿನಗೆ ಬರಲಾಗದಿದ್ದರೆ, ಈ ಸಿ.ಡಿಯಂತೂ ಇದ್ದೇ ಇತ್ತು. ನಾನು ಅಂದಿನ ನನ್ನ ಭಾಷಣದಲ್ಲಿ ನಮ್ಮ ಅಂತಿಮ ದಿನವನ್ನು ತಿಳಿಯುವ ಸಾಧ್ಯತೆಯ ಬಗ್ಗೆ ಸೂಚಿಸಿ, ಅದಕ್ಕೆ ಸಭೆಯಿಂದ ಮತ್ತು ನಂತರ ಪತ್ರಿಕೆಗಳಲ್ಲಿ ಬರಬಹುದಾದ ಇದರ ಕುರಿತ ಚರ್ಚೆಯನ್ನು ಗಮನಿಸುವುದು ನನ್ನ ಉದ್ದೇಶವಾಗಿತ್ತು. ಯಾವುದೇ ಸಂಶೋಧನೆಯನ್ನು ಮಾಡಿದ ಕೂಡಲೇ ಅದನ್ನು ಪ್ರಕಟಿಸ ಬೇಕೆಂಬ ಬಯಕೆ ಸಹಜವಾದರೂ, ಹಾಗೆ ಮಾಡಲೇ ಬೇಕೇ, ಮಾಡುವ ಮುನ್ನ ಸಮಾಜದ ಮೇಲೆ ಅದು ಬೀರಬಹುದಾದ ಪರಿಣಾಮವನ್ನು ಲಕ್ಷಿಸಬೇಡವೇ ಎಂಬ ಸಂಶಯಗಳು ನನ್ನನ್ನು ಕಾಡುತ್ತಿದ್ದುದರಿಂದ ಸಮಾಜದ ಪ್ರತಿಕ್ರಿಯೆ ನನಗೆ ಬಹಳ ಮುಖ್ಯವಾಗಿತ್ತು. ಆ ದಿನದ ಭಾಷಣಕ್ಕೆ ಬಂದ ಪ್ರತಿಕ್ರಿಯೆಗಳನ್ನು ಮತ್ತು ಮುಂದಿನ ಕೆಲವು ದಿನಗಳಲ್ಲಿ ಪತ್ರಿಕೆಗಳಲ್ಲಿ ಬಂದ ಪ್ರತಿಕ್ರಿಯೆಗಳನ್ನು ನಾನು ಓದಿದಾಗ ಸದ್ಯದಲ್ಲಿ ನಮ್ಮ ಸಮಾಜಕ್ಕೆ ಇದರ ಅವಶ್ಯಕತೆಯಿಲ್ಲ ಎನಿಸಿತು. ಪತ್ರಿಕೆಗಳಲ್ಲಿ ಒಬ್ಬ ಓದುಗರು ಬರೆದಿದ್ದಂತೆ, ಯಾವುದೇ ವ್ಯಕ್ತಿಗೆ ತನ್ನ ಅವಸಾನದ ಸಮಯ ಮುಂಚಿತವಾಗಿಯೇ ತಿಳಿದಾಗ ಅವನ ಜೀವನದ ಮೇಲೆ ವಿಪರೀತ ಪರಿಣಾಮವನ್ನೂ ಉಂಟುಮಾಡಬಹುದು. ಅವನು ಬಯಸಿದ್ದಕ್ಕಿಂತ ಹೆಚ್ಚಿನ ಆಯುರ್ಮಾನವಿದ್ದಲ್ಲಿ ಹೆಚ್ಚು ಹಾನಿಯಾಗಲಿಕ್ಕಿಲ್ಲ. ಆದರೆ ಅವನ ಅಂತಿಮ ದಿನ ಅವನ ನೀರೀಕ್ಷೆಗಿಂತಲೂ ಬಹಳಷ್ಟು ಮುಂಚಿತವಾಗಿಯೇ ಬರಲಿದೆಯೆಂದೇನಾದರೂ ತಿಳಿದುಬಂದಲ್ಲಿ, ಅವನ ಜೀವನಾಸಕ್ತಿಯನ್ನು ಕುಂದಿಸಿ ಅವನು ಸಾಧಿಸಬಹುದಾದ ಗುರಿಗಳಿಂದ ಅವನನ್ನು ವಿಮುಖನನ್ನಾಗಿ ಮಾಡಬಹುದಲ್ಲದೇ ಅವನ ಮತ್ತು ಅವನನ್ನವಲಂಬಿಸಿದವರ ಜೀವನದ ಮೇಲೂ ಗಾಢ ಪರಿಣಾಮವನ್ನುಂಟು ಮಾಡಬಹುದು ಎಂದು ಬರೆದಿದ್ದರು. ನನಗೂ ಇವರ ಅಭಿಪ್ರಾಯ ಸರಿಯೆನಿಸಿತು. ಆದರೂ, ಎಲ್ಲರಿಗೂ ತಮ್ಮ ಸಂಶೋಧನೆಗಳ ಮೇಲೆ ಅಪಾರ ಅಭಿಮಾನ ಮತ್ತು ವಾತ್ಸಲ್ಯಗಳಿರುವಂತೆ ನನಗೂ ನನ್ನ ಈ ಸಂಶೋಧನೆಯ ಬಗ್ಗೆ ಅಭಿಮಾನವಿದೆ. ಹಾಗಾಗಿಯೇ ನನ್ನ ಸಂಶೋಧನೆಯ ದಾಖಲೆಗಳನ್ನು ನಾಶಪಡಿಸಲು ನನ್ನ ಮನ ಒಪ್ಪುತ್ತಿಲ್ಲ. ಈ ಸಂಬಂಧದಲ್ಲಿ ನಿನ್ನ ಸಹಾಯ ಕೋರುತ್ತಿದ್ದೇನೆ. ನಿನಗಿತ್ತಿರುವ ಸಿ.ಡಿ ಗಳಲ್ಲಿ ನನ್ನ ಸಂಶೋಧನೆಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಅಡಕಮಾಡಿದ್ದೇನೆ. ಈ ದಾಖಲೆಗಳನ್ನು ಅರ್ಥಮಾಡಿಕೊಂಡು ಈ ಸಂಶೋಧನೆಯನ್ನು ಪ್ರಸ್ತುತಪಡಿಸುವ ಮತ್ತು ಪರಿಷ್ಕರಿಸುವ ಯೋಗ್ಯತೆ ನಿನಗೆ ಇದೆಯೆಂದು ನನಗೆ ಭರವಸೆಯಿರುವುದರಿಂದ ಇವನ್ನು ನಿನ್ನ ಸುಪರ್ದಿಗೆ ಒಪ್ಪಿಸಿರುತ್ತೇನೆ. ಈ ಎರಡು ಸಂದರ್ಭಗಳಲ್ಲಿ, ನೀನು ನನ್ನ ಸಂಶೋಧನೆಯನ್ನು ಪ್ರಕಟಿಸಬಹುದು.
೧. ಮುಂದೆ, ಬೇರೆ ಯಾವುದೇ ಸಂಶೋಧಕ ಇದೇ ವಿಷಯದ ಮೇಲೆ ತನ್ನ ಸಂಶೋಧನೆಯನ್ನು ಪ್ರಕಟಿಸಿದಾಗ, ಈ ಸಂಶೋಧನೆಯನ್ನು ಈಗಾಗಲೇ ಮಾಡಲಾಗಿದೆಯೆಂದು ಮನದಟ್ಟು ಮಾಡಲು.
೨. ಮುಂದೆ ಈ ವಿಷಯದ ಕುರಿತಾಗಿ ಬಹಳಷ್ಟು ಚರ್ಚೆಯಾಗಿ ಈ ಸಂಶೋಧನೆಯನ್ನು ಸ್ವೀಕರಿಸುವಂತಹ ಆರೋಗ್ಯಕರ ಸ್ಥಿತಿ ಸಮಾಜದಲ್ಲಿ ಕಂಡುಬಂದಾಗ.

ಅಲ್ಲಿಯವರೆಗೂ ಈ ಸಂಶೋಧನೆ "ಶೈತ್ಯಾಗಾರ" ದಲ್ಲಿರುವುದು ಒಳಿತೆಂದು ನನ್ನ ಭಾವನೆ. ಈ ವಿಷಯದಲ್ಲಿ ಕಾನೂನಿನ ತೊಡಕೇನಾದರೂ ಕಂಡುಬಂದರೆ, ನೀನು ಮುರಳಿಯ ಸಹಾಯ ಪಡೆಯಬಹುದು. ಆರನೇ ಸಿ.ಡಿ ಯಲ್ಲಿ ನಿನಗೆ ಇನ್ನೊಂದು ಪತ್ರವೂ ಇದೆ. ಅದರಲ್ಲಿ ಸದ್ಯಕ್ಕೆ ನಿನಗೆ ತಿಳಿಸುವಂತಹುದೇನೂ ಇಲ್ಲ. ಮುಂದೊಂದು ದಿನ ನನ್ನ ಸಂಶೋಧನೆಯನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಪ್ರಕಟಮಾಡುವ ಪ್ರಮೇಯ ಬಂದಲ್ಲಿ ಮಾತ್ರ ನೀನು ಆ ಪತ್ರವನ್ನು ಓದಬೇಕು. ಅಲ್ಲಿಯವರೆಗೂ ನೀನು ಆ ಪತ್ರವನ್ನು ಓದುವ ಅಗತ್ಯವಿಲ್ಲ.
ನಿನಗೆ ನಿನ್ನ ಮುಂದಿನ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಕೋರುತ್ತಾ,
ನಿನ್ನ ಹಿರಿಯ ಮಿತ್ರ,
ಎಸ್. ಎಮ್. ಮೂರ್ತಿ.

ಮೂರ್ತಿಯವರ ಪತ್ರವನ್ನು ಓದಿಯಾದ ಮೇಲೆ, ಮಿಲಿಂದ್ ಅದನ್ನು ರಾವ್ ರವರಿಗೂ ತೋರಿಸಿದ.
"ಮಾಮಾ, ನನ್ನ ಯೋಗ್ಯತೆ ಮೀರಿದ ಜವಾಬ್ದಾರಿಯನ್ನು ನನಗೊಪ್ಪಿಸಿದ್ದಾರೆ ಎನಿಸುತ್ತದೆ" ಎಂದ ಮಿಲಿಂದ್.
"ಮೂರ್ತಿ ನಿನ್ನ ಯೋಗ್ಯತೆಯನ್ನರಿತೇ ಈ ಜವಾಬ್ದಾರಿಯನ್ನು ಒಪ್ಪಿಸಿದ್ದಾನೆ. ಅವನ ನಿರ್ಧಾರದಲ್ಲಿ ನನಗಂತೂ ಅಚಲವಾದ ವಿಶ್ವಾಸವಿದೆ" ಎಂದರು ರಾವ್.
"ಮಾಮಾ, ನೀವು ಮೂರ್ತಿಯವರಿಗೆ ಆಪ್ತ ಸ್ನೇಹಿತರಾಗಿದ್ದಿರಿ. ಅವರು ಮಾಡುತ್ತಿದ್ದ ಸಂಶೋಧನೆಯ ಬಗ್ಗೆ ನಿಮಗೆ ತಿಳಿದಿತ್ತೇ ? ಅವರ ಸಂಶೋಧನೆಯನ್ನು ಪ್ರಕಟಪಡಿಸುವ ಬಗ್ಗೆ ನಿಮ್ಮ ಅಭಿಪ್ರಾಯವನ್ನೂ ಕೇಳಿದ್ದರೇ ?"
ಸ್ವಲ್ಪ ಹೊತ್ತು ಅದೇನನ್ನೋ ಜ್ಞಾಪಿಸಿಕೊಳ್ಳುತ್ತಾ, " ಅವನ ಸಂಶೋಧನೆಯ ಬಗ್ಗೆ ನನಗೇನೂ ಹೇಳಿರಲಿಲ್ಲ. ಅದನ್ನು ಪ್ರಕಟಪಡಿಸುವ ಬಗ್ಗೆಯೂ ನೇರವಾಗಿ ನನ್ನ ಅಭಿಪ್ರಾಯವನ್ನು ಕೇಳಿರಲಿಲ್ಲ. ಸುಮಾರು ಒಂದು ವರ್ಷದ ಹಿಂದೆ ನಾವು ಯಾವುದೋ ಚರ್ಚೆಯಲ್ಲಿ ತೊಡಗಿದ್ದಾಗ, ಯಾವುದೋ ಸಂದರ್ಭದಲ್ಲಿ, ನಮ್ಮ ಅಂತಿಮ ದಿನದ ಬಗ್ಗೆ ನಾವು ತಿಳಿಯಬಹುದಾದರೆ ಹೇಗೆ ಎಂದು ಕೇಳಿದ್ದ.......ನನಗಂತೂ ಅದು ತಿಳಿಯದೇ ಇದ್ದರೇನೇ ಒಳ್ಳೆಯದು ಎಂದು ನಾನು ಹೇಳಿದ್ದೆ.......ಮೊನ್ನೆ ಅವನ ಭಾಷಣವನ್ನು ಕೇಳುತ್ತಿರುವಾಗಲೇ ನನಗೆ ಇದು ಜ್ಞಾಪಕಕ್ಕೆ ಬಂತು.." ಎಂದರು.

ಕಂಪ್ಯೂಟರ್ ನ್ನು ಆಫ್ ಮಾಡಿ, ರಾವ್ ಮತ್ತು ಮಿಲಿಂದ್ ಡ್ರಾಯಿಂಗ್ ರೂಮಿಗೆ ಬಂದು ಕುಳಿತರು. ಆ ದಿನದ ಪತ್ರಿಕೆಗಳಲ್ಲಿ, ಮುಖಪುಟದ ಕೆಳಗಿನ ಭಾಗದಲ್ಲಿ ಮೂರ್ತಿಯವರ ಭಾವಚಿತ್ರದೊಂದಿಗೆ ಅವರ ನಿಧನದ ಸುದ್ದಿಯೂ ಪ್ರಕಟವಾಗಿತ್ತು. "ಡಬಲ್ ಡಾಕ್ಟರ್ ಇನ್ನಿಲ್ಲ" ಎಂದು ಒಂದು ಪತ್ರಿಕೆ ಸಾರಿದ್ದರೆ, ಇನ್ನೊಂದು ಪತ್ರಿಕೆ "ಹಂಸಗೀತೆ ಹಾಡಿದ ಡಾ||ಮೂರ್ತಿ" ಎಂದು ದಪ್ಪಕ್ಷರಗಳಲ್ಲಿ ಪ್ರಕಟಿಸಿತ್ತು.
"ಈ ಚಿತ್ರ ನೋಡು, ಎಷ್ಟು ಸಮಂಜಸವಾಗಿದೆ" ಎಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಚಿತ್ರವೊಂದನ್ನು ರಾವ್ ಮಿಲಿಂದನಿಗೆ ತೋರಿಸಿದರು. ಆ ಚಿತ್ರದಲ್ಲಿ ಬಲಬದಿಯ ಅರ್ಧಭಾಗದಲ್ಲಿ ಮೂರ್ತಿಯವರು ಭಕ್ತಿಯಿಂದ ಕೈಮುಗಿಯುತ್ತಿರುವಂತೆ ಕಾಣುತ್ತಿದ್ದ ಒಂದು ಭಾವಚಿತ್ರವಿತ್ತು. ಎಡಬದಿಯ ಅರ್ಧ ಭಾಗದಲ್ಲಿ ಕರ್ನಾಟಕದ ಭೂಪಟದ ರೇಖಾಚಿತ್ರ ಮತ್ತು ಅದರ ಮಧ್ಯದಲ್ಲಿ ನಮಸ್ಕರಿಸುತ್ತಿರುವ ಎರಡು ಕೈಗಳು ಮತ್ತು ಹಿನ್ನೆಲೆಯಲ್ಲಿ ಅಸ್ಪಷ್ಟವಾಗಿ ಕಾಣುತ್ತಿರುವ ಜನಸಮೂಹ.
"ಮೂರ್ತಿಯ ಭಾವಚಿತ್ರದ ವಿಶೇಷತೆ ನಿನಗೆ ಗೊತ್ತಾಯಿತೆ ?" ಎಂದು ರಾವ್ ಕೇಳಿದರು.
ಕರಜೋಡಿಸಿ ನಮಸ್ಕರಿಸುತ್ತಿರುವ ಭಾವಚಿತ್ರದಲ್ಲಿ ವಿಶೇಷತೆಯೇನೂ ಅವನಿಗೆ ಕಂಡಿರಲಿಲ್ಲ.
"ಈ ಚಿತ್ರ ಅವನ ವ್ಯಕ್ತಿತ್ವದ ಒಂದು ವೈಶಿಷ್ಠ್ಯತೆಯನ್ನು ಪ್ರತಿನಿಧಿಸುತ್ತಿದೆ. ಈ ಚಿತ್ರದಲ್ಲಿ ಅವನು ಬಹಳ ಭಕ್ತಿಯಿಂದ ಕೈಮುಗಿಯುತ್ತಿರುವಂತೆ ಕಾಣುತ್ತದೆ. ಅವನನ್ನು ಬಲ್ಲ ಎಲ್ಲರಿಗೂ ಅವನೊಬ್ಬ ನಾಸ್ತಿಕನೆಂದು ತಿಳಿದೇ ಇದೆ. ಈ ಚಿತ್ರದಲ್ಲಿ ಅವನ ಮುಖದ ಮೇಲೆ ತೋರುವ ಭಕ್ತಿಭಾವ ನಿಜವಾದದ್ದಾದರೂ,ಅದು ಅವನು ಯಾವುದೋ ದೇವಾಲಯದಲ್ಲೋ ಅಥವಾ ಯಾವುದೋ ಪೂಜೆಯ ವೇಳೆಗೋ ಕೈಮುಗಿದದ್ದಲ್ಲ. ಕರ್ನಾಟಕದ ವಿಚಾರವಾದಿಗಳ ಸಂಘವೇರ್ಪಡಿಸಿದ್ದ ಸಮಾವೇಶವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂರ್ತಿ, ತನ್ನ ಭಾಷಣವನ್ನು ಆರಂಭಿಸುವಾಗ ಹೀಗೆ ಭಕ್ತಿಯಿಂದ ಕೈಮುಗಿದು, "ವಂದಿಸುವುದಾದಿಯಲಿ ಎಚ್ ನರಸಿಂಹಯ್ಯನ..." ಎಂದು ರಾಗವಾಗಿ ಹೇಳಿದಾಗ, ಸಭಿಕರ ಮೆಚ್ಚುಗೆಯ ಕರತಾಡನದಿಂದ ಸಭಾಂಗಣ ಕಂಪಿಸಿತು . ಇದು ಆ ಸಂದರ್ಭದಲ್ಲಿ ತೆಗೆದ ಚಿತ್ರ. ಮರುದಿನ ಸಂಪ್ರದಾಯವಾದಿಗಳಿಂದ ಖಂಡನೆಯೂ ಆಯಿತು. ನೇರವಾಗಿ ಅವನೆಂದೂ ಎಚ್. ಎನ್. ರ ಶಿಷ್ಯನಾಗಿರದಿದ್ದರೂ, ಏಕಲವ್ಯನಂತೆಯೇ ಅವರನ್ನು ಗುರುವಾಗಿ ಸ್ವೀಕರಿಸಿದ್ದ"

ಮುಖಪುಟದಲ್ಲಲ್ಲದೇ ಒಳಪುಟಗಳಲ್ಲಿಯೂ ಮೂರ್ತಿಯವರ ಬಗ್ಗೆ ವಿಸ್ತಾರವಾದ ಲೇಖನಗಳಿದ್ದವು. "ಮೂರ್ತಿಯವರು ತಮ್ಮ ಅಂತ್ಯದ ಬಗ್ಗೆ ತಿಳಿದಿದ್ದರೇ?" ಎಂಬಂತಹ ಸಹಜವಾದ ಸಂಶಯ ವ್ಯಕ್ತಪಡಿಸುವ ಲೇಖನದಿಂದ ಹಿಡಿದು, "ಮೂರ್ತಿಯವರ ಮರಣ-ಆತ್ಮಹತ್ಯೆಯೇ ?" ಎನ್ನುವಂತಹ ಅತಿರೇಕದ ಲೇಖನಗಳೂ ಇದ್ದುವು. ಒಂದು ಪತ್ರಿಕೆಯಂತೂ
"ಮೂರ್ತಿಯವರೇ ಸೂಚಿಸಿರುವಂತೆ ಅವರ ಸಂಶೋಧನೆ ಬಹಳ ಮಹತ್ವವಾದದ್ದರಿಂದ ಆ ಸಂಶೋಧನೆಗೆ ತಡೆ ಒಡ್ಡಲೋಸುಗವೇನಾದರೂ ಅವರ ಹತ್ಯೆಯಾಗಿರಬಹುದೇ" ಎಂಬ ಸಂಶಯವನ್ನು ಹುಟ್ಟುಹಾಕಿತ್ತು.
ಅಂದು ಮಧ್ಯಾಹ್ನವೇ ಮಿಲಿಂದ ಶಿವಮೊಗ್ಗೆಗೆ ಹೊರಟ.
.............................ಮುಂದುವರಿಯವುದು

Comments