ಟಾಪ್ ಟೆನ್ ಮೊಬೈಲ್ ಹಾಡುಗಳು

ಟಾಪ್ ಟೆನ್ ಮೊಬೈಲ್ ಹಾಡುಗಳು

 ಸೆಲ್ಯುಲಾರ್ ಕ್ಷೇತ್ರದಲ್ಲಾದ ಸಂಪರ್ಕ ಸಾಧನೆ

ನಂತರ ಮೊಬೈಲ್ ಬಳಸುವರಲ್ಲಾದ ಬದಲಾವಣೆ

ಈ ವಿಷಯಗಳನ್ನೊಳಗೊಂಡಂತ

ಚಲನಚಿತ್ರಗೀತೆಗಳ ಆಧಾರಿತ

        ಕಾರ್ಯಕ್ರಮಕ್ಕೆ ನಿಮಗಿದೋ ಸ್ವಾಗತ

 

ಇದು ಮೊಬೈಲ್ ಯುಗ. ಯಾವಾಗಲು ರಿಂಗ್ ಟೋನ್ ಗಳದ್ದೆ ರಾಗ.

ಎಲ್ಲೆಲ್ಲು ಮೊಬೈಲ್ ನೋಡಿದಾಗ ನೆನೆಪಾದದ್ದು ಈ ಹಾಡು ಈ ರಾಗ.

 

೧.ಎಲ್ಲೆಲ್ಲಿ ನೋಡಲಿ, ಮೊಬೈಲನ್ನೇ ಕಾಣುವೆ,  

ಕೈಗಳಲಿ ತುಂಬಿರುವೆ, ಸದಾ ಕಿವಿ ಹತ್ತಿರವೆ ಇರುವೆ (ಎರಡು ಕನಸು)

 

ಬರೀ ಕರ ಮತ್ತು ಕಿವಿ ಮಾತ್ರವಲ್ಲ ಮೊಬೈಲ್ ಇರುವ ಜಾಗ

ಎರಡನೆ ಹಾಡು ಕೇಳಿದರೆ ಗೊತ್ತಾಗುವುದು ನಿಮಗೀಗ

 

೨. ಕೊರಳಲ್ಲು ನೀನೆ, ನಡುವಲ್ಲು ನೀನೆ

ಪರ್ಸಲ್ಲು ನೀನೆ, ಜೇಬಲ್ಲು ನೀನೆ (ಬಯಲು ದಾರಿ)

 

ಯುವಜನರಿಗೀಗ ಹಿಡಿದಿದೆ ಮೊಬೈಲ್ ಗೀಳು

ಯಾವಾಗಲು ಮಾತು ಸಂದೇಶಗಳು

ಮೊಬೈಲ್ ಮರೆತು ಬಂದ ಹುಡುಗಿಯದು ಹೀಗಿದೆ ಗೋಳು

 

೩. ಎಂದೆಂದೂ ಮೊಬೈಲ ಮರೆತು ನಾನಿರಲಾರೆ

ಇನ್ನೆಂದು ಅದನು ಅಗಲಿ ನಾನಿರಲಾರೆ

ಒಂದು ಕ್ಷಣ ದೂರಾದರೂ ನಾ ಸಹಿಸಲಾರೆ

ಒಂದು ಕ್ಷಣ ಬಂದಾದರೂ ನಾ ತಾಳಲಾರೆ (ಎರಡು ಕನಸು)

 

ಕೇಳಿದಿರಲ್ಲ ಹುಡುಗಿಯ ಮೊಬೈಲ್ ಅಗಲಿಕೆಯ ವಿರಹ

ಇನ್ನು ಹುಡುಗನ ಅಭಿಮಾನ ನೋಡಿ ಈ ತರಹ

 

೪. ಕ್ಷಣ ಕ್ಷಣವೂ ನನ್ನ ಜೊತೆಯಲೆ ಇರುವೆ

ಜೀವನ ಮಧುರಮಯ ನೀ ಮಾಡಿರುವೆ

ಪ್ರತಿಕ್ಷಣವು ಪ್ರೇಮದ ಸಂದೇಶ ನೀ ತರುವೆ

ಪ್ರತಿದಿನವು ಪ್ರಿಯತಮೆಯ ಚಿತ್ರ ತೋರಿಸುವೆ

ಇಂಪಾದ ಗೀತೆಗಳ ಸ್ವರದಲ್ಲಿ ತೇಲಿಸುವೆ

ಇದ್ದಲ್ಲೇ ಜಗತ್ತಿನ ಸಮಾಚಾರ ನೀ ನೀಡುವೆ

ಈ ನನ್ನ ಹೃದಯದ ಬಡಿತ ನೀನಾಗಿರುವೆ (ಪಲ್ ಪಲ್ ದಿಲ್ ಕೇ ಸಾಥ್-ಬ್ಲಾಕ್ ಮೇಲ್- ಹಿಂದಿ ಚಲನಚಿತ್ರ)

 

ಮುಂದೆ ನಡೆಯಿತು ಒಬ್ಬ ಯಶಸ್ವಿ ಉದ್ಯಮಿ ಜೊತೆ ಮಾತು

ಇಲ್ಲದಿದ್ದರು ಅವರಿಗೆ ಪುರುಸೊತ್ತು, ಆಡಿದರು ಮೊಬೈಲ್ ಬಗ್ಗೆ ಎರಡು ಮಾತು

 

೫. ನೀ ಬಂದು ಕರವ ಸೇರಿದೆ. ಮನಸಿಗೆ ತೃಪ್ತಿ ನೀಡಿದೆ.

ಮಾಡುವ ಕರೆಗಳ ಕ್ಷಣದಲಿ ಜೋಡಿಸಿ, ಶ್ರಮವ ನೀ ಉಳಿಸಿದೆ, ಸಮಯ ನೀ ಉಳಿಸಿದೆ. (ನನ್ನ ನಿನ್ನ ಮನವು ಸೇರಿತು-ಭಾಗ್ಯವಂತರು ಪಲ್ಲವಿ)

 

ನೋಡಿದಿರಲ್ಲ ಉದ್ಯಮಿಯ ವ್ಯಾಪಾರಿ ಮನೋಭಾವನೆ.

ಸಹಜ ಅವರಿಗಿರೋದು ಹಣ, ಶ್ರಮ, ಸಮಯಗಳ ಉಳಿತಾಯದ ಬಗ್ಗೆ ಯೋಚನೆ.

ನಂತರ ಜೊತೆಯಲ್ಲಿದ್ದ ಪ್ರಸಿದ್ಧ ಲೇಖಕಿ ಪತ್ನಿಯನ್ನೂ ಕೇಳಿದ್ದಾಯಿತು

ಮುಂದುವರೆಸಿದರು ಪತಿಯ ಮಾತನ್ನು ಭಾವನೆಗೆ ಒತ್ತು ಕೊಟ್ಟು.

 

ಎಂದು ಜೊತೆಯಲೆ ಬರುವೆ. ನನ್ನ ನೆರಳಿನ ಹಾಗೆ ಇರುವೆ

ನೋವಿನಲೀ, ನಲಿವಿನಲೀ, ನೀ ಭಾಗಿಯಾಗುತಲಿರುವೆ

ನೀ ಬಂದು ಕರವ ಸೇರಿದೆ, ಮನಕೆ ಸಂತೋಷ ನೀಡಿದೆ (ನನ್ನ ನಿನ್ನ ಮನವು ಸೇರಿತು-ಭಾಗ್ಯವಂತರು-ನುಡಿ)

 

ಮುಂದೆ ಮಾತಿಗೆ ಸಿಕ್ಕಿದ್ದು ಮರೆಗುಳಿ ಪ್ರೊಫ಼ೆಸರ್ ಪುಟ್ಟಪ್ಪ.

ಆಗಲೂ ಮೊಬೈಲನ್ನೇ ಹುಡುಕುತ್ತಿದ್ದರು ಪಾಪ.

ನಡೆಯಿತು ಅವರ ಬಳಿಯೂ ವಾರ್ತಾಲಾಪ. ಹೀಗಿತ್ತು ಅವರ ಪ್ರಲಾಪ.

 

೬. ಮೊಬೈಲ್ ಎಲ್ಲಿರುವೆ? ಎಲ್ಲಿ ಅಡಗಿ ಕುಳಿತಿರುವೆ?

ಶಬ್ಧವ ಮಾಡದೆ ನೀನು ಹೀಗೇಕೆ ಸುಮ್ಮನಿರುವೆ? ಮೊಬೈಲ್ ಎಲ್ಲಿರುವೆ? ಎಲ್ಲಿ ಅಡಗಿ ಕುಳಿತಿರುವೆ? (ಬಯಲು ದಾರಿ)

 

ವಿಷಯ ಇಷ್ಟೆ, ಪಾಪ ಸಾಹೇಬರಿಗೆ ಹೆಂಡತಿಗೆ ಮೊಬೈಲು ಕೊಟ್ಟು ಕಳಿಸಿದ್ದು ಮರೆತೇ ಹೋಗಿತ್ತು.

ಅಷ್ಟರಲ್ಲಿ ಬಂದ ಪತ್ನಿಯ ಕೈಯಿಂದ ಮೊಬೈಲ್ ಕಸಿದುಕೊಂಡು ಹಾಡಿದರು ಹೀಗೆಂದು.

 

೭. ನಿನ್ನ ಬಿಟ್ಟಿರಲಾರೆ ನಾನಿನ್ನ, ಎಂದೆಂದು ನಿನ್ನ ಬಿಡಲಾರೆ ಚಿನ್ನ,

ನೀನೆ ಪ್ರಾಣ ನನ್ನಾಣೆಗು ನಿನ್ನ ಬಿಟ್ಟಿರಲಾರೆ (ನಾ ನಿನ್ನ ಮರೆಯಲಾರೆ-ಪಲ್ಲವಿ)

 

ಕೆನ್ನೆ ಕೆಂಪೇರಿ ಹೆಂಡತಿಯಾದರು ಕಕ್ಕಾಬಿಕ್ಕಿ.

ಪತಿಯ ಹಾಡು ಮುಂದುವರಿದಂತೆ ಅವರಿಗೂ ಬಂತು ನಗು ಉಕ್ಕಿ.

 

ನೂರು ಮಾತು ನನಗೆ ಸಾಲದು ಮೊಬೈಲ್ ನಿನ್ನ ಬಣ್ಣಿಸಲು

ಯಾರ ಮಾತು ನನಗೆ ಕೇಳದು ಕಿವಿ ಬಳಿ ನೀನಿರಲು

ಮಾತು, ಸಂದೇಶ, ಎರಡಕ್ಕು ನೀನೆ ಬೇಕು

ನಿನ್ನ ಬಿಟ್ಟಿರಲಾರೆ ನಾ ನಿನ್ನ (ನಾ ನಿನ್ನ ಮರೆಯಲಾರೆ-ನುಡಿ)

 

ಮೊಬೈಲ್ ನಿನ್ನ ಮಹಿಮೆ ಅಪಾರ

ಎನ್ನುವಷ್ಟರಲ್ಲಿ ಸಿಕ್ಕಿದರು ಡ್ಯಾನ್ಸರ್ ಪವನ್ ಕುಮಾರ

ಪ್ರಾರಂಭಿಸಿಯೇ ಬಿಟ್ಟರು ಹಾಡಿನ ಜೊತೆ ನೃತ್ಯವನ್ನು ಹೇಳದೆ ನಕಾರ

 

೮. ಮೊಬೈಲ್ ಬಂತು ಬಂತು

ಹೊಸ ಹರುಷ ತಂತು ತಂತು

ಕರೆಗಳ ಜೋಡಿಸುತ, ಭಾವಕೆ ಸ್ಪಂದಿಸುತ, ಜನರನ್ನು ಒಂದಾಗಿಸಿತು (ಕಾಣದಂತೆ ಮಾಯವಾದನು-ಚಲಿಸುವ ಮೋಡಗಳು)

 

ಮುಂದೆ ಯಾರ ಜೊತೆ ಸಂವಾದ

ಎನ್ನುವಾಗಲೆ ಕಂಡನೊಬ್ಬ ಭಿಕ್ಷುಕ

ಕೇಳಿದಾಗ ಅಭಿಪ್ರಾಯ, ಹಾಡಿದನೊಂದು ಗೀತೆಯ

 

೯. ಮೊಬೈಲ್ ನನ್ನ ಬಂಧು, ಮೊಬೈಲ್ ನನ್ನ ಬಳಗ,

ಮೊಬೈಲ್ ನನ್ನ ಸರ್ವಸ್ವ. (ತುಮ್ ಹಿ ಮೇರಿ ಮಂದಿರ್ ಹಾಡು, ಖಾನ್ ದಾನ್-ಹಳೆ ಹಿಂದಿ ಚಿತ್ರ)

 

ಇನ್ನು ಯಾರು ಎನ್ನುವಾಗಲೆ, ಸಿಕ್ಕಿದರು ಮರಿ ಬೋರೆಗೌಡರು.

ಹೇಗಿದೆ ಬೆಂಗಳೂರು ಕೇಳಿದ್ದೆ ತಡ ಹಾಡೇ ಶುರು.

 

ಎಂಥ ನಗರವಯ್ಯ, ಇದು ಎಂಥ ನಗರವಯ್ಯ,

ಎಲ್ಲೆಲ್ಲು ಕಾರು, ಎಲ್ಲೆಲ್ಲು ಬಾರು, ಎಲ್ಲೆಲ್ಲು ಟವರು ಇದು ಎಂಥ ನಗರವಯ್ಯ. (ನಾರದ ವಿಜಯ ಚಿತ್ರ)

 

ಮೊಬೈಲ್ ಬಗ್ಗೆಯೂ ಆಡಿದರು ಮಾತು. ಅದಕ್ಕೂ ಒಂದು ಹಾಡು ಹೊರ ಬಂತು

೧೦. ತುತ್ತು ಅನ್ನ ತಿನ್ನೋಕೆ (ಡಯಟ್),

ಬಾಟೆಲ್ ನೀರು ಕುಡಿಯೋಕೆ (ಸೋಂಕು ತಡೆಗಾಗಿ),

ತುಂಡು ಬಟ್ಟೆ ಸಾಕು ಎಲ್ಲರ ಮಾನ ಮುಚ್ಚೋಕೆ (ಫ್ಯಾಶನ್),

ಮೊಬೈಲ್ ಮಾತ್ರ ಬೇಕೇ ಬೇಕು ಮಾತಾಡೋಕೆ. (ಜಿಮ್ಮಿಗಲ್ಲು ಚಿತ್ರ)

 

        (ಬರೀ ತಮಾಶೆಗಾಗಿ ಬರೆದದ್ದು. ತಪ್ಪಾಗಿದ್ದರೆ ಕ್ಷಮೆ ಇರಲಿ)

Rating
No votes yet

Comments