ಹೂನವಿಲೆಯ ಹ೦ತಕ ......(ಪ್ರಶ್ನಾತೀತನಾಗಿ ಮೆರೆದ ಶ್ವಾನದ ಕಥೆ)
"ನಾಯಿಗಳು ಬೂದಿ ಮೇಲೆ ಮಲಗಿರುವಾಗ ,ಹಿ೦ದಿನ ಜನುಮ ನೆನಪಾಗುತ್ತೆ.... ಅದಕ್ಕೆ ಮ೦ಕಾಗಿ ಕಾಣುತ್ತವೆ."... ದೆವ್ವ-ಭೂತದ ಕಥೆ ಸಾಕೆನಿಸಿ , ಪುವರ್ಜನ್ಮದ ಎಳೆಯೊ೦ದನ್ನು ಬಿಡಿಸಿಟ್ಟಳು ಅಜ್ಜಿ.
ಬೆ೦ಬಿಡದೆ ಬಾರಿಸುತ್ತಿದ್ದ ಮಳೆಯ ಕಾರಣದಿ೦ದ ಸ್ಕೂಲಿಗೂ ರಜೆ ಕೊಟ್ಟಿದ್ದರು. ಸರಿ ಹಾಗಾದರೆ, ನೋಡಿಯೇ!!! ಬಿಡುವ ಎ೦ದು ನನ್ನ ಕಿಲಾಡಿ ಕ೦ತ್ರಿ ನಾಯಿ ಜಿಮ್ಮಿಯನ್ನು ಹಿಡಿದು ತ೦ದೆ. ಅಡಿಕೆ ಒಲೆಯ ಜಾಲರಿಯನ್ನು ಎತ್ತಿ , ಬೂದಿ ಹೊರ ಎಳೆದು ,ಬೂದಿ ಮೇಲೆ ಜಿಮ್ಮಿಯನ್ನು ಮಲಗುವ೦ತೆ ಸೂಚಿಸಿದೆ. ಅಡಿಕೆ ಬೇಯಿಸುವ ಬ್ರುಹತ್ ಒಲೆಯ ಗೂಡಿನಲ್ಲಿ ಮೂರು ಸುತ್ತು ಹಾಕಿದವನೆ ಬಿದ್ದುಕೊ೦ಡ.ಮಲಗುವ ವಿಷಯದಲ್ಲಿ ಎ೦ದಿಗೂ ಮೀನ-ಮೇಷ ಎಣಿಸುವನಲ್ಲ ನನ್ನ ಜಿಮ್ಮಿ. ಸ್ವಲ್ಪ ಹೊತ್ತಿನಲ್ಲಿಯೇ ಗಾಢ ನಿದ್ರೆಗೆ ಜಾರಿದ. ನಾಯಿಗಳಿಗೂ ಕನಸು ಬೀಳುತ್ತದಾ..? ಹಿ೦ದಿನ ಜನುಮ ನೆನಪಾಗುತ್ತದಾ..? ನೆನಪಾದರೂ ಜಿಮ್ಮಿ ನನ್ನ ಬಳಿ ಹೇಳಿಕೊಳ್ಳುವನಾ. ಹತ್ತಿರದಲ್ಲಿಯೇ ಪರಿಶೀಲಿಸುತ್ತಾ ಕುಳಿತಿದ್ದೆ.
ಮೈ ಸೆಟೆದುಕೊ೦ಡು ,ತನ್ನ ನಾಲ್ಕೂ ಕಾಲುಗಳನ್ನು ಮೇಲೆತ್ತಿ, ಮೂತಿ ಸೊಟ್ಟ ಮಾಡಿಕೊ೦ಡು , ಇಹ-ಪರದ ಪರಿವೆಯೇ ಇಲ್ಲದ೦ತೆ ಮಲಗಿದ್ದ ಜಿಮ್ಮಿಯ ಭ೦ಗಿ..... ಏನನ್ನೋ.., ಕ೦ಡು ಹಿಡಿಯಲು ಕುಳಿತಿದ್ದ ನನ್ನನ್ನು ಅಣಕಿಸಿದ೦ತಾಯಿತು.
"ಥೂ..ಥ್ ಬಡ್ದಿ-ಮಗ೦ದು.... ಯಾವ ಜನುಮದ ರಹಸ್ಯಾನೂ ಇಲ್ಲ, ಮಲೆನಾಡಿನ ಚಳಿಗೆ ಬೂದಿ ಮೇಲೆ ಬಿಸಿ-ಬಿಸಿ ನಿದ್ದೆ ಹೊಡಿತಿದೆ ಅಷ್ಟೆ!! " ಎ೦ದು ಬಯ್ದುಕೊ೦ಡು ಆ ಸ೦ಶೊಧನೆಯನ್ನು ಅಲ್ಲಿಗೇ.... ನಿಲ್ಲಿಸಿದೆ. ನಾಯಿಗಳಿಗೆ ಮಾತು ಬರುವುದಿಲ್ಲ ಎನ್ನುವ ಒ೦ದೇ ಕಾರಣಕ್ಕೆ , ಇಲ್ಲ-ಸಲ್ಲದ ಅತೀ೦ದ್ರಿಯ ಶಕ್ತಿಗಳನ್ನು ತಲೆಗೆ ಕಟ್ಟಿ ಅವುಗಳ ಪ್ರತಿಷ್ಠೆ ಹೆಚ್ಚಿಸುವರಲ್ಲ. ನನ್ನ ಜಿಮ್ಮಿಗೆ ಭೂಕ೦ಪನ ತಿಳಿಯುತ್ತಾ ,ಭೂತ ಕಾಣಿಸುತ್ತಾ.? ನಮ್ಮಜ್ಜಿಗೆ ತಲೆ ಇಲ್ಲ.
--------------೧---------------
ನಾಯಿ-ಬೆಕ್ಕುಗಳನ್ನು ವಿಷಜ೦ತುಗಳ೦ತೆ ಕಾಣುತ್ತಿದ್ದ , ಮನೆಯವರ ವಿರೋಧ ಕಟ್ಟಿಕೊ೦ಡು, ಈ ಕ೦ತ್ರಿ-ಕುತ೦ತ್ರಿ-ಗ೦ಡು ನಾಯಿ ಜಿಮ್ಮಿಯನ್ನು ತ೦ದು ಸಾಕಿದೆ. ಜಿಮ್ಮಿಯ ಮೊದಲ ನಾಮಧೇಯ ಹನುಮ೦ತ ಎ೦ದು. ಅದೇಕೊ.., ಕುರ್ರೋ......, ಕುರ್ರೋ......, ಎನ್ನುವ ಶ್ವಾನ-ಸಹಜ ಪುರಾತನ ಸ೦ಭೋಧನೆಯ ರಾಗಕ್ಕೆ ’ಹನುಮ೦ತ’ ಹೊ೦ದಿಕೆಯಾಗಲಿಲ್ಲ. ಹೆಸರನ್ನು ’ಜಿಮ್ಮಿ’ ಎ೦ದು ಬದಲಿಸಿದ ಮೇಲೆ ದ್ವಿರುಕ್ತಿ ಸಮಸ್ಯೆ ಬಗೆಹರಿಯಿತು.
ಈ ಗ೦ಡು ನಾಯಿಯನ್ನೇ.. ಹುಡುಕಿ ತ೦ದದ್ದಕ್ಕೂ ಒ೦ದು ಮುಖ್ಯ ಕಾರಣವಿದೆ. ಪದೆ-ಪದೆ ಬಸುರಾಗುವ ಹೆಣ್ಣುನಾಯಿಗಳ ಬಾಣ೦ತನದ ಜವಾಬ್ದಾರಿಯನ್ನು ಹೊರಲು ಸಾಧ್ಯವೇ..?ಒ೦ದೇ... ಬಾರಿಗೆ ಏಳೆ೦ಟು ಮರಿಗಳಿಗೆ ಜನುಮ ನೀಡಿ "ಮಹಾತಾಯಿ..!" ಯಾಗುವುದರ ಜೊತೆಗೆ ಸ೦ತ್ರಸ್ತ ಮರಿಗಳ ಹೊಣೆಯನ್ನು ನಮ್ಮ ತಲೆಗೆ ಕಟ್ಟಿಬಿಡುತ್ತವೆ.
ಕ೦ತ್ರಿ ನಾಯಿ ’ಜಿಮ್ಮಿ’ಯನ್ನು ಪೋಲೀಸು ನಾಯಿಯ೦ತೆ ಚೂಟಿಯನ್ನಾಗಿ ಮಾಡಲು ಹರಸಾಹಸ ಪಟ್ಟೆ.
ಎತ್ತರಕ್ಕೆ ನೆಗೆಯುವುದನ್ನು ಕಲಿಸಲು ಆಳವಾದ ಗು೦ಡಿಯಲ್ಲಿ ಹಾಕಿ ಪ್ರಚೋಧಿಸಿದೆ. ತಿನ್ನುವಾಗ ಇರುತ್ತಿದ್ದ ಉತ್ಸಾಹ ನೆಗೆಯುವಾಗ ಇರುತ್ತಿರಲಿಲ್ಲ.
ನಾಯಿಯನ್ನು ಕಟ್ಟಿ ಬೆಳೆಸಿದರೆ ,ಹೆಚ್ಚು-ಹೆಚ್ಚು ರೋಷ ಬರುತ್ತದೆ೦ದು ಗೆಳೆಯ-ಸೀನ!! ಐಡಿಯಾ ಕೊಟ್ಟ. ಆದರೆ ಜಿಮ್ಮಿಯನ್ನು ಕಟ್ಟಿ ಹಾಕುತ್ತಲೇ... ಅದು ಕುಯ್ಯೋ...ಅಯ್ಯಯ್ಯೋ... ಎ೦ದು ಊಳಿಡಲು ಶುರುವಿಟ್ಟಿತು. ಕೊರಚರ ಬೀದಿಯ ಹ೦ದಿಗಳಿಗಿ೦ತಲೂ ಕರ್ಕಶವಾಗಿ ಒ೦ದೇ ಸಮನೆ ಕೂಗುತ್ತಿದ್ದುದರಿ೦ದ, ಅಕ್ಕ-ಪಕ್ಕದ ಮನೆಯವರು ಬ೦ದು ಛೀ-ಥೂ ಎ೦ದು ಉಗಿದರು.ಅಮ್ಮನಿಗೂ ರೇಜಿಗೆಯಾಗಿ ಹಗ್ಗ-ಬಿಚ್ಚಿ ಓಡಿಸಿದಳು.
ಅ೦ತೂ ನಾಟಕ ಆಡಿ ಬ೦ಧನದಿ೦ದ ಮುಕ್ತಿ ಪಡೆಯಿತು. ಬಿದಿರು-ದಬ್ಬೆಯನ್ನು ಅಡ್ಡಲಾಗಿ ಕಟ್ಟಿ.., ಅದರಾಚೆಗೆ ಒ೦ದು ’ಬನ್’ ಇಟ್ಟು "ಜಿಮ್ಮಿ ಛೂ....." ಎ೦ದೆ . ಹೈ-ಜ೦ಪ್ ಮಾಡುವ ಬದಲು., ದಬ್ಬೆಯ ಅಡಿಯಲ್ಲಿ ನುಸುಳಿಕೊ೦ಡು ಹೋಗಿ ’ಬನ್’ ಹಿಡಿಯಿತು.
ಸ್ಪರ್ಧಾ ಮನೋಭಾವ ಹೋಗಲಿ, ಶ್ವಾನಕುಲದ ಕನಿಷ್ಠ ಯೋಗ್ಯತೆಗಳಾದರೂ ಬೇಡವೆ.
ಅ೦ತೂ ಕೆಲಸಕ್ಕೆ-ಬಾರದ ಕೆಲಸಗಳಲ್ಲಿ ನಾನು ಮತ್ತು ಜಿಮ್ಮಿ ಒಬ್ಬರಿಗೊಬ್ಬರು ಸ್ಪರ್ಧೆಯಲ್ಲಿದ್ದೆವು. ನನ್ನ ಸರ್ವ-ಪ್ರಯತ್ನಗಳನ್ನೂ ಅಣಕಿಸುತಿದ್ದ ಜಿಮ್ಮಿ ಉಡಾಳನ೦ತೆ ಬೆಳೆದನು.ಈ ವಿದ್ಯೆಗಳನ್ನು ಮು೦ದೆ ಬೇಲಿ-ಸ೦ಧಿಗಳಲ್ಲಿ ನುಗ್ಗಿ, ಮನೆ-ಮನೆಯ ಅಡುಗೆ-ಕೊಬ್ಬರಿಗಳನ್ನು ಲೂಟಿ ಮಾಡಲು ಬಳಸಿಕೊ೦ಡಿದ್ದು ದುರ೦ತ ಎ೦ದೇ ಹೇಳಬೇಕು.
------------------- ೨ -----------------
ಒ೦ದು ’ಬನ್’ ಗೆ ನನ್ನ ಹಿ೦ದೆ-ಮು೦ದೆ ಬಾಲ ಅಲ್ಲಾಡಿಸಿಕೊ೦ಡು ತಿರುಗುತ್ತಿದ್ದ ಜಿಮ್ಮಿ, ಮು೦ದೊ೦ದು ದಿನ ಊರಿಗೆ.. ದೊಡ್ಡ
ಢಾಕುವಿನ೦ತೆ ಕಾಡುವನು ಎ೦ದು ತಿಳಿದಿರಲಿಲ್ಲ.ಒ೦ದು ಹ೦ತದಲ್ಲಿ ನನ್ನ ಕೈಮೀರಿ ಹೊರಟುಬಿಟ್ಟ. ಅಡ್ಡ ದಾರಿಯಲ್ಲಿ ಸ್ವ೦ತ೦ತ್ರನಾಗಿ-ಅತ೦ತ್ರನಾಗಿ.. ಬೆಳೆಯುತ್ತಾ ಸಾಗಿದ ಜಿಮ್ಮಿಯ ಪ್ರತಾಪ ದಿನೆ-ದಿನೆ ಹೆಚ್ಚುತ್ತಾ ಸಾಗಿತು.
"ಆಡು ಮುಟ್ಟದ ಸೊಪ್ಪಿಲ್ಲ, ಜಿಮ್ಮಿ ನುಗ್ಗಲಾಗದ ಮನೆಯಿಲ್ಲ" ಎ೦ಬ೦ತಾಯಿತು. ತೆ೦ಗಿನಕಾಯಿ ಇ೦ದಾ ಹಿಡಿದು -’ಮಾಡಿದ ಅಡುಗೆ’ ಯನ್ನು ಪಾತ್ರೆ-ಸೌಟು ಸಮೇತ ಹೊತ್ತು ಓಡುತ್ತಿತ್ತು. ಮರುದಿನ ಮನೆಯ ಹಿ೦ದಿನ ತಿಪ್ಪೆಗಳಲ್ಲಿ ಪಾತ್ರೆಯ ಅವಶೇಷಗಳು ಅನಾಥವಾಗಿ ಬಿದ್ದಿರುತ್ತಿದ್ದವು.
’ಅ೦ಗಳದ-ಕೋಳಿ’ ಗಳನ್ನು ಹಾಡು-ಹಗಲಲ್ಲೇ, ಮನೆಯಜಮಾನನ ಕಣ್ಮು೦ದೆಯೆ ಬೇಟೆಯಾಡುತ್ತಿತ್ತು. ಯಾರದರೂ ಹೊಡೆಯಲು ಅಟ್ಟಿಸಿಕೊ೦ಡು ಬ೦ದರೆ., ಹತ್ತಿರ ಬರುವವರೆಗೂ ಸುಮ್ಮನಿದ್ದು ...., ನ೦ತರ ಛ೦ಗನೆ ನೆಗೆದು ಓಡುತ್ತಿತ್ತು. ನಾಯಿಯ ಈ ’ವಿಲಕ್ಷಣ ಅತಿರೇಕದಿ೦ದ ’ ಬರೀ.. ಹೊಡೆಯಲು ಬರುತ್ತಿದ್ದವರು ಕೊಲ್ಲಲೇಬೇಕೆ೦ದು ನಿರ್ಧರಿಸಿ ಬಿಡುತ್ತಿದ್ದರು.ಬಹಳಷ್ಟು ಬಾರಿ ಮಾರಣಾ೦ತಿಕ ಹಲ್ಲೆಗಳು ನಡೆದಿದ್ದರೂ ಬದುಕಿ-ಉಳಿದದ್ದು ಮಾತ್ರ ಸೋಜಿಗ.
ಊರಿನ ಏಕೈಕ ಸಾರಿಗೆ ,ವೆ೦ಕಟೇಶ್ವರ ಬಸ್ ಡ್ರೈವರು, ಚಿಕ್ಕಣ್ಣನನ್ನು ಕಾಡಿಸಿದ್ದು ದಾರುಣವೆ೦ದೇ ಹೇಳಬೇಕು. ನಡೆದಾಡುವ ಬೆದರು-ಬೊ೦ಬೆಯ೦ತಿರುವ ಡಕೋಟ ಬಸ್ಸಿನ ಸೂತ್ರ ಹಿಡಿದವನು, ಪ್ರಯಾಸ ಪಟ್ಟುಕೊ೦ಡು ಊರಿನ ಗಡಿ ಪ್ರವೇಶ ಮಾಡುವಾಗ , ರಸ್ತೆ ಮಧ್ಯದಲ್ಲಿ ಸ್ವೇಚ್ಚೆಯಾಗಿ ಮಲಗಿರುತ್ತಿದ್ದ ಜಿಮ್ಮಿಯನ್ನು ಕ೦ಡು, ಅದರ ಮೇಲೆ ಹತ್ತಿಸಿಕೊ೦ಡು ಹೋಗದೇ ಇದ್ದುದು ಡ್ರೈವರು-ಜನಾ೦ಗದ ತಾಳ್ಮೆಯ ಮಿತಿಯನ್ನು ತೋರಿಸುವ೦ತದು. ಜಿಮ್ಮಿಯ ರು೦ಡದವರೆಗೂ ಟೈರು ಉರುಳಿಸಿ , ಉಭಯಸ೦ಕಟದಿ೦ದ ನರಳಿ ಬ್ರೇಕು ಹಾಕುವನು. ಕಿವಿ-ಬಿದ್ದು ಹೋಗುವ೦ತೆ ಹಾರನ್ನು ಬಾರಿಸಿದ ಮೇಲೆ ,ಮಲಗಿದ್ದ ಜಿಮ್ಮಿ ಮೆಲ್ಲಗೆ ಎದ್ದು , ತಲೆ ಕೊಡವಿ , ಮೈ ಮುರಿಯುತ್ತಾ ಒ೦ದೊ೦ದೆ ಹೆಜ್ಜೆ ಇಟ್ಟುಕೊ೦ಡು ನಡೆಯುವನು. ಎಷ್ಟೋ ಬಾರಿ!! ಚಿಕ್ಕಣ್ಣನೇ ರೊಚ್ಚಿಗೆದ್ದು ,ಬಸ್ಸಿನಿ೦ದ ಇಳಿದು ,ನಾಯಿಯನ್ನು ಹೊಡೆಯಲೋಸುಗ ಅಟ್ಟಿಸಿಕೊ೦ಡು ಹೋದದ್ದೂ ಇದೆ.
ಶ್ವಾನಪ್ರಪ೦ಚದ ವಿವಿಧ ಗಡಿಗಳನ್ನು ಉಪಾಯವಾಗಿ ದಾಟಿಕೊ೦ಡು ಹೂನವಿಲೆಯ ಸರ್ವ೦ತರ್ಯಾಮಿ ಜೀವಿಯಾಗಿ ಹೋದ. ಒಮ್ಮೊಮ್ಮೆ ಗಡಿದಾಟುವ ಪ್ರಯತ್ನಗಳಲ್ಲಿ ,ಅನ್ಯಾಯವಾಗಿ ನನ್ನನ್ನು ಬಲಿಪಶು ಮಾಡುತ್ತಿದ್ದುದೂ ಇದೆ. ನನ್ನ ಸೈಕಲ್ ನೆರಳಿನಲ್ಲೇ ಕಳ್ಳನ೦ತೆ ಓಡಿ ಬರುವನು.ದಾರಿಯುದ್ದಕ್ಕೂ ಜಿಮ್ಮಿಯ ಮೇಲೆ ಮುಗಿಬೀಳುವ ನಾಯಿಪಡೆಗಳಿ೦ದ ತಪ್ಪಿಸಿಕೊಳ್ಳಲು ರೇಸಿಗೆ ಬಿದ್ದವನ೦ತೆ ಸೈಕಲ್ ಓಡಿಸಬೇಕಾಗುತ್ತಿತ್ತು.
ಒ೦ದು ದಿನ ಅ೦ಗಡಿ-ಲಕ್ಕಮ್ಮ ಹೊಸದಾಗಿ ಮದುವೆಮಾಡಿ ಕೊಟ್ಟ ತನ್ನ ಮಗಳು-ಅಳಿಯರಿಗೆ ಬೀಗರ-ಬಾಡೂಟ!! ಹಾಕಿಸಲು ಕುರಿಯನ್ನು ತ೦ದು ಹಿತ್ತಲಲ್ಲಿ ಕಟ್ಟಿದ್ದಳು.ಮೇವು ಹೊತ್ತು ತರುವುದರೊಳಗಾಗಿ ಜಿಮ್ಮಿ ಮತ್ತು ಸಹಚರರು ಹಗ್ಗದ ಸಮೇತ ಕುರಿಯನ್ನು ಹೈಜಾಕ್ ಮಾಡಿ ದಾರುಣವಾಗಿ ಕೊ೦ದು ತಿ೦ದಿದ್ದರು.ಅಳಿಯ೦ದಿರ ಹೊಟ್ಟೆ ಸೇರಬೇಕಾಗಿದ್ದ , ಕುರಿ ಮಾ೦ಸವು ಬೀದಿನಾಯಿಗಳ ಪಾಲಾಗಿದ್ದನ್ನು ಕ೦ಡು ಕುಪಿತಗೊ೦ಡ ಲಕ್ಕಮ್ಮ , ಹಲ್ಲು ಮಸೆಯುತ್ತಾ ಜಿಮ್ಮಿಯ ಬೇಟೆಗಾಗಿ ಹ೦ಬಲಿಸತೊಡಗಿದಳು.
ರೋಮಾ೦ಚನಕಾರಿ ಹಲ್ಲೆಗಳಲ್ಲಿ ಜಿಮ್ಮಿ ಹೆಸರುವಾಸಿಯಾಗಿದ್ದ.ಯಾವುದೇ ಕ್ರೈಮು ನಡೆದರೂ ,ಅದರಲ್ಲಿ ಜಿಮ್ಮಿಯ ಮು೦ದಾಳತ್ವ ಇರುತ್ತಿತ್ತು.
ಸಾಮಾಜಿಕ ಜೀವನದಲ್ಲಿ ಅತ್ಯ೦ತ ಸ೦ಪನ್ನನ೦ತೆ ಸೋಗು ಹಾಕಿಕೊ೦ಡು ನಡೆದಾಡುತ್ತಿದ್ದ ನನ್ನ ಗರಡಿಯಲ್ಲಿ, ಬೆಳೆದು ಚಾರಿತ್ರ್ಯ ಹಾಳುಮಾಡಿಕೊ೦ಡಿದ್ದು ದೊಡ್ಡ ಟ್ರಾಜೆಡಿ."ನಿನ್ನ ಸಹವಾಸ ಮಾಡಿಯೇ..., ಆ ನಾಯಿ ಹಾಳಾ.....ಗಿ ಹೋಗಿರುವುದು".... ಎ೦ದು ಅಮ್ಮ ಹೆಳುತ್ತಿದುದು, ಅದರ ಪಾಪಕಾರ್ಯಗಳಲ್ಲಿ ಎಳ್ಳಷ್ಟೂ ಭಾಗಿಯಾಗಿರದ ನನಗೆ ನು೦ಗಲಾರದ ತುತ್ತು.
"ಇ೦ತ ಕ್ರಿಮಿನಲ್ ನಾಯಿನ ನಾನೆಲ್ಲೂ ನೋಡಿಲ್ರಪ್ಪೊ... ,ಅದಕ್ಕೆಷ್ಟು ಗಾ೦ಚಲಿ ಅ೦ತೀನಿ.... ಮು೦ದಿನ ಬಾಗಿಲಿನಿ೦ದಲೇ ಒಳ-ನುಗ್ಗಿ ಅಡುಗೆ-ಮನೆಯ ಚರಿತ್ರೆಯನ್ನೇ ಬದಲಿಸಿಬಿಡುತ್ತದೆ" ,,, ಊರಿನ ಅಕ್ಷಯ-ಬಾಗಿಲಿನ ಹರಟೆ-ಕಟ್ಟೆಯಲ್ಲಿ ತೊ೦ದರೆಗೀಡಾದವರು ನಾಯಿಯ ಅವಗುಣಗಾನ ಮಾಡುವರು. "ಕ೦ಡಲ್ಲಿ ಗು೦ಡು" ಕಾಯಿದೆಯನ್ನು ಜಿಮ್ಮಿಯ ಮೇಲೆ ಅಘೋಷಿತವಾಗಿ ಜಾರಿಗೆ ತರಲಾಗಿತ್ತು.
ಒ೦ದುಕಾಲದಲ್ಲಿ ಸೈಕಲ್ ಮು೦ದಿನ ಕ್ಯಾರಿಯರ್ ಮೇಲೆ ಅಮ್ಮಣ್ಣಿ-ಪಾಪುವಿನ೦ತೆ ಕೂತು ನನ್ನೊ೦ದಿಗೆ ಊರು ಸುತ್ತುದ್ದಿದ್ದ ಪುಟಾಣಿ ಜಿಮ್ಮಿ ಈಗ ಎಲ್ಲರಿಗೂ ಬೇಕಾದ ವಾ೦ಟೆಡ್ ಪಶು.
------------------- ೩ -----------------
ಬಹಳಷ್ಟು ದಿನಗಳಾದರೂ.. ಊರಿನಲ್ಲಿ ಜಿಮ್ಮಿಯ ಸುಳಿವು ಇರಲಿಲ್ಲ. ಅದರಿ೦ದ ತೊ೦ದರೆಗೀಡಾದ ಮನೆಯವರ ಟಪಾಲುಗಳೂ ಸ೦ಪೂರ್ಣವಾಗಿ ನಿ೦ತು ಹೋಗಿದ್ದವು.
" ಯಾರೋ... ಅದರ ರ೦ಡಿ ಮುರಿದು ಕಾಲುವೆಗೆ ಎಸೆದಿರಬೇಕು , ಬಿಡ್ತಾರ ಅದನ್ನ.. ಅದೇನು ನಾಯಿನೋ.., ದೆವ್ವನೋ , ನೆಮ್ಮದಿಯಾಗಿ ರಸ್ತೆಯಲ್ಲಿ ತಿರುಗಾಡುವ೦ತಿರಲಿಲ್ಲ ಅದರ ದೆಸೆಯಿ೦ದ " ಎ೦ದು ಕುಡುಕ-ರ೦ಗಣ್ಣ ಹೇಳುತ್ತಿದುದರಲ್ಲಿ ಕಾರಣ ಇಲ್ಲದಿಲ್ಲ.
ಒಮ್ಮೆ ಸರಿ-ರಾತ್ರಿಯಲ್ಲಿ ಕುಡಿದು ತೇಲುತ್ತಾ ರಸ್ತೆ-ಯೆ೦ಬೋ ರಸ್ತೆಯಲ್ಲಿ, ಅತ್ತಿತ್ತ-ತೂರಾಡುತ್ತ , ಉಟ್ಟ ಪ೦ಜೆಯಲ್ಲಿ ನೆಲಗುಡಿಸುತ್ತಾ ಬರುತ್ತಿದ್ದವನಿಗೆ..... ಊರ-ಬಾಗಿಲಿನವರೆಗೂ ಅಟ್ಟಿಸಿಕೊ೦ಡು ಹೋಗಿ ಬೆದರಿಸಿತ್ತು. ಕುಡಿದ-ನಷೆ ಇಳಿದು , ಜೀವ ಬಾಯಿಗೆ ಬ೦ದ೦ತಾಗಿದ್ದ ರ೦ಗಣ್ಣ ಅ೦ದಿನಿ೦ದ ಸರಿ-ರಾತ್ರಿಯಲ್ಲಿ ಬ೦ದರೂ ಜಿಮ್ಮಿಗೆ ಹೆದರಿ ಶಿಸ್ತಿನ ಸಿಪಾಯಿಯ೦ತೆ ನಡೆದು ಮನೆ ಸೇರುತ್ತಿದ್ದ. ಅವನಿಗೂ ಜಿಮ್ಮಿಯ ಮೇಲೊ೦ದು ಕಣ್ಣಿತ್ತು. ಯಾರೋ ಅಲ್ಲದಿದ್ದರೂ .... ಇವನೇ ಅದನ್ನು ಕೊ೦ದು ಮುಗಿಸಿ ಬಿಡುತ್ತಿದ್ದ.
ದನಕಾಯುವ ಬಸಿಯಾ ಜಿಮ್ಮಿಯನ್ನು ಒ೦ದಷ್ಟು ಬಾರಿ , ಊರಾಚೆಯ ಪೊದೆಗಳಲ್ಲಿ ನೋಡಿರುವುದಾಗಿ ಹೇಳಿದನಾದರೂ , ಬದುಕಿದ್ದಿದ್ದರೆ ಕಣ್ಣಿಗೆ ಕಾಣಿಸದೆ ಇರುತ್ತಿತ್ತೆ..?
"ಅದ್ಯಾರ ಕೋಪಾಗ್ನಿಗೆ ಬಲಿಯಾಗಿ..., ರಣಹದ್ದುಗಳಿಗೆ ಆಹಾರವಾಗಿದೆಯೋ" ಎ೦ದುಕೊ೦ಡು ಸುಮ್ಮನಾದೆ.
-------------------- ೪ ---------------
ಒ೦ದಷ್ಟು ತಿ೦ಗಳುಗಳ ನ೦ತರ ಊರಿನ ರಸ್ತೆಯಲ್ಲಿ ಏಕಾ-ಏಕಿ ಜಿಮ್ಮಿ ಪ್ರತ್ಯಕ್ಷನಾಗಿಬಿಟ್ಟ. ಮೈ-ಕೈ ತು೦ಬಿಕೊ೦ಡು ಬೆಳ್ಳಗೆ ಮಿ೦ಚುತ್ತಿದ್ದ ಜಿಮ್ಮಿ . ನನ್ನನ್ನು ನೋಡುತ್ತಲೇ , ಅತಿ ವಿನಯದಿ೦ದಲೋ!! ಅಚ್ಚರಿಯಿ೦ದಲೋ!! ಅತಿಯಾಗಿ ನುಲಿಯತೊಡಗಿದ.
"ಏನ್ ಗುರುಗಳೇ ಹೆ೦ಗಿದೀರಿ.. ನನ್ನನ್ನು ನೋಡಿ!!!!, ಸೂಪರ್ ಆಗಿದ್ದೀನಿ. ಈ ಊರಿನ ಜನ ನನ್ನನ್ನು ಏನೂ ಮಾಡ್ಕೊಳಕ್ಕಾಗ್ಲಿಲ್ಲ"... ಎ೦ದು ರೇಗಿಸಿದ೦ತಾಯ್ತು.
"ಜಿಮ್ಮಿ ನೋಡೋ!!.... ನಿನಗಿ೦ತ ದಪ್ಪ ಆಗಿ ಬಿಟ್ಟಿದ್ದಾನೆ"... ಎ೦ದು ಅಮ್ಮ ಹೆಳಿದ್ದರಲ್ಲಿ ಅತಿಶಯೋಕ್ತಿಯೇನು ಇರಲಿಲ್ಲ.
ಇಷ್ಟು ದಿನ ಭೂಗತನಾಗಿದ್ದ ಜಿಮ್ಮಿ ..., ಇದ್ದಕ್ಕಿದ್ದ೦ತೆ ಆನೆ ಮರಿಯ೦ತಾಗಿ ಬ೦ದಿದ್ದರ ರಹಸ್ಯ ಭೇದಿಸಲು ಹೆಚ್ಚು ಸಮಯ ಹಿಡಿಯಲಿಲ್ಲ.
ಶಿವಮೊಗ್ಗ-ಬೆ೦ಗಳೂರು ರೈಲು ಹಳಿಯು ಕನಸೂರಿನ ದ್ವಾರದಲ್ಲಿಯೇ ಹಾದು ಹೋಗುತ್ತದೆ. ಗೇಟು ಇಲ್ಲದ ಈ ರೈಲು ಹಳಿಯನ್ನು ದಾಟಿಯೇ ಊರಿನ ಪ್ರವೇಶ ಮಾಡಬೇಕು. ಆದಕಾರಣ ಕೇಕೆ ಹಾಕಿಕೊ೦ಡು ಓಡಾಡುವ ರೈಲುಗಾಡಿಗಳಿಗೆ ಸಿಕ್ಕಿ, ಹಸು-ಎಮ್ಮೆ-ಮನುಷ್ಯಾದಿ ಜೀವಿಗಳು ಆಕಸ್ಮಿಕವಾಗಿ ಆತ್ಮಾಹುತಿ ಮಾಡಿಕೊಳ್ಳುತ್ತಿದ್ದವು. ಹೀಗೆ ಸಾಯುವ ಹಸು-ಎಮ್ಮೆ-ಮನುಷ್ಯಾದಿ ಜೀವಿಗಳ ತೊಗಲು ತಿ೦ದೇ ಜಿಮ್ಮಿ ದಷ್ಟ-ಪುಷ್ಟನಾಗಿದ್ದ.
ಸಸ್ಯಾಹಾರವನ್ನು ಸ೦ಪಾರ್ಣವಾಗಿ ತ್ಯಜಿಸಿದ್ದ ಜಿಮ್ಮಿ , ಚಿಕ್ಕಪುಟ್ಟ ಡೀಲು ಗಳಿಗೆಲ್ಲಾ ಊರಿನೊಳಗೆ ಬರುವುದನ್ನು ನಿಲ್ಲಿಸಿದ್ದ. ಅಕಸ್ಮಾತ್ ಆಹಾರದ ಕೊರತೆಯಾದಗ ಊರಿಗೆ ಬ೦ದು ತನ್ನ ಹಳೆ ಶೈಲಿಯ೦ತೆ ಕೋಳಿ ಹಿಡಿದು ಭೂಗತನಾಗುತ್ತಿದ್ದ.
ಈ ಸುಡುಗಾಡು ಹಳ್ಳಿಗೊ೦ದು ರೈಲ್ವೆ-ಗೇಟು ಕೊಡಿ ಎ೦ದು ಸರಕಾರದ ಮೊರೆಯಿಡುತ್ತಿದ್ದ ಜನರ ಕೋರಿಕೆ ಅರಣ್ಯರೋದನವಾಗಿತ್ತು,
ಇದರ ಸ೦ಪೂರ್ಣ ಫಲಾನುಭವಿಗಳಾಗಿದ್ದ ನನ್ನ ಜಿಮ್ಮಿ, ಮತ್ತವನ ಪಶು-ನರಹ೦ತಕ ಮಿತ್ರರು ಕಪ್ಪು-ಬಿಳುಪು ಸಿನಿಮಾಗಳ ಖಳನಾಕರ೦ತೆ ಗಹಗಹಿಸಿ ನಗುತ್ತಿದ್ದರು...
ವೈಭವೋಪೇತವಾಗಿ ಮೆರೆದ ಕುಕ್ಕನ ಇತಿಹಾಸವೊ೦ದು ಮತ್ತೆ ಮರುಕಳಿಸಿತ್ತು.......
Comments
ಉ: ಹೂನವಿಲೆಯ ಹ೦ತಕ ......(ಪ್ರಶ್ನಾತೀತನಾಗಿ ಮೆರೆದ ಶ್ವಾನದ ಕಥೆ )
In reply to ಉ: ಹೂನವಿಲೆಯ ಹ೦ತಕ ......(ಪ್ರಶ್ನಾತೀತನಾಗಿ ಮೆರೆದ ಶ್ವಾನದ ಕಥೆ ) by partha1059
ಉ: ಹೂನವಿಲೆಯ ಹ೦ತಕ
ಉ: ಹೂನವಿಲೆಯ ಹ೦ತಕ ......(ಪ್ರಶ್ನಾತೀತನಾಗಿ ಮೆರೆದ ಶ್ವಾನದ ಕಥೆ )
In reply to ಉ: ಹೂನವಿಲೆಯ ಹ೦ತಕ ......(ಪ್ರಶ್ನಾತೀತನಾಗಿ ಮೆರೆದ ಶ್ವಾನದ ಕಥೆ ) by gopaljsr
ಉ: ಹೂನವಿಲೆಯ ಹ೦ತಕ ......(ಪ್ರಶ್ನಾತೀತನಾಗಿ ಮೆರೆದ ಶ್ವಾನದ ಕಥೆ )
ಉ: ಹೂನವಿಲೆಯ ಹ೦ತಕ ......(ಪ್ರಶ್ನಾತೀತನಾಗಿ ಮೆರೆದ ಶ್ವಾನದ ಕಥೆ )
In reply to ಉ: ಹೂನವಿಲೆಯ ಹ೦ತಕ ......(ಪ್ರಶ್ನಾತೀತನಾಗಿ ಮೆರೆದ ಶ್ವಾನದ ಕಥೆ ) by RAMAMOHANA
ಉ: ಹೂನವಿಲೆಯ ಹ೦ತಕ .....
ಉ: ಹೂನವಿಲೆಯ ಹ೦ತಕ ......(ಪ್ರಶ್ನಾತೀತನಾಗಿ ಮೆರೆದ ಶ್ವಾನದ ಕಥೆ)
ಉ: ಹೂನವಿಲೆಯ ಹ೦ತಕ ..
ಉ: ಹೂನವಿಲೆಯ ಹ೦ತಕ ......(ಪ್ರಶ್ನಾತೀತನಾಗಿ ಮೆರೆದ ಶ್ವಾನದ ಕಥೆ)
In reply to ಉ: ಹೂನವಿಲೆಯ ಹ೦ತಕ ......(ಪ್ರಶ್ನಾತೀತನಾಗಿ ಮೆರೆದ ಶ್ವಾನದ ಕಥೆ) by venkatb83
ಉ: ಹೂನವಿಲೆಯ ಹ೦ತಕ ......(ಪ್ರಶ್ನಾತೀತನಾಗಿ ಮೆರೆದ ಶ್ವಾನದ ಕಥೆ)
In reply to ಉ: ಹೂನವಿಲೆಯ ಹ೦ತಕ ......(ಪ್ರಶ್ನಾತೀತನಾಗಿ ಮೆರೆದ ಶ್ವಾನದ ಕಥೆ) by chetan honnavile
ಉ: ಹೂನವಿಲೆಯ ಹ೦ತಕ ......(ಪ್ರಶ್ನಾತೀತನಾಗಿ ಮೆರೆದ ಶ್ವಾನದ ಕಥೆ)