ಮರೆಯಲಾಗದ ಸಿನೆಮಾ..೨ ಆಸ್ಕರ್ ವಿಜೇತ ಇಂಗ್ಲೀಷ್ ಸಿನೆಮಾ...

ಮರೆಯಲಾಗದ ಸಿನೆಮಾ..೨ ಆಸ್ಕರ್ ವಿಜೇತ ಇಂಗ್ಲೀಷ್ ಸಿನೆಮಾ...

ಈ ಕಾಲದಲ್ಲಿ ಹಾಲಿವುಡ್‌ನಲ್ಲಿ ಸಿನೆಮಾ ಬಿಡುಗಡೆಯಾಗುವಾಗ, ಬೆಂಗಳೂರಲ್ಲಿ ಅದರ ಪಿರೇಟೆಡ್ ಸಿ.ಡಿ. ಸಿಕ್ಕಿ ನೋಡಿಯಾಗಿರುತ್ತದೆ. ಹಿಂದೆ ಹಾಲಿವುಡ್ ಸಿನೆಮಾ ಬೆಂಗಳೂರಿಗೇ ಬರಲು ಕೆಲ ವರ್ಷಗಳಾಗುತ್ತಿತ್ತು. ಅಲ್ಲಿಂದ ನಮ್ಮ ಊರಿನ ಥಿಯೇಟರ್‌ಗಳಿಗೆ ಬರಲು ಮತ್ತೂ ಒಂದು ವರ್ಷ ಬೇಕು. ಅರ್ಧಕರ್ಧ ರೀಲು ಕಟ್/ಪೇಸ್ಟ್ ಆಗಿ ೨ ಗಂಟೆ ಸಿನೆಮಾ ೧ ಗಂಟೆಗೆ ಇಳಿದಿರುತ್ತಿತ್ತು...


ಉದಾಹರಣೆಗೆ- ಬೆಡ್‌ರೂಮ್ ಸೀನು : ಹೀರೋ ಹೀರೋಯಿನ್ ಬಳಿ ಹೋಗುವನು.... ಡಂ..ಢಮ್..ವಿಲನ್ ಕಡೆಯವನು ಸತ್ತ..!! ನನ್ನ ಬ್ಲಾಗ್ ಬರಹದಂತೆ ಸಿನೆಮಾ ಕತೆನೂ ಎಲ್ಲಿಂದ ಎಲ್ಲಿಗೋ ಹೋಗುವುದು! ( ಅಥವಾ ಈ ಇಂಗ್ಲೀಷ್ ಸಿನೆಮಾಗಳ ಪ್ರಭಾವದಿಂದಲೋ ಏನೋ ನನ್ನ ಬ್ಲಾಗ್ ಬರಹಗಳು ಹೀಗಾಗಿರುವುದು :( )


ಬಿಡುಗಡೆಯಾದ ಸಿನೆಮಾ ಬಗ್ಗೆ ವಿಮರ್ಶೆ ತಿಂಗಳಿಗೊಮ್ಮೆ ಬರುವ ಸಿನಿಮ್ಯಾಗಝೀನ್‌ಗಳಲ್ಲಿ ಕೆಲವೊಮ್ಮೆ ಬರುತ್ತಿತ್ತು. ಅದೂ ಸಿನೆಮಾ ಟಾಕೀಸಿಂದ ಹೋಗಿ ಎಷ್ಟೋ ದಿನಗಳ ನಂತರ! ಹಾಗಾಗಿ ನಾವು ೨-೩ ಬ್ರಿಲ್ಲಿಯಂಟ್! ಹುಡುಗರು ಸಿನೆಮಾ ನೋಡಿ ಬಂದು ಚೆನ್ನಾಗಿದೆ ಎಂದು ಹೇಳಿದ ಮೇಲೇ ಉಳಿದ ಗೆಳೆಯರು ಸಿನೆಮಾಕ್ಕೆ ಹೋಗುತ್ತಿದ್ದರು...


ಇಷ್ಟು ಪೀಠಿಕೆ ಸಾಕಲ್ವಾ? ಇನ್ನು ಸಿನೆಮಾ ಬಗ್ಗೆ-


೨-೩ ಆಸ್ಕರ್ ಇತ್ಯಾದಿ ಪ್ರಶಸ್ತಿ ವಿಜೇತ ಇಂಗ್ಲೀಷ್ ಸಿನೆಮಾದ ಪೋಸ್ಟರ್ ನೋಡಿ, ನಾವು ೩ ಗೆಳೆಯರು ಥಿಯೇಟರ್‌ಗೆ ಹೋದೆವು. ಥಿಯೇಟರ್ ಪೂರ್ತಿ ಲೆಕ್ಕ ಹಾಕಿದರೆ ನಮ್ಮನ್ನು ಸೇರಿಸಿ ಇಪ್ಪತ್ತು ಜನ ಇದ್ದಿರಬಹುದು! ಚಿತ್ರದ ನಾಯಕ ಸಿಗರೇಟು ಎಳಕೊಂಡು ಕಿಟಕಿ ಬಳಿ ಕುಳಿತ್ತಿದ್ದ..ಕುಳಿತ್ತಿದ್ದ...ಕು..ಳಿ..ತ್ತಿ..ದ್ದಾ... ರೀಲು ಸ್ಟಕ್ ಆಗಿದೆ ಎಂದು ತಿಳಿದೆವು- ಆದರೆ ಆತನ ಕಣ್ಣ ರೆಪ್ಪೆ ಅಲುಗುತ್ತಿತ್ತು ಮತ್ತು ಸಿಗರೇಟಿನ ಹೊಗೆ ಮೇಲೆ ಹೋಗುತ್ತಿದ್ದುದರಿಂದ ರೀಲು ಓಡುತ್ತಾ ಉಂಟು ಎಂದು ಗೊತ್ತಾಯಿತು. ಜನ್ಮಕ್ಕೂ ಇನ್ನು ಪ್ರಶಸ್ತಿ ವಿಜೇತ ಸಿನೆಮಾ ನೋಡುವುದು ಬೇಡ, ಹಣ ಕೊಟ್ಟ ತಪ್ಪಿಗೆ ಇಂಟರ್‌ವಲ್ ತನಕ ನೋಡಿ ಹೋಗೋಣ ಎಂದು ನಾವು ಮಾತನಾಡಿಕೊಳ್ಳುತ್ತಿರುವಾಗ- "ಕುಳ್ಳಿನಲ್ಪಡ್ದ್ ಲಕ್ಕುವನಾ ಅತ್ತು ಸೊಂಟಗು ತೊರ್ಪೊಡಾ"-ಇಂಗ್ಲೀಷ್ ಸಿನೆಮಾದಲ್ಲಿ ತುಳು ಡಯಲಾಗ್!!


ನೋಡಿದರೆ ನಮ್ಮಿಂದ ಎರಡು ಸಾಲು ಮುಂದೆ ಒಬ್ಬ ಕುಡುಕ ಕುಳಿತ್ತಿದ್ದವನು ಹೇಳಿದ್ದು!(ಅವನ ಮಾತು ಕನ್ನಡದಲ್ಲಿ - ಕುಳಿತಲ್ಲಿಂದ ಏಳುವಿಯಾ ಇಲ್ಲಾ ಸೊಂಟಕ್ಕೆ ಒದಿಯಲಾ?) ತಮಾಶೆಯೆಂದರೆ ಅಲ್ಲೀವರೆಗೆ ಚೇರ್‌ಗೆ ಅಂಟು ಹಾಕಿದಂತೆ ಅಂಟಿ ಕುಳಿತ್ತಿದ್ದವನು ಧಡಕ್ಕನೆ ಎದ್ದನು! ಥಿಯೇಟರ್‌ನಲ್ಲಿದ್ದವರೆಲ್ಲಾ ಚಪ್ಪಾಳೆ ಹೊಡೆದದ್ದೇ ಹೊಡೆದದ್ದು! ಇದರಿಂದ ಉತ್ತೇಜಿತನಾದ ಕುಡುಕ "ನನ ಮಿನಿ ಸಿಗರೇಟು ಒಯ್ತಾಂಡ, ಕೆಬಿತ ಅಂಡೆಗ್ ಹಾಕುವೆ ( ಕನ್ನಡದಲ್ಲಿ-ಇನ್ನು ಸಿಗರೇಟು ಎಳೆದರೆ ಕೆನ್ನೆಗೆ ಹೊಡೆಯುವೆ) ಅಂದ ತಕ್ಷಣ ನಾಯಕ ಸಿಗರೇಟನ್ನು ಎಸೆದ! ಪುನಃ ಒಂದು ರೌಂಡು ಚಪ್ಪಾಳೆ.. ಥಿಯೇಟರ್‌ನವರು ಲೈಟ್ ಹಾಕಿ, ಬಂದು ಅವನನ್ನು ಹೊರಗೆ ಕಳುಹಿಸಲು ನೋಡಿದರು. ಇಂತಹ ಸಿನೆಮಾ ಯಾಕೆ ಹಾಕಿದ್ದೀರಿ ಎಂದು ಅವರೊಂದಿಗೇ ಜಗಳಕ್ಕಿಳಿದನು. ಸಿನೆಮಾಕ್ಕಿಂತ ಅವನ ಡಯಲಾಗ್‌ಏ ಚೆನ್ನಾಗಿದೆ, ಇರಲಿ ಬಿಡಿ ಎಂದು ಬಾಕಿ ಜನ ಹೇಳಿದ್ದರಿಂದ, ಅವನ ಬಳಿಯ ಲೈಟು ಉರಿಯಲು ಬಿಟ್ಟು( ಜಾಗ್ರತೆಗೆ), ಸಿನೆಮಾ ಮುಂದುವರಿಸಿದರು. ಈವಾಗ ಫೋಕಸ್ ಲೈಟು ಅವನ ಮೇಲೇ ಇದ್ದುದರಿಂದ ಎದ್ದು ನಿಂತು ಸಿನೆಮಾದ ಹೀರೋ ಮತ್ತು ಉಳಿದವರ ಆಕ್ಟಿಂಗ್‌ನ್ನು ಅಣಕಿಸುತ್ತಾ ಡಯಲಾಗ್ ಹೇಳುತ್ತಿದ್ದನು.


ನಮಗಂತೂ ನಕ್ಕೂ ನಕ್ಕೂ ಸುಸ್ತು. "ತುಳುವಿಗೆ ಡಬ್!" ಆದ ಪ್ರಥಮ ಇಂಗ್ಲೀಷ್ ಸಿನೆಮಾ ನೋಡಿದ ಖುಷಿ ಇಂದಿಗೂ ಮರೆಯಲಾಗಿಲ್ಲ.


-ಗಣೇಶ.


 


 



 



 

Rating
No votes yet

Comments