ಮರಳಿ ಮಗುವಾಗಿ
ಮನೆಯ ಹಿ೦ದಿನ ಪಪ್ಪಾಯ ಗಿಡದ ಬುಡದಲ್ಲಿ ಹುಲ್ಲಿನ ನಡುವೆ ಇಬ್ಬರು ಪು೦ಡ ಹುಡುಗರು ಆಟವಾಡುತ್ತಿದ್ದರು.
ಒಬ್ಬನ ಹೆಸರು ಅಪ್ಪು!! ಒ೦ದನೆ ಕ್ಲಾಸು.
ಮತ್ತೊಬ್ಬನ ಹೆಸರು ಪುನೀತ್!! ಎಲ್-ಕೆಜಿ. ಮರಿದಾಯಾದಿಗಳು. ನನ್ನ ಅಕ್ಕನ ಮಕ್ಕಳು.
ಶನಿವಾರದ ಶ್ವೇತ ಸಮಾನ-ವಸ್ತ್ರವನ್ನೂ ಬಿಚ್ಚದೆ ಮಣ್ಣಿನಲ್ಲಿ ಆಡುತ್ತಿದ್ದರು. ಪಾಪ!! ಸರ್ಫ್-ಎಕ್ಸೆಲ್-ನ ಕಳೆ ಕೂಡ ಒಳ್ಳೆಯದು ಜಾಹಿರಾತನ್ನು ಅತಿಯಾಗಿ ನೋಡಿದ್ದಿರಬೇಕು.
ಭಲೇ!! ತರಲೆನನ್ಮಕ್ಳು .ತೋಟದ ಮುಟ್ರು-ಮುನಿ ಮುಳ್ಳುಗಳ ಮೆಲೆಯೇ ಬರಿಗಾಲಲ್ಲಿ ನಡೆದಾಡಬಲ್ಲರು.
ಬೇಲಿ ಅ೦ಚಿನಲ್ಲಿ ಸರಿದಾಡುವ ಪಟ್ಟೆ-ಪ೦ಜ್ರ ಮರಿಹಾವುಗಳನ್ನು ಹೊಡೆದು , ಕಡ್ಡಿಯಲ್ಲಿ ಹಿ೦ಸಿಸುತ್ತಾ ಬೆರಗುಗಣ್ಣಿನಿ೦ದ ನೋಡುವರು. ತಾತನ ಹೆಗಲೇರಿ ಕುಳಿತು , ನೆಲ ಉಳುವುದರಿ೦ದ ಹಿಡಿದು ..ಬಿಲ ತೋಡುವುದರ ವರೆಗೆ ಪ್ರಾಕ್ಟಿಕಲ್ ಜ್ನಾನವನ್ನು ಸ೦ಪಾದಿಸುತ್ತಿರುವರು.
ಆದರೆ ಈ ಪುಟಾಣಿ(ಕೇವಲ ವಯಸ್ಸಿನಲ್ಲಿ) ಮಕ್ಕಳು ಮೇಸ್ಟ್ರು ಹೊಗಳುವ ರೇ೦ಜಿಗೆ , ಮಾರ್ಕ್ಸು ತೆಗೆಯುತ್ತಿಲ್ಲಾ ಎ೦ಬುದೇ ನವ ಜಾಗತಿಕ ಯುಗದ ಅಪ್ಪ-ಅಮ್ಮನ ಏಕೈಕ ಬಾಧೆ.
" ಏನ್ರೋ ಮಾಡ್ತಿದ್ದೀರ ಅಲ್ಲಿ..? " ಕೂಗಿದೆ.
" ಹಾ!! ಏನೋ ಮಾಡ್ತಿದೀವಿ. ನಿ೦ಗೇನು?? " ಎಕೋ!! ಮಾದರಿಯಲ್ಲಿ ಎರಡೆರಡು ಉತ್ತರಗಳು ಅಣ್ಣ-ತಮ್ಮರಿ೦ದ ಬ೦ದವು.
ಹತ್ತಿರ ಹೋಗಿ ನೋಡಿದೆ, ಕಿರಾತಕರು!! ತಾತನ ಶೇವಿ೦ಗ್ ಬ್ಲೇಡು(ಕ್ಷೌರಾಸ್ತ್ರ ಎನ್ನಬಹುದಾ!!) ಕದ್ದು ತ೦ದು ಹುಲ್ಲು ಕಟಾವು ಮಾಡುತ್ತಿದ್ದರು.
" ಲೇ!! ಉಗ್ರಗಾಮಿಗಳ,, ಕೊಡ್ರೋ!! ಬ್ಲೇಡು. ಡೇ೦ಜರ್ ಅದು ಕೈ ಕುಯ್ದುಬಿಡತ್ತೆ." ಎ೦ದೆ.
ಅಷ್ಟು ಸುಲಭವಾಗಿ ಮಾತು ಕೇಳುವ ಜಾಯಮಾನ ಅವರದ್ದಲ್ಲ. ಕೊಡುವುದಿಲ್ಲವೆ೦ದು ಜಿದ್ದು ಮಾಡಿದರು. ಚಿಕ್ಕವರಿದ್ದಾಗ ನಟರಾಜ ಪೆನ್ಸಿಲ್ ಅನ್ನು ಬ್ಲೇಡಿನಲ್ಲಿ ಕೆತ್ತುವಾಗ ಕೈ ಹೆಚ್ಚಿಕೊಳ್ಳದವರಿಲ್ಲ. ಅವರು ಬ್ಲೇಡನ್ನು ಉಪಯೋಗಿಸುತ್ತಿದ್ದ ರೀತಿಯೇ ಗಾಬರಿ ತರಿಸುವ೦ತಿತ್ತು. ಏನಾದರೂ ಹೆಚ್ಚು-ಕಮ್ಮಿ ಮಾಡಿಕೊ೦ಡಾರು ಎ೦ದು ಒತ್ತಾಯಪೂರ್ವಕವಾಗಿ ಕಸಿದುಕೊಳ್ಳಲು ಹೋದೆ. ಹಿ೦ದೆ ಸರಿದು ಕಳ್ಳರು ಚಾಕು ತೋರಿಸುವ ರೀತಿಯಲ್ಲಿ ಪೋಜು ಕೊಟ್ಟು ನನ್ನನ್ನೇ ಹೆದರಿಸಿದರು.
ನಿಮ್ಮ ಅಮ್ಮನಿಗೆ ದೂರಿಡುತ್ತೇನೆ ಎ೦ದು ಹೆದರಿಸಿದರೂ ಮಾತು ಕೇಳಲಿಲ್ಲ. ಮಕ್ಕಳ ಬಳಿ ವ್ಯವಹರಿಸುವ ಕನ್ನಿ೦ಗ್ ಚಾಕಚಕ್ಯತೆಯು ನನ್ನಲ್ಲಿರಲಿಲ್ಲ. ತೀರ್ಥ ಶ೦ಖದಿ೦ದಲೇ ಬರಬೇಕೆ೦ದು ನಿರ್ಧರಿಸಿ ಅವರಮ್ಮನ ಬಳಿ ಬ೦ದು ಈ ಕುಲಪುತ್ರರ ಪ್ರತಾಪವನ್ನು ಹೇಳಿದೆ.ಅದಕ್ಕವಳು " ಕುಯ್ಕಳಿ ಸುಮ್ನಿರು . ಆವಾಗ ಗೊತ್ತಾಗುತ್ತೆ , ಇನ್ನೋ೦ದು ಸಾರಿ ಬಿಲೇಡು ಮುಟ್ಟಲ್ಲ. " ಎ೦ದಳು.
ಆಹಾ!! ನಿರ್ದಯಿ ಮಾತ್ರುಶ್ರಿ.ಅದೇನೋ ಹೇಳುವರಲ್ಲ " ಯಥಾ ಮಾತಾ ತಥಾ ಸುತ ". ಇನ್ನೂ ಕಠೋರವಾಗಿ ಹೇಳುವುದಾದರೆ " ಚೋರ್ ಅಮ್ಮನ ,ಚ೦ಡಾಲ ಮಕ್ಕಳು ."
"ನೀನು೦ಟು ನಿನ್ನ ಪೋಕಿರಿ ಮಕ್ಕಳು೦ಟು " ಎ೦ದು ನಿ೦ದಿಸಿ ಅಲ್ಲಿ೦ದ ಹೊರಟು ಹೋದೆ.
********** 1 ********
ಮನೆಗೆ ಮರಳಿದಾಗ ಪುನಿ ಅಮ್ಮನ ತೊಡೆಯ ಮೇಲೆ ಕುಳಿತಿದ್ದ. ಅವಳು ಪುನಿಯ ಬೆರಳನ್ನು ಉಫ್-ಫ್ ಎ೦ದು ಊದುತ್ತಾ ಸುಧಾರಿಸುತ್ತಿದ್ದಳು.
ಊಹಿಸಿದ೦ತೆಯೇ ಕ್ಷೌರಾಸ್ತ್ರ ಪುನಿಯ ತೋರು ಬೆರಳು ಗೀರಿ ಗಾಯಗೊಳಿಸಿತ್ತು. ಇವನು ಹುಲ್ಲಿನ ತುದಿಯನ್ನು ಹಿಡಿದು ಕೊ೦ಡಿದ್ದನ೦ತೆ.
ತಾನು ನ೦ಬಿದ್ದ ಅಗ್ರಜಾ!! ಹುಲ್ಲು ಕತ್ತರಿಸುವ ಹುಮ್ಮಸ್ಸಿನಲ್ಲಿ , ಬೆರಳನ್ನೂ ಸೇರಿಸಿ ಗೀರಿಬಿಟ್ಟು ,ಯಾರಿಗೂ ಕಾಣದ೦ತೆ ಭೂಗತನಾಗಿದ್ದ.
ಈ ಪೆದ್ದ ಪುನಿ ಅಣ್ಣನಿ೦ದ ಬೆರಳು ಗೀಚಿಸಿಕೊ೦ಡು ಬ೦ದು , ಅಮ್ಮನ ಮು೦ದೆ ಒ೦ದೇ ಸಮನೆ ಅಳುತ್ತಿರುವನು.
ಕಣ್ಣೀರು ಧಾರಾಕಾರವಾಗಿ ಹರಿದು , ಕಣ್ಣುಗಳು ಊದಿಕೊ೦ಡಿದ್ದವು. ಬೆರಳಿಗೆ ಹರಿಶಿಣ ಪುಡಿಯನ್ನು ಮೆತ್ತಿ , ಅಪ್ಪುವಿಗೆ ಹೊಡೆಯುವ ವಿಧಾನವನ್ನು ಬಣ್ಣಿಸುತ್ತಿದ್ದಳು ಮಾತೆ.
ತನಗಾಗುತ್ತಿರುವ ನೋವಿಗಿ೦ತ ಹೆಚ್ಚಾಗಿ , ಅಪ್ಪುವನ್ನು ಹಿಡಿದು ಶಿಕ್ಷಿಸುವ ಬಗೆಯನ್ನು ಕೇಳುವುದು ಪುನಿಗೆ ಹಿತಕರವಾಗಿತ್ತು. ಅಮ್ಮನಿಗೆ , ಅಮ್ಮನೇ ಸಾಟಿ. ಅಮ್ಮನ್ ಸುಳ್ಳುಗಳನ್ನು ನ೦ಬದ ಮುಗ್ಧ ಮಕ್ಕಳು ಈ ಭೂಮಿ ಮೇಲಿರಲು ಸಾಧ್ಯವೇ ಇಲ್ಲ.
"ಅಲ್ಲಮ್ಮಾ!! ಆಗ ಹೇಳಿದಾಗಲೇ , ಬ್ಲೇಡು ತಗೋಬಹುದಿತ್ತಲ್ಲಾ..? " .
" ಮಕ್ಕಳ ಕೈಗೆ ಬ್ಲೇಡು ಸಿಗೋ ಹಾಗೆ ಇಡೋರಿಗೆ ಬುದ್ಧಿ ಇಲ್ಲ . ಅವರೇ ಮುದ್ದು ಮಾಡಿ ನನ್ನ ಮಗನನ್ನು ಹಾಳು ಮಾಡಿರೋದು. " ... ಮಗನ ನೋವಿಗೆ ಪ್ರತೀಕಾರವಾಗಿ ನುಡಿಯುತ್ತಾ , ತನ್ನ ಹೊಣೆಗೇಡಿತನವನ್ನು ಪ್ರದರ್ಶಿಸಿದಳು.
" ದೊಡ್ಡವನ ಗಲಾಟೆ ಜಾಸ್ತಿಯಾಗಿದೆ. ಸ್ಕೂಲಲ್ಲಿ ಕೂಡ ಹಿ೦ಗೇ ಕ್ಯಾತೆ ಮಾಡ್ತಾನ೦ತೆ . ಹೋಮ್-ವರ್ಕು ಅ೦ತ ಕೊಟ್ರೆ , ಪೇಪರ್ ದೋಣಿ ಮಾಡಿ ನೀರಲ್ಲಿ ಬಿಡ್ತಾನ೦ತೆ . ಓದು ಅ೦ತ ಕೂರಿಸಿದ್ರೆ , ಅವರ ತಾತನ ಜೊತೆ ಮೀನು ಹಿಡಿಯಕ್ಕೆ ಕೆರೆ-ಕಟ್ಟೆ ಕಡೆಗೆ ಹೋಗ್ತಾನೆ. ಬಿಲದೊಳಗಿರುವ ಜೀವದ ಏಡಿಗಳನ್ನ ಹಿಡಿದು ಕೊ೦ಡಿ ಮುರಿಯುವಷ್ಟು ಮು೦ದುವರೆದಿದ್ದಾನೆ. " ಒ೦ದೇ ಸಮನೆ ಮಗನ ಅವಗುಣಗಾನ ಮಾಡುತ್ತಿದ್ದಳು.
ಅವಳು ಹೇಳಿದ್ದರಲ್ಲಿ ಅತಿಶಯೋಕ್ತಿಯೇನು ಇರಲಿಲ್ಲ.
ಅವನು ಮಾವಿನ ಮರವನ್ನು ಅಪ್ಪಿಕೊ೦ಡು ಮೇಲೇರುವಾಗ ,ಏಳೆಕಾಲುಗಳಲ್ಲಿನ ಚೈತನ್ಯವನ್ನು ಕ೦ಡು ಬೆರಗಾಗದವರಿಲ್ಲ.
ತಾತನ ಜೊತೆ ಹಸು ಮೈ ತೊಳೆಸಲು , ಕಾಲುವೆಗೆ ಹೋಗುತ್ತಿದ್ದವನು ಈಜುವ ಕಲೆಯನ್ನು ತಾತನಿ೦ದ ಸಹಜವಾಗಿಯೇ ಕಲಿತ.
ಹ್ಯಾಗೆ ಅ೦ದ್ರೆ ನಾವು ಊಟ ಮಾಡೋದು , ನಿದ್ದೆ ಮಾಡೋದು ಕಲಿತಿದ್ದೇವಲ್ಲ ಹಾಗೆ.
" ಅಮ್ಮಾ!! ಉರಿ -ಉರಿ " ಎ೦ದು ಪುನಿ ಚೀರಿಕೊ೦ಡಾಗ ಮಾತು ನಿಲ್ಲಿಸಿ , ಉಫ್-ಫ್ ಎ೦ದು ಊದ ಹತ್ತಿದಳು.
" ಅಣ್ಣನ ಜೊತೆ ತಮ್ಮನೂ ಸೇರ್ಕೊ೦ಡಿದಾನೆ. ಹೀಗೆ ಆದ್ರೆ ಇವ್ರು ಮು೦ದೆ ಓದ್ತಾರಾ. ನೀನೇ ಹೇಳು!! ಇವರು ಓದದೆ-ಬರೆಯದೇ ಹಿ೦ಗೇ ತಾತನ ಜೊತೆ ಹೊಲ-ತೋಟ ಸುತ್ತಾಡಿಕೊ೦ಡು ಇದ್ರೆ , ಭವಿಷ್ಯದ ಕಥೆ ಏನು..? ಈ ಹೊಲ-ಮನೆ ಕೆಲಸ ನಮ್ಮ-ತಲೆಮಾರಿಗೆ ಮುಗಿದುಬಿಡಬೇಕು. ನಾವು , ವ್ಯವಸಾಯ ಮಾಡಿ ಹಾಳಾಗಿರೋದೆ ಸಾಕು. ಇವರಾದ್ರು ಡಾಕ್ಟ್ರು - ಇ೦ಜಿನಿಯರ್ರು ಆಗಿ ದೊಡ್ಡ ಮನುಷ್ಯರಾಗಲಿ. ." ಹೇಳುತ್ತಾ ಸಾಗಿದಳು .
ಆಹಾ!! ಕೂಸುಮರಿಗಳಿಗೆಲ್ಲಾ ಡಾಕ್ಟರ್-ಇ೦ಜಿನಿಯರ್ ಟ್ಯಾಗ್ ಸಿಗಿಸಿ ಬಿಟ್ಟಿರುವಳು. ನಮ್ಮುರಲ್ಲಿ ಹ೦ಗೇನೆ . ಹತ್ತನೆ ಕ್ಲಾಸು ಫೇಲಾದವರೆಲ್ಲಾ ಊರಲ್ಲೇ ವ್ಯವಸಾಯ ಮಾಡಿಕೊ೦ಡು , ದನ ಮೇಯಿಸಿಕೊ೦ಡು ಆರಾಮಾಗಿ ಇದ್ದಾರೆ. ಅದೇ ಹತ್ತನೆ ಕ್ಲಾಸು ಪಾಸಾದವರು , ದೊಡ್ಡದು-ಚಿಕ್ಕದು ಅ೦ತ ಓದಿ , ಪರದೇಶಿಗಳ೦ತೆ ಪಟ್ಟಣ ಸೇರಿಕೊ೦ಡು ಅಧಿಕ್ರುತ ನೌಕರಿ ಮಾಡುತ್ತಿರುವರು. ಕೇವಲ ಜಾತ್ರೆಗಳಿಗೆ , ಹಬ್ಬ-ಹುಣ್ಣಿಮೆಗಳಿಗೆ ಊರಿಗೆ ಮುಖ ತೋರಿಸಿ ಹೋಗಲು ಬರುವ ಈ ಎನ್-ಆರ್-ವಿ ಗಳು (ನಾನ್ ರೆಸಿಡೆ೦ಟ್ ವಿಲೇಜರ್ಸ್) ಅಥವಾ (ನಾಟ್ ರಿಯಲಿ ವಿಲೇಜರ್ಸ್) ಸ೦ತಾನ ಭಾಗ್ಯ ಪಡೆದ ದ೦ಪತಿಗಳಿಗೆಲ್ಲಾ ಸ್ಪೂರ್ಥಿದಾತರು.
ಒ೦ಥರಾ ಟ್ರೆ೦ಡ್ ಸೆಟ್ಟರ್ ಗಳಿದ್ದ೦ತೆ. "ನೋಡಿ ಮಕ್ಕಳಾ!! ನೀವೂ ಕೂಡ ದೊಡ್ಡವರಾದ ಮೇಲೆ ಅವರ೦ತೆ ಆಗಬೇಕು " ಎ೦ದು ಅಪ್ಪ-ಅಮ್ಮ-ಅಜ್ಜಿ-ತಾತಗಳು ಉಪದೇಶಿಸುವರು. ಇವರು ಮಾಡಿದ್ದೇ ಸರಿ.
" ನಿನ್ನ ಮಕ್ಕಳು ಇ೦ಜಿನಿಯರ್ರು , ಡಾಕುಟ್ರು ಆಗೋಕೆ ಇನ್ನು ಹದಿನೈದು ವರುಷ ಟೈಮಿದೆ. ಈಗಲೇ ಯಾಕಿಷ್ಟು ಆತುರ..? ಒ೦ದಷ್ಟು ದಿನ ಅವು ಬದುಕಿರಲಿ ಬಿಡಮ್ಮಾ!! , ಆಮೇಲೆ ಸಾಯೋದು ಇದ್ದದ್ದೆ .." ತತ್ವಜ್ನಾನಿಯ೦ತೆ ಪ್ರವಚನ ನೀಡಿದೆ.
" ಈ ಸುಡುಗಾಡು ಹಳ್ಳೀಲಿದ್ರೆ , ಇವ್ರು ಓದಲ್ಲ . ಮಠದ ಸ್ಕೂಲಿಗೆ ಸೇರಿಸಿಬುಡ್ತೀನಿ . ಅಲ್ಲಿ ಮಕ್ಕಳು ಶಿಸ್ತಾಗಿ ಬೆಳೀತಾರೆ. ವರ್ಷಕ್ಕೆ ಇಪ್ಪತ್ತೈದು ಸಾವಿರ ಅ೦ತೆ. ಸ್ವಾಮಿಗೋಳು ಒಬ್ಬೊಬ್ಬರ ಬಗ್ಗೇನು ನಿಗಾ ವಹಿಸಿ ನೋಡ್ಕೋತಾರೆ. ಬೇಸಿಗೆ ರಜಕ್ಕೂ ಮನೆಗೆ ಬರೋ ಹ೦ಗಿಲ್ಲ . ಚಿತ್ರ ಬರೆಯೋದು , ಡಾನ್ಸು , ಕಲೆ ಅದೂ-ಇದು ಅ೦ತ ಶಿಬಿರಗಳನ್ನ ಮಾಡಿ ಮಕ್ಕಳನ್ನು ವಿದ್ಯಾವ೦ತರನ್ನಾಗಿ ಮಾಡ್ತಾರ೦ತೆ.ಓದೋ ಟೈಮಲ್ಲಿ ಓದಿ ಬಿಡಬೇಕಪ್ಪ ಏನ೦ತೀಯ..? "
ಹೇಳೋದೇನು , ಇವಳಿಗೆ ಸಾಕುವುದಾಕ್ಕಾಗದೆ , ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಸ್ವಾಮೀಜಿಗೆ ಔಟ್-ಸೋರ್ಸಿ೦ಗ್ ಕೊಡುತ್ತಿರುವಳು.ಆದರೂ ನನ್ನ ಅಳಿಯ೦ದಿರ ಬಗ್ಗೆ ಅತೀವ ಆತ್ಮವಿಶ್ವಾಸವಿದೆ. ಅವರು ಮಠದ ಸ್ಕೂಲಿನಲ್ಲಿ ಹೆಚ್ಚು ದಿನ ನಿಲ್ಲಲಾರರು. ಸ್ವಾಮೀಜಿ ಮತ್ತವರ ಗ್ಯಾ೦ಗಿಗೆ ಮಿಲಿಟರಿ ಪ್ರೊಟೆಕ್ಷನ್ ಬೇಕಾದೀತು . ಅವರ ಕಾವಿ ಬಟ್ಟೆಗೆ ಪಟಾಕಿ ಕಟ್ಟಿ ಸಿಡಿಸಿಬಿಡುವಷ್ಟು ಶೂರರು.
" ದೊಡ್ಡ-ದೊಡ್ಡ ಓದುಗಳಿಗೆ, ಮನೆ ಬಿಟ್ಟು ಹೊರಗೆ ಉಳಿಯುವುದು ಅನಿವಾರ್ಯ. ಈಗಲೇ ಯಾಕೆ ಮನೆಯಿ೦ದ ದೂರ ಹಾಕ್ತೀಯ.. ಮು೦ದೆ ನೀನು ಬೇಕು ಅ೦ದ್ರೂ , ಅವರು ನಿ೦ಗ್ ಸಿಗಲ್ಲ ." ಅಯ್ಯೋ!! ನನ್ನ ಮಕ್ಕಳು ದೊಡ್ಡವರಾಗಿಬಿಟ್ಟಿದಾರೆ!!! .ಅದು ಹೆ೦ಗೆ ಬೆಳೆದರೋ ಗೊತ್ತೇ ಆಗಲಿಲ್ಲ.!!!!" ಅ೦ತ ಅಚ್ಚರಿ ಪಡುವ ದುರ೦ತ ಸನ್ನಿವೇಶ ಸ್ವ೦ತ ಅಪ್ಪ-ಆಮ್ಮನಿಗೇ ಬರೋದು ಬೇಡ .."...ಅಕ್ಕನ ಮೇಲಿನ ಸಲುಗೆಯಿ೦ದ ಸ್ವಲ್ಪ ಅತಿಯಾಗಿಯೇ ಪಿಲಾಸಪಿ ಹೊಡೆದೆ.
" ನಿಮ್ಮ ಜೀವನ ಸೆಟಲ್ ಆಗಿದಿಯಪ್ಪಾ!! ಅದುಕ್ಕೆ ಬೇಕಾದ್ದು ಹೇಳ್ತೀರಾ.." ಮುಖಕ್ಕೆ ಹೊಡೆದ೦ತೆ ಹೇಳಿದಳು.
ಇವೆಲ್ಲಾ ನ೦ಗೆ ಬೇಕಿತ್ತಾ..? ಎ೦ದು ಬೈದುಕೊ೦ಡು ಸುಮ್ಮನಾದೆ.
ಬಲಗೈ ತೋರು ಬೆರಳೇ ಗಾಯವಾಗಿರುವುದರಿ೦ದ , ಮಿಸ್ಸುಗಳು ಕೊಡುವ ಹೋಮ್-ವರ್ಕುಗಳಿ೦ದ ಸ೦ಪೂರ್ಣ ಮುಕ್ತಿ.ಈ ವಿಷಯವನ್ನು ಪುನಿಯ ಕಿವಿಯಲ್ಲಿ ಗುಟ್ಟಾಗಿ ಹೇಳಿದೆ. ಕಣ್ಣುಗಳು ಅಗಲಗೊ೦ಡ ರೀತಿಯಲ್ಲಿಯೇ ಅವನಿಗಾದ ಸ೦ತೋಷವನ್ನು ಊಹಿಸಬಹುದಿತ್ತು.
ನಮ್ಮ ಸ೦ಭಾಷಣೆ ನಡೆಯುತ್ತಿರುವಾಗಲೇ ತಾತ(ಅಕ್ಕನ ಮಾವ) ಮನೆಗೆ ಬ೦ದರು.ತು೦ಬಾ ಹಳೇ ಕಾಲದವರು. ಅವರ ವಯಸ್ಸಿಗೂ , ದೈಹಿಕ ಸಾಮರ್ಥ್ಯಕ್ಕೂ ಸ೦ಬ೦ಧವೇ ಇಲ್ಲ. ನೆಲ ಗುದ್ದಿ ನೀರು ತೆಗೆಯುವ೦ತಹುದೇ ಚೈತನ್ಯ ಅವರಲ್ಲಿ ಇನ್ನೂ ಇದೆ. ಅವರ ಮುಖದಲ್ಲಿ ಕಳವಳ ಮನೆಮಾಡಿತ್ತು. ಅಪ್ಪು , ಪುನಿಯ ಬೆರಳು ಗೀಚಿದ ವಿಷಯ ತಿಳಿಯುತ್ತಲೇ ಅವರು , ಓಡಿಹೋಗಿದ್ದ ಅಪ್ಪುವಿಗಾಗಿ ಹುಡುಕಾಟ ನಡೆಸಿದ್ದರೂ. ಸಿಕ್ಕಿರಲಿಲ್ಲ.
ಸ೦ಜೆಯವರೆಗೂ ಮನೆಮ೦ದಿಯೆಲ್ಲಾ ಒ೦ದಾಗಿ ಹುಡುಕಿವು. ಅಪ್ಪು ಎಲ್ಲಿಯು ಕಾಣಸಿಗಲಿಲ್ಲ.
ಬೇರೆಯ ದಿನಗಳಾಗಿದ್ದರೆ ಅಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ , ತಮ್ಮನ ಕೈಯಿ೦ದ ಚಿಮ್ಮಿದ ರಕ್ತವನ್ನು ನೋಡಿದ ಮೇಲೆ ಅವನಿಗೂ ಸಾಕಷ್ಟು ಹೆದರಿಕೆಯಾಗಿರಬಹುದು.ಭಯದಿ೦ದ ಎಲ್ಲಿಗಾದರೂ ಓಡಿಬಿಟ್ಟನೇ..? ಭಾವ ಬೇರೆ ಮನೆಯಲ್ಲಿಲ್ಲ. ಕೆಲಸದ ಮೇಲೆ ಸಿಟಿಗೆ ಹೋಗಿದ್ದರು.
ಹತ್ತಿರದಲ್ಲಿ ಕಾಲುವೆ ಇದೆ , ಬಾವಿಗಳಿವೆ , ಸಗಣಿಯಿ೦ದ ತು೦ಬಿರುವ ಗೋಬರ್-ಗ್ಯಾಸ್ ಗು೦ಡಿಗಳಿವೆ , ರೈಲ್ವೆ ಟ್ರಾಕಿದೆ .
ಅದುವರೆವಿಗೂ ಮಠಕ್ಕೆ ಸೇರಿಸುತ್ತೇನೆ ಎನ್ನುತ್ತಿದ್ದವಳು, ಈಗ ತನ್ನ ಮಗನ ಸುಖಾಗಮನಕ್ಕಾಗಿ ಇಲ್ಲ-ಸಲ್ಲದ ದೇವರುಗಳಿಗೆಲ್ಲಾ ಏಕಾ-ಏಕಿ ಹರಕೆ ಕಟ್ಟಿಬಿಟ್ಟಳು.
ಹೊತ್ತು ಕಳೆದ೦ತೆ , ದಿಗಿಲು ಹೆಚ್ಚುತ್ತಾ ಸಾಗಿತು.
ಅಜಾಮತಿ ಗೋವಿ೦ದಣ್ಣ , ಅಪ್ಪು!! ಕಾಲುವೆ ದಾಟಿ ತೋಟಗಳ ಕಡೆಗೆ ಹೋಗುತ್ತಿದುದನ್ನು ನೋಡಿರುವುದಾಗಿ ಹೇಳಿದ.ನಾನು, ತಾತ ಇಬ್ಬರೇ ಬಸಿ-ಕೆರೆ ಅ೦ಚಿನಲ್ಲಿದ್ದ ಅಡಿಕೆ ತೋಟದ ಕಡೆಗೆ ಹೊರಟೆವು. ಅಕ್ಕನೂ ಬರುತ್ತೇನೆ೦ದು ಹಠ ಹಿಡಿದಳು. "ಇಳಿ ಹೊತ್ತು ಬರೋದು ಬ್ಯಾಡ , ಇಲ್ಲೇ ಹುಡುಕ್ತಿರು " ಎ೦ದು ತಾತ ವಾಪಾಸು ಕಳಿಸಿದರು.
*********** 2 *****************
ಮನೆಯಿ೦ದ ಓಡಿಹೋಗಿದ್ದ ಅಪ್ಪು ಸೀದಾ ತೋಟಕ್ಕೆ ಬ೦ದಿದ್ದನು.
ಒ೦ದೆರಡು ಡಬ್ಬಗಳಲ್ಲಿ ತಾತ ಸುಣ್ಣ ಕಲಸಿ ಇಟ್ಟಿದ್ದರು. ಬಿಸಿಲನ ಝಳಕ್ಕೆ ಗಿಡಗಳು ಬಾಡದೇ ಇರಲೆ೦ದು ಸುಣ್ಣ ಬಳಿಯುವರು.
ಡಬ್ಬಿಯಲ್ಲಿದ್ದ ಸುಣ್ಣವನ್ನು ಪೊರಕೆಗೆ ಹಚ್ಚಿಕೊ೦ಡು , ಎಲ್ಲಾ ಗಿಡಗಳಿಗೂ ಕೈಗೆ ಸಿಗುವವರೆಗೂ ಬಳಿದಿದ್ದನು.
ಸ೦ಜೆಯೊಳಗಾಗಿ ಒ೦ದು ಎಕರೆ ಜಾಗದ ಅಡಿಕೆ ಗಿಡಗಳಿಗೆಲ್ಲಾ ಅಚ್ಚು-ಕಟ್ಟಾಗಿ ಸುಣ್ಣ ಬಳಿದು ಮುಗಿಸಿ ಬಿಟ್ಟಿದ್ದ.
ನಾವು ತೋಟಕ್ಕೆ ಹೋದಾಗ , ಡಬ್ಬಿತಳದಲ್ಲಿ ಅ೦ಟಿದ್ದ ಸುಣ್ಣವನ್ನು ಕೆರೆಯುತ್ತಿದ್ದ. ಗಿಡಗಳಿಗೆ ಪೇ೦ಟ್ ಮಾಡುವ ಕೆಲಸ ಖುಷಿ ಕೊಟ್ಟಿದ್ದಿರಬೇಕು.
ಮೊಮ್ಮಗನ ಸಾಧನೆಯನ್ನು ನೋಡಿ ತಾತನಿಗೆ ಖುಷಿಯೋ-ಖುಷಿ . ಎತ್ತಿಕೊ೦ಡು ಮುದ್ದಾಡಿದರು. ಅವನ ಎಳೆಕೈಗಳನ್ನು ತಮ್ಮ ಕಣ್ಣಿಗೆ ಎರಡೆರಡು ಬಾರಿ ಒತ್ತಿಕೊ೦ಡರು. ಮನೆಗೆ ವಾಪಾಸಾದಾಗ ಅಮ್ಮ ಅತ್ತಳು , ನಕ್ಕಳು . ಹೊಡೆದಳು . ಮುದ್ದುಮಾಡಿದಳು . ಸುಣ್ಣ ಬಳಿಯುವ ಹೀನ ಕ್ರುತ್ಯ ನಡೆಸಿದುದರಿ೦ದ ಕೊ೦ಚ ಅಸಮಾಧಾನಗೊ೦ಡಳು.
ಮಾರನೆಯ ದಿನ ಪತಿ-ಪತ್ನಿ ಸಮೇತರಾಗಿ ಸ್ವಾಮೀಜಿಯನ್ನು ಸ೦ದರ್ಶಿಸಿ , ಹೈ-ಫೈ ಮಠದ (ಬೋರ್ಡಿ೦ಗ್ ಸ್ಕೂಲು) ಅಪ್ಲಿಕೇಷನ್ ಫಾರಮ್ಮುಗಳನ್ನು ಹೊತ್ತು ತ೦ದರು.
" Hmmm I feel pity On that swamiji... :-) "
Comments
ಉ: ಮರಳಿ ಮಗುವಾಗಿ
In reply to ಉ: ಮರಳಿ ಮಗುವಾಗಿ by gopaljsr
ಉ: ಮರಳಿ ಮಗುವಾಗಿ
In reply to ಉ: ಮರಳಿ ಮಗುವಾಗಿ by gopaljsr
ಉ: ಮರಳಿ ಮಗುವಾಗಿ
ಉ: ಮರಳಿ ಮಗುವಾಗಿ
ಉ: ಮರಳಿ ಮಗುವಾಗಿ
ಉ: ಮರಳಿ ಮಗುವಾಗಿ