ಜಾತಿ ವಿನಾಶವೋ? ಸಂಪ್ರದಾಯಗಳ ವಿನಾಶವೋ?

ಜಾತಿ ವಿನಾಶವೋ? ಸಂಪ್ರದಾಯಗಳ ವಿನಾಶವೋ?

ಇತ್ತೀಚೆಗೆ ಶಿವಮೊಗ್ಗದಲ್ಲಿ ಜಾತಿ ವಿನಾಶ ಸಮಾವೇಶವೊಂದು ಜರುಗಿದ್ದು ಒಳ್ಳೆಯ ಸುದ್ದಿ. ಸಮಾಜದಲ್ಲಿರುವ ಅನ್ಯಾಯ ಶೋಷಣೆಗಳನ್ನು ಹೋಗಲಾಡಿಸಲು ಚಳುವಳಿಗಳು, ಸಮಾವೇಶಗಳು ಯಾವ ಸ್ವರೂಪದಲ್ಲಾದರೂ ನಡೆಯಲೇಬೆಕು. ಅದು ಭೌದ್ದಿಕ ಚಳುವಳಿಯಾಗಲಿ, ಸಾಮಾಜಿಕ ಚಳುವಳಿಯಾಗಲೀ ಎರಡೂ ಸಹ ಅಷ್ಟೇ ಪ್ರಮುಖವಾದವು. ಶಿವಮೊಗ್ಗದಲ್ಲಿ ನಡೆಯುತ್ತಿರುವ ಸಮಾವೇಶ ಜಾತಿಯನ್ನು ನಾಶಮಾಡಲು ಅಂತರಜಾತಿವಿವಾಹಿತರನ್ನು ಹಾಗೂ ಅದಕ್ಕೆ ಸಂಬಂಧಿಸಿದ ಸಮಾನ ಮನಸ್ಕರನ್ನು ಒಟ್ಟಿಗೆ ಸೇರಿಸುವ ಪ್ರಯತ್ನವನ್ನು ಮಾಡುತ್ತಿದೆ. ಅದರ ಜೊತೆ ಜೊತೆಗೆ ಭೌದ್ಧಿಕ ಚಳುವಳಿಯೂ ಸಹ ಆಗಿಂದಾಗ್ಗೆ ನಡೆಯುತ್ತಲೇ ಇದೆ. ಅಂತಹ ಚಳುವಳಿಯ ಕುರುಹಾಗಿ ಹಲವಾರು ಲೇಖನಗಳು ಮಾದ್ಯಮಗಳಲ್ಲಿ ಬರುತ್ತಿವೆ. ಹಾಗೆ ಬಂದಂತಹ ಒಂದು ಲೇಖನದ ವಿಮರ್ಶೆಯನ್ನು ಇಲ್ಲಿ ಮಾಡಲು ಪ್ರಯತ್ನಿಸಲಾಗುವುದು. ಇಂತಹ ಪ್ರಯತ್ನ ಏಕೆಂದರೆ ಕಳೆದ ೬೦, ೭೦ ವರ್ಷಗಳಿಂದಲೂ ಇಂತಹ ಚಳುವಳಿ ಸಮಾವೇಶ ನಡೆಯುತ್ತಿದ್ದರೂ ಜಾತಿ, ಶೋಷಣೆ, ಅನ್ಯಾಯ ದಿನೆದಿನೇ ಹೆಚ್ಚಾಗುತ್ತಿವೆ. ಕೇವಲ ಹಳೆಯ ಹಲಸಲು ವಿಚಾರಗಳನ್ನೇ ಪುನರಾವರ್ತಿಸುವ ಬದಲು ಸಮಸ್ಯೆ ಎಲ್ಲಿಂದ ಉಗಮವಾಗುತ್ತಿದೆ ಎಂಬುದನ್ನು ತುರ್ತಾಗಿ ಅರಿಯಬೇಕಾಗಿದೆ. ಆದ್ದರಿಂದ ಪ್ರಸಕ್ತ ಕಾಲಘಟ್ಟದಲ್ಲಿ ಇದುವರೆಗೂ ನಾವು ಕೇಳಿಕೊಂಡು ಬಂದಂತಹ ವಿಚಾರಗಳನ್ನು ಹಾಗೂ ಇಂದು ಹೇಳುತ್ತಿರು ವ ವಿಚಾರಗಳನ್ನು ಜೊತೆಗೆ ನಮ್ಮನ್ನು ನಾವೇ ಪುನರಾವಲೋಕಿಸುವ ಸಂದರ್ಭ ಇಂದು ನಮ್ಮ ಮುಂದಿದೆ.

ಎಸ್. ಕೆ ಭಗವಾನ್ ದಿನಾಂಕ 3 ಜೂನ್ 2011 ರಂದು ಪ್ರಜಾವಾಣಿಯಲ್ಲಿ ಬರೆದ ಅವರ ಲೇಖನದ ಒಟ್ಟಾರೆ ವಾದ ಈ ರೀತಿಯಾಗಿತ್ತು, ಜಾತಿಯನ್ನು ಇದುವರೆಗೂ ದೂರಿದ್ದು ಸಾಕು, ಇನ್ನು ಅದನ್ನು ನಾಶ ಮಾಡಲೇಬೇಕು. ಜಾತಿ ನಾಶವಾದರೆ ಹಲವಾರು ಸವಲತ್ತುಗಳು ಸಹ ಸುಮುದಾಯಗಳಿಗೆ ದೊರೆಯುತ್ತವೆ ಎಂದು ಲೇಖಕರು ಹೇಳುತ್ತಾರೆ. ಆದರೆ ಹಾಗೆ ಹೇಳುವ ಮುನ್ನ ಕೆಳಕಾಣಿಸಿರುವ ಪ್ರಶ್ನೆಗಳಿಗೆ ಯಾರಾದರೂ ಉತ್ತರಿಸಲೇಬೇಕು.

1. ಜಾತಿ ವಿನಾಶ ಮಾಡುವುದು ಎಂದರೆ ಏನು? ಅದು ವಾಸ್ತವಿಕವಾಗಿ ಸಾಧ್ಯವೇ? ಜಾತಿ ವಿನಾಶವೆಂದರೆ ಈಗ ಅಸ್ತಿತ್ವದಲ್ಲಿರುವ ಜಾತಿ ಅಸ್ಮಿತೆಯನ್ನು ಸಂಪೂರ್ಣವಾಗಿ ಅಳಿಸಿ ಹಾಕುವುದು. ಜಾತಿಯನ್ನು ಸಂಪೂರ್ಣವಾಗಿ ಏಕೆ ಅಳಿಸಿಹಾಕಬೇಕೆಂದರೆ ಅದು ಸಮಾಜದಲ್ಲಿ ಅನ್ಯಾಯ ಶೋಷಣೆಗಳಿಗೆ ದಾರಿ ಮಾಡಿಕೊಟ್ಟಿದೆ. ಇದು ಸತ್ಯವೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ. ಏಕೆಂದರೆ ಯಾವುದೋ ಭಾಗದಲ್ಲಿ ಯಾವುದೋ ಸಮುದಾಯಗಳು ಮತ್ತೊಂದು ಸಮುದಾಯಗಳ ಮೇಲೆ ಅಥವಾ ವೈಯುಕ್ತಿಕವಾಗಿ ತೊಂದರೆಯನ್ನುಂಟು ಮಾಡುತ್ತಿದ್ದರೆ ಅದನ್ನು ಖಂಡಿಸಿ ಅದನ್ನು ಹೋಗಲಾಡಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕನಿಗೂ ಇದೆ. ಆದರೆ ಎಲ್ಲೋ ಆಗುವ ಘಟನೆಗಳಿಗೆ ಜಾತಿ ಕಾರಣವೆಂದು ಅದೂ ನಿರಾಧಾರವಾಗಿ ಅದನ್ನು ತೆಗಳುತ್ತಾ ಹಾಗೂ ಸಮಸ್ಯೆಯನ್ನು ಸಾರ್ವತ್ರಿಕರಣಗೊಳಿಸಿದರೆ ಶೋಷಣೆ ಎಂಬ ಕಾಯಿಲೆ ವಾಸಿಯಾಗಲಾರದು, ಅದಕ್ಕೆ ಸುಮಾರು ನೂರು ವರ್ಷಗಳಿಂದ ಜಾತಿವ್ಯವಸ್ಥೆಯ ವಿರುದ್ದ ನಡೆದ ಹೋರಾಟ ಹಾಗೂ ಬಂದಂತಹ ಸಾಹಿತ್ಯಗಳ ವಿಫಲ ಪ್ರಯತ್ನಗಳೇ ಸಾಕ್ಷಿ. ಜಾತಿಯನ್ನು ನಿರ್ದೇಶಿಸುವ ಯಾವುದಾದರೂ ತತ್ವವಿದೆಯೇ ಎಂದು ಹುಡುಕ ಹೊರಟರೆ ಆಗಲೂ ನಾವು ಸೋಲುತ್ತೇವೆ. ಹಾಗಾದರೆ ನಾಶ ಮಾಡುವುದು ಇನ್ನೇನನ್ನ? ಗೊತ್ತಿಲ್ಲ ಆದ್ದರಿಂದ ಮತ್ತೊಂದು ದಾರಿ ಹಿಡಿಯಲು ವಿದ್ವಾಂಸರು ಹಾಗೂ ಚಳುವಳಿಗಾರರು ಪ್ರಯತ್ನಿಸಿದ್ದಾರೆ ಅದೆಂದರೆ ಅಂತರ ಜಾತಿ ವಿವಾಹ. ಅಂತರ ಜಾತಿ ವಿವಾಹದಿಂದ ಹೇಗೆ ನೋಡಿದರೂ ಜಾತಿ ಗಟ್ಟಿಯಾಗಿ ಮುಂದಿನ ಪೀಳಿಗೆಗೆ ವರ್ಗಾವಣೆಯಾಗುತ್ತದೆಯೇ ಹೊರತು, ಜಾತಿ ವಿನಾಶ ಖಂಡಿತವಾಗುವುದಿಲ್ಲ. ನನ್ನ ಅನುಭವದಿಂದಲೇ ಹೇಳುವುದಾದರೆ ಬಂಟ ಮತ್ತು ಲಿಂಗಾಯತ ಜಾತಿಯವರು ಮದುವೆಯಾದರೆ ಒಂದೋ ಅವರು ಬಂಟರ ಜಾತಿಗೆ ಸೇರುತ್ತಾರೆ ಇಲ್ಲ ಲಿಂಗಾಯತರ ಕೋಮಿಗೆ ಸೇರುತ್ತಾರೆ. ಇವೆರಡೂ ಇಲ್ಲವಾದರೆ ಅಂದರೆ ಮದುವೆಯಾದ ನವವಿವಾಹಿತರನ್ನು ಎರಡೂ ಮನೆಯವರು ಸೇರಿಸದಿದ್ದರೆ ಮತ್ತೊಂದು ಇನ್ಯಾವುದೋ ಹೊಸ ಜಾತಿ ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಅಂತರಜಾತಿ ವಿವಾಹವಾದರೂ ಸಹ ಇದುವರೆಗೂ ನಂಬಿರುವಂತೆ ಜಾತಿ ಸರ್ವನಾಶವಾಗದೇ ಮತ್ತೆ ಮತ್ತೆ ಅದು ಗಟ್ಟಿಗೊಳ್ಳುತ್ತಾ ಹೋಗುತ್ತದೆ.

2. ಭಗವಾನ್ ರವರು ಅಂತರಜಾತಿ ವಿವಾಹವಾದವರಿಗೆ ಮಾತ್ರ ಸರಕಾರಿ ನೌಕರಿ ದೊರಕುವಂತೆ ತಾಕೀತು ಮಾಡಿದ್ದಾರೆ. ಅದನ್ನೂ ಒಂದು ಅತಿಗೆ ತೆಗೆದುಕೊಂಡು ಹೋದರೆ ಈ ಮುಂದಿನಂತೆ ಹೇಳಬಹುದು. ನೀವು ಸರಕಾರಿ ಉದ್ಯೋಗ ಪಡೆಯಬೇಕಾದರೆ ಬೇರೆಲ್ಲಾ ಅರ್ಹತೆಗಳಿಗಿಂತ ಅಂತರಜಾತಿ ವಿವಾಹವೇ ಮುಖ್ಯ. ಇದರ ಅರ್ಥ ಇನ್ನು ಮುಂದೆ ಮಕ್ಕಳು ಶಾಲೆಯಲ್ಲಿ ಉತ್ತಮ ವಾಗಿ ಓದಿ ಎಂದು ಹೇಳುವ ಪ್ರಮೇಯ ಬರುವುದಿಲ್ಲ ಎನಿಸುತ್ತದೆ, ಏಕೆಂದರೆ 21 ವರ್ಷದ ವರೆಗೆ ಹಾಗೂ ಹೀಗೋ ಕಾಲ ಹಾಕಿ ಅಂತರಜಾತಿ ವಿವಾಹವಾದರೆ ಸರಕಾರಿ ಕೆಲಸ ಖಾಯಂ. ಇದಕ್ಕೂ ಹೆಚ್ಚಿನದಾಗಿ ಶಿಕ್ಷಣವೂ ಬೇಡ, ವಿದ್ಯಾಸಂಸ್ಥೆಗಳೂ ಬೇಡ, ಎಲ್ಲರೂ ಹಾಯಾಗಿ ಮದುವೆಯಾಗಿ ಕಾಲ ಹಾಕಿದರೆ ಸಾಕು. ಇದರಿಂದ ಭಾರತದಲ್ಲಿರುವ ಎಲ್ಲಾ ಶೋಷಣೆಗಳು ತನ್ನಿಂತಾನೆ ಸರಿಯಾಗಿಬಿಡುತ್ತವೆ. ತಾರ್ಕಿಕವಾಗಿ ಭಗವಾನ್ ರವರ ವಾದವನ್ನು ಹೀಗೆಯೇ ಅರ್ಥಮಾಡಿಕೊಳ್ಳಲು ಸಾಧ್ಯ. ಇದರ ಇನ್ನೊಂದು ಸಾಧ್ಯತೆಯೂ ಇದೆ, 21 ವರ್ಷದವರೆಗೆ ಶಿಕ್ಷಣ ಮಾಡುವ ಅಗತ್ಯವಿಲ್ಲ, ಏಕೆಂದರೆ ವಿವಾಹವಾದರೆ ಹೇಗಿದ್ದರೂ ಕೆಲಸ ಸಿಗುತ್ತದೆ ಎಂದಾದ ಮೇಲೆ, ಬಹುತೇಕರು ಸಂವಿಧಾನದಲ್ಲಿರುವ ವಿವಾಹಕ್ಕೆ ನಿಗಧಿಪಡಿಸಿರುವ 21 ವರ್ಷವನ್ನು ಅದಕ್ಕೂ ಕಡಿಮೆಗೊಳಿಸಬೇಕೆಂದು ಒತ್ತಾಯಿಸಬಹುದು, ಏಕೆಂದರೆ ಬೇಗ ವಿವಾಹವಾದರೆ ಬೇಗ ಕೆಲಸ, ಇದರ ಅರ್ಥ ಬಾಲ್ಯವಿವಾಹವನ್ನು ಪುನರ್ಸ್ಥಾಪಿಸಲು ಇಂತಹ ನೀತಿಗಳು ಬುನಾದಿಯನ್ನು ಹಾಕಿಕೊಟ್ಟಹಾಗೆ ಆಗುತ್ತದೆ. ಇದೆಲ್ಲಾ ಎಷ್ಟು ಅವಾಸ್ತವಿಕ ಹಾಗೂ ಕಾಲ್ಪನಿಕವಾಗಿ ಗೋಚರಿಸುತ್ತದೆಯೋ ಅಷ್ಟೆ ಅವಾಸ್ತವಿಕವಾಗಿ ಅಂತರಜಾತಿ ವಿವಾಹದಿಂದ ಆಗುವ ಲಾಭಗಳೂ ಕಾಣುತ್ತವೆ.

3. ಇನ್ನೂ ಜನರು ಅಂತರಜಾತಿ ವಿವಾಹವನ್ನು ಏಕೆ ವಿರೋಧಿಸುತ್ತಾರೆ? ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕು, ಅದು ಕೇವಲ ಜಾತಿವ್ಯವಸ್ಥೆ ಎಂದರೆ ಮಾತ್ರ ಸಾಲದು. ಹಾಗೆ ಹೇಳಿ ಇದುವರೆಗೂ ನಮಗೆ ನಮ್ಮ ಸಮಾಜ ಎಷ್ಟರ ಮಟ್ಟಿಗೆ ಅರ್ಥವಾಗಿದೆ ಎಂಬುದನ್ನು ಮನಗಾಣಲೇಬೇಕು. ಇದನ್ನು ಸ್ವಲ್ಪ ನಮ್ಮ ನಮ್ಮ ಅನುಭವದಿಂದ ವಿಶ್ಲೇಷಿಸಲು ಪ್ರಯತ್ನಿಸುವ. ಯಾವುದೇ ಸಮುದಾಯವಾಗಲೀ ತನ್ನ ಸಂಪ್ರದಾಯದ ಅಥವಾ ತನ್ನ ಜಾತಿಯ ಒಳಗೆ ಹೆಣ್ಣು ಗಂಡುಗಳನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತವೆ. ಏಕೆಂದರೆ, ವಿವಾಹವಾಗಿ ಬರುವ ನವವಧುವಿಗೆ ತಮ್ಮ ಸಂಪ್ರದಾಯದ ಕುರಿತು ತಿಳಿದಿದ್ದರೆ ಬದುಕು ನಡೆಸುವುದು ಸುಲಭ. ಸಂಪ್ರದಾಯಗಳು ವ್ಯತ್ಯಾಸವಾಗಲಿಕ್ಕೆ ಹಲವಾರು ಸಂಗತಿಗಳು ಕಾರಣವಾಗುತ್ತವೆ, ಅದರಲ್ಲಿ ಮುಖ್ಯವಾದ ಒಂದನ್ನು ಇಲ್ಲಿ ನೋಡಬಹುದು, ಅದೆಂದರೆ ಉದ್ದ ನಾಮ ಧರಿಸುವ ಅಯ್ಯಂಗಾರಿ ಬ್ರಾಹ್ಮಣರು ಅಡ್ಡ ನಾಮ ಧರಿಸುವ ಸ್ಮಾರ್ಥರನ್ನು ವಿವಾಹವಾಗಲು ಹಿಂಜರಿಯುತ್ತಾರೆ, ಅದಕ್ಕೆ ಕಾರಣ ಅವೆರಡೂ ಸಮುದಾಯಗಳು ಪಾತ್ರ ಪಡಗವನ್ನು ತೊಳೆಯುವಲ್ಲಿ ವ್ಯತ್ಯಾಸವಾಗುತ್ತದೆ. ಅಡುಗೆ ಮಾಡುವಲ್ಲಿ ಆಹಾರ ಪದ್ದತಿಯಲ್ಲಿ, ಉಪನಯನ ಮಾಡುವ ಸಂದರ್ಭದಲ್ಲಿ, ದೇವರನ್ನು ಪೂಜಿಸುವ ಸಂದರ್ಭದಲ್ಲಿ ವ್ಯತ್ಯಾಸವಾಗುತ್ತದೆ. ಹಾಗೆಯೇ ಹತ್ತಿಕಂಕಣ ಮತ್ತು ಉಣ್ಣೆ ಕಂಕಣ ಕುರುಬರಲ್ಲಿಯೂ ಹಲವಾರು ವ್ಯತ್ಯಾಸಗಳಿವೆ, ಹೀಗೆ ಹಲವಾರು ಕಾರಣಗಳನ್ನು ನೀಡುವ ಮೂಲಕ ಇತರ ಸಂಪ್ರದಾಯಗಳೊಂದಿಗೆ ವ್ಯತ್ಯಾಸ ಮಾಡಿಕೊಳ್ಳುತ್ತಾರೆ. ಒಂದು ಸಂಪ್ರದಾಯ ಮತ್ತೊಂದು ಸಂಪ್ರದಾಯ ವ್ಯತ್ಯಾಸ ಮಾಡಿಕೊಂಡಾಕ್ಷಣ ಅವು ಒಂದನ್ನೊಂದು ತಿರಸ್ಕರಿಸುತ್ತವೆ ಎಂದರ್ಥವಲ್ಲ, ಬದಲಿಗೆ ನಮ್ಮದು ನಮಗೆ ಅವರದು ಅವರಿಗೆ ಎಂಬ ಮನೋಭಾವ ಇರುವುದರಿಂದ ಪ್ರತ್ಯೇಕತೆಯನ್ನು ಅವರು ಉಳಿಸಿಕೊಳ್ಳಲು ಇಚ್ಚಿಸುತ್ತಾರೆ. ಈ ರೀತಿಯಲ್ಲಿ ವ್ಯತ್ಯಾಸ ಮಾಡಿಕೊಂಡು ತಮ್ಮ ಸಂಪ್ರದಾಯದವರನ್ನೇ ಹುಡುಕುವದರ ಅರ್ಥ ಯಾವುದೋ ಸಾಮಾಜಿಕ ಅಂತಸ್ತನ್ನು ಪಡೆಯುವುದು ಅಲ್ಲ, ಬದಲಿಗೆ ನಾವು ಬದುಕುತ್ತಿರುವ ಪರಿಸರವನ್ನು ವಾಸಯೋಗ್ಯವನ್ನಾಗಿ ಮಾಡಿಕೊಳ್ಳಲು ಮಾತ್ರ. ಹಾಗಾಗಿ ವಿವಾಹವೆಂಬುದು ಆಯಾ ಸಮುದಾಯಗಳ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋಗಲು ಇರುವ ಹಲವಾರು ಸಾಧನಗಳಲ್ಲಿ ಒಂದಾಗಿದೆ.

4. ಭಗವಾನ್ ರವರ ವಾದವನ್ನು ಈ ಹಿನ್ನೆಲೆಯಲ್ಲಿ ಅರ್ಥಮಾಡಿಕೊಂಡರೆ ಈ ಮುಂದಿನಂತೆ ವಿಶ್ಲೇಷಿಸಬಹುದು. ಎಲ್ಲರೂ ನಿಮ್ಮ ಜಾತಿ ತಿರಸ್ಕರಿಸಿ ಅಂತರಜಾತಿ ವಿವಾಹವಾಗಿ ಎಂಬುದರ ಅರ್ಥ ಇದುವರೆಗೂ ನೀವು ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ತಿರಸ್ಕರಿಸಿ ಎಂದೇ ಅರ್ಥ. ಹಾಗೆ ಸಂಪ್ರದಾಯಗಳನ್ನು ತಿರಸ್ಕರಿಸುವುದು ಅಷ್ಟು ಸುಲಭದ ಕೆಲಸವೂ ಅಲ್ಲ, ಜನರು ತಮ್ಮ ಸಂಪ್ರದಾಯಗಳನ್ನು ತಿರಸ್ಕರಿಸಬೇಕಾದರೆ ಅವರ ಸಂಪ್ರದಾಯದಿಂದ ಎಂತೆಂತಹ ಅಪಾಯವಾಗುತ್ತಿದೆ ಎಂಬುದನ್ನು ಅವರಿಗೆ ಮನದಟ್ಟಾಗುವಂತೆ ತೋರಿಸಬೇಕಾಗುತ್ತದೆ. ಕ್ರಿಯಾತ್ಮಕವಾಗಿರುವಂತಹ ಇಂತಹ ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳದೆ ಎಲ್ಲರೂ ತಿರಸ್ಕರಿಸಿ ಎಂದರೆ ನಮ್ಮಂತ ಜನಸಾಮಾನ್ಯರಿಗೆ ಏಕೆ ಬಿಡಬೇಕು ಎಂಬುದೇ ಅರ್ಥವಾಗುವುದಿಲ್ಲ. ಹಾಗಾಗಿ ಅಷ್ಟೆಲ್ಲಾ ಸಮಾವೇಶ ಚಳುವಳಿಗಳು ನಡೆದರೂ ಜನರು ಅವುಗಳನ್ನು ಹಾಗೆಯೇ ಉಳಿಸಿಕೊಂಡು ಬರುತ್ತಿದ್ದಾರೆ. ಬರಿಯ ಜಾತಿವ್ಯವಸ್ಥೆಯ ತೊಂದರೆ ಎಂದು ಪರಿಕಲ್ಪನಾತ್ಮಕ ಮಟ್ಟದಲ್ಲಿ ಹೇಳುವುದಕ್ಕಿಂತಲೂ ಜನರು ಬದುಕುತ್ತಿರುವ ಅನುಭವದ ಹಿನ್ನೆಲೆಯಲ್ಲಿ ಅವರ ಸಂಪ್ರದಾಯಗಳಿಂದ ಇತತರಿಗೆ ಹೇಗೆ ತೊಂದರೆಯಾಗುತ್ತಿದೆ ಎಂದು ತೋರಿಸದ ಹೊರತು ಇನ್ನೂ ಲಕ್ಷ ಲಕ್ಷ ಸಮಾವೇಶ ನಡೆಸಿದರೂ ಯಾವುದೇ ಉಪಯೋಗವಾಗುವುದಿಲ್ಲ.

5. ಸರಿ ಒಂದೊಮ್ಮೆ ಸುಸಂದರ್ಭ ಬಂದು ಎಲ್ಲಿಯೂ ಜಾತಿಯ ಅಸ್ಮಿತೆ ನಾಶವಾಯಿತು ಎಂದಿಟ್ಟುಕೊಳ್ಳುವ. ನಂತರ ಜನರು ಮತ್ಯಾವುದೋ ಅಸ್ಮಿತೆಯನ್ನು ಹುಟ್ಟಿಹಾಕಿಕೊಳ್ಳುತ್ತಾರೆ, ಅದು ಜಾತಿಯ ಬದಲಿಗೆ ಕಾತಿ, ಪಾತಿ, ವರ್ಗ ಹೀಗೆ ಯಾವುದಾದರೂ ಹೆಸರು ಜಾತಿಯನ್ನು ಬದಲಿಸಬಹುದು. ಆದರೆ ಅವಾಗಲೂ ಇಂತಹ ಶೋಷಣೆಗಳು ದಬ್ಬಾಳಿಕೆಗಳು ಮುಂದುವರೆದರೆ ಆ ಹೆಸರುಗಳನ್ನೂ ಬಿಡಿ ಎಂದು ಹೇಳಿದರೆ ಅನ್ಯಾಯ ಶೋಷಣೆಗಳು ಹೋಗುವುದಿಲ್ಲ. ಆದ್ದರಿಂದ ಜಾತಿಗಳನ್ನು ಬಿಡಿ, ನಿಮ್ಮ ಸಂಪ್ರದಾಯಗಳನ್ನು ಬಿಡಿ ಎಂದು ಹೇಳುವುದಕ್ಕಿಂತ ಸಮಸ್ಯೆಯ ಮೂಲ ಎಲ್ಲಿದೆ ಹಾಗು ಅದಕ್ಕೆ ಪರಿಹಾರ ಏನು ಎಂಬುದನ್ನು ಕಂಡುಹಿಡಿಯುವುದು ಸೂಕ್ತವಾದ ಕೆಲಸ ಎಂಬುದು ನನ್ನ ಅಭಿಪ್ರಾಯ.

 

ಸಂತೋಷ್ ಕುಮಾರ್ ಪಿ ಕೆ

(ಅವಧಿಯಲ್ಲಿ ಪ್ರಕಟಿತ)

 

 

Comments