ಪ್ರವಾಸ ಕಥನ - ಕುಪ್ಪಳ್ಳಿ ಪ್ರವಾಸ
ಜನವರಿ ೨೪ ನೆ ತಾರಿಖು ನಾನು, ಚೆಲುವ ಮತ್ತು ಅವನ ಸಹಧರ್ಮಿಣಿ ಲತ, ಎಲ್ಲರು ಸೇರಿ, ಯುಗದ ಕವಿ,ವಿಶ್ವಕವಿ, ರಸಋಶಿ, ಕುವೆಂಪು ಅವರ ಸ್ವಸ್ಥಳ ಕುಪ್ಪಳ್ಳಿಗೆ ಹೊರೆಟೆವು. ಕವಿ ಕುವೆಂಪುರವರ ಬರಹ ನನ್ನ ಮನಸ್ಸನ್ನು ಬಹುಶಃ ಯಾವ ಪುಸ್ತಕಳೂ ( ಇಂಗ್ಲಿಷ್ + ಕನ್ನಡ ಪುಸ್ತಕಗಳೆಡೂ ಸೇರಿ) ಆಕರ್ಷಿಸದ ಹಾಗೆ ಗಾಢವಾಗಿ ಆಕರ್ಷಿಸಿತ್ತು. "ಮಲೆನಾಡ ಚಿತ್ರಗಳು" ಪುಸ್ತಕ ನಾನು ಓದಿದ ಕುವೆಂಪು ವಿರಚಿತ ಪುಸ್ತಕಗಳಲ್ಲಿ ಮೊದಲನೆಯದು. ಮೊದಲೇ ಪ್ರಕೃತಿವಿಲಾಸಿಯಾದ ನನಗೆ, ಆ ಪುಸ್ತಕದಲ್ಲಿ ಬರುವ ಪ್ರಕೃತಿಯ ವಿಪುಲಮನೋಹರ, ರೋಮಾಂಚಕ, ಬೀಷಣ ಗಾಂಬೀರ್ಯ, ಸೌಂದರ್ಯೋಪಾಸನೆ, ಕುಪ್ಪಳ್ಳಿಯ ಸೌಂದರ್ಯವನ್ನು ಸವಿಯುವ ಮಹತ್ವಾಕಾಂಕ್ಷೆಯನ್ನು ಬಹುಮಡಿಗೊಳ್ಳಿಸಿತು. ಅಂದು ಬೆಳಗಿನ ಜಾವ ೫ ಗಂಟೆಗೆ ಬೆಂಗಳೊರನ್ನು ಬಿಟ್ಟ ನಾವು ಸುಧೀರ್ಗ ಪಯಣದ ನಂತರ ಮಧ್ಯಾಹ್ನ ೧:೩೦ ಗಂಟೆಗೆ ತೀರ್ಥಹಳ್ಳಿ ತಲುಪಿದೆವು. ಅಲ್ಲಿಗೆ ಹೋಗುವ ದಾರಿ ಹುಡಕಲು ಅಷ್ಟೇನು ತೊಂದರೆಯಾಗಲಿಲ್ಲ, ಕಾರಣ ಬೆಂಗಳೂರಿನಿಂದ ನೂರಾರು ಮೈಲಿ ದೂರವಿರುವ ತೀರ್ಥಹಳ್ಳಿಗೆ ಹೊಗುವ ಪಥನಕ್ಷೆಯನ್ನು, ಅಂತರ್ಜಾಲದ ಮುಖೇನ ಹುಡುಕಿ, ಪ್ರಿಂಟ್ ತೆಗೆದು ಜೇಬಲ್ಲಿರಿಸಿದ್ದೆ.
ಕೇವಲ ೩ ಜನರನ್ನೊತ್ತು ನಿಭಿಡ, ನೀರವ, ನೀಳ ಹೆದ್ದಾರಿಯಲ್ಲಿ, ಗಮ್ಯದ ದೂರವನ್ನು ಕ್ಷಣ ಕ್ಷಣಕು ನುಂಗುತ್ತ ಚಲಿಸುತ್ತಿದ್ದ ಕಾರಿನೊಳಗೆ, ನೀರಸತೆಯು ತಿಲಮಾತ್ರವು ಸುಳಿಯಲಿಲ್ಲ. ನೀರಸತೆಯಿರದುದಕೆ ಕಾರಣ - ನಿಲ್ಲದ ಹರಟೆ, ಅಸಂಭದ್ಧ ತರ್ಕ, ಜೀವನಸಿದ್ಧಾಂತಗಳ ಚರ್ಚೆ, ಸಂಸಾರ ಸಾಮರಸ್ಯಗಳ ಸಮಾಲೋಚನೆ(ಗಹನ). ಮೊದಲಿಗೆ ಪತಿ ಪತ್ನಿಯರ( ಚೆಲುವ-ಲತ) ಕೋಳಿ ಜಗಳದಿಂದ ಶುರುವಾದ ಮಾತಿನ ಹೊಳೆ ಕ್ಷಣಭಂಗುರವಾಗಿ ಕಾಡು ಹರೆಟೆಯ ದಾರಿ ಹಿಡಿದು, ಭೀಭತ್ಸಕ ಜಗಳವನ್ನೆಲ್ಲಾ ಸುತ್ತಿ, ಅವರಿವರ ಕಥೆಗಳ ಜಲಪಾತದಿಂದ ಧುಮ್ಮಿಕ್ಕಿ ಧುಮುಕಿ, ಉದರಬೇನೆ ಬರುವಷ್ಟು ಹಾಸ್ಯದ ಸುಳಿಯನ್ನು ಸೃಷ್ಟಿಸಿ, ಮೌನ ಸಾಗರವನ್ನು ಸೇರದೆ, ಮತ್ತೆ ತಾನು ಜನಿಸಿದ ಪತಿ-ಪತ್ನಿಯರ-ಕೋಳಿ ಜಗಳದ ಉಗಮಸ್ಥಾನವನ್ನೇ ಸೇರುತ್ತಿತ್ತು. ಮೂರು ಜನರ ನಮ್ಮ ಪ್ರಯಾಣ ನೀರಸವಾಗಬಹುದೆಂಬ ನಮ್ಮ ಊಹೆ ತಪ್ಪಾಯಿತು.
ಮೊಮ್ಮದಲು ಕಾರು ನಿಂತಿದ್ದು ಕೆಫೆ-ಕಾಫಿ-ಡೆಯ ವಿಶಾಲ ಅಂಗಳದಲ್ಲಿ. ಲತ ಕಾಫಿಗೆ ಅಪ್ಪಣೆ ಹೊರಡಿಸಿದಳು, ನಂತರ ಚೆಲುವ ಟೀ ಕೇಳಿದನು, ನನಗೆ ಏನು ಬೇಡವಾದ್ದರಿಂದ, ಇಲ್ಲಿ ಕಾರು ನಿಲ್ಲಿಸಿದ್ದೆ ಸಮಯ ಹಾಳುಮಾಡಲಿಕ್ಕೆ ಎಂದು ಗೊಣಗುತ್ತಿದ್ದೆ. ನನ್ನ ಉಪಟಳವನ್ನು ತಾಳದೆ ದಂಪತಿಯೀರ್ವರು ನನ್ನನ್ನು ಹೀನ ಮಾನ ತೆಗಳಿದರು. ದಾರಿ ಕಾಣದೆ ಬಲೆಗೆ ಸಿಕ್ಕ ಹಕ್ಕಿಯಂತೆ ಸುಮ್ಮನಾದೆ. ಕಾಫಿ, ಟೀ ಕುಡಿಯುವ ಮೊದಲು ಇಲ್ಲಿ ಓರ್ವ ವ್ಯಕ್ತಿಯ ಮಹದಾಸೆಯ ಬರ್ಬರ ಹತ್ಯೆಯಾಗುತ್ತದೆಯೆಂದು ಯಾರು ಎಣಿಸಿರಲಿಲ್ಲ. ಆ ವ್ಯಕ್ತಿಯೇ ಶ್ರಿಮಾನ್ ಚೆಲುವರಂಗಸ್ವಾಮಿ. ೧೧೦/- ರೂ ಗೆ ಕೊಂಡ ಟೀ, ಯಾವ ರೂಪದಲ್ಲೂ, ಅವನ ಹಸಿದ ನಾಲಿಗೆಗೆ ಟೀ ರುಚಿಯನ್ನು ಮೆತ್ತಲಿಲ್ಲ. ಅಮ್ಮನು ಕೊಟ್ಟ ಮಿಠಾಯಿಯನ್ನು ಬಾಯಿಗಿರಿಸುವ ಮಗುವಿನಂತೆ, ಅವನು ಬಹು ಆಸೆಯಿಂದ ನಿಧಾನವಾಗಿ ಕುಡಿದ ಮೊದಲ ಗುಟುಕು, ಅವನ ಮುಖವನ್ನು ಇಂಗು ತಿಂದ ಮಂಗನಂತಾಗಿಸಿತ್ತು. ಲತ ಘಕ್ಕನೆ ನಕ್ಕು, ಕಾಫಿ-ಡೇ ಟೀ ರುಚಿ ಇರುವುದೇ ಹಾಗೆಂದು, ಅವನ ಗಾಯದ ಮೇಲೆ ಬರೆ ಎಳೆದಳು. ಅದನ್ನು ಕೇಳಿ ಮೊದಲೇ ಬೇಸರದಿಂದ ತೊಳಲಾಡುತ್ತಿದ್ದ ಅವನು, ಸಿಟ್ಟಿನಿಂದ ಸಿಡಿಮಿಡಿಗೊಂಡು ಹೇಗಾದರು ಮಾಡಿ ಆ ರುಚಿಹೀನ ಟೀ ಯ, ರುಚಿಯನ್ನು ಹೆಚ್ಚಿಸಲು, ಅಂಗಡಿಯವನ ಜೊತೆ ವಾದಕ್ಕಿಳಿದಿದನು. ವ್ಯರ್ಥವಾದದಿಂದ ಸೋಲನ್ನುಂಡಿ "ಬನ್ನಿ ಹೋಗೋಣ" ಎಂದು ನಮ್ಮತ್ತ ಸನ್ನೆಮಾಡಿದನು. ಅಂಗಡಿಯಿಂದ ಕಾರಿನೆಡೆಗೆ ಹೋಗುತಲೇ ಚೆಲುವನ ಸಿಂಹಕಂಠದಿಂದ ಅಂಗಡಿಯವನಿಗೆ ಸಹಸ್ರ 'ಬೈಗುಳಾರ್ಚನೆ' ನಡೆಯಿತು. ಅವನಿಂದ ಬೆಳಬೆಳಗ್ಗೆ ಬೈಸಿಕೊಂಡ ನನಗೆ, ಇದನ್ನೆಲ್ಲ ಕಂಡು ಆದ ಸಂತೋಷ ಅಷ್ಟಿಟ್ಟಲ್ಲ. ಯುದ್ಧದಲ್ಲಿ ವೈರಿಯನ್ನು ಹಿಗ್ಗಾಮುಗ್ಗಾ ಥಳಿಸಿ ಗೆದ್ದ ವೀರನಂತೆ, ಉನ್ಮಾದದುತ್ತುಂಗ ಶಿಖರವನ್ನೇರಿ, ಗೆಲುವಿನ ವೈಜಯಂತಿಯನ್ನು ಹಾರಿಸಿಬಿಟ್ಟೆ. ಆದರೆ ನನ್ನ ಮುಖಭಾವದೆಲ್ಲೆಲ್ಲೂ ಆ ಗೆಲುವನ್ನು ಸುಳಿಗೊಡಲಿಲ್ಲ. ಎಲ್ಲರೂ ಕಾಫಿ-ಡೇ ಯಿಂದ ಹೊರಬಂದಾಗ, ಗಗನದೆಬ್ಬಾಗಿಲ ನಿಶಾಪರದೆಯನ್ನು ಸರಿಸಿ, ಸೂರ್ಯರಶ್ಮಿಗಳು ಭುವಿಗೆ ದಾಪುಗಾಲನ್ನಿಡುತ್ತಿದ್ದವು. ಬೆಳಕರಿದಿದ್ದರಿಂದ ದಾರಿ ಸುಲಭವಾಗಿ ಕಂಡು, ಜಿಂಕೆಯಂತಿದ್ದ ಕಾರಿನ ವೇಗವು ಚಿರತೆಯ ದ್ರುತಗತಿಯನ್ನು ಪಡೆಯಿತು.
ಶಿವಮೊಗ್ಗೆಯಲ್ಲಿ ದಿನ ೧:
ಕಡೂರಿನಲ್ಲಿ ತಿಂಡಿ ಮುಗಿಸಿ, ಶಿವಮೊಗ್ಗದಲ್ಲಿ ಲತಾಳ ಗೆಳತಿಯ ಮನೆಯಲ್ಲಿ ಮತ್ತೊಮ್ಮೆ 'ಅನಿರ್ವಾಯವಾಗಿ' ತಿಂಡಿ ಮುಗಿಸಿ, ಮಂದಗದ್ದೆಯಲ್ಲಿ ಪಕ್ಷಿಮಾತ್ರವೊಂದನ್ನೂ ನೋಡದೆ, ಬಂದ ದಾರಿಗೆ ಸುಂಕವಿಲ್ಲವೆಂಬುವಂತೆ ನಿರ್‍ಆಸೆಯ ಏಟು ತಿಂದು, ಮೊದಲೇ ನಿರ್ಧರಿಸಿದಂತೆ ತೀರ್ಥಹಳ್ಳಿಯ ಒಂದು ತಂಗುದಾಣಕ್ಕೆ ಬಂದು ಸೇರಿದೆವು. ಸ್ಥಳಕ್ಕಿ ಬಂದೊಡನೆಯೆ ಮನವು ಅತ್ಯಾಶ್ಚರ್ಯದಿಂದ ಪುಳಕಿತಗೊಂಡಿತು. ಕೇವಲ ಕನಸಿನ ಕಾನದಲ್ಲಿ ನವಿಲಿನಂತೆ ಸುಳಿದಾಡುತಿದ್ದ ಮಲೆನಾಡಿನ ಅಥವ ಕೇರಳ ಶೈಲಿಯ ಉಪ್ಪರಿಗೆಯ ಮನೆಯು, ಗರಿಗೆದರಿ ನನ್ನ ಮುಂದೆ ನರ್ಥಿಸುತ್ತಿತ್ತು. ಕುಪ್ಪಳ್ಳಿಯ ಉಪ್ಪರಿಗೆ ಮನೆಯನ್ನು ನೊಡಲು ಬಂದವರಿಗೆ, ಅಂತಹುದೆ ಒಂದು ಮನೆಯಲ್ಲಿ ಇಳಿದುಕೊಳ್ಳುವ ಅವಕಾಶ ಸಿಗುವುದೆಂದರೇನು? ಬಯಸದೆ ಬಂದ ಬಾಗ್ಯಕ್ಕೆ ನನ್ನ ಮನಸ್ಸು ಪರಮಾನಂದದಿಂದ ಹುಚ್ಚೆದ್ದು ಕುಣಿಯಲಾರಂಬಿಸಿತ್ತು. ಇತರರಿಗು ಇದೇ ಸಂತಸ. ಮನೆಯ ಸುತ್ತಲೂ ಎತ್ತರೆತ್ತರಕ್ಕೆ ಪೂರ್ಣ ಬೆಳೆದು ಫಸಲೊಡಲಿಂದ ಬೀಗುತ್ತಿದ್ದ ಅಡಕೆ ಹಾಗು ತೆಂಗಿನ ಮರಗಳು. ಅದರಿಂದಾಚೆ ಪಸಿರ್ಗಂಬಳಿಯಂದದಿ ಹರಡಿದ್ದ ಬತ್ತದ ಗದ್ದೆ, ಗದ್ದೆಯ ತುದಿಯಿಂದೆದ್ದು ನಿಂತಿದ್ದ ಘನಗಂಭೀರ ಅರಣ್ಯ, ಎಲ್ಲೆಡೆಯಿಂದ ಹರಿದು ಬಂದು ಕಿವಿಗಳಪ್ಪಳಿಸುತ್ತಿದ್ದ ಪಕ್ಷಿಗಳ ನುಣ್ಚರಗಾನ, ಬಂದ ಅಥಿತಿಯನ್ನು ಸೌದರ್ಯ-ಪುಷ್ಕರಿಣಿಯಲ್ಲಿ ಮುಳಿಗಿಸಿತ್ತು.
ತಂಗುದಾಣದ ಮಾಲೀಕ ಸಂದೇಶ್, ಬಹಳ ಸರಳ ಹಾಗು ವಿನಮ್ರ ವ್ಯಕ್ತಿ. ಅವರು ನಮಗೆ ತೋರ್‍ಇದ ಆಥಿತ್ಯದಲ್ಲಿ ತಿಲಮಾತ್ರವು ದೋಷವಿರಲಿಲ್ಲ, ಬದಲಿಗೆ ಔಪಚಾರಿಕತೆಯ ಮೆರಗು ನಾವಿದ್ದ ಕಾಲವೂ ಜಗಜಗಸಿತ್ತು. ನಾವಿರುವವರೆಗೂ ಜೊತೆಗಿದ್ದ ಶೆಟ್ಟರು, ಹಾಗು ಅವರ ಪತ್ನಿ, ನಮಗೆ ಬೇಕಾದ ವ್ಯವಸ್ಥೆಯನ್ನು ಸಕಾಲಕ್ಕೆ ಒದಗಿಸಿ, ಒಳ್ಳೆಯ ಉಪಚಾರವೆಸಗಿದರು. ಹೋದೊಡನೆಯೆ ನಮಗೆಂದೇ ತಯಾರಿಸಿದ್ದ, ಬಾಯಲ್ಲಿ ನೀರೂರಿಸುವ ಸ್ವಾದಿಷ್ಟ ಭೋಜನ ನಮ್ಮ ಹಸಿವನ್ನು ತಣಿಸಿತ್ತು. ಹೊಟ್ಟೆಯು ಹಬ್ಬವನಾಚರಿಸಿದ್ದೇ ತಡ, ಸ್ಮೃತಿಮಂಡಲಕ್ಕೆ ನಿದ್ದೆಯ ಜೋಂಪು ಲಗ್ಗೆಯಿಟ್ಟಿತು. ಆದರೆ ಕುಪ್ಪಳ್ಳಿಯ ಕವಿಮನೆ ಹಾಗು ಕವಿಶೈಲವನ್ನು ನೊಡುವ ನನ್ನ ಕಾತುರಾರೂಢ ಹೆಬ್ಬಯಕೆಗೆ, ನಿದ್ದೆಯು ಮಣಿದು ಕಾಲ್ಕಿತ್ತಿತು. ನನ್ನ ಹಾವಭಾವಗಳಲ್ಲಿ ಬೋರ್ಗರೆದುಕ್ಕಿ ಹರಿಯುತ್ತಿದ್ದ ಉತ್ಸುಕತೆಯ ರಭಸವನ್ನು ಕಂಡ ದಂಪತಿಗಳಿಬ್ಬರು ತಡಮಾಡದೆ ,(ವಿಶ್ರಾಂತಿಸದೆ) ದಣಿವನ್ನು ಬದಿಗಿರಿಸಿ ನನ್ನೊಡನೆ ಕುಪ್ಪಳ್ಳಿಗೆ ಹೊರಡಲು ಸಿದ್ಧರಾದರು.
ಶಿವಮೊಗ್ಗದಿಂದ ಕುಪ್ಪಳಿಗೆ ಬರುವ ಹಾದಿಯಲ್ಲಿ ಅನೇಕ ಉಪ್ಪರಿಗೆಯ ಮನೆಗಳನ್ನು ಕಂಡರು, ಈಗ ನೋಡುತ್ತಿರುವ ಕವಿಯ ಮನೆ ಮಿಕ್ಕ ಮನೆಗಳಿಗಿಂತ ಬೃಹದಾಕಾರವಾಗಿತ್ತು. ನಾವು ನೋಡಿದ ಎಲ್ಲ ಮನೆಗಳನ್ನು ಕುಸ್ತಿಗೆ ಬಿಟ್ಟರೆ, ಭೀಮಾಕಾಯ ಕುಪ್ಪಳ್ಳಿಯು ಮನೆ ಗೆಲ್ಲುವುದು ಶತನಿಶ್ಚಿತ. ಶಿಥಿಲಾವಸ್ತೆಯಲ್ಲಿದ್ದ ಕವಿಮನೆಯನ್ನು ಪೂರ್ಣ ಕೆಡವಿ, ಮೂಲನಕ್ಷೆಯ ಪ್ರಕಾರ ಸರ್ಕಾರ ಮತ್ತೆ ಹೊಸ ಮನೆಯನ್ನು ಕಟ್ಟಿದ್ದಾರೆ. ಮನೆಯನ್ನು ಒಂದು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಿಲಾಗಿದೆ. ಇಲ್ಲಿ ಕುವೆಂಪುರವ ಅನೇಕ ಭಾವಚಿತ್ರಗಳು, ಅವರು ಉಪಯೋಗಿಸುತ್ತಿದ್ದ ಪೆನ್ನು, ಬಟ್ಟೆ, ಕೊಡೆ, ಕನ್ನಡಕ, ಪ್ರಶಸ್ತಿಗಳು... ಇತ್ತ್ಯಾದಿಗಳನ್ನು ಇಟ್ಟಿರುವರು. ಇದಲ್ಲದೆ ಮನೆಯಲ್ಲಿ ವಿಶಿಷ್ಟವಾಗಿ ಅಡುಗೆಯಮನೆಯಲ್ಲಿ ಉಪಯೋಗಿಸುತ್ತಿದ್ದ ಅನೇಕ ವಸ್ತುಗಳನ್ನು ಕೂಡ ಇಟ್ಟಿರುವರು. ನಾವು ಟಿಕೆಟ್ ಪಡೆದು ಮನೆಯೊಳಗೆ ನಡೆದೆವು. ಮನೆಯು ವಿಶಾಲವಾಗಿದ್ದು, ನಡುಮನೆ, ಬಾಣಂತಿಕೋಣೆ, ಯಜಮಾನರ ಕೋಣೆ, ಅಡುಗೆ ಮನೆ ಎಂದು ಅನೇಕ ವಿಭಾಗಗಳನ್ನಾಗಿ ವಿಂಗಡಿಸಿದ್ದಾರೆ. ಪ್ರತಿಯೊಂದು ಭಾಗಗಳಲ್ಲೂ ವಿಶಯಸೂಚಿಗಳನ್ನು ಹಾಕಿರುವುದರಿಂದ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಗಿರುವುದು. ಆದಲ್ಲದೆ ಯಾವ ವಸ್ತುಗಳನ್ನು ಮುಟ್ಟಬಾರದೆಂದು ಎಚ್ಚರಿಯೆಯ ಫಲಕಗಳನ್ನಾಕಿದ್ದಾರೆ, ಆದರು ಸಹ ಅವುಗಳ ಹಿಂದಿನ ಸದುದ್ದೇಶವನ್ನರಿಯದೆ 'ಲತ' ಅಲ್ಲಲ್ಲಿ ಸುಳಿದಾಡುತಿದ್ದ ಉಸ್ತುವಾರಿಗಳ ಹದ್ದಿನ ಕಣ್ಗಳನ್ನು ತಪ್ಪಿಸಿ, ಒಡವೆಯಂಗಡಿಗೆ ನುಗ್ಗಿದ ಕಳ್ಳಿಯಂತೆ, ಅಲ್ಲಲ್ಲಿ ವಸ್ತುಗಳ ಮೇಲೆ ಕೈಯಾಡಿಸುತ್ತಿದ್ದಳು. ಇದನ್ನು ಕಂಡ ನಾವು, ಸುಲಭವಾಗಿ ಸಿಕ್ಕ ಬೇಟೆಯನ್ನು ಬಿಡಬಾರದೆಂದು, ಎಲ್ಲರಿಗೂ ಕೇಳಿಸುವ ಹಾಗೆ "ಲತ, ಹಾಗೆಲ್ಲ ಅದನ್ನು ಮುಟ್ಟಬಾರದು" ಎಂದು ಕೊಗಿದೆವು. ಬೆನ್ನಿಗೆ ಚೂರಿಯಾಕಿದ ಜೊತೆಗಾರರನ್ನು ಕಂಡು, ಲತಾಳ ಕಣ್ಣುಗಳಲ್ಲಿ ದ್ವೇಷದ ಕೆನ್ನಾಲಿಗೆ ದೇದೀಪ್ಯಮಾನವಾಗಿ ಉರಿಯುತ್ತಿತ್ತು. ಇದನ್ನು ಕಂಡು ನಮ್ಮಿಬ್ಬರಿಗೂ ಭೂಮಿಯೇ ಬಾಯ್ಬಿಟ್ಟಂತಾಯಿತು. ಸ್ಥಿತಿ ಕೈಮೀರಿ ಹೋಗುವ ಮುಂಚೆ, ಚೆಲುವ ಲತಳಲ್ಲಿ ಪರಕಾಯಪ್ರವೇಶ ಮಾಡಿದ್ದ ಭದ್ರಕಾಳಿಯನ್ನು ಸಂತೈಸಲು "ಜಾನು" ಎಂದು ಅವಳ ಹಿಂದೆ ಹೊರಟನು. ಬೀಸುವ ದೊಣ್ಣೆಯನ್ನು ತಪ್ಪಿಸಿಕೊಂಡ ನಾನು ಸುಶೀಲ ಸುಮನಸ್ಕನಾಗಿ, ಮಾಡಿದ ತಪ್ಪು ಹೊರ ಕಾಣದ ಹಾಗೆ ಪ್ರಶಾಂತತೆಯ ಕೃತಕ ಮುಖಭಾವವೊತ್ತು ಮನೆಯನ್ನು ನೋಡುವಲ್ಲಿ ಮಗ್ನನಾದೆ.
ಕೆಳಮನೆಯನ್ನೆಲ್ಲಾ ನೋಡಿದಮೇಲೆ ಉಪ್ಪರಿಗೆಯನ್ನು ನೋಡಲು ಹೊರೆಟೆವು. ಉಪ್ಪರಿಗೆಯಲ್ಲೂ ಕೂಡ ಅನೇಕ ಕೋಣೆಗಳಿದ್ದು, ಅದರಲ್ಲಿ ಮುಖ್ಯವಾದುದು ಕುವೆಂಪುರವರು ಉಪ್ಯೋಗಿಸುತ್ತಿದ್ದ(ಓದಲು) ಕೋಣೆ. ಆ ಕೋಣೆಯನ್ನು ನೊಡಲು ನಾವೆಲ್ಲ ಉತ್ಸುಕರಾಗಿ ಮುನ್ನಡೆದೆವು. ಕವಿಯು ಓದುತ್ತಿದ್ದ ಕೊಣೆಯು ನನಗೆ ಕೇವಲ ಕೋಣೆಯಾಗಿ ಕಾಣಲಿಲ್ಲ. ಸಾಕ್ಷಾತ್ ಸರಸ್ವತಿ ವರಪುತ್ರನ ಆತ್ಮಜ್ಯೋತಿಯು ಆವಾಸವಾಗಿರುವ ದಿವ್ಯಮಂದಿರದಂತೆ ಕಂಡಿತು. ಅವರು ಉಪಯೋಗಿಸುತ್ತಿದ್ದ ಮೇಜು ಕುರ್ಚಿಗಳನ್ನು ಬಿಟ್ಟರೆ, ಮತ್ತೇನು ಅಲ್ಲಿರಲಿಲ್ಲ. ಗೋಡೆಯಲ್ಲಿ ರಾಮಕೃಷ್ಣ ಪರಮಹಂಸ, ಶಾರದ ದೇವಿ ಹಾಗು ಸ್ವಾಮಿ ವಿವೇಕಾನಂದರ ಚಿತ್ರಪಟಗಳಿದ್ದವು. ನಾವೆಲ್ಲರೂ ಅವರ ಮೇಜನ್ನು ಮುಟ್ಟಿ ನಮಸ್ಕರಿಸಿ, ಮನದಲ್ಲೇ ವಂದಿಸಿದೆವು. ಮೇಜನ್ನು ಮುಟ್ಟಿದೊಡನೆಯೆ ನನ್ನ ಮೈ-ಮನದಲ್ಲಿ ವಿಧ್ಯುತ್ ಸಂಚಲನವಾದಂತಾಗಿ, ಮೊದಲೇ ಪಠಿಸಿದ ಕವಿಬರಹಗಳ ಅತ್ಯದ್ಭುತ ವರ್ಣನಾ ಚಿತ್ರಗಳು ಪುಂಖಾನುಪುಂಖವಾಗಿ ನನ್ನ ಅಂತ:ರ್ದೃಷ್ಟಿಯೆದುರು ರಿಂಗಣವಾಯಿತು. ನನಗೆ ಅವು ಕೇವಲ ಮರದ ಮೇಜು, ಕುರ್ಚಿಗಳಾಗಿ ಕಾಣಿಸಲಿಲ್ಲ. ಕನ್ನಡ ಸಾಹಿತ್ಯಸಾಂಮ್ರಾಜ್ಯದ ಅಪರೂಪ, ಅತ್ಯಮೋಘ, ಅನಭಿಷಿಕ್ತ ಕವಿಚಕ್ರವರ್ಥಿಯ ವಜ್ರಸಿಂಹಾಸನದಂತೆ ತೋರಿತು. ನಾನು ಓದದೆ ಇರದ ಈ ಮಹಾನ್ ಕವಿಯ ಮತ್ತಿತರ ಪುಸ್ತಕಗಳನ್ನು , ಆದಷ್ಟು ಬೇಗ ಓದುವ ತುಡಿತವನ್ನು ಇಮ್ಮಡಿಗೊಳಿಸಿತು. ಕೋಣೆಯ ಕಿಟಕಿಯಿಂದ ನೋಡಿದರೆ, ಮಲೆನಾಡ ನಿಸರ್ಗ ಸೌಂದರ್ಯದ ಸುಂದರ ದೃಶ್ಯ ಕಾಣಸಿಗುವುದು. ಬಹುಶಃ ಕವಿಯೂ ಕೂಡ ಇದರ ದರ್ಶನಗೈದು ಅನೇಕ ಬರಹಗಳನ್ನು ರಚಿಸಿರಬೇಕು? ಮನೆಯನ್ನು ಸಂಪೂರ್ಣ ನೊಡಿದ ಮೇಲೆ, ಕೆಲವು ಪುಸ್ತಕಗಳನ್ನು ಕೂಡ ಖರೀದಿಸಿದೆವು.
ನಮ್ಮ ಮುಂದಿನ ಭೇಟಿ ಕವಿಮನೆಯ ತೆಂಕಣ ದಿಕ್ಕಿನಲ್ಲೆದ್ದಿ ನಿಂತಿರುವ ಕವಿಶೈಲಕ್ಕೆ. ಗುಡ್ಡದ ತುದಿ ಸೇರಲು ಏಳೆಂಟು ನಿಮಿಶಗಳ ಕಾಲ್ನಡಿಗೆ ಸವೆಸಬೇಕು. ಮೇಲೆ ಹೊದಾಕ್ಷಣ ಬೃಹತ್ ಬಂಡೆಗಲ್ಲನ್ನು ನವೀನಶೈಲಿಯಲ್ಲಿ ಕೆತ್ತಿ ನಿಲ್ಲಿಸಿದ ಹೆಬ್ಬಾಗಿಲು ಎದುರಾಗುವುದು. ಇಂತಹ ಕಲ್ಲುಗಳಿಂದ, ಯುರೋಪ್ ನಲ್ಲಿರುವ ಸ್ಟೋನ್-ಹೆನ್ಜ್ ಮಾದರಿ, ಕಲಾಕೃತಿಗಳನ್ನು ಮಾಡಿ ಕವಿಶೈಲದೆಲ್ಲೆಡೆ ಸ್ಮಾರಕಾರ್ಥವಾಗಿ ನಿಲ್ಲಿಸಿರುವರು. ಕವಿಯ ಸಮಾಧಿಯನ್ನೂ ಕೂಡ ಇಂತಹ ಕೆತ್ತನೆಯ ಕಲ್ಲುಗಳಿಂದಲೆ ಕಟ್ಟಿರುವರು. ಎಲ್ಲರೂ ಸಮಾಧಿಗೆ ನಮಸ್ಕರಿಸಿ, ಅಲ್ಲಿಂದ ಹಲವು ಮಾರು ದೊರದಲ್ಲಿ, ಕುವೆಂಪುರವರು ಬಂಡೆಗಲ್ಲ ಮೇಲೆ ಅವರ ಮತ್ತು ಅವರ ಸ್ನೇಹಿತರ ಹೆಸರುಗಳನ್ನು(ಕು.ವೆಂ.ಪು, ಬಿ.ಎಮ್.ಶ್ರೀ, ಟಿ.ಎಸ್.ವೆಂ), ಸ್ವತಃ ಕೆತ್ತಿರುವ ಜಾಗಕ್ಕೆ ಹೋದೆವು. ಅದರ ಫೋಟೊವನ್ನು ತೆಗೆದೆವು. ನನ್ನ ಆತ್ಮತೃಪ್ತಿಗಾಗಿ ಮತ್ತೆ ಕವಿಯ ಸಮಾಧಿಯ ಬಳಿಗೆ ಬಂದು, ನಾನು ಬರೆದ ಕವಿತೆಗಳನ್ನು ಅದರ ಮೇಲೆ ಇಟ್ಟು ಫೋಟೊ ತೆಗೆದೆ. ಅವರ ಆಶೀರ್ವಾದ ನನ್ನ ಬರಹಕ್ಕಿರಲಿ ಎಂದು!!!
ಮನೆಯಿಂದ ಅನತಿ ದೂರದಲ್ಲೇ ಸುತ್ತಲಿನ ಹಸಿರು ಮಲೆನಾಡ ವಿಹಂಗಮ ನೋಟ ಸಿಗುವಂತಹ, ಎತ್ತರವಾದ ಪ್ರದೇಶ ಸಿಗುವುದು ನಿಜಕ್ಕೂ ಪೂರ್ವ ಜನ್ಮದ ಪುಣ್ಯ. ಪುಣ್ಯವಿದ್ದರೂ ಅಂತಹ ಅವಕಾಶವನ್ನು, ಅಧ್ವಿತೀಯ ಅನರ್ಘ್ಯ ಪುಸ್ತಕ ರತ್ನಗಳನ್ನು ರಚಿಸಲು ಉಪಯೋಗಿಸುವುದಕ್ಕೆ, ಅಸಮಾನ್ಯ ಜ್ಞಾನಸಂಪತ್ತಿರಬೇಕು, ಕಾವ್ಯ ತಪಸ್ವಿಯಾಗಿರಬೇಕು, ಅರ್ಥಪರಮಾರ್ಥಗಳೊಳಗೆ ನುಸುಳಿ ಅರಿಯಬಲ್ಲ ಯೋಗಿಯಾಗಿರಬೇಕು, ಕಾವ್ಯಸೃಷ್ಟಿಯ ಹೆಬ್ಬಯಕೆ ರಕ್ತದ ಕಣಕಣಗಳಲ್ಲು ಅವಿರ್ಭವಿಸುತ್ತಿರಬೇಕು. ಕವಿಶೈಲದಿಂದ ಕಾಣಸಿಗುವ ಮೊಹಕ ನಿಸರ್ಗ ಸೌಂದರ್ಯ ಎಂತಹ ಜಡಮನಸ್ಸನ್ನು ಪುಳಕಿತಗೊಳಿಸುತ್ತದೆ; ಗೊಂದಲ,ಕೋಲಾಹಲಗಳ ಬಿರುಗಾಳಿಗೆ ಸಿಕ್ಕ ಮನಸ್ಸಿನಲ್ಲಿ ನಿರ್ಮಲ ಶಾಂತಿಯನ್ನು, ನಿಶ್ಚಲ ನೆಮ್ಮದಿಯನ್ನು ಸ್ಥಾಪಿಸುತ್ತದೆ; ನಿಸ್ತೇಜ ಮೊಗದಲ್ಲಿ ಕಾಂತಿಯ ತೇಜೋಪುಷ್ಪವನ್ನರಳಿಸುತ್ತದೆ; ಸುಪ್ತಲೋಕವನ್ನಾವರಿಸಿದ ಅಜ್ಞಾನದ ಕಗ್ಗತ್ತಲನ್ನು ಬಡಿದೋಡಿಸಿ ಸುಜ್ಞಾನ ಜ್ಯೋತ್ಸ್ನೆಯನ್ನು ಚೆಲ್ಲುತ್ತದೆ. ಪೂರ್ವದ ಆಗಸದಿಂದ ಜಲಪಾತದಂತೆ ಎತ್ತರದಿಂದ ಘಕ್ಕನೆ ಕವಿಶೈಲದಂಗಳಕ್ಕಿಳಿಯುವ ಹಸಿರ ಹೊನಲು, ಎಲ್ಲೆಡೆ ಪಸರಿಸುತ್ತ ದೂರದೂರದವರೆಗೆ ಬಯಲು, ಬೆಟ್ಟ, ಕಂದರ, ಕಣಿವೆ ಪರ್ವತಾದಿಗಳನ್ನು ಹತ್ತಿಳಿದು ದಿಗಂತದ ನಿತ್ಯಶ್ಯಾಮಲ ಗಿರಿ ಪಂಕ್ತಿಗಳಲ್ಲಿ ಲೀನವಾಗುತ್ತಿತ್ತು. ಗಿರಿ,ಶೃಂಗಗಳ ಸಾಲುಗಳು ಒಂದಕ್ಕೊಂದು ಬಲೆಯಂತೆ ಹೆಣೆದು, ಆಗಸದ ಕಂದು ಬಣ್ಣದಲ್ಲಿಯೂ, ಇಬ್ಬನಿಯ ನಿರ್ಮಲ ಶ್ವೇತವರ್ಣದಲ್ಲಿಯೂ ಬೆರೆತು ಅದ್ಭುತ ವರ್ಣಕಲೆಯನ್ನು ಸೃಷ್ಟಿಸಿತ್ತು; ಬೈಗು ಬಾನಿಗೇರಲು ಆವರೆಗೂ ಭಾಸ್ಕರನ ವಶದಲ್ಲಿದ್ದ ಗಗನ ಸಾಮ್ರಾಜ್ಯ, ತುಸುತುಸುವೆ ನಿಶಾಸಾಮ್ರಾಜ್ಞಿಯ ವಶವಾಗತೊಡಗಿತು; ರವಿಯು ಕ್ಷಿತಿಜದೆಡೆಗೆ ಜಾರುತ್ತ, ತನ್ನ ಶ್ವೇತಕವಚವನ್ನು ಕಳಚಿ, ಹೊನ್ನಕವಚಧಾರಿಯಾಗುತಿರಲು ಸುತ್ತಲಿನ ತಿಳಿಮೋಡವು ಶ್ವೇತಮಿಶ್ರಿತರಕ್ತವರ್ಣವನ್ನು ತಾಳುತ್ತಿತ್ತು. ಸಂಜೆಯಾಗುತ್ತಲೆ ಗೂಡುಗಳಿಗೆ ಮರಳಿದ ಮಿಗವೃಂದಗಳಿಂದ ವೃಕ್ಷರಂಗದ ನೇಪಥ್ಯದಲ್ಲಿ ಸುಶ್ರಾವ್ಯ ಸಂಗೀತಾರಾಧನೆ ನಡೆಯುತ್ತಿತ್ತು. ಹಸಿರು, ನೀಲಿ, ಹಳದಿ, ಕೆಂಪು, ಕೇಸರಿ, ಶ್ವೇತವರ್ಣಗಳೊಡೆಗೂಡಿ ಆ ಸುಂದರ ಸಂಜೆಯಲ್ಲಿ ರಚಿತವಾದ ಸ್ವರ್ಗಸದೃಷ್ಯ ಸೂರ್ಯಸ್ತಮಾನ ವರ್ಣಚಿತ್ರ, ನೋಡುಗನ ಮಸ್ತಿಷ್ಕಮಂಡಲಕ್ಕೆ ಸಮ್ಮೋಹನಾಸ್ತ್ರವ ಬಿಟ್ಟು ತನ್ನೆಡೆಗೆ ಸೆಳೆಯೆದಿತ್ತು. ಸೌಂದರ್ಯ ಸೆಳತಕ್ಕೆ ಸಿಕ್ಕ ಪ್ರ್‍ಏಕ್ಷಕ ಭಾವಾನಂದದಿಂದ ಉನ್ಮಾದಗೊಂಡನು.
ಸೂರ್ಯಾಸ್ತದ ಮೋಹಕ ದೃಶ್ಯದ ರಸದೌತಣವನ್ನು ಸವಿದು, ಅದರ ರಮಣೀಯತೆಯನ್ನು ಕೊಂಡಾಡುತ್ತ, ಕವಿಶೈಲದ ಕೆಳಗಿದ್ದ ಕವಿಮನೆಯೆಡೆಗೆ ಕಾಲು ಬೆಳೆಸಿದೆವು. ಅಲ್ಲಿಯವರೆಗೂ ಸುಮ್ಮನ್ನಿದ್ದ ಚೆಲುವನ ಮರ್ಕಟ ಮನಸ್ಸು ತನ್ನ ಕಾರ್ಯವನ್ನಾಗಲೆ ಶುರುಮಾಡಿಯಾಗಿತ್ತು. ನಾವು ಅಲ್ಲಿ ತಂಗಿದ್ದ ಮನೆಯ ಸುತ್ತಲೂ ಭೂತ, ಪ್ರೇತಾತ್ಮಗಳಿವೆಯೆಂದು, ಗಾಡರಾತ್ರಿಯಲ್ಲಿ ಮನೆಯೊಳಗೆ ಬಂದು, ಮನೆಯಲ್ಲಿರುವವರನ್ನು ಪೀಡಿಸುವೆಂದು, ಬಗೆಬಗೆಯಾಗಿ, ಭಯಾನಕವಾಗಿ ತನ್ನ ಸತಿಶಿರೋಮಣಿಗೆ ವರ್ಣಿಸಿದನು. ಸುತ್ತಲಿನ ಬೀಷಣ ನೀರವತೆಗೂ, ಘಾಡವಾಗುತ್ತಿದ್ದ ರಾತ್ರಿಗತ್ತಲಿಗೂ, ಪತಿಯ ಭರ್ತ್ಸನ ವರ್ಣನೆಗೂ, ದುರ್ಬಲ ಹೃದಯಿ ಸತಿ, ನಲುಗಿ ಅಳುವುದೊಂದೇ ಬಾಕಿ. ಉರಿವಗ್ನಿಗೆ ತುಪ್ಪ ಸುರಿಯುವಂತೆ, ಮನೆಯಲ್ಲಿರುವ ಶೆಟ್ಟರು ಭೂತವೆಂದು, ನಡುರಾತ್ರಿ ತಮ್ಮ ಕ್ರೂರದಂಷ್ಟ್ರವನ್ನು ತೋರಿ "ಲತ, ಎನಮ್ಮಾ ಬೇಕು ನಿನಗೆ" ಎಂದು ನಿನ್ನನ್ನು ಕೇಳುವರೆಂದು ಲತಾಳಿಗೆ ನಾನು ಹೇಳಿ ಹೆದರಿಸಿದೆ. ಮೊದಲೇ ಬೆದರಿದ ಹೆಣ್ಣು, ಮತ್ತೂ ಹೆದರಿ ನಿಂತಲ್ಲೆ ನಿಂತು ಪದರ್ಗುಟ್ಟಿತು. ಇದರಿಂದ ಗಾಬರಿಗೊಂಡು, ಅದೇ ರಾಗ, ಅದೇ ಹಾಡಿನಂತೆ - "ಇಲ್ಲಾ ಜಾನು" ಎಂದು, ಬೆದರಿದ ಸತಿಯನ್ನು ಸಂತೈಸಲು ಪತಿಮತಿಯು ಕಣಕ್ಕಿಳಿಯಿತು. ಈ ಜಾನು(ವಾರು)ಗಳ ವಿನೋದ, 'ವಿಸ್ಮಯ', ಲೀಲೆಗಳನ್ನು ನೋಡುತ್ತ ನಿಟ್ಟುಸಿರಿನ ನಗು ಚೆಲ್ಲಿ ನಾನು ಮುನ್ನೆಡೆದೆ. ಕೆಳಗೆ ಬಂದಮೇಲೆ, ಸ್ಥಳೀಯ ಜನರ ಸಹಾಯದಿಂದ ಕುವೆಂಪುರವರ ಮಗ, ಹಾಗು ಸಾಹಿತ್ಯ ಕೃಷಿಯಲ್ಲಿ ಬಹಳಷ್ಟು ಸಾಧನೆಗೈದಿಹ "ಪೂರ್ಣಚಂದ್ರ ತೇಜಸ್ವಿ"ಯವರ ಸಮಾಧಿಗೆ ಬೇಟಿಯಿತ್ತೆವು. ಅವರ ಸಮಾಧಿಯನ್ನು ಕಂಡ ನಾನು ಭಾವುಕನಾದೆ, ಕಾರಣ ಕೇವಲ ಇಂಗ್ಲೀಷ್ ಹಾಗು ಇಂಜಿನಿರಿಂಗ್ ಸಂಭಂಧಿಸಿದ ಪುಸ್ತಕಗಳನ್ನೋದುತ್ತಿದ್ದ ನನಗೆ, ಕನ್ನಡದಲ್ಲೂ ಒಳ್ಳೆಯ ಪುಸ್ತಕಗಳಿವೆ ಎಂದು ಪ್ರಪ್ರಥಮಭಾರಿಗೆ ಜ್ಞಾನೋದಯವೆಸಗಿದ್ದು, ತೇಜಸ್ವಿಯವರ ಪುಸ್ತಕಗಳು. ಆವರಿಂದ ನನ್ನ ಜ್ಞಾನಭಂಡಾರಕ್ಕಾದ ಸಹಾಯಕ್ಕೆ ನಾನೆಂದೂ ಚಿರಋಣಿ.
ಅಲ್ಲಿಂದ ಮುಂದೆ ನಮ್ಮ ತಗುದಾಣಕ್ಕೆ ಮರಳಿ ಬಂದೆವು. ಮತ್ತೆ ಯಥಾಪ್ರಕಾರ ಉದರದೊಳಗೆ ಸ್ವಾಧಿಷ್ಟ ಭೋಜನವನ್ನಿಳಿಸಿ, ಚಳಿಕಾಯಿಸಲು ಶೆಟ್ಟರು ಆಗಲೇ ನಿರ್ಮಿಸಿದ್ದ ಅಗ್ನಿಜ್ವಾಲೆಯ ಸುತ್ತ ಸಂದೇಶ್ ಜೊಡಿ ಕುಳಿತೆವು. ಎದುರಿಗಿದ್ದ ಅಗ್ನಿಯು ಕಟ್ಟಿಗೆಯನ್ನು ಕಬಳಿಸುತ್ತ ದೇದೀಪ್ಯಮಾನವಾಗಿ ಉರಿದು, ಚಳಿಸೈನ್ಯವನ್ನು ನಿಶ್ಶೇಶವಾಗಿಸುತ, ವಿಸ್ಫುಲಿಂಗಗಳನೆರಚಿ ತನ್ನ ವಿರಾಟ್ ಸ್ವರೂಪವನ್ನು ಪ್ರದರ್ಶಿಸಿತು. ಮೊದಮೊದಲು ನಮ್ಮ ನಮ್ಮ ಪರಿಚಯಗಳಿಂದ ಪ್ರಾರಂಭವಾದ ಮಾತುಕತೆ ನಿಧಾನವಾಗಿ ವಿಸ್ತರಿಸುತ್ತ, ಮಲೆನಾಡ ನಿಸರ್ಗ ಸೌದರ್ಯ, ಕುವೆಂಪುರವರ ಕುಟುಂಬ, ಅವರ ಮಹಾಕಾದಂಬರಿಗಳ ಅವಲೋಕನ, ದೇಶದ ರಾಜಕೀಯ ದುರ್ಗತಿ ಮತ್ತಿತರ ವಿಶಯಗಳ ಪರಿಧಿಯನ್ನು ಮುಟ್ಟಿತು. ಚಿಂತನೆಯಲ್ಲಿ, ಅಭಿರುಚಿಯಲ್ಲಿ ಸಮನ್ವಯವಿದ್ದರೆ ಜೊತೆಗಿರುವವರರೊಂದಿಗೆ (ಹಾಗು ಹೊಸಬರ)ಆಡುವ ಮಾತು, ಚರ್ಚೆಗಳು ಸ್ವಾರಸ್ಯಮಯವಾಗಿರುವುದಕ್ಕೆ, ಸಂದೇಶ್ ಜೊಡಿ ನಾವು ಕಳೆದ ಈ ಎರೆಡು ಗಂಟೆಗಳೆ ಸಾಕ್ಷಿ. ಮುಂಜಾನೆ ಬೇಗನೆ ಎದ್ದು ನವಿಲುಕಲ್ಲಿಗೆ ಹೋಗಬೇಕಾದುದ್ದರಿಂದ, ಎಲ್ಲರೂ ಎದ್ದು ಶಯನಾಗ್ರಸ್ಥರಾಗಲು ಮನೆಯೊಳಗೆ ನಡೆದೆವು. ರಾತ್ರಿ ಕಣ್ಣಿಗೆ ಬೇಗನೆ ನಿದ್ದೆ ಹತ್ತಿದರು, ಮಧ್ಯೆ ಮಧ್ಯೆ ಚೆಲುವನ ಗೊರೆಕೆಯು ಸಿಂಹಘರ್ಜನೆಯ ರೂಪ ತಾಳಿ, ನಮ್ಮ ನನ್ನ ನಿದ್ದೆಯನ್ನು ಹೆದರಿಸಿ ಓಡಿಸುತ್ತಿತ್ತು.
ಶಿವಮೊಗ್ಗೆಯಲ್ಲಿ ದಿನ ೨:
ನವಿಲುಕಲ್ಲು ಕುಪ್ಪಳ್ಳಿಯ ಕವಿಮನೆಯಿಂದ ಸುಮಾರು ೮ ಕಿ.ಮೀ ದೂರದಲ್ಲಿದೆ. ಮುಂಜಾನೆ ಬೆಳಿಗ್ಗೆ ೫:೦೦ ಗಂಟೆಗೆ ಎದ್ದು, ಅಲ್ಲಿಗೆ ಶೆಟ್ಟರ ಜೋಡಿ ಹೊರಟೆವು. ಹೋಗುವ ಬರದಲ್ಲಿ ಟಾರ್ಚ್ ತೆಗೆದುಕೊಳ್ಳುವುದೇ ಮರೆತು ಹೋಗಿತ್ತು. ನಿತ್ಯವೂ ಉಜ್ವಲ ದಾರಿದೀಪಗಳಿಂದ ಪ್ರಕಾಶಿತಗೊಂಡ ರಸ್ತೆಗಳಲಿ ಒಡಾಡುವ ನಮಗೆ, ಕತ್ತಲಲ್ಲಿ ಅಡವಿಯ ದಾರಿ ಹಿಡಿಯುವಾಗ ಕೃತಕ ಬೆಳಕಿನ ಅವಶ್ಯಕತೆಯಿರಬೇಕೆಂಬ ಅರಿವಿರಲಿಲ್ಲ. ಪೇಟೆಯ ಜೀವನಕ್ಕೆ ರೂಡಿಯಾಗಿ ಹೋಗಿದ್ದ ನಮ್ಮ ಸುಪ್ತಮನಸ್ಸು, ಕಾಡಿನಲ್ಲೂ ದಾರಿದೀಪಗಳಿರುತ್ತವೆಂದು ತಿಳಿದು, ಪೂರ್ವೋಪಾಯಸನ್ನದ್ಧರಾಗಲು ಜಾಗೃತಮನಸ್ಸಿಗೆ ಸಂಜ್ನ್ಯಾಸಂಕೇತವನ್ನು ಕಳಿಸಲಿಲ್ಲ. ಕಾರಿನ ದೀಪವನ್ನರಿಸಿ ಹೊರಬಂದಾಗ ಭೀಬತ್ಸ ಕರ್ಗತ್ತಲು ನಮ್ಮ ದೃಷ್ತಿಯನ್ನಾವರಿಸಿತು. ಅಂತರಿಕ್ಷದ ಅಲ್ಲಲ್ಲಿ ಹರಡಿರುವ ಕಪ್ಪುರಂದ್ರದ ಗರ್ಭದೊಳಗೆ ಘೋರಂಧಾಕಾರವಿರುವಂತೆ, ನಮ್ಮ ನಯನದ್ವಯಳಿಗೆ ಕತ್ತಲೆ ಕವಿದು ಕುರುಡಾದೆವು. ನವಿಲುಕಲ್ಲಿನ ಬಗ್ಗೆ ಅನೇಕ ಜನರಾಡಿದ ಸೌಂದರ್ಯೋಪಾಸನೆಯನ್ನು ನೆನೆದು, ಸ್ಥಳದ ಕಪೋಕಲ್ಪಿತ ಚಿತ್ರಣ ಮನದಲ್ಲಿತ್ತು. ಆದರೆ ವಾಸ್ಥವದಲ್ಲಿ ವನವಾಟಿಕೆಯ ಹಸಿರು, ಗಗನದ ನೀಲಿವರ್ಣ, ಕಲ್ಲಿನ ಬೀಮಗಾತ್ರವೆಲ್ಲಾ, ಘನಕಾಡಿಗೆಯ ಭೀಕರ ಕಪ್ಪಿನಲ್ಲಿ ಬೆರೆತು, ನೋಟವೆಲ್ಲಾ ಏಕವರ್ಣಮಯವಾಗಿತ್ತು. ಜಾಣರ ಸಂಗದಲ್ಲಿರುವರಿಗೆ ಭಯವಿಲ್ಲ, ಅರ್ಥಾತ್ ಚೆಲುವ ಮತ್ತು ಲತರಿಗೆ ಭಯ ಪಡುವ ಅವಶ್ಯಕತೆ ಇರಲಿಲ್ಲ!!. ಕಾರಣ, ನನ್ನ ಸಮಯೋಚಿತ ಜಾಣ್ಮೆಯಿಂದ ಮೊಬೈಲ್ ನಲ್ಲಿದ್ದ ಟಾರ್ಚನ್ನು ಹತ್ತಿಸಿದೆ. ಅಂಗೈನಲ್ಲಿ ಪುಟ್ಟಚಂದ್ರನಂತೆ ಕಂಗೊಳಿಸುತ್ತಿದ್ದ ಬಿಳಿ ಬೆಳಕು, ದಾರಿ ಕಾಣುವಷ್ಟು ಪ್ರಕಾಶಮಾನವಾಗಿತ್ತು. ಆದರ ಸಹಾಯದಿಂದ ಕೆಲನಿಮಿಶಗಳಲ್ಲೇ ಬೆಟ್ಟದ ತುದಿಯೇರಿದೆವು.
ಸ್ವಲ್ಪ ನಿಮಿಶಗಳಲ್ಲೇ ನಿಧಾನವಾಗಿ ಬೆಳಕು ಮೂಡಿದರೂ, ಸೂರ್ಯರಷ್ಮಿಯ ಒಂದೇ ಒಂದು ಕಿರಣವು ಧರೆಯನ್ನು ಮುಟ್ಟಲಿಲ್ಲ. ಇಬ್ಬನಿಯ ಮಹಾಸಾಗರ ಎಲ್ಲೆಡೆ ಆವರಿಸಿದ್ದರಿಂದ, ನಮಗೆ ಸೂರ್ಯನ ದಿವ್ಯ ದರ್ಶನವಾಗಲಿ, ಅವನು ಮೋಡಗಳ ಜೊತೆಗೂಡಿ ಆಡುವ ಓಕುಳಿಯಾಟವಾಗಲಿ ಕಾಣಾಸಿಗಲಿಲ್ಲ. ಆದರು, ಪ್ರಕೃತಿಯ ಪ್ರತಿ ಅವತಾರದಲ್ಲೂ ಸುಂದರತೆ ಎದ್ದು ಕಾಣುತ್ತದೆ.(ನೋಡುವ ಒಳಗಣ್ಣಿದ್ದರೆ). ದಶದಿಕ್ಕುಗಳಲ್ಲೂ ಸುತ್ತುವರಿದ ಬೆಳ್ಗಡಲಿಂದ ಹೊರಟ ಹಿಮಪವನವು, ನಮ್ಮ ತ್ವಚೆಯ ಬಿಂದುಬಿಂದುವನ್ನು ಮುತ್ತಿಕ್ಕಿ ಮೈನವಿರೇಳಿಸುತ್ತಿದ್ದವು. ತಟಸ್ಥ ಸ್ತಂಭೀಭೂತವಾದ ನವಿಲುಕಲ್ಲು ಶ್ವೇತಾಂಬರವುಟ್ಟ ತೇಜೋಮಯ ತಪಸ್ವಿಯಂತೆ ಕಂಡಿತು. ಕೆಲ ಹೊತ್ತು ಕಾದು, ರವಿ ದರ್ಶನವಾಗದೆ ಮರಳಿ ಮನೆಗೆ ಹೊರಟೆವು. ಬೇಗನೆ ಸ್ನಾನ, ತಿಂಡಿಯನ್ನು ಮುಗಿಸಿ, ಚಿಪ್ಪಲಗುಡ್ಡದ ವಿನಾಯಕ ಗುಡಿಗೆ ಸಂದೇಶ್ ಜೋಡಿ ಹೊರೆಟೆವು.
ವಿನಾಯಕ ಗುಡಿಯು ತುಂಗಾತೀರದ ಮೇಲೆ ವಿರಾಜಿಸುತ್ತಿತ್ತು. ಶೃಗೇರಿಯಲ್ಲಿರುವಂತೆ ಇಲ್ಲಿಯೂ ದೈವೀಭೂತ ಮತ್ಯ್ಸರಾಶಿಯನ್ನು ಕಾಣಬಹುದು. ಗುಡಿಯ ಅರ್ಚಕರ ಮನೆಯಲ್ಲಿ ಪುರಿಯನ್ನು ಖರೀದಿಸಿ, ಮೀನಿಗೆ ಪುರಿಸೇವನೆಗೈಯ್ಯಲು, ಗುಡಿಯಿಂದ ಕೆಳೆಗಿಳಿದು ತುಂಗೆಯ ಬಳಿ ಹೊರೆಟೆವು. ನೀರಿಗೆ ಪುರಿಯೆರಚಿದೊಡನೆಯೇ, ಮತ್ಸ್ಯವೃಂದ ಪುರಿಭಕ್ಷಣೆಗಾಗಿ ಒಂದರಮೇಲೊಂದೆರಗತೊಡಗಿತು. ಇದರ ನಡುವೆ ಚೆಲುವನ ಮರ್ಕಟ ಮನಸ್ಸು, ಸಾಮಾನ್ಯರಿಗಸಾಧ್ಯವಾದುದನ್ನು ಸಾಧಿಸಲು ಮುಂದಾಯಿತು. ನದಿಯಲ್ಲಿ ಈಜುವ ಸ್ನಿಗ್ಧಚರ್ಮಾಮಂಬರ ಮೀನನ್ನು ಕೆಲಕಾಲ ಬರಿಗೈಯ್ಯಲಿ ಹಿಡಿಯಲು ಹೋಗಿ, ಕಾಲ್ಜಾರಿ ದೊಪ್ಪನೆ ನೀರಿಗುರುಳಿದ ನಮ್ಮ ಚೆಲುವಚೆನ್ನಿಗರಾಯ. ಆಕಸ್ಮಿಕವಾಗಿ ಅವನು ಬಿದ್ದದ್ದಕ್ಕೂ, ಬಿದ್ದ ಗಾಬರಿಗೆ ವಿಚಿತ್ರ ವಿಲಕ್ಷಣ ಮುಖಭಾವ ಮಾಡಿದುದ್ದಕ್ಕೂ, ತತ್ಕ್ಷಣ ನನಗೂ, ಲತಾಳಿಗು ನಗು ನುಗ್ಗಿ ಬಂತು. ಆದರೆ ನೋವಿನ ನರಳಾಟ ಅವನಲ್ಲಿ ಕಾಣಿಸುತ್ತಲೇ ನಾವೆಲ್ಲಾ ಗಾಬರಿಯಿಂದ ಆವಕ್ಕಾಗಿ ಅವನ ಸಹಾಯಕ್ಕೆ ಮುಂದಾದೆವು. ದೈವವಶಾತ್ ಅವನಿಗೆ ಹೇಳಿಕೊಳ್ಳುವಂತಹ ಪೆಟ್ಟೇನು ಆಗಿರಲಿಲ್ಲ. ಅವನು ಬಿದ್ದ ಕಾರಣ ನಮಗೆ ಮುಂಚೆ ತಿಳಿದಿರಲಿಲ್ಲ. ಸ್ವಲ್ಪ ಸುಧಾರಿಸಿಕೊಂಡ ನಂತರ, ಅವನು ನಾನು ಮೇಲೆ ಕೊಟ್ಟ ವರ್ಣನೆಯನ್ನೇ ಹೇಳಿದಾಗ, ಗಾಬರಿಯಿಂದ ಉದರ ಪಾತಾಳವನೊಕ್ಕಿದ ನಗು, ಊರ್ಧ್ವಮುಖವಾಗಿ ಚಿಮ್ಮುತ, ನಮ್ಮ ಮೊಗಗಳಲ್ಲಿ ಮತ್ತೆ ನಲಿದಾಡಿದವು. ಬಹುಶ ಚೆಲುವನ ಈ ಆಲೋಚನರಹಿತ ಕಾರ್ಯವನ್ನು ನೋಡಿದ ಮೀನುಗಳೂ, ಮರದ ಮೇಲಿದ್ದ ವಾನರ ಸೈನ್ಯವೂ, ಗುಡಿಯೊಳಗಿದ್ದ ವಿನಾಯಕನು ಕೂಡ ನಮ್ಮಂತೆಯೇ ನಕ್ಕಿರಬೇಕು.
ವಿನಾಯಕನ ದರ್ಶನಗೈದು, ನಾವು ತುಂಗಾತೀರ್‍ಅದ ಹಿನ್ನೀರಿನ ದಂಡೆಯ ಮನಮೋಹಕ ಪ್ರಕೃತಿ ದೃಶ್ಯವನ್ನು ನೋಡಳೊರೆಟೆವು. ನಾವು ನಿಂತಿದ್ದ ಸ್ಥಳ, ಸುತ್ತಲೂ ನೀರಿನಿಂದ ಸುತ್ತುವರಿದು ದ್ವೀಪದಂತಿತ್ತು. ನದಿಯ ಆಚೆಯ ದಡದಲ್ಲಿ, ನದಿಯುದ್ದಕ್ಕೂ ಬೆಳೆದ ಮಲೆನಾಡ ವನವಾಟಿಕೆ, ತುಂಗೆಯ ಸಮಾನವಾಗಿ ಹಸಿರ ಹೊನಲನ್ನರಿಸಿತ್ತು. ಗಿಡ, ಮರಗಳು ಬೀಸುವ ಗಾಳಿಗೆ ನಾಟ್ಯವಾಡುತಿರಲು, ಸಸ್ಯರಾಶಿಯ ಮೇಲ್ಪದರದಿ, ಅಲ್ಲಲ್ಲಿ ಇಣುಕಿ ನೋಡುತ್ತಿದ್ದ ಕೆಂದಳಿರು ರವಿಯ ಸೂಕ್ಷ್ಮಕಿರಣಗಳಿಗೆ ಮಿರಮಿರನೆ ಮಿನುಗುತ್ತಿತ್ತು. ಬಿಸಿಲು ತೀಕ್ಷ್ಣವಿದ್ದರು ಬೀಸುತ್ತಿದ್ದ ತಂಗಾಳಿ ನಮಗದರ ಅನುಭವವಾಗದಂತೆ ತಡೆದಿತ್ತು. ನದಿವನಗಳ ಭವ್ಯ ಸುಂದರತೆಗೆ ಮರುಗಾಗಿ, ಅದರ ಸೌಂದರ್ಯವನ್ನು ಛಾಯಾಚಿತ್ರಗಳಲ್ಲಿ ಹಿಡಿದಿಡಲು ಮುಂದಾದೆವು. ಅಲ್ಲಿ ನಮ್ಮನ್ನು ಬಿಟ್ಟರೆ ಬೇರಾರು ಇಲ್ಲದುದರಿಂದ ಎಕಾಂತದಲ್ಲಿ ಪ್ರಕೃತಿ ಸೌಂದರ್ಯಾನುಭೂತಿಯಾಯಿತು. ಮನದ ಎಕಾಂತತೆಯ ಜೊತೆಗೆ ಜಗದ ಮೌನ ಸೇರಿದರೆ, ಪ್ರತಿಯೊಬ್ಬನು ಕೆಲಕಾಲ ತಪಸ್ವಿಯಾಗುವನು. ಚಿತ್ತ ತನ್ನ ಒಳಗಣ್ಗಳ ಮುಚ್ಚಿ, ಧ್ಯಾನದಲ್ಲಿ ಮುಳುಗಿ, ಛಂಚಲತೆಯನ್ನು ಕಳೆದು, ನಿರ್ಮಲತೆಯನ್ನು, ಸ್ಥೈರ್ಯವನ್ನು ಸಾಧಿಸುತ್ತದೆ. ಮನಸ್ಸು ಭಾರ ಕಳೆದು ಹೂವಿನಷ್ಟು ಹಗುರಾಗುತ್ತದೆ. ಕೇವಲ ತುಂಗತೀರದಲ್ಲದೆ ದಿನದ ಮೊದಲಿಂದಲೂ ನವಿಲುಕಲ್ಲು, ವಿನಾಯಕ ಗುಡಿಗಳಲಿ ನಮಗೆ ಇದೇ ರೀತಿಯ ಎಕಾಂತ ಲಭಿಸಿದ್ದು ನಮ್ಮ ಪುಣ್ಣ್ಯವೆಂದೇ ಹೇಳಬೇಕು.
ಇಲ್ಲಿಂದ ಮುಂದೆ ಕುಂದಾದ್ರಿ ಬೆಟ್ಟಕ್ಕೆ ಪ್ರಯಾಣವನ್ನು ಬೆಳೆಸಿದೆವು. ಮಾರ್ಗಮಧ್ಯದ್ದಲ್ಲಿ, ಸಣ್ಣ ಝರಿಯೊಂದರ ತಿಳಿನೀರಿನಿಂದ, ದಣಿದ ತನುವನ್ನು ತಣಿಸಿ, ಸೂರ್ಯಸ್ತವನ್ನನುಭವಿಸಲು ಕುಂದಾದ್ರಿಯನ್ನೇರಿದೆವು. ಬೆಟ್ಟದ ತುದಿಗೇರಿದೊಡನೆಯೆ ನಯನದ್ವಯಗಳಿಗೆ ದೃಘ್ಗೋಚರವಾದ ಸಹ್ಯಾದ್ರಿಯ ರುದ್ರರಮಣೀಯತೆ, ಉಸಿರು ಕ್ಷಣಕಾಲ ಎದೆಯಲ್ಲೇ ನಿಲ್ಲುವಂತೆ ಮಾಡಿತು. ರೇಖಾಚಿತ್ರಗಳಂತೆ ಕಾಣುವ ಹೊಲ,ಗದ್ದೆ, ತೋಟಗಳು, ದಿಗಂತದಲ್ಲಿ ಮುನಿಗಳಂತೆ ಸಾಲ್ಗಟ್ಟಿ ನಿಂತು ಸೃಷ್ಟಿಕರ್ತನ ಪ್ರಾರ್ಥನೆಯಲ್ಲಿ ನಿರತವಾಗಿಹ ಶಿಖರ ಪಂಕ್ತಿಗಳು, ಅವ್ಯವಚ್ಚಿನ್ನ ನೀಲಾಕಾಶ, ಗಿರಿ,ಪರ್ವತ,ಕಂದರಾದಿಗಳಲ್ಲಿ ತುಂಬಿ ಹರಿಯುತ್ತಿದ್ದ ಪಸಿರ್ಗಡಲು, ಧರೆಗುರುಳಿದ ಕಿರಣ ರಾಶಿಗಳನ್ನು ಮತ್ತೆ ಆಗಸಕ್ಕೆಸೆಯುವಲ್ಲಿ ನಿರತವಾಗಿಹ ನದಿ,ಸರೋವರಗಳು ನೊಡುಗನನ್ನು ರೋಮಹರ್ಷದದಲ್ಲಿ ತೇಲಿಸಿತ್ತು. ಇಂತಹ ಅತ್ಯದ್ಭುತವಾದ ಸಹ್ಯದ್ರಿಯ ನಿಸರ್ಗ ಸೌಂದರ್ಯ, ಮಾನವನೋರ್ವನ(ಕುವೆಂಪು) ಚಿತ್ತಮಂಥನ ನಡೆಸಿ, ಪ್ರತಿಭೆಯ ಮಹಾಹೊಳೆಯನ್ನರಿಸಿ, ಅಸಾಧಾರಣ ಅಸಾಮಾನ್ಯ ಸಾಹಿತ್ಯವನ್ನು ರಚಿಸುವಷ್ಟು ಪ್ರಭಾವ ಬೀರಿದೆಯೆಂದೆರೆ ಆಶ್ಚರ್ಯವಲ್ಲ. ಅಂತಹ ಸೌಂದರ್ಯವನ್ನು ಎಷ್ಟು ಸಾಧ್ಯವೋ ಅಷ್ಟೂ ಅನುಭವಿಸುತ್ತ, ಮೂಕವಿಸ್ಮಿತರಾಗಿ ಕೆಲ ಕಾಲ ಮೌನಧಾರಿಗಳಾದೆವು. ಸ್ವಲ್ಪ ಸಮಯದ ನಂತರ ನೇಸರನು ಬಾನದಾರಿಯಲ್ಲಿಳಿಯುತ ತನ್ನ ಹೊನ್ನಕಿರಣಗಳ ಅಮೃತವರ್ಷಧಾರೆಯಿಂದ ಸುತ್ತಲ ಜಗತ್ತು ತೊಯ್ದು, ಎಲ್ಲೆಡೆ ಕೆಂಪೆರೆಚಿದನು. ಪ್ರೇಕ್ಷಕ ಪ್ರಕೃತಿಸಿರಿಯ ಅನುಭದೊಂದಿಗೆ ಅನುಭಾವವು ಪಡೆದು, ಬಾವಪರವಶಗೊಂಡು ವಿಶ್ವಸುಂದರತೆಯಲ್ಲಿ ಲೀನಗೊಂಡನು. ರವಿಯ ಅಸ್ತಂಗತದ ಜೊತೆ ನಮ್ಮ ಕುಪ್ಪಳ್ಳಿಯ ಪ್ರವಾಸವು ಅಸ್ತಂಗತವಾಗ ತೊಡಗಿತು. ಸೂರ್ಯನು ಮುಳಿಗಿದ ಮೇಲೆ ಮತ್ತೆ ಕುಪ್ಪಳ್ಳಿಗೆ ಮರಳಿ, ಮರುದಿನ ಬೆಳಿಗ್ಗೆಯ ಧೀರ್ಘ ಪಯಣಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಂಡು, ನಿದ್ರಾದೇವಿಯ ಶರಣಾದೆವು.
ದಿನ ೩:
ಮರುದಿನ ಬೆಳಿಗ್ಗೆ ಎದ್ದು ಕುಪ್ಪಳಿಗೆ ವಿದಾಯವೇಳಿ ಬೆಂಗಳೂರಿನ ಕಡೆಗೆ ಕಾರನ್ನು ತಿರುಗಿಸಿದೆವು. ಸಂದೇಶ್, ಶೆಟ್ಟರು ಹಾಗು ಅಲ್ಲಿದ್ದ ಮತ್ತಿತರ ಕೆಲಸದವರು ನಮ್ಮನ್ನು ಬಹಳ ವಿನಯ, ವಿಶ್ವಾಸದಿಂದ ಬೀಳ್ಕೊಳ್ಳಿಸಿದರು. ದಾರಿಯುದ್ದಕ್ಕೂ ನಾವು ನೊಡಿದ ನಿಸರ್ಗ ಸೌದರ್ಯವನ್ನು, ನಮಗಾದ ಸ್ವರ್ಗಾನುಭೂತಿಯನ್ನು ಮೆಲುಕಾಕುತ್ತಾ ದಾರಿ ಸವಿಸಿದೆವು.
Comments
ಉ: ಪ್ರವಾಸ ಕಥನ - ಕುಪ್ಪಳ್ಳಿ ಪ್ರವಾಸ
ಉ: ಪ್ರವಾಸ ಕಥನ - ಕುಪ್ಪಳ್ಳಿ ಪ್ರವಾಸ
ಉ: ಪ್ರವಾಸ ಕಥನ - ಕುಪ್ಪಳ್ಳಿ ಪ್ರವಾಸ
ಉ: ಪ್ರವಾಸ ಕಥನ - ಕುಪ್ಪಳ್ಳಿ ಪ್ರವಾಸ
In reply to ಉ: ಪ್ರವಾಸ ಕಥನ - ಕುಪ್ಪಳ್ಳಿ ಪ್ರವಾಸ by santhosh_87
ಉ: ಪ್ರವಾಸ ಕಥನ - ಕುಪ್ಪಳ್ಳಿ ಪ್ರವಾಸ