ಎಲ್ಲೆಲ್ಲಿ ನೋಡಲೂ...

ಎಲ್ಲೆಲ್ಲಿ ನೋಡಲೂ...

ಬಸವನಗುಡೀಲಿ ಒಮ್ಮೆ ಮೆಣಸಿನಕಾಯಿ ಬಜ್ಜಿ ಜಡಿದು ಜೊತೆಗೆ ಕೊಟ್ಟ ಪೇಪರ್ರು, ಕವರ್ರು ಎಸೆಯೋಕೆ ಬುಟ್ಟಿ ಹುಡುಕುತ್ತಿದ್ದೆವು. "ಕಸದ ಬುಟ್ಟಿ ಎಲ್ಲಿದೆ?" ಎಂದು ಎದುರಿಗಿದ್ದ ಅಂಗಡಿಯವನಿಗೆ ಕೇಳಿದರೆ ಕಿಸಕ್ಕೆಂದು ನಕ್ಕುಬಿಟ್ಟ. "ಏನ್ ಅಮೇರಿಕಾದಿಂದ ಬಂದ್ರಾ? ಅಲ್ಲೇ ಹಾಕಿ ಮೂಲೇಲಿ!".

ರಸ್ತೆ ಬದೀಲಿ, ಖಾಲಿ ಸೈಟುಗಳಲ್ಲಿ ಪಾರ್ಥೇನಿಯಮ್ ಗಿಡ ಬಿಟ್ಟರೆ ರಾರಾಜಿಸೋದು ಪ್ಲಾಸ್ಟಿಕ್ ಕವರ್ರುಗಳೇ. ಮುಂದೊಂದು ಪೀಳಿಗೆಯಲ್ಲಿ ಆರ್ಕಿಯಾಲಜಿ ಎಂದುಕೊಂಡು ಬೆಂಗಳೂರನ್ನು ಅಗೆದರೆ ಅದೆಷ್ಟು ಸವಾಲುಗಳು ಎದುರಾಗಬಹುದೋ! ಅವರುಗಳಿಗೆ ಇಷ್ಟೊಂದು ಕವರ್ರುಗಳು ಸಿಕ್ಕು ಇದರಿಂದ ಏನರ್ಥ ಮಾಡಿಕೊಳ್ಳಬೇಕೆಂದು ತೋಚದ ಪರಮ ಸಮಸ್ಯೆಯಾಗಿಬಿಡಬಹುದು. ಅಥವ ಪ್ಲಾಸ್ಟಿಕ್ ಕವರ್ರು ಎಂಬುದೊಂದಿತ್ತು ಎಂದು ಆ ಪೀಳಿಗೆಯವರಿಗೆ ಗೊತ್ತಾದರೆ ಅವರು ಹಿಗ್ಗಾಮುಗ್ಗಿ ಯಾರನ್ನೂ ಬಿಡದೇ ಈ ಪೀಳಿಗೆಯ ಎಲ್ಲರನ್ನೂ ಬೈದುಕೊಳ್ಳುವಂತಾಗಬಹುದು.

ಹಿಂದಿದ್ದ ಅಪಾರ್ಟ್ಮೆಂಟಿನ ಸೆಕ್ಯೂರಿಟಿ "ಕಳ್ ನನ್ ಮಕ್ಳು, ಬಿ ಬಿ ಎಂ ಪಿ ಬಂದು ಇವರ ಕಸಾನ ಹಾಕ್ಕೊಂಡ್ ಓಗ್ದೇ ಇದ್ರೆ ಆಯ್ತು ಸಾಮಿ, ಓದು ಬರಹ ಬಂದ್ರೂ ಉಪ್ಯೋಗಿಲ್ಲಾ ಇಲ್ಲೇ ವಟ್ಕತಾರೆ" ಎಂದು 'ಓದು ಬರಹ ಬಲ್ಲ' ಎಲ್ಲರನ್ನೂ ಸೇರಿಸಿ ಬಯ್ಯುತ್ತಿದ್ದುದು ನೆನಪಾಗುತ್ತದೆ.

ಕೆಲವು ದಿನಗಳ ಹಿಂದೆ ಅಮೇರಿಕೆಯಿಂದ ವಾಪಸ್ ಬೆಂಗಳೂರಿಗೆ ಬಂದ ಸ್ನೇಹಿತನೊಬ್ಬನೊಂದಿಗೆ ಮಾತುಕತೆ ಹೀಗೆ ನಡೆದಿತ್ತು:
"ನನಗೆ ಬೆಂಗಳೂರೇ ಇಷ್ಟ. ಇಲ್ಲಿನ ಊಟ ತಿಂಡಿ, ಇಲ್ಲಿನವರ attitude... ಇಲ್ಲೇ ಚೆಂದ. ಬೆಂಗಳೂರಲ್ಲಿ ಎಲ್ಲಿ ನೋಡಿದರೂ ಏನು ಕಾಣಸಿಗತ್ತೆ ಗೊತ್ತ? ..."
(ನಾನು) "... ಪ್ಲಾಸ್ಟಿಕ್ ಕವರ್ರು?"
"ಲೇ ಸೀರಿಯಸ್ಸಾಗಿ ಕೇಳೋ... liveliness in people!"

ಸೀರಿಯಸ್ ಆಗಿ ಅಲ್ಲಿಂದ ಮಾತು ಎತ್ತೆತ್ತಲೋ ಹೋಗಿತ್ತು. ಮಾತುಕತೆಗೆ ಓಗೊಡುವುದಲ್ಲದೇ ತಮ್ಮದೂ ಎರಡು ಮಾತು ಸೇರಿಸುವ ಇಲ್ಲಿಯ ಜನ, ಕಳೆದು ಹೋದಾಗ route ತಿಳಿಸುವ ಆಟೋ ಡ್ರೈವರ್ರುಗಳು - ಹೀಗೆ ಬೆಂಗಳೂರಿನ ವಿಷಯಗಳೇ ಹಲವನ್ನು ಮಾತನಾಡುತ್ತ ಪ್ಲಾಸ್ಟಿಕ್ ಕವರ್ ಬಗ್ಗೆ ಮರೆತೆವು.

Rating
No votes yet

Comments