ವೈದ್ಯನೊಬ್ಬನ ದುಃಸ್ವಪ್ನಗಳು....೩

ವೈದ್ಯನೊಬ್ಬನ ದುಃಸ್ವಪ್ನಗಳು....೩

ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ಹಾಡಿ ಹೊಗಳುವ ಭರದಲ್ಲಿ ನಾನು ಉತ್ತರಿಸಬೇಕಿದ್ದ ಪ್ರಶ್ನೆಯನ್ನೇ ಮರೆತುಬಿಟ್ಟಿದ್ದೆ. ನೆಗಡಿಯಂತಹ ಸಾಮಾನ್ಯ ಕಾಯಿಲೆಗೆ ಚಿಕಿತ್ಸೆ ಏಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ನಾನು ಉತ್ತರಕೊಡಬೇಕಿತ್ತು. ಈ ರಕ್ಷಣಾ ವ್ಯವಸ್ಥೆಯನ್ನು ತಿಳಿದ ಬಳಿಕ, ನಮ್ಮನ್ನು ಸದಾಕಾಲವೂ ಸುತ್ತುವರಿದಂತಹ ಸೂಕ್ಷ್ಮಾಣುಗಳು ನಮ್ಮ ದೇಹವನ್ನು ಪ್ರವೇಶಿಸಿ, ಕಾಯಿಲೆಯನ್ನು ಹೇಗೆ ಹುಟ್ಟು ಹಾಕುತ್ತವೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಸೂಕ್ಷ್ಮಾಣುಗಳಲ್ಲಿ ವಿವಿಧ ಪ್ರಕಾರಗಳಿವೆ ಎಂದು ನಾನಾಗಲೇ ಹೇಳಿದ್ದೇನೆ. ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ನಲ್ಲಿ ಮಾತ್ರ ಕಾಣಬಹುದಾದಂತಹ ವೈರಸ್ ಗಳಿಂದ ಹಿಡಿದು, ಅವುಗಳಿಗಿಂತಲೂ ಸಾವಿರಾರು ಪಟ್ಟು ದೊಡ್ಡದಾದ ಮಲೇರಿಯಾ ರೋಗಾಣುಗಳ ವರೆಗೆ ಅನೇಕ ಬಗೆಯ ಸೂಕ್ಷ್ಮಾಣುಗಳು ನಮ್ಮಲ್ಲಿ ಕಾಯಿಲೆಯನ್ನುಂಟು ಮಾಡಬಹುದು. ಎಲ್ಲಾ ಸೂಕ್ಷ್ಮಾಣುಗಳು ನಮ್ಮ ವೈರಿಗಳಲ್ಲ. ಈ ಸೂಕ್ಷ್ಮಾಣುಗಳನ್ನು ಈ ರೀತಿ ವಿಂಗಡಿಸಬಹುದು: ೧. ಬಿಲಿಯಗಟ್ಟಲೆ ಸಂಖ್ಯೆಯಲ್ಲಿ ನಮ್ಮ ದೇಹವನ್ನು ಪ್ರಕಟಿಸಿದರೂ ನಮಗೆ ಎಳ್ಳಷ್ಟೂ ಹನಿ ಮಾಡದ ಅಥವಾ ಮಾಡಲಾಗದಂತಹ ಸೂಕ್ಷ್ಮಾಣುಗಳು. : ಉದಾಹರಣೆಗೆ, ಬಹಳಷ್ಟು ಜನರು ತಮ್ಮ ದಿನನಿತ್ಯದ ಆಹಾರದಲ್ಲಿ ಸೇವಿಸುವ ಮೊಸರಿನಲ್ಲಿರುವ ಲ್ಯಾಕ್ಟೋಬ್ಯಾಸಿಲ್ಲೈ ಮತ್ತು ಯೀಸ್ಟ್ ಎಂಬ ಸೂಕ್ಷ್ಮಾಣು ಜೀವಿಗಳು.

೨. ನಮ್ಮ ದೇಹದ ವಿವಿಧ ಭಾಗಗಳಲ್ಲಿ ನೆಲೆಸಿ, ತಮ್ಮ ಪಾಡಿಗೆ ತಾವಿದ್ದು, ಸಾಮಾನ್ಯ ಸಂದರ್ಭಗಳಲ್ಲಿ ನಮಗೆ ಯಾವ ಕೆಡುಕನ್ನೂ ಮಾಡದಂತಹ ಜೀವಿಗಳು. ಉದಾಹರಣೆಗೆ: ನಮ್ಮ ಬಾಯಿಯಲ್ಲಿ, ಮೂಗಿನಲ್ಲಿ, ಕರುಳುಗಳಲ್ಲಿ ಚರ್ಮ ಮತ್ತು ಜನನಾಂಗಗಳ ಮೇಲೆ ನೆಲೆಸಿರುವ ಜೀವಿಗಳು. ಆದರೆ, ಕೆಲವು ವಿಶೇಷ ಸಂದರ್ಭಗಳಲ್ಲಿ, ಅವು ನಮಗೆ ಹಾನಿ ಮಾಡಬಹುದು. ೩. ಬಹಳ ಸೌಮ್ಯ ಸ್ವರೂಪದ ಕಾಯಿಲೆಗಳನ್ನುಂಟು ಮಾಡುವ ಜೀವಿಗಳು. ೪.ಹಲವಾರು ವರ್ಷಗಳಷ್ಟು ಕಾಲ ನಮ್ಮ ದೇಹದಲ್ಲಿ ನೆಲೆಸಿ, ಅಂಗಾಂಗಳಿಗೆ ತೀವ್ರ ಹಾನಿಯುಂಟು ಮಾಡುವ ಕ್ಷಯ, ಕುಷ್ಠ ರೋಗಾಣುಗಳು. ೫. ದೇಹವನ್ನು ಪ್ರವೇಶಿಸಿದ ಕೆಲವು ಗಂಟಗಳಲ್ಲಿಯೇ ತೀವ್ರ ಸ್ವರೂಪದ ಕಾಯಿಲೆಯನ್ನುಂಟು ಮಾಡಬಲ್ಲಂತಹ ಕಾಲರಾ ರೋಗಾಣುಗಳು. ಹೀಗೆ, ಬಹಳ ಸೌಮ್ಯ ಸ್ವರೂಪದ ರೋಗಾಣುಗಳಿಂದ ಹಿಡಿದು, ಅತಿ ಕ್ರೂರ ರೋಗಾಣುಗಳ ವರೆಗೂ ವಿವಿಧ ಬಗೆಯ ರೋಗಾಣುಗಳಿವೆ. ಇವುಗಳಲ್ಲಿ ಕೆಲವನ್ನು ನಮ್ಮ ದೇಹದ ರಕ್ಷಣಾ ವ್ಯವಸ್ಥೆಯೇ ವಿಚಾರಿಸಿಕೊಳ್ಳುತ್ತದೆ. ಟೈಫಾಯ್ಡ್, ಪ್ಲೇಗ್, ನಂತಹ ಕಾಯಿಲೆಗಳ ಸಂದರ್ಭದಲ್ಲಿ ನಮ್ಮ ದೇಹದ ರಕ್ಷಣಾ ವ್ಯವಸ್ಥೆ ಮಾತ್ರ ಸಾಕಾಗುವುದಿಲ್ಲ. ಅಂತಹ ಸಮಯದಲ್ಲಿ, ಈ ಸೂಕ್ಷ್ಮಾಣುಗಳನ್ನು ಕೊಲ್ಲಬಲ್ಲಂತಹ ಔಷಧಿಗಳನ್ನು (anitbiotics) ಸೇವಿಸುವುದರ ಮೂಲಕ ನಮ್ಮನ್ನು ರಕ್ಷಿಸಿಕೊಳ್ಳಬಹುದು. ಬ್ಯಾಕ್ಟೀರಿಯಾಗಳೆಂಬ ರೋಗಾಣುಗಳಲ್ಲಿ ಬಹಳಷ್ಟು ರೋಗಾಣುಗಳನ್ನು ಆಂಟಿಬಯಾಟಿಕ್ಸ್ ಬಳಸಿ ಅವುಗಳನ್ನು ಕೊಲ್ಲಬಹುದು. ವೈರಸ್ ಗಳೆಂಬ ರೋಗಾಣುಗಳು ನಮ್ಮ ದೇಹದ ಜೀವಕೊಶಗಳ ಒಳಕ್ಕೇ ನುಸುಳಿ, ಅಲ್ಲಿ ಆಶ್ರಯ ಪಡೆಯುವುದರಿಂದ, ಅವುಗಳನ್ನು ನಾಶಪಡಿಸಬಲ್ಲಂತಹ ಆಂಟಿಬಯಾಟಿಕ್ಸ್ ನಮ್ಮಲ್ಲಿ ಲಭ್ಯವಿಲ್ಲ. ಒಂದು ಸಮಾಧಾನಕರ ಸಂಗತಿಯೆಂದರೆ, ಈ ವೈರಸ್ ಗಳುಂಟು ಮಾಡಬಹುದಾದ ಪೋಲಿಯೋ, ರೇಬೀಸ್, ಹೆಪಟೈಟಿಸ್ ಸ್ವೈನ್ ಫ್ಲೂ ಇತ್ಯಾದಿ ಭಯಾನಕ ಮತ್ತು ಮಾರಕ ರೋಗಗಳನ್ನು ಲಸಿಕೆಗಳನ್ನು ಬಳಸುವುದರ ಮೂಲಕ ನಿವಾರಿಸಬಹುದಾಗಿದೆ. ನೆಗಡಿಯು ಕೂಡ ಒಂದು ಬಗೆಯ ವೈರಸ್ ನಿಂದ ಉಂಟಾಗುವ ಕಾಯಿಲೆ. ಪೊಲಿಯೋ, ಸಿಡುಬು ಇತ್ಯಾದಿ ಮಾರಕ ರೋಗಗಳಿಗೆ ಲಸಿಕೆ ತಯಾರಿಸಲು ಸಾಧ್ಯವಾಗಿರುವಾಗ ನೆಗಡಿಯ ವೈರಸ್ ವಿರುದ್ಧವಾಗಿ ಲಸಿಕೆ ತಯಾರಿಸಲು ಏಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆ ಮೂಡಬಹುದು. ನಾವು ಯಾವುದೇ ರೋಗಾಣುಗಳ ವಿರುದ್ಧ ಲಸಿಕೆ ತಯಾರುಮಾಡುವಾಗ, ಪ್ರಯೋಗಾಲಯದಲ್ಲಿ ದುರ್ಬಲಗೊಳಿಸಿದಂತಹ ಆ ರೋಗಾಣುಗಳನ್ನು (attenuated microbes) ಚುಚ್ಚುಮದ್ದಿನ ರೂಪದಲ್ಲಿ ಮಾನವನ ದೇಹದಲ್ಲಿ ಸೇರಿಸುತ್ತೇವೆ. ಈ ರೋಗಾಣುಗಳು ದುರ್ಬಲವಾಗಿರುವುದರಿಂದ, ಇವುಗಳನ್ನು ಮಾನವ ದೇಹದಲ್ಲಿನ ಮ್ಯಾಕ್ರೋಫೇಜ್ ಗಳೆಂಬ ಜೀವಕೋಶಗಳು ಕಬಳಿಸಿ, ರೋಗಾಣುಗಳ ರಚನೆಯನ್ನು (structure) ಗುರುತಿಟ್ಟುಕೊಂಡು ಆದಕ್ಕೆ ಸರಿಹೊಂದುವ ಆಂಟಿಬಾಡಿಗಳನ್ನು ತಯಾರು ಮಾಡಿಟ್ಟುಕೊಂಡು, ಮುಂದೊಮ್ಮೆ ಈ ರೋಗಾಣುಗಳು ಆ ಮಾನವ ದೇಹವನ್ನು ಪ್ರವೇಶಿಸಿದಾಗ, ಸಿದ್ಧಪಡಿಸಿಕೊಂಡಿಕೊಂಡಿದ್ದ ಆಂಟಿಬಾಡೀಸ್ ಈ ರೋಗಾಣುಗಳ ಮೇಲೆರಗಿ, ಅವುಗಳನ್ನು ನಾಶಗೊಳಿಸುತ್ತವೆ. ಆಂಟಿಬಾಡೀಸ್ ಗಳು, ರೋಗಾಣುವಿನ ರಚನೆಗೆ ಸಾಪೇಕ್ಷವಾಗಿರುವುದರಿಂದ (specific) ಮುಂದೊಮ್ಮೆ ಅದೇ ರೋಗಾಣು ತನ್ನ ರಚನೆಯಲ್ಲಿ ಸ್ವಲ್ಪ ಮಾರ್ಪಾಡು ಮಾಡಿಕೊಂಡು, ದೇಹವನ್ನು ಪ್ರವೇಶಿಸಿದರೆ, ಆಂಟಿಬಾಡಿಸ್ ಗಳು ರೋಗಾಣುವಿನ ಹೊಸರೂಪವನ್ನು ಗುರುತಿಸಲಾಗದೇ ನಿಷ್ಪ್ರಯೋಜಕವಾಗುತ್ತವೆ. ಪ್ರತಿವರ್ಷವೂ ತನ್ನ ರಚನೆಯನ್ನು ಬದಲಿಸಿಕೊಂಡು ನಮ್ಮ ಮೇಲೆ ಆಕ್ರಮಣ ಮಾಡುವ ಇನ್ ಫ್ಲೂಯೆಂಜಾ ಕಾಯಿಲೆಗೆ ಸರ್ವಕಾಲಕ್ಕೂ ಉಪಯೋಗವಾಗಬಲ್ಲಂತಹ ಲಸಿಕೆಯನ್ನು ತಯಾರಿಸಲಾಗಿಲ್ಲ. ನಮಗೆ ನೆಗಡಿಯನ್ನುಂಟು ಮಾಡುವ ರೋಗಾಣು ವೈರಸ್ ಆರ್ಗಿರುವುದರಿಂದ ಮತ್ತು ನೆಗಡಿಯುಂಟು ಮಾಡುವ ರ ರೈನೋ ವೈರಸ್ ಕೂಡ ತನ್ನ ರಚನೆಯನ್ನು ಸದಾ ಕಾಲ ಬದಲಿಸುತ್ತಾ ಇರುವುದರಿಂದ, ಈ ರೋಗಾಣುಗಳನ್ನು ಕೊಲ್ಲಬಲ್ಲಂತಹ ಆಂಟಿಬಯಾಟಿಕ್ಸ್ ಗಳೂ ನಮ್ಮಲ್ಲಿಲ್ಲ ಮತ್ತು ನೆಗಡಿಯನ್ನು ತಡೆಗಟ್ಟಬಲ್ಲಂತಹ ಲಸಿಕೆಯನ್ನು ತಯಾರಿಸಲೂ ಸಾಧ್ಯವಾಗಿಲ್ಲ. ಅತಿ ಸಾಮಾನ್ಯವಾದ ನೆಗಡಿಯನ್ನು ಜಯಿಸಲಾಗದ ನಮ್ಮ ಅಸಮರ್ಥತೆಯ ಮರ್ಮ ಇಲ್ಲಿ ಅಡಗಿದೆ. ನೆಗಡಿಯಲ್ಲದೆ ಬೇರೆ ಕೆಲವು ವೈರಸ್ ಸಂಬಂಧಿ ಕಾಯಿಲೆಳಿಗೆ ಲಸಿಕೆ ತಯಾರಿಸಲು ಸಾಧ್ಯವಾಗದೇ ಇರುವುದಕ್ಕೆ ಬೇರೆ ಕೆಲವು ಕಾರಣಗಳಿವೆ. ಚಿಕಂಗುಣ್ಯಾ ದ ವೈರಸ್ ಪೂರ್ಣ ಸ್ವರೂಪ ನಮಗರಿವಾಗದೇ ಇರುವುದು, ಇದರ ದುರ್ಬಲ ತಳಿಯನ್ನು ತಯಾರಿಸಲಾಗದೇ ಇರುವುದು ಕಾರಣಗಳಾದರೆ, ಏಡ್ಸ್ ಉಂಟುಮಾಡುವ ಎಚ್. ಐ.ವಿ. ವೈರಸ್ ನಮ್ಮ ರಕ್ಷಣಾ ವ್ಯವಸ್ಥ್ಯೆಯ ಸಿಬ್ಬಂದಿಯ ಮೇಲೇ ಆಕ್ರಮಣ ಮಾಡುವುದು ಇದಕ್ಕೆ ತಕ್ಕ ಲಸಿಕೆ ತಯಾರಿಸಲು ಸಾಧ್ಯವಾಗದೇ ಇರುವುದಕ್ಕೆ ಕಾರಣವಾಗಿದೆ.

Comments