ಚುಟುಕು ಕಥೆಗಳು - ೦೨

ಚುಟುಕು ಕಥೆಗಳು - ೦೨

ಕಾಯಕ:
ಬೆಳಿಗ್ಗೆ, ಗಂಡನಾದವನು ಮಕ್ಕಳನ್ನು ಶಾಲೆಗೆ ಕಳಿಸಿ ತಾನೂ ಹೊರಟ ಮೇಲೆ, ತಾನು ತಡವಾಗಿ ಕಛೇರಿ ತಲುಪಿ, ಬೆಳಗಿನಿಂದ ಸಂಜೆವರೆಗೂ ಈ-ಮೈಲ್ಸ್ ನೋಡುವುದು, ಪಕ್ಕದವಳೊಂದಿಗೆ ಹರಟೆ, ಒಂದೂವರೆ ತಾಸು ಊಟ, ನಾಲ್ಕು ಬಾರಿ ಕಾಫಿ, ಮಧ್ಯೆ ಮಧ್ಯೆ ಸೋಷಿಯಲ್ ವೆಬ್-ಸೈಟ್’ಗಳಿಗೆ ಭೇಟಿ ಎಂದೆಲ್ಲ ಕೆಲಸಗಳನ್ನು ತುರುಕಿಕೊಂಡು ಬಳಲಿ ಬೆಂಡಾಗಿ (?) ಸಂಜೆ ಬೇಗನೆ ಹೊರಟು, ಮನೆಗೆ ಬಂದೊಡನೆ, ದಣಿವಾರಿಸಿಕೊಳ್ಳುತ್ತಿದ್ದ, ಮಕ್ಕಳನ್ನು ನೋಡಿಕೊಳ್ಳುವ ಇಳಿ ವಯಸ್ಸಿನ ದಾದಿಯನ್ನು ’ಸಮಯ ಹಾಳು ಮಾಡಿದ್ದಕ್ಕೆ’ ರೇಗಿಕೊಂಡು, ಮತ್ತೊಮ್ಮೆ ಹೀಗಾದಲ್ಲಿ ಸಮಯ ವ್ಯಯ ಮಾಡಿದಷ್ಟಕ್ಕೆ ಸಂಬಳ ಕಡಿದುಕೊಳ್ಳುವುದಾಗಿ ಬೆದರಿಸಿದಳು.

ಹೆರಳ ಹೆಣ್ಣೆ? ಹರಳೆಣ್ಣೆ?
ಅವನಿಗೆ ಮೊದಲಿಂದಲೂ ಒಂದು ಬಯಕೆ ಇತ್ತು. ತಾನು ಮದುವೆಯಾಗುವವಳು ಉದ್ದನೆ ತಲೆಗೂದಲಿನವಳು ಆಗಿರಬೇಕು ಎಂದು. ಒಂದು ದಿನ ಹೀಗೆ ಕಾರಿನಲ್ಲಿ ಕುಳಿತು ಬರಲಿರುವ ತನ್ನ ಸ್ನೇಹಿತನಿಗಾಗಿ ಬಸ್ ಸ್ಟಾಪಿನಿಂದ ಸ್ವಲ್ಪ ದೂರ ಕಾಯುತ್ತಿದ್ದ. ಸ್ನೇಹಿತ ಬರುವ ಮುನ್ನ ಅವನ ಕಣ್ಣಿಗೆ ಬಿದ್ದದ್ದು ಬಸ್ ಸ್ಟಾಪಿಗೆ ನೆಡೆದು ಹೋಗುತ್ತಿದ್ದ ’ಉದ್ದಗೂದಲ’ ಆ ಚೆಲುವೆ. ತಲೆಗೂದಲಿಗೆ ಮಾರು ಹೋಗಿ, ಅವಳನ್ನು ಕಣ್ಣು ಮುಚ್ಚಿ ಪ್ರೀತಿಸಲು ಶುರು ಮಾಡಿದ. ಇವನ ಪ್ರೀತಿಗೆ ಕಣ್ಣಿಲ್ಲ ಏಕೆಂದರೆ ಇವನು ಮೆಚ್ಚಿದ್ದು ಅವಳ ಕೂದಲನ್ನ. ಇನ್ನೂ ಮುಂದುವರೆದು, ಗುಣ ಅರಿವ ಗೋಜಿಗೂ ಹೋಗದೆ, ಸಾಧಾರಣ ರೂಪಿಯನ್ನು ಮದುವೆ ಮಾಡಿಕೊಳ್ಳಲು ಸಿದ್ದನಾದ. ಕೂದಲನ್ನು ಸಿಂಗರಿಸಿಕೊಂಡು ಹಸೆಮಣೆ ಏರಿ ಕುಳಿತುಕೊಳ್ಳಲು ಬರುವ ಮನದನ್ನೆಗಾಗಿ ಕಾದಿದ್ದ !! ಹಸೆ ಮಣೆ ಏರಿದ್ದಳು ’ಬಾಬ್ ಕಟ್’ ಬೆಡಗಿ. ಅವನ 'status'ಗೆ ಸರಿ ಹೊಂದಲು, ಕೂದಲು ಕತ್ತರಿಸಿದ್ದಳು! ಉದ್ದ ಹೆರಳ ಹೆಣ್ಣನ್ನು ಎದುರು ನೋಡುತ್ತಿದವನಿಗೆ ಹರಳೆಣ್ಣೆ ಕುಡಿದ ಹಾಗಿತ್ತು !!

ಭಾವನ(ನೆ):
ಏನು ಹೇಳಬೇಕೋ ಅರಿಯದಾಗಿತ್ತು, ’ಭಾವನಾ ಮಿಶ್ರ’ಳಿಗೆ... ಮಿಶ್ರ ಭಾವನೆಗಳಿಂದ ಅವಳ ಬಾಯಿ ಮೂಕಾಗಿತ್ತು, ಮನವು ದುಖ:ದ ಮಡುವಾಗಿತ್ತು... ಮಡುವಿನ ಸ್ನಾನಕ್ಕೆ ತೆರಳುವ ಹಾದಿಯಲ್ಲಿ ’ಮಾನಸ ಮಿಶ್ರ’ಳ ಸಂತಸ-ನಾಚಿಕೆ ಮಿಶ್ರಿತ ನುಡಿಗಳು ಭಾವನ’ಳ ಮನವೆಂಬ ಸರೋವರದಲ್ಲಿ ಕಲ್ಲು ಎಸಗಿದಂತಾಗಿತ್ತು... ಹೃದಯ ಕಲ್ಲು ಮಾಡಿಕೊಂಡು, ನಗು ಮೊಗ ತೋರುತ್ತ, ಮಡುವಿನ ನೀರಲ್ಲಿ ಮುಳುಗೆದ್ದವಳ ಕಣ್ಣಲ್ಲಿ ಧಾರಾಕಾರವಾಗಿ ಸುರಿಯುತ್ತಿತ್ತು ಕಣ್ಣೀರು... ಮಡುವಿನ ನೀರು ಎಷ್ಟೇ ತಣ್ಣಗಿದ್ದರೂ ’ತಾನು ಸೋತೆ’ ಎಂಬ ಹತಾಶೆಯೆ ಬಿಸಿ ಆರಿಸುವಷ್ಟಿರಲಿಲ್ಲ... ದೇಹದಲ್ಲೆಲ್ಲ ಬಿಸಿ ಆವರಿಸಿತ್ತು, ಕರಾಳರೂಪ ದರ್ಶನದಿಂದ... ’ದರ್ಶನ್ ಸೋನಿ’, ಇಷ್ಟು ದಿನ ನನ್ನೊಡನೆ ಓಡಾಡಿ ಈಗ ನನ್ನ ಸಂಬಂಧಿಯನ್ನು ವರಿಸಲಿದ್ದಾನೆ... ಸಂಬಂಧಿ ದೂರವೂ ಅಲ್ಲ, ಸದ್ಯ ದೊಡ್ಡಪ್ಪನ ಮಗಳು... ದುಡ್ಡೇ ದೊಡ್ಡಪ್ಪ ಎಂಬ ಸೂತ್ರ ಅನುಸರಿಸಿ ನಮ್ಮ ಮನೆಯ ಹೆಣ್ಣನ್ನೇ ಮದುವೆಯಾಗಲಿದ್ದಾನೆ... ಹೆಣ್ಣು ಹೊರಗಿನ ಮನೆಯವಳಾಗಿದ್ದರೆ ಕಾಲ ಕಹಿ ನೆನಪನ್ನು ನುಂಗುತ್ತಿತ್ತೇನೋ? ಸಿಹಿ-ಕಹಿ ನೆನಪುಗಳ ಮಿಶ್ರಣದಲ್ಲೇ ’ಭಾವ’ ಎಂದು ಕರೆಯಬೇಕಾದ ಸಂದಿಗ್ದ, ಭಾವನಾ ಮಿಶ್ರಳಿಗೆ...
 

Comments