ಸಿದ್ದ ಹೆಂಡ್ತಿ ಊರಿಗೆ ಓಯ್ತಾನೆ

ಸಿದ್ದ ಹೆಂಡ್ತಿ ಊರಿಗೆ ಓಯ್ತಾನೆ

ನೋಡ್ರಲಾ ನಾನು ನನ್ನ ಹೆಂಡರು ಊರಿಗೆ ಹೋಯ್ತಾ ಇದೀನಿ, ಅದು ಸಾನೇ ದಿನ ಆದಮ್ಯಾಕೆ, ಅಣ್ಣಾ ಎಲ್ಲಾರೂ ಹೆಂಡ್ತಿ ಅಂದ್ರೆ, ನೀನೇಣ್ಣಾ ಹೆಂಡರು ಅಂತೀಯಾ ಅಂದ ಸುಬ್ಬ, ಗೌರವ ಕಲಾ ಅಂದ ಸಿದ್ದ. ಇಲ್ಲಾ ಅಂದ್ರೆ ಹಳೇ ಎಕ್ಕಡದಾಗೆ ಗುನ್ನಾ ಹೊಡಿತಾರೆ ಕಲಾ ಅಂದ ಸಿದ್ದ. ಹೌದು ನಿನ್ನ ಹೆಂಡರು ಯಾಕ್ಲಾ ಊರಿಗೆ ಹೋಗಿದ್ದು ಅಂದ ತಂಬೂರಿ ನಾಗ, ಏ ಅದೊಂದು ದೊಡ್ಡ ಕಥೆ ಬುಡ್ಲಾ, ನಮ್ಮವ್ವ ರಾಗಿ ಮುದ್ದೆಗೆ ಬಸ್ಸಾರು ಮಾಡಿದ್ಲು ಕಲಾ, ನನ್ನ ಹೆಂಡರು ಸಾನೇ ಬೇಜಾರಾಗಿ, ಮುದ್ದೆಗೆ ಮೀನು ಸಾಂಬಾರು ಬೇಕು, ಇಲ್ಲಾಂದ್ರೆ ತಿನ್ನಕ್ಕಿಲ್ಲಾ ಅಂತು. ಮನ್ಯಾಗೆ ನೋಡಿದ್ರೆ ಮೀನು ಇರಲಿಲ್ಲ, ಆಮ್ಯಾಕೆ ನಮ್ಮ ಪಕ್ಕದ ತೊಟ್ಟಿಲ್ಲಿ ಮೀನು ಹಿಡಕಂಡು ಬಂದು ಸಾಂಬಾರು ಮಾಡಿದ್ದು ಆತು, ಸಾಂಬಾರು ಒಂದು ತರಾ ಕೆಟ್ಟ ವಾಸನೆ ಇತ್ತು ಕಲಾ, ನನ್ನ ಹೆಂಡರು ಸಾನೇ ತಿಂದ್ಲು, ಬೆಳಗ್ಗೆ ತೊಟ್ಟಿತಾವ ಹೋಗಿ ನೋಡಿದ್ರೆ ಅದು ಮೀನು ಅಲ್ಲ ಕಲಾ, ಕೆರೆಹಾವು ಮರಿ ಹಾಕಿತ್ತು ಅದನ್ನ ಹಿಡಕಂಡು ಬಂದಿದ್ದೆ ಕಲಾ, ಅದಕ್ಕೆ ನನ್ನ ಹೆಂಡರು ನಿಂಗೆ ಒಂದು ಮೀನು ತಂದುಕೊಡಕ್ಕೆ ಆಗಕ್ಕಿಲ್ಲಾ ಅಂದ್ ಮ್ಯಾಕೆ ನೀನು ಬ್ಯಾಡ, ನಿನ್ನ ಮನೆನೂ ಬ್ಯಾಡ, ನಿಮ್ಮವ್ವನೂ ಬ್ಯಾಡ ಅಂತ ಹೋಗವ್ಳೆ ಕಲಾ ಅಂದ ಸಿದ್ದ. ಅಲ್ಲ ಕಲಾ ಕೆರೆಹಾವು ತಿಂದ ಮ್ಯಾಕೆ ನಿನ್ನ ಹೆಂಡರು ಹೆಂಗವಳಲಾ, ಪುಂಗಿ ಸವಂಡ್ ಬಂದ್ರೆ ಹಾವು ಮಾಡಿದಂಗೆ ಮಾಡ್ತಾಳೆ ಕಲಾ ಅಂದ ಸಿದ್ದ, ಒಂದು ತರಾ ನಾಗಿನ್ ಸಿರಿದೇವಿ, ಅಂದ್ರೆ ಹೆಡೆ ತಗಯಕ್ಕಿಲ್ಲಾ ಅನ್ನು ಅಂದ ಸೀನ, ಲೇ ನನ್ನ ಹೆಂಡರು ಏನು ನಾಗರಹಾವು ಅನ್ಕಂಡೇನ್ಲಾ ಅಂತಾ ಅಂಗೇ ಮೈಮ್ಯಾಕೆ ಹೋದ. ಹೋಗ್ಲಿ ಬುಡ್ಲಾ ನಿನ್ನ ಹೆಂಡರು ಹಾವು ಆದ್ರೆ ಏನು, ಇಲ್ಲಾ ಕಪ್ಪೆ ಆದ್ರೆ ಏನು, ಬಡ್ಲಾ, ಬುಡ್ಲಾ ಅಂದ ನಾಗ. ಸಾಪಿಂಗ್ ಮಾಡುವಾ ಬರ್ರಲಾ ಅಂದ ಸಿದ್ದ. ಸರಿ ಮೊದಲು ಬೇಕರಿಗೆ ಹೋದೋನೆ, ಒಂದು ಎರಡು ಪ್ಯಾಕೆಟ್ ಚಿಪ್ಸ್, ಸ್ವೀಟ್, ಅಂಗೇ ಒಂದು ಬಾಟಲ್ ಕೋಕಾ ಕೋಲ ತಗಂಡ ಸಿದ್ದ, ಸುಬ್ಬ ಇದ್ದೋನು, ಅಣ್ಣಾ ಎಲ್ಲಿ ಎಣ್ಣೆ ಹೊಡೆಯುವಾ ಅಂದ. ಯಾಕ್ಲಾ, ಮತ್ತೆ ಇವೆಲ್ಲಾ ತಗೊಂತಾ ಇದೀಯಾ, ಲೇ ಇದು ನನ್ನ ಹೆಂಡರು ಮನಿಕ್ಕೆ ಕಲಾ ಅಂದ ಸಿದ್ದ. ಸರಿ ಅಲ್ಲಿಂದ ಸೀದಾ, ಬಟ್ಟೆ ಅಂಗಡಿಗೆ ಹೋಗಿ 100ರೂಪಾಯಿದು ಎರಡು ಸೀರೆ ತಗಂಡ, ಲೇ ಇದಕ್ಕಿಂತ ಯಡೂರಪ್ಪನ ಸೀರೇನೇ ವಾಸಿ ಕಲಾ ಅಂದ ತಂಜಾವೂರಿ ಸೀನ. ಒಂದು ಹತ್ತು ಪ್ಯಾಕ್ ಸಿಗರೇಟ್ ಅಂಗೇ ಒಂದು ಬಾಕ್ಸ್ ಎಣ್ಣೆ ತಗೊಂಡ ಸಿದ್ದ, ಲೇ ಇದು ಯಾರಿಗ್ಲಾ, ಲೇ ನಮ್ಮ ಮಾವ ಹೋಯ್ತಿದ್ದಂಗೆ ಏನ್ಲಾ ತಂದೆ ಅನ್ತದೆ ಅದಕ್ಕೆ ಕಲಾ, ಈ ಚಟ ಮಾಡಿ ಸಾನೇ ಬೇಗ ನಿಗರ್್ಕಳ್ಳಿ ಅಂತ ಕಲಾ ಅಂದ ಸಿದ್ದ. ಯಾಕ್ಲಾ, ಎರಡು ಎಕರೆ ತೋಟ ನನ್ನ ಹೆಸರಿಗೆ ಬತ್ತದೆ ಕಲಾ ಅಂದ ಸಿದ್ದ. ಸರಿ ಎಲ್ಲಾ ಸಾಪಿಂಗ್ ಆತು, ಬರೋಬೇಕಾದ್ರೆ ಪಾನಿಪುರಿ ಅಂಗೇ 2ರಾಗೆ4 ಚಾ ಕೊಡಿಸ್ದ. ಬಟಾಣಿ ಬೆಂದಿರಲಿಲ್ಲ ಕಲಾ, ತಿಂದಿದ್ದು ಯಾಕೋ ಹೊಟ್ಟೆ ಮುಲಾಮುಲಾ ಅಂತೈತೆ ಅಂತಿದ್ದ ತಂಬೂರಿ ನಾಗ, ಕೆರೆತಾವ ಹೋಗ್ಲಾ, ಏಥೂ. ಲೇ ಕೇಳ್ರಲಾ ಇನ್ನು ಪಾಲ್ಟಿ ಐತೆ ಅಂದು ಒಂದು ಮಾವಿನ ಹಣ್ಣಾಗೆ 4ಪೀಸ್ ಮಾಡಿಕೊಟ್ಟ ಸಿದ್ದ. ಏಥೂ. ಸರಿ ಬೆಳಗ್ಗೆ ಊರಿಗೆ ಹೋಗೋದು ಅಂತ ಆತು. ಸಿದ್ದ ತನ್ನ ಪ್ಯಾಂಟು, ಸಲ್ಟು ಅಂಗೇ ನಾಕು ಪಟಾಪಟಿ ಚೆಡ್ಡಿ ಟ್ರಂಕಿಗೆ ಹಾಕ್ಕಂಡ, ಲೇ ನಂದು ಹಾಕ್ಕಂಡ್ ಬಿಟ್ಟೇನ್ಲಾ ಅಂತಿದ್ದ ಅವರ ಅಪ್ಪ, ನಿಂದು ಆನೆಗೆ ಹಾಕ್ಬೋದು, ನಾಯಿಗೆ ಹಾಕಕ್ಕೆ ಆಯ್ತದಾ ಅಂದ ಸಿದ್ದ. ಮಗಂದು ಪ್ಯಾಂಟು ಅನ್ನೋದು ಹಳೇ ಪಿಚ್ಚರ್ ನರಸಿಂಹರಾಜುದು ಇದ್ದಂಗೆ ಇತ್ತು,. ಸರಿ ಎಲ್ಲಾ ಕಬ್ಬಿಣದ ಟ್ರಂಕ್ನಾಗೆ ಮಡಿಕ್ಕಂಡ, ಬಟ್ಟೆಗಿಂತ ಟ್ರಂಕ್ ಭಾರನೇ ಜಾಸ್ತಿ ಇತ್ತು. ಕೇಳಿದ್ರೆ, ಸಾಲೆ ಓದುವಾಗ ಸೇವಾದಳದೋರು ಕೊಟ್ಟಿದ್ದು ಅನ್ನೋನು, ಕೆಜಿ ಲೆಕ್ಕದಾಗೆ ಹಾಕಿದ್ರೆ, ಏನಿಲ್ಲಾ ಅಂದ್ರು ಒಂದು 50ರೂಪಾಯಿ ಬರೋದು. ಬೆಳಗ್ಗೆ ಬೀಳ್ಕೊಡುಗೆ ಸಮಾರಂಭ, ನಾವೆಲ್ಲಾ ಸಿದ್ದನ ಮನೆತಾವ ಹೋದ್ವಿ. ಬಡ್ಡೆಐದ ಮುದ್ದೆ ಕತ್ತರಿಸ್ತಾ ಇದ್ದ,. ಲೇ ಮುಂಡೇ ಮಗನೆ ಯಾವಾಗ್ಲಾ ವಾಪೀಸ್ ಬತ್ತೀಯಾ ಅಂತಿತ್ತು ಸಿದ್ದನ ಅವ್ವ. ಬತ್ತೀನಿ ಬುಡು ಅಂತಿದ್ದ, ಅಲ್ಲೂ ಹಾವು ತಿನ್ನಿಸಬೇಡ್ಲಾ ಅಂತಿತ್ತು, ಹೂಂ ಮುಂಗಸಿ ತಿನ್ನುಸ್ತೀನಿ ಬುಡು ಅಂತಿದ್ದ ಸಿದ್ದ. ಲೇ ಸಾನ ಮಾಡಕ್ಕಿಲೇನ್ಲಾ ಅಂದ್ರೆ, ಲೇ ಹೋದ ವಾರ ಮಾಡೀವ್ನಿ ಕಲಾ, ಅದರ ವಾಲಿಡಿಟಿ ಇನ್ನೂ 4ದಿನ ಐತೆ ಅಂದ. ಅವಾಗಿಂದ ಹೆಗ್ಗಣ ಸತ್ತ ವಾಸನೆ ಎಲ್ಲಪ್ಪಾ ಬತ್ತಿತ್ತು ಅಂತ ನೋಡ್ತಾ ಇದ್ದೆ, ಈಗ ಕನ್್ಫರ್ಮ್ ಆಯ್ತು ಕಲಾ ಅಂದ ಸುಬ್ಬ,. ಸರಿ ಎಲ್ಲಾರೂ ಹೊಂಟ್ವಿ, ಸಿದ್ದ ಟ್ರಂಕ್ ಹಿಡಕಂಡು ಬತ್ತಾ ಇದ್ರೆ, ಒಂದು ಸೈಡ್ ಬ್ಲೇಡ್ ಸೆಟ್ ಹೋಗೀರೋ ಇಟ್ಟಿಗೆ ಲಾರಿ ತರಾ ಕಾಣ್ತಾ ಇದ್ದ. ಸರಿ ಬಸ್ಟಾಂಡ್್ಗೆ ಹೋದ್ರೆ ಬಸ್ ರೆಡಿ ಇತ್ತು ಹತ್ತಲಾ ಬೇಗ ಅಂದ ಚಾ ಅಂಗಡಿ ನಿಂಗ, ಲೇ ಇದು ಟಾಟಾ ಬಸ್ಸು ಕಲಾ ಲೈಲ್ಯಾಂಡ್ ಬರ್ಲಿ ಅಂದ ಸಿದ್ದ. ಸರಿ ಲೈಲ್ಯಾಂಡ್ ಬಸ್ಸು ಬಂತು. ಹತ್ಲಾ ಬೇಗ ಅಂದ ಸುಬ್ಬ, ಲೇ ಸಾನೇ ರಸ್ ಐತೆ ಮುಂದಿನ ಬಸ್ಸಿಗೆ ಹೋಯ್ತೀನಿ ಬುಡ್ಲಾ ಅಂದ. ಸರಿ ಆ ಬಸ್ಸು ಬಂತು, ಲೇ ಸಿದ್ದ ಹತ್ಲಾ ಅಂದ ನಾಗ. ಲೇ ಇದು ಪೇಂಟ್ ಹೋಗೈತೆ ಮುಂದಿನ ಬಸ್ಸಿಗೆ ಹೋದರೆ ಆಯ್ತು ಬುಡ್ಲಾ ಅಂದ. ಮಗಂದು ಇವನ ಹೆಂಡರು ಹಳ್ಳಿ, ಬರೀ ಹತ್ತು ಕಿ.ಮೀ. ಸರಿ ಆ ಬಸ್ಸು ಬಂತು ಹಾಕ್ರಲಾ ಲಗೇಜ್ ಅಂದ ಸಿದ್ದ. ಯಾವನೋ ಬಡ್ಡೆ ಐದ, ಬೀಡಾ ಹಾಕಿದ್ದ ಕ್ಯಾಕರಿಸಿ ಥೂ ಅಂತ ಕಿಟಕಿಯಿಂದ ಉಗಿದ್ರೆ ಸಿದ್ದನ ಹಳದಿ ಸಲ್ಟು ಕೆಂಪಗೆ ಆಗಿತ್ತು,. ಮಗಾ ಬಸ್ಟಾಂಡ್ ಹೋಟೆಲ್ನಾಗೆ ಒಂದು ಚೊಂಬು ನೀರ್ನಾಗೆ ತೊಳ್ಕಂಡು ಬಂದ, ನೀರು ಸಾನೇ ಪ್ರಾಬ್ಲಮ್ ಅಂತ 10ರೂಪಾಯಿ ದಂಡ ಹಾಕಿದ್ರು. ಸರಿ ಮತ್ತೆ ಬಸ್ಟಾಂಡಿಗೆ ಬಂದು ನಿಂತ, ಬೆಳಗ್ಗೆ 8ಕ್ಕೆ ಬಂದೋರು, ಮಧ್ಯಾಹ್ನ 12 ಆದ್ರೂ ಸಿದ್ದ ಇನ್ನೂ ಬಸ್ಟಾಂಡ್ನಾಗೆ ಇದ್ದ. ಯಾವನೋ ಬಂದು ನಿಮ್ಮ ಹಳ್ಳಿಗೆ ಹೋಗಬೇಕು ಅಂದ್ರೆ ಮಧ್ಯಾಹ್ನ 3ಗಂಟೆ ಬಸ್ಸು ಅಂದ. ಸಿದ್ದ ಎಲ್ಲಾರಿಗೂ ಊಟ ಹಾಕಿಸಿ, ಲೇ ಈ ಕಾಸು ಕೊಡಬೇಕು ಕಲಾ ಅಂದ. ಸರಿ 3ಗಂಟೆಗೆ ಬಸ್ಸು ಬಂತು, ಲೇ ಈ ಡ್ರೇವರ್ ನಂಗೆ ಸಾನೇ ಪರಿಚಯ ಬೇಡ ಕಲಾ ಅಂದ. ಸರಿ 4ಗಂಟೆಗೆ ಬಸ್ಸು ಬಂತು, ಲೇ ಬಸ್ಸಿನ ನಂಬರ್ ನಂಗೆ ಸರಿ ಬರಕ್ಕಿಲ್ಲಾ ಕಲಾ ಅಂದ ಸಿದ್ದ. ನಮಗೂ ಕಾದು ಕಾದು ಸಾನೇ ಬೇಜಾರಾಗಿತ್ತು ಎಲ್ಲಾ ಹೋದ್ವಿ, ಅಂಗೇ ಅಲ್ಲಾ ಹ್ಯಾಪಿ ಜರ್ನಿ ಹೇಳಿ. ಸರಿ ಮಾರನೇ ದಿನಾ ಸಿದ್ದನ ಹೆಂಡರು ಮನೆಗೆ ಪೋನ್ ಮಾಡಿದ್ರೆ ಸಿದ್ದ ಬಂದಿಲ್ಲ ಅಂದ್ರು, ಯಾಕವ್ವಾ ಅಂದ ಸುಬ್ಬ, ಆ ಬಡ್ಡೇ ಐದ ಬರಕ್ಕಿಲ್ಲಾ ಅಣ್ಣಾ ಅಂತಾ ಹಾವು ಹೇಳಿದಂಗೆ ಹೇಳ್ತು., ಮಗಾ ಆ ಬಸ್ಸು ಸರಿಯಿಲ್ಲಾ, ಈ ಬಸ್ಸು ಸರಿಯಿಲ್ಲಾ ಅಂತಾ ವಾಪೀಸು ಮನೆಗೆ ಬಂದಿದ್ದ, ಯಾಕ್ಲಾ ಸಿದ್ದ ಹಿಂಗೆ ಮಾಡಿದೇಯೆಲ್ಲಾ ಅಂದ ಸುಬ್ಬ. ಲೇ ಕೆಎಸ್್ಆರ್್ಟಿಸಿ ಸರಿಯಿಲ್ಲಾ ಅದಕ್ಕೆ ನಾಳೆ ಸೈಕಲ್ನಾಗೆ ಊರಿಗೆ ಹೋಯ್ತಾ ಇದೀನಿ ಕಲಾ ನಿಮ್ಮದೆಲ್ಲಾ ಆಸೀರ್ವಾದ ಬೇಕು ಕನ್ರಲಾ ಅಂದ ಸಿದ್ದ. ಮಗಾ ಧರ್ಮಸ್ಥಳಕ್ಕೆ ಹೋಯ್ತಾವ್ನೆ ಆಸೀರ್ವಾದ ಮಾಡ್ರಲಾ ಅಂದ ಸುಬ್ಬ, ಲೇ ಮಗನೇ ನಂಗೆ ಲಾಸು ಆಗಿರೋ ಕಾಸು ಮಡಗಿ ಆಮ್ಯಾಕೆ ಊರಿಗೆ ಹೋಗು ಅಂದ ಚಾ ಅಂಗಡಿ ನಿಂಗ. ಯಾಕ್ಲಾ, ಲೇ ಒಂದು ತಿಂಗಳಿಂದ ಬಸಮ್ಮ ಫೈನಾನ್ಸ್ ಪಿಗ್ಮಿ ಕಟ್ಟಿಲ್ಲಾ ಕಲಾ ಅಂದ ನಿಂಗ, ಏಥೂ.

Comments