ನರಕದ ನ್ಯಾಯಾಸ್ಥಾನದಲ್ಲಿ.....

ನರಕದ ನ್ಯಾಯಾಸ್ಥಾನದಲ್ಲಿ.....

ನನ್ನನ್ನು ಕವಿದಿದ್ದ ಮಂಪರು ಕ್ರಮೇಣ ಕರಗುತ್ತಾ ಬಂದು, ನನ್ನ ಅರಿವು ನಿಧಾನವಾಗಿ ತಿಳಿಯಾಗುತ್ತಿದ್ದಂತೆ, ಎರಡೂ ಬದಿಯಲ್ಲಿ ನನ್ನ ತೋಳುಗಳನ್ನು ಹಿಡಿದುಕೊಂಡು ನನ್ನನ್ನು ನಿಧಾನವಾಗಿ ನಡೆಸಿಕೊಂಡು ಹೋಗುತ್ತಿರುವುದು ಭಾಸವಾಯಿತು. ಅತಿ ಭಾರ ಎನಿಸುತ್ತಿದ್ದ ಕಣ್ಣ ರೆಪ್ಪೆಗಳನ್ನು ತೆರೆದು ನನ್ನ ಮುಂದಿನ ದೃಶ್ಯಗಳನ್ನು ಸ್ಪಷ್ಟವಾಗಿ ಕಾಣಲು ಸಾಧ್ಯವಾದಂತೆ ಹಲವು ಕ್ಷಣ ನಾನು ಯಾವುದೋ ಭ್ರಮಾಲೋಕದಲ್ಲಿದ್ದೇನೆಂಬ ಭಾವನೆಯುಂಟಾಯಿತು. ನನ್ನ ತೋಳುಗಳನ್ನು ಹಿಡಿದುಕೊಂಡದ್ದರಿಂದ ನನ್ನ ಕಣ್ಣುಗಳನ್ನು ಉಜ್ಜಿಕೊಳ್ಳಲು ಸಾಧ್ಯವಾಗದೇ ನನ್ನ ತಲೆಯನ್ನು ಬಲಕ್ಕೆ ವಾಲಿಸಿ ಬಲ ಭುಜಕ್ಕೆ ನನ್ನ ಮುಖವನ್ನು ಉಜ್ಜಿಕೊಂಡೆ. ಆಗ ನನ್ನ ಮುಂದಿನ ದೃಶ್ಯಗಳು ಇನ್ನೂ ಸ್ಪಷ್ಟವಾಗಿ ಕಾಣಲಾರಂಭಿಸಿದುವು. ಅಯ್ಯೋ, ಅದೆಂತೆಹ ಘೋರ ದೃಶ್ಯಗಳು ! ಅದೆಂದೋ ಯಾವುದೋ ಸಂದರ್ಭದಲ್ಲಿ ಗರುಡ ಪುರಾಣದಲ್ಲಿ ವಿವರಿಸಿರುವ ನರಕದ ವರ್ಣನೆಯನ್ನು ಕೇಳಿದ್ದೆ. ನಾನು ಕಾಣುತ್ತಿದ್ದ ದೃಶ್ಯಗಳು ಯಥಾವತ್ತಾಗಿ ಹಾಗೆಯೇ ಇದ್ದುವು.

'ಓ ದೇವರೇ, ಒಳ್ಳೇ ನರಕದ ಹಾಗಿದೆಯಲ್ಲಾ. ' ಎಂದು ಉದ್ಗರಿಸಿದೆ.
'ತಾವು ಸರಿಯಾಗಿ ಹೇಳಿದಿರಿ..' ಎಂದು ತುಂಬಾ ಗೌರವದಿಂದ ಹೇಳಿದ್ದನ್ನು ಕೇಳಿ, ನನ್ನ ಪಕ್ಕಕ್ಕೆ ತಿರುಗಿ ನೋಡಿದೆ. ನನ್ನ ಎಡ ತೋಳನ್ನು ಹಿಡಿದು ನಡೆಸುತ್ತಿದ್ದ ಒಬ್ಬ ವ್ಯಕ್ತಿಯನ್ನು ಕಂಡೆ.
'ಅಂದರೆ?'
'ತಾವು ಸರಿಯಾಗಿ ಊಹಿಸಿದಿರಿ, ತಾವು ಈಗ ನರಕದಲ್ಲಿದ್ದೀರಿ' ಎಂದು ಆ ವ್ಯಕ್ತಿ ಉತ್ತರಿಸಿದ.
'ಹೌದೇ, ನಾನು ನಿಜಕ್ಕೂ ನರಕದಲ್ಲಿದ್ದೇನೆಯೇ.?' ಎಂದು ದಿಗಿಲುಗೊಂಡು ಕೇಳಿದೆ.

'ಹೌದು, ತಾವು ನಿಜಕ್ಕೂ ನರಕದಲ್ಲಿದ್ದೀರಿ. ನಾನು ಮತ್ತು ನಿಮ್ಮ ಬಲತೋಳನ್ನು ಹಿಡಿದುಕೊಂಡಿರುವಾತ ಇಬ್ಬರೂ ಯಮ ಕಿಂಕರರು'

ನಾನು ಓದಿದ್ದ ಅನೇಕಾನೇಕ ಪುಸ್ತಕಗಳ ಮತ್ತು ನೋಡಿದ್ದ ಅಸಂಖ್ಯಾತ ಸಿನಿಮಾ, ನಾಟಕಗಳ ಮೂಲಕ ಯಮ ಕಿಂಕರರು ಹೇಗಿರುತ್ತಾರೆ ಎಂಬ ಸ್ಪಷ್ಟ ಚಿತ್ರ ನನ್ನ ಮನದಲ್ಲಿತ್ತು. ಆದರೆ ಇವರಿಬ್ಬರೂ ಹಾಗಿರಲಿಲ್ಲ. ಇತ್ತ ಕಡೆ ದೇವದೂತರಂತೆಯೂ ಇರಲಿಲ್ಲ. ನಾವು ಇತ್ತೀಚೆಗೆ ಕಾಣುತ್ತಿರುವ ಪ್ರಮುಖ ರಾಜಕಾರಣಿಗಳ ಅಂಗ ರಕ್ಷಕರ ಹಾಗೆ, ಗರಿಗರಿಯಾದ ಸಫಾರಿ ಸೂಟ್ ಉಡುಗೆಯಲ್ಲಿದ್ದರು. ತಾವು ಎತ್ತ ನೋಡುತ್ತಿದ್ದಾರೆಂಬುದು ಬೇರೆಯವರಿಗೆ ತಿಳಿಯದ ಹಾಗೆ ಕಪ್ಪು ಕನ್ನಡಕವನ್ನೂ ಧರಿಸಿದ್ದರು. ಯಮ ಕಿಂಕರರ ಹಾಗೆ ಕಠೋರ ಕಾಯವನ್ನಾಗಲೀ, ಕರ್ಕಶ ಧ್ವನಿಯನ್ನಾಗಲೀ ಹೊಂದಿರಲಿಲ್ಲ.

ನಾನು ಸ್ವಲ್ಪ ಧೈರ್ಯವಹಿಸಿ, 'ಆದರೆ, ನೀವು ಯಮ ಕಿಂಕರರ ಹಾಗೆ ಕಾಣುವುದಿಲ್ಲ' ಎಂದು ನನ್ನ ಸಂಶಯ ವ್ಯಕ್ತ ಪಡಿಸಿದೆ.
'ಒಂದು ರೀತಿ ನೀವು ಹೇಳುವುದು ಸರಿಯಾಗಿಯೇ ಇದೆ. ನಾವು ರೆಗ್ಯುಲರ್ ಯಮ ಕಿಂಕರರಲ್ಲ. ನಾವು ಸ್ಪೆಷಲ್ ಸ್ಕ್ಯಾಡ್ ನವರು. ಪಿ.ಕ್ಯು.ಸಿ ಗಳನ್ನು ಭೂಲೋಕದಿಂದ ಕರೆಸಿಕೊಳ್ಳುವಾಗ ಮಾತ್ರ ನಮ್ಮನ್ನು ಕಳಿಸುತ್ತಾರೆ' ಎಂದ ಎಡದ ಕಿಂಕರ. 'ಪಿ.ಕ್ಯು.ಸಿ, ಹಾಗೆಂದರೆ?'
'ಪಿ.ಕ್ಯು.ಸಿ ಎಂದರೆ, ಪ್ರಿಸನಸರ್್ ಆಫé್ ಕ್ವೆಶ್ಚನಬಲ್ ಕ್ರೆಡಿಟ್ ಅಂತ. ಒಂದು ರೀತಿ ನಿಮ್ಮ ಲೋಕದ ಅಂಡರ್ ಟ್ರಯಲ್ ಪ್ರಿಸನಸರ್್ ಇದ್ದ ಹಾಗೆ. ನಾವು ಅವರನ್ನು ಸ್ವಲ್ಪ ಗೌರವದಿಂದಲೇ ನಡೆಸಿಕೊಳ್ಳುತ್ತೇವೆ' "

ನಿಜವೇ. ಪಾಪಿಗಳನ್ನು ದರದರನೆ ಎಳೆದುಕೊಂಡುಹೋಗುವುದನ್ನು ಮಾತ್ರ ಕಂಡಿದ್ದ ನನಗೆ ಅವರ ಸೌಜನ್ಯಪೂರಿತ ಮಾತು, ನಡತೆಯನ್ನು ಗಮನಿಸಿದಾಗ ಅವರು ಹೇಳುವುದು ನಿಜವಿರಬಹುದೆನಿಸಿತು. ಅಯ್ಯೋ ದೌಭರ್ಾಗ್ಯವೇ, ನಾನು ಕಡೆಗೂ ನರಕ ಸೇರುವಂತಾಯಿತೇ ? ಸ್ವರ್ಗ, ನರಕಗಳೆಲ್ಲವೂ ಮೂರ್ಖರ ಕಲ್ಪನೆ ಎಂದು ಹಗಲಿರುಳೂ ಎಲ್ಲರೊಡನೆ ವಾದಿಸುತ್ತಿದ್ದ ನನಗೆ ಈ ಬಗೆಯಲ್ಲಿ ಸತ್ಯದರ್ಶನವಾಯಿತೇ ? ಸಾಯುವುದಕ್ಕೆ ಮುಂಚಿತವಾಗಿ ಸ್ವಲ್ಪ ಮುಂಚೆ ಈ ಸ್ವರ್ಗನರಕಗಳ ಅಸ್ತಿತ್ವದ ಬಗ್ಗೆ ಸೂಚನೆ ಸಿಕ್ಕಿದ್ದರೆ, ಕೊನೆಯ ಗಳಿಗೆಯಲ್ಲಿ, ನನ್ನ ಶಕ್ತಿಯೆಲ್ಲವನ್ನೂ ಹಾಕಿ, 'ನಾರಾಯಣಾ'ಎಂದೊಮ್ಮೆ ಕೂಗಿಕರೆದು, ಅಜಮಿಳನಂತೆ ಸ್ವರ್ಗ ಪ್ರಾಪ್ತಿಮಾಡಿಕೊಳ್ಳಬಹುದಿತ್ತು. ಈಗಲೂ ಕಾಲ ಮಿಂಚಿಲ್ಲವೇನೋ ಎಂದುಕೊಂಡು, 'ನಾರಾಯಣಾ.' ಎಂದು ಗಟ್ಟಿಯಾಗಿ ಕೂಗಿ ಕರೆದೆ. ಆಶ್ಚರ್ಯ ! ಬಾಯಿಯಿಂದ ಸ್ವರವೇ ಹೊರಡಲಿಲ್ಲ.

ನನ್ನ ಬಲ ಪಕ್ಕದ ಯಮಕಿಂಕರ ನುಡಿದ, 'ಕ್ಷಮಿಸಿ. ನಿಮಗೀಗ ಅದು ಸಾಧ್ಯವಾಗುವುದಿಲ್ಲ. ಒಂದು ಸಲ ನರಕಕ್ಕೆ ಕಾಲಿಟ್ಟ ಮೇಲೆ , ನಾರಾಯಣ ನಾಮ ಸ್ಮರಣೆಗೆ ಅವಕಾಶವಿಲ್ಲ. ಈ ಉಪಾಯವನ್ನು ಹಿಂದೆ ಅನೇಕರು ಮಾಡಿದ್ದನ್ನು ಗಮನಿಸಿಯೇ ಈ ಏಪರ್ಾಟು ಮಾಡಲಾಗಿದೆ' ಈ ಯಮನ ಭಂಟರು ಹೇಳುವುದನ್ನು ನಂಬುವುದಾದರೆ, ನಾನೊಬ್ಬ ಪಿ. ಕ್ಯು. ಸಿ ! ಈ ಕಿಂಕರರನ್ನು ಹೇಗೆ ಸಂಬೋಧಿಸುವುದೋ ಎಂದು ತಿಳಿಯಲಿಲ್ಲ.

ಏನಾದರಾಗಲಿ, ನಾನೂ ಅವರನ್ನು ಗೌರವದಿಂದಲೇ ಕಾಣುವುದು ಒಳಿತೆಂದು, 'ಮಹಾಶಯರೇ, ಈ ಪಿ. ಕ್ಯು. ಸಿ ಎಂದರೆ ಏನೆಂದು ತಿಳಿಸುವ ಕೃಪೆ ಮಾಡುತ್ತೀರಾ ?' ಎಂದು ಕೇಳಿದೆ.
'ಓಹೋ, ನೀವು ಕೇಳುವುದು ಸಹಜವಾಗಿಯೇ ಇದೆ. ಯಾವುದೇ ವ್ಯಕ್ತಿ ಮರಣಿಸುವ ಸ್ವಲ್ಪ ಸಮಯದ ಮುಂಚೆ, ನಮ್ಮ ಯಮ ಮಹಾರಾಜರ ಪ್ರಮುಖ ಕಾರ್ಯದರ್ಶಿಗಳಾದ ಶ್ರೀ ಚಿತ್ರಗುಪ್ತರವರು ಆ ವ್ಯಕ್ತಿಯ ಪಾಪ ಪುಣ್ಯಗಳ ಪಟ್ಟಿ ಮಾಡಿ, ಪ್ರತಿಯೊಂದು ಅಂಶಕ್ಕೂ ಇಂತಿಷ್ಟು ಅಂಕಗಳೆಂದು ಲೆಕ್ಕ ಹಾಕಿ, ಪುಣ್ಯದ ಅಂಶ ಶೇ. 66 ರಕ್ಕಿಂತಲೂ ಹೆಚ್ಚಿದ್ದರೆ ಅವನನ್ನು ಸ್ವರ್ಗಕ್ಕೆ ಶಿಫಾರಸು ಮಾಡುತ್ತಾರೆ. ಒಂದು ವೇಳೆ ಪುಣ್ಯದ ಅಂಶ ಶೇ. 33 ರಕ್ಕಿಂತಲೂ ಕಡಿಮೆಯಾಗಿದ್ದರೆ ಅವನನ್ನು ನರಕಕ್ಕೆ ಕಳಿಸುತ್ತಾರೆ. ಬಹಳಷ್ಟು ಜನ ಈ ಎರಡು ಗುಂಪುಗಳಲ್ಲಿ ಯಾವುದಾದರೊಂದಕ್ಕೆ ಸೇರಿರುತ್ತಾರೆ. ಆದರೆ ಅಪರೂಪಕ್ಕೆ ಕೆಲವರು ಮಾಡಿದ ಪಾಪ ಮತ್ತು ಪುಣ್ಯದ ಅಂಶಗಳು ಮಧ್ಯದ ಶ್ರೇಣಿಯಲ್ಲಿದ್ದಾಗ, ಅಂದರೆ ಶೇ. 33 ರಿಂದ 66 ರ ಅಂತರದಲ್ಲಿದ್ದರೆ, ಅವರನ್ನು ಪಿ. ಕ್ಯು. ಸಿ ಗಳೆಂದು ನಿರ್ಧರಿಸಿ, ಇಲ್ಲಿಗೆ ಗೌರವದಿಂದ ಕರೆತರಿಸಿ, ಯಮ ಮಹಾರಾಜರ ಎದುರು ಅವರ ಪಾಪ ಪುಣ್ಯಗಳ ಪಟ್ಟಿಯನ್ನು ಒಪ್ಪಿಸಿ, ಅವರ ನಿರ್ಧಾರದಂತೆ ನಡೆಯುತ್ತಾರೆ. ನಮ್ಮ ಮಹಾರಾಜರೂ ಅಷ್ಟೇ, ಬಹು ಧರ್ಮಿಷ್ಟರು. ಜನರು ಹೆಚ್ಚಾಗಿ ಅವರೊಬ್ಬ ಕ್ರೂರ ವ್ಯಕ್ತಿಯೇನೋ ಎನ್ನುವಂತೆ ಭಾವಿಸುತ್ತಾರೆ. ಆದರೆ ವಾಸ್ತವವಾಗಿ ಅವರು ಹಾಗಿಲ್ಲ. ಧರ್ಮಕ್ಕೆ ಇನ್ನೊಂದು ಹೆಸರಾದ ಅವರ ಪುತ್ರನಿಗಿಂತಲೂ ಅವರು ಹೆಚ್ಚು ಧಮರ್ಿಷ್ಟರಾಗಿರುವುದು ಸಹಜವಲ್ಲವೇ ?' ಎಂದು ಬಹಳ ಭಾವುಕನಾಗಿ ತನ್ನ ಒಡೆಯರನ್ನು ನೆನೆದುಕೊಂಡ.

'ಸರಿ, ಆದರೆ ಅವರು ಧರ್ಮಿಷ್ಟರಾದರೆ, ನಮ್ಮಂತಹವರಿಗೇನು ಅದರಿಂದ ಪ್ರಯೋಜನ ?' ಎಂದು ಕೇಳಿದೆ. 'ಅಲ್ಲಿಯೇ ಇರುವುದು ಸ್ವಾರಸ್ಯ. ನಿಮ್ಮಂತಹವರ ಬಗ್ಗೆ ನಿರ್ಣಯ ತೆಗೆದುಕೊಳ್ಳುವಾಗ, ಅವರು ಕೇವಲ ಚಿತ್ರಗುಪ್ತರ ಅಂಕಪಟ್ಟಿಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳದೆ, ಆ ವ್ಯಕ್ತಿಗೂ ತನ್ನ ಕಾರ್ಯಗಳ ಬಗ್ಗೆ ಸಮಥರ್ಿಸಿಕೊಳ್ಳಲು ಒಂದು ಅವಕಾಶ ಕೊಡುತ್ತಾರೆ. ಅಪರೂಪಕ್ಕೆ ಕೆಲವರು ಈ ಅವಕಾಶವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡಿದ್ದಾರೆ.'ಎನ್ನುತ್ತಿದ್ದಂತೆ, ನನ್ನ ಈಚೆ ಬದಿಯ ಕಿಂಕರ ಕಿಸಕ್ಕನೆಂದು ನಕ್ಕ.

'ನೀನು ಏಕೆ ನಕ್ಕೆ ಎಂದು ನಾನು ಊಹಿಸಬಲ್ಲೆ ಆ ಘಾಟಿ ಲಾಯರಿ ಮಾರ್ತಾಂಡರಾಯರ ಪ್ರಕರಣ ನೆನೆಸಿಕೊಂಡೆ ತಾನೇ ?' 'ಹೌದಪ್ಪಾ..ಎಂಥಾ ಲಾಯರೀನೋ!.ನಮ್ಮ ಒಡೆಯರನ್ನ ಒಳ್ಳೇ ಸಿಕ್ಕಿಹಾಕಿಸ್ಬಿಟ್ಟ.' ಎಂದ ಆಚೆಯವ.
'ಅದೇನ್ರಪ್ಪಾ ವಿಷಯಾ ?' ಎಂದು ಸ್ವಲ್ಪ ಸಲುಗೆಯಿಂದ ಕೇಳಿದೆ. 'ನಮ್ಮ ಮಹಾರಾಜರಿಗೆ ಎರಡು ವಿಷಯಗಳಲ್ಲಿ ಮಾತ್ರ ಸ್ವಲ್ಪ ವೀಕ್ನೆಸ್ ಇದೆ, ಕಾನೂನಿನ ಸೂಕ್ಷ್ಮ ಅಂಶಗಳು ಅವರಿಗೆ ಸ್ವಲ್ಪ ಕಬ್ಬಿಣದ ಕಡಲೇನೇ. ಇನ್ನೊಂದು ಎಂದರೆ ಒಳ್ಳೇ ಹಾಸ್ಯ ಚಟಾಕಿಗೆ ಬಹಳ ಬೇಗ ಮನಸೋಲುತ್ತಾರೆ. ಮೊನ್ನೆ ನಾವು ಲಾಯರ್ ಮಾರ್ತಾಂಡರಾಯರನ್ನ ಕರೆದುಕೊಂಡು ಬಂದಿದ್ವಿ. ಚಿತ್ರಗುಪ್ತರ ಪ್ರಕಾರ ಅವರಿಗೆ ಕೇವಲ 34 ಅಂಕಗಳು ಬಂದಿತ್ತು. ಹಾಗಾಗಿ, ನಮ್ಮ ಮಹಾರಾಜರು ಅವರಿಗೆ ವಾದ ಮಾಡ್ಲಿಕ್ಕೆ ಅವಕಾಶ ಕೊಟ್ಟರು. ಈ ಲಾಯರಿಗೆ ಇವರ ವೀಕ್ನೆಸ್ ಬಗ್ಗೆ ಅದು ಹೇಗೆ ತಿಳಿದಿತ್ತೋ ಗೊತ್ತಿಲ್ಲ. ಅದೇನೋ ಲಾ ಪಾಯಿಂಟುಗಳನ್ನ ಒಂದರ ಮೇಲೊಂದರಂತೆ ಕೋಟ್ ಮಾಡಿದ್ದೇ ಮಾಡಿದ್ದು. ಅಷ್ಟೂ ಸಾಲ್ದೂ ಅಂತ , ತಮ್ಮ ವಾದವನ್ನೆಲ್ಲಾ ಮುಗಿಸಿದ ಮೇಲೆ, ಒಂದು ಲೇಟೆಸ್ಟ್ ಸರದಾಜರ್ಿ ಹಾಸ್ಯ ಚಟಾಕಿ ಹೇಳಿದ್ರು ನೋಡೀ..ನಮ್ಮ ಮಹಾರಾಜರು ಬಿದ್ದೂ ಬಿದ್ದು ನಕ್ಕು, ಅವರನ್ನ ಸ್ವರ್ಗಕ್ಕೆ ರೆಕಮಂಡ್ ಮಾಡಿದ್ರು..'

'ಹಾಗೋ ವಿಷಯ. ಅಂದಹಾಗೆ, ನೀವು ಇಂಗ್ಲಿಷ್ ಪದಗಳ್ನ ಹೇಗೆ ಕಲಿತಿರಿ ?' ಎಂದೆ.
'ನಮ್ಮಿಬ್ಬರಿಗೂ ಕರ್ನಾಟಕದಲ್ಲೇ ಡ್ಯೂಟಿ. ಇಷ್ಟು ವರ್ಷ ಕರ್ನಾಟಕದಲ್ಲೆಲ್ಲಾ ಸುತ್ತಿ, ಕನ್ನಡಕ್ಕಿಂತ ನಮಗೆ ಇಂಗ್ಲೀಷೇ ಚೆನ್ನಾಗಿ ಬರ್ತದೆ ' ಅಷ್ಟೊತ್ತಿಗೆ ನಾವು ಸಾಕಷ್ಟು ದೂರ ನಡೆದುಕೊಂಡು ಬಂದಿದ್ವಿ. ಎದುರಿಗೆ ಒಂದು ಸುಂದರವಾದ ಸೌಧ ಕಾಣಿಸಿತು. ಅದರೊಳಕ್ಕೆ ನನ್ನನ್ನ ಕರೆದುಕೊಂಡು ಹೋಗಿ, ಅದರಲ್ಲಿಯ ಒಂದು ಕೋಣೆ ಬಾಗಿಲು ತೆಗೆದು ಒಳಕ್ಕೆ ಹೋದ ಮೇಲೆ, 'ನಾಳೆ ಬೆಳಿಗ್ಗೆ ನಿಮ್ಮ ವಿಚಾರಣೆ ಆಗೋ ತನಕ ಈ ರೂಮ್ನಲ್ಲಿ ನೀವು ರೆಸ್ಟ್ ತಗಳ್ಳಿ' ಅಂತ ಅವರು ಹೇಳ್ತಿರಬೇಕಾದ್ರೆ, ನಾನು ಬೆರಗಿನಿಂದ ಆ ರೂಮಿನ ಅಂದಚೆಂದ ಮತ್ತು ಅಲ್ಲಿದ್ದ ಸೌಲಭ್ಯಗಳನ್ನು ಬಿಟ್ಟ ಬಾಯಿ, ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದೆ.

'ಅಬ್ಬಾ, ಒಳ್ಳೇ ಸ್ವರ್ಗ ಇದ್ದಂಗೆ ಇದೆ..' ಎಂದೆ ಮೆಚ್ಚುಗೆಯಿಂದ. ನನ್ನ ಮಾತನ್ನು ಕೇಳಿ ಅವರಿಬ್ಬರೂ ಗಟ್ಟಿಯಾಗಿ ನಕ್ಕುಬಿಟ್ಟರು.
'ಸ್ವಾಮಿ..ನೀವು ಇದನ್ನೇ ಸ್ವರ್ಗ ಅಂತ ಕರೆದ್ರೆ, ಸ್ವರ್ಗದ ಗೆಸ್ಟ್ ಹೌಸ್ ನೋಡಿದ್ರೆ ಇನ್ನೇನಂತೀರೋ, ಇಡೀ ನರಕದಲ್ಲೇ ಇದು ಬೆಸ್ಟ್ ರೂಮ್. ಆದರೆ, ಸ್ವರ್ಗದ ಅತೀ ಕಡಿಮೆ ವರ್ಗದ ಗೆಸ್ಟ್ ರೂಮಿಗೆ ಹೋಲಿಸಿದ್ರೂ ಇದೊಂದು ಕೊಂಪೆ. ಇರಲಿ , ನಮ್ಮ ಡ್ಯೂಟಿ ಮುಗೀತು. ರೂಮ್ ಸರ್ವೀಸ್ ಬೇಕಿದ್ರೆ, ನಂಬರ್ 99 ಎಂದು ಹೇಳಿ. ನಾವಿನ್ನು ಬರ್ತೀವಿ' ಎಂದು ಹೇಳಿ ಅವರು ಹೊರಟು ಹೋದರು.

ಅವರು ಹೋದ ಮೇಲೆ ಸ್ವಲ್ಪ ಹೊತ್ತು ಮೆತ್ತನೆ ಹಾಸಿಗೆ ಮೇಲೆ ವಿಶ್ರಾಂತಿ ತೆಗೆದುಕೊಂಡ ಮೇಲೆ ಹೊಟ್ಟೆ ತಾಳ ಹಾಕಲಾರಂಭಿಸಿತು. ರೂಮ್ ಸರ್ವೀಸ್ ಗೆ ಹೇಳೋಣ ಅಂತ ಇಂಟರ್ಕಾಮ್ ಗಾಗಿ ಹುಡುಕಿದೆ. ಅದೆಲ್ಲೂ ಕಾಣಲಿಲ್ಲ. ಆಗ ಅವರ ಸೂಚನೆ ಜ್ಞಾಪಕಕ್ಕೆ ಬಂತು.
'ತೊಂಬತ್ತೊಂಬತ್ತು' ಎಂದು ಗಟ್ಟಿಯಾಗಿ ಹೇಳಿದೆ. ಉಡುಪಿ ಹೋಟಲ್ ನ ಮಾಣಿಯನ್ನು ಹೋಲುವ ಹುಡುಗನೊಬ್ಬ ನನ್ನೆದುರು ಪ್ರತ್ಯಕ್ಷನಾದ.
'ಅದೆಂತ, ನೀವು ಅಷ್ಟು ಜೋರಾಗಿ ಕೂಗೋದು ಮಾರಾಯ್ರೆ, ಮೆತ್ತಗೆ ಕರೆದ್ರೆ ಸಾಕು, ಆಯ್ತಾ. ಹೇಳಿ ಏನ್ಬೇಕು ' ಎಂದು ಕೇಳಿದ.
'ಸೌತ್ ಇಂಡಿಯನ್ ಥಾಲಿ ಇದೆಯಾ ?' ಎಂದು ಕೇಳಿದೆ.
'ಪೂರೀನಾ, ಚಪಾತೀನಾ ?' . ಇವನು ಹಂಡ್ರೆಡ್ ಪರ್ಸಂಟ್ ಉಡುಪಿ ಹೋಟಲ್ ಮಾಣಿನೇ ಅಂತ ಖಾತ್ರಿಯಾಯ್ತು. 'ಪೂರೀನೇ ಇರ್ಲಿ..'
'ಸ್ವೀಟ್ ಯಾವ್ದು ತರ್ಲೆ?'
'ಸ್ವೀಟ್ ಯಾವುದೂ ಬೇಡಪ್ಪಾ. ನನಗೆ ಡಯಾಬಿಟಿಸ್ ' ಎಂದೆ.
'ಓಹೋಹೋ, ನಿಮಗಿನ್ನೂ ಪೂರ್ವ ಜನ್ಮದ ವಾಸನೆ ಹೋಗಿಲ್ಲಾ' ಎಂದು ಗಹಗಹಿಸಿ ನಕ್ಕ. 'ಇಲ್ಲಿ ಎಂತದು ತಿಂದ್ರೂ ಎನೂ ಆಗೋದಿಲ್ಲೇ.. ಪಟ್ಟಾಗಿ ಹೊಡೀರೀ ಮಾರಾಯ್ರೇ..' ಎಂದು ಹೊರಟುಹೋದ.
ಅವನು ತಂದಿಟ್ಟ ಊಟ ಭರ್ಜರಿಯಾಗಿತ್ತು. ಊಟ ಮುಗಿಸಿ , ಮರುದಿನದ ನನ್ನ ವಿಚಾರಣೆಯ ಬಗ್ಗೆ ಯೋಚಿಸುತ್ತಲೇ ಹಾಸಿಗೆಯಲ್ಲೊರಗಿದೆ. ----------------------------

ಮರುದಿನ ಬೆಳಿಗ್ಗೆ, ನನ್ನನ್ನು ನರಕಾಧೀಶರ ಆಸ್ಥಾನಕ್ಕೆ ಕರೆದುಕೊಂಡು ಹೋದರು. ಅದಾಗಲೇ, ಚಿತ್ರಗುಪ್ತರು ಮತ್ತು ಅವರ ಸಹಾಯಕರು ಅಲ್ಲಿಗೆ ಬಂದು ತಮ್ಮ ತಮ್ಮ ಆಸನಗಳಲ್ಲಿ ಕುಳಿತಿದ್ದರು. ನನಗೂ ಕುಳಿತುಕೊಳ್ಳಲು ಆದೇಶಿಸಿದರು. 'ಏನು, ಎಲ್ಲಾ ಸೌಖ್ಯವೇ, ಪ್ರಯಾಣ ಹೇಗಿತ್ತು ? ತಮಗೇನೂ ತೊಂದರೆಯಾಗಲಿಲ್ಲವಷ್ಟೇ ?' ಎಂದು ಬಹಳ ಆತ್ಮೀಯತೆಯಿಂದ ನನ್ನನ್ನು ಚಿತ್ರಗುಪ್ತರು ವಿಚಾರಿಸಿದರು.

'ತುಂಬಾ ಥ್ಯಾಂಕ್ಸ್. ಏನೂ ತೊಂದರೆಯಿಲ್ಲ. ನಿಮ್ಮ ಉಪಚಾರ ಬಹಳ ಅಪರೂಪವಾದದ್ದು. ವಿಚಾರಣೆಯನ್ನೆದುರಿಸುತ್ತಿರುವ ವ್ಯಕ್ತಿಯೋರ್ವನನ್ನು ನೀವಿಷ್ಟು ಗೌರವದಿಂದ ಕಾಣುವುದು ನನಗೆ ಬಹಳ ಅಚ್ಚರಿಯನ್ನುಂಟು ಮಾಡಿದೆ ' ಎಂದು ಮನಃಪೂರ್ವಕವಾಗಿ ನುಡಿದೆ.
'ಒಬ್ಬ ವ್ಯಕ್ತಿಯ ಅಪರಾಧ ಸಾಬೀತಾಗುವವರೆಗೂ ಅವನನ್ನು ನಿರ್ದೋಷಿಯೆಂದೇ ಪರಿಗಣಿಸಬೇಕು ಎಂಬ ನಿಯಮ ನಿಮ್ಮಲ್ಲೂ ಇರಬೇಕಲ್ಲ..' ಎಂದು ಚಿತ್ರಗುಪ್ತರು ಕೇಳಿದರು, ಅದರಲ್ಲೇನೂ ವಿಷೇಶವಿಲ್ಲೆಂಬಂತೆ.
'ಇದೆ.ಆದರೂ ..' ಎಂದು ನಾನು ಮೂಗೆಳೆದೆ. ಯಮಧರ್ಮರಾಯನ ಆಸ್ಥಾನ ನಮ್ಮ ನ್ಯಾಯಾಲಯದಂತೆಯೇ ಇತ್ತು. ಅವುಗಳ ಸಾಮ್ಯ ನನಗೆ ಅಚ್ಚರಿಯನ್ನುಂಟು ಮಾಡಿತ್ತು. ನನ್ನ ಅಚ್ಚರಿಯನ್ನು ಶ್ರೀ ಚಿತ್ರಗುಪ್ತರು ಗಮನಿಸಿದರೆಂದು ಕಾಣುತ್ತದೆ. 'ನಮ್ಮ ನ್ಯಾಯಾಲಯ ಮೊದಲು ಹೀಗಿರಲಿಲ್ಲ. ಇತ್ತೀಚೆಗಷ್ಟೇ ಮುಕ್ತಾಯವಾದ ನಿಮ್ಮ ಈ ಟಿವಿಯ 'ಮುಕ್ತಾ' ಧಾರಾವಾಹಿಯನ್ನು ನಮ್ಮ ಮಹಾರಾಜರು ಬಹಳ ಮೆಚ್ಚಿಕೊಂಡರಷ್ಟೇ ಅಲ್ಲ, ಪದೇ ಪದೇ ಆ ಧಾರಾವಾಹಿಯಲ್ಲಿ ತೋರಿಸುತ್ತಿದ್ದ ನ್ಯಾಯಾಲಯದಂತೆಯೇ ಕಾಣುವಂತೆ ತಮ್ಮ ಆಸ್ಥಾನವನ್ನೂ ಪರಿವತರ್ಿಸಿದರು. ನಮ್ಮ ಕಾರ್ಯ ವೈಖರಿಯನ್ನೂ ಅದರಂತೆಯೇ ಬದಲಾಯಿಸಿದರು' ಎಂದು ನನ್ನನ್ನುದ್ದೇಶಿಸಿ ಹೇಳಿದರು.

ಅಷ್ಟರಲ್ಲಿಯೇ, 'ಭೋ ಪರಾಕ್, ಶ್ರೀ ಯಮಧರ್ಮರಾಯರು ಆಗಮಿಸುತ್ತಿದ್ದಾರೆ. ಭೋ ಪರಾಕ್' ಎಂದು ಭಟರು ಘೋಷಿಸುವುದು ಕೇಳಿಸಿತು. ಎಲ್ಲರೂ ಗಡಿಬಿಡಿಯಿಂದ ಎದ್ದು ನಿಂತರು. ಎಲ್ಲರನ್ನೂ ಕುಳಿತುಕೊಳ್ಳಲು ಆದೇಶಿಸಿ, ಯಮರಾಜರು ತಮ್ಮ ಆಸನವನ್ನಲಂಕರಿಸಿದರು.
ಚಿತ್ರಗುಪ್ತರ ಸಹಾಯಕರಲ್ಲೊಬ್ಬ ಎದ್ದು ನಿಂತು, 'ಸನ್ 2007 ರ ಪಿ.ಕ್ಯು.ಸಿ.ಇ ನಂಬರ್ 21 ರ ವಿಚಾರಣೆ' ಎಂದು ಘೋಷಿಸಿದ. ಚಿತ್ರಗುಪ್ತರು ಎದ್ದು ನಿಂತು, 'ಮಹಾಸ್ವಾಮಿ, ಇಂದಿನ ಪ್ರಕರಣದ ಭೂನಿವಾಸಿ ವಿನಯ್ರವರ ಆತ್ಮ ಹಾಜರಿದೆ. ತಾವು ಒಪ್ಪಿಗೆಯಿತ್ತಲ್ಲಿ ವಿಚಾರಣೆ ಅರಂಭಿಸಬಹುದು' ಎಂದು ಹೇಳಿದರು.
ಸಮ್ಮತಿಸೂಚಕವಾಗಿ, ತಮ್ಮ ತಲೆಯನ್ನು ತೂಗಿ, ಬಲತೋಳನ್ನು ಎತ್ತಿ ಹಿಡಿದು, ಯಮರಾಜರು ಅಪ್ಪಣೆ ಕೊಟ್ಟಮೇಲೆ, ಚಿತ್ರಗುಪ್ತರು ನನ್ನ ಪ್ರಕರಣ ಕುರಿತಂತೆ ಈ ರೀತಿ ಹೇಳಿದರು.

'ಇಂದಿನ ವಿಚಾರಣೆಗೆ ಬಂದಿರುವ ವಿನಯ್ ತಮ್ಮ ಭೂಲೋಕದ ಐವತ್ತೈದು ವರ್ಷಗಳ ಜೀವಿತಕಾಲವನ್ನು ನಿನ್ನೆ ಪೂರೈಸಿ ಇಲ್ಲಿಗೆ ಬಂದಿದ್ದಾರೆ. ಇವರು ತಮ್ಮ ಜೀವಿತ ಕಾಲದಲ್ಲಿ ಅತ್ಯಂತ ಜನಾನುರಾಗಿಯಾದ ಸಾಹಿತಿಯಾಗಿದ್ದರು. ತಮ್ಮ ಪ್ರಚಂಡ ಪ್ರಗತಿಪರ ವಿಚಾರಗಳಿಂದ ಸಾಹಿತ್ಯಲೋಕದಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿದ್ದರು. ಕೇವಲ ಸಾಹಿತ್ಯವೊಂದಲ್ಲದೇ, ಅನೇಕ ಸಾಮಾಜಿಕ ಚಳುವಳಿಗಳಲ್ಲಿ ತೊಡಗಿಸಿಕೊಂಡು, ಸಮಾಜದ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇವರನ್ನು ನೆನೆಸದ ಬಡವರಿಲ್ಲ, ಶೋಷಿತರಿಲ್ಲ ಎಂದರೆ ಉತ್ಪ್ರೇಕ್ಷೆಯಾಗಲಾರದು. ತಮ್ಮ ಆತ್ಮ ಸಾಕ್ಶಿಯನ್ನೆಂದೂ ಮೀರದೆ, ತಮ್ಮ ಪ್ರಾಮಾಣಿಕತೆಯನ್ನು ಸತತವಾಗಿ ಕಾಪಾಡಿಕೊಂಡು ಬರುವ ಸಂದರ್ಭದಲ್ಲಿ ಅವರ ಕುಟುಂಬದವರಿಗೆ ಅವರು ಉಂಟು ಮಾಡಿದ ಕ್ಷೋಭೆಯೊಂದನ್ನು ಹೊರತುಪಡಿಸಿದರೆ, ಅವರು ಸ್ವಪ್ರಜ್ಞೆಯಿಂದ ಸಮಾಜದ, ಪ್ರಾಣಿಗಳನ್ನೂ ಸೇರಿದಂತೆ ಯಾವ ಜೀವಿಗೂ ನೋವನ್ನುಂಟು ಮಾಡಿರುವುದಿಲ್ಲ' ಎಂದು ನುಡಿದು, ಯಮರಾಜರ ಮುಖ ನೋಡಿದರು. ಚಿತ್ರಗುಪ್ತರ ವರದಿ ಪೂರ್ಣವಾಗಿ ಸತ್ಯ ಎಂದು ಹೇಳಿದರೆ, ನನ್ನ ಆತ್ಮ ಪ್ರಶಂಸೆ ಎಂದು ತಾವು ಭಾವಿಸಬಹುದಾದ್ದರಿಂದ ನಾನು ಮೌನ ವಹಿಸುತ್ತೇನೆ.

'ಚಿತ್ರಗುಪ್ತರೇ, ನೀವು ಹೇಳುತ್ತಿರುವುದು ಬಹಳ ವಿಚಿತ್ರವಾಗಿ ತೋರುತ್ತಿದೆ. ನಿಮ್ಮ ಲೆಕ್ಕದಲ್ಲಿ ಅವರು ಕನಿಷ್ಠ ತೊಂಬತ್ತು ಅಂಕಗಳನ್ನಾದರೂ ಪಡೆದಿರಬೇಕು. ಹಾಗಾಗಿ ಅವರು ಪಿ. ಕ್ಯು. ಸಿ ಆಗಲು ಹೇಗೆ ಸಾಧ್ಯ ?' ಎಂದು ಯಮರಾಜರು ಸಖೇದಾಶ್ಚರ್ಯದಿಂದ ನುಡಿದರು.
'ಮಹಾರಾಜರು ಸರಿಯಾಗಿ ಅಪ್ಪಣೆ ಕೊಡಿಸಿದ್ದೀರಿ. ಆದರೆ ನನ್ನ ಲೆಕ್ಕದಲ್ಲಿ ಅವರು ಒಂದೇ ಒಂದು ಅಂಕದ ಕೊರತೆಯಿಂದ ಪಿ.ಕ್ಯು.ಸಿ ಆಗಬೇಕಾಗಿ ಬಂದಿದೆ.'
ಶೇ. 65 ಅಂಕಗಳನ್ನು ಪಡೆದಿದ್ದೇನೆಂದು ಕೇಳಿದ ನನಗೆ ಸ್ವಲ್ಪ್ಲ ನೆಮ್ಮದಿಯಾಯಿತು. 34 ಅಂಕ ಪಡೆದ ಮಾತರ್ಾಂಡರಾಯರೇ ಪಾರಾಗಿದ್ದಾರೆಂದರೆ, ಯಮರಾಜರನ್ನು ಸ್ವಲ್ಪ ಓಲೈಸಿದರೆ ಪಾರಾಗಬಹುದು ಎಂದು ಸಂಭ್ರಮಿಸಿದೆ. ಕೆಲವು ಚಳುವಳಿಗಳಲ್ಲಿ ಬಂಧನಕ್ಕೊಳಗಾದಾಗ ನನ್ನ ಪರವಾಗಿ ವಾದಿಸಿದ ವಕೀಲರ ಅನೇಕ ಲಾ ಪಾಯಿಂಟ್ಗಳು ಮತ್ತು ನನ್ನ ಚಡ್ಡೀ ದೋಸ್ತ್ ಬಸವರಾಜನಿಂದ ಕೇಳಿದ ಅನೇಕಾನೇಕ ಭಯಂಕರ ಹಾಸ್ಯ ಚಟಾಕಿಗಳು ನನ್ನ ನೆನಪಿನಲ್ಲಿ ಇನ್ನೂ ಉಳಿದಿರುವುದರಿಂದ, ಈ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸಬಲ್ಲೆ ಎಂಬ ಆತ್ಮ ವಿಶ್ವಾಸ ಮೂಡಿತು.
'ಆದರೆ, ಎಲ್ಲಾ ಚಿತ್ತಾರವನ್ನೂ ಮಸಿ ನುಂಗಿತು ಎಂಬಂತೆ, ಇವರ ಒಂದೇ ಒಂದು ನಂಬಿಕೆ, ಅಪನಂಬಿಕೆಯೆಂದರೂ ಸರಿಯೇ, ಇವರಿಗೆ ನಾನು ಮೊದಲು ನೀಡಿದ್ದ 95 ಅಂಕಗಳಿಂದ 30 ಅಂಕಗಳನ್ನು ಕಳೆಯುವಂತೆ ಮಾಡಿತು'
'ಏನು, ಕೇವಲ ಒಂದೇ ಒಂದು ನಂಬಿಕೆಯಿಂದಾಗಿಯೇ ?.ನೀವೇನೂ ತಮಾಷೆ ಮಾಡುತ್ತಿಲ್ಲವಷ್ಟೇ?'
'ಇಲ್ಲ ಮಹಾಸ್ವಾಮಿ..ನಾನು ತಮಾಷೆ ಮಾಡುತ್ತಿಲ್ಲ. ಅವರು ಹರಿಭಕ್ತರಲ್ಲವೆಂಬುದಕ್ಕಾಗಿ ನಾನು ಮೂವತ್ತು ಅಂಕಗಳನ್ನು ಕಳೆಯಬೇಕಾಯಿತು. ಹೋಗಲಿ, ಆ ನಂಬಿಕೆಯೂ ಅಂತಹ ಗಟ್ಟಿಯಾದುದಲ್ಲ. ನರಕಕ್ಕೆ ಬಂದಮೇಲೆ, ಹರಿನಾಮ ಸ್ಮರಣೆ ಮಾಡಿ ಆತ್ಮ ರಕ್ಷಣೆಗೆ ಪ್ರಯತ್ನಿಸಿದರು ಎಂದು ನಮ್ಮ ಕಿಂಕರರು ವರದಿ ಮಾಡಿದ್ದಾರೆ'

'ಆತ್ಮ ರಕ್ಷಣೆಗಾಗಿ ಮಾಡಿದ ಪ್ರಯತ್ನವನ್ನು ಹಳಿಯಬಾರದು. ಎಲ್ಲಾ ಜೀವಿಗೂ ತನ್ನ ಆತ್ಮ ರಕ್ಷಣೆ ಮಾಡಿಕೊಳ್ಳುವ ಹಕ್ಕಿದೆ. ಅವರು ಹರಿಭಕ್ತರಲ್ಲರಾದರೇನಂತೆ, ಅವರು ಶಿವ ಭಕ್ತರಾಗಿರಬಹುದು. ಅದರಲ್ಲೇನೂ ತಪ್ಪಿಲ್ಲ. ಅಥವಾ ಯಾವುದೇ ಧರ್ಮ ಒಪ್ಪಿಕೊಳ್ಳುವ ಯಾವ ದೇವರ ಭಕ್ತರಾಗಿದ್ದರೂ ಚಿಂತೆಯಿಲ್ಲ' ಎಂದು ಯಮರಾಜರು ಅಪ್ಪಣೆ ಕೊಡಿಸಿದರು.
ನಾನು ಬಾಯಿ ತೆಗೆಯುವ ಮುನ್ನವೇ, ಚಿತ್ರಗುಪ್ತರು, 'ಪರಿಸ್ಥಿತಿ ಹಾಗಿಲ್ಲ ಮಹಾಸ್ವಾಮಿ. ಈ ವ್ಯಕ್ತಿ ಯಾವ ದೇವರಲ್ಲೂ ನಂಬಿಕೆಯಿಡದ ನಾಸ್ತಿಕ' ಎಂದು ನುಡಿದರು. ಅದನ್ನು ಕೇಳುತ್ತಲೇ, ಯಮರಾಜರು ಬಹಳ ಅಪ್ರಸನ್ನರಾದರು.
'ಏನು, ನಾಸ್ತಿಕನೇ ? ನಾರಾಯಣ. ನಾರಾಯಣ. ಚಿತ್ರಗುಪ್ತರೇ, ನೀವಿತ್ತಿರುವ ಅಂಕಗಳಿಂದ ನನ್ನ ಆಣತಿಯ ಮೇರೆಗೆ ಇನ್ನೂ ನಾಲ್ವತ್ತು ಅಂಕಗಳನ್ನು ಕಳೆಯಿರಿ' ಎಂದು ತಮ್ಮ ತೀರ್ಪನ್ನು ನೀಡಿ, ಇನ್ನಾವ ಚರ್ಚೆಗೂ ಅವಕಾಶ ನೀಡದೇ, ತಮ್ಮ ಪೀಠದಿಂದೆದ್ದರು. ನಾನು ಹೇಳ ಬೇಕೆಂದಿದ್ದ ಲಾ ಪಾಯಿಂಟ್ಗಳು ಮತ್ತು ಹಾಸ್ಯ ಚಟಾಕಿಗಳು ನನ್ನ ಗಂಟಲಲ್ಲೇ ಉಳಿದವು.

Comments