ಆಟದ ಗಮ್ಮತ್ತು
ನನಗೆ ಆಗಾಗ್ಗೆ ಒಂದೊಂದು ಬಗೆಯ ಖಯಾಲಿ ಶುರುವಾಗುವುದುಂಟು. ಆರಂಭದಲ್ಲಿ ನನ್ನ ಹೆಂಡತಿ ಇದನ್ನು ಭಯಂಕರ ಕಾಯಿಲೆಯೆಂದು ಊಹಿಸಿ ಕಾಣುವ ವೈದ್ಯರಲ್ಲೂ, ಕಾಣದ ದೈವದ ಬಳಿಯೂ ನನ್ನನ್ನು ಕರೆದೊಯ್ಯುತ್ತಿದ್ದಳು. ಆದರೆ ಏನೇ ಮಾಡಿದರೂ ಮಗ ಹರಿ ಎನ್ನುವುದನ್ನು ಬಿಡಲಿಲ್ಲ ಎಂಬಂತೆ ನನ್ನ ಸಮಸ್ಯೆಗೆ ಪರಿಹಾರ ಕಾಣಲಿಲ್ಲ. ಕ್ರಮೇಣ ಅವಳಿಗೂ ಇದು ವಾಸಿಯಾಗದ, ಆದರೆ ನಿರುಪದ್ರವಿಯಾದ ಮಾನಸಿಕ ಅವಸ್ಥೆಯೆಂದು ಅರಿವಾಗಿ, ನನ್ನ ವರ್ತನೆಗೆ ಹೊಂದಿಕೊಂಡು ಬಿಟ್ಟಳು!
ಕೆಲವು ವರ್ಷಗಳ ಹಿಂದೆ ನನಗೆ ಆಟೋರಿಕ್ಷಾಗಳ ಹಿಂಬರಹಗಳನ್ನು ಓದಿ ಡೈರಿಯಲ್ಲಿ ಗುರುತು ಹಾಕಿಕೊಳ್ಳುವ ಹುಚ್ಚು ಹಿಡಿದಿತ್ತು. ಆಗ ತಿಂಗಳುಗಟ್ಟಲೇ ಪುಸ್ತಕ, ಪೆನ್ನು ಹಿಡಿದುಕೊಂಡು ಬೆಂಗಳೂರಿನ ಬೀದಿ-ಗಲ್ಲಿಗಳನ್ನೆಲ್ಲಾ ಸುತ್ತಿ ಸುತ್ತಿ, ಸಾವಿರಗಟ್ಟಲೆ ಅಣಿಮುತ್ತು, ತತ್ವಪದ ಮತ್ತು ದರ್ಶನ ವಾಕ್ಯಗಳನ್ನು ಸಂಗ್ರಹಿಸಿದ್ದೆ! ಅವುಗಳನ್ನೆಲ್ಲಾ ಕ್ರಮಬದ್ಧವಾಗಿ ವಿಭಾಗಿಸಿ, ತರ್ಕಬದ್ಧವಾಗಿ ಜೋಡಿಸಿ, ಸಂಪೂರ್ಣಾನಂದ ಸ್ವಾಮಿ ಎಂಬ ಅಂಕಿತನಾಮದಡಿ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕೆಂದೂ ನಿರ್ಧರಿಸಿದ್ದೆ! ಆದರೆ ನನ್ನ ಹೆಂಡತಿ ನಾನು ಮನೆಯಲ್ಲಿಲ್ಲದ ಸಮಯದಲ್ಲಿ ಆ ಡೈರಿಯನ್ನು ರದ್ದಿಗೆ ಹಾಕಿಬಿಟ್ಟಳು!! ಜೊತೆಗೆ ನನ್ನ ಉಜ್ವಲ ಭವಿಷ್ಯವನ್ನೂ!! ಇಂದಿಗೂ ನನಗೆ ನನ್ನ ವರ್ಷಗಟ್ಟಲೇ ಪಟ್ಟ ಕಷ್ಟ-ಪರಿಶ್ರಮ ವ್ಯರ್ಥವಾಯಿತಲ್ಲಾ ಎಂಬ ಬೇಸರಕ್ಕಿಂತ, ಕನ್ನಡ ಸಾರಸ್ವತ ಲೋಕ ಅಷ್ಟರಮಟ್ಟಿಗೆ ಬಡವಾಯಿತಲ್ಲಾ ಎಂಬ ಕೊರಗಿದೆ!!
ಇಷ್ಟಾದರೂ ನಾನು ಇಂತಹ ಅನೇಕ ವಿಷಯಗಳ ಕುರಿತಾಗಿ ಅಧ್ಯಯನ ಸಂಶೋದನೆಗಳನ್ನು ಮುಂದುವರೆಸಿಕೊಂಡು ಬಂದಿದ್ದೇನೆ. ಫಲಾಪೇಕೆಯಿಲ್ಲದೇ ಕೆಲಸ ಮಾಡು ಎಂಬ ಶ್ರೀಕೃಷ್ಣ ಪರಮಾತ್ಮನ ಆದೇಶ ನನ್ನ ಅರಿವಿನ ಆಳಕ್ಕೆ ಇಳಿದು ನನ್ನ ಕೈಹಿಡಿದು ನೆಡೆಸುತ್ತಿದೆಯೆಂದರೆ ನೀವಾದರೂ ಖಂಡಿತವಾಗಿ ನಂಬಲೇಬೇಕು! ಬೆಂಗಳೂರಿನ ಗಾಂಧೀಬಜಾರಿನಲ್ಲಿ ಒಂದು ದಿನದಲ್ಲಿ ನೀಲಿಸೀರೆಯನ್ನುಟ್ಟುಕೊಂಡು ಓಡಾಡಿದ ಲಲನಾಮಣಿಗಳ ಲೆಕ್ಕ, ನಮ್ಮ ಎದುರು ಮನೆಯ ನಾಯಿ ದಿನಕ್ಕೆ ಎಷ್ಟು ಬಾರಿ ಬೊಗಳುತ್ತದೆಯೆಂಬ ಅಂಕೆ-ಅಂಶಿ, ಒಂದು ವರುಷದ ಅವಧಿಯಲ್ಲಿ ನಮ್ಮ ಮನೆಗೆ ಪೇಪರ್ ಹಾಕುವ ಹುಡುಗನ ಸಮಯದಲ್ಲಾದ ಏರುಪೇರು..... ಹೀಗೆ ಹತ್ತು-ಹಲವಾರು ಸಂಗತಿಗಳ ಬಗ್ಗೆ ನನ್ನಲ್ಲಿ ಅಧಿಕೃತ ಮಾಹಿತಿ ಇದೆ.
ನನ್ನ ಇತ್ತೀಚೆಗಿನ ಆಸಕ್ತಿ ಆಟ. ಅಂದರೆ ಕ್ರಿಕೆಟ್ಟನ್ನೋ, ಪುಟಬಾಲನ್ನೋ ಆಟವಾಡುವುದಲ್ಲ! ಬದಲಾಗಿ ಕನ್ನಡದಲ್ಲಿ "ಆಟ" ವೆಂಬ ಪದದ ಪ್ರಯೋಗ ವೈಶಿಷ್ಟ್ಯಗಳನ್ನು ಗುರುತಿಸುವುದು.
ನನಗೆ ತಿಳಿದ ಮಟ್ಟಿಗೆ ನಮ್ಮ ನುಡಿಯಲ್ಲಿ ಆಟದ ಆಟಾಟೋಪ ಬಹಳವೇ! ಕವಿಯೊಬ್ಬನ ಕಣ್ಣಿಗೆ ಇಡೀ ಬ್ರಹ್ಮಾಂಡವೇ ಜಗದೀಶನಾಡುವ ನಾಟಕ ರಂಗದಂತೆ ಕಂಡರೆ, ಮತ್ತೋರ್ವನಿಗೆ ಸಾವೆಂಬುದು, ಆಡಿಸುವಾತನಿಗೆ ಬೇಸರ ಬಂದು ಮುಗಿಸಿದ ಆಟದಂತೆ ತೋರುತ್ತದೆ. ಆದರೆ ಚಲನಚಿತ್ರಗೀತೆ ರಚನೆಕಾರರು ಕವಿಗಳೇ ಅಲ್ಲವೆಂದು ಬಾಯಿ ಬಡಿದುಕೊಳ್ಳುವ ಮಂದಿ ನಮ್ಮಲ್ಲಿ ಬಹಳಷ್ಟಿದ್ದಾರೆ. ನನಗಂತೂ ಅವರ ಮಾತುಗಳು ಆಟಕ್ಕುಂಟು. ಲೆಕ್ಕಕ್ಕಿಲ್ಲ!!
ಜಗತ್ತಿನ ಆಗುಹೋಗುಗಳೆಲ್ಲಾ ವಿಧಿಯಾಟವೆಂದು ನಂಬಿದವರು ನಾವು. ಅದರಲ್ಲೂ ಮದುವೆಯೆಂದರೆ ಋಣಾನುಬಂಧವೆಂದೂ, ಜನ್ಮಜನ್ಮಾಂತರದ ಸಂಬಂಧವೆಂದೂ ತಿಳಿಯಲ್ಪಟ್ಟಿದೆ. ನನಗಂತೂ ಈ ವಿವಾಹ ಮಹೋತ್ಸವದ ಸಮಸ್ತ ಚಟುವಟಿಕೆಗಳು ಆಟದ "ಪದಬಂಧ"ದಂತೆ ತೋರುತ್ತದೆ. ಹೇಗೆಂದರೆ ಮದುವೆಯ ದಿನದಂದು ಕಲ್ಯಾಣಮಂಟಪದಲ್ಲಿ, ಹೆಣ್ಣಿನ ಕಡೆಯವರ ಭರ್ಜರಿ ಓಡಾಟ, ಗಂಡಿನ ಕಡೆಯವರ ಕುಣಿದಾಟ, ಹೊಸ ಸ್ಥಳ-ಗದ್ದಲಗಳಿಗೆ ಹೊಂದಿಕೊಳ್ಳಲಾಗದ ಹಾಲುಗಲ್ಲ ಹಸುಳೆಗಳ ರಂಪಾಟ, ಓಡಲು ಕಲಿತ ಪುಟ್ಟ ಮಕ್ಕಳ ಜೂಟಾಟದ ಕಿರಿಚಾಟ, ಹರೆಯದ ಹುಡುಗರ ತುಂಟಾಟ, ಹುಡುಗಿಯರ ಚೆಲ್ಲಾಟ, ಬಿಸಿಕಾಫಿ ಸಿಗಲಿಲ್ಲವೆಂದು ವೃದ್ಧರ ಗೊಣಗಾಟ, ಬೆಳ್ಳಂಬೆಳಿಗ್ಗೆ ಸರಿಯಾದ ಸಮಯಕ್ಕೆ ಶೌಚಾಲಯ ಖಾಲಿ ಇಲ್ಲದೇ ಪರದಾಟ, ತಮ್ಮ ಸಂಪ್ರದಾಯವೇ ಶ್ರೇಷ್ಠವೆಂದು ಹೆಣ್ಣು ಮತ್ತು ಗಂಡಿನ ಪುರೋಹಿತರ ಮುಸುಕಿನೊಳಗಿನ ಗುದ್ದಾಟ, ಕಸ-ಮುಸರೆ ಮಾಡುವ ಹೆಂಗಸರ ಕಚ್ಚಾಟ, ಎಷ್ಟೇ ಜತನದಿಂದ ತಂದಿದ್ದರೂ ಮುರಿದು ಹೋಗಿರುವ ಬಾಸಿಂಗವನ್ನು ಕಂಡು ಹೆಣ್ಣಿನ ತಂದೆಯ ಪೇಚಾಟ, ಇಂತಹ ಗದ್ದಲಾಟದಲ್ಲಿಯೂ ಕಲ್ಯಾಣಮಂಟಪದ ಮೂಲೆಯ ಕೋಣೆಯ ಕದವಿಕ್ಕಿಕೊಂಡು ಕುಳಿತುಕೊಂಡಿರುವ ಇಸ್ಪೀಟು ಪ್ರೆಮಿಗಳ ಜೂಜಾಟ. ಅಬ್ಬಬ್ಬಾ! ಒಂದೇ, ಎರಡೇ! ಮದುವೆಯೆಂದರೇನು ಹುಡುಗಾಟವೇ! ಇಡೀ ಮದುವೆಯೇ ಆಟ-ಬೊಂಬಾಟ!!
ಆಟ-ಬೊಂಬಾಟವೆಂಬುದು ಕನ್ನಡ ಸಿನಿಮಾವೊಂದರ ಹೆಸರೂ ಹೌದು. ಹಿಂದೆಯೆಲ್ಲಾ ಹಳ್ಳಿಗಳ ಸಿನಿಮಾ ಟೆಂಟುಗಳಲ್ಲಿ ಜನರನ್ನು ಸೆಳೆಯಲು "ಇಂದೇ ಕಡೇ ಆಟ" ಎಂಬ ಫಲಕ ನಿತ್ಯವೂ ನೇತಾಡುತ್ತಿರುತ್ತಿತ್ತು!! ಅಂದಿನ ಆ ವ್ಯಾಪಾರೀ ತಂತ್ರವನ್ನು ಇಂದಿನ ಶಾಂಪಿಂಗ್ ಮಾಲುಗಳ "ಈ ಕೊಡುಗೆ ಇನ್ನು ಕೆಲವೇ ದಿನಗಳವರೆಗೆ ಮಾತ್ರ" ಎಂಬ ಜಾಹೀರಾತುಗಳಲ್ಲೂ ಕಾಣಬಹುದು.
ನಮ್ಮೂರ ಕಡೆಗಳಲ್ಲಿ ಮಳೆಗಾಲ ಕಳೆಯಿತೆಂದರೆ ಯಕ್ಷಗಾನ-ಬಯಲಾಟಗಳದ್ದೇ ಮಾತು. ಅದರಲ್ಲೂ ಎರಡು ಪ್ರಸಿದ್ಧ ಮೇಳಗಳ ಜೋಡಾಟವೆಂದರೆ "ಆಟ ಕಾಂಬಲಿಕ್ಕೆ" ಜನರ ನೂಕಾಟ ಬಲು ಜೋರು. ಅಂದಿನ ರಾತ್ರಿ ಸಾರಾಯಿ ಅಂಗಡಿಗಳಲ್ಲಿ ಭರ್ತಿ ಮಾರಾಟ. ಕೆಲವೊಮ್ಮೆ ಗಾಂಧೀಕ್ಲಾಸಿನ ಈ ತೂರಾಟದ ಮಂದಿಯ ಹಾರಾಟವನ್ನು ರಂಗದ ಮೇಲಿನ ವೇಷಧಾರಿಗಳು ಆಟದ ಮಧ್ಯದಲ್ಲಿ ರಂಗದಿಂದಲೇ ಜೋರಾಗಿ ಬೈಯ್ದು ನಿಯಂತ್ರಿಸುವುದುಂಟು. ಅಂತಹ ಸಂದರ್ಭಗಳ ಅಸಂಗತೆ ನಿಜಕ್ಕೂ ನಗೆಯುಕ್ಕಿಸುತ್ತದೆ. ಆಟದ ದಿನದ ಮಾತಿರಲಿ, ಒಂದು ವೇಳೆ ಬೇರೆ ಬೇರೆ ಮೇಳಗಳ ಯಕ್ಷಗಾನ ಕಲಾವಿದರಿಬ್ಬರು ಅಪರೂಪಕ್ಕೆ ಭೇಟಿಯಾದರೂ, ಅವರ ಕುಶಲ-ಸಂಭಾಷಣೆಯಲ್ಲಾ "ಈ ವರ್ಷದ ತಿರುಗಾಟ"ದ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತದೆಯೆಂದರೆ "ದೇವರ ಆಟ ಬಲ್ಲವರಾರು? ಆಟದ ಮಹಿಮೆ ತಿಳಿದವರಾರು?" ಅಲ್ಲವೇ?
ಇತ್ತೀಚಿನ ದಿನಗಳಲ್ಲಿ ದಿನಪತ್ರಿಕೆಗಳಲ್ಲಿ ಭೂಗಳ್ಳರ ರಾಜಕೀಯ ಸೆಣೆಸಾಟವೇ ಮುಖ್ಯಸುದ್ದಿ. ಮಣ್ಣಿನ ಮಕ್ಕಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಈ ಆಧುನಿಕ ಹಿರಣ್ಯಾಕ್ಷರ ಆರೋಪ-ಪ್ರತ್ಯಾರೋಪಗಳ ಕೆಸರೆರೆಚಾಟ ಕಂಡಾಗ "ಉಪ್ಪು ತಿಂದವನು ನೀರು ಕುಡಿಯಲೇಬೇಕು, ಭೂಮಿ ನುಂಗಿದವರು ಕೆಸರು ತುಪ್ಪಲೇಬೇಕಲ್ಲವೇ?" ಎಂದೆನಿಸುವುದು. ಆದರೇನಂತೆ ಅವರಿಗಂತೂ ಬಾಯಿ ಕೆಸರಾದರೆ ಕೈ ಮೊಸರು!! ಏಕೆಂದರೆ ಮೊಸರನ್ನು ಕಡೆದಾಗಲೇ ದಾಸರ ಭಾಗ್ಯಲಕ್ಷ್ಮೀ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಬರುವವಳಲ್ಲವೇ?
ಇನ್ನು ಮಹಾನಗರಗಳಲ್ಲಿ ಮನುಷ್ಯರ ಒಡನಾಟಕ್ಕಿಂತ ವಾಹನಗಳ ಓಡಾಟದ ಭರಾಟೆಯೇ ಹೆಚ್ಚು. ವಾಹನ ದಟ್ಟಯಿಂದ ಸಂಚಾರ ಸ್ಥಗಿತವಾದೀತೆಂದರೆ ಹಾರನ್ನುಗಳ ಚೀರಾಟ, ಬೈಕ್ ಸವಾರರ ನುಗ್ಗಾಟ ಹೇಳತೀರದು. ಒಂದು ವೇಳೆ ನಿಮ್ಮ ವಾಹನ ರಸ್ತೆಯ ಮಧ್ಯದಲ್ಲಿ ಅಪ್ಪಿ ತಪ್ಪಿ ನಿಂತು ಹೋಯಿತೆಂದರೆ ಬೇರೆ ಸವಾರರೊಂದಿಗೆ ಕಾದಾಟವೇ ಗತಿ! ಕುರುಕ್ಷೇತ್ರದಲ್ಲಿ ಸಾರಥಿಯಿಲ್ಲದ, ರಕ್ತದ ಮಡುವಿನಲ್ಲಿ ಚಕ್ರ ಸಿಕ್ಕಿಹಾಕಿಕೊಂಡ ಕರ್ಣನ ರಥ ನೆನಪಾದೀತು.
ಈಗಂತೂ ಹೇಳಿಕೇಳಿ ಸ್ಪರ್ಧಾಯುಗ. ಆಟಕ್ಕಿಂತ ಓಟಕ್ಕೇ ಹೆಚ್ಚು ಪ್ರಾಮುಖ್ಯತೆ. ಇಲ್ಲಿ ದಾರಿಗಿಂತ ಗುರಿ ಮುಖ್ಯ. ಪ್ರತಿಷ್ಠಿತ ಖಾಸಗೀ ಶಾಲೆಯಲ್ಲಿ ಕಲಿತು, ಹತ್ತನೇ ತರಗತಿ ಮತ್ತು ಪಿ.ಯು.ಸಿ. ಗಳೆಂಬ ಸಂಕಗಳನ್ನು ದಾಟಿ, ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ದಕ್ಕಿಸಿಕೊಂಡು ಕ್ಯಾಂಪಸ್ ಸೆಲೆಕ್ಟ್ ಆಗುವ ತನಕ ಮಿಂಚಿನ ಓಟ. ತದನಂತರ ಕೆಲಸಕ್ಕೆ ಸೇರಿದ ಮೇಲೆ ಮತ್ತೆ ಆಟ ಪ್ರಾರಂಭ. ಹೆಚ್ಚಿನ ಸಂಬಳಕ್ಕಾಗಿ ಒಂದರಿಂದ ಇನ್ನೊಂದು ಕಂಪೆನಿಗೆ ಜಿಗಿದಾಟ. ಮೇಲಧಿಕಾರಿಯನ್ನು ಓಲೈಸಲು ಸಹೋದ್ಯೋಗಿಗಳ ಕಾಲೆಳೆಯುವಾಟ. ಬಡ್ತಿಗಾಗಿ ಹಗ್ಗ-ಜಗ್ಗಾಟ! ಹೀಗೆ ಆಟವಾಡುತ್ತಾ ಆಡುತ್ತಾ ಕಾಲ ಸರಿಯತೊಡಗುತ್ತದೆ.
ನಾನು ಶಾಲೆಯ ದಿನಗಳಲ್ಲಿ ಕಲಿತ "ಒಂದು ಎರಡು, ಬಾಳೆಲೆ ಹರಡು" ಎಂದು ಪ್ರಾರಂಭವಾಗುವ "ಊಟದ ಆಟ" ವೆಂಬ ಪದ್ಯ ನನಗೆ ಈಗಲೂ ಕಂಠಸ್ಥ. ಒಂದರಿಂದ ಹತ್ತರವರೆಗಿನ ಅಂಕಿಗಳನ್ನು ಕಲಿಸುವುದರ ಜೊತೆಗೆ, ನಮ್ಮ ಊಟದ ಸಂಸ್ಕೃತಿಯನ್ನೂ ಪರಿಚಯಿಸುವ ಇಂತಹ ವಿಶಿಷ್ಟವಾದ ಸರಳ ಪದ್ಯಗಳು ಇಂದು ವಿರಳವಾಗುತ್ತಿವೆ. "ಒನ್ ಟೂ, ಬಕಲ್ ಮೈ ಷೂ...." ಗಳಂತಹ ನೀರಸ ಇಂಗ್ಲೀಷ್ ಪದ್ಯಗಳ ಹಾವಳಿಯಲ್ಲಿ ನಾವು ಮಾತನಾಡುವಾಗ ಅಂಕಿ-ಸಂಖ್ಯೆಗಳನ್ನು ಕನ್ನಡದಲ್ಲಿ ಹೇಳುವುದನ್ನೇ ಮರೆತುಬಿಟ್ಟಿದ್ದೇವೆ.
"ವಿದ್ಯಾಭ್ಯಾಸದ ಗುರಿ-ನೌಕರಿ" ಎಂಬಂತಾಗಿರುವ ಪ್ರಸ್ತುತ ಸಂದರ್ಭದಲ್ಲಿ ಕಡಲತೀರದ ಭಾರ್ಗವ ಶಿವರಾಮಕಾರಂತರು ಶಿಕ್ಷಣರಂಗದಲ್ಲಿ ನೆಡೆಸಿದ್ದ ಪ್ರಯೋಗ ಚಿಂತನೀಯ. ಕಾರಂತರು ಶಾಲೆಯಲ್ಲಿನ ಕಲಿಕೆಯನ್ನು "ಓದುವ ಆಟ" ವನ್ನಾಗಿಸಿ ಮಕ್ಕಳಲ್ಲಿ ವಿಚಾರ ಪ್ರಚೋದಕ ಶಕ್ತಿಯನ್ನು ತುಂಬಲು ಪ್ರಯತ್ನಿಸಿದ್ದರು. ಈಗ ನಮ್ಮ ನ ಸರ್ಕಾರವೇನೋ ಪ್ರಾಥಮಿಕ ಶಿಕ್ಷಣದಲ್ಲಿ "ನಲಿ-ಕಲಿ" ಎಂಬ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಯೋಜನೆ ಎಷ್ಟು ಪರಿಣಾಮಕಾರಿಯಾಗೆದೆಂಬುದು ಚರ್ಚಾರ್ಹವೇ.
ಆದರೆ ಒಂದಂತೂ ನಿಜ. ಬದುಕಿನಲ್ಲಿ ನಲಿಯುವುದನ್ನು ಕಲಿಯದಿದ್ದರೆ ಜೀವನ ಜಂಜಾಟವೇ ಸರಿ !
Comments
ಉ: ಆಟದ ಗಮ್ಮತ್ತು
ಉ: ಆಟದ ಗಮ್ಮತ್ತು
ಉ: ಆಟದ ಗಮ್ಮತ್ತು
ಉ: ಆಟದ ಗಮ್ಮತ್ತು
ಉ: ಆಟದ ಗಮ್ಮತ್ತು
ಉ: ಆಟದ ಗಮ್ಮತ್ತು
In reply to ಉ: ಆಟದ ಗಮ್ಮತ್ತು by abdul
ಉ: ಆಟದ ಗಮ್ಮತ್ತು
ಉ: ಆಟದ ಗಮ್ಮತ್ತು
ಉ: ಆಟದ ಗಮ್ಮತ್ತು
ಉ: ಆಟದ ಗಮ್ಮತ್ತು
In reply to ಉ: ಆಟದ ಗಮ್ಮತ್ತು by haldodderi
ಉ: ಆಟದ ಗಮ್ಮತ್ತು