ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ....

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ....

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ನಿಜ. ಅದೇ ಹೊಟ್ಟೆ ಸ್ವಲ್ಪ ನೋಯುತ್ತ ಇತ್ತು. ನಾನು ಎಷ್ಟೇ ಜೋಕ್ ಮಾಡಿದರು ನಗದ ಮಡದಿ, ಮಗ ಇಬ್ಬರು, ನಾನೇನು ನೈಟ್ರಸ ಆಕ್ಸೈಡ್ (ಲಾಫಿಂಗ್ ಗ್ಯಾಸ್) ಬಿಟ್ಟ ಹಾಗೆ ಜೋರಾಗಿ ನಗುತ್ತಿದ್ದರು. ಯಾವತ್ತೂ ಗುಡ್.. ಗುಡ್ ..ಎನ್ನುವ ಹೊಟ್ಟೆ ಬ್ಯಾಡ್ ಆಗಿ ಸೌಂಡ್ ಮಾಡಿತ್ತು. ಈ ಗ್ಯಾಸ್ ಎನ್ನುವುದು ಸಾಮಾನ್ಯವಾಗಿ ತುಂಬಾ ಜನರಲ್ಲಿ ಇರುವ ಒಂದು ಕೆಟ್ಟ ರೋಗ. ಇದು ಏತಕ್ಕೆ ಬರುತ್ತೆ ಎಂಬುದು ಮಾತ್ರ ಯಕ್ಷ(ಲಕ್ಷ) ಪ್ರಶ್ನೆ. ಅದಕ್ಕೆ ಎಂದು ಅಂತರ್ಜಾಲ ತಡಕಾಡಿದ್ದು ಆಯಿತು. ಆನುವಂಶಿಕ ಎಂದು ಅನ್ನಿಸಿದ್ದೂ ಉಂಟು. ಅದಕ್ಕೆ ಉದಾಹರಣೆ ಎಂದರೆ, ನಾನು ಚಿಕ್ಕವನಿದ್ದಾಗ, ನಮ್ಮ ಚಿಕ್ಕಪ್ಪ ಬಜಾಜ್ ಸ್ಕೂಟರ್ ಹಾಗೆ ಸ್ವಲ್ಪ ಬಾಗಿದರು ಕೂಡ.. ನಾವು ಎದ್ದೋ, ಬಿದ್ದೋ ಎಂದು ಓಡಿ ಹೋಗಿ ನಗುತ್ತಿದ್ದೆವು. ಈಗ ಅದು ನನಗೆ ಬಳುವಳಿಯಾಗಿ ಬಂದಿದೆ. ಅದಕ್ಕೆ ನಮ್ಮ ಅಕ್ಕ ನನಗೆ ಗೋಪಾಲ್ ಗ್ಯಾಸ್ ದುರಂತ ಎಂದು.. ಭೋಪಾಲ್ ಗ್ಯಾಸ್ ದುರಂತಕ್ಕೆ ಹೋಲಿಸಿ ಆಡುವುದು ಉಂಟು.

ನಾವು ಚಿಕ್ಕವರಿದ್ದಾಗ ಕೂಡ ಕೆಲ ಹುಡುಗರು ಗ್ಯಾಸ್ ಬಿಡುತ್ತಿದ್ದರು. ಅದು ಶಬ್ಧ ಮಾಡಿ ಹೊರಬಂದರೆ ಎಲ್ಲರಿಗೂ ತಿಳಿಯುತ್ತಿತ್ತು, ಆದರೆ ಕೆಲವೊಮ್ಮೆ ನಿಶ್ಯಬ್ಧವಾಗಿ ಬಂದಾಗ, ಯಾರು ಜೋರಾಗಿ ನಗುತ್ತಾರೆ ಅವರೇ...ಅದರ ಕಾರಣ ಕರ್ತರೆಂದು ನಿರ್ಧಾರಕ್ಕೆ ಬಂದು ಬಿಡುತ್ತಿದ್ದೆವು. ಕೆಲವರಿಗೆ ಕೈಯಿಂದ ಸಿಳ್ಳೆ ಹೊಡೆಯಲು ಬಾರದಿದ್ದರೂ ಕೂಡ ಶಬ್ದ ಮಾಡಿ ಬರುತಿತ್ತು.

ಲೇ ಹೊಟ್ಟೆ ನೋವು ಕಣೇ ಎಂದು ಮಡದಿಗೆ ಹೇಳಿದೆ. ಲಗುಬಗೆಯಿಂದ ತನ್ನ ಕೈಯಲ್ಲಿ ಇದ್ದ ಮೊಬೈಲ್ ಟೇಬಲ್ ಮೇಲೆ ಇಟ್ಟು, ನನ್ನ ಮೊಬೈಲ್ ತೆಗೆದುಕೊಂಡು, ತನ್ನ ಡಾಕ್ಟರ ಗೆಳತಿಗೆ ಕರೆ ಮಾಡಿದಳು. ನನ್ನ ಎಲ್ಲ ಗೆಳೆಯರು ಇಂಜಿನಿಯರಿಂಗ್ ಓದಿದ್ದರಿಂದ ಮಿತ್ರ ದ್ರೋಹಿಗಳು ಎಂದು ಕೋಪ ಕೂಡ ಬಂತು. ಮಿತ್ರರು ಎಂದರೆ ಇವರು, ಒಬ್ಬರಿಗೆ.. ಒಬ್ಬರು.. ಸಹಾಯ ಮಾಡುವವರು ಎಂದು ಅನ್ನಿಸಿತು. ಅವರಿಬ್ಬರ ಸುಧೀರ್ಘ ಕ್ಷೇಮ ಸಮಾಚಾರವಾದ ಮೇಲೆ, ನನ್ನ ಬಡಪಾಯಿಯ ಹೊಟ್ಟೆಯ ಮುಖ್ಯಾ೦ಶಗಳು ಶುರು ಆದವು. ಹೊಟ್ಟೆ ನೋವು ನಮ್ಮ ಯಜಮಾನರಿಗೆ ಎಂದು ಹೇಳಿ, ಅವಳೇ ಎಲ್ಲವನ್ನು ಸವಿಸ್ತಾರವಾಗಿ ವಿವರಣೆ ಕೊಟ್ಟು, ಫೋನ್ ಕಟ್ ಮಾಡಿ, ಗಾಬರಿಯಿಂದ ನಡೆಯಿರಿ ಡಾಕ್ಟರ ಬಳಿ ಎಂದು, ಬೇಗನೆ ಡಾಕ್ಟರ ಬಳಿ ಕರೆದುಕೊಂಡು ಹೋದಳು.

ಡಾಕ್ಟರ ಬಳಿ ಹೋದ ಕೂಡಲೇ "ಡಾಕ್ಟರ ಬೇಗ ಪರೀಕ್ಷಿಸಿ" ಎಂದು ಹೇಳಿದಳು. ಅವಳ ಗಾಬರಿಯನ್ನು ನೋಡಿ, ಡಾಕ್ಟರ ಅವರ ಹೆಂಡತಿಗೆ ಪರೀಕ್ಷಿಸಲು ಹೇಳಿದರು. ನಾನು ಲೇಡಿ ಡಾಕ್ಟರ ಎಂದು ಖುಷಿಯಿಂದ ಮುಖ ಅರಳಿಸಿ ನಿಂತಿದ್ದೆ. ಬಂದವರೇ ನನ್ನ ಹೆಂಡತಿಯನ್ನು ಪರೀಕ್ಷಿಸಲು ಶುರು ಮಾಡಿದರು. ಹೆಂಡತಿ ನನಗೆ ಅಲ್ಲ, ನನ್ನ ಮನೆಯವರಿಗೆ ಎಂದಳು. ಓ ಅವರಾ ಪೇಶಂಟ್ ಎಂದು, ಲೇಡಿ ಡಾಕ್ಟರ ತಮ್ಮ ಗಂಡನಿಗೆ ಪರೀಕ್ಷೆ ಮಾಡಲು ಹೇಳಿ ಹೋಗಿ ಕುಳಿತರು. "ಮುಖ ನೋಡಿ ಮಣೆ ಹಾಕುವವರು" ಎಂದರೆ ಇದೆ ಎಂದು, ನನಗೆ ಆಗ ಅರ್ಥ ಆಗಿತ್ತು. ಡಾಕ್ಟರ ಪರೀಕ್ಷಿಸಲು ಶುರು ಮಾಡಿದರು. ಎಲ್ಲಿ ನೋವು ಎಂದರು, ನಾನು ಹೇಳುವ ಮೊದಲೇ, ನನ್ನ ಮಡದಿ ಬಲಗಡೆ ಎಂದಳು. ನಾನು ಇಲ್ಲಾ ಸರ್ ಎಡಗಡೆ ಎಂದೆ. ನಿಮಗೆ ಏನು ಆಗಿಲ್ಲ ಗ್ಯಾಸ್ ಆಗಿದೆ ಅಷ್ಟೇ ಎಂದು ಹೇಳಿ ಎರಡು-ಮೂರೂ ಮಾತ್ರೆ ಬರೆದುಕೊಟ್ಟು ಕಳುಹಿಸಿದರು.

ಹೊರ ಬಂದ ಮೇಲೆ, ಹೆಂಡತಿ ಜೋರಾಗಿ ನಗಲು ಶುರು ಮಾಡಿದಳು. ಏಕೆಂದು ಕೇಳಿದೆ. ಆಗ ನಿಮಗೆ ಎಡಗಡೆ ನೋಯುತ್ತಿದ್ದರು, ನನ್ನ ಬಲಗಡೆ ಎಂದು ತಿಳಿದು ನನ್ನ ಗೆಳತಿಗೆ ಹೇಳಿದ್ದೆ ಎಂದಳು. ಅದಕ್ಕೇನೀಗ ಎಂದೆ. ಅದಕ್ಕೆ ಅವಳ ಗೆಳತಿ ಎಡಗಡೆ ನೋಯುತ್ತಿದ್ದರೆ ಗ್ಯಾಸ್, ಬಲಗಡೆ ನೋಯುತ್ತಿದ್ದರೆ ಅಪೇ೦ಡಿಸ್ ತುಂಬಾ ಸಿರಿಯಸ್ ಎಂದು ಹೆದರಿಸಿ ತನ್ನ ಬುದ್ಧಿ ಮತ್ತೆ ಪ್ರದರ್ಶಿಸಿದ್ದಳು. ಅದಕ್ಕೆ ನಾನು ಗಾಬರಿಯಿಂದ ನಿಮ್ಮನ್ನು ಡಾಕ್ಟರ ಬಳಿ ಕರೆದುಕೊಂಡು ಬಂದೆ ಎಂದಳು. ಹೊಟ್ಟೆ ನೋವು ಎಂದು ಹೆರೆಗೆ ಆಸ್ಪತ್ರೆಗೆ ಹಾಕಲಿಲ್ಲವಲ್ಲ ಅದು ನನ್ನ ಪುಣ್ಯ ಎಂದು ನಗುತ್ತ ಮನೆಗೆ ಬಂದೆವು.

ಮರುದಿನ ಆಫೀಸ್ ಹೋಗುವ ಸಮಯದಲ್ಲಿ ಶೂ ಲೇಸ್ ನ್ನು ಲೇಸ್.. ಲೇಸ್.. ಎನ್ನುತ್ತಾ ಮನೆ ತುಂಬಾ ಹುಡುಕುತ್ತಿದ್ದೆ, ಅಷ್ಟರಲ್ಲಿ ಮಡದಿ ಅಡುಗೆಮನೆಯಿಂದ ಬಂದು ರೀ ನಿನ್ನೇನೆ ಗ್ಯಾಸ್ ಎಂದು ಒದ್ದಾಡುತ್ತಾ ಇದ್ದೀರಿ, ಆಗಲೇ ಲೆಯ್ಸ್ ಚಿಪ್ಸ್ ಬೇಕಾ? ಎಂದಳು. ನಾನು ಲೆಯ್ಸ್ ಚಿಪ್ಸ್ ಅಲ್ಲ ಲೇಸ್ ಎಂದು ಹೇಳಿದೆ. ಅವಳೇ ಹುಡುಕಿ ಕೊಟ್ಟಳು.

Rating
No votes yet

Comments