ಮಾತಿನ ಮಗರಾಯ

ಮಾತಿನ ಮಗರಾಯ

ಒಂದು ದಿನ ನನ್ನ ಮಗ, ನಾಲ್ಕು ವರ್ಷದ ಪೋರ ಇತ್ತೀಚಗೆ ತಲೆಚಿಟ್ಟು ಹಿಡಿಸುವಷ್ಟು ಮಾತನಾಡುತ್ತಾನೆಂದು ಅವನ ಅಮ್ಮ ನನ್ನ ಬಳಿ ಬಂದು ದೂರಿತ್ತಳು. ತಕ್ಷಣ ಯಾರೋ ಮಹಾನುಭಾವರ ಮಾತೊಂದು ನೆನಪಾಯಿತು. " ಬಹುತೇಕ ತಾಯಂದಿರು ಮಾತು ಬಾರದ ಹಸುಕಂದಗಳಿಗೆ ’ಪುಟ್ಟಾ, ಅಪ್ಪ ಅನ್ನು, ಅಜ್ಜಾ ಅನ್ನು.....’ ಎಂದೆಲ್ಲಾ ಮಾತನಾಡಲು ಪ್ರೇರೇಪಿಸಿ, ಭಾಷೆ ಕಲಿಸಿ, ನಂತರ ಅವು ಮಾತನಾಡಲು ಕಲಿತು ಪ್ರಶ್ನಿಸಲು ಪ್ರಾರಂಬಿಸಲು ’ ಏಯ್, ತಲೆಹರಟೆ ಸಾಕು, ಬಾಯ್ಮುಚ್ಚು!!’ ಎಂದು ಗದರಿಸುವುದು ಎಂತಹ ವಿಪರ್ಯಾಸ!!"
 
          ಈ ವಿಚಾರವನ್ನು ನನ್ನದೇ ಸ್ವಂತ ವಿಚಾರಮಂಥನದಿಂದ ಹೊರಹಮ್ಮಿದ ಅದ್ಭುತ ಸಂಗತಿಯೆಂಬಂತೆ ನನ್ನ ಹೆಂಡತಿಗೆ ಹೇಳಿದೆ. ನೀವು ತಲೆಚಿಟ್ಟು ಹಿಡಿಸುವುದರಲ್ಲಿ ಮಗನಿಗಿಂತ ಒಂದು ಕೈ ಮೇಲೆಂದು ಗೊಣಗುತ್ತಾ ಎದ್ದು ಹೋದಳು. ವಿಷಯ ನಿಜವಾಗಿಯೂ ಗಂಭೀರವಾಗಿದೆಯೆಂದು ಅರಿವಾಯಿತು. ಕೂಡಲೇ ವಿಪರೀತವಾಗಿ ಮಾತನಾಡುವ ಮಗನನ್ನು ಸರಿದಾರಿಗೆ ತರುವುದು ಹೇಗೆಂದು ಆಲೋಚಿಸತೊಡಗಿದೆ. ಸಮಸ್ಯೆಯನ್ನು ವೈಙ್ಞಾನಿಕವಾಗಿ ವಿಶ್ಲೇಷಿಸಿ, ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು, ತನ್ಮೂಲಕ ಹೆಂಡತಿಯಿಂದ ಶಹಭಾಷ್‌ಗಿರಿಯನ್ನು ಪಡೆಯಬೇಕೆಂದು ನಿರ್ಧರಿಸಿದೆ.
 
          ಯೋಜನೆಯ ಮೊದಲ ಹಂತವಾಗಿ ಮಗ ಹೇಗೆ ಮತ್ತು ಏನನ್ನು ಮಾತನಾಡುತ್ತಾನೆಂದು ಸೂಕ್ಷವಾಗಿ ವಾರಗಟ್ಟಲೆ ಗಮನಿಸಿ, ಕೆಳಗಿನ ಅಂಶಗಳನ್ನು ಪಟ್ಟಿಮಾಡಿದೆ.
1. ಅವನ ಮಾತು ಪ್ರಶ್ನೆಯಿಂದ ಪ್ರಾರಂಭವಾಗಿ ಪ್ರಶ್ನೆಯಿಂದಲೇ ಮುಕ್ತಾಯಗೊಳ್ಳುತ್ತದೆ.
2. ಹಿಂದಿನ ತಲೆಮಾರಿನ ಶ್ರದ್ಧಾವಂತ ಶಾಲಾ ಮಾಸ್ತರರು ಪಾಠ ಮಾಡಿದಂತೆ ಒಂದೇ ವಾಕ್ಯವನ್ನು ಅನೇಕ ಬಾರಿ ಪುನರುಚ್ಚರಿಸುತ್ತಾನೆ.
3. ಮಾತು ನವ್ಯ ಕವಿತೆಯಂತೆ ಒಮ್ಮೆಗೆ ಎಲ್ಲಿಂದೆಲ್ಲಿಗೋ ಜಿಗಿಯುತ್ತದೆ.
4. ಓಡುತ್ತಾ, ಹಾರುತ್ತಾ, ಕುಣಿಯುತ್ತಾ ಮಾತನಾಡುವುದರಿಂದ ಅವನ ಧ್ವನಿ ಪೆಟ್ಟಿಗೆ ವೈವಿಧ್ಯಮಯ ತರಂಗಾಂತರಗಳನ್ನು ಸೃಷ್ಟಿಸುತ್ತದೆ.
 
ಅಂತೂ ಸಮಸ್ಯೆಗೆ ಕಾರಣಗಳನ್ನೆನೋ ಕಂಡುಹಿಡಿದಿದ್ದಾಯಿತು. ಪರಿಹಾರವೇನೆಂದು ಯೋಚಿಸುತ್ತಿರುವಾಗ ಮತ್ತೊಮ್ಮೆ ನನ್ನ ಪುಸ್ತಕದ ಙ್ಞಾನ ನೆರವಿಗೆ ಬಂತು. “ ನೀವು ಟಿವಿ ನೋಡುತ್ತಾ ಮಗುವಿಗೆ ಹೋಂವರ್ಕ್ ಮಾಡು ಎಂದು ಪೀಡಿಸಿದರೆ ಅದು ಕೇಳುವುದಿಲ್ಲ. ಅದರ ಬದಲಾಗಿ ನೀವೇ ಪುಸ್ತಕವೊಂದನ್ನು ಎತ್ತಿಕೊಂಡು ಅದರ ಮುಂದೆ ಓದುತ್ತಾ ಕುಳಿತುಕೊಳ್ಳಿ. ಮಗು ತನ್ನಷ್ಟಕ್ಕೆ ತಾನೆ ಹೋಂವರ್ಕ್ ಮಾಡಲು ಶುರುವಿಟ್ಟುಕೊಳ್ಳುತ್ತದೆ”  ಎಂದು ಎಲ್ಲೋ ಓದಿದ್ದು ನೆನಪಾಯಿತು.
 
          ಹಾಗಾದರೆ ನನ್ನ ಮಗನ ವಾಚಾಳಿತನವನ್ನು ತಡೆಗಟ್ಟಲು ಮೊದಲು ನಾನೇ ಚುಟುಕಾಗಿ, ಗಂಭೀರವಾಗಿ, ತಾರ್ಕಿಕವಾಗಿ, ಒಂದು ಮಾತು ಒಂದೇ ಸಲವೆಂಬಂತೆ ಮಾತನಾಡಲು ಪ್ರಾರಂಬಿಸಬೇಕೆಂದು ನಿರ್ಧರಿಸಿದೆ.  ಕೂಡಲೇ ಪ್ರತಿದಿನವೂ ನಾನೂ ನನ್ನ ಹೆಂಡತಿಯೂ ಗಂಟೆಗಟ್ಟಲೆ ಮರುದಿನದ ತಿಂಡಿ ಮತ್ತು ಊಟದ ವಿಷಯವಾಗಿ ಚರ್ಚಿಸಿ, ಕೊನೆಗೆ ಪ್ರತಿಬಾರಿಯೂ ತಿಂಡಿಗೆ ಉಪ್ಪಿಟ್ಟು, ಊಟಕ್ಕೆ ಅನ್ನ-ತಿಳಿಸಾರು ಎಂದು ನಿರ್ಣಯಿಸುವುದು ನೆನಪಿಗೆ ಬಂತು!! ಅಂದರೆ ಇವನ ವಾಚಾಳಿತನ ವಂಶಪಾರಂಪರ್ಯವೇ ಎಂಬ ಅನುಮಾನವುಂಟಾದರೂ ಅವಸರದ ನಿರ್ಣಯಕ್ಕೆ ಮನಸ್ಸೊಪ್ಪಲಿಲ್ಲ.  ನನ್ನ ನಿರ್ಧಾರವನ್ನು ಯಾರಿಗೂ ತಿಳಿಸದೇ ನೇರ ಪ್ರಯೋಗಕ್ಕೆ ಕೈ ಹಾಕಿದೆ. ನನ್ನ ಕೆಲವು ಪ್ರಯೋಗಗಳು ಮತ್ತು ಅವುಗಳ ಫ಼ಲಿತಾಂಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
 
          ನಮ್ಮ ನೆಂಟರೊಬ್ಬರ ಮದುವೆಗೆ ಮಗನ ಸಮೇತ ಹೋಗಿದ್ದಾಗ, ಭೋಜನ ಕಾಲದಲ್ಲಿ ಉಪಚಾರ ಹೇಳುವ ಕೆಲಸವನ್ನು ನನಗೆ ವಹಿಸಿದರು. ನಾನು ಬಹಳವೇ ಮುಖಹೇಡಿ. ಪರಿಚಿತರೊಂದಿಗೇ ಸ್ನೇಹಪೂರ್ವಕವಾಗಿ ಮಾತನಾಡಲು ಹಿಂಜರಿಯುವ ನಾನು ಈ ಗುರುತರ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಹೇಗೆಂದು ಆಲೋಚಿಸುತ್ತಿರುವಾಗಲೇ, ಇವನು ಹೆಂಗಸರ ಗುಂಪಿನ ಮಧ್ಯದಲ್ಲಿ ಜಂಭಕೊಚ್ಚಿಕೊಳ್ಳುತ್ತಾ ನಿಂತಿದ್ದ. ನಾನು ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಉಪಾಯ ಹೂಡಿದೆ. ಅವನನ್ನು ಕರೆದು “ ನೋಡು, ಊಟಕ್ಕೆ ಕುಳಿತವರೆಲ್ಲರ ಮುಂದೆ ಹೋಗಿನಿಂತು ’ಊಟ ಸಾವಾಕಾಶವಾಗಿ ಆಗಲಿ’ ಎಂದಷ್ಟೆ ಹೇಳಿ ಉಪಚಾರ ಮಾಡಿ ಬಾ” ಎಂದು ತಾಕೀತು ಮಾಡಿ ಕಳುಹಿಸಿಕೊಟ್ಟು ದೂರದಿಂದ ಗಮನಿಸತೊಡಗಿದೆ.
 
          ಇವನು ಪಂಕ್ತಿಯ ಮಧ್ಯದಲ್ಲಿ ಗಂಭೀರವಾಗಿ ನೆಡೆದುಕೊಂಡು ಹೋಗಿ ವೃದ್ಧರೊಬ್ಬರ ಬಳಿ ನಿಂತು” ಅಜ್ಜಾ, ಏನ್ ಮಾಡ್ತಿದ್ದೀಯಾ?” ಎಂದ. ಅವರೊಮ್ಮೆ ತಲೆಯೆತ್ತಿ ಇವನನ್ನು ನೋಡಿ ನಸುನಕ್ಕು” ಊಟ ಕಣೋ, ಪುಟ್ಟಾ” ಎಂದರು. ಅಷ್ಟರಲ್ಲಾಗಲೇ ಸುತ್ತಮುತ್ತ ಕುಳಿತಿದ್ದವರೆಲ್ಲರೂ ಇವನನ್ನು ಗಮನಿಸಲಾರಂಬಿಸಿದ್ದರು. ಪ್ರತಿದಿನವೂ ಇವನಿಗೆ ಊಟ ಮಾಡಿಸಲು ಇವನಮ್ಮ ಹರಸಾಹಸ ಪಡುತ್ತಿದ್ದಳು. ಊಟದ ಸಮಯದಲ್ಲಿ ಅವಳು ಕೊಡುತ್ತಿದ್ದ ಸೂಚನೆಗಳು ನೆನಪಿಗೆ ಬಂದಿರಬೇಕು. “ ಅಜ್ಜಾ, ಅನ್ನ ಚೆಲ್ಕೋಬೇಡಿ, ಸರಿಯಾಗಿ ಊಟಮಾಡಿ” ಎಂದ. ಅವರು ಗಂಭೀರವದನದಿಂದ “ಆಯ್ತಪ್ಪ, ಯಾರೋ ನೀನು?” ಎಂದು ಕೇಳಿದರು. ಇವನು ಅವರ ಪ್ರಶ್ನೆಗೆ ಲಕ್ಷ್ಯ ಕೊಡಲಿಲ್ಲ. ಇವನ ಊಟದ ರಂಪಾಟ ನೋಡಿ ಬೇಸತ್ತು ಕೊನೆಗೆ ಇವನಮ್ಮನೇ ಕೈ ತುತ್ತು ತಿನ್ನಿಸುತಿದ್ದಳು. ಅದೂ ನೆನಪಾಯಿತೆಂದು ಕಾಣುತ್ತದೆ. ಇವನು ಜೋರಾಗಿ “ ಅಜ್ಜಾ, ನಿನ್ನ ಅಮ್ಮನ್ನ ಕರೀಬೇಡ. ನಿನ್ನ ಕೈಯಲ್ಲೇ ಊಟ ಮಾಡು. ನನ್ನಪ್ಪ ಹೇಳಿದಾರೆ ಎಲ್ಲರಿಗೂ ಉಪಚಾರ ಹೇಳು ಅಂತ” ಎಂದಕೂಡಲೇ ಅಲ್ಲಿದ್ದವರೆಲ್ಲಾ ಗಹಗಹಿಸಿ ನಗತೊಡಗಿದರು. ನಾನು ಅಲ್ಲೇ ಕಂಬದತ್ತ ಮರೆಯಾಗಿ ನಿಧಾನವಾಗಿ ಕಾಲ್ತೆಗೆದೆ!!
 
          ಎಷ್ಟೋ ದಿನಗಳ ನಂತರ ಮನೆಯಲ್ಲೊಂದು ದಿನ ಊಟದ ತಟ್ಟೆಯ ಮುಂದೆ ಕುಳಿತುಕೊಂಡು ಬಕಧ್ಯಾನ ಮಾಡುತ್ತಿದ್ದ. “ ಏಯ್! ಬೇಗ ಬೇಗ ಊಟ ಮಾಡೋ” ಎಂದೆ. “ಥೂ! ಹೋಗಪ್ಪ, ಮದ್ವೇಲಿ ನಿಧಾನವಾಗಿ ಊಟ ಮಾಡಿ ಅಂತಾರೆ. ನೀನು ಬೇಗ ಬೇಗ ಅಂತೀಯಾ?” ಎಂದು ಆಕ್ಷೇಪಿಸಿದ.
 
          ನಾನು ಇವನೊಂದಿಗೆ ಇನ್ನೂ ಹೆಚ್ಚು ಸ್ಟ್ರಿಕ್ಟಾಗಿರಲು ತೀರ್ಮಾನಿಸಿ, ಅವನ ಬೇತಾಳ ಪ್ರಶ್ನೆಗಳಿಗೆಲ್ಲಾ “ ಹೂಂ, ಉಹುಂ” ಎಂದಷ್ಟೇ ಉತ್ತರಿಸತೊಡಗಿದೆ. ಒಂದು ಭಾನುವಾರ ನಮ್ಮ ಮನೆಗೆ ಪರಿಚಿತರೊಬ್ಬರು ಆಗಮಿಸಿದರು.ಅವರು ಇವನ ಹೆಸರು ಕೇಳಿದರು. ಕೂಡಲೇ ಉತ್ತರಿಸಿದ. ಅವರಿಗೆ ಖುಷಿಯಾಗಿ ನಿನ್ನಪ್ಪನ ಹೆಸರೇನೆಂದು ಕೇಳಿದರು. ಇವನು ತಕ್ಷಣ “ನನ್ನಪ್ಪನ ಹೆಸರು’ ಹೂಂ, ಉಹುಂ’” ಎಂದ. ಅವರು ಪ್ರಶ್ನಾರ್ಥಕವಾಗಿ ನನ್ನತ್ತ ನೋಡಿದರು. ನಾನು ಏನೂ ತಿಳಿಯದವನಂತೆ ನಟಿಸಿದೆ!!.
 
          ಅವತ್ತೊಂದು ದಿನ          ಬಿಬಿಎಂಪಿ ಚುನಾವಣೆ. ಬೆಳಿಗ್ಗೆ ಮುಂಚಿತವಾಗಿ ಮತ ಚಲಾಯಿಸಲು ಹೊರಟೆ. ಹಾಳುಮುಖದಲ್ಲಿ ಹವಾಯ್ ಚಪ್ಪಲಿ ಧರಿಸಿ ಸಿದ್ಧನಾದ ನನ್ನನ್ನು ಕಂಡು ತಾನೂ ಬರುತ್ತೇನೆಂದು ಹಠ ಮಾಡತೊಡಗಿದ. ಕರೆದುಕೊಂಡು ಹೋಗುತ್ತೇನೆ. ಆದರೆ ದಾರಿಯಲ್ಲಿ ಏನೂ ಪ್ರಶ್ನೆ ಕೇಳಬಾರದು ಮತ್ತು ಹೆಚ್ಚು ಮಾತನಾದಬಾರದೆಂಬ ನನ್ನ ಷರತ್ತಿಗೆ ಒಪ್ಪಿ ನನ್ನೊಂದಿಗೆ ಹೆಜ್ಜೆ ಹಾಕಿದ. ಮತಗಟ್ಟೆಯ ಬಳಿಯಿದ್ದ ಜನರನ್ನೂ, ಪೋಲೀಸರನ್ನೂ ಕುರಿತು ಏನೊಂದೂ ಪ್ರಶ್ನಿಸಲಿಲ್ಲ. ನನಗೆ ಆಶ್ಚರ್ಯವಾದರೂ ಸುಮ್ಮನಿದ್ದೆ. ಕೊನೆಗೆ ಮತದಾನ ಕೇಂದ್ರದ ಕಾರಿಡರ್ ನಲ್ಲಿ ನಿಲ್ಲುವಂತೆ ಹೇಳಿ ಬೂತಿನ ಒಳಗೆ ಹೋಗಿ ಮತ ಚಲಾಯಿಸಿ ಹೊರಗೆ ಬಂದೆ. ಮತ ಹಾಕಿದ ಗುರುತಿನ ಶಾಯಿಯನ್ನು ನನ್ನ ಬೆರಳಿಗೆ ಅಯ್ಯಂಗಾರರ ನಾಮದಂತೆ ಉದ್ದವಾಗಿ ಹಾಕಿದ್ದರಿಂದ ಅದು ಎದ್ದುಕಾಣುತಿತ್ತು. ಅದನ್ನು ಕಂಡಕೂಡಲೇ ಮಗರಾಯ ಜೋರಾಗಿ ಎಲ್ಲರಿಗೂ ಕೇಳಿಸುವಂತೆ ಕಿರುಚಿದ “ ಅಪ್ಪಾ! ನಿನಗೂ ಪೋಲಿಯೋ ಡ್ರಾಪ್ಸ್ ಹಾಕಿದ್ರಾ?”
 
          ಕೊನೆಯ ಮಾತು!
ಮಗನ ವಾಚಾಳಿತನವನ್ನು ನಿಲ್ಲಿಸಲು ನನ್ನಿಂದ ಸಾಧ್ಯವಿಲ್ಲವೆಂದು ಹೆಂಡತಿಯ ಬಳಿ ಸೋಲನ್ನೊಪ್ಪಿಕೊಂಡು ಎಷ್ಟೋ ದಿನಗಳಾಗಿದ್ದವು. ನಂತರ ನನ್ನ ಆಫೀಸಿನ ಕೆಲಸದಲ್ಲಿ ಮನೆಯನ್ನೇ ಮರೆತುಬಿಟ್ಟಿದ್ದೆ.  ಒಂದು ದಿನ ಇದ್ದಕ್ಕಿದ್ದಂತೆ ನನ್ನವಳು ಬಂದು ಮಗು ಯಾಕೋ ಇತ್ತೀಚೆಗೆ ತೀರಾ ಮಂಕಾಗಿಬಿಟ್ಟಿದೆ, ಎಷ್ಟು ಮಾತನಾಡಿಸಿದರೂ ಏನೊಂದೂ ಮಾತಿಲ್ಲವೆಂದು ಹೇಳಿಕೊಂಡು ಬಿಕ್ಕಿ ಬಿಕ್ಕಿ ಅಳತೊಡಗಿದಳು. ನಾನು ಅವಳನ್ನು ಸಂತೈಸಲು ಎದ್ದೆ. ದಿಗ್ಗನೆ ಎಚ್ಚರವಾಯಿತು! ಸಂಜೆಯಾಗಿತ್ತು. ಭಾನುವಾರದ ಮಧ್ಯಾಹ್ನ ಗಡದ್ದಾಗಿ ಊಟ ಹೊಡೆದು ಹಾಸಿಗೆಗೆ ಬಂದು ಬಿದ್ದದ್ದು ನೆನಪಾಯಿತು!!. ಅಷ್ಟರಲ್ಲೇ ಅಪ್ಪಾಽಽಽ.... ಎಂದು ಕಿರುಚುತ್ತಾ ಮಗರಾಯ ಓಡಿ ಬಂದು ಮೈಮೇಲೆ ಹಾರಿದ!!
 

Comments