ಶೀಮ ಶಾಲೆಗೆ ಹೋದ ...

ಶೀಮ ಶಾಲೆಗೆ ಹೋದ ...

[ಅಲ್ಲಿಂದ - ಇಲ್ಲಿಂದ ಸಂಗ್ರಹಿಸಿದ್ದು ...ಕೆಲವು ಸಂಪದದಲ್ಲಿ ಸಹ ಈ ಮೊದಲೇ ಪ್ರಕಟವಾಗಿರಬಹುದು ...]

 

೧] ಶೀಮನನ್ನು ಬಹಳ ದಿನಗಳಿಂದ ಶಾಲೆಗೆ ಹೋಗಲು ಪುಸಲಾಯಿಸುತ್ತಿದ್ದರು. ಅಂತೂ ಒಂದು ದಿನ ಶೀಮ ಶಾಲೆಗೆ ಹೋದ; ಸಂಜೆ ಮನೆಗೆ ಬಂದ. 

ಶೀಮನ ಅಮ್ಮ: ಶೀಮಾ, ಶಾಲೆಯಲ್ಲಿ ಮೊದಲ ದಿನ ಹೇಗಿತ್ತು?

ಶೀಮ ಅಳಲು ಶುರು ಮಾಡಿದ.

ಶೀಮನ ಅಮ್ಮ: ಶೀಮಾ, ಏನಾಯ್ತು? 

ಶೀಮ: ಮೊದಲ ದಿನ? ನನಗೆ ಗೊತ್ತಾಯ್ತು ... ನಾನಿನ್ಮೇಲೆ ದಿನಾಲೂ  ಶಾಲೆಗೆ ಹೋಗಬೇಕು ತಾನೇ?

 

೨] ಶೀಮನ ಅಕ್ಕೋರು [ಟೀಚರ್]: ಮಕ್ಕಳೇ ನಾಲ್ಕು ಗುಣಿಲೆ ನಾಲ್ಕು ಬರೋಬ್ಬರಿ ಹದಿನಾರು [4x4 =16], ಹದಿನಾರು ಗುಣಿಲೆ ನಾಲ್ಕು ಬರೋಬ್ಬರಿ ಅರವತ್ತನಾಲ್ಕು [16x4 =64]... ಹಾಗಾದರೆ ಅರವತ್ತನಾಲ್ಕು ಗುಣಿಲೆ ನಾಲ್ಕು ಬರೋಬ್ಬರಿಎಷ್ಟು  [64x4 =?] ಹೇಳಿ ನೋಡೋಣ ...

ಶೀಮ: ಅಕ್ಕೋರೇ, ಇದು ಅನ್ಯಾಯ ... ಸುಲಭದ್ದನ್ನು ನೀವು ಹೇಳ್ತೀರಿ, ಕಷ್ಟದ್ದನ್ನು ನಮಗೆ ಕೇಳ್ತೀರಿ ...

 

೩]ಶಾಲೆಯಲ್ಲಿ ಆರೋಗ್ಯ ತಪಾಸಣೆ ಆದ ದಿನ ಶಾಲೆಯಿಂದ ಮನೆಗೆ ಬಂದ ಶೀಮ ಅಳತೊಡಗಿದ.

ಶೀಮನ ಅಮ್ಮ: ಶೀಮಾ, ಏನಾಯ್ತು?

ಶೀಮ: ನನಗನ್ನಿಸುತ್ತೆ; ಅಕ್ಕೋರು ನಾಳೆ ನಮ್ಮನ್ನು ಮಾರುತ್ತಾರೆ.

ಶೀಮನ ಅಮ್ಮ: ಯಾಕೋ, ಹಾಗಂತೀಯಾ?

ಶೀಮ: ಇವತ್ತು ನಮ್ಮೆಲ್ಲರನ್ನೂ ತೂಕ ಮಾಡಿ ನೋಡಿದಾರೆ.

 

೪] ಶೀಮ: ನಮ್ಮ ಅಕ್ಕೋರಿಗೆ ಮರೆವು ಜಾಸ್ತಿ.

ಶೀಮನ ಅಮ್ಮ: ಯಾಕೋ, ಹಾಗಂತೀಯಾ?

ಶೀಮ: ಕಪ್ಪುಹಲಗೆ ಮೇಲೆ, 'ಮಹಾಭಾರತ' ಎಂದು ಬರೆಯುತ್ತಾರೆ. ಮತ್ತೆ ನಮ್ಮತ್ತ ತಿರುಗಿ 'ಮಹಾಭಾರತ' ಬರೆದವರು ಯಾರು ಎಂದು ಕೇಳುತ್ತಾರೆ.

 

೫] ಅಕ್ಕೋರು: ಹುಲಿ ಜಾತಿಯ ನಾಲ್ಕು ಪ್ರಾಣಿಗಳ ಹೆಸರು ಹೇಳು. 

ಶೀಮ: [ಸುಮಾರು ಹೊತ್ತು ಯೋಚಿಸಿ] ತಂದೆ ಹುಲಿ, ತಾಯಿ ಹುಲಿ, ಹಾಗೂ ಎರಡು ಮರಿ ಹುಲಿಗಳು.

 

೬] ಶೀಮ ಸಾಲಿನಲ್ಲಿ ಮುಂದೆ ನಿಂತಿದ್ದ.

ಶೀಮನ ಅಕ್ಕೋರು: ಶೀಮ, ನಿನಗೆ ಸಾಲಿನ ಕೊನೆಯಲ್ಲಿ ನಿಲ್ಲಲು ಹೇಳಿದ್ದೆನಲ್ಲ? 

ಶೀಮ: ನಾನು ಸಾಲಿನ ಕೊನೆಗೆ ಹೋಗಿದ್ದೆ ಅಕ್ಕೋರೇ, ಆದರೆ ಅಲ್ಲಿ ಬೇರೆ ಒಬ್ಬ ಹುಡುಗ ಮೊದಲೇ ಇದ್ದ ...

 

೭] ಒಂದು ರಾತ್ರಿ ದೀಪವಾರಿಸಿ ಇನ್ನೇನು ಮಲಗಬೇಕು ಆಗ ...  

ಶೀಮ: ಅಪ್ಪ ನಿಂಗೆ ಕತ್ತಲಲ್ಲಿ ಸಹಿ ಮಾಡೋಕೆ ಬರುತ್ತಾ?

ಶೀಮನ ಅಪ್ಪ: ಏಕೆ ಶೀಮಾ?

ಶೀಮ: ನನ್ನ ಪ್ರಗತಿ ಪತ್ರಿಕೆ[progress report]ಗೆ ನಿನ್ನ ಸಹಿ ಬೇಕಿತ್ತು.

 

೮] ಶಾಲೆಗೆ ಸೇರಿದ ಹೊಸತರಲ್ಲಿ ಶೀಮ: ಅಮ್ಮಾ , ನಮ್ಮ ಅಕ್ಕೋರು ತುಂಬಾ ಕೆಟ್ಟವರು.

ಶೀಮನ ಅಮ್ಮ: ಯಾಕೋ, ಹಾಗಂತೀಯಾ?

ಶೀಮ: ನಾನು ಮಾಡೇ ಇಲ್ಲದ ಕೆಲಸಕ್ಕೆ ನಂಗೆ ತುಂಬಾ ಬಯ್ದರು.

ಶೀಮನ ಅಮ್ಮ : ಅದು ಯಾವ ಕೆಲಸಾನೋ?  

ಶೀಮ: ಅದೇನೋ ಹೋಮ್ವರ್ಕ್ ಅಂತೆ ...

 

೯] ಶೀಮನ ಅಕ್ಕೋರು: ಶೀಮಾ, ನಾನು ಇವತ್ತು ನಿಂಗೆ ಎರಡು ಕುರಿ ಮರಿ ಕೊಡ್ತೇನೆ, ನಾಳೆ ಮತ್ತೆ ಎರಡು ಕುರಿ ಮರಿ ಕೊಡ್ತೇನೆ ...ನಿನ್ನತ್ರ ಒಟ್ಟೂ ಎಷ್ಟು ಕುರಿ ಮರಿ ಆದಂತಾಯ್ತು?  

ಶೀಮ: ಐದು ಕುರಿಮರಿ 

ಶೀಮನ ಅಕ್ಕೋರು: ಶೀಮಾ, ಸರಿಯಾಗಿ ಕೇಳು ... ನಾನು ನಿಂಗೆ ಇವತ್ತು ಎರಡು ಕೋಳಿ ಮರಿ ಕೊಟ್ಟೆ ಅಂತ ತಿಳ್ಕೋ ... ನಾಳೆ ಮತ್ತೆ ಎರಡು ಕೋಳಿ ಮರಿ ಕೊಟ್ಟೆ ಅಂತ ತಿಳ್ಕೋ ... ನಿನ್ನತ್ರ ಒಟ್ಟೂ ಎಷ್ಟು ಕೋಳಿ ಮರಿ ಆದಂತಾಗುತ್ತೆ ?  

ಶೀಮ: ನಾಲ್ಕು ಕೋಳಿಮರಿ 

ಶೀಮನ ಅಕ್ಕೋರು: ಜಾಣ ... ಸರಿ ಈಗ ಮತ್ತೊಮ್ಮೆ ಕೇಳ್ತೇನೆ. ನಾನು ಇವತ್ತು ನಿಂಗೆ ಎರಡು ಕುರಿ ಮರಿ ಕೊಡ್ತೇನೆ, ನಾಳೆ ಮತ್ತೆ ಎರಡು ಕುರಿ ಮರಿ ಕೊಡ್ತೇನೆ ...ನಿನ್ನತ್ರ ಒಟ್ಟೂ ಎಷ್ಟು ಕುರಿ ಮರಿ ಆದಂತಾಗುತ್ತೆ?

ಶೀಮ: ಐದು ಕುರಿಮರಿ  

ಶೀಮನ ಅಕ್ಕೋರು: ಅಲ್ವೋ ಶೀಮಾ ...ಕೋಳಿ ಮರಿ ಲೆಕ್ಕ ಈಗಷ್ಟೇ ಸರಿಯಾಗಿ ಹೇಳಿದ್ಯಲ್ಲೋ ... 

ಶೀಮ: ನಿಮಗೆ ಗೊತ್ತಿಲ್ಲ ಅನ್ಸುತ್ತೆ ಅಕ್ಕೋರೇ, ನನ್ನತ್ರ ಮನೇಲಿ ಒಂದು ಕುರಿ ಮರಿ ಈಗಾಗ್ಲೆ ಇದೆ.   

 

೧೦]ಶೀಮನ ಅಕ್ಕೋರು ಪಾಠ ಮಾಡುತ್ತಿದ್ದರೆ ಶೀಮನ ಪಕ್ಕದ ಹುಡುಗ ನಿದ್ದೆ ಮಾಡುತ್ತಿದ್ದ.

ಶೀಮನ ಅಕ್ಕೋರು: ಶೀಮಾ, ನಿನ್ನ ಪಕ್ಕದಲ್ಲಿರೋ ಹುಡುಗನ್ನ ಎಬ್ಬಿಸ್ತೀಯಾ?

ಶೀಮ: ನಂಗೊತ್ತಿಲ್ಲ ಅಕ್ಕೋರೇ ... ಅವನನ್ನ ನಿದ್ದೆಗೆ ಕಳ್ಸಿದವರು ನೀವು, ಈಗ ನೀವೇ ಎಬ್ಬಿಸಿ ...

 

        

Rating
No votes yet

Comments