ಆಷಾಢದ ಅಚ್ಚರಿಗಳು

ಆಷಾಢದ ಅಚ್ಚರಿಗಳು

 

ಆಷಾಢ ಮಾಸ ಬಂದಿತವ್ವ

ಅಣ್ಣ ಬರಲಿಲ್ಲ ಕರೆಯಾಕ

ಸುವ್ವಲಾಲಿ ಸುವ್ವಾಲೆ

(ಜನಪದ ಗೀತೆ)

ಮಳೆ ಬಿದ್ದು ಭೂಮಿಬಯಲೆಲ್ಲಾ ಹಸಿರು ಹಚ್ಚಡ ಹೊದ್ದ ಚಂದದ ದಿನಗಳನ್ನು ನೆನಪಿಸಿಕೊಂಡು ತಂಗಿಯರು ಹಾಡುವ ಹಾಡಿನಲ್ಲಿ ತವರೂರಿನ ಹಂಬಲ ಇರುವುದು ಮಾತ್ರವಲ್ಲ, ಮಳೆಗಾಲದ ಬೆಚ್ಚನೆಯ ಭಾವನೆಗಳೂ ತುಂಬಿಕೊಂಡಿವೆ. ಆಗಾಗ ಮಳೆಯಾಗಿ, ಒಂದೆರಡು ತಿಂಗಳುಗಳಿಂದ ಭೂಮಿ ತಂಪನ್ನು ಹೀರಿಕೊಂಡು ಸಂತೃಪ್ತವಾಗಿರುವ ದಿನಗಳಿವು. ಮಲೆನಾಡಿನಲ್ಲಿ ಮತ್ತು ಕರಾವಳಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಮಳೆ ಸುರಿದು ಇಳೆಯ ತುಂಬಾ ನೀರಿನ ಹೊಸತೇ ಒಂದು ಲೋಕ ತೆರೆದುಕೊಂಡು ಹಲವು ಅಚ್ಚರಿಗಳನ್ನು ಅನುದಿನವೂ ಒಡಮೂಡಿಸಿರುವ ಕಾಲ ಇದು. . ಮಳೆಗಾಲವು ಇಡೀ ಸೀಮೆಯನ್ನೇ ಹಸಿರುಮಯ ಮಾಡಿತ್ತು ಎಲ್ಲೆಲ್ಲೂ ತಂಪನೆಯ ಗಾಳಿಯನ್ನು ಸೃಷ್ಟಿಸಿದ್ದೊಂದಷ್ಟೇ ಅಲ್ಲ, ಕಣ್ಣುಗಳಿಗೂ ತಂಪನೆಯ ದೃಶ್ಯಗಳನ್ನು ತೆರೆದಿಟ್ಟಿದೆ. ನಮ್ಮ ಹಳ್ಳಿಗಳ ದಾರಿಯುದ್ದಕ್ಕೂ ಹಳೆಯ, ಹೊಸ, ಎಳೆಯ ಹಲವು ಮರಗಿಡಗಳು ಹೊಸ ಹಸಿರಿನ ತಳಿರು ಸಾಲನ್ನು ಚಿಗುರಿಸಿಕೊಂಡು, ಉಲ್ಲಸಿತ ಮನಸ್ಸಿಗೆ ಉತ್ಸಾಹದ ಸ್ಪೂರ್ತಿಯನ್ನೇ ತುಂಬತ್ತಿದೆ, ಈ ಮಳೆಗಾಲದಲ್ಲಿ. ಅತ್ತ ಮಳೆಯ ಒಡರಿಗೆ ಚಳಿ ಚಳಿ ಎನಿಸಿದರೂ, ಇತ್ತ ಮಳೆಗಾಲ ನೀರಿನ ಲೋಕದ ಅಚ್ಚರಿಗಳು ಮನಸ್ಸಿನ ಕುತೂಹಲದ ಬಾಗಿಲುಗಳನ್ನು ತೆರೆಯುತ್ತಲೇ ಇರುತ್ತವೆ. ಇದೇಕೆ ಈಗ ಹೀಗೆ, ಇದೇಕೆ ಬೇಸಗೆಯಲ್ಲಿ ಇಲ್ಲ, ಇದೇಕೆ ಮಳೆಗಾಲ ಬರುವುದನ್ನೇ ಕಾಯ್ದು ಹೀಗಾಗಿದೆ, ಇದೇಕೆ ಈ ರೀತಿ ಚಿಗುರಿ ಹೊಸತನ ತಂದಿದೆ ಎಂಬ ನೂರಾರು ಪ್ರಶ್ನೆಗಳು ಮೂಡುವಂತೆ ಮಾಡುವ ಮಳೆಗಾಲವು, ಸುತ್ತಲಿನ ಭೂಜಗತ್ತಿನಲ್ಲಿ ಹೊಸ ಜೀವಸೃಷ್ಟಿಗೆ ನಾಂದಿ ಹಾಡುತ್ತದೆ ಮತ್ತು ಆ ಮೂಲಕ ಜಗತ್ತಿನ ಸೃಷ್ಟಿ ಕ್ರಿಯೆ ನಿರಂತರವಾಗಿ ಮುಂದುವರಿಯುವಂತೆ ಮಾಡುತ್ತದೆ.

ಮಳೆ ಬಿದ್ದು ಒಂದೆರಡು ತಿಂಗಳಿನಲ್ಲಿ ಜೀವ ತಳೆಯುವ ಲಕ್ಷ- ಕೋಟಿ ಸಸ್ಯಗಳಲ್ಲಿ ಮರಬಾಳೆ ಎಂಬಹೂವು ಉಂಟು (ಸೀತಾದಂಡೆ). ದಾರಿ ಬದಿಯ ಹಳೆಯ ಮರಗಳ ಬೊಡ್ಡೆಗಳಲ್ಲಿ ಹುಟ್ಟಿಕೊಳ್ಳುವ ಅಪ್ಪುಬಳ್ಳಿಯೊಂದರಲ್ಲಿ ಒಡಮೂಡುವ ನೇರಳೆ ಬಣ್ಣದ ಪುಟ್ಟ ಪುಟ್ಟಾ ನೂರಾರು ಹೂವುಗಳನ್ನು ತುಂಬಿಕೊಂಡ ಸುಮಾರು ಅರ್ಧ ಅಡಿ ಉದ್ದದ ಪುಷ್ಪ ಗುಚ್ಚ ಅದು. ಮಧ್ಯದ ಮೃದು ಕಾಂಡಕ್ಕೆ ನೂರಾರು ಚಂದದ ಹೂವುಗಳನ್ನು ಸೃಷ್ಟಿಕಾರನೇ ಓರಣವಾಗಿ ಪೋಣಿಸಿಟ್ಟ ಅದ್ಬುತ ಕಲಾಕೃತಿಯೇ ಆ ಸೀತಾದಂಡೆ. ನೆಲದಿಂದ ಒಂದೆರಡು ಮಾರು ಎತ್ತರದಲ್ಲಿ ಮರವೊಂದರ ಕಾಂಡಕ್ಕೆ ಅಂಟಿಕೊಂಡಿರುವ ಈ ಹೂಗುಚ್ಚವು ದೂರದಿಂದಲೇ ನೋಡುಗರ ಕಣ್ಣಿಗೆ ಕಾಣುವುದರಿಂದಾಗಿ ಥಟ್ಟನೆ ಗಮನ ಸೆಳೆಯುತ್ತದೆ. ಎಲೆಗಳೆ ಮರೆಯಾಗಿರುವ ಸುಂದರ ಆರ್ಕಿಡ್ ಹೂ ಅದು. ಮರದಿಂದ ಕಿತ್ತು ತಂದು ಒಂದೆರಡು ದಿನಗಳ ತನಕ ಇಟ್ಟರೂ ತಾಜಾತನ ಕಳೆದುಕೊಳ್ಳದೇ, ಅಚ್ಚರಿ ಮೂಡಿಸುತ್ತದೆ. ಅಣ್ಣಂದಿರು ಈ ಹೂವನ್ನು ಕಿತ್ತು ತಂಗಿಯರಿಗೆ ಕೊಂಡೊಯ್ದು ಕೊಡಬೇಕೆಂಬ ಆಶಯವೂ ನಮ್ಮೂರಲ್ಲಿ ಇದೆ!

ಗುಡ್ಡಗಳಲ್ಲಿ, ಹಾಡಿಗಳಲ್ಲಿ ಮಳೆಗಾಲಕ್ಕಾಗಿ ಕಾದು ಕುಳಿತು, ಮಳೆ ಬಿದ್ದ ನಂತರವಷ್ಟೇ ಹೂ ಬಿಡುವ ಕೆಲವು ಸಸ್ಯಗಳು ನಿಜಕ್ಕೂ ಅಚ್ಚರಿ ಮೂಡಿಸುವಂತಹವು. ಏಕೆಂದರೆ, ಈ ಮಳೆಗಾಲದಲ್ಲಿ ಸಸ್ಯಗಳು ಸಾಮಾನ್ಯವಾಗಿ ಹೂ ಬಿಡುವುದಿಲ್ಲ. ವಸಂತ ಮಾಸ ತಾನೆ ನಿಸರ್ಗವು ಹೂತಳೆಯುವ ಕಾಲ? ಬೇಸಗೆಯ ದಿನಗಳಲ್ಲಿ ಹೂ ಬಿಡುವ ಮಾವು ಬೇವು ಹೊಂಗೆ, ಗೇರು ಈ ರೀತಿಯ ಸಸ್ಯಕೋಟಿಯ ಶಿಸ್ತಿನ ಕ್ರಮವನ್ನೂ ಮೀರಿನಿಂತು, ಮಳೆ ಸುರಿಯುವಾಗ ಹೂ ಬಿಡುವ ಅಪರೂಪದ ಈ ಸಸ್ಯಗಳೇ ಅಚ್ಚರಿಯ ಆಗರ್. ಬರಡು ಗುಡ್ಡ ನೆಲವು ಮಳೆಯ ಸಿಂಚನದಿಂದ ಎಲ್ಲೆಡೆ ಹಸಿರಿನ ಹೊದಿಕೆ ಹೊದ್ದಂತಿದೆ - ಎಳೆ ಹಸಿರು ಹುಲ್ಲಿನ ಚಂದದ ಬಣ್ನವು ಅಲ್ಲೊಂದು ವಿಶಾಲ ಹಸಿರು ಚಿತ್ತಾರವನ್ನೇ ಬರೆದಿಟ್ಟಂತಿದೆ. ಅದರ ಮಧ್ಯದಲ್ಲಿ, ಅಲ್ಲಲ್ಲಿ ನಲದ ಮೇಲೆ ಅರಳಿದ ಬೆಳಿಯ ಹಳದಿಯ ಹೂವುಗಳು. ಹೆಸರೇ ತಿಳಿಯದ ಈ ಹೂವುಗಳು, ನಿಜಕ್ಕೂ ಕಾಡಿನ ಸುಮಗಳು. ಮಳೆ ಸುರಿದ ನಂತರವಷ್ಟೆ ಅರಳಿ, ಒಂದೆರಡು ದಿನ ಬಾಳುವ ಹೂವುಗಳ ಈ ಹೂವುಗಳ ದಿನಚರಿಯ ಮತ್ತು ಜೀವನಚಕ್ರದ ಉದ್ದೇಶವೇನೊ, ಅವುಗಳನ್ನು ಸೃಷ್ಟಿಸಿದಾತನಿಗೇ ಗೊತ್ತಿರಬಹುದು.

ಮತ್ತೊಂದೆಡೆ ಹೂವುಗಳೇ ಅಲ್ಲದ ಹೂವುಗಳು ಮಳೆಗಾಲದ ದಿನಗಳ ಭಾಗವಾಗಿರುವುದು ನಮ್ಮ ನಾಡಿನ ಒಂದು ಚೋದ್ಯವೇ ಸರಿ. ಈ ಹೂವುಗಳನ್ನು ತಯಾರಿಸುವುದು ಹೆಂಗೆಳೆಯರ ಕೆಲಸ. ಒಂದು ಪುಟ್ಟ ಡಬ್ಬಿ ಅಥವಾ ಹಂಡೆಯ ಅಡಿ, ಒಂದಷ್ಟು ಕೆಮ್ಮಣ್ಣು ಹರಡಿ, ಅದರಲ್ಲಿ ನಾಲ್ಕಾರು ಹಿಡಿ ಹುರುಳಿ ಕಾಳು ಅಥವಾ ಹೆಸರು ಕಾಳುಗಳನ್ನು ಚೆಲ್ಲಿ, ಮುಚ್ಚಿಡುತ್ತಾರೆ. ಆಷಾಡದ ಕೊನೆಯ ವಾರದಲ್ಲಿ ಇದನ್ನು ಬಿತ್ತಿ, ಶ್ರಾವಣದ (ಸೋಣೆ ತಿಂಗಳು) ಮೊದಲ ದಿನ, ಪಾತ್ರೆಯನ್ನು ತೆಗೆದು ನೋಡಿದರೆ, ಅಲ್ಲೆಲ್ಲಾ ನೂರಾರು ಹೊಂಬಣ್ಣದ ಹೂವುಗಳ ರೂಪದ ಸಸ್ಯಗಳು! "ಕೊಳ್ ಹೂ" ಬೆಳಕು ತಾಗದೇ, ಮೊಳಕೆ ಒಡೆದ ಧಾನ್ಯಗಳು, ತೆಳ್ಲಗೆ ನಾಲ್ಕಾರು ಇಂತು ಬೆಳೆದುಕೊಂಡು, ಚಿನ್ನದ ಬಣ್ಣದ ಎಲೆಗಳೊಂದಿಗೆ ಬಳುಕಾಡುತ್ತಿರುತ್ತವೆ. ಸೋನೆ ಹಿಡಿಯುವ ಸಂಕ್ರಾಂತಿಯಂದು ಹೊಸ್ತಿಲ ಪೂಜೆ ಮಾಡುವಾಗ ಹೊಸ್ತಿಲ ಮೇಲೆ ರಾರಾಜಿಸುವ ಕೊಳ್ ಹೂಗಳಿಗೆ ಪವಿತ್ರವಾದ ಸ್ಥಾನವಿದೆ ನಮ್ಮ ಕರಾವಳಿಯಲ್ಲಿ. ಹೊಸ್ತಿಲ ಪೂಜೆಯ ಜೊತೆ, ದೇವರಿಗೆ, ತಲೆಗೆ ಮುಡಿಯಲು ಸಹಾ ಉಪಯೋಗವಾಗುವ ಹೂವುಗಳಲ್ಲದ ಈ ಹೂವುಗಳ ನೋಟ ಅಪರೂಪದ್ದು. ಧಾನ್ಯದ ಗಿಡಗ್ಳಾಗಿ ಗದ್ದೆ ಬಯಲಿನಲ್ಲಿ ಬೆಳೆಯಬೇಕಾದ ಹುರುಳಿ,ಹೆಸರು ಮತ್ತಿತರ ಕಾಳುಗಳು ಕೊಳ್ ಹೂಗಳಾಗಿ ದೇವರ ಪೂಜೆಗೆ ಪಾತ್ರವಾಗುವ ಈ ಚೋದ್ಯ ನಮ್ಮ ನಾಡಿನ ಅಚ್ಚರಿಯೇ ಅಲ್ಲದೆ ಮತ್ತಿನ್ನೇನು?

ಮಳೆ ಸುರಿಯುತ್ತಿದ್ದರೂ, ಕಾಲ ಧರ್ಮ ಮೀರಿ, ಹಾಡಿ ಹಕ್ಕಲುಗಳಲ್ಲಿ ಜೊಂಪೆ ಜೊಂಪೆಯಾಗಿ ಸಿಗುವ ಹಣ್ಣುಗಳು ಸಹಾ ಸಣ್ಣನೆಯ ಒಂದು ವಿಸ್ಮಯವನ್ನು ಹುಟ್ಟಿಸುತ್ತದೆ. ಬೇಸಗೆ ಕಳೆದು, ಮಳೆ ಬರುವ ಕಾಲಕ್ಕೆ ಸಾಮಾನ್ಯವಾಗಿ ಹಣ್ಣುಗಳ ಶ್ರಾಯ ಮುಗಿಯಿತೆಂಬ ಸೂಚನೆ. ನಮ್ಮ ನಾದಿನ ನೇರಳೆ, ಜಂಬು ನೇರಳೆಗಳು ಆಷಾಡ ತಿಂಗಳಲ್ಲೂ ಕಾಡಿನಂಚಿನ ಮರಗಳಲ್ಲಿ ಜೊಂಪೆ ಜೊಂಪೆಯಾಗಿ ತೂಗುತ್ತಿರುತ್ತವೆ. ಪುಟ್ಟದು, ಪುಟಾಣೆ ಗಾತ್ರದ್ದು, ದೊಡ್ಡದು, ತುಂಬಾ ದೊಡ್ದದು, ಈ ರೀತಿಯ ಗಾತ್ರಗಳಲ್ಲಿ ಹಣ್ಣು ಬಿಡುವ ವಿವಿಧ ಪ್ರಬೇಧದ ನೇರಳೆ ಹಣ್ಣನ್ನು ವರ್ಷಕ್ಕೆ ಒಮ್ಮೆಯಾದರೂ ತಿನ್ನಬೇಕಂತೆ. ನೇರಳೆ ತಿಣ್ದು ನಾಲಗೆ ಪೂರ್ತಿ ನೇರಳೆ ಬಣ್ಣ ಮಾಡಿಕೊಂಡಾಗ, ಪ್ರಕೃತಿಯ ಸೃಷ್ಟಿಯ ಹಲವು ಬಣ್ಣಗಳಲ್ಲಿ ಒಂದನ್ನು ನಾವು ಅಕ್ಷರಶ: ತಿಂದಂತಾಯಿತು, ಅಲ್ಲವೆ? ಈ ಮೂಲಕ ಪ್ರಕೃತಿಯ ಭಾಗವಾಗಿಬಿಡುವ ಅವಕಾಶವೂ ನಮ್ಮದಾಗುತ್ತದೆ, ಈ ಆಷಾಡದ ಮಾಸದಲ್ಲಿ. -ಶಶಿಧರ ಹಾಲಾಡಿ

ಚಿತ್ರಕೃಪೆ

hitendrasinkar.com

Rating
No votes yet

Comments