ನೆನಪಿನ ಚಿತ್ರಕಲಾ ಶಾಲೆ-ಭಾಗ ೨: ಇದ್ದಂಗೇ ಬರೆಯೋದಂದ್ರೆ
(೪)
ಸ್ಥಿರಚಿತ್ರಣ ಅಥವ ಸ್ಟಿಲ್ ಲೈಫ್ ವಿಷಯವಿದ್ದಾಗ ನಾವೆಲ್ಲ ಸರಿಯಾದ ಸಮಯಕ್ಕೆ ಕಾಲೇಜಿಗೆ ಬರಬೇಕಿತ್ತು. ಇಲ್ಲದಿದ್ದರೆ ಅಲ್ಲಿ ವಿನ್ಯಾಸಗೊಳಿಸುತ್ತಿದ್ದ ಹಣ್ಣುಹಂಪಲುಗಳೇನೂ ಒಣಗಿ ಹಿಪ್ಪೆಯಾಗುತ್ತಿರಲಿಲ್ಲ ಬಿಡಿ. ಅದಕ್ಕೆ ಕಾರಣ ಅದಾಗಲೇ ಬಂದು ಚಿತ್ರರಚನೆಯಲ್ಲಿ, ಅಥವ ಅದಕ್ಕೆ ಹತ್ತಿರವಾದ ಕ್ರಿಯೆಗಳಲ್ಲಿ ತೊಡಗಿರುತ್ತಿದ್ದ ತರಲೆ ಗೆಳೆಯರು. ಸಾಧಾರಣವಾಗಿ ತರಲೆ ಗೆಳೆಯರು ನಮ್ಮ ಗುಂಪಿನವರೇ ಆದ್ದರಿಂದ, ಗಾಂಧಿಗಳು, ಗಾಂಧಿನಿಯರು ಮಾತ್ರ (ಅಂದರೆ ಹುಡುಗಿಯರು ಮಾತ್ರ ಎಂದೇನಲ್ಲ) ಶಿಸ್ತುಬದ್ಧವಾಗಿ ತಮ್ಮ ತಮ್ಮ (’ತಮ್ಮ ತಂಗಿ’ ಎಂದೂ ಅನ್ನಿರಿ ಬೇಕಿದ್ದರೆ) ಸ್ಥಾನಗಳಲ್ಲಿ ಬಂದು ಕುಳಿತು ಚಿತ್ರಬರೆಯಲು ತೊಡಗಿರುತ್ತಿದ್ದರು. ತರಲೆ ಗೆಳೆಯರಲ್ಲಿ ಒಬ್ಬನೇ ಒಬ್ಬ ಹುಡುಗ ತರಗತಿಗೆ ಬಂದರೂ ಸಾಕು, ಆಗ ಹುಡುಗಿಯರು ಟೀ ಕುಡಿಯಲು ಅಥವ ಊಟಕ್ಕೆ ಹೊರಗೆ ಹೋಗಬೇಕಾದ ಪಕ್ಷದಲ್ಲಿ ಒಬ್ಬಳಾದರೂ ಹಿಂದೆ ಉಳಿದುಬಿಟ್ಟಿರುತ್ತಿದ್ದಳು. ಅದಕ್ಕೆ ಕಾರಣ, ಅದೇ ಈ ಮೊದಲೇ ಹೇಳಿದೆನಲ್ಲ ’ತರಲೆ ಗೆಳೆಯರು ಹಣುಹಂಪಲುಗಳನ್ನು ಒಣಗಲು ಬಿಡುತ್ತಿರಲಿಲ್ಲ’ ಎಂದು, ಅದಕ್ಕೆ. ಹಣ್ಣುಗಳನ್ನು ಈ ಸಂದರ್ಭದಲ್ಲಿ ಹೆಣ್ಣುಗಳಿಗೆ ರೂಪಕವಾಗಿ ನೋಡುವ ಅವಶ್ಯಕತೆ ಇಲ್ಲ. ಯಾರೂ ಇಲ್ಲದಿದ್ದಲ್ಲಿ (ಅಂದರೆ ತರಳೆಯರು ಇಲ್ಲದಿದ್ದಲ್ಲಿ ಎಂದರ್ಥ) ಒಬ್ಬನೇ ಒಬ್ಬ ಗಂಡುತರಲೆ ಇದ್ದರೂ ಸಾಕು, ಇರೋ ಬರೋ ವಿನ್ಯಾಸಗೊಳಿಸಲಾದ ಹಣ್ಣುಗಳನ್ನೆಲ್ಲ ತಿಂದು ತೇಗಿಬಿಟ್ಟಿರುತ್ತಿದ್ದ. ’ವಿನ್ಯಾಸವೆಂಬ ಬಂಧದಿಂದ ಹಣ್ಣುಗಳನ್ನು ಮುಕ್ತಿಗೊಳಿಸಿದೆ’ ಎಂದು ಬೇರೆ ಕೊಚ್ಚಿಕೊಳ್ಳುತ್ತಿದ್ದರು ಅಂತಹ ತರಲೆಗಳು. ಅಥವ ಕೋತಿ ಮೊಸರು ತಿಂದು ಮೇಕೆ ಮೂತಿಗೆ ಒರೆಸಿದ ಹಾಗೆ ಎಂಬಂತೆ ತಿಂದು ತೇಗಿ, ಆ ವಸ್ತುಗಳನ್ನು ಇರಿಸಲು ತಳದಲ್ಲಿ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿರುತ್ತಿದ್ದ ಬಟ್ಟೆಗೆ ಕೈಗಳನ್ನು ಒರೆಸಿರುತ್ತಿದ್ದ.
’ಎಲ್ಲೋ ಏನೋ ತೆಂಗಿನಮರದ ಮೇಲಿನ ಇಟ್ಟಿಗೆಗೂ ಸ್ಟಿಲ್ ಲೈಫಿನ ವಸ್ತು-ಹಣ್ಣು-ಹಂಪಲುಗಳಿಗೂ ಎಂತದ್ದೋ ನಿಗೂಢ ಸಂಬಂಧವಿರಬೇಕು’ ಎಂದಿದ್ದ ಅನೇಖ ಒಮ್ಮೆ. ಓದಲು ಇಷ್ಟವಿಲ್ಲದೆ ಪಿಯುಸಿಯನ್ನು ಖಡ್ಡಾಯವಾಗಿ ಫೇಲ್ ಆಗಿ ಅಲ್ಲಿ ಕಲಾಶಾಲೆ ಸೇರಿದ್ದವರೇ ಹೆಚ್ಚಿದ್ದೆವು. ಓದು ತಲೆಗೆ ಹತ್ತದಿದ್ದರೂ ತಿಳುವಳಿಕೆಗೆ ಬರವಿರಲಿಲ್ಲ, ಕಾಮನ್ ಸೆನ್ಸ್ ಎಂಬುದು ಅನ್ಕಾಮನ್ ಏನೂ ಆಗಿರಲಿಲ್ಲ. ’ತೆಂಗಿನ ಮರದ ಮೇಲೆ ಇಟ್ಟಿಗೆ ಇರುವುದಾದಲ್ಲಿ, ಮನುಷ್ಯರನ್ನು ಮರ ಹತ್ತಿಸಿ ಅವರನ್ನು ಸ್ಟಿಲ್ ಲೈಫ್ ಎಂದು ಚಿತ್ರಿಸಲಾಗದೆ?’ ಎಂದು ಉತ್ತರ ರೂಪದ ಪ್ರಶ್ನೆ ಎಸೆದಿದ್ದ ಅನೇಖ. ಆತ ಯಾರಿಗೂ ಅರ್ಥವಾಗುತ್ತಿರಲಿಲ್ಲ. ಮೊದಲೆಲ್ಲ ಸರಿ ಇದ್ದನಂತೆ, ನಲ್ಲಸಿವನ್ ಎಂಬ ಮಲ್ಲು ಸೀನಿಯರನ ಸಹವಾಸವಾಗುವವರೆಗೂ. ಆಮೇಲಿನದ್ದೆಲ್ಲ ಬರೀ ಫಿಲಾಸಫಿ, ವೇದಾಂತ, ಥಿಯರಿ. ಅರ್ಥವಾಗದಿರುವುದಲ್ಲಿ ತಾರ್ಕಿಕವಾಗಿ ತನ್ನಲ್ಲಡಿಗಿಸಿಕೊಳ್ಳುವ ತಾಕತ್ತೇ ಈ ಮೂರಕ್ಕೂ ಇರುವ ಸಾಮ್ಯತೆ.
ಒಮ್ಮೆ ಹೀಗಾಯಿತು. ’ಸ್ಥಿಲ್ ಲೈಫ್’ ನಂತರದ ಅತಿ ಕಷ್ಟಕರವಾದ ವಿಷಯವೆಂದರೆ ’ಲೈಫ್ ಸ್ಟಡಿ’. ’ಮೊದಲನೆಯದ್ದು ಬದನೇಕಾಯಿಯನ್ನು ಬರೆಯುವ ಕ್ರಮವಾದರೆ, ಎರಡನೆಯದ್ದು ಬದನೇಕಾಯಿಯನ್ನುಳ್ಳಾತನನ್ನು ಬರೆವ ಪ್ರಕಾರ ಎಂದು ಮಮಾ ತನ್ನ ಜನ್ಮಜಾತವಾದ ಬಿಲೋ ದ ಬೆಲ್ಟ್ ಜೋಕನ್ನು ಎಸೆಯುತ್ತಿದ್ದ. ನಮಗೆ ದುಃಖವಾದಾಗಲೆಲ್ಲ ಈ ಬದನೇ-ಜೋಕನ್ನು ನೆನೆನೆನೆದು ನಗುತ್ತಿದ್ದೆವು. ’ಲೈಫ್ ಸ್ಟಡಿ’ ಎಂದರೆ ಒಬ್ಬ ವ್ಯಕ್ತಿ (ಮಾಡೆಲ್)ಯನ್ನು ಹಾಲಿನ ಮದ್ಯಭಾಗದಲ್ಲಿ ಸಂಯೋಜನಾ ಪೂರ್ಣವಾಗಿ ಹರಡಲಾಗಿರುತ್ತಿದ್ದ ಎತ್ತರದ ಮೇಜಿನ ಮೇಲೆ ಅರೆನಗ್ನಾವಸ್ಥೆಯಲ್ಲಿ ಕುಳ್ಳಿರಿಸಿರುತ್ತಿದ್ದರು, ಏಕೆಂದರೆ ಪೂರ್ಣನಗ್ನಾವಸ್ಥೆ ನಿಷಿದ್ಧವಾಗಿದ್ದರಿಂದ. ಆತನನ್ನು ಎರಡು ಮೂರು ದಿನಗಳ ಕಾಲ ’ಸ್ಟಡಿ’ ಮಾಡಬೇಕಿತ್ತು, ರೇಖಾಚಿತ್ರವಾಗಿ, ಇದ್ದಿಲಿನ ಆಕಾರವಾಗಿ, ಜಲವರ್ಣ ಚಿತ್ರವಾಗಿ ಮತ್ತು ತೈಲವರ್ಣ ಚಿತ್ರವಾಗಿ. ಅರ್ಧಮುಕ್ಕಾಲು ಗಂಟೆಗೊಮ್ಮೆ, ಸುಸ್ತಾದಾಗ ಆತನಿಗೆ ಐದು ನಿಮಿಷ ವಿರಾಮ ನೀಡಬೇಕಿತ್ತು. ಸುಸ್ತು ನಮಗೆ, ವಿರಾಮ ಆತನಿಗೆ. ಹೆಂಗಸರೂ ಮಾಡೆಲ್ಗಳಾಗಿ ಕುಳಿತುಕೊಳ್ಳುತ್ತಿದ್ದರು. ಆದರೆ ಪೂರ್ಣವಸ್ತ್ರಾವಸ್ಥೆಯಲ್ಲಿಯೇ. ಶಾಂತಿನಿಕೇತನ ಅಥವ ಬರೋಡಕ್ಕೆ ಕಲೆಯನ್ನು ಕಲಿಯಲು ಹೋಗಬೇಕಿತ್ತು ಎಂದು ಆಗ ಪರಿಷತ್ತಿನ ವಿದ್ಯಾರ್ಥಿಗಳೆಲ್ಲ ಕೈಕೈ ಹಿಸುಕಿಕೊಳ್ಳುತ್ತಿದ್ದುದಕ್ಕೆ ಎರಡನೇ ಕಾರಣ: ಅಲ್ಲಿ ವಿದ್ಯಾಭ್ಯಾಸ ಇಲ್ಲಿಗಿಂತಲೂ ಚೆನ್ನಿದೆ ಎಂಬುದು. ಮೊದಲನೆಯ ಕಾರಣ: ಅಲ್ಲಿ ಪೂರ್ಣಪ್ರಮಾಣದ ನಗ್ನ ಹೆಣ್ಣು ಮಾಡೆಲ್ಗಳು ಇರುತ್ತಿದ್ದರೆಂಬುದು. ಹೀಗೆ ಅಂದುಕೊಳ್ಳುತ್ತಿದ್ದ ನನ್ನ ಸಹಪಾಠಿಗಳಲ್ಲಿ ಹುಡುಗಿಯರೂ ಇದ್ದರು. ಮತ್ತು ಹುಡುಗರೂ ಸಹ. ಅಂದರೆ ಪೂರ್ಣಪ್ರಮಾಣದ ನಗ್ನ ಗಂಡು ಮಾಡೆಲ್ಗಳು ಅಲ್ಲಿರುತ್ತಿದ್ದರು ಎಂದೂ ಅರ್ಥವದು.
ಪರಿಷತ್ತಿನ ಆವರಣದಲ್ಲಿ ಅಥವ ಸುತ್ತಮುತ್ತಲೂ ಕೂಲಿಕೆಲಸ ಮಾಡುತ್ತಿದ್ದ ಕೆಲಸಗಾರರನ್ನು ಮಾಡೆಲ್ ಆಗಿ ಕುಳಿತುಕೊಳ್ಳಲು ಕರೆಯುತ್ತಿದ್ದೆವು. ’ರಾಮಯ್ಯ ಕಾಲೇಜು ನಿರ್ಮಾಣದಂತೆ ನಮ್ಮ ಕಾಲೇಜು’ ಎಂದು ನಾವೆಲ್ಲ ನಗಾಡುತ್ತಿದ್ದೆವು, ಅಷ್ಟು ಸುದೀರ್ಘವಾಗಿ ನಿರ್ಮಾಣಗೊಳ್ಳುತ್ತಿದ್ದವು ಅಲ್ಲಿನ ಕಟ್ಟಡಗಳು ಅಥವ ನಿರ್ಮಾಣವೆಂಬುದು ಸಹಜಸ್ಥಿತಿ ಎಂಬಂತಾಗಿಬಿಟ್ಟಿತ್ತು. ಜೆಲ್ಲಿಕಲ್ಲು ಚಚ್ಚುತ್ತಲೋ, ಇಟ್ಟಿಗೆ ಮಣ್ಣು ಹೊರುತ್ತಲೋ ದಿನವೆಲ್ಲ ಬಿಸಿಲಲ್ಲಿ ಬಾಡುವ ಬದಲು ಸುಮ್ಮನೆ ಒಳಗೆ ತಣ್ಣಗೆ ಕುಳಿತುಕೊಳ್ಳಬಹುದಲ್ಲ ಎಂದು ಕೆಲಸಗಾರರು ತಾಮುಂದು ನಾಮುಂದು ಎಂದು ಮಾಡೆಲ್ಗಳಾಗಲು ಬಂದುಬಿಡುತ್ತಿದ್ದರು. ಒಮ್ಮೆ ಬಂದವರು ಮತ್ತೆ ಬರುತ್ತಿರಲಿಲ್ಲ ಎಂಬುದೂ ಅಷ್ಟೇ ಸತ್ಯ. ಏಕೆಂದರೆ ಕತ್ತೆಕೆಲಸ ಮಾಡುವುದಕ್ಕಿಂತಲೂ ಸುಮ್ಮನೆ ಕುಳಿತುಕೊಳ್ಳುವುದು ಎಷ್ಟು ಕಷ್ಟದ ಕೆಲಸ ಎಂದು ಅರಿಯಲು ವಿಪಶ್ಯನ ಧ್ಯಾನವನ್ನೇನೂ ಮಾಡಬೇಕಿಲ್ಲ, ಸುಮ್ಮನೆ ಅರ್ಧಗಂಟೆ ಕಾಲ ಅಲ್ಲಾಡದೆ ಕುಳಿತರೆ ಸಾಕು. ಮಾಡೆಲ್ ಒಬ್ಬ (ಕೂಲಿ ಒಬ್ಬ/ಳು ಅನ್ನಿ) ಮಧ್ಯಾಹ್ನ ಹನ್ನೆರೆಡು ಗಂಟೆಗೆ, ಅಂದರೆ ಗಡಿಯಾರದ ಎರಡೂ ಮುಳ್ಳುಗಳು ಹನ್ನೆರಡರ ಸಂಖ್ಯೆಯ ಬಳಿ ಗರಡುಗಂಬಗಳಂತೆ ಒಟ್ಟಿಗೆ ಸೇರಿನಿಂತಾಗ, ಅದೇ ಗರಡುಗಂಬದಂತೆ ನಿಂತಿರುತ್ತಿದ್ದ ಅಥವ ಕುಳಿತಿರುತ್ತಿದ್ದ ಕೂಲಿಕೆಲಸದವ, ಅದೇ ಮಧ್ಯಾಹ್ನ ಹನ್ನೆರೆಡೂ ಕಾಲಿನಷ್ಟು ಹೊತ್ತಿಗೆ, ಗಡಿಯಾರದ ದೊಡ್ಡಮುಳ್ಳು ಹೋದ ದಿಕ್ಕಿಗೇ ಮಾಡೆಲ್ ಬಾಗಿಬಿಟ್ಟಿರುತ್ತಿದ್ದ/ಳು. ಅವರಿಗೆ ವಿರಾಮ ಕೊಡದೆ ನಾವು ಚಿತ್ರವನ್ನು ಮುಂದುವರೆಸಿದ್ದಾಗೊಮ್ಮೆ, ಹನ್ನೆರಡೂವರೆಯಷ್ಟರಲ್ಲಿ ಆತ/ಕೆ ನಿಂತಂತೆಯೆ ಆತನ/ಕೆಯ ಕೆಳಗಿನ ಖುರ್ಚಿಯೇ ಒಮ್ಮೆ ಬಿದ್ದುಬಿಟ್ಟಿತ್ತು!
ಲೈಫ್ಸ್ಟಡಿ ಕ್ಲಾಸಿನ ವಿರಾಮದ ಕಾಲಕ್ಕೆ ಅನೇಖ ಮತ್ತು ಬೀಡಾ ತಮ್ಮ ಕಲೆಯ ಥಿಯೊರೈಸೇಷನ್ ಅನ್ನು ಮುಂದುವರೆಸುತ್ತಿದ್ದುದು ಹೀಗೆ:
ಅಲ್ಲ ಬೀಡಾ. ಕೂಲಿ ಕೆಲಸದವರನ್ನು ಮಾಡೆಲ್ ಆಗಿ ಎರಡು ರೀತಿಯಲ್ಲಿ ಎಕ್ಸ್ಪ್ಲಾಯಿಟ್ ಮಾಡುತ್ತಿದ್ದೇವೆ ನಾವುಗಳು. ಒಂದು: ಅವರನ್ನು ಬಿಸಿಲಿನಿಂದ ಬಚಾವು ಮಾಡಿ, ಸೋಂಬೇರಿಗಳನ್ನಾಗಿಸುತ್ತ, ಶ್ರೀಮಂತ ಖಾಯಿಲೆಯಾದ ಡಯಾಬಿಟೀಸಿನೆಡೆ ದೂಡುತ್ತಿದ್ದೇವೆ. ಎರಡನೆಯದ್ದುಃ ಅವರಿಗೆ ದೈಹಿಕ ಶ್ರಮಕ್ಕೂ, ಕಲಾತ್ಮಕ ಶ್ರಮಕ್ಕೂ ಒಂದೇ ವಿಧವಾದ ವೇತನ ನೀಡುತ್ತಿದ್ದೇವೆ. ಇದು ಅನ್ಯಾಯವಲ್ಲವೆ?
ಕಲೆ ಅನ್ನೋದೆ ಮೂಲತಃ ಹಿಪ್ಪೋಕ್ರೆಟಿಕಲ್ ಅಲ್ಲವೆ. ಕಲೆಯನ್ನು ಪರಿಶುದ್ಧವೆಂದು ನಂಬಿದರೆ ಮಾತ್ರ ಈ ತೆರನಾದ ನೈತಿಕ ಪ್ರಶ್ನೆಗಳು ಎದುರಾಗುವುದು. ಕಲೆಯನ್ನು ಅಲ್ಲಿ ಯಾಕೆ ಇರಿಸುತ್ತೀಯ?
ಎಲ್ಲಿ?
ಅದೇ ನೈತಿಕತೆಯ ಟೇಬಲ್ಲಿನ ಮೇಲೆ? ಎಂದು ಉತ್ತರಕ್ಕೆ ಕಾಯದೆ ಬೀಡಾ ತನ್ನ ಲೂನಾ ಹತ್ತಿ, ಇಲಿಯ ಮೇಲಿನ ಗಣಪನ ಸವಾರಿ ಹೊರಟುಬಿಡುತ್ತಿತ್ತು.
ಯಾರೋ ಆಧ್ಯಾತ್ಮದ ಸ್ವಾಮಿಯೊಬ್ಬರು ತಾವಾಗಿ ಲೈಫ್ ಸ್ಟಡಿಗೆ ಮಾಡೆಲ್ ಆಗಿ ಕುಳಿತುಕೊಳ್ಳಲು ಬಂದಿದ್ದರು ಒಮ್ಮೆ, ಮೂರು ದಿನಗಳ ಕಾಲ, ನಮ್ಮ ಯೂನಿವರ್ಸಿಟಿ ಪರೀಕ್ಷೆಗೆ. ನೀಳ ಕೂದಲಿನ (ಮುಖದ ಮೇಲೆಯೂ ಸಹ... ಕೇವಲ ತಲೆಯಲ್ಲಲ್ಲ) ಜುಬ್ಬಾಪಂಚೆಧಾರಿಯಾದ ಅವರು ರಾಮಕೃಷ್ಣಮಠದ ಸ್ವಾಮಿ ಮತ್ತು ಆರ್ಟ್ ಆಫ್ ಲಿವಿಂಗಿನ ಸ್ವಾಮಿಯೊಬ್ಬರು ಒಂದೇ ದೇಹದಲ್ಲಿ ಲಿವಿಂಗ್ ಟುಗೆದರ್ ಆದರೆ ಹೇಗೋ ಹಾಗಿದ್ದರು. ಕಣ್ಮುಚ್ಚಿ ಕುಳಿತ ಅವರು ಗಂಟೆಗಟ್ಟಲೆ ಅಲ್ಲಾಡಲಿಲ್ಲ, ಮಿಸುಕಾಡಲಿಲ್ಲ, ನಿದ್ರಿಸುತ್ತಿದ್ದಾರೋ ಧ್ಯಾನಿಸುತ್ತಿದ್ದಾರೋ ತಿಳಿಯಲಿಲ್ಲ. ನಾವು ಅವರ ಚಿತ್ರಬಿಡಿಸಿ, ಸುಲಿದು, ಬ್ರೇಕ್ ತೆಗೆದುಕೊಂಡು, ಚಹಾ ಸೇವಿಸಿ ಮಾತುಕಥೆಯ ನಡುವೆ, ಹಿಂದಿರುಗಿದಾಗಲೂ ಅವರು ಹಾಗೆಯೇ ಇದ್ದರು. ಅವರ ಸಿಟ್ಟಿಂಗ್ ಚಾರ್ಜ್ ತೆಗೆದುಕೊಳ್ಳಲಿಲ್ಲ, ಏಕೆಂದರೆ ಅವರು ನಿಂತೇ ಪೋಸು ನೀಡುತ್ತಿದ್ದರು. ನಮಗೆ ಸುಸ್ತಾಗದಂತೆ ಧ್ಯಾನಿಸುವುದು ಹೇಗೆ, ತಾಳ್ಮೆ ಕಳೆದುಕೊಳ್ಳದಿರುವುದು ಹೇಗೆ ಎಂದು ಹೇಳಿಕೊಡುತ್ತೇನೆ ಎಂದು ಅವರು ನೀಡಿದ ಆಫರನ್ನು ಕೇಳುವ ತಾಳ್ಮೆ ಇಲ್ಲದವರಾಗಿದ್ದೆವು ನಾವು. ’ಅವರೊಬ್ಬರೇ ಪಕ್ಕಾ ಹನ್ನೆರೆಡು ಗಂಟೆಯ ಹಾಗೆ ಗರಡುಗಂಬದಂತೆ ಕುಳಿತಿದ್ದದ್ದು’ ಎಂದು ಬೀಡಾ ಮಚ್ಚುಗೆಯಿಂದ ಹೇಳಿದ್ದಕ್ಕೆ ’ಅದನ್ನೇ ಬಾರಾ-ಬಜೆ ಎನ್ನುವುದು’ ಎಂದು ಮಮಾ ಬಲಗೈಯನ್ನು ಗಂಬದಂತೆ ಎತ್ತರಿಸಿ, ಎಡಗೈಯಿಂದ ಗರಡಿನಂತೆ ಬಲಗೈಯನ್ನು ಹಿಡಿದು, ತಿದ್ದಿದ್ದ.
*
ಒಮ್ಮೆ ಮಾರನೇ ದಿನ ಪರೀಕ್ಷೆ ಇದ್ದ ದಿನ. ನಾಳೆಗೆ ಇಂದೇ ಮಾಡೆಲ್ಲನ್ನು ನಿರ್ಣಯಿಸಬೇಕಿತ್ತು. ಅದರ ಜವಾಬ್ದಾರಿ ಆಯಾ ಬ್ಯಾಚಿನ ವಿದ್ಯಾರ್ಥಿಗಳದ್ದೇ. ಹೊರಗೆಲ್ಲ ಓಡಿಯಾಡಿ ಕಲಾತರಗತಿಗೆ ಸಂಬಂಧಿಸಿದ ಕೆಲಸ ಮಾಡಬೇಕಾಗಿ ಬಂದಾಗೆಲ್ಲ ವಿದ್ಯಾರ್ಥಿಗಳೆಂದರೆ ಗಂಡುಹುಡುಗರು ಎಂದೇ ಅರ್ಥ ಬರುತ್ತಿತ್ತು. ಹಾಗೆ ನಿರ್ಧರಿಸುತ್ತಿದ್ದವರು ನಮ್ಮಲ್ಲಿದ್ದ ಒಬ್ಬ ಮೇಡಂ. ಅವರ ಹೆಸರು ಪ್ರಜ್ಞಾಪೂರ್ವಕವಾಗಿ ಮರೆತು ಹೋಗಿದೆ. ’ಗಂಡುಹುಡುಗರು’ ಎಂದರೆ ಹೆಣ್ಣಿಗರಂತಿರದಿದ್ದ ಗಂಡೆದೆಯ, ವ್ಯವಹಾರ ಜ್ಞಾನವಿದ್ದ ಹುಡುಗರು ಎಂದೇ ಅವರ ವ್ಯಾಖ್ಯೆ. ನಮ್ಮ ತರಗತಿಯಲ್ಲಿದ್ದ ಹುಡುಗಿಯರೆಲ್ಲ, ಅಂದರೆ ಕಲೆಯನ್ನು ಕಲಿಯಲು ಬಂದಿದ್ದ ಹುಡುಗಿಯರೆಲ್ಲರೂ ನಯನಾಜೂಕಿನಲ್ಲಿ ಬೆಳೆದವರು ಎಂದೇ ಆಗಿನ ನಮ್ಮ ಭಾವನೆಯಾಗಿತ್ತು, ಅಂತಹವರು ಬಿಸಿಲಿನಲ್ಲಿ ಬಣ್ಣಬಣ್ಣದ ಛತ್ರಿ ಹಾಗೂ ನೀರಿನ ಅಥವ ಜ್ಯೂಸಿನ ಬಾಟೆಲಿ ಇಲ್ಲದೆ, ಜೊತೆಗೊಬ್ಬ ಬೆಂಗಾವಲಿಗೆ ಹುಡುಗನಿಲ್ಲದೆ ಹೊರಕ್ಕೆ ಕಾಲಿಡುತ್ತಿರಲಿಲ್ಲ. ’ಅವರೆಲ್ಲ ನಯನಾಜೂಕಿನವರಲ್ಲ, ಎಲಿಟಿಸ್ಟ್ ಗುರುವೆ’ ಎಂದು ಮಮಾ ಇತ್ತೀಚೆಗೆ ನನ್ನನ್ನು ತಿದ್ದಿದ್ದ. ’ಅವರು ಎಲಿಟಿಸ್ಟ್ ಎಂದು ನನಗೆ ತಿಳುವಳಿಕೆ ನೀಡಲು ಇಷ್ಟು ದಿನ ಏಕೆ ತೆಗೆದುಕೊಂಡೆ?’ ಎಂದು ಕೇಳಿದ್ದಕ್ಕೆ, ’ಎಲಿಟಿಸ್ಟ್ ಎಂಬ ಪದದ ಪರಿಚಯವಾಗಿದ್ದೇ ನನಗೆ ಪರಿಷತ್ತಿನಲ್ಲಿ ಓದು ಮುಗಿಸಿದ ಮೇಲಲ್ಲವೆ?’ ಎಂದು ಪ್ರಶ್ನೆರೂಪದ ಉತ್ತರ ನೀಡಿದ್ದನಾತ.
ಆಗೆಲ್ಲ ತೆಂಗಿನ ಮರದಲಿ ಇಟ್ಟಿಗೆ ಇರಿಸುವವರೆಲ್ಲ ಹುಡುಗರೇ ಎಂದು ನಮ್ಮ ಮೇಷ್ಟ್ರು ನಿರ್ಧರಿಸಲು ಕಾರಣವಗಿದ್ದದ್ದು ಆಗಿನ ಉಡುಪುಗಳೇ ಇರಬೇಕು. ಹುಡುಗಿಯರು ಲಂಗದಾವಣಿ ಅಥವ ಫ್ರಾಕು ಹಾಕಿಕೊಂಡು ಬಂದಲ್ಲಿ, ದಕ್ಷಿಣ ಭಾಷೆಯವರಲ್ಲದ ಉತ್ತರ ಭಾರತೀಯರು ಮಾತ್ರ ಚೂಡಿದಾರ್ ಹಾಕಿಕೊಳ್ಳುತ್ತಿದ್ದರು. ಅದು ಅಂದಿನ ಲೇಟೆಸ್ಟ್ ಫ್ಯಾಷನ್. ಹುಡುಗರೆಲ್ಲರೂ ಈಗಿನಂತೆ ಹೆಚ್ಚು ಬಾಲ್ಡಿಗಳಲ್ಲದೆ ಇದ್ದದ್ದರಿಂದ, ಕೂದಲು ಇದ್ದದ್ದರಿಂದ, ಸ್ಟೆಪ್ ಕಟ್ ಮಾಡಿಸಿ, ಕಿವಿಯ ಮೇಲೆಲ್ಲ ಕೂದಲನ್ನು ವಿಂಡೋ ಸ್ಕ್ರೀನಿನಂತೆ ಬಿಟ್ಟುಕೊಳ್ಳುತ್ತಿದ್ದೆವು. ಅಗಲವಾದ ಕಿವಿಯಿಂದ ಇರಿಸುಮುರಿಸಾದವರಿಗೆ ಸ್ಟೆಪ್ ಕಟ್ ಒಂದು ವರಧಾನವಾಗಿತ್ತು. ದೊಡ್ಡ ಕಾಲರಿನ ಜಾಕೆಟ್ಟಿನಂತಹ ಶರ್ಟು, ಬೆಲ್ ಬಾಟಮ್ ಪ್ಯಾಂಟು ತೊಡುವಾಗ, ಬೆಲ್ಸ್ಗೆ ಕೆಳಗೆ ಜಿಪ್ ಇದ್ದಲ್ಲಿ, ಡಬಲ್ ಸ್ಟಿಚ್ ಶರ್ಟ್ ಹೊಲಿಸಿದ್ದಲ್ಲಿ (’ನಾ ನಿನ್ನ ಮರೆಯಲಾರೆ’ ಅಣ್ಣಾವ್ರ ತರಹ), ಸೈಕಲ್ ತುಳಿವಾಗ ಸೀಟಿನಿಂದ ಎಡಕ್ಕೆ ಅರ್ಧ ಅಡಿ ಕೆಳಕ್ಕೆ ಪೃಷ್ಠವನ್ನು ಇರಿಸಿಕೊಂಡು ತುಳಿಯುತ್ತ ಬಂದಾತನೇ ನಿಜವಾದ ಅಣ್ಣಾವ್ರ ಭಕ್ತ ಎಂದು ಪರಿಗಣಿತವಾಗುತ್ತಿದ್ದರು. ಒಮ್ಮೆ ಸೀಟಿನ ಎಡಕ್ಕೆ ಜಾರಿ ತುಳಿವ ಬದಲು ಬಲಕ್ಕೆ ಜಾರಿ ತುಳಿಯುತ್ತ ತಾನು ಅಣ್ಣಾವ್ರ ಭಕ್ತ ಎಂದು ಹೇಳಿಕೊಂಡಿದ್ದ ಜ್ಯೂಸ್ ಮುರುಳಿಯನ್ನು ಎಲ್ಲರೂ ಪ್ರಜ್ಞಾಪೂರ್ವಕವಾಗಿ ಎಡಗೈಗಳಲ್ಲಿಯೇ ಬಡಿದುಹಾಕಿದ್ದರು.
ಸರಿ. ನಾಳೆಯ ಲೈಫ್ ಸ್ಟಡಿ ಪರೀಕ್ಷೆಗಾಗಿ ಇಂದೇ ಮಾಡೆಲ್ ಬುಕ್ ಮಾಡಲು ಮಮಾ, ಬೀಡಾ, ಪ್ರಶ್ನಾಮೂರ್ತಿ, ಜ್ಯೂಸ್ ಮುರಳಿ, ನಾಯಿ ಮುರಳಿ, ಗಿಡ್ಡು ಮತ್ತಿತರರು ಹೊರ ಹೋದೆವು, ಎಲ್ಲಿಗೆಂದು ತಿಳಿಯದೆ. ಸೀದಾ ಶಿವಾನಂದ ಸ್ಟೋರ್ಸಿನ ಪಕ್ಕದಲ್ಲಿದ್ದ ಕುಮಾರ್ಸ್ ಟೀ ಸ್ಟಾಲಿನ ಹತ್ತಿರ ಚಾಯ್ ಕುಡಿಯುತ್ತಿದ್ದೆವು. ಎಲ್ಲಿಯಂತ ಹುಡುಕಲಿ ಮಾಡೆಲನ್ನು ಎಂದು ಮಾತನಾಡಿಕೊಳ್ಳುತ್ತಿದ್ದಾಗ, ’ಒಳ್ಳೆ ಬೆಗ್ಗರ್ಸ್ ಕಥೆಯಾಯ್ತಲ್ಲ’ ಅಂದ ಮುರುಳಿ. ಜ್ಯೂಸೋ ನಾಯಿಯೋ ಸ್ಪಷ್ಟವಾಗಿ ಗೊತ್ತಿಲ್ಲ, ಅಂದರೆ ಜ್ಯೂಸ್ ಮುರುಳಿಯೋ ನಾಯಿ ಮುರಳಿಯೋ ಗೊತ್ತಿಲ್ಲ, ಹಾಗೆ ಸೂಚನೆ ಇತ್ತವನು. ಕೂಡಲೇ ಆರನೇ ಇಂದ್ರೀಯವನ್ನು ಮಿಕ್ಕೈದರದಕ್ಕಿಂತಲೂ ಚುರುಕಾಗಿಟ್ಟಿರುತ್ತಿದ್ದ ಮಮಾ ಹೇಳಿದ, ’ಅಲ್ಲಿ ಕುಳಿತಿರೋ ಭಿಕ್ಷುಕನನ್ನೇ ಏಕೆ ಕೇಳಬಾರದು. ಮಖಾ ಅಥವ ದಾಡಿಮೀಸೆಯಡಿ ಮುಚ್ಚಿಟ್ಟಿಕೊಂಡಿರೋ ಮಖಾ ನೋಡು ಒಳ್ಳೆ ಕಡೆದ ಶಿಲ್ಪದ ಹಾಗಿದ್ದಾನೆ’ ಎಂದವನೇ ನಮ್ಮೆಲ್ಲರೊಡನೆ ಆತನೆಡೆ ದೌಡಾಯಿಸಿದ. ಆಗ (೧೯೮೮ರ ಸುಮಾರಿಗೆ. ಅದು ೧೯೮೬ ಆಗಿರಲೂಬಹುದು. ಮಿನಿಮಂ ಎರಡು ವರ್ಷ ವ್ಯತ್ಯಾಸ ಇಲ್ಲದಿದ್ದರೆ ’ಸುಮಾರು’ ಎಂಬ ಪದಕ್ಕೆ ನಿರ್ದಿಷ್ಟತೆಯ ಅಪಮಾನವಾಗುವುದಿಲ್ಲವೆ) ದಿನವಿಡೀ ಮಾಡೆಲ್ ಆಗಿ ಕುಳಿತುಕೊಳ್ಳಲು ಆತನಿಗೆ ಸಿಗುತ್ತಿದ್ದುದು ಕೇವಲ ಇಪ್ಪತ್ತೈದು ರೂಪಾಯಿಗಳು. ನಾವೆಲ್ಲ ಎರಡೆರೆಡು ರೂಗಳನ್ನು ಸೇರಿಸಿ ಇನ್ನೊಂದು ಇಪ್ಪತ್ತೈದು ರೂಪಾಯಿ, ಚಹಾ, ಊಟ ಕೊಡಿಸುತ್ತಿದ್ದೆವು ಆತನಿಗೆ.
ಎಷ್ಟು ಕೊಡ್ತೀರ? ಕೇಳಿದ ಭಿಕ್ಷುಕ.
ಅಂಗೇ ಸುಮ್ನೆ ಕುಂತಿರದು ದಿನವೆಲ್ಲ ಎಂದ ಮಮಾ.
ಊನ್ಕಣಯ್ಯ, ಈಗ ನಾನು ಮಾಡ್ತಿರದೂ ಅದೇಯ. ಎಷ್ಟು ಕೊಡ್ತೀರ? ಹಠ ಬಿಡಲಿಲ್ಲ ಭಿಕ್ಷುಕ.
ಮೂರು ದಿನ ಕೆಲ್ಸ ನೋಡು, ಸುಮ್ನೆ ಕುತ್ಕಳದು. ಊಟ ತಿಂಡಿ ಎಲ್ಲ ಕೊಡುಸ್ತೀವಿ
ಒಳಕ್ಕೋಗದೆಲ್ಲ ಅಲ್ಲೇ ಕುತ್ಕಂಡು ಮಾಡ್ಬೋದು. ಹೊರಕ್ಕಾಕಕ್ಕಾದ್ರೂ ಹೊರಕ್ಕೋಗ್ಬೇಕಲ್ಲ. ಎಷ್ಟು ಕೊಡ್ತೀರಿ ಯೋಳ್ರೀ ಸಾಮಿ?
ಕಾಲೇಜಿಂದ ಇಪ್ಪತ್ತೈದು ರೂಪಾಯಿ ಕೊಡ್ತಾರೆ. ನಾವೆಲ್ಲ ಸೇರಿ ಒಂದಷ್ಟು ಕೊಡ್ತ್ರೀವಿ ಎಂದು ಹಿಂದುಮುಂದು ನೋಡಿದ ಬೀಡಾ.
ಸಾಮಾಜಿಖ ನ್ಯಾಯ ದೊರಖಿಸಿಕೊಡುತ್ತೇವೆ ನಿಮಗೆ, ಇವರೆ ಎಂದು ಅನೇಖ ಬ್ರಾಹ್ಮಣೀಯವಾದ, ನಗರೀಕೃತವಾದ ಕನ್ನಡದಲ್ಲಿ ಮಾತನಾಡುವ ಭರದಲ್ಲಿ ಭಿಕ್ಷುಕನಿಗೆ ವೇದೋಪನಿಷತ್ತನ್ನು ಊದತೊಡಗಿದ.
ಓಗ್ರಲೇ. ಸುಮ್ನೆ ಈ ಮರ್ದ ಕೆಳ್ಗೆ ಕುಂತೇ ಅದ್ಕಿಂತ್ಲೂ ಜಾಸ್ತಿ ಸಂಪಾದಿಸ್ತೀನಿ. ಆ ಕಾಸ್ ಕೊಡೋರ್ನೂ ಬಂದು ನಂಕೂಡೆ ಇಲ್ಲಿ ಕುಂದ್ರಕ್ಕೇಳ್ರಿ, ಒಳ್ಳೆ ಬೇವಾರ್ಸಿ ಸವಾಸ ಆಯ್ತು. ಭಿಕ್ಷೆ ಕೊಡ್ತಾರೆ ಅಂತ ಮಾತಾಡ್ಸಿದ್ರೆ, ಭಿಕ್ಷುಕ್ನತ್ರನೇ ಬಿಕ್ನಾಸಿಗಳ್ ತರಾ ಆಡ್ತವೆ ಎಂದು ದೊಣ್ಣೆ ಬೀಸಿದ್ದನ್ನು ತಪ್ಪಿಸಿಕೊಂಡು ನಾವೆಲ್ಲ ಓಡುವಂತೆ ನಡೆದುಕೊಂಡು ಬಂದರೂ, ಸುತ್ತಮುತ್ತಲಿನವರ ದೃಷ್ಟಿಬಂಧನದಿಂದ ಬಚಾವಾಗಲು ಆಗಲಿಲ್ಲ. ಹರಿದು, ಚಿಂದಿಯುಟ್ಟ ಭಿಕ್ಷುಕನೊಬ್ಬ ತನ್ನ ನೈಸರ್ಗಿಕ ಸ್ವಭಾವವಾದ ದೈನ್ಯಾವಸ್ಥೆಯನ್ನು ಬದಿಗಿರಿಸಿ ಸಾಕಷ್ಟು ಠಾಕುಠೀಕಾಗಿ ಬಣ್ಣಬಣ್ಣದ ವಸ್ತ್ರ ಧರಿಸಿದ್ದ ನಮ್ಮ ಮೇಲೆ ಜೋರುಮಾಡಿದ್ದು ಮಿಕ್ಕವರಿಗೆಲ್ಲ ವರ್ಣಮಯ ಮನರಂಜನೆಯಾಗಿ, ನಮಗದು ಸಂಕೋಚವಾಗಿ, ಒಂದು ವಾರಕಾಲ ಕುಮಾರ್ಸ್ ಟೀ ಸ್ಟಾಲಿನ ಹತ್ತಿರ ಸುಳಿಯಲಿಲ್ಲ, ನಾವುಗಳು. ಲಾಸ್ ಆಗಿದ್ದು ಕುಮಾರ್ಸ್ ಟೀ ಸ್ಟಾಲಿನವನಿಗೇ.
(೫)
ಅಂತೂ ಒಳ್ಳೆ ಡಿಮ್ಯಾಂಡಿನಲ್ಲಿದ್ದ, ಕಡೆದ ಶಿಲ್ಪದಂತಿದ್ದ ಭಿಕ್ಷುಕ ಮಾರನೇ ದಿನ ಮಾಡೆಲ್ ಆಗಿ ನಮ್ಮ ಬೆಂಗಳೂರು ಯೂನಿವರ್ಸಿಟಿ ಪರೀಕ್ಷೆಗೆ ಬಂದು ಕುಳಿತ ಗತ್ತು ಭಿಕ್ಷುಕರ ದೊರೆಯದ್ದು ಇದ್ದಂತಿತ್ತು. ಹೊಸದಾಗಿ ನಿರ್ಮಾಣಗೊಳ್ಳುತ್ತಿದ್ದ ಪರಿಷತ್ತಿನ ಕಟ್ಟಡವು ಆತನದ್ದೆ ಎಂಬಂತೆ ಆತ ಪೋಸು ಕೊಟ್ಟು ಕುಳಿತಿದ್ದ. ಕರಿ ಮುಖ, ದೊಡ್ಡ ಕಣ್ಣು, ಬಿಳಿಯ ಕೂದಲು ಸ್ನಾನವಿಲ್ಲದೆ ಧೂಳಿನಿಂದ ಕೊಳೆಯಾಗಿ, ಕೊಳೆ ಕೊಳೆತು ವರ್ಣಿಸಲಸದಳವಾದ ವಿಶೇಷ ಹಳದಿ-ಕಂದು ವರ್ಣಕ್ಕೆ ತಿರುಗಿತ್ತು. ಮಾಡೆಲ್ ಆಗಿ ಕುಳಿತುಕೊಳ್ಳಲು ಬಂದಾತ ತನ್ನ ತೋರಿಕೆಯೊಂದಿಗೆ (ಅಪಿಯರೆನ್ಸ್) ವಾಸನೆಯನ್ನೂ ಬಿಟ್ಟಿಯಾಗಿ, ಸುಗ್ರಾಸವಾಗಿ ತಂದುಬಿಟ್ಟಿದ್ದ. ಹುಡುಗಿಯರು ಆಗೆಲ್ಲ ಲೇಟೆಸ್ಟ್ ದಿರಿಸು ಧರಿಸಿ ಅದರ ಸೆರಗನ್ನು ಮೂಗಿಗೆ ಹಿಡಿದುಕೊಳ್ಳುತ್ತಿದ್ದರು. ಆಗಿನ ಲೇಟೆಸ್ಟ್ ಫ್ಯಾಷನ್ ಚೂಡೀದಾರ. ಅದನ್ನು ಕಂಡು ಭಿಕ್ಷುಕನು ಹುಡುಗಿಯರು ಮೂಗು ತಿರುವಿಕೊಂಡಂತೆ ತನ್ನ ಮುಖ ತಿರುಗಿಸಿಕೊಂಡು ಕುಳಿತುಬಿಟ್ಟ. ಆತನಿಗೆ ಕಣ್ಣಗೀಜನ್ನೂ ಒರೆಸಿಕೊಳ್ಳಲು ಬಿಡಲಿಲ್ಲ ಹುಡುಗರು, ನ್ಯಾಚ್ಯುರಲ್ ಆಗಿ, ಆರ್ಟ್ ಸಿನೆಮ ಇದ್ದಂತೆ ಇರುತ್ತದೆ ಬಿಡಿ ಅದು ಎನ್ನುತ್ತ. ನಾವೆಲ್ಲ ಒಳ್ಳೆಯ ಮಾಡೆಲ್ ಸಿಕ್ಕಿದ ಎಂದು ಖುಷಿಯಾಗಿ ಆತನ ದಾಡಿ, ಮೀಸೆ, ತೆಂಗಿನ ಜುಂಜಿನಂತಿದ್ದ ಆತನ ಹುಬ್ಬು, ಮುಖದ ಸುಕ್ಕುಗಳು ಆತನ ಚರ್ಮದ ವರ್ಣಾವರ್ಣದೊಳಗೆ ಮರ್ಜ್ ಆದ ರೀತಿ, ಮೂಗಿನಿಂದ ಹೊರಬರುತ್ತಿದ್ದ ಕೂದಲು ಮೀಸೆಯೊಂದಿಗೆ ಸಮೀಕರಣಗೊಳ್ಳುತ್ತಿದ್ದುದು-ಇವೆಲ್ಲವನ್ನೂ ಸಹ ರೇಖಾಚತ್ರಗಳಾಗಿ ಬರೆದು, ನಾಳೆ ನಾಡಿದ್ದರಲ್ಲಿ ಜಲವರ್ಣ ತುಂಬಿದರಾಯಿತು ಎಂದು ಖುಷಿಯಾಗಿ ಮನೆಗೆ ತೆರಳಿದೆವು. ಹಾಗೆ ಮಾಡುವ ಮುನ್ನ ಆ ಭಿಕ್ಷುಕನಿಗೂ ಖುಷಿಯಾಗಲಿ ಎಂದು ಕೈತುಂಬಾ ಕಾಸು ಕೊಟ್ಟೆವು. ರಾತ್ರಿವರೆಗೂ ಮೆಜೆಸ್ಟಿಕ್ಕಿನಲ್ಲಿ ಗೋಣಿ ತಾಟು ಹಾಕಿ ಕುಂತಿದ್ದರೆ ಇದಕ್ಕಿಂತಲೂ ಹೆಚ್ಚು ಕಾಸು ಸಿಕ್ತಿತ್ತು ಎಂದು ಗೊಣಗಿಕೊಂಡೇ ಆತ ನಾಳೆ ಬರುವುದಾಗಿ ಆಣೆಪ್ರಮಾಣ ಮಾಡಿದ ಮೇಲೆಯೆ ಆತನನ್ನು ಹೋಗಲು ನಾವು ಬಿಟ್ಟಿದ್ದೆವು.
ನಾಳೆ ಬೆಳಿಗ್ಗೆ ಸ್ವಲ್ಪ ತಡವಾಗಿ ಪರೀಕ್ಷೆಗೆ ಬಂದೆ. ತಡವಾಗಿ ಬರಲು ಅನುಮತಿ ಇರುವ ಪರೀಕ್ಷೆಯನ್ನು ಪ್ರಾಕ್ಟಿಕಲ್ ಪರೀಕ್ಷೆ ಎನ್ನುತ್ತೇವೆ ಕಲಾಶಾಲೆಗಳಲ್ಲಿ. ಅದಾಗಲೇ ಎಲ್ಲರೂ, ಹೆಣ್ಮಕ್ಕಳನ್ನೂ ಸೇರಿದಂತೆ, ತಮ್ಮ ತಮ್ಮ ರೇಖಾಚಿತ್ರಗಳಿಗೆ ವರ್ಣಗಳನ್ನು ತುಂಬುವಲ್ಲಿ ಬಿಸಿಯಾಗಿದ್ದಂತೆ ನಟಿಸುತ್ತಿದ್ದರು. ಆದರೆ ಕದ್ದುಮುಚ್ಚಿ ನನ್ನನ್ನೇ ನೋಡುತ್ತಿದ್ದರು. ಇಲ್ಲ, ನಾನೇನೂ ಸುರಸುಂದರಾಂಗ ಎಂದೇನೂ ನನಗೆ ಆಗ ಭ್ರಮೆ ಇರಲಿಲ್ಲ, ಈಗಿನಂತೆಯೇ. ತಪ್ಪಾಗಿ ಬೇರೆಯವರ ಕೃತಿಯ ಎದಿರು ಏನಾದರೂ ನಿಂತಿದ್ದೇನೆಯೋ ಎಂದು ಪರೀಕ್ಷಿಸಿ ನೋಡಿದೆ. ನನ್ನದೇ ಶೈಲಿಯಲ್ಲಿ ಗೆಳೆಯ ರಾಜಗೋಪಾಲ್ ಕೂಡ ರೇಖಾಚಿತ್ರ ರಚಿಸುತ್ತಾನೆ ಎಂದು ನಾನೂ, ಆತನ ಶೈಲಿಯನ್ನು ನಾನು ಅನುಕರಿಸುತ್ತೇನೆ ಎಂದು ಆತನೂ-ಇಬ್ಬರೂ ಸಹ ತಪ್ಪರ್ಥ ಮಾಡಿಕೊಂಡಿದ್ದೆವು. ಇಲ್ಲ, ನನ್ನದೇ ರೇಖಾಚಿತ್ರವಿದ್ದ ಹ್ಯಾಂಡ್ಮೇಡ್ ಶೀಟನ್ನು ನನ್ನದೇ ಡ್ರಾಯಿಂಗ್ ಬೋರ್ಡಿಗೆ ಅಂಟಿಸಿ, ನನ್ನದೇ ಈಸಲ್ಲಿನ ಮೇಲೆ ಇರಿಸಿ ಅದರ ಮುಂದೆ ಈಗ ನಿಂತಿದ್ದೇನೆಂದು ಖಾತ್ರಿ ಮಾಡಿಕೊಂಡೆ.
ಮೂರು ಕಾಲುಗಳ, ಕ್ಯಾಮರದ ಸ್ಟ್ಯಾಂಡ್ ಟ್ರೈಪಾಡ್ ಅನ್ನು ಹೋಲುವಂತಹ ಮರದ ಕಾಲುಗಳನ್ನುಳ್ಳ, ತನ್ನ ಟಾರ್ಸೋ ಭಾಗದಲ್ಲಿ ಡ್ರಾಯಿಂಗ್ ಬೋರ್ಡ್ ಇರಿಸಲು ಅನುವು ಮಾಡಿಕೊಡುವ ಮಾನವ-ನಿರ್ಮಿತ ಪರಿಕರವನ್ನು ’ಈಸಲ್’ ಅನ್ನುತ್ತೇವೆ. ಸಿನೆಮದೊಳಗಿನ ಕಲಾವಿದರೆಲ್ಲ ನಿಂತು ಚಿತ್ರರಚಿಸುತ್ತಾರಲ್ಲ, ಪ್ಯಾಲಟ್ ಅನ್ನು ಎಡಗೈಯಲ್ಲಿ ಹಿಡಿದು ಬಲಗೈಯಲ್ಲಿ ಬ್ರಷ್ ಹಿಡಿದ ಬಲಗೈ ಕಲಾವಿದರು, ಅಂತಹವರ ಮುಂದೆ ಇರುವುದೇ ಈಸಲ್.
ಕುಳಿತು ಚಿತ್ರ ಬರೆವವರು ಕತ್ತೆಯೊಂದನ್ನು ಇಟ್ಟಿಗೆಯನ್ನು ತಯ್ಯಾರಿಸುವ ಚೌಕಟ್ಟಿನಂತಹದ್ದರೊಳಗಿರಿಸಿ, ಅದುಮಿ ಈಚೆ ತೆಗೆದರೆ ಅದರ ಆಕಾರ ದೊರಕುತ್ತದಲ್ಲ, ಅದರಲ್ಲಿ ಅ ಕತ್ತೆ ಬಣ್ಣಗಳನ್ನೆಲ್ಲ ಕಪ್ಪುಬಿಳುಪಾಗಿಸಿ, ಡ್ರಾಯಿಂಗ್ ಬೋರ್ಡಿನ ಮೇಲು ಭಾಗವನ್ನು ಆ ಮುದ್ರಿತ ಕತ್ತೆಯ ಕಿವಿಯ ಭಾಗಕ್ಕೆ ಆನಿಸಿ, ಬೋರ್ಡಿನ ತಳವನ್ನು ಕತ್ತೆಯ ಬೆನ್ನಿಗಿರಿಸಿ, ಅದರ ಹಿಂದೆ ನಾವು ಕುಳಿತು ಚಿತ್ರ ಬಿಡಿಸುತ್ತೇವಲ್ಲ ಅದನ್ನು ಕಲಾಶಾಲೆಗಳಲ್ಲಿ ಅಕ್ಷರಶಃ ’ಡಾಂಕೀಸ್’ ಎನ್ನುತ್ತೇವೆ. ನಿಂತು ಚಿತ್ರ ಬರೆದರೆ ’ಯೂ ಆರ್ ಅಟ್ ಈಸಲ್’, ಕುಳಿತು ಚಿತ್ರಿಸಿದರೆ ’ನೀವು ಕತ್ತೆ ಸವಾರಿ ಮಾಡುತ್ತಿದ್ದೀರಿ’ ಎಂಬರ್ಥವು ಕಲಾಶಾಲೆಗಳಲ್ಲಿ ಬಹಳ ಪ್ರಸಿದ್ಧವಾಗಿತ್ತು ಆಗೆಲ್ಲ. ಆಗೆಲ್ಲ ಕಲಾಶಾಲೆಯಲ್ಲಿ ಓದಿದ್ದೇವೆ ಎಂದು ಅದಾರಾದರೂ ಬಡಾಯಿ ಕೊಚ್ಚಿಕೊಂಡರೆ ಡಾಂಕಿ ಮತ್ತು ಈಸೆಲ್ ನಡುವೆ ವ್ಯತ್ಯಾಸ ಕೇಳಿ. ಅವರ ಬಂಡವಾಳ ಬಯಲಾಗಿಬಿಡುತ್ತದೆ.
(೬)
ಮತ್ತೆ ಮತ್ತೆ ನನ್ನ ಸಹಪಾಠಿಗಳಾಗಿದ್ದ ಹುಡುಗಿಯರು ನನ್ನನ್ನೇ ನೋಡುತ್ತಿದ್ದ ಮೊದಲ ಹಾಗೂ ಕೊನೆಯ ಪ್ರಸಂಗವದು. ’ಅವ್ರು ನನ್ನ ಎಂಗಾದ್ರೂ ನೋಡ್ಕೊಳ್ಳಲಿ. ಈ ಕೋರ್ಸ್ ಇರುವುದೇ ನೋಡುವುದನ್ನು ಕಲಿವುದಕ್ಕಲ್ಲವೆ’ ಎಂದು ಚಿತ್ರಬಿಡಿಸಲು ಆರಂಭಿಸಿದೆ. ಇದ್ದಕ್ಕಿದ್ದಂತೆ ಗಾಭರಿಗೊಂಡೆ, ಮಾಡೆಲನ್ನು ನೋಡಿ, ಏನ್ಮಾಡಿಕೊಂಡು ಬಂದಿದ್ಯಪ್ಪಾ? ಎಂದು ಸಹಜವಾಗಿ ಉದ್ಘರಿಸಿಬಿಟ್ಟೆ. ಹುಡುಗಿಯರೆಲ್ಲರೂ ಘೊಳ್ಳೆಂದು ನಕ್ಕಿಬಿಟ್ಟರು. ಕೆಲವರು ’ಗುಡ್, ನಾಟ್ ಬ್ಯಾಡ್’ ಎಂದರು. ನಂತರ ಸಾವರಿಸಿಕೊಂಡು, ನಾನೂ ಆ ಹುಡುಗಿಯರ ತಂಡ ಸೇರಿಬಿಟ್ಟೆ, ನನಗಿಂತಲೂ ತಡವಾಗಿ ಬರುವವರ ಪ್ರತಿಕ್ರಿಯೆ ಗಮನಿಸಲು. ಅಷ್ಟರಲ್ಲಿ ಅಲ್ಲಿದ್ದೂ ಇನ್ನೂ ಸರಿಯಾಗಿ ಗಮನಿಸದಿದ್ದ, ನೋಡಿದರೂ ತಮ್ಮ ನೆನಪಿನಿಂದಲೆ ಮಾಡೆಲಿನ ಚಿತ್ರಕ್ಕೆ ಬಣ್ಣಬಳಿಯುತ್ತಿದ್ದ ಕೆಲವರೂ ಗಾಭರಿಗೊಂಡು, ಈಗ ಕಣ್ಣುಜ್ಜಿಕೊಂಡು ಮೊದಲ ಬಾರಿಗೆಂಬಂತೆ ಮಾಡೆಲ್ ಭಿಕ್ಷುಕ ಮುದುಕನನ್ನು ನೋಡತೊಡಗಿದರು.
ಆಗಿದ್ದದ್ದಿಷ್ಟು: ಹಿಂದಿನ ದಿನ, ದಿನವಹಿ ಮಾಡೆಲ್-ಭಿಕ್ಷುಕನ ರೇಖಾಚಿತ್ರವನ್ನು ಐದಾರು ಗಂಟೆ ಕಾಲ ಪ್ರಮಾಣಬದ್ಧವಾಗಿ ಬರೆದು, ತಿದ್ದು ತೀಡಿದ್ದ ರೇಖಾಚಿತ್ರದಲ್ಲಿ ಮೀಸೆದಾಡಿ ತೊಟ್ಟ, ಕೊಳಕುಬಟ್ಟೆಯನ್ನು ಹುಲುಸಾಗಿ ತನ್ನ ಶರೀರಕ್ಕೇ ಅಂಟಿಸಿಕೊಂಡುಬಿಟ್ಟಿದ್ದ ವಿವರವನ್ನೆಲ್ಲ ನಾವೆಲ್ಲಾ ವಿದ್ಯಾರ್ಥಿಗಳು ರಚಿಸಿ, ಮರುದಿನ ಬಣ್ಣಬಳೆಯಲು ಅನುವುಗೊಳಿಸಿದ್ದೆವಲ್ಲ? ಆಂ, ಆ ಚಿತ್ರಗಳಿಗೆ ಏನೂ ಆಗಿರಲಿಲ್ಲ. ಆ ಭಿಕ್ಷುಕ ಮಾತ್ರ ಹಿಂದಿನ ದಿನ ನಾವು ಅಳತೆಮೀರಿ ಆತನಿಗೆ ಕೊಟ್ಟಿದ್ದ ಭಕ್ಷೀಸನ್ನು ಕೊಂಚವೂ ವೇಸ್ಟ್ ಮಾಡದಂತೆ, ಹೊಸ ಅಂಗಿ ಪಂಚೆ ಕೊಂಡು, ಅಳತೆ ಮೀರಿ ಬೆಳೆದಿದ್ದ ತನ್ನ ಮೀಸೆ ದಾಡಿಯನ್ನು ಸಮಾ ಶೇವಿಂಗ್ ಮಾಡಿ, ಹೊತ್ತಿಗೆ ಮುನ್ನ ಇಂದು ಬೆಳಿಗ್ಗೆ ಬಂದು ಮಾಡೆಲ್ ಅವತಾರದಲ್ಲಿ ಬೋಳುರಾಜನಂತೆ ವಿರಾಜಮಾನನಾಗಿಬಿಟ್ಟಿದ್ದ! ಎಲ್ಲರೂ-ಒಬ್ಬರನ್ನೂ ಹೊರತುಪಡಿಸಿದಂತೆ, ಎಲ್ಲರೂ-ಆ ಮುದುಕನ ದೇಹದ ವರ್ಣ, ಆಯಾಮ, ಚರ್ಮದ ಹದ ಮುಂತಾದುವನ್ನು ನೆನಪಿನಿಂದಲೇ ಚಿತ್ರಿಸಿ ಪರೀಕ್ಷೆ ಪೂರೈಸಿದೆವು. ಮತ್ತು ಆತ ಎದಿರುಗಿದ್ದಾಗಲೆ ಆತನನ್ನು ನೋಡದೆ, ಆತನ ಲೈಫ್ (ಅನ್ನು) ಸ್ಟಡಿ ಮಾಡಿದ್ದೆವು. ಏಕೆಂದರೆ ಆತನಿಗೆ ನೆನ್ನೆಯಿದ್ದ ಮೀಸೆ ದಾಡಿ ಇರಲಿಲ್ಲ, ನಿನ್ನೆಯ ವಸ್ತ್ರಭೂಷಣವನ್ನು ಆತ ತೊಟ್ಟಿರಲಿಲ್ಲ. ’ಲೈಫ್ ಸ್ಟಡಿ ತರಗತಿ ಎಂದರೆ ಎದುರಿಗಿರುವವರನ್ನು, ಇದ್ದ ಹಾಗೇ ಬರೆವುದು, ಅದೂ ಅವರು ಎದುರಿದ್ದಾಗ್ಯೂ’ ಎಂಬ ತತ್ವ ಅಂದು ಸುಳ್ಳಾಯಿತು. ಅಥವ ಚಿತ್ರವೊಂದಕ್ಕೆ ಅದರೊಳಗಿನ ವಸ್ತುವೇ ತೊಡಕಾದದ್ದು ಹೀಗೆ.
ದಾವಣಗೆರೆಯ ಕಲಾಶಾಲೆಯಲ್ಲಿ ಓದಿದ್ದ ಗೆಳೆಯನೊಬ್ಬ ಲೈಫ್ ಸ್ಟಡಿಯ ಬಗ್ಗೆ ಹೇಳಿದ ಸ್ವಾರಸ್ಯ ಇನ್ನೊಂದು ರೀತಿ ಕುತೂಹಲಕರವಾಗಿದೆ: ನಾಲ್ಕೈದು ಕಲಾವಿದ್ಯಾರ್ಥಿಗಳು, ಬೇರೆ ಬೇರೆ ಊರುಗಳಿಂದ ಬಂದು ದಾವಣಗೆರೆಯಲ್ಲಿ ರೂಮು ಮಾಡಿಕೊಂಡಿದ್ದಾಗ ನ್ಯೂಡ್ ಸ್ಟಡಿ ಮಾಡಬೇಕೆಂಬ ಆಸೆಯಿಂದ ಒಬ್ಬ ಮಾಡೆಲ್ಲನ್ನು ಹುಡುಕತೊಡಗಿದರಂತೆ. ಕೊನೆಗೆ ಸಂಜೆಯ ಹೊತ್ತಿನಲ್ಲಿ ಮುಖ್ಯ ಬಸ್ ಸ್ಟಾಪಿನ ಹಿಂದೆ ಒಬ್ಬ ವೇಶ್ಯೆಯನ್ನು ಮಾತನಾಡಿಸಿ ಆಕೆಗೆ ಲೈಫ್ ಸ್ಟಡಿಯ ವಿಷಯ ತಿಳಿಸಿದರಂತೆ. ಆ ಸಂಭಾಷಣೆ ಹೀಗಿತ್ತು:
ನಾವು ಆರ್ಟ್ ಸ್ಕೂಲ್ ವಿದ್ಯಾರ್ಥಿಗಳು
ಕಲಾವಿದರಿಗೇನೂ ನಾನು ನಿಷಿದ್ಧಳಲ್ಲ.
ಹಾಗಲ್ಲ. ನೀವು ಸುಮ್ಮನೆ ಕುಳಿತುಕೊಳ್ಳಬೇಕು ಅಷ್ಟೇ.
ಮಿಕ್ಕಿದ್ದೆಲ್ಲ ನೀವೆ ಮಾಡ್ತಿರ? ಆಗ್ಲಿ ಬಿಡಿ. ಆದ್ರೆ ಬೆಲೆಯೇನು ಕಡಿಮೆಯಾಗಲ್ಲ.
ಅಲ್ಲಲ್ಲ. ಬಟ್ಟೆ ಬಿಚ್ಚಿ ನ್ಯೂಡ್ ಆಗಿ ಸುಮ್ಮನೆ ಕುಳಿತುಕೊಳ್ಳಬೇಕು. ನಾವು ಮೊದಲು ಸ್ಕೆಚ್ ಮಾಡ್ತೇವೆ. ಆಮೇಲೆ ರೆಂಡರ್ ಮಾಡ್ತೇವೆ. ಆಮೇಲೆ ಕ್ಲೇನಲ್ಲಿ ಸ್ಕಲ್ಪ್ಚರ್ ಮಾಡ್ತೇವೆ.
ಆ ವರ್ಸೆಗಳೆಲ್ಲ ನನಗೆ ನೀವೆ ಹೇಳಿಕೊಡ್ಬೇಕು. ನಂಗದೆಲ್ಲ ಬರಾಕಿಲ್ಲ.
ಅದೇ ನೀವು ಸುಮ್ನೆ ಕುಳಿತುಕೊಳ್ಳಬೇಕಷ್ಟೇ.
ಎಷ್ಟೊತ್ತು?
ಅರ್ಧ ಗಂಟೆಗೊಂದ್ಸಲ ಐದು ನಿಮಿಷ ಬ್ರೇಕ್ ಕೊಡ್ತೇವೆ
ಒಬ್ಬೊಬ್ರೂ ಅರ್ಧರ್ಧ ಗಂಟೆ ಮಾಡ್ತೀರ?!
ಇಲ್ಲ ದಿನವೆಲ್ಲ ಮಾಡ್ತೇವೆ. ಮತ್ತು ಒಟ್ಟಾಗಿ ಮಾಡ್ತೇವೆ.
ಅಯ್ಯಪ್ಪ ನಂಕೈಲಿ ಆಗಾಕಿಲ್ಲಪ್ಪ, ಎಂದು ಗಾಭರಿಯಾದ ಆಕೆಯ ಮುಖಭಾವವನ್ನು ನೋಡಿ ಗಾಭರಿಯಾಗುವ ಸರದಿ ಹುಡುಗರದಾಗಿತ್ತು. ಹುಡುಗರು ಮತ್ತು ಆಕೆ ಇಬ್ಬರೂ ತಮ್ಮ ತಮ್ಮ ವೃತ್ತಿಯ ದೃಷ್ಟಿಯಿಂದಲೇ ಇಡೀ ಸಂಭಾಷಣೆಯನ್ನು ಅರ್ಥೈಸಿಕೊಂಡಿದ್ದರಿಂದ ಉಂಟಾಗಿದ್ದ ಎಡವಟ್ಟು ಅದು.
ಸರಿ, ಎಲ್ಲ ಅಪಾರ್ಥವೂ ಸರಿಪಡಿಸಲಾದ ಮೇಲೆ, ಆಕೆ ಅವರ ಜೊತೆಗೇ ಸ್ವಲ್ಪ ದೂರ ನಡೆದುಬರುತ್ತ ಬೆಲೆ-ಅಂದರೆ ಸಿಟ್ಟಿಂಗ್ ಚಾರ್ಜ್--ಮಾತನಾಡುತ್ತಿದ್ದಳು. ತನ್ನ ವೃತ್ತಿಧರ್ಮವನ್ನು ಪೂರ್ಣವಾಗಿ ಪರಿಪಾಲಿಸುವಂತೆ ಆಕೆ, ಅವರೆಲ್ಲರೂ ಹೊರಡುವ ಸಮಯಕ್ಕೆ ಕೇಳಿದ ಕೊನೆಯ ಮಾತು, ಅಷ್ಟೇನಾ ಅಥವ ಸುಮ್ಮನೆ ಕುಳಿತ ಮೇಲೆ ಮತ್ತೇನಾದ್ರೂ ಕೆಲಸ ಮಾಡುವುದೇನಾದರೂ ಇರುತ್ತದೆಯ? ಎಂದು!//
Comments
ಉ: ನೆನಪಿನ ಚಿತ್ರಕಲಾ ಶಾಲೆ-ಭಾಗ ೨: ಇದ್ದಂಗೇ ಬರೆಯೋದಂದ್ರೆ