ಚಿಲ್ಲರೆ ರಾದ್ಧಾಂತ

ಚಿಲ್ಲರೆ ರಾದ್ಧಾಂತ

ಭಾರತಕ್ಕೆ ಸ್ವಾತಂತ್ರ್ಯ ದೊರಕಿ ಆರು ದಶಕಗಳೇ ಸಂದರೂ ಹಲವಾರು ಮೂಲಭೂತ ಸಮಸ್ಯೆಗಳು ನೀಗಿಲ್ಲ. ಬದಲಾಗಿ ಸಮಸ್ಯೆಗಳ ಪಟ್ಟಿ ವೈಕುಂಠ ಏಕಾದಶಿಗೆ ವೆಂಕಟರಮಣ ಸ್ವಾಮಿ ದೇವಸ್ಥಾನದ ಮುಂದೆ ಕಾಣುವ ಭಕ್ತರ ಸಾಲಿನಂತೆ ಉದ್ದವಾಗುತ್ತಲೇ ಇರುವುದು ಪ್ರಜಾಪ್ರಭುತ್ವದ ನಿಜವಾದ ದುರಂತ. ಕುಡಿಯುವ ನೀರು, ವಿದ್ಯುತ್, ಸಾರ್ವಜನಿಕ ಶೌಚಾಲಯ, ಪ್ರಾಥಮಿಕ ಆರೋಗ್ಯದಂತಹ ಅನೇಕ ಸಂಗತಿಗಳು ಸಮಸ್ಯೆಗಳ ಪಟ್ಟಿಯಲ್ಲಿ ಆಕಾಶದಲ್ಲಿನ ಧ್ರುವನಕ್ಷತ್ರದಂತೆ ಖಾಯಂ ಸ್ಥಾನವನ್ನು ಪಡೆದುಕೊಂಡಿವೆ!. ಎಲ್ಲಾ ವಿಧದಿಂದಲೂ ಈ ಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಹತೆಯಿರುವ ಇನ್ನೊಂದು ವಿಷಯವೆಂದರೆ ಚಿಲ್ಲರೆ ಕಾಸಿನ ಅಭಾವ!!.
 
    ಅರೇ! ಇದೇನು? ನೀರು, ವಿದ್ಯುತ್ ಗಳಂತಹ ಘನಘೋರ ಸಮಸ್ಯೆಗಳೊಂದಿಗೆ ಇಂತಹ ಚಿಲ್ಲರೆ ವಿಷಯವನ್ನು ಸಮೀಕರಿಸಬಹುದೇ? ಎಂದು ಅನೇಕರು ಮೂಗು ಮುರಿಯಬಹುದು. ಬಹುಕೋಟಿ ಹಗರಣಗಳ ಸುನಾಮಿಯ ಮಧ್ಯೆ ಇದ್ಯಾವ ಸೀಮೆಯ ತೊಪ್ಪಲು ಎಂದು ಸಾರಾಸಗಟಾಗಿ ತಳ್ಳಿಹಾಕಿಬಿಡಬಹುದು.  ಚಿಲ್ಲರೆಯ ವಿಷಯದಲ್ಲಿ ಇವರ ಲೆಕ್ಕಾಚಾರ ತಪ್ಪೆಂದು ತೋರಿಸಲು ಯಾವ ಆಣೆ-ಪ್ರಮಾಣಗಳೂ ಬೇಡ! ಈ ಚಿಕ್ಕ ಉದಾಹರಣೆ ಸಾಕು. ಒಂದು ಲೀ ಪೆಟ್ರೋಲಿನ ಬೆಲೆ ರೂ. 69.80 ಎಂದಿಟ್ಟುಕೊಳ್ಳೋಣ. ಐವತ್ತು ಪೈಸೆಯ ನಾಣ್ಯವೇ ದುರ್ಲಭವಾಗಿರುವಾಗ ಇಪ್ಪತ್ತು ಪೈಸೆಯನ್ನು ಯಾರೂ ಕೊಡುವುದಿಲ್ಲ, ನಾವೂ ಕೇಳುವ ಹಾಗಿಲ್ಲ. ಒಂದು ಸಮೀಕ್ಷೆಯ ಪ್ರಕಾರ ಬೆಂಗಳೂರು ನಗರವೊಂದರಲ್ಲಿಯೇ ವರ್ಷಕ್ಕೆ 864 ಮಿಲಿಯನ್ ಲೀಟರ್ ಪೆಟ್ರೋಲ್ ಬಳಕೆಯಾಗುತ್ತದಂತೆ. ಹಾಗಾದರೆ ಒಂದು ಲೀಟರಿಗೆ ಇಪ್ಪತ್ತುಪೈಸೆಯಂತೆ ವರ್ಷಕ್ಕೆ 17.3 ಕೋಟಿ!. ಎಲ್ಲರೂ  ಪ್ರತಿ ಸಲವೂ ಕೇವಲ ಒಂದೇ ಲೀಟರ್ ಹಾಕಿಸಿಕೊಳ್ಳುವುದಿಲ್ಲದಿದ್ದರೂ, ಇಷ್ಟೊಂದು ಭಾರೀ ಹಣ  ನ್ಯಾಯವಾಗಿ ಯಾರಿಗೆ  ಸಲ್ಲಬೇಕು? ಇದೇ ಲೆಕ್ಕವನ್ನು ನಿತ್ಯಬಳಕೆಯ ಹಾಲು, ಸೋಪು, ಔಷದಿ ಮತ್ತಿತರೆ ಸಾಮಗ್ರಿಗಳಿಗೂ ಅನ್ವಯಿಸಿದರೆ ಚಿಲ್ಲರೆಯ ವಾಮನವತಾರದ ದರ್ಶನವಾದೀತು!!

    ಪುರಾಣದ ನಾರದ ಕಲಹಪ್ರಿಯ.  ದೇವ-ದಾನವರ  ಮಧ್ಯೆ ಜಗಳ ತಂದು  ಪುಕ್ಕಟೆ ಮನೋರಂಜನೆ ಪಡೆಯುತಿದ್ದವನು.  ಬಹುಶಃ ಈಗ ಈತ ತನ್ನ ಕೆಲಸವನ್ನು  ಚಿಲ್ಲರೆ ಕಾಸಿಗೆ ಹೊರಗುತ್ತಿಗೆ ನೀಡಿರಬೇಕು.  ಯಾವುದೇ ಅಂಗಡಿಯಲ್ಲಿ ವ್ಯಾಪಾರಿ ಮತ್ತು ಗ್ರಾಹಕನ ನಡುವೆ ವಾಕ್ಸಮರ ನೆಡೆಯುತ್ತಿದ್ದರೆ ಸ್ವಲ್ಪ ಗಮನಿಸಿ.  ಅದು ಖಂಡಿತವಾಗಿಯೂ ಚಿಲ್ಲರೆಗಾಗಿಯೇ ಹೊರತು ವಸ್ತುವಿನ ಗುಣಮಟ್ಟಕ್ಕಲ್ಲ!  ಈಗಂತೂ ಯಾವ ಅಂಗಡಿಯವರೂ ಐವತ್ತು ಪೈಸೆಯನ್ನು ಕೊಡುವುದಿಲ್ಲ. ಮೊದಮೊದಲು ನಾನು  ಇಂತಹ ಸಮಯದಲ್ಲಿ ಐವತ್ತು ಪೈಸೆಗಾಗಿ  ಹಕ್ಕೊತ್ತಾಯ ಮಂಡಿಸುತ್ತಿದ್ದೆ. ಆಗ ಅಂಗಡಿಯವನು  ನನ್ನತ್ತ ಕೆಂಗಣ್ಣು ಬೀರಿ ತಿರಸ್ಕಾರದಿಂದ ಕಳಪೆ ಗುಣಮಟ್ಟದ  ಚಾಕೋಲೇಟೊಂದನ್ನು ನನ್ನ ಮುಖಕ್ಕೆ ಹಿಡಿಯುತ್ತಿದ್ದ.  ನನಗಾದರೋ ಅಲರ್ಜಿಯಿಂದಾಗಿ ವೈದ್ಯರು ಚಾಕೋಲೇಟನ್ನು ತಿನ್ನಬಾರದೆಂದು ತಾಕೀತು ಮಾಡಿದ್ದರು.   ಹೀಗಾಗಿ ಅಂಗಡಿಯವನ ಬಳಿ ಚಾಕೋಲೇಟ್ ಬೇಡವೆಂದಕೂಡಲೇ ಜಗಳ ಪ್ರಾರಂಭ!! ಒಂದು ವೇಳೆ ನಾನೇ ಆತನಿಗೆ ಐವತ್ತು ಪೈಸೆ ಕಡಿಮೆ ಕೊಟ್ಟರೆ ಸುಮ್ಮನಿರುತ್ತಾನೆಯೇ? ಅಥವಾ ನಾನೇ ಐವತ್ತು ಪೈಸೆಗೆ ಬದಲಾಗಿ ಚಾಕೋಲೇಟ್ ಕೊಟ್ಟರೆ ತೆಗೆದುಕೊಳ್ಳುತ್ತಾನೆಯೇ? ಎಂಬ ವಾದವನ್ನು ಯಾರೂ ಕೇಳಿಸಿಕೊಳ್ಳುತ್ತಿರಲಿಲ್ಲ. ಅಂಗಡಿಯವನ ಕತೆ ಬಿಡಿ. ಉಳಿದ ಗಿರಾಕಿಗಳೂ ನನ್ನ ಮಾತಿಗೆ ಬೆಂಬಲ ಕೊಡುತ್ತಿರಲಿಲ್ಲ. ಇವನ್ಯಾರೋ ಸಣ್ಣಬುದ್ಧಿಯ ತರಲೆ ಆಸಾಮಿ. ನಮ್ಮ ಸಮಯವನ್ನೂ ಹಾಳು ಮಾಡುತ್ತಿದ್ದನೆಯೆಂಬ ಭಾವದಲ್ಲಿ ಎಲ್ಲರೂ ನನ್ನನ್ನು ದುರುಗಿಟ್ಟಿಕೊಂಡು ನೋಡುವವರೇ!!

ಹೀಗೆ ಈ ಚಿಲ್ಲರೆ ಕಾಸಿನಿಂದಾಗಿ ನಮ್ಮ ಮನೆಯ ಸುತ್ತಮುತ್ತಲಿನ ಅಂಗಡಿಯವರೆಲ್ಲರೂ ನನಗೆ ಕಿರಿಕ್  ಪಾರ್ಟಿ ಯೆಂದು ಬಿರುದು ದಯಪಾಲಿಸಿದ ಮೇಲೆ ನಾನೇ ಚಾಕೋಲೇಟಿಗೆ ರಾಜಿ ಮಾಡಿಕೊಳ್ಳಬೇಕಾಯಿತು. ಆದರೆ ಆ ಚಾಕೋಲೇಟುಗಳನ್ನು ತಿನ್ನುವಂತಿಲ್ಲವಲ್ಲ!  ಏನು ಮಾಡುವುದು? ಹೇಗೂ ನನಗೆ ಚಿಕ್ಕಂದಿನಲ್ಲಿ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವಿತ್ತು.  ಈಗ ಐವತ್ತು ಪೈಸೆಗೆ ಬದಲಾಗಿ ಕೊಡುವ ತರಹೇವಾರಿ ಚಾಕೋಲೇಟುಗಳನ್ನು ಕಲೆ ಹಾಕತೊಡಗಿದೆ. ಒಂದು ದಿನ ನನ್ನ ಮಗನ ನಾಲ್ಕನೇ ವರ್ಷದ ಹುಟ್ಟುಹಬ್ಬ ಬಂತು. ಆತನ ಗೆಳೆಯರನ್ನೆಲ್ಲಾ ಕರೆದು ಸಂಗ್ರಹಾಲಯದಲ್ಲಿದ್ದ ಎಲ್ಲಾ ಚಾಕೋಲೇಟುಗಳನ್ನು ಹಂಚಿದೆ. ಪ್ರತಿವರ್ಷವೂ ಹೀಗೆ ಮಾಡಿದರಾಯಿತು. ಹುಟ್ಟುಹಬ್ಬದ ಆಚರಣೆಯೂ ಆದಂತಾಗುತ್ತದೆ. ಅಂಗಡಿಯವರ ಬಾಯಲ್ಲೂ ಗುಡ್ ಕಸ್ಟಮರ್ ಎಂದೆನೆಸಿಕೊಳ್ಳಬಹುದು ಎಂದೆಣಿಸಿ ನನ್ನ ಜಾಣತನಕ್ಕೆ ನಾನೇ ಬೆರಗಾದೆ! ಆದರೆ ಬೆರಗು ಬುರುಗಾಗಲು ಹೆಚ್ಚೇನೂ ಸಮಯ ಬೇಕಾಗಲಿಲ್ಲ. ನಾನು ಕೊಟ್ಟ ಚಾಕೋಲೇಟುಗಳನ್ನು ನೋಡಿದ ಕೂಡಲೇ ಮಕ್ಕಳೆಲ್ಲಾ ಮುಖ ಕಿವುಚಿಕೊಂಡರು! ಅದರಲ್ಲೊಬ್ಬ ” ಅಂಕಲ್,  ಇದು ಅಂಗಡಿಯಲ್ಲಿ  free  ಕೊಡೋದು!! ನಂಗೆ ಬೇಡ,  ಫ಼ೈವ್  ಸ್ಟಾರ್ ಕೊಡಿಸಿ”  ಎಂದು ಕಿರುಚಿದ.  ಉಳಿದವರೂ ತಮಗೆ ಬೇಡವೆಂದು ಹುಯಿಲೆಬ್ಬಿಸತೊಡಗಿದರು.  ನನ್ನ ಮುಖ ಸಪ್ಪಗಾಯಿತು. ನನ್ನ ಮಗನಿಗಂತೂ ಅವಮಾನವಾದಂತಾಗಿ ಅತ್ತೂ ಕರೆದು ರಂಪ ಮಾಡಿಬಿಟ್ಟ. ಮಕ್ಕಳೆಲ್ಲಾ ಹೋ!! ಎಂದು ಕಿರಿಚುತ್ತಾ ಚಾಕೋಲೇಟುಗಳನ್ನು ನನ್ನತ್ತ ಎಸೆಯತೊಡಗಿದರು.  ಇಷ್ಟೆಲ್ಲಾ ರಂಪಾಟವಾದ ಮೇಲೆ ನನ್ನ ಶ್ರೀಮತಿಯಿಂದಲೂ ಮಂಗಳಾರತಿ  ನೆಡೆಯಿತೆಂದು ಪ್ರತ್ಯೇಕವಾಗಿ ತಿಳಿಸಬೇಕಿಲ್ಲವಷ್ಟೇ!

ಕೊನೆಗೊಂದು ದಿನ ಬೇರೆ ಉಪಾಯ ಕಾಣಿಸಿತು. ನನ್ನ ಹುಟ್ಟುಹಬ್ಬದ ದಿನ ನಮ್ಮ ಬಡಾವಣೆಯ ಪಕ್ಕದಲ್ಲಿರುವ ಕೊಳೆಗೇರಿಗೆ ಹೋಗಿ ಅಲ್ಲಿನ ಹುಡುಗರಿಗೆ ಚಾಕೋಲೇಟುಗಳನ್ನು ಹಂಚಿ ಕೈ ತೊಳೆದುಕೊಂಡೆ.  ಎರಡೂ ಅರ್ಥದಲ್ಲಿ!  ಅಂದಿನ ರಾತ್ರಿ ನನಗೆ ವೇದಕಾಲದಲ್ಲಿ ಯಾಗಸಮಯದಲ್ಲಿ ಕೆಲಸಕ್ಕೆ ಬಾರದ ಮುದಿಯಾದ ಗೊಡ್ಡು ಹಸುಗಳನ್ನು ದಾನ ಮಾಡಿದ ಉದ್ಧಾಲಕ ಮಹರ್ಷಿ  ಕನಸಿನಲ್ಲಿ ಕಾಣಿಸಿಕೊಂಡಿದ್ದ!

ಈ ಚಿಲ್ಲರೆ ವಿಷಯದಲ್ಲಿ ರಿಕ್ಷಾಚಾಲಕರು  ಅಂಗಡಿಯವರಿಗಿಂತಲೂ ಒಂದು ಕೈ ಮೇಲು! ಬೆಂಗಳೂರಿನ ರಿಕ್ಷಾಚಾಲಕರಾರೂ  ಐದು ರೂಪಾಯಿಗಿಂತ ಕಡಿಮೆ ಚಿಲ್ಲರೆಯನ್ನು ವಾಪಾಸ್ ಕೊಡುವ ಮಾತೇ ಇಲ್ಲ.  ಅಪ್ಪಿತಪ್ಪಿ ಕೇಳಿದರೆ
“ ಈ ಸುಡುಗಾಡಿಗೆ ಯಾರ್ರೀ ಬರ್ತಾರೆ? ಏನೋ ಪಾಪ ಅಂತ  ಕರ್ಕೊಂಡ್  ಬಂದ್ರೆ  ಚೇಂಜ್ ಬೇರೆ ಕೇಳ್ತಿರಲ್ರೀ “ ಅಂತ  ಗುರ್ರೆನ್ನುತ್ತಾ  ಬುರ್ರೆಂದು  ಹೊರಟೇಬಿಡುತ್ತಾರೆ.  ಅವರ  ಪ್ರಕಾರ  ಬೆಂಗಳೂರಿನ  ಜಯನಗರವೂ  ಹರಿಶ್ಚಂದ್ರ ಘಾಟು!

ಸರಿ ಬಿಡಿ, ಈ ಆಟೋ ಸಹವಾಸವೇ ಬೇಡವೆಂದು ನಗರ ಸಾರಿಗೆ ಬಸ್ಸನ್ನು ಹತ್ತಿದರೆ, ಕಂಡಕ್ಟರ್ ಒಂದೇ ಬಾರಿಗೆ ಚೀಟಿಯನ್ನೂ, ಚಿಲ್ಲರೆಯನ್ನೂ ಕೊಡುವುದಿಲ್ಲ. ಚೀಟಿಯ ಹಿಂಭಾಗದಲ್ಲಿ ಕೊಡಬೇಕಾದ ಚಿಲ್ಲರೆಯನ್ನು ನಮೂದಿಸಿ ಮುಂದಕ್ಕೆ ಸಾಗುತ್ತಾನೆ. ಬಸ್ಸಿನಲ್ಲಿ ಜನರ ಪರಿಷೆಯಿದ್ದರಂತೂ ಕತೆ ಮುಗಿದೇಹೋಯಿತು. ಆ ಚಕ್ರವ್ಯೂಹವನ್ನು ಬೇಧಿಸಿ ನಮ್ಮ ಸ್ಟಾಪಿನಲ್ಲೇ ಇಳಿಯುವಷ್ಟರಲ್ಲಿ ಕಂಡಕ್ಟರ್ ನಿಂದ  ಚಿಲ್ಲರೆ ಪಡೆಯುವುದಕ್ಕೆ ಮರತೇಹೋಗಿರುತ್ತದೆ.

ಹಲವಾರು ಕಛೇರಿಗಳಲ್ಲಿ,  ನೀರು,ವಿದ್ಯುತ್,ದೂರವಾಣಿ  ಇತ್ಯಾದಿ ಬಿಲ್ ಗಳನ್ನು ಪಾವತಿಸುವ ಕೇಂದ್ರಗಳಲ್ಲಿ ಚಿಲ್ಲರೆ ನೀಡಿ ಸಹಕರಿಸಿ ಎಂಬ ಸೂಚನಾಫಲಕವನ್ನು  ತೂಗುಹಾಕಿರುತ್ತಾರೆ.  ಅಲ್ಲಿಗೆ ಅವರ ಹೊಣೆಗಾರಿಕೆ ಮುಗಿಯಿತು.  ಸರಿಯಾದ ಚಿಲ್ಲರೆ ಕೊಟ್ಟು ಬಿಲ್ ಪಾವತಿಸುವುದು ಗ್ರಾಹಕನ ಜವಾಬ್ದಾರಿ! ಇಲ್ಲದೇ ಹೋದರೆ ಚಿಲ್ಲರೆ ಕಾಸು ತಿಮ್ಮಪ್ಪನ ಹುಂಡಿಗೆ ಹಾಕಿದಂತಯೇ.  ಹೆಚ್ಚೇನೂ ಮಾತನಾಡುವ ಹಕ್ಕಿಲ್ಲ.  ಒಂದು ವೇಳೆ ನೀವೇನಾದರೂ  ಚಿಲ್ಲರೆ ಕೇಳುವ ಅಧಿಕಪ್ರಸಂಗ ತೋರಿದಲ್ಲಿ, ಕೌಂಟರ್ನಲ್ಲಿರುವ ಆ ಮಹಾನುಭಾವ ನಿಮ್ಮತ್ತ ಕಣ್ಣೆತ್ತಿಯೂ ನೋಡದೆ, ಕೈ ಸನ್ನೆಯಿಂದಲೇ ಸೂಚನಾಫಲಕವನ್ನು ತೋರಿಸಿ, ನೆಕ್ಸ್ಟ್ ಎಂದು ಸರತಿಯಲ್ಲಿ ನಿಮ್ಮ ಹಿಂದಿರುವವನನ್ನು ಕರೆಯುತ್ತಾನೆ. ಏಕೆಂದರೆ ಅವನು ಪ್ರಜಾಪ್ರಭುತ್ವದ  ಸರ್ವಾಧಿಕಾರಿ!

ಒಟ್ಟಿನಲ್ಲಿ ಈ ಚಿಲ್ಲರೆಕಾಸಿನ ಅಭಾವದಿಂದಾಗಿ ನನ್ನ ದೈನಂದಿನ ವ್ಯವಹಾರಗಳೆಲ್ಲವೂ ಜಿಗುಟಾಗಿ ಬಿಡುತ್ತವೆ. ನನ್ನ ದುಃಖವನ್ನು  ಸ್ನೇಹಿತರ ಬಳಿ ತೋಡಿಕೊಂಡರೆ  ಅವರೆಲ್ಲರೂ ನನ್ನನ್ನೇ ಗೇಲಿ ಮಾಡುತ್ತಾರೆ.  ನೀನೊಳ್ಳೆ  ಕಂಜೂಸ್  ಮಾರ್ವಾಡಿ ಮಾರಾಯ! ಅವರೂ ಮನುಷ್ಯರೇ ತಾನೇ. ನಿನ್ನ ಪುಡಿ ಕಾಸಿನಿಂದ ಅವರೇನೂ ಮಹಡಿ ಮನೆ ಕಟ್ಟುವುದಿಲ್ಲ. ಸುಖಾಸುಮ್ಮನೆ  ಕಾಲುಕೆರೆದುಕೊಂಡು ಜಗಳವಾಡಿ  ಎಲ್ಲರ ಮೂಡ್ ಹಾಳುಮಾಡುತ್ತಿಯಾ ಎಂದು ಹಿತವಚನ ನುಡಿಯುತ್ತಾರೆ. ಇದು ಬರೀ  ಚಿಲ್ಲರೆಕಾಸಿನ ಪ್ರಶ್ನೆಯಲ್ಲ.  ವ್ಯವಹಾರದಲ್ಲಿರಬೇಕಾದ ಸೌಜನ್ಯ, ಶಿಸ್ತು ಮತ್ತು ಪ್ರಾಮಾಣಿಕತೆಗಳ  ಕೊರತೆಯ ಬಗ್ಗೆ ನನ್ನ ಆಕ್ಷೇಪವೆಂದರೆ ಯಾರೂ  ಸುತಾರಾಂ ನಂಬುವುದಿಲ್ಲ. ಎಷ್ಟಾದರೂ ನಮ್ಮ ದೇಶದಲ್ಲಿ ಪ್ರಾಮಾಣಿಕತೆಯೆಂಬುದು ಚಿಲ್ಲರೆಕಾಸಿನಂತೆಯೇ  ವಿರಳ  ಹಾಗೂ  ಬಹಳವೇ  ದುಬಾರಿ!!.
 

Comments