ನೆನಪಿನ ಚಿತ್ರಕಲಾ ಶಾಲೆ: ಭಾಗ ೫-ಗುರುತ್ವದ ಆಕರ್ಷಣೆ ಮೀರಿ

ನೆನಪಿನ ಚಿತ್ರಕಲಾ ಶಾಲೆ: ಭಾಗ ೫-ಗುರುತ್ವದ ಆಕರ್ಷಣೆ ಮೀರಿ

                          ಗುರುತ್ವದ ಆಕರ್ಷಣೆ ಮೀರಿ                                                                  

                                                                              (೧೨)

        ಮೇಷ್ಟ್ರು ಅಲ್ಲಿಂದ ಹೋಗಿದ್ದಾಯಿತು ಎಂದದಾರೋ ಅನೌನ್ಸ್ ಮಾಡಿದ ಕೂಡಲೆ ಒಮ್ಮೆಲೆ ಕೂಗಾಟ ಚೀರಾಟ ಶುರುವಾಗಿಬಿಟ್ಟಿತು ಶಿಲ್ಪಕಲಾ ವಿಭಾಗದಿಂದ. ಕೂಗಾಟ ಕಾಲಮೇಲೆ ಕಬ್ಬಿಣದ ಆರ್ಮೇಚರ್ ಬೀಳಿಸಿಕೊಂಡ ಮಲ್ಲುಮೋಹನನದ್ದು, ಚೀರಾಟ ರುಂಡ-ಮುಂಡವನ್ನು ಶಿಲ್ಪವಿಭಾಗದಕ್ಕೂ, ಕುಂಡವನ್ನು ಚಿತ್ರಕಲಾವಿಭಾಗದಕ್ಕೂ ಇಬ್ಬಾಗಿಸಿಕೊಂಡಿದ್ದ ವ್ಯಕ್ತಿಯದ್ದಾಗಿತ್ತು. ಆ ವ್ಯಕ್ತಿಯ ಧ್ವನಿಯೂ ಸಹ ಹೆಣ್ಣಾಗಂಡಾ ಎಂದು ವ್ಯತ್ಯಾಸ ಗೊತ್ತಾಗದಂತೆ ಕಿರುಚುತ್ತಿತ್ತು. ಅಷ್ಟೇ ಅಲ್ಲ, ಮೇಷ್ಟ್ರು ಚಿತ್ರಕಲಾ ವಿಭಾಗದ (ನಮ್ಮ ಸ್ಟುಡಿಯೋಗೆ) ಬಂದಾಗ, ಎಲ್ಲಿ  ಶಿಲ್ಪಕಲಾ ವಿಭಾಗಕ್ಕೆ ಅವರು ಹೋಗಿ ರುಂಡ-ಮುಂಡದ ಒಡೆಯ/ಒಡತಿ ಯಾರು ಎಂದು ಎಲ್ಲಿ ಗುರ್ತಿಸಿಬಿಟ್ಟು, ಆತನನ್ನು/ಆಕೆಯನ್ನು ಡಿಸ್‌ಮಿಸ್ ಮಾಡಿಬಿಡುತ್ತಾರೋ ಎಂಬ ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗಿತ್ತು. ಮಮಾ ಅಷ್ಟೆತ್ತರ ಮೇಲಕ್ಕೆ ಹಾರಿ, ಆ ರುಂಡಕ್ಕೆ ಒದ್ದೆಬಟ್ಟೆಯೊಂದನ್ನು ಹೊದ್ದಿಸಿಬಿಟ್ಟಿದ್ದ.

        ಮಣ್ಣಲ್ಲಿ ಶಿಲ್ಪಮಾಡುವವರು, ನಾಳೆ ಅದನ್ನು ಮುಂದುವರಿಸಬೇಕಾಗಿ ಬಂದಾಗ, ಅದು ಒಣಗಿ ಬಿರುಕು ಬಿಡದಿರಲಿ ಎಂಬ ಕಾರಣಕ್ಕೆ ಬಟ್ಟೆಯನ್ನು ಒದ್ದೆ ಮಾಡಿ, ಅದನ್ನು ಮಣ್ಣಿನ ಅರೆ-ಪೂರ್ಣ ಶಿಲ್ಪಕ್ಕೆ ಹೊದಿಸುವುದು ಸಂಪ್ರದಾಯ. ಅಂತಹ ಒಂದು ಒದ್ದೆ ಮಣ್ಣು ಬಟ್ಟೆಯನ್ನು ಮಮಾ ರುಂಡ-ಮುಂಡಕ್ಕೆ ಹೊದ್ದಿಸಿಬಿಟ್ಟಿದ್ದ. ಆ ವ್ಯಕ್ತಿ ಎಂಟಡಿ ಮೇಲಿನ ತ್ರಿಶಂಕು ಸ್ಥಿತಿಯಲ್ಲೇ, ಮುಚ್ಚಿದ ವಸ್ತ್ರದಿಂದಲೇ ಸೀನತೊಡಗಿತ್ತು. ಆದರೆ ಸದ್ದಾಗದಿರಲಿ ಎಂದೋ ಏನೋ ಆ ವ್ಯಕ್ತಿಯು ಸದ್ದು ಮಾಡದಂತೆ ಸೀನಲು ಪ್ರಯತ್ನಿಸುವ ಸದ್ದು ಮಾತ್ರ ಕೇಳಿಸುತ್ತಿತ್ತು. ಸದ್ದಿಲ್ಲದೆ ಸೀನುವುದೆಂದರೆ, ಗುದ್ದಿಲ್ಲದೆ ಒಡೆತ ತಿಂದಂತಲ್ಲವೆ? ಆ ವ್ಯಕ್ತಿ ಮೇಲ್ಮುಖವಾಗಿ ನೇತಾಡುತ್ತಿದ್ದುದು. ಮಮಾ ಮುಖದೆಡೆಗೆ ಎಸೆದ ಬಟ್ಟೆಯು ಈ ವ್ಯಕ್ತಿಯ ಮುಖ ಮುಚ್ಚಿ, ಆ ಬಟ್ಟೆಯ ಮಣ್ಣಿನ ನೀರು ಯಾವ ಅಡೆತಡೆಯೂ ಇಲ್ಲದಂತೆ, ಅದರ (ಅಂದರೆ ಆ ವ್ಯಕ್ತಿಯ ಎಂದರ್ಥ) ಮೂಗಿನಿಂದ, ಬಾಯಿಯ ಮೂಲಕ ಹೊಟ್ಟೆ ಸೇರಿರಲೂ ಸಾಕು. ಆ ದೇಹ ಚೀರಾಡುತ್ತಿದ್ದರೆ, ಕಾಲಮೇಲೆ ಕಂಬ ಬೀಳಿಸಿಕೊಂಡ ಮೋಗನ ಕಿರುಚಾಡುತ್ತಿದ್ದ.


        ಆ ಬಟ್ಟೆಯನ್ನು ಸರಿಸಲು ಹರಸಾಹಸ ಮಾಡಿದ ಮಮಾ. ಅದು ಸಾಧ್ಯವಾಗದೆ ನೆಲಮಾಳಿಗೆಯ ಮೆಟ್ಟಿಲ ಮೇಲೆ ಕುಳಿತು ನಗುತಡೆಯಲಾಗದೆ ಮುಖ ಕೆಂಪಗಾಗಿಸಿಕೊಂಡಿದ್ದ. ಆ ವ್ಯಕ್ತಿ ಯಾರೆಂದು ತಿಳಿಯದಿದ್ದರೂ ಸಹ, ಆ ವ್ಯಕ್ತಿಯನ್ನು ಬೆಟ್ಟ ಹತ್ತಿಸುವಂತೆ ಈ ಕಿಂಡಿಯಲ್ಲಿ ತುರುಕಿದವರಾರೆಂದು ಈಗ ಸ್ಪಷ್ಟವಾದಂತಾಯಿತು. ವೀರಾ ಹೊಟ್ಟೆಹಿಡಿದುಕೊಂಡು ನೆಲದ ಮೇಲೆ ದೇಹವನ್ನು ಪಕ್ಕಕ್ಕೆ ಕವುಚಿಕೊಂಡು, ಮುಖಮುಚ್ಚಿಕೊಂಡುಬಿಟ್ಟಿದ್ದ. ತಡೆಯಲಾಗದಷ್ಟು ನಗುಬಂದಾಗಿನ ಆತನ ಪೋಸ್ ಅದಲ್ಲ. ಅಂತಹ ಸಂದರ್ಭದಲ್ಲಿ ಆತನ ನಗುವೇ ಅಂತಹದ್ದುಶಬ್ದಾತೀತವಾಗಿ ದೃಶ್ಯಾತ್ಮಕವಾದುದು.

                                                                                      (೧೩)
        ಎಲ್ಲರೂ ಎದುರಿನ ದಿವ್ಯದರ್ಶನದಿಂದಾಗಿ ತಮ್ಮ ತಮ್ಮ ವ್ಯಕ್ತಿತ್ವಗಳಿಗನುಸಾರವಾಗಿ ವಿಭಿನ್ನ ಭಾವಾಭಿವ್ಯಕ್ತಿಯನ್ನು ಪ್ರಕಟಿಸಿದರೂ, ಅರೆಬಿರಿದ ನಗು ಮಾತ್ರ ಎಲ್ಲರ ವಿಭಿನ್ನತೆಯನ್ನೂ ಬೆಸೆದ ಅಂಶವಾಗಿತ್ತು. ನಗದೇ ಇದ್ದವರೆಂದರೆ ಅಣ್ತಮ್ಮ ಮತ್ತು ಲಿಂಗವಿನ್ನೂ ನಿರ್ಧಾರವಾಗಿರದಿದ್ದ ಆ ರುಂಡಮುಂಡಶಿಲ್ಪವಿಭಾಗದೆಡೆಯಾಗಿಕುಂಡಚಿತ್ರಕಲಾವಿಭಾಗದೆಡೆಯಾಗಿದ್ದ ವ್ಯಕ್ತಿ. ನಗದ ಎರಡನೆಯ, ದೊಡ್ಡ ಹೆಸರಿನ ವ್ಯಕ್ತಿಯಂತೂ ಅಲ್ಲೂ ಇರಲಾರದೆ, ಕೆಳಕ್ಕೂ ಇಳಿಯಲಾರದೆ, ಕುಂಡಾಮಂಡಲವಾಗಿಬಿಟ್ಟಿತ್ತು. ಅಂಗಾತವಾಗಿ, ಮೇಲ್ಮುಖವಾಗಿ, ತ್ರಿಶಂಕುಸ್ಥಿತಿಯಲ್ಲಿ, ಕ್ರೈಸ್ತನ ಭಂಗಿಯಲ್ಲಿದ್ದ ಈ ವ್ಯಕ್ತಿ ಅಂಗಾತವಾಗಿದ್ದರಿಂದಲೇ ಯಾರೆಂದು ತಿಳಿಯದಾಗಿತ್ತು. ಅದು ಗಂಡೇ ಆಗಿರಬೇಕು ಎಂದರೆ ಸ್ತ್ರೀಕುಲದ ಬಗ್ಗೆ ನಮಗೆ ಆಗ ಇದ್ದ ಪೂರ್ವಾಗ್ರಹವನ್ನು ಈಗ ಸೂಚಿಸುವಂತೆ ತೋರಿದರೂ ಸಹ, ನೆಲದ ಮೇಲೂ ಇರದೆ, ಮೇಲ್ಛಾವಣಿಗೂ ಅಂಟಿಕೊಳ್ಳದ ಮಧ್ಯಂತರದ ತ್ರಿಶಂಕು ಸ್ವರ್ಗವೆಂಬ ನರಕದಲ್ಲಿ ತೇಲುವ ಮೂರ್ಖತನವನ್ನು ಹೆಂಗಸರ‍್ಯಾರೂ ಮಾಡಲಾರರೆಂಬ ಖಡಾಖಂಡಿತವಾದ ಅನುಮಾನದಿಂದ ಆ ವ್ಯಕ್ತಿಯನ್ನು ಹಲವರು ಮಾತನಾಡಿಸಲು ತೊಡಗಿದರು:

ಹಲೋ, ಹಲೋ. ಯಾರು ನೀವು?

ಹ್ಞೂಂ, ಹ್ಞೂಂ

ಹೆಣ್ಣಾ? ಗಂಡಾ?

ರೀ, ಇದೇನು ಮೆಟರ್ನಿಟಿ ಆಸ್ಪತ್ರೇನಾ, ಹಾಗೆ ಕೇಳೋಕೆ ಎಂದು ಒಬ್ಬ ವಿದ್ಯಾರ್ಥಿನಿ ಪ್ರಶ್ನೆ ಕೇಳಿದಾತನನ್ನೇ ದಬಾಯಿಸಿದಳು.

        ಕೊನೆಗೂ ಮಮಾ ನಗುವನ್ನು ಸಾವರಿಸಿಕೊಂಡು, ತನ್ನ ಕೆಂಪುಮುಖವನ್ನು ತನ್ನ ಸಹಜ ಎಣ್ಣೆಗೆಂಪಿಗೆ ತಿರುಗಿಸಿಕೊಂಡು, ಸಹಜತೆಗೆ ಬಂದಾಕ್ಷಣ, ತನ್ನ ಶಿಲ್ಪಕಲಾ ವಿಭಾಗದಿಂದ ಸಣ್ಣನೆಯ ನೀಳ ಕೋಲೊಂದನ್ನು ಹೊಂದಿಸಿ, ತಂದು, ಆ ವ್ಯಕ್ತಿಯ ಮುಖದ ಮೇಲಿನ ಕೊಚ್ಚೆಬಟ್ಟೆಯನ್ನು ಹುಷಾರಾಗಿ ತೆಗೆದುಬಿಟ್ಟ. ಎಲ್ಲರೂ ಹೋ ಎಂದರು, ಕೆಲವರಂತೂ ಅಯ್ಯೋ ಪಾಪಿ, ನಿನಗಿನ್ನೂ ಬುದ್ದಿಬಂದಿಲ್ಲವಾ, ಮಮಾನ ಇನ್ನೂ ನಂಬುವುದನ್ನು ಬಿಟ್ಟಿಲ್ಲವಲ್ಲೋ ನೀನು ಎಂದು ಕರುಣೆತೋರಿದರು. ಆದರೆ ಪ್ರಶ್ನಾಮೂರ್ತಿಯನ್ನು ಕೆಳಗಿಳಿಸುವ ಉಪಾಯವು ಆತನನ್ನು ಮೇಲಕ್ಕೆ ಕಳಿಸಿದ್ದ ಮಮಾನ ಎಟುಕಿಗೂ ಮೀರಿದ್ದಾಗಿತ್ತು, ಅಕ್ಷರಶಃ.
                                                                                                  (೧೪)
        ಮಾವಿನ ಹಣ್ಣಿನ ವಾಸನೆಯ ತೆವಲು ತಡೆಯಲಾಗದವನಾಗಿದ್ದ ಮಮಾ. ಸಂಜೆ ನಾಲ್ಕು ಗಂಟೆಗೆ ಅಣ್ತಮ್ಮನು, ಹೊಸದಾಗಿದ್ದ ಚಿತ್ರಕಲಾ ಸ್ಟುಡಿಯೋವನ್ನು (ನಮ್ಮ ತರಗತಿ) ನಮ್ಮೆಲ್ಲರನ್ನೂ ಹೊರಗೋಡಿಸಿದ ನಂತರ, ಮುಚ್ಚಿ ಬೀಗ ಹಾಗಿದ ನಂತರ, ಶಿಲ್ಪಕಲಾ ಸ್ಟುಡಿಯೋದಿಂದ ಆ ಎತ್ತರದ ಕನಕನ ಕಿಂಡಿಯಿಂದ ಇಳಿದು ಹಣ್ಣುಕದಿವ ಸಾಧ್ಯತೆಯನ್ನು ಮಮಾ ಪರೀಕ್ಷಿಸಿದ್ದ, ಪ್ರಶ್ನಾಮೂರ್ತಿಯ ಮೂಲಕ. ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಕ್ರಿಯೆಯಲ್ಲವಿದು. ಪ್ರಶ್ನಾಮೂರ್ತಿಯ ಗುಣವನ್ನು ಬಲ್ಲವರು, ಕಬ್ಬನ್ ಪಾರ್ಕಿನಲ್ಲಿಯ ಆತನ ಹನುಮಂತನಾವತಾರದ ಕಪೀಚೇಷ್ಟೆಯನ್ನು ಕಂಡವರು, ತಾನಾಗಿ ಹಳ್ಳಕ್ಕೆ ಬಲವಂತವಾಗಿ ಬಂದು ಬಿದ್ದ ಮಿಕವಿದು ಎಂದು ಅರ್ಥಮಾಡಿಕೊಳ್ಳಬಲ್ಲವರಾಗಿದ್ದರು.

        ಸಧ್ಯಕ್ಕೆ ಪ್ರಶ್ನಾಮೂರ್ತಿಯು ಎರಡು ವಿಭಾಗದ ನಡುವಿನ ಕಿಂಡಿಯಿಂದ ತಪ್ಪಿಸಿಕೊಳ್ಳುವಲ್ಲಿ ಒಂದು ಹೆಜ್ಜೆಯೂ ಮುಂದುವರಿಯಲಾಗದವನಾಗಿದ್ದ. ಏಕೆಂದರೆ ಹೆಜ್ಜೆ ಇಡಲೂ ಅಲ್ಲಿ ಅವಕಾಶವಿಲ್ಲದ, ಆಕಾಶ-ಭೂಮಿಯ ನಡುವಣ ಸ್ಥಿತಿಯದು. ಕಾಲಿಡಲು ಅವಕಾಶವಾದರೆ ತಾನೆ ಹೆಜ್ಜೆ ಮುಂದುವರೆಯುವುದು. ಆದರೆ ಒಂದು ಹಂತ ಮೇಲೆ ಹೋಗಲು ಮಾತ್ರ ಸಾಧ್ಯವಾಯಿತು. ಅದೇನೆಂದರೆ ಮೇಲ್ಮುಖವಾಗಿದ್ದಾತ ಕೆಳಮುಖವಾಗಿ ಇದ್ದಲ್ಲೇ ತಿರುಗಿಕೊಂಡು ನೇತಾಡತೊಡಗಿದ, ಸ್ವಲ್ಪ ಪ್ರಯತ್ನದ ನಂತರ.

        ಎಲ್ಲಿಯೂ ಏಣಿ ಕಾಣದಾಗಿತ್ತು. ಮುಂದಿನ ಪರಿಷತ್ತಿನ ಗ್ಯಾಲರಿಯ ಏಣಿಯೇನೋ ಸ್ಟೋರ್ ರೂಮಿನಲ್ಲೇ ಇತ್ತು. ಆದರೆ ಸ್ಟೋರ್ ರೂಮಿನ ಬೀಗ ಮಾತ್ರ ಯಾರಬಳಿ ಇದೆ ಎಂದು ಯಾರನ್ನು ಕೇಳುವುದು ಎಂದು ಯಾರಿಗೂ ತಿಳಿಯದಾಗಿತ್ತು. ಇಂದಿಗೂ ಚಿತ್ರಣಕಲೆಯ ಶಿಕ್ಷಣದಲ್ಲಿಯೂ ಈ ಯಾರನ್ನು ಯಾರು ಏನನ್ನು ಕೇಳುವುದು? ಎಂಬ ಕಲಾಶಾಲೆಗಳ ಜಗತ್ಪ್ರಸಿದ್ಧ ಪ್ರಶ್ನೆಗೆ ಈ ಏಣಿರಹಿತತೆಯು ಒಳ್ಳೆಯ ರೂಪಕವಾಗಿ ಒದಗಿಬರುವಲ್ಲಿ, ತನ್ನ ಕಾಲ ಮೇಲೆ ತಾನೇ ನಿಲ್ಲುವಂತಹ ಯೋಗ್ಯತೆಯನ್ನೂ ಹೊಂದಿರುತ್ತದೆ.

        ಪ್ರಶ್ನಾಮೂರ್ತಿ ಮಕಾಡೆ ಮಲಗಿದ್ದರಿಂದ, ಒದ್ದೆಬಟ್ಟೆಯನ್ನು ಆತನ ಮುಖದಿಂದ ತೆಗೆದದ್ದರಿಂದಾಗಿ, ಆತ ಇದ್ದಲ್ಲಿಂi ನಿರಾತಂಕಿತನಾಗಿಬಿಟ್ಟ. ಏಣಿ ಇಲ್ಲದ ಅಸಹಾಯಕತೆಯ ಬಗ್ಗೆ ಚರ್ಚಿಸುತ್ತಿದ್ದೆವು ನಾವೆಲ್ಲ. ಯಾವ ಟೇಬಲ್ಲನ್ನು ತೆಗೆಯ ಹೋದರೂ ಅದರ ಮೇಲಿನ ಶಿಲ್ಪಗಳನ್ನೆಲ್ಲ ಇಳಿಸಬೇಕಿತ್ತು. ನಮ್ಮ ಅಸಹಾಯಕತೆಗೆ ಪ್ರಶ್ನೆಯೇ ಪರಿಹಾರವನ್ನೂ ಸಮಸ್ಯೆಯ ಅಗ್ನಿದಿವ್ಯದ ಹೃದಯಭಾಗದಲ್ಲಿ ಇದ್ದಲ್ಲಿಂದಲೇ ಸೂಚಿಸುತ್ತಿದ್ದ. ಇರಲಿ ಬಿಡ್ರಮ್ಮಾ, ಏಣಿ ಸಿಗುವುದು ನಿಧಾನವಾದರೂ ಪರವಾಗಿಲ್ಲ ಎಂದುಬಿಟ್ಟ. ಮಲ್ಲು ಮೋಹನನ ಊತಬಂದ ಕಾಲಿಗೆ, ರಕ್ತದ ಕಲೆ ಒರೆಸಿದ ನಂತರ, ಬ್ಯಾಂಡೇಜ್ ಹಾಕಿಸಿಕೊಂಡು ಶಿವಾನಂದ ಸರ್ಕಲ್ಲಿನ ಸಮೀಪದ ದೇಸಾಯಿ ನರ್ಸಿಂಗ್ ಹೋಮಿನಿಂದ ಹಿಂದಿರುಗಿದರೂ, ಪ್ರಶ್ನಾಮೂರ್ತಿಯನ್ನು ಕೆಳಕ್ಕಿಳಿಸುವ ಉಪಾಯವಾಗಲೀ, ತುರ್ತಾಗಲೀ ಯಾರಿಗೂ ಇದ್ದಂತೆ ಕಾಣಲಿಲ್ಲ, ಪ್ರಶ್ನೆಯನ್ನೂ ಒಳಗೊಂಡಂತೆ. ಆತನಾದರೋ ಅಲ್ಲೇ ಹುಟ್ಟಿಬೆಳೆದವನಂತೆ ಮಾನಸಿಕವಾಗಿ ಸೆಟ್ಲ್ ಆಗಿಬಿಟ್ಟಿದ್ದ ಇದ್ದಲ್ಲೇ.

        ಮೋಗನಾ ಏನೂ ವರಿ ಮಾಡ್ಕೊಬೇಡಮ್ಮ, ಎಲ್ಲ ಸರಿ ಹೋಗುತ್ತೆ. ಎಲ್ಲ ದುಡ್ಡು ಕೀಳೋಕಷ್ಟೇ ನರ್ಸಿಂಗ್ ಹೋಂನವ್ರು ಗಾಯ ದೊಡ್ಡದು ಅಂತ ಹೇಳಿದಾರೆ ಅಷ್ಟೇ. ಮನೆಗೋಗುವಾಗ ಒಂದು ಕಾಲು ಕೇಜಿ ಕಾಫಿಪುಡಿ ತಗೊಂಡೋಗು, ಎಂದ ಪ್ರಶ್ನೆ ಬೋರಲಾಗಿ ಮಲಗಿಯೇ ಬಿಟ್ಟಿ ಸಲಹೆಯನ್ನು ಮುಂದುವರೆಸಿದ, ಮನೇಲಿ ಗಾಯದ ಮೇಲೆ ಕಾಫಿಪುಡಿ ಹಾಕಿ ಮಲಗಿಬಿಡು. ಬೆಳಿಗ್ಗೆ ನೋಡು.. ಎನ್ನುತ್ತಿದ್ದಂತೆ, ಬೆಡ್‌ಶೀಟ್ ಎಲ್ಲ ಕಾಫಿವರ್ಣವಾಗಿರುತ್ತದೆ ಎಂದು ನನ್ನ ಕ್ಲಾಸಿನ ಕಿತಾ ಸಾರಿಯಮ್ಮ ಸಿಡುಕಿದ್ದಳು, ಪ್ರಶ್ನಾಮೂರ್ತಿಯ ಡಾನ್ ಕ್ವಿಯೋಟಿಕ್ ಮೂರ್ಖ ಸಾಹಸಗಾಥೆಗಳಿಗೆ ತಾಳೆ ಹಾಕುವಂತೆ.
                                                                          (೧೫)
        ಮೆಟ್ಟಿಲಿರುವ ಕೋಣೆಗಿರುವ ಬೀಗದ ಕೈಯನ್ನು ತರಲೆಂದು ಹೋಗಿರುವ ದೊಡ್ಡಯ್ಯನನ್ನು ಹುಡುಕಿಕೊಂಡು ಹೋಗಿರುವ ಕೆಲವು ಕಿರಿಯ ವಿದ್ಯಾರ್ಥಿಗಳ ಹಾದಿ ಕಾಯುತ್ತ ನಾವೆಲ್ಲ ಕುಳಿತಿದ್ದೆವು. ಸಂಜೆ ನಾಲ್ಕು ಗಂಟೆಗೆ ಬೀಗ ಹಾಕುವ ಸಮಯವಾಗಿ ಅರ್ಧಗಂಟೆಯಾಗಿ ಇನ್ನರ್ಧ ಗಂಟೆಯಾಗಿಹೋಗಿತ್ತು. ಅಣ್ತಮ್ಮ ಕಮಕ್ ಕಿಮಕ್ ಎನ್ನಲಿಲ್ಲ. ನೀನು ಬಾಯಿಬಿಟ್ಟೆ ಅಂದುಕೋ ಅಣ್ತಮ್ಮ. ಪ್ರಶ್ನೆ ಅಷ್ಟು ಮೇಲಿನ ಕಿಂಡಿ ಹತ್ತೋವರೆಗೂ ಏನ್ ತರೀತಿದ್ದೆ ನೀನು ಅಂತ ಮೇಷ್ಟ್ರು ಕೇಳ್ತಾರೆ. ಆಗೇನ್ ಹೇಳ್ತೀಯಪ್ಪಾ? ಹೇಳು ನೊಡೋಣ ಎಂದುಬಿಟ್ಟ ಮಮಾ. ಮಲ್ಲುಮೋಗನನ ಕುಂಟು ಕಾಲು ಕುರ್ಚಿಯ ಮೇಲಿಟ್ಟಿದ್ದ ಭಂಗಿಯೊಂದಿಗೆ, ಅದರಿಂದ ಸ್ವಲ್ಪ ದೂರದಲ್ಲಿ ನಡುವನ್ನು ಮೇಲೇರಿಸಿದ್ದ ಪ್ರಶ್ನೆಯ ಭಂಗಿಯೂ ಸೇರಿ ಒಂದು ಸರ್ರಿಯಲ್ ದೃಶ್ಯ ನಿರ್ಮಾಣವಾಗಿಬಿಟ್ಟಿತ್ತು. ಉಳಿದಂತೆ ಸಮಯಕ್ಕೆ ಸರಿಯಾಗಿ ಮನೆ ಸೇರುವವರು, ಮುಖ್ಯವಾಗಿ ವಿದ್ಯಾರ್ಥಿನಿಯರಾದ ಮಾಲ್ತಿ-ಮಾಲಿನಿಯರು ಅದಾಗಲೇ ಪ್ರಶ್ನೆಗೆ ನೆಲದ ಮಟ್ಟದಿಂದಲೇ ಆಲ್ ದ ಬೆಸ್ಟ್ ಹೇಳಿ ಹೊರಟುಬಿಟ್ಟಿದ್ದರು. ಮುಸಿಮುಸಿ ನಗುತ್ತ ಅವರುಗಳು ಹೋದದ್ದು ಒಂದು ತಂತ್ರವಾಗಿ ನಮಗೆ ಗೋಚರವಾಗಿತ್ತು. ಗಂಭೀರವಾಗಿ ಅವರೇನಾದರು ಹೋಗಿದ್ದರೆ ಎಷ್ಟು ಅಮಾನುಷರಿವರು ಎಂದು ನಾವು ಬಯ್ದುಕೊಳ್ಳುತ್ತೇವೆ ಎಂದು ಗೊತ್ತಿದ್ದರಿಂದಲೇ, ಅವರು ಮುಸಿಮುಸಿ ನಗುತ್ತ ಹೋದದ್ದು. ಇಲ್ಲೇ, ಈಗಲೇ ವಾಪಸ್ ಬರ್ತೇನೆ ಅನ್ನುವಂತಿತ್ತು ಅವರ ಮುಕಭಾವ. ನಾಳೆಬೆಳಿಗ್ಗೆಯವರೆಗೂ, ಅವರುಗಳು ಖಾಲೇಜಿಗೆ ಬರುವವರೆಗೂ ಪ್ರಶ್ನಾಮೂರ್ತಿಯನ್ನು ಕುರಿತು ಅವರುಗಳು  ಖಿಂಚಿತ್ತಾದ್ರೂ ಚಿಂತೆಯೇನಾದರೂ ಮಾಡಿದ್ದರೆ ಕೇಳು ಎಂದು ಅನೇಖ ಮನಃಶಾಸ್ತ್ರಜ್ಞನಂತೆ ನಡೆದುಕೊಳ್ಳತೊಡಗಿದ.

         ಅಷ್ಟರಲ್ಲಾಗಲೇ ಅಣ್ತಮ್ಮನಿಗೆ ಗಾಭರಿ ಕಡಿಮೆಯಾಗಿತ್ತು. ಮೇಷ್ಟ್ರು ಅದಾಗಲೇ ಲೇಪಾಕ್ಷಿಗೆ ಹೋಗಿದ್ದು, ನಾಳೆ ಬೆಳಿಯವರೆಗೂ ಬರುವ ಸಾಧ್ಯತೆ ಇರಲಿಲ್ಲ. ಹುಡುಗಿಯರು ಯಾರೂ ಇಲ್ಲದುದ್ದರಿಂದ, ನಾವಿದ್ದ ಚಿತ್ರಕಲಾ ಸ್ಟುಡಿಯೋದಿಂದ ವೀರಾ ಒಂದು ತುರ್ತಿನ ಕೆಲಸ ಮಾಡಲಿಕ್ಕಾಗಿ ಒಂದು ಬಿರಡೆ ತೆರೆದ ಪೈಂಟ್ ಡಬ್ಬಾವನ್ನು ಎಲ್ಲಿಂದಲೋ ಹೆಕ್ಕಿ ತೆಗೆದುಕೊಂಡು ಬಂದ. ಮಾವಿನಹಣ್ಣುಗಳನ್ನು ಪಕ್ಕಕ್ಕೆ ಸರಿಸಿ, ಅಲ್ಲಿ ಮರದ ಚೇರ್ ಹಾಕಿಕೊಂಡು ಹತ್ತಿನಿಂತ. ನಾವೆಲ್ಲರೂ ಶಿಲ್ಪಕಲಾ ಸ್ಟುಡಿಯೋದಲ್ಲಿ ಸ್ಟೋವಿನಲ್ಲಿ ಚಹಾ ಕಾಯಿಸುತ್ತ, ಪ್ರಶ್ನೆಯ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತಾ, ಮಾತಾಡುತ್ತ ನಿಂತಿದ್ದೆವು. ಆ ಕಡೆ, ಪ್ರಶ್ನೆಯ ಕುಂಡದ ಕಡೆ ಕುರ್ಚಿ ತೆಗೆದುಕೊಂಡು ಹೋದ ವೀರಾ ಏನೋ ಕಿತಾಪತಿ ಮಾಡುತ್ತಾನೆ ಎಂಬ ಗ್ಯಾರಂಟಿಯೇನೋ ಇತ್ತು. ಅಷ್ಟರಲ್ಲಿ ಶಿಲ್ಪವಿಭಾಗದಲ್ಲಿದ್ದ ಪ್ರಶ್ನೆಯ ಮುಖ ಲಬಲಬನೆ ಬಡಿದುಕೊಳ್ಳತೊಡಗಿತು. ಯಾಕೆ ಏನು ಎಂದು ನಾವೆಲ್ಲ ವಿಚಾರಿಸುತ್ತಿದ್ದರೆ, ಆತ ಕಿರುಚುವುದರೊಳಗಿನಿಂದಲೇ ನಮಗೆ ಅರ್ಥವಾಗಿವಂತಹದ್ದೇನನ್ನೋ ಹೇಳಲು ಪ್ರಯತ್ನಿಸುತ್ತಿದ್ದ. ಈಗ, ಅಲ್ಲಿ ಆತನಿಗೆ ಬಾಯಿಮಾತೇ ಕೈಯಿ ಮತ್ತು ಕಾಲುಗಳಾಗಿದ್ದವು. ಏಕೆಂದರೆ ಅವರೆಡೂ ಸಹ ಗೋಡೆಯ ಆ ಕಡೆಯ ಕೋಣೆಯಲ್ಲಿದ್ದವು.

        ಅಯ್ಯೋ ಬನ್ರೋ, ಹೆಲ್ಪ್, ಯಾವನೋ ನನ್ನ ಪ್ಯಾಂಟ್ ಜಿಪ್ ಎಳೀತಿದ್ದಾನೆ ಎಂಬ ವಾಕ್ಯವನ್ನು ಲೂಪ್ ಮಾಡಿದಂತೆ ಹತ್ತಾರು ಸಲ ಬಡಬಡಿಸತೊಡಗಿದ್ದ, ಒಳಗೆ ಎನೂ ಹಾಕಿಲ್ಲ ಕಣ್ರೋ ಎಂದು ಮುಕ್ತಾಯಗೊಳಿಸಿದ್ದ. ಏನೂ ಹಾಕಿಕೊಂಡಿರದ ಸ್ಥಿತಿಯನ್ನೇ ಒಳಗೆ ಅನ್ನುವುದು, ಅಲ್ಲವೆ ಪ್ರಶ್ನೆ? ಎಂದ ವೀರಾನ ಧ್ವನಿ ಶಿಲ್ಪಕಲಾ ವಿಭಾಗದಲ್ಲಿಯೂ ಸ್ಪಷ್ಟವಾಗಿ ಕೇಳಿತು. ಪ್ರಶ್ನೆಯ ಈಗಿನ ಪರಿಸ್ಥಿತಿಯಂತೆ, ಕೈಕಾಲುಗಳಿದ್ದೂ, ಇಲ್ಲದವನಂತಾಗುವ ಸ್ಥಿತಿಯ ನಿಜ ಅನುಭವವು ಉಂಟಾಗಬೇಕಾದರೆ, ನಮಗೆ ಜೋಮು ಹತ್ತುವಾಗ ಗಮನಿಸಬೇಕು. ಬಾಂಬೇ ಬೀಳಲಿ, ಹಾವೇ ಕಚ್ಚಲಿ, ಕಾರೇ ನಮ್ಮ ಮೇಲೋಗಲಿ, ನಮ್ಮ ಕಾಲುಗಳು ಮಾತ್ರ ಜೋಮು ದಾಟಿ ಮುಂದೋಗವು, ಅಲ್ಲವೆ?

Comments