"ಹಂಸನಾದ" ಪುಸ್ತಕ ಬಿಡುಗಡೆ

"ಹಂಸನಾದ" ಪುಸ್ತಕ ಬಿಡುಗಡೆ

ಇಂದು, ೧೬ ಜುಲೈ ೨೦೧೧ರಂದು, ಸಾರಂಗ ಮೀಡಿಯ, ಆಕೃತಿ ಪುಸ್ತಕ ಮತ್ತು ಮಂದಾರ ಪುಸ್ತಕ ಇವರ ಆಶ್ರಯದಲ್ಲಿ "ಹಂಸನಾದ" ಪುಸ್ತಕದ ಬಿಡುಗಡೆ. ಜೊತೆಯಲ್ಲೇ "ಅಕ್ಟೋಬರ್ ೧೦" ಕಥಾಸಂಕಲನದ ಬಿಡುಗಡೆ. "ಸಂಪದ"ದಲ್ಲಿ ಹಂಸಾನಂದಿ ಕಾವ್ಯನಾಮದಲ್ಲಿ ಕೆ.ವಿ. ರಾಮಪ್ರಸಾದ್ ಬರೆಯುತ್ತಿದ್ದ ಸುಭಾಷಿತಗಳ ಕನ್ನಡಾನುವಾದಗಳ ಸಂಗ್ರಹ "ಹಂಸನಾದ". ಆದ್ದರಿಂದ ಸಂಪದ ಬಳಗದವರಿಗೆ ಸಂಭ್ರಮದ ದಿನ.

ಪುಸ್ತಕಗಳನ್ನು ಬಿಡುಗಡೆ ಮಾಡಿದ ವಿದ್ವಾನ್ ರಾಮಚಂದ್ರ ಶರ್ಮ ತ್ಯಾಗಲಿ ಅವರು ಹಿರಿಯ ಪ್ರಾಧ್ಯಾಪಕರು ಹಾಗೂ ಅದ್ವೈತ ವೇದಾಂತದ ಮಹಾನ್ ವಿದ್ವಾಂಸರು; "ಇದು ನನ್ನ ಮನಸ್ಸು", "ವಾಲ್ಮೀಕಿ ಸೂಕ್ತಿ ಮುಕ್ತಾವಳಿ" ಇತ್ಯಾದಿ ಪುಸ್ತಕಗಳನ್ನು ಬರೆದಿರುವ ವಿದ್ವಾನ್ ಶರ್ಮರು ಈ ಸಂದರ್ಭದಲ್ಲಿ ಮಾಡಿದ ವಿದ್ವತ್ ಪೂರ್ಣ ಭಾಷಣದ ಕೆಲವು ಭಾಗಗಳು: 

"ಈಗ ಬಿಡುಗಡೆಯಾಗಿರುವ "ಹಂಸನಾದ"ದ ಪೀಠಿಕಾ ಪುಟದಲ್ಲಿರುವ ಸುಭಾಷಿತ:
    ಪುಟ್ಟ ಮಕ್ಕಳನೊಳ್ಳೆ ಮಾತಿನಾರೈಕೆಯಲೆ
    ಒಳ್ಳೆ ಕೆಲಸಗಳನೆ ಮಾಡ ಕಲಿಸು;
    ಹಸಿ ಮಡಿಕೆಯ ಮೇಲೆ ಮೂಡಿಸಿದ ಚಿತ್ತಾರ
    ಅಟ್ಟು ಉಣುವಾಗಲೂ ಸೊಗಸುಗೆಡದು

ಮಕ್ಕಳ ಲಾಲನೆಪಾಲನೆ ಬಗ್ಗೆ ಇಂತಹ ಹಲವಾರು ಸುಭಾಷಿತಗಳಿವೆ. ಉದಾಹರಣೆಗೆ, ಇನ್ನೊಂದು ಸುಭಾಷಿತದಲ್ಲಿ ಮಕ್ಕಳಿಗೆ ೫ನೇ ವರುಷ ವಯಸ್ಸಿನ ತನಕ ಹೊಡೆಯಬಾರದು ಎನ್ನುತ್ತಾರೆ. ಎಚ್ಚರಿಸಲಿಕ್ಕಾಗಿ ಮಾತ್ರ ಹೊಡೆಯಬೇಕು. ಹೊಡೆಯುವುದೆಂದರೆ ಕೇವಲ "ತಾಡನ" ಮಾಡಬೇಕು ಅಂದರೆ ಸನ್ಮಾರ್ಗಕ್ಕೆ ತರಲಿಕ್ಕಾಗಿ ತಟ್ಟಿ ಹೇಳಬೇಕು. ಅದೇ ಮಕ್ಕಳು ೧೬ನೇ ವಯಸ್ಸಿಗೆ ಬಂದ ನಂತರ ಮಿತ್ರನಂತೆ ಕಾಣಬೇಕು ಎನ್ನುತ್ತಾರೆ.

"ಹಂಸನಾದ"ದಲ್ಲಿರುವ ಸುಭಾಷಿತಗಳಲ್ಲಿ ಯಾವುದನ್ನು ಬೇಕಾದರೂ ಒದಿಕೊಳ್ಳಬಹುದು.ಎಲ್ಲವೂ ಸೊಗಸಾಗಿವೆ. ಇನ್ನೊಂದು ಉದಾಹರಣೆ ನೋಡಿ:
    ಹೊಳೆವ ಕಡಗಗಳು, ಚಂದಿರನ ಹೊಳಪಿರುವ ಹಾರಗಳು
    ಸ್ನಾನವು, ಪೂಸಿರುವ ಲೇಪಗಳು, ಮುಡಿದಿರುವ ಹೂವುಗಳು
    ಇವು ಅಲ್ಲ ಒಡವೆಗಳು! ನಿನಗಿರಲು ನಲ್ನುಡಿಯ ನಾಲಿಗೆಯು
    ಮಾತಿನೊಡವೆಯ ಮುಂದುಳಿದೊಡವೆಗಳು ಸೊರಗುವುವು

ನಾವು ಚಿಕ್ಕವರಿದ್ದಾಗ "ಕಿತ್ತಳೆ ಪೆಪ್ಪರಮಿಂಟು" ಸಿಗುತ್ತಿತ್ತು. ಅದು ಸ್ವಲ್ಪ ಹುಳಿ. ಸ್ವಲ್ಪ ಸಿಹಿ. ಚಪ್ಪರಿಸಿ ಚಪ್ಪರಿಸಿ ತಿನ್ನಬೇಕಿತ್ತು. ಇವೂ ಹಾಗಿವೆ.
 
ಸಂಸ್ಕೃತ ಭಾಷೆಯ ಸಮೃದ್ಧಿ ತಿಳಿಯಬೇಕಾದರೆ ಸುಭಾಷಿತಗಳನ್ನು ಗಮನಿಸಬೇಕು. ಜೀವನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಆಳವಾದ ಚಿಂತನೆ ಮಾಡಿ, ಇಂತಹ ಸೂತ್ರಗಳ ಮೂಲಕ ಮಾರ್ಗದರ್ಶನ ಕೊಟ್ಟದ್ದು ನಮ್ಮ ದೇಶದಲ್ಲಿ ಮಾತ್ರ. ಬೇರೆ ಯಾವ ದೇಶದಲ್ಲಿಯೂ ಇಂತಹ ಸಾಹಿತ್ಯ ನಮಗೆ ಸಿಗುವುದಿಲ್ಲ.

ಇಂತಹ ಭಾಷೆಯನ್ನು ಸತ್ತ ಭಾಷೆ ಎನ್ನುವವರಿಗೆ ಏನೆನ್ನಬೇಕು? ಹಾಗಾದರೆ ಜೀವಂತ ಭಾಷೆ ಎಂದರೇನು? ಸಾರ್ವತ್ರಿಕವಾಗಿ ಮಾತನಾಡುವುದು ಮಾತ್ರ ಭಾಷೆಯ ಜೀವಂತಿಕೆಯ ಮಾನದಂಡ ಅಲ್ಲ. ಹಾಗೆ ನೋಡಿದರೆ ಹಳೆಗನ್ನಡ ಈಗ ಎಲ್ಲಿ ಬಳಕೆಯಲ್ಲಿದೆ? ಪಂಪನ ಕನ್ನಡ ಇವತ್ತು ಬಳಕೆಯಲ್ಲಿಲ್ಲ.

ಬೇರೆ ಬೇರೆ ಭಾಷೆಗಳ ಜೊತೆ ಸೇರಿಕೊಂಡು, ಪ್ರಚಲಿತ ಬೆಳವಣಿಗೆಗಳ ಜೊತೆ ಹಾಸುಹೊಕ್ಕಾಗಿ ಒಂದು ಭಾಷೆ ಹೇಗೆ ಬೆಳೆಯುತ್ತದೆ ಮತ್ತು ಬಳಕೆಯಲ್ಲಿ ಹೇಗೆ ಮುಂದುವರಿಯುತ್ತದೆ ಎನ್ನುವುದೇ ಮುಖ್ಯ.

ಈಗ ಕೆಲಸದಲ್ಲಿ ಬಹಳ ಒತ್ತಡವಿದೆ ಎನ್ನುವುದು ಹಲವರ ಅಳಲು. ಅದನ್ನೆಲ್ಲ ಬದಿಗಿಟ್ಟು, ಸುಲಲಿತವಾಗಿ ಜೀವನ ಸಾಗಿಸಲು ಸುಭಾಷಿತಗಳು ನಮಗೆ ದಾರಿದೀಪಗಳು.

Comments