ಕಲಿಯುಗದ ಐರಾವತ

ಕಲಿಯುಗದ ಐರಾವತ

ಮೈಸೂರಿನಿಂದ ಮನೆಗೆ ಡ್ರೈವ್ ಮಾಡುತ್ತ ಬರುವಾಗ ದಾರಿಯಲ್ಲಿ ಕಂಡ ಒಂದು ಹೋಟೆಲ್ ಹೆಸರು "ಶ್ರೀರಾಮ ದರ್ಶನ"(ಅಥವ ದರ್ಶಿನಿಯೋ ಇರಬೇಕು). ಮೈಸೂರಿನ ನನ್ನ ಗೆಳೆಯನೊಬ್ಬ ಇಂದು ನನ್ನೊಂದಿಗೆ ಕುಳಿತಿದ್ದರೆ "ಆ ಹೋಟೆಲಿಗೆ ಹೋದರೆ ಶ್ರೀರಾಮನ ದರ್ಶನ ಮಾಡಿಸುತ್ತಾರೆ ಅನ್ನಿಸುತ್ತೆ. ಅದಕ್ಕೇ ಹಾಗೆ ಹೆಸರಿಟ್ಟಿರೋದು. ಅದೇ, ಅಲ್ಲಿ ಊಟ ಮಾಡಿದರೆ ನೇರ ಶ್ರೀರಾಮನ ದರ್ಶನವೇ..." ಎಂದು ಮೇಲಕ್ಕೆ ಕೈ ಮಾಡಿ ತೋರಿಸಿ ನಗಿಸುವ ಪ್ರಯತ್ನ ಮಾಡುತ್ತಿದ್ದ. ಇವತ್ತು ಈ‌ ಹೋಟೆಲಿನ ಹೆಸರು ನೋಡಿದಾಗ ಅದೇ ನೆನಪಾಗಿ, ಗೆಳೆಯ ನಗಿಸಲೆಂದು ಹೇಳುತ್ತಿದ್ದ "ದೇವರ ದರ್ಶನ" ಈಗ ಅಲ್ಲಿಲ್ಲಿ ತಿಂದು ಆಗಬೇಕಿಲ್ಲ, ಮೈಸೂರಿನಿಂದ ಬೆಂಗಳೂರಿಗೆ ತೆರಳುವ ರಸ್ತೆಯುದ್ದಕ್ಕೂ ಎಲ್ಲಿ ಬೇಕಾದರೂ ಆಗಬಹುದು ಅನ್ನಿಸಿತು! ಟ್ರಾಫಿಕ್ ಎಂಥದ್ದೆಂದರೆ ರಸ್ತೆಯುದ್ದಕ್ಕೂ  ಸೀದಾ ಪರಲೋಕಕ್ಕೆ ಒಯ್ಯುವ ಸಂಚೇ ಸಂಚು, ಸಂಪೂರ್ಣ "ಕಲಿಯುಗದರ್ಶನ" - ೨೪ ಗಂಟೆ ಚಾನಲ್ ಪ್ರಸಾರವಾದಂತೆ.

ಹೊಸ ಕಾರುಗಳನ್ನು ಇಟ್ಟುಕೊಂಡವರು ಬುರ್ರೆಂದು ಪಕ್ಕದಲ್ಲಿರುವ ಎಲ್ಲ ಗಾಡಿಗಳನ್ನೂ ಅಲುಗಾಡಿಸಿ ಮುಂದಕ್ಕೆ ಹೋದಾಗ ಎಂತಹ ಡ್ರೈವರ್ರಿಗೂ ಸ್ಟೀರಿಂಗ್ ಕೈ ತಪ್ಪಿ ಕಾರು ಬಳುಕುವುದಕ್ಕೂ ಸಾಕು. ಇನ್ನು ಮಳೆ ಬಂದು ಕತ್ತಲೆ ಕವಿದು ದಾರಿಯೇ ಕಾಣದಾದರೆ ಸಾಕ್ಷಾತ್ ಶ್ರೀರಾಮನೇ ದ್ವಾಪರಯುಗದಿಂದ ಕಲಿಯುಗಕ್ಕೆ ಬಂದು ಅಭಯ ನೀಡಬೇಕು! ಸರಕ್ಕನೆ ಅಡ್ಡ ಬರುವ ಜಾನುವಾರು, ಎಲ್ಲಿಂದಲೋ ಅಡ್ಡಡ್ಡ ರೋಡಿನಲ್ಲಿ ಪ್ರತ್ಯಕ್ಷವಾಗುವ ಟ್ರಾಕ್ಟರುಗಳು, ಅಲ್ಲಿಲ್ಲಿ ಡಿವೈಡರುಗಳಿಂದ ರೋಡು ಕ್ರಾಸ್ ಮಾಡಲು ಇಣುಕಿ ನೋಡುವ ಮನುಷ್ಯರು, ಸೊಯ್ಯನೆ ಬಳುಕುತ್ತ ಅತ್ತಿತ್ತ ಹರಿದಾಡುವ ಬೈಕುಗಳು, ಯಾರೂ ಇಲ್ಲವೆನ್ನುವಂತೆ ಮುಲಾಜಿಲ್ಲದೆ ಯೂ-ಟರ್ನ್ ಹೊಡೆಯುವ ಮೂರು ಚಕ್ರದ ಗಾಡಿಗಳು - ಇವೆಲ್ಲವುಗಳಿಂದ ಸೃಷ್ಟಿಕರ್ತನೇ ಕಾಪಾಡಬೇಕು. ಮತ್ತೊಂದು ದೃಷ್ಟಿಕೋನದಿಂದ ನೋಡಿದರೆ ರೋಡು ಕ್ರಾಸು ಮಾಡುತ್ತಿರುವ ಜಾನುವಾರು, ಮನುಷ್ಯರಿಗೆ ಝುಯ್ ಎಂದು ಹಾರುತ್ತ ಸಾಗುವ ಕಾರುಗಳಿಂದಲೂ ರಕ್ಷಣೆ ಬೇಕು!

ಎಲ್ಲರಿಗೂ ಅವಸರ. ಆದರೂ ರಸ್ತೆಯಲ್ಲಿ ಉಳಿಸಿದ ಎಷ್ಟು ನಿಮಿಷಗಳು ಉಳಿತಾಯವಾದುವು ಎನ್ನುವ ಲೆಕ್ಕ ಯಾರೂ ಇಟ್ಟ ಹಾಗೆ ಕಾಣದು. ಖಾಲಿ ಇದ್ದ ಕೆಂಪು ಬಸ್ಸು ವೇಗದಲ್ಲಿ ಬೈಕಿನಂತೆ ಅತ್ತಿತ್ತ ಬಳುಕುತ್ತ ಹೋಗಬಲ್ಲುದು. ತುಂಬಿದ ಲಾರಿ ಅಪ್ ಹತ್ತುತ್ತಿರುವಾಗ ಸುಸ್ತಾದವನು ಪೆಡಲ್ ಮಾಡುತ್ತಿರುವ ಸೈಕಲ್ಲಿನಂತೆ ಹತ್ತಬಲ್ಲುದು. ಗಿಡುಗದ ಕಣ್ಣಿಗೆ ಬಿದ್ದ ಇಲಿ ತನ್ನ ಜೀವ ಉಳಿಸಿಕೊಳ್ಳಲು ಸಿಕ್ಕಸಿಕ್ಕಲ್ಲೆಲ್ಲ ತೂರಿಕೊಂಡು ಓಡಿದಂತೆ ಕಾರುಗಳು ಯಾರು ಹಿಂದೆ ಬಿದ್ದಿಲ್ಲದಿದ್ದರೂ ರೇಸ್ ಹಾಕುತ್ತ ಹೋಗಬಲ್ಲವು. ಇದೆಲ್ಲ ನೋಡುವುದಕ್ಕೆ ಎಲ್ಲಾದರೂ ಸಿಕ್ಕೀತೆ?

ಅಚ್ಚು ಬಿಳಿಯ ಬಣ್ಣ ಹೊತ್ತರೂ ಕಪ್ಪಗಿನ ದಟ್ಟ ಹೊಗೆ ಹೊರಗೆ ಉಗುಳುತ್ತ, ಒಳಗೆ ತಣ್ಣಗಿನ ಚಳಿಯ ಏ ಸಿ ಹವೆಯಲ್ಲಿ ಜನರನ್ನು ಹೊತ್ತು, ಅತ್ತಿತ್ತ ಬಳುಕುತ್ತ, ತನ್ನದೇ ವೈಖರಿಯಲ್ಲಿ ಸಾಗುವ  ನಮ್ಮ ಕರ್ನಾಟಕ ರಾಜ್ಯದ ಸಾರಿಗೆಯ ವೋಲ್ವೋ ಬಸ್ಸು ಕೂಡ ಈ ಯುಗದಲ್ಲಿ 'ಐರಾವತ'ವಾಗಿರುವುದೂ ಕಾಕತಾಳೀಯವೆ?

ಚಿತ್ರ ಕೃಪೆ: mangaloreantimes.com

Rating
No votes yet

Comments