ಅರುಂಧತೀ ದರ್ಶನ
ನಮ್ಮ ಮದುವೆಗಳಲ್ಲಿ ಒಂದು ಸಂಪ್ರದಾಯವಿದೆ - ಅರುಂಧತೀ ದರ್ಶನ. ಎಲ್ಲ ಸಂಪ್ರದಾಯಗಳಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ, ನಾನು ನನ್ನ ಮದುವೆಯೂ ಸೇರಿದಂತೆ ಬೇಕಾದಷ್ಟು ಮದುವೆಯ ಸಮಾರಂಭಗಳಲ್ಲಿ ಇದನ್ನು ನೋಡಿದ್ದೇನೆ. ನೋಡಿ ಮನಸಿನೊಳಗೇ ನಕ್ಕಿದ್ದೇನೆ ಕೂಡ!
ಹಾಗಂತ ನನ್ನ ಸಂಪ್ರದಾಯಗಳನ್ನ ಕಂಡ್ರೆ ಮೂಗುಮುರಿಯೋವ್ನು ಅಂತ ಅಂದ್ಕೋಬೇಡಿ. ಕೆಲವು ಸಂಪ್ರದಾಯಗಳು ಅವುಗಳ ಒಳ ಅರ್ಥಕ್ಕೆ ಚೆನ್ನು. ಇನ್ನು ಕೆಲವು, ಅವು ನಡೆಯುವ ಸೊಬಗಿಗೆ ಚೆನ್ನು. ಮತ್ತೆ ಕೆಲವು, ಯಾರೋ ಹಿರಿಯರಿಗೋ, ಬೇಕಾದವರಿಗೋ ಹಿತವಾಗುತ್ತೆ ಅನ್ನೋ ಕಾರಣಕ್ಕೆ ಚೆನ್ನು. ಅಂತೂ ಯಾರಿಗೂ ತೊಂದ್ರೆ ಆಗ್ದೇ ಇದ್ರೆ ಕೆಲವು ಸಂಪ್ರದಾಯಗಳನ್ನ ಹಾಗೇ ಇಟ್ಕೋಬಹುದು. ಇಲ್ಲ ಇದ್ಯಾಕಪ್ಪ ಅಂತ ಬಿಟ್ಬಿಡಬಹುದು. ಅವರವರ ಇಷ್ಟ ಅನ್ನಿ.
ಇರ್ಲಿ. ಅದೇನೋ ಎಲ್ಲಿಂದಲೋ ಎಲ್ಲೋ ಹೋದೆ. ಇನ್ನು ಅರುಂಧತೀ ದರ್ಶನಕ್ಕೆ ಬರೋಣ. ಪುರೋಹಿತರು ಮದುವೆಯ ಕಲಾಪಗಳ ನಡುವೆ ಗಂಡು ಹೆಣ್ಣಿಗೆ ಹೀಗೆ ಅರುಂಧತೀ ದರ್ಶನ ಮಾಡಿಸೋದರ ಹಿಂದೆ ಒಂದು ಆಸಕ್ತಿ ಮೂಡಿಸುವ ವಿಷಯವಿದೆ. ಪುರಾಣಗಳಲ್ಲಿ ವಸಿಷ್ಟ ಅರುಂಧತಿಯರ ಹೇಗೆ ಅವರು ಗಂಡ ಹೆಂಡತಿ ಒಬ್ಬರಿಗೊಬ್ಬರು ಇಂಬಾಗಿದ್ದರು, ಎಂತಹ ಅನುರೂಪ ದಾಂಪತ್ಯ ಅವರದ್ದು ಅನ್ನುವ ಬಗ್ಗೆ ಹೇಳಿದ್ದಾರಂತೆ. ಹಾಗಾಗಿ, ಆಕಾಶದಲ್ಲಿ ಇರುವ ಸಪ್ತರ್ಷಿ ಮಂಡಲದಲ್ಲಿ ಏಳು ಋಷಿಗಳನ್ನು ಗುರ್ತಿಸುವುದಿದ್ದರೂ, ಅವರಲ್ಲಿ ವಸಿಷ್ಠರಿಗೆ ಮಾತ್ರ ಜೊತೆಯಲ್ಲೇ ಪತ್ನಿ ಅರುಂಧತಿಯೂ ಇದ್ದಾಳೆ. ಇಂತಹ ಪತಿಪತ್ನಿಯರನ್ನು ಆಗಸದಲ್ಲಿ ನೋಡಿ, ಮದುವೆಯಾಗುತ್ತಿರುವ ವಧುವರರೂ ಹಾಗೇ ಬಾಳಲಿ ಅನ್ನುವ ಹಾರೈಕೆಯೇ ಇದರ ಮೂಲ ಉದ್ದೇಶ.
ಹಾಗಿದ್ದರೆ ನಾನು ನಕ್ಕಿದ್ದು ಏಕೆಂದಿರಾ? ಇನ್ನೇನು ಮಾಡೋಣ ಸ್ವಾಮೀ? ಹಾಡು ಹಗಲೇ ಮದುವೆ ಛತ್ರದ ಒಳಗೋ ಹೊರಗೋ ಎಲ್ಲೋ ನಿಂತ ಜೋಯಿಸರು ಎಲ್ಲೋ ಒಂದು ಕಡೆ ಕೈತೋರಿ, ಅರುಂಧತಿಯನ್ನು ನೋಡಿ ಎಂದಾಗ ನಗು ಬರದೇ ಇರುತ್ತದೆಯೇ? ತೋರಿಸುವ ಪುರೋಹಿತರಲ್ಲಿ ಅರ್ದ ಜನಕ್ಕೆ ಅರುಂಧತಿ ಆಕಾಶದಲ್ಲಿ ಎಲ್ಲಿದೆ ಅಂತ ಗೊತ್ತಿರೋದಿಲ್ಲ. ಬೆಪ್ಪು ಬೆಪ್ಪಾಗಿ ನೋಡುವ ಮದುಮಕ್ಕಳಲ್ಲಿ ಮುಕ್ಕಾಲು ಪಾಲು ಜನಕ್ಕೆ ವಸಿಷ್ಠನೂ ಗೊತ್ತಿರೋದಿಲ್ಲ ಅರುಂಧತಿಯೂ ಗೊತ್ತಿರೋದಿಲ್ಲ. ಅಷ್ಟೇ ಅಲ್ಲ, ಬೇಕಾಗೂ ಇರೋದಿಲ್ಲ!
ಆದ್ರೆ, ಒಂದುವೇಳೆ ನಿಮಗೆ ಅರುಂಧತೀ ದರ್ಶನ ನಿಜವಾಗಿ ಮಾಡ್ಬೇಕಂದ್ರೆ ನಾನು ಮಾಡಿಸ್ತೀನಿ ಕೇಳಿ. ಬಹಳ ಕಷ್ಟ ಏನಿಲ್ಲ!
(ಕೆಳಗಿನ ಚಿತ್ರ: ಆಕಾಶದಲ್ಲಿ ಸಪ್ತರ್ಷಿ ಮಂಡಲ - ಮೇಲೆ ಚಿಟಕಿಸಿದರೆ ಪೂರ್ತಿ ಚಿತ್ರ ತೆರೆದುಕೊಳ್ಳುತ್ತೆ.)
ಕರ್ನಾಟಕದಲ್ಲಿ ವರ್ಷದ ಆರು ತಿಂಗಳು (ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ) ಒಂದು ಕತ್ತಲ ರಾತ್ರಿಯಲ್ಲಿ ಹೊರಕ್ಕೆ ಹೋಗಿ, ಉತ್ತರ ದಿಕ್ಕಿನಲ್ಲಿ ನೋಡಿದರೆ, ನಿಮಗೆ ಸಪ್ತರ್ಷಿ ಮಂಡಲವನ್ನು ಗುರುತಿಸೋದು ಬಹಳ ಸುಲಭ. ಆ ಸುತ್ತಮುತ್ತಲಿನಲ್ಲಿ, ನಾಲ್ಕು ನಕ್ಷತ್ರಗಳ ಚೌಕೋನ, ಮತ್ತೆ ಅದರ ಬಾಲದಂತಿರುವ ಮೂರು ನಕ್ಷತ್ರಗಳು, ಒಟ್ಟಿನಲ್ಲಿ ಒಂದು ತರಹ ಆಕಾಶದ ಗಾಳಿಪಟ ಅನ್ನಿ, ಚೆನ್ನಾಗಿಯೇ ಎದ್ದು ಕಾಣುತ್ತವೆ. ಇನ್ನುಳಿದ ತಿಂಗಳುಗಳಲ್ಲೂ ಕಾಣುತ್ತೆ, ನೀವು ಬೆಳಗಿನ ಜಾವ ಎದ್ದು ನೋಡಬೇಕಾಗಬಹುದು ಅಷ್ಟೇ. ಒಂದುವೇಳೆ ನೀವೇನಾದರೂ ೪೦ ಡಿಗ್ರೀ ಅಕ್ಷಾಂಶಕ್ಕೂ ಉತ್ತರದಲ್ಲಿದ್ದರೆ, ನಿಮಗೆ ಇದು ವರ್ಷ ಪೂರ್ತಿ , ರಾತ್ರಿಯ ಯಾವುದೇ ಹೊತ್ತಲ್ಲಾದರೂ ಕಾಣುತ್ತೆ. ಹಾಗೇ ನೀವು ದಕ್ಷಿಣಾರ್ಧಗೋಳದಲ್ಲಿ ೪೦ ಡಿಗ್ರಿಗೂ ದಕ್ಷಿಣದಲ್ಲಿ ಇದ್ದರೆ ನೀವು ಇದನ್ನ ನೋಡೋ ಆಸೆಯನ್ನ ಬಿಡಿ.
ಅಂದಹಾಗೆ ಸಪ್ತರ್ಷಿಮಂಡಲ ಅನ್ನೋದು ಭಾರತದಲ್ಲಿ, ಸಾವಿರಾರು ವರ್ಷಗಳ ಹಿಂದೆಯೇ ಕೊಟ್ಟಿರೋ ಹೆಸರು. ಬೇರೆ ಕಡೆಗಳಲ್ಲಿ ಇದಕ್ಕೆ Big Dipper ಎಂಬ ಹೆಸರಿದೆ. ಆದರೆ, ಇದೇ ಒಂದು ತಾರಾಪುಂಜ (constellation) ಅಂತ ಪರಿಗಣಿಸೋದಿಲ್ಲ. ಬದಲಿಗೆ ಇದು Ursa Major (Great Bear) ಎಂಬ ತಾರಾ ಪುಂಜದ ಭಾಗ. ಆದರೆ Ursa Major ನ ಉಳಿದ ನಕ್ಷತ್ರಗಳೆಲ್ಲ ಇನ್ನೂ ಕಡಿಮೆ ಪ್ರಕಾಶವನ್ನು ಹೊಂದಿರೋದ್ರಿಂದ, ಅಲ್ಲಿ ಈ ಸಪ್ತರ್ಷಿ ಮಂಡಲಕ್ಕೆ ಸೇರೋ ಏಳು ನಕ್ಷತ್ರಗಳೇ ಎದ್ದು ಕಾಣುತ್ತವೆ ಅನ್ನಿ.
ಗಾಳಿಪಟದ ಬಾಲದ ತುಂದಿಯಿಂದ ಹೋದಿರಾದರೆ, ನಕ್ಷತ್ರಗಳ ಹೆಸರು ಹೀಗಿವೆ: ಮರೀಚಿ, ವಸಿಷ್ಟ, ಆಂಗೀರಸ, ಅತ್ರಿ, ಪುಲಸ್ತ್ಯ, ಪುಲಹ ಮತ್ತು ಕ್ರತು. ಈ ಕೊನೆಯ ಎರಡು ನಕ್ಷತ್ರಗಳಿವೆಯಲ್ಲ, ಪುಲಹ (ಚಿತ್ರದಲ್ಲಿ ಇದರ ಪಕ್ಕ M ಎಂಬ ಅಕ್ಷರ ಇದೆ ನೋಡಿ) -ಮತ್ತು-ಕ್ರತು (ಪುಲಹ ನಿಂದ ನೇರ ಕೆಳಗಿನ ನಕ್ಷತ್ರ ಇದು) , ಅವುಗಳನ್ನ pointers, ಅಂದರೆ ದಿಕ್ಸೂಚಿ ಅಂತಲೂ ಅಂತಾರೆ. ಯಾಕಂದರೆ, ಈ ಎರಡು ನಕ್ಷತ್ರಗಳನ್ನ ಸೇರಿಸಿ ಕೆಳಕ್ಕೆ ಹೋದರೆ ನಿಮಗೆ ಧ್ರುವ ನಕ್ಷತ್ರ ಸಿಗುತ್ತೆ! ಚಿತ್ರದ ಕೆಳ ಮೂಲೆಗೆ ಹತ್ತಿರವಾದ ನಕ್ಷತ್ರವೇ ಧ್ರುವ (Pole Star). ಇದು ಯಾಕೆ ಧ್ರುವ ಅನ್ನೋದರ ಬಗ್ಗೆ ಇನ್ನೊಮ್ಮೆ ಮಾತಾಡೋಣ. ಸದ್ಯಕ್ಕೆ, ಇದು ಎಲ್ಲಿನಿಂದ ನೋಡಿದರೂ ನಿಜ-ಉತ್ತರದಿಕ್ಕಿನಲ್ಲೇ (True-North) ಇರುತ್ತೆ ಅಂತ ತಿಳಿದರೆ ಸಾಕು.
ಅರುಂಧತೀನ ಬಿಟ್ಟೇ ಬಿಟ್ಟೆನಲ್ಲ ಅನ್ಬೇಡಿ. ಚಿತ್ರದಲ್ಲಿ ಒಂದು ನಕ್ಷತ್ರದ ಸುತ್ತ ಒಂದು ಬಿಳೀ ಆವರಣ ಇದೆಯಲ್ಲ, ಅದೇ ನಕ್ಷತ್ರ ವಸಿಷ್ಠ. ಗುರುತಿಸೋಕೆ ಸುಲಭವಾಗಲಿ ಅನ್ನೋ ಕಾರಣಕ್ಕೆ ಹಾಗೆ ತೋರಿಸಿದೇನೆ. ಅಲ್ಲೇ ಕಣ್ಣಿಟ್ಟು ನೋಡಿದರೆ (ಇಲ್ಲಿ ಚಿತ್ರದಲ್ಲಿ ಅಲ್ಲ ಸ್ವಾಮೀ, ಆಕಾಶದಲ್ಲಿ ವಸಿಷ್ಠನನ್ನು ಗುರುತಿಸಿದ ಮೇಲೆ, ಅಲ್ಲಿ!) ಕೆಳಗೇ ಇನ್ನೊಂದು ಬಹಳ ಮಬ್ಬಾದ ಒಂದು ನಕ್ಷತ್ರ ಕಾಣುತ್ತೆ. ಹೇಗೆ ಅನ್ನೋದಕ್ಕೆ ಇಲ್ಲಿ ಕ್ಲಿಕ್ಕಿಸಿ, ವಿಕಿಪೀಡಿಯಾದಲ್ಲಿ ಇರುವ ಚಿತ್ರ ಇದನ್ನ ಚೆನ್ನಾಗಿ ತೋರಿಸಿದೆ.
ಅಂದರೆ, ಅರುಂಧತಿ. ಜೀವನದಲ್ಲಿ ಹೇಗೋ, ಆಗಸದಲ್ಲಿಯೂ ವಸಿಷ್ಠನ ಪಕ್ಕದಲ್ಲೇ ಅರುಂಧತಿ ಇದ್ದಾಳೆ ಅನ್ನುವುದೇ ಇಲ್ಲಿಯ ಒಂದು ಹೆಚ್ಚಾಯ. ಇನ್ನೂ ಸರಿಯಾಗಿ ನೋಡಿದರೆ, ಹೀಗೆ ಒಂದು ಪಕ್ಕದಲ್ಲೇ ಇರುವ ನಕ್ಷತ್ರ ಇದೆ ಎನ್ನುವ ಕಾರಣಕ್ಕೇ, ಈ ಬಾಲಂಗೋಚಿಯ ನಡುವಿನ ನಕ್ಷತ್ರಕ್ಕೆ ವಸಿಷ್ಠ ಎಂಬ ಹೆಸರನ್ನಿಟ್ಟರು ಅಂತ ಊಹಿಸಬಹುದು.
ಇನ್ನೊಂದು ವಿಶೇಷ ಇದೆ ಇಲ್ಲಿ - ಅದೊಂದು ಹೇಳಿ ಈ ಹರಟೆಯನ್ನ ಮುಗಿಸಿಬಿಡುವೆ. ಆಕಾಶದಲ್ಲಿ ಅಕ್ಕ ಪಕ್ಕದಲ್ಲಿ ಕಾಣುವ ನಕ್ಷತ್ರಗಳು ನಿಜವಾಗಿ ಒಂದಕ್ಕೊಂದು ಬಹಳ ದೂರ (ನೂರಾರು ಸಾವಿರಾರು ಬೆಳಕಿನವರ್ಷದಷ್ಟೂ) ಇರಬಹುದು. ಅವು ನಾವು ನೋಡುತ್ತಿರುವ ಎಡೆಯಿಂದ ಒಂದೇ ಸಾಲಿನಗುಂಟ ಇರುವುದರಿಂದ ಹಾಗೆ ಪಕ್ಕಪಕ್ಕದಲ್ಲಿ ಕಾಣುತ್ತಿರುತ್ತವೆ, ಸಾಮಾನ್ಯವಾಗಿ. ಆದರೆ, ಇಲ್ಲಿ ಮಾತ್ರ ಹಾಗಲ್ಲ. ವಸಿಷ್ಠ (Mizar) ಮತ್ತು ಅರುಂಧತಿ (Alcor), ನಿಜವಾಗಿ ಒಂದು ತಾರಾಜೋಡಿ. ಅಂದರೆ, ಸೂರ್ಯನ ಸುತ್ತ ಭೂಮಿ, ಇತರ ಗ್ರಹಗಳೂ ಸುತ್ತುವ ಹಾಗೆ, ವಸಿಷ್ಠನ ಸುತ್ತ ಅರುಂಧತಿ ಸುತ್ತುತ್ತಲಿದೆ. ಆದರೆ, ಇನ್ನೂ ಒಂದು ಹೆಚ್ಚಿನ ಗಮ್ಮತ್ತಿದೆ ಇದರಲ್ಲಿ. ಯಾಕಂದ್ರೆ, ವಸಿಷ್ಠ ಅಂತ ನಾವು ಯಾವುದಕ್ಕೆ ಹೇಳುತ್ತೀವೋ, ಅದು ಒಂದು ಜೋಡಿತಾರೆ (Binary) - ಅಂದರೆ ಎರಡು ನಕ್ಷತ್ರಗಳ ಒಂದು ಕೂಟ. ಚಿಕ್ಕ ದೂರದರ್ಶಕಗಳಲ್ಲೂ, ಇದನ್ನು ಎರಡಾಗಿ - Mizar A ಮತ್ತು Mizar B - ನೋಡಬಹುದು. ಅದೇ ರೀತಿ, ಅರುಂಧತಿ ಕೂಡ ಒಂದು ಜೋಡಿ ತಾರೆ. ಇಷ್ಟು ಸಾಲದು ಅಂತ Mizar-A ಮತ್ತು Mizar-B ಗಳು ಕೂಡ ಜೋಡಿಗಳೇ. ಇದನ್ನ ದೂರದರ್ಶಕದಲ್ಲಿ ಕಾಣೋಕಾಗೋಲ್ಲ, ಆದರೆ ವರ್ಣಪಟಲದ (Spectroscope) ಸಹಾಯದಿಂದ ಇದನ್ನ ಪತ್ತೆ ಹಚ್ಚಿದ್ದಾರೆ. ಹಾಗಾಗಿ, ನಮಗೆ ಕಾಣೋ ಈ ವಸಿಷ್ಠ-ಅರುಂಧತಿಯಲ್ಲಿ ಇರೋದು ಆರು ತಾರೆಗಳ ಒಂದು ಕೂಟ!
ಇನ್ಯಾಕೆ ತಡ? ಕತ್ತಲಾದ ಮೇಲೆ ಹೊರಗಡೆ ಹೋಗಿ ನೋಡ್ತೀರಲ್ಲ? ಯಾರಾದ್ರೂ ಎಲ್ಲೋ ತೋರಿಸಿ, ನೋಡಿ ಇದು ವಸಿಷ್ಠ , ಇದು ಅರುಂಧತಿ ಅಂತ ತಪ್ಪು ತಪ್ಪಾಗಿ ತೋರಿಸಿದರೆ ತಿಳಿಸಿ ಹೇಳ್ತೀರಲ್ಲ?
-ಹಂಸಾನಂದಿ
Comments
ಉ: ಅರುಂಧತೀ ದರ್ಶನ
ಉ: ಅರುಂಧತೀ ದರ್ಶನ
ಉ: ಅರುಂಧತೀ ದರ್ಶನ
ಉ: ಅರುಂಧತೀ ದರ್ಶನ
ಉ: ಅರುಂಧತೀ ದರ್ಶನ
ಉ: ಅರುಂಧತೀ ದರ್ಶನ
In reply to ಉ: ಅರುಂಧತೀ ದರ್ಶನ by sasi.hebbar
ಉ: ಅರುಂಧತೀ ದರ್ಶನ
ಉ: ಅರುಂಧತೀ ದರ್ಶನ
ಉ: ಅರುಂಧತೀ ದರ್ಶನ
ಉ: ಅರುಂಧತೀ ದರ್ಶನ
ಉ: ಅರುಂಧತೀ ದರ್ಶನ
In reply to ಉ: ಅರುಂಧತೀ ದರ್ಶನ by thesalimath
ಉ: ಅರುಂಧತೀ ದರ್ಶನ
In reply to ಉ: ಅರುಂಧತೀ ದರ್ಶನ by thesalimath
ಉ: ಅರುಂಧತೀ ದರ್ಶನ
ಉ: ಅರುಂಧತೀ ದರ್ಶನ
ಉ: ಅರುಂಧತೀ ದರ್ಶನ
ಉ: ಅರುಂಧತೀ ದರ್ಶನ
ಉ: ಅರುಂಧತೀ ದರ್ಶನ