ಮೇರಿ ಲಯನ್ ಮತ್ತು ಎಕ್ಸ್ ವರ್ಣತಂತುವಿನ ಯಾದೃಚ್ಛಿಕ ನಿಷ್ಕ್ರಿಯತೆ - ಮೊದಲ ಭಾಗ (Mary Lyon and random inactivation of X chromosome - Part 1)

ಮೇರಿ ಲಯನ್ ಮತ್ತು ಎಕ್ಸ್ ವರ್ಣತಂತುವಿನ ಯಾದೃಚ್ಛಿಕ ನಿಷ್ಕ್ರಿಯತೆ - ಮೊದಲ ಭಾಗ (Mary Lyon and random inactivation of X chromosome - Part 1)

ಮೊನ್ನೆಯೇ ಶುರು ಮಾಡಿದ ಲೇಖನವನ್ನು ಇನ್ನೊಮ್ಮೆ ಶುರು ಮಾಡಿದ್ದೇನೆ. :-) ಈ ಸರ್ತಿ ಕಂತುಗಳಲ್ಲಿ ಬರೆಯುವುದಾಗಿ ನಿರ್ಧರಿಸಿದ್ದೇನೆ. ನಿಮಗೆ ಅರ್ಥವಾಯಿತೋ ಇಲ್ಲವೋ, ದಯವಿಟ್ಟು ತಿಳಿಸಿ. 

೧೯೨೫ರಲ್ಲಿ ಹುಟ್ಟಿದ ಮೇರಿ ಲಯನ್ ಬ್ರಿಟಿಶ್ ವಿಜ್ಞಾನಿ. ಕಾಂಬ್ರಿಜ್ಜಿನಲ್ಲಿ ಅವರು ಪದವಿ ಪೂರೈಸಿದಾಗ ಮಹಿಳೆಯರಿಗೆ ಪದವಿ ನೀಡುವ ಪದ್ಧತಿಯಿರಲಿಲ್ಲ. ಮುಂದೆ ಅವರು ಕಾಂಬ್ರಿಜ್ಜಿನಲ್ಲಿಯೇ ಆರ್ ಎ ಫಿಷರ್ ಅವರ ಮಾರ್ಗದರ್ಶನದಲ್ಲಿ ಡಾಕ್ಟೊರೇಟ್ ಅನ್ನು ಪಡೆದರು.
ಈಗ್ಗೆ ಐವತ್ತು ವರ್ಷಗಳ ಹಿಂದೆ ೧೯೬೧ರಲ್ಲಿ ಹೆಸರಾಂತ 'ನೇಚರ್' ಪತ್ರಿಕೆಯಲ್ಲಿ ಮೇರಿ ಲಯನ್ ಅವರು 'ಎಕ್ಸ್ ವರ್ಣತಂತುವಿನ ಯಾದೃಚ್ಛಿಕ ನಿಷ್ಕ್ರಿಯತೆ' ಸಿದ್ಧಾಂತವನ್ನು ಪ್ರಕಟಿಸಿದರು. ಈ ಸಿದ್ಧಾಂತವು ಅನುವಂಶೀಯ ಕ್ಷೇತ್ರದಲ್ಲಿ ಬಹಳ ಮಹತ್ವದ್ದಾಗಿದ್ದು, ಇದಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಸಹ ಮನ್ನಣೆಯಿದೆ. ಚಿಕ್ಕದಾಗಿ ಹೇಳುವುದಾದರೆ, ಈ ಸಿದ್ಧಾಂತದ ಪ್ರಕಾರ ಸಸ್ತನಿಗಳ ಎರಡು ಎಕ್ಸ್ ವರ್ಣತಂತುಗಳಲ್ಲಿ ಒಂದು ಎಕ್ಸ್ ವರ್ಣತಂತು ಮಾತ್ರ ಕಾರ್ಯಶೀಲವಾಗಿರುತ್ತದೆ. ಇದನ್ನು 'ಲಯನೈಸೇಶನ್' ಎಂದೇ ಕರೆಯಲಾಗುತ್ತದೆ.

ಎಕ್ಸ್ ವರ್ಣತಂತುವಿನ ಯಾದೃಚ್ಛಿಕ ನಿಷ್ಕ್ರಿಯತೆಯ ಕುರಿತು ಇನ್ನಷ್ಟು:

ಸಸ್ತನಿಗಳಲ್ಲಿ ಮನುಷ್ಯರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಪುರುಷರಲ್ಲಿ ಒಟ್ಟೂ ೪೬ ವರ್ಣತಂತುಗಳು ಇರುತ್ತವೆ ಅವುಗಳಲ್ಲಿ ೨೨ ಜೊತೆ ವರ್ಣತಂತುಗಳನ್ನು ಆಟೋಸೋಮ್ಸ್ ಎಂದು ಕರೆಯುತ್ತೇವೆ ಇನ್ನುಳಿದವು ಒಂದು ಎಕ್ಸ್ ವರ್ಣತಂತು, ಇನ್ನೊಂದು ವಾಯ್ ವರ್ಣತಂತು. ಸ್ತ್ರೀಯರಲ್ಲಿ ಸಹ ೪೬  ವರ್ಣತಂತುಗಳು ಇರುತ್ತವೆ. ಅವುಗಳಲ್ಲಿ ೨೨ ಜೊತೆ ವರ್ಣತಂತುಗಳು  ಆಟೋಸೋಮ್ಸ್ ಹಾಗೂ ಇನ್ನುಳಿದವೆರಡೂ ಎಕ್ಸ್ ವರ್ಣತಂತುಗಳಾಗಿರುತ್ತವೆ. ಇದೇ ಆಧಾರದ ಮೇಲೆ ಲಿಂಗವು ನಿರ್ಧಾರವಾಗುತ್ತದೆ ಎಂಬುದು ೧೯೫೦ರ ದಶಕದಲ್ಲಿ ಸ್ಪಷ್ಟವಾಗಿತ್ತು. ಆ ಸಮಯದಲ್ಲಿ  ವಿಜ್ಞಾನಿಗಳನ್ನು ಕಾಡಿದ ಪ್ರಶ್ನೆ ಎಂದರೆ ಸ್ತ್ರೀಯರಲ್ಲಿ ಪುರುಷರಿಗಿಂತ ಒಂದು ಎಕ್ಸ್ ವರ್ಣತಂತು ಹೆಚ್ಚಿಗೆ ಇರುವುದರಿಂದ ಅವರಲ್ಲಿ ಎಕ್ಸ್ ವರ್ಣತಂತುವಿನ ಮೇಲಿರುವ ಜೀನ್ ಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಶೀಲವಾಗಿರಬೇಕಲ್ಲವೇ? ಹಾಗಾದರೆ, ಅದರಿಂದ ಹಾನಿ ಏಕೆ ಉಂಟಾಗುವುದಿಲ್ಲ?

ಈ ಕುರಿತು ಹಲವಾರು ಪ್ರಯೋಗಗಳು ಬೆಳಕು ಚೆಲ್ಲಿದವು; ಆದರೆ ಅದಕ್ಕೊಂದು ರೂಪ ಕೊಟ್ಟವರು ಮೇರಿ ಲಯನ್.  

(ಮುಂದುವರಿಯುವುದು)

 

Comments