ಸೌಭಾಗ್ಯ ಮನೆಗೆ ಮರಳಿದ ಮಾರನೆ ದಿನ - ವಿರಾಮದ ನಂತರ - ಶುಭಂ

ಸೌಭಾಗ್ಯ ಮನೆಗೆ ಮರಳಿದ ಮಾರನೆ ದಿನ - ವಿರಾಮದ ನಂತರ - ಶುಭಂ

ತೋಟದ ಕಡೆಗೆ ಹೊರಟ ದಂಪತಿಗಳು ಊರ ಪರಿಮಿತಿಯನ್ನು ದಾಟಿ ತೋಟದ ಸಾಲುಗಳೆಡೆಗೆ ಹೋಗುವ ಕಿರುದಾರಿಯನ್ನು ಪ್ರವೇಶಿಸಿದೊಡನೆ, ಸೌಭಾಗ್ಯಳಲ್ಲಿ ಸ್ವಲ್ಪ ಬದಲಾವಣೆಯನ್ನು ಗಮನಿಸಿದ ನರಸಿಂಹ, ನಡೆಯುತ್ತಾ, ನಡೆಯುತ್ತಾ ಸನಿಹಕ್ಕೆ ಬರತೊಡಗಿದ ತನ್ನವಳು ಸ್ವಲ್ಪ ಗಾಬರಿಯಿಂದ ಅತ್ತ ಇತ್ತ ತಿರುಗಿನೋಡುವುದನ್ನೂ ಗಮನಿಸಿದ, ಸಿಹಿನೀರಿನ ಬಾವಿಯ ಬಳಿಬರುವ ಹೊತ್ತಿಗೆ ಸೌಭಾಗ್ಯ ತಲೆಯನ್ನು ತಗ್ಗಿಸಿ ಗಟ್ಟಿಯಾಗಿ ತನ್ನ ಕೈಗಳನ್ನು ಹಿಡಿದು ನಡೆಯುವುದನ್ನು ನೋಡಿ, ಸುತ್ತಮುತ್ತಲೂ ಒಮ್ಮೆ ಗಮನಿಸಿ ನೋಡಿದ ಯಾರೂ ಇದ್ದಹಾಗೆ ಕಾಣಲಿಲ್ಲ, ಮತ್ತೆ ಏಕೆ ಇವಳು ಈ ರೀತಿ ಗಾಬರಿಯಾಗುತ್ತಿದ್ದಾಳೆ, ಮನಸ್ಸಿನಲ್ಲಿ ಏನೊ ಭಯ ತುಂಬಿಕೊಂಡಿದ್ದಾಳೆ, ಏಕೆ?, - ಈ ದಾರಿ ಸ್ವಲ್ಪ ನಿಶಬ್ದವಾಗಿದೆ, ಪಕ್ಕದಲ್ಲಿ ಹೆಣೆದುಕೊಂಡಿರುವ ಬೇಲಿ ಗಿಡಗಳ ಸಾಲು, ಹತ್ತಿರದಲ್ಲಿರುವ ದಟ್ಟವಾದ ಮರಗಳ ಗುಂಪು, ಅಲ್ಲಿಂದ ಬರುವ ಸಣ್ಣ ಪುಟ್ಟ ಕೀಟಗಳ ವಿಚಿತ್ರ ಶಬ್ದ, ಬೀಸುವ ಗಾಳಿಯ ಶಬ್ದ, ಬಹುಷಃ ಇದರಿಂದೇನಾದರೂ ಗಾಬರಿಯಾಗಿದ್ದಾಳಾ?, ಇಲ್ಲ ಹಳ್ಳಿಯ ಈ ರೀತಿಯ ವಾತಾವರಣ ಇವಳೂ ಕಂಡಿರುವವಳೆ ಅದರೂ ಏಕೆ ಗಾಬರಿ?  ಅಂದು ಕೊಂಡವನೆ,

-‘ ಸೌಭಾಗ್ಯ ಏಕೆ ಗಾಬರಿಯಾಗಿದ್ದೀಯ? ಏನಾಯ್ತು?‘ -

-‘ಹಾ.. ಇಲ್ಲಪ್ಪ ನನಗ್ಯಾಕೆ ಗಾಬರಿ, ಏನಿಲ್ಲ‘-

-‘ಭಾಗ್ಯ ನೀನು ಹೇಗೆ ಅಂತ ನನಗೆ ಗೊತ್ತು, ಗಾಬರಿ ಬೀಳೋರ ಮುಖದಲ್ಲಿ, ಅದನ್ನ ಸ್ಪಷ್ಟವಾಗಿ ಎದುರಿಗಿರುವವನು ಗಮನಿಸಬಹುದು, ಏನು ಅಂತ ಹೇಳು, ಏನಾದ್ರೂ ತೊಂದ್ರೆ ಇದ್ರೆ ಅದಕ್ಕೆ ಪರಿಹಾರ ಹುಡುಕೋಣ‘-

ಸ್ವಲ್ಪ ಹೊತ್ತು ಮೌನವಾಗೇ ನಡೆದ ಸೌಭಾಗ್ಯ ನಂತರ ಸಾವರಿಸಿಕೊಂಡು,

-‘ ನೀವು ಹೇಳೋದು ಸರಿ ಅನ್ನಿಸುತ್ತೆ, ನನ್ನಲ್ಲಿ ಕೊರೆಯುತ್ತಿರುವ ವಿಷಯವನ್ನು ನಿಮಗೆ ತಿಳಿಸಿ ಬಿಡುತ್ತೇನೆ ಆಗ ನನಗೂ ಸಮಾಧಾನ, ನಾನು ಆ ದಿನವೇ ಹೇಳಬೇಕೆಂದಿದ್ದೆ ಆದರೆ ನಾನೆ ಏನಾದ್ರೂ ಪರಿಹಾರ ಹುಡುಕಬಹುದೇನೋ ಎಂದು ಸುಮ್ಮನಾದೆ, ಈ ಘಟನೆಗಳೆಲ್ಲಾ ನಡೆದು ಮನೆಗೆ ಬಂದಾಗ ಹೇಳಲು ಹೊರಟೆ ಆದ್ರೆ ಮಾವನರು ನೀನು ಏನೂ ಹೇಳಬೇಡ ಬಿಡಮ್ಮ ಅಂತ ತಡೆದು ಬಿಟ್ರು,‘ -

-‘ಸುಭಾಗ್ಯ, ಅಪ್ಪ ಇವತ್ತು ನಿನ್ನನ್ನು ತೋಟಕ್ಕೆ ಕರೆದುಕೊಂಡು ಹೋಗು ಅಂದ್ರಲ್ಲ ಅದು ಏನಕ್ಕೆ ಅಂನ್ಕೊಂಡಿದಿಯ? ಅವರಿಗೆ ಗೊತ್ತು ನಾವಿಬ್ಬರೂ ಹೊರಗೆ ಬಂದ್ರೆ ನಿರಾಳವಾಗಿ ಮಾತನಾಡ್ಬಹುದು, ಆಗ ನಿನ್ನ ಮನಸ್ಸೂ ಹಗುರವಾಗುತ್ತೆ ಅಂತ, ಇದೆಲ್ಲಾ ಯೊಚ್ನೆ ಮಾಡೆ ಅವರು ಕಳುಹಿಸಿರುವುದು, ಒಂದು ಕೆಲ್ಸ ಮಾಡೋಣ ಬಾ ಇಲ್ಲಿ ಕುಳಿತುಕೊ ಅದೇನಿದೆಯೊ ನಂನ್ಗೆ ಹೇಳು‘- ಅಂದವನೆ ಸಿಹಿನೀರಿನ ಬಾವಿಯ ಕಟ್ಟೆಯ ಮೇಲೆ ಕುಳಿತ.

-‘ಅಯ್ಯೊ ಇಲ್ಲಿ ಬೇಡಪ್ಪ ಮುಂದೆ ಹೋಗೋಣ‘ -

-‘ಇಲ್ಲ ಭಾಗ್ಯ ಇಲ್ಲೇ ಹೇಳು, ನಿನ್ನ ಭಯ ಇಲ್ಲೀದು ಅಂತ ಇದ್ರೆ ಅದೂ ಹೋಗ್ಲಿ‘ -

- ‘ಆ ಘಟನೆ ನಡೆಯುವುದಕ್ಕೆ ನಾಂದಿ ಆಗಿದ್ದೆ ಈ ಬಾವಿಯ ಬಳಿ ಹಾಗಾಗಿ ಈ ಸ್ಥಳ ಭಯ ಅಷ್ಟೆ, ಪರ್ವಾಗಿಲ್ಲ ಈಗ ನೀವಿದ್ದೀರಲ್ಲ ಹೇಳಿ ಬಿಡುತ್ತೇನೆ,

ನಮ್ಮ ಅಪ್ಪ ಅಮ್ಮ ಸತ್ತಮೇಲೆ ಸ್ವಲ್ಪ ವರ್ಷಗಳು ನಾವು ನಮ್ಮ ಹಳ್ಳಿಯಲ್ಲೇ ಇದ್ದೆವು, ಆಮೇಲೆ ಜೀವನ ನಡೆಯವುದು ಕಷ್ಟವೆನಿಸಿದಾಗ ನಮ್ಮಣ್ಣ ಯೋಚನೆ ಮಾಡಿ ಇದ್ದ ಸ್ವಲ್ಪ ಜಮೀನನ್ನು ಮಾರಾಟ ಮಾಡಿ ಊರು ಬಿಟ್ಟು, ಹಾಸನಕ್ಕೆ ಬಂದು ಸೇರಿಕೊಂಡೆವು, ಅಲ್ಲಿ ಯಾವುದೊ ಸಣ್ಣ ಫ಼್ಯಾಕ್ಟರಿಯಲ್ಲಿ ನಮ್ಮಣ್ಣ ಕೆಲಸಕ್ಕೆ ಸೇರಿಕೊಂಡೆ ಡಿಪ್ಲೋಮೊ ನಂತರದ ವಿದ್ಯಾಭ್ಯಾಸ ಮುಂದುವರೆಸಿದ, ನಾನು ಆಗ ಮೊದಲ ವರ್ಷದ ಡಿಗ್ರಿ ಓದುತ್ತಿದ್ದೆ, ಅಲ್ಲಿ ಸಚಿನ್ ಅನ್ನುವ ಒಬ್ಬ ಹುಡುಗ ನನ್ನ ಹಿಂದೆ ಬಿದಿದ್ದ, ನಾನು ಎಷ್ಟು ನಿರಾಕರಿಸಿದರೂ ಅವನು ಬಿಡಲಿಲ್ಲ, ಜೊತೆಗೆ ಅವನ ಕಣ್ಣುಗಳನ್ನು ನೆನೆದರೆ ನನಗೆ ಈಗಲೂ ನಡುಕ ಹುಟ್ಟುತ್ತದೆ, ನೀಲಿ ಮಿಶ್ರಿತ ಕಂದು ಬಣ್ಣದ ಕಣ್ಣುಗಳು, ಅದನ್ನು ಕಿರಿದಾಗಿಸಿ ಮಾತಾನಾಡುತ್ತಾ ಒಂದು ತರಹ ನಗುತ್ತಿದ್ದ, ಹಾಗೆ ಅವನು ಎದುರು ನಿಂತರೆ ನನಗೆ ಒಂದುರೀತಿಯ ಭಯ ಆವರಿಸುತ್ತಿತ್ತು, ಸಮ್ಮೋಹನಕ್ಕೆ ಒಳಪಡುತ್ತಿದ್ದೇನೇನೋ ಏನ್ನುವ ಭಯ ಕಾಡುತ್ತಿತ್ತು, ಸ್ನೇಹಿತೆಯರೆಲ್ಲ ಅವನ ಬಳಿ ಸ್ವಲ್ಪ ಹುಷಾರು ಸೌಭಾಗ್ಯ, ಒಂಥರ ಮನುಷ್ಯ ಜೊತೆಗೆ ದುಡ್ಡಿರುವ ಜನ, ಅಂತ ಎಚ್ಚರಿಸುತ್ತಿದ್ದರು, ನಾನು ಯಾವಗ್ಲೂ ಯಾರದಾದರೂ ಜೊತೆಯಲ್ಲೆ ಇರವ ಹಾಗೆ ನೋಡಿಕೊಳ್ಳುತ್ತಿದ್ದೆ, ಆದರೂ ಒಮ್ಮೊಮ್ಮೆ ಅವನ ನೋಟಕ್ಕೆ ಗುರಿಯಾಗಿಬಿಡುತ್ತಿದ್ದೆ, ಆಗೆಲ್ಲಾ ಎಷ್ಟು ಭಯ ಆಗೋದು ಗೊತ್ತಾ? ಅಣ್ಣನ ಕೈಲಿ ಹೇಳೋಣ ಅಂದ್ರೆ ಅವನು ಏನನ್ನುತ್ತಾನೋ ಅನ್ನುವ ಭಯ, ಇದರಿಂದ ಪಾರಾಗುವ ಬಗೆ ಹೇಗೆಂದು ಯೋಚಿಸುತ್ತಿರುವಾಗ ದೇವರು ದಾರಿ ತೋರಿಸಿದ, ನಮ್ಮಣ್ಣನಿಗೆ ಬೆಂಗಳೂರ್ನಲ್ಲಿ ಕೆಲಸ ಸಿಕ್ತು, ಹಾಸನ ಬಿಟ್ಟು ಬಂದೆವು, ನಾನು ಎಲ್ಲ ಮರೆತು ಬಿಟ್ಟೆ, ಆಮೇಲೆ ನನ್ನ ಓದೆಲ್ಲ ಮುಗಿತು, ನಮ್ಮ ಮದುವೆ ಆಯ್ತು ಇನ್ನು ನನ್ನದು ನೆಮ್ಮದಿಯ ಬದುಕು ಎಂದು ಸಂತಸ ಪಡುತ್ತಿದ್ದೆ, ಅಷ್ಟರಲ್ಲಿ ಮತ್ತೆ ವಕ್ಕರಿಸಿದ ಅವನು. ಆವತ್ತು ಅತ್ತೆ ಮಾವ ಬೆಂಗಳೂರಿಗೆ ಹೋಗಿದ್ರು, ನೀವು ತೋಟದ ಬೆಳೆ ವಿಷಯವಾಗಿ ಹತ್ತಿರದ ಪಟ್ಟಣಕ್ಕೆ ಹೋಗಿದ್ದಿರಲ್ಲ, ಆ ದಿನ ನಾನು ಒಬ್ಬಳೆ ಸಿಹಿನೀರಿನ ಈ ಬಾವಿಯ ಬಳಿ ಬಂದಾಗ ಅದೇ ಕಣ್ಣುಗಳು ಇಲ್ಲಿ ಬಾವಿಯ ಕಟ್ಟೆಯ ಬಳಿ ನಿಂತಿವೆ, ಮತ್ತವನೆ ಕಣ್ಣುಗಳನ್ನು ಕಿರಿದಾಗಿಸಿ ಮುಸಿಮುಸಿ ನಗುತ್ತಾ ‘ಏನು ಸೌಭಾಗ್ಯ ಅಲ್ಲ ಅಲ್ಲ ಸೌಂದರ್ಯ ಊರು ಬಿಟ್ಕೊಂಡು ಬಂದ್ಬಿಟ್ರೆ ತಪ್ಪಿಸಿಕೊಂಡುಬಿಟ್ಟೆ ಅಂದ್ಕೊಂಡ್ ಬಿಟ್ಟಾ? ಈ ಕಣ್ಣು ತಪ್ಪಿಸಿ ಇಡಿ ಪ್ರಪಂಚದಲ್ಲೆ ಇರೋಕ್ಕಾಗಲ್ಲ ಗೊತ್ತಾಯ್ತಾ? ಸುಮ್ನೆ ನನ್ನ ಜೊತೆ ಬಂದ್ಬಿಡು, ಇಲ್ದಿದ್ರೆ ನೋಡು ಇಲ್ಲಿ ಅಂತ ಫ಼ೋಟೊ ಒಂದನ್ನು ತೋರಿಸ್ದ, ಅದನ್ನು ನೋಡಿ ನನ್ನ ಜಂಘಾಬಲವೇ ಉಡುಗಿ ಹೋಯ್ತು. ನಾನು ಕಣ್ಣು ಮುಚ್ಚಿ ನಿಂತಿದ್ದೇನೆ ಅವನು ನನ್ನ ಕೆನ್ನೆಗೆ ಮುತ್ತು ಕೊಡುತ್ತಿದ್ದಾನೆ. ನನಗೆ ಹಳೆಯ ನೆನಪು ಹೊರಬಂತು, ನಾವು ಹಾಸನದ ಕಾಲೇಜ್ನಲ್ಲಿ ಒಂದು ನಾಟಕ ಆಡಿದ್ದೆವು, ಅದರಲ್ಲಿ ನಾನು ನಾಯಕಿಯ ಪಾತ್ರ, ನಾನು ಬೇಡವೆಂದರೂ ನಮ್ಮ ಲೆಕ್ಚರರ್ ಇಲ್ಲ ಆ ಪಾತ್ರಕ್ಕೆ ನೀನೆ ಸರಿ ಪಾತ್ರದ ಹೆಸರಿನ ‘ಸೌಂದರ್ಯ‘ ಕ್ಕೆ ತಕ್ಕ ಮುಖ ಅಂತ ಬಲವಂತವಾಗಿ ಒಪ್ಪಿಸಿ ಬಿಟ್ರು ಸರಿ ನನಗೂ ಒಂಥರ ಖುಷಿ ಒಪ್ಪಿಕೊಂಡು ಬಿಟ್ಟೆ, ಅದರಲ್ಲಿನ ಖಳ ನಾಯಕನ ಪಾತ್ರ ಆ ಪಾಪಿದು ಅಂತ ನನಗೆ ಒಂದೆರಡು ರಿಹರ್ಸಲ್ ಆದ್ಮೇಲೆ ಗೊತ್ತಾಯ್ತು, ಆಗಲೂ ನಾನು ಅದನ್ನು ತಿರಸ್ಕರಿಸಲು ಪ್ರಯತ್ನಿಸಿದೆ ಆದರೆ ಲೆಕ್ಚರರ್ ಇಲ್ಲ ಇಲ್ಲ ನೀನು ಸುಮ್ಮನಿರು ಅಂತ ಹೇಳಿ ನನ್ನ ಬಾಯಿ ಮುಚ್ಚಿಸಿ ಬಿಟ್ರು.

ಒಂದು ದಿನ ರಿಹರ್ಸಲ್ ಮಾಡುವಾಗ ಇದ್ದಕಿದ್ದ ಹಾಗಿ ನನ್ನ ಬಳಿ ಬಂದವನೆ ನನ್ನ ಕೆನ್ನೆಗೆ ಮುತ್ತು ಕೊಟ್ಟಬಿಟ್ಟ ಅವನು - ಎಂದವಳೆ ಜೋರಾಗಿ ಅಳಲು ಪ್ರಾರಂಭಿಸಿದಳು ಸೌಭಾಗ್ಯ. ಸಮಾಧಾನ ಮಾಡುತ್ತಾ ಅವಳನ್ನು ಆಲಂಗಿಸಿ ಸಂತೈಸಿದ ನರಸಿಂಹ ಮುಂದೆ ಹೇಳುವಂತೆ ಪ್ರೇರಪಿಸಿದ.

ಸೌಭಾಗ್ಯ ಮುಂದುವರೆಸುತ್ತಾ, ಅದಕ್ಕೆ ಲೆಕ್ಚರರ್ ಅವನನ್ನು ತುಂಬಾ ಬೈದ್ರು, ಹಾಗೆಯೆ ನೀನು ಈ ಪಾತ್ರಕ್ಕೆ ಬೇಡ ಅಂತ ಹೇಳಿ ಹೊರಗೆ ಹಾಕಿದ್ರು.  ಅವನ ಸ್ನೇಹಿತರ ಸಹಾಯದಿಂದ ಫ಼ೋಟೊ ತೆಗೆದಿದ್ದನೇನೊ ಎಂದು ಈಗ ನನಗೆ ಅನ್ಸುತ್ತೆ, ಆ ದಿನ ನನಗೆ ತೋರಿಸಿದಾಗ ಗೊತ್ತಾಗ್ಲಿಲ್ಲ,

-‘ಸರಿ ಫ಼ೋಟೊ ವಿಷ್ಯ ಆಯ್ತು ಅವತ್ತು ಬಾವಿ ಹತ್ರ ಏನ್ಹೇಳ್ದ?‘

-‘ ಈ ವಿಷ್ಯ ಎಲ್ಲಾ ಹೇಳೋಕ್ಕೆ ನನಗೂ ಒಂಥರ ಆಗುತ್ತೆ ಆದ್ರೆ ಇವತ್ತು ಹೇಳಿ ಮುಗಿಸೇ ತೀರುತ್ತೇನೆ, ಅಲ್ಲಿಗೆ ಒಂದು ಸಮಾಧಾನ ಸಿಗುತ್ತೆ,

ನೋಡು ಸೌಭಾಗ್ಯ ಈ ಫ಼ೋಟೊ ತೋರ್ಸಿ ನಿನ್ನ ಗಂಡನ್ನ ಮಾತಾಡ್ಸಿದ್ರೆ ಏನಾಗುತ್ತೆ ಅಂತ ಗೊತ್ತು ತಾನೆ? ಅದಕ್ಕೆ ಹೇಳ್ತಿರೋದು ನನ್ನ ಜೊತೆ ಬಂದ್ಬಿಡು ರಾಣಿ ಹಾಗೆ ನೋಡ್ಕೋತೀನಿ ಅಂದ, - ನೋಡು ಸಚಿನ್ ಇದೆಲ್ಲ ಸರಿ ಅಲ್ಲ ನಾನು ಮದುವೆ ಆಗಿರೋಳು, ಈ ರೀತಿ ನನ್ನ ಹತ್ರ ಮಾತಾಡೋಕೆ ನಿನಗೆ ನಾಚ್ಕೆ ಆಗ್ಬೇಕು, ಸುಮ್ಮನೆ ಆ ಫ಼ೋಟೊ ಕೊಟ್ಟು ಇಲ್ಲಿಂದ ಹೊರಡು ಮತ್ತೆ ಯವತ್ತೂ ಈ ಕಡೆ ಬರ್ಬೇಡ ಅಂದೆ, ಫ಼ೋಟೊ ಬೇಕಾ ಕೊಡ್ತಿನಿ ನಿನ್ನೂ ಬಿಡ್ತಿನಿ ಅದಕ್ಕೆ ನನಗೆ ಪರಿಹಾರ ಏನ್ಕೊಡ್ತಿಯಾ? ಒಂದು ಕೆಲ್ಸ ಮಾಡು ಎರಡೂ ಐಟೆಂ ಸೇರಿ ಹೋಲ್ಸೆಲ್ ರೇಟ್ನಲ್ಲಿ ೫ ಲಕ್ಷ ಕೊಟ್ಬಿಡು ನಾನು ಹೊರ್ಟೋಗ್ತಿನಿ ಅಂದ. ನನ್ನ ಹತ್ರ ಎಲ್ಲಿದೆ ಅದು ಅಂದದಕ್ಕೆ, ವಿಚಿತ್ರವಾಗಿ ನಗುತ್ತಾ ಅದು ನಿನ್ನ ತೊಂದರೆ ಇಲ್ಲಾಂದ್ರೆ ನನ್ನ ಜೊತೆ ಬಾ ಅದೂ ಇಲ್ಲಾಂದ್ರೆ ನಿನ್ನ ಗಂಡನ್ನ ಬೇಟಿ ಮಾಡ್ತೀನಿ, ಆ ಸಮಯಕ್ಕೆ ಇವನಿಂದ ಪಾರಾಗಲು ನನಗೆ ಹೊಳೆದಿದ್ದು ಬಂಗಾರದ ವಡವೆಗಳು, ಸರಿ ಆಯ್ತು ಹಣ ಕೊಡ್ತಿನಿ ಅಂದೆ, - ಮಾತಿಗೆ ತಪ್ಪಿದ್ರೆ ಮತ್ತೇನಾದ್ರೂ ನೀನು ಆಟ ಕಟ್ಟಿದ್ರೆ ನನ್ನ ಬಗ್ಗೆ ನಿಂಗೆ ಗೊತ್ತಲ್ಲ ಹುಷಾರ್, ಸ್ವಲ್ಪ ಸುದಾರ್ಸ್ಕೊ ಮತ್ತೆ ಸಿಗ್ತೀನಿ ಅಂತ ಹೇಳಿ ಮರೆಯಾದ. ಆ ದಿನವೆ ನಿಮಗೆ ಹೇಳೋಣ ಅಂದ್ರೆ ಈಗ ನಿಮ್ಮ ಬಗ್ಗೆ ತಿಳಿದಿರುವಷ್ಟು ಆಗ ನನಗೆ ತಿಳಿಯದು, ನೀವು ಇದನ್ನು ಹೇಗೆ ಗ್ರಹಿಸುತ್ತೀರೊ ಎಂಬ ಭಯ, ಅಣ್ಣನ ಸಹಾಯ ಕೇಳಲು ದಾರಿಯಿಲ್ಲ ಹೀಗಾಗಿ ಸರಿ ನೋಡೇಬಿಡೋಣ ಅಂಥಹ ಸಮಯ ಬಂದರೆ ವಡವೆ ಕೊಟ್ಟು ಈಗ ಬಂದಿರುವ ಸಂಕಟದಿಂದ ದೂರಾಗೋಣ ಆಮೇಲೆ ಯೋಚಿಸೋಣ ಎಂದು ತೀರ್ಮಾನಿಸಿದೆ. ಆಮೇಲೆ ನನಗೆ ಮನೆಯಿಂದ ಹೊರಗೆ ಬರಲೂ ಭಯ, ಏನೋ ಆತಂಕ, ಹೊರಗೆ ಬಂದರೂ ಯಾರು ಗಮನಿಸುತ್ತಿದ್ದಾರೂ ಎಂಬ ಅಳುಕು ತುಂಬಾ ಒದ್ದಾಡಿಬಿಟ್ಟೆ, ಮತ್ತೆ ಆ ದಿನ ಬಂದೆಬಿಟ್ಟಿತು, ಇದೇ ಸಿಹಿನೀರು ಬಾವಿಯ ಬಳಿ ಮತ್ತದೆ ಕಣ್ಣುಗಳು, ಅವನು ಎಲ್ಲಿ ಹೊಂಚುಹಾಕಿ ನಿಂತಿದ್ದನೋ ತಿಳಿಯದು, ನನ್ನ ಕೈಲಿ ಒಂದು ಕವರ್ ಕೊಟ್ಟು ಮರೆಯಾಗಿಹೋದ. ನಾನು ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿದೆ, ನಾನೆಣಿಸಿಕೊಂಡೆ ಎಲ್ಲೊ ಇವನಿಗೆ ನನ್ನ ಮೇಲೆ ಕರುಣೆ ಬಂದು ಫ಼ೋಟೊ ವಾಪಸ್ಸು ಕೊಟ್ಟಿದ್ದಾನೆ ಅಂತ, ಆದರೆ ಅದನ್ನು ತೆಗೆದು ನೋಡಿದರೆ ಒಂದು ಪತ್ರ ಇತ್ತು, ಇವತ್ತು ರಾತ್ರಿ ನಿಮ್ಮ ಮನೆ ಹಿತ್ತಲಿನ ಕಾಂಪೌಂಡ್ ಬಳಿ ಬರುತ್ತೇನೆ ನನ್ನ ಕಾಣಿಕೆ ನನಗೆ ರೆಡಿ ಮಾಡಿಡು, ಅಲ್ಲೆ ನಿನ್ನ ಫ಼ೋಟೊ ಕೊಡುತ್ತೇನೆ, ಇದರಲ್ಲಿರುವ ನಿದ್ದೆ ಮಾತ್ರೆ ನಿನ್ನ ಗಂಡನಿಗೆ ಹಾಲಿನಲ್ಲಿ ಹಾಕಿ ಕೊಡು ಅವನು ನಿದ್ರೆ ಮಾಡಿದರೆ ಒಳ್ಳೇದು ಇಲ್ಲಾಂದ್ರೆ ನಿಂಗೆ ತೊಂದ್ರೆ, ಯಾವುದೇ ಆಟ ನನ್ನ ಹತ್ರ ನಡೆಯಲ್ಲ ಹುಷಾರ್ ಅಂತ ಬರೆದಿತ್ತು, ಸರಿ ಅವತ್ತು ರಾತ್ರಿ ನೀವು ಧಣಿವಾಗಿದೆ ಎಂದು ಬೇಗ ಮಲಗಲು ಹೊರೆಟ್ರಿ ನಾನೂ ಕೂಡ ಯಾವುದೆ ತೊಂದರೆ ಬೇಡ ಸದ್ಯ ಆ ಫ಼ೋಟ ನನ್ನ ಕೈಗೆ ಸಿಕ್ಕಲಿ ಆಮೇಲೆ ಯೋಚಿಸೋಣಾ ಅಂತ ನಿಮಗೆ ನಿದ್ರೆ ಮಾತ್ರೆ ಹಾಲಿನಲ್ಲಿ ಹಾಕಿ ಕೊಟ್ಟೆ, ನೀವು ನಿದ್ರೆ ಚೆನ್ನಾಗಿ ಮಾಡಿದ ಮೇಲೆ ವಡವೆ ಬ್ಯಾಗನ್ನು ತೆಗೆದುಕೊಂಡು ಹಿತ್ತಲ ಬಾಗಿಲನ್ನು ತೆಗೆದು ಹೊರ ನಡೆದೆ, ಆಗಲೇ ಅವನು ಬಂದುನಿಂತಿದ್ದ ಹಿಂದಿನ ಆ ಗೇಟಿನ ಬಳಿ ಹೋಗಿ ವಡವೆ ಬ್ಯಾಗನ್ನು ಅವನಿಗೆ ಕೊಟ್ಟೆ, ಅದನ್ನು ಪಡೆದ ಅವನು ಫ಼ೋಟೊ ಕಾರಿನಲ್ಲಿದೆ ತರುತ್ತೇನೆ ಎಂದು ಆ ಕಡೆ ಹೋದ ಸಮಯ ಸಾಧಿಸಿ ಕಾರ್ ನಂಬರನ್ನು, ತೆಗೆದುಕೊಂಡು ಹೋಗಿದ್ದ ಚೀಟಿಯಲ್ಲಿ ಬರೆದುಕೊಂಡೆ, ಅದನ್ನು ಗಮನಿಸಿದನೊ ಏನೊ ಅತ್ತಲಿಂದ ನನ್ನ ಬಳಿ ಬಂದವನೆ, ‘ನಾನು ನಿನಗೆ ಹೇಳಿದ್ದೆ ಯಾವುದೆ ಆಟ ಬೇಡ ಅಂತ ಆದ್ರೂ ಕಾರ್ ನಂಬರ್ ಬರ್ಕೋಳ್ಳೊ ಅಷ್ಟು ದೈರ್ಯನಾ?‘ ಅಂದವನೆ ಆ ಚೀಟಿಯನ್ನು ನನ್ನಿಂದ ಕಸಿದು ಹರಿದು ಚೂರು ಮಾಡಿ ಎಸೆದು ಕ್ರೂರ ದೃಷ್ಟಿಯಿಂದ ನನ್ನನ್ನು ನೋಡಿದ ಮತ್ತದೆ ಕಣ್ಣುಗಳು ನನ್ನನ್ನು ಬಲಹೀನಳನ್ನಾಗಿಸಿದವು, ಏನು ನಡೆಯುತ್ತಿದೆ ಎಂದು ಅರಿತುಕೊಳ್ಳುವಷ್ಟರಲ್ಲಿ ನನ್ನ ತೋಳಿಗೆ ಸಿರೆಂಜ್ ನಿಂದ ಚುಚ್ಚಿಬಿಟ್ಟ ಅಷ್ಟೆ ನನ್ನ ಕಣ್ಣಾಲಿಗಳು ತೇಲಿ ಬರುತ್ತಿವೆ, ಕೈ ಕಾಲುಗಳಲ್ಲಿ ಶಕ್ತಿ ಉಡುಗಿ ಹೋಗುತ್ತಿದೆ, ದರ ದರನೆ ಎಳೆದ್ಯೊದು ಕಾರಿನಲ್ಲಿ ನನ್ನನ್ನು ತಳ್ಳಿ ಬಾಗಿಲು ಮುಚ್ಜಿದ, ಕೂಗಲು ಪ್ರಯತ್ನ ಪಟ್ಟೆ ಸ್ವರವೇ ಹೊರಡುತ್ತಿಲ್ಲ, ಬಲವಂತವಾಗಿ ಮುಚ್ಚುತ್ತಿದ್ದ ಕಣ್ಣುಗಳಿಗೆ ಅವನು ಮನೆಯ ಒಳಗೆ ಹೋಗುತ್ತಿರುವುದು ಕಾಣಿಸುತ್ತಿದೆ ಅಯ್ಯೊ ಒಳಗೆ ಹೋಗಿ ಏನುಮಾಡುತ್ತಾನೊ? ಹೇಗೆ ತಡೆಯಲಿ ಏನೂಂದ್ರೆ? ಕೂಗುತ್ತಿದ್ದೇನೆ ನನ್ನ ಕೂಗು ನನಗೆ ಕೇಳಿತೊ ಇಲ್ಲವೊ ತಿಳಿಯದು. ನಿದ್ರೆಗೆ ಜಾರಿದ್ದೆ, ಅಷ್ಟೆ ಮತ್ತೆ ಕಣ್ಣುಗಳನ್ನು ತೆರೆದಾಗ ಆ ಮನೆಯಲ್ಲಿ ಬಂಧಿಯಾಗಿದ್ದೆ. ಮಾರನೆಯದಿನ ಎಚ್ಚರವಾದಾಗ, ಯಾರೂ ಇರಲಿಲ್ಲ ಸ್ವಲ್ಪ ಸಮಯದ ನಂತರ ಬಂದ ಅವನು ಮತ್ತದೆ ರಾಗ ತೆಗೆದ -‘ನೋಡು ನನ್ನ ಸೌಂದರ್ಯ ಈಗ ನೀನು ನನ್ನ ವಶದಲ್ಲಿದ್ದೀಯ, ಇನ್ನು ನಿನ್ನ ಗಂಡನ ಬಳಿ ಹೋದರೂ ಪ್ರಯೋಜನವಿಲ್ಲ, ಏಕೇಂದ್ರೆ ವಡವೆಗಳ ಜೊತೆ ನೀನೂ ಮಾಯವಾಗಿದ್ದೀಯ, ಅಲ್ಲಿ ನಿನ್ನ ಗಂಡನಿಗೆ ಸ್ಲೀಪಿಂಗ್ ಡೋಸ್ ಇಂಜೆಕ್ಟ್ ಆಗಿದೆ, ಯರಾದರೂ ಗಮನಿಸಿದರೆ ನಿಮ್ಮ ಮನೆಯ ಹಿಂದೆ ಕಾರು ಬಂದು ಹೋಗಿರುವ ಗುರುತು ಇರುತ್ತೆ, ಇದೆಲ್ಲ ಏನು ಹೇಳುತ್ತೆ ನಿನ್ನ ಬಗ್ಗೆ ಏನು ಕಥೆ ಕಟ್ಟುತ್ತೆ ಯೋಚ್ನೆ ಮಾಡು ಈಗ್ಲೂ ಸಮಯ ಮೀರಿಲ್ಲ, ನನ್ನ ಜೊತೆ ಹಾಯಾಗಿರ್ಬಹ್ದು, ರಾಣಿಹಾಗೆ ನೋಡ್ಕೋತೀನಿ‘ - ಅಂದ. ಅವನ ಕ್ರೂರ ದುರಾಲೋಚನೆಯನ್ನು ಅವಲೋಕಿಸಿ ನಾನೂ ಮನಸ್ಸಿನಲ್ಲಿ ಒಂದು ತೀರ್ಮಾನಕ್ಕೆ ಬಂದೆ, ‘ಏನೇ ಅದರೂ ಸರಿ ಇವನ ಗಾಳಕ್ಕೆ ಬೀಳಬಾರದು, ನನ್ನಪ್ರಾಣಹೋದರೆ ಹೋಗಲಿ, ಇನ್ನು ಬದುಕ್ಕಿದ್ದೇನು ಪ್ರಯೋಜನ?, ಎಂಬ ನಿರ್ಧಾರವನ್ನು ಮನಸ್ಸಿನಲ್ಲಿ ಮಾಡಿ, ನನ್ನ ಆರಾದ್ಯ ದೈವ ದುರ್ಗಾದೇವಿಯನ್ನು ಮನಸ್ಸಿನಲ್ಲಿ ಸ್ಮರಿಸುತ್ತಾ ಆ ತಾಯ ಇಚ್ಚೆ ಇದ್ದಂತೆ ಆಗಲಿ ಎಂದು ಮೌನಕ್ಕೆ ಶರಣಾಗಿ ಒಂದು ತೊಟ್ಟು ನೀರನ್ನೂ ಕುಡಿಯುವುದಿಲ್ಲ ಎಂಬ ಧೃಡ ಸಂಕಲ್ಪ ಮಾಡಿದೆ, ಅಷ್ಟೆ ಮುಂದಿನದು ನಿಮಗೆ ಗೊತ್ತಿದೆ, ಆ ತಾಯಿ ನನ್ನ ಕೈ ಬಿಡಲಿಲ್ಲ, ನಿಮ್ಮನ್ನು ಅಲ್ಲಿಗೆ ಕರೆ ತಂದಳು, ರಾವಣನ ಲಂಕೆಯಿಂದ ನನಗೆ ಮುಕ್ತಿ ಕೊಡಿಸಿದಳು. ಇನ್ನು ಆ ರಾವಣ ಮತ್ತೆ ಬಂದರೂ ನನಗೆ ಭಯವಿಲ್ಲ ನಿಮ್ಮ ಅಭಯ ನನಗಿದೆ, ತಾಯ ಆಶೀರ್ವಾದವೂ ಜೊತೆಗಿದೆ ಎಂದು ತನ್ನ ಕಥೆಯನ್ನು ಮುಗಿಸಿದ ಸೌಭಾಗ್ಯ ಹೊಳಪು ಕಂಗಳಿಂದ ತನ್ನ ಯಜಮಾನನನ್ನು ನೋಡಿದಳು.

-‘ಎಂಥಹ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದೆ ಭಾಗ್ಯ?, ಅಲ್ಲ ನನಗೊಂದು ಮಾತು ಹೇಳುವುದಲ್ಲವೆ, ಏನಾದರೂ ಹೆಚ್ಚು ಕಡಿಮೆಯಾಗಿದ್ದರೆ ಏನು ಗತಿ, ಹೋಗಲಿ ಇದೆಲ್ಲವನ್ನೂ ಮರೆತುಬಿಡು, ಯಾರಲ್ಲಿಯೂ ಇದರ ಬಗ್ಗೆ ಏನೂ ಮಾತನಾಡಬೇಡ‘ -

-‘ಇಲ್ಲಾಂದ್ರೆ ನಾನು ಯಾರಲ್ಲಿಯಾ ಹೇಳುವುದೂ ಇಲ್ಲ, ಅವನು ಬಂದರೆ ಹೆದರುವುದೂ ಇಲ್ಲ‘-

-‘ಮತ್ತೆ ಅವನು ಬರುವುದೂ ಇಲ್ಲ ಸೌಭಾಗ್ಯ, ಆ ಮನೆಯಿಂದ ನಿನ್ನನ್ನು ಕರೆ ತರುವಾಗ ದಾರಿಯಲ್ಲಿ ಒಂದು ಅಪಘಾತವಾಗಿತ್ತು ಅದರಲ್ಲಿ ಅವನು... ಮತ್ತೆ ಬಾರದ ಲೋಕಕ್ಕೆ ಹೋಗಿದ್ದಾನೆ‘-

-‘ಏನೂ ಸತ್ತೋದ್ನಾ!!?? ,ಹ್ಮ್... ನನ್ನಪಾಡಿಗಿದ್ದ ನನಗೆ ತೊಂದರೆ ಕೊಟ್ಟು, ತನ್ನ ಸಾವನ್ನು ತಾನೆ ತಂದುಕೊಂಡ, ದೃಷ್ಟ ದ್ವಂಸಿನಿ ಆ ತಾಯಿ ಈ ನಿರ್ಣಯ ಏಕೆ ಮಾಡಿದಳೊ ಕಾಣೆ, ಅವನ ಮನಸನ್ನು ತಿದ್ದಿ ಬದುಕಲು ಬಿಡಬಹುದಿತ್ತು. ಬಾಳ ಚದುರಂಗದಾಟದಲ್ಲಿ ಆ ತಾಯಿಯ ಇಚ್ಚೆಯ ನಡೆ ಬಲ್ಲವರಾರು?‘-

-‘ಹ್ಮ್... ಅಂತೂ ನೀನು ಮಾಯವಾದ ಘಟನೆಯ ಹಿಂದೆ ಇಷ್ಟೆಲ್ಲಾ ಇತ್ತು. ಸದ್ಯ ಎಲ್ಲ ಇಷ್ಟರಲ್ಲೆ ಮುಗಿತಲ್ಲ, ದೇವರು ದೊಡ್ಡವನು‘-

ತೋಟದ ಕಡೆಗೆ ಸಂತೋಷದಿಂದ ಹೊರಟ ದಂಪತಿಗಳ ಮನಸ್ಸಿನಲ್ಲಿ ಈಗ ಯಾವುದೆ ಅನುಮಾನಗಳಿಲ್ಲ, ಗೋಜಲಿಲ್ಲ, ಅಸಮಾಧಾನವಿಲ್ಲ, ನಗುನಗುತ್ತಾ ನಡೆಯುತ್ತಿದ್ದಾರೆ.

ಹಿನ್ನೆಲೆ:

ನನ್ನ ಸ್ನೇಹಿತರೊಬ್ಬರು ನನಗೆ ಒಂದು ಘಟನೆಯನ್ನು ಹೇಳಿದ್ದರು, ಅವರ ಪರಿಚಯಸ್ತರೊಬ್ಬರ ಮನೆಯಲ್ಲಿ, ಮದುವೆಯಾಗಿ ಸ್ವಲ್ಪ ದಿನಗಳಲ್ಲಿ ನಡೆದ ಮದುವೆ ಮೋಸದ್ದು ಎಂದು ತಿಳಿಯುವ ಹೊತ್ತಿಗೆ, ಮನೆಯಲ್ಲಿದ್ದ ಬೆಲೆ ಬಾಳಿವ ವಸ್ತುಗಳು ಮಾಯವಾಗಿತ್ತು, ಪೋಲೀಸ್ ಕಂಪ್ಲೈಂಟ್ ಕೊಟ್ಟು ಹೆಣಗಾಡುತ್ತಿದ್ದಾರೆ,- ಎಂದು

ಅಲ್ಲಿ ಮನೆಗೆ ಬಂದ ಸೊಸೆ ಹಾಗು ಅವಳಣ್ಣ ಇಬ್ಬರೂ ಛತ್ರಿಗಳು, ಎಲ್ಲವೂ ಮೋಸ,
ಆ ಘಟನೆಯನ್ನು ಒಂದು ಸಣ್ಣವಸ್ತುವಾಗಿ ನಿಮ್ಮ ಮುಂದಿಡುವ ಪ್ರಯತ್ನ ಮಾಡಿದೆ, ಆದರೆ ಪ್ರಾರಂಭ ಮಾಡಿದ ಮೇಲೆ ನನ್ನ ಮನಸ್ಸು ಅದೇಕೊ ಮನೆ ‘ಸೊಸೆಯನ್ನು‘ ಖಳನಾಯಕಿಯನ್ನಾಗಿಸಲು ಒಪ್ಪಲಿಲ್ಲ, ಹಾಗಾಗಿ ಪ್ರಾರಂಭಿಸಿದ ಎಳೆ ಎಲೆಲ್ಲಿಯೊ ಎಳೆದೊಯ್ಯಿತು. ಇದರ ತಪ್ಪು ಒಪ್ಪುಗಳೇನಿದ್ದರೂ, ತಮ್ಮ ಪ್ರತಿಕ್ರಿಯೆಗೆ ಸ್ವಾಗತ.

-ಧನ್ಯವಾದಗಳು

-ರಾಮಮೋಹನ.

-------------------------------೦೦೦೦೦-------------------------------------   
 

Rating
No votes yet

Comments