ಮಾಯಾದ್ವೀಪ - ಜಾನಪದ ಕಥೆ - ಕೊನೆಯ ಭಾಗ
ವೀರಪ್ರತಾಪ ಆದೇಶ ಹೊರಡಿಸಿ ಎರಡು ತಿಂಗಳಾದರೂ ಮಾಂತ್ರಿಕನ ಪ್ರಾಣವಿರುವ ಶೀಷೆಯನ್ನು ತರಲು ಯಾರೊಬ್ಬರೂ ಮುಂದೆ ಬರಲಿಲ್ಲ. ಇದರಿಂದ ವೀರಪ್ರತಾಪ ಕಂಗಾಲಾಗಿ ಕುಳಿತಿದ್ದ. ಹಂಸಾನಂದಿನಿ ದಿನದ ಹೆಚ್ಚು ಹೊತ್ತು ದೇವರ ಕೋಣೆಯಲ್ಲೇ ಕಳೆಯುತ್ತಿದ್ದಳು ಇಲ್ಲವಾದಲ್ಲಿ ಅರಮನೆಯ ಒಳಗಡೆಯೇ ಸಖಿಯರೊಡನೆ ಇರುತ್ತಿದ್ದಳು. ಅರಮನೆಯ ಆಚೆ ಹೋಗಬಾರದೆಂದು ಆದೇಶವಾಗಿತ್ತು ಅಷ್ಟೇ ಅಲ್ಲದೆ ಅರಮನೆಯ ಸುತ್ತ ಸೈನಿಕರ ಸರ್ಪಗಾವಲಿತ್ತು. ವೀರಪ್ರತಾಪ ಇದೆ ಯೋಚನೆಯಲ್ಲಿ ಮುಳುಗಿರಲು ಒಳಗಡೆ ಬಂದ ಸೈನಿಕನೊಬ್ಬ ಮಹಾಪ್ರಭು ತಮ್ಮನ್ನು ಹುಡುಕಿಕೊಂಡು ವಿಜಯಪುರದ ಯುವರಾಜ ಶೂರಸೇನ ಬಂದಿದ್ದಾರೆ ಎಂದನು. ಅವರನ್ನು ಒಳಗೆ ಕಳುಹಿಸು ಎಂದು ಎದ್ದು ಬಂದನು. ಶೂರಸೇನ ವಿಜಯಪುರದ ರಾಜ ಉಗ್ರಸೇನನ ಮಗ. ಶೂರಸೇನ ಹೆಸರಿಗೆ ತಕ್ಕನೆ ಮಹಾನ್ ಪರಾಕ್ರಮಿ. ಸಕಲ ಯುದ್ಧಕಲೆಗಳಲ್ಲೂ ಪರಿಣತಿ ಹೊಂದಿದ್ದನು. ಅಷ್ಟೇ ಅಲ್ಲದೆ ನೋಡಲು ಸ್ಫುರದ್ರೂಪಿ ಸುಂದರ ದೇಹಕಾಯ ಹೊಂದಿದ್ದವನಾಗಿದ್ದನು. ವೀರಪ್ರತಾಪನು ಆಗಮನದ ಕಾರಣ ಕೇಳಿದಾಗ ತಮ್ಮ ಆದೇಶದಂತೆ ಮಾಂತ್ರಿಕನ ಪ್ರಾಣ ಇರುವ ಶೀಷೆಯನ್ನು ತರಲು ಬಂದಿದ್ದೇನೆ ಮಹಾರಾಜ ಎಂದಾಗ ವೀರಪ್ರತಾಪನಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಕೂಡಲೇ ಸೈನಿಕನನ್ನು ಕರೆದು ಪಕ್ಕದ ಪ್ರಾಂತದಲ್ಲಿ ಪಂಡಿತರಿದ್ದಾರೆ ಅವರಿಗೆ ಈ ವಿಷಯ ತಿಳಿಸಿ ಇಲ್ಲಿಗೆ ಆಗಮಿಸಲು ಹೇಳಿಬಾ ಎಂದು ಕಳುಹಿಸಿದನು.
ಅರಮನೆಗೆ ಬಂದ ಪಂಡಿತರು ಶೂರಸೇನನ ಮುಖದಲ್ಲಿದ್ದ ತೇಜಸ್ಸನ್ನು ಕಂಡು ಸಂತೋಷಗೊಂಡು ವೀರಪ್ರತಾಪನಿಗೆ ಹೇಳಿದರು ನೋಡಿದೆಯಾ ರಾಜನ್ ಇವನೇ ನಿನ್ನ ಅಳಿಯನಾಗುವವನು. ನಾನು ಇವನೊಡನೆ ಏಕಾಂತದಲ್ಲಿ ಮಾತಾಡಬೇಕು ಎಂದು ಹೇಳಿ ಅವನನ್ನು ದೇವಮಂದಿರಕ್ಕೆ ಕರೆದುಕೊಂಡು ಹೋದರು. ಶೂರಸೇನನನ್ನು ಕುರಿತು ಪಂಡಿತರು ಹೀಗೆಂದರು. ನೋಡು ಶೂರಸೇನ ನೀನು ಪರಾಕ್ರಮಿಯೇ ಇರಬಹುದು ಆದರೆ ಆ ಶೀಷೆಯನ್ನು ಸಂಪಾದಿಸುವುದು ಸುಲಭದ ಕೆಲಸವಲ್ಲ ನಿನ್ನ ಶಕ್ತಿ ಸಾಮರ್ಥ್ಯದ ಜೊತೆ ಬುದ್ಧಿಬಲವೂ ಕೆಲಸ ಮಾಡಬೇಕು. ಹೇಗೆಂದರೆ ನಿನ್ನ ದೇಹದಲ್ಲಿ ಬಲ ಭಾಗವಷ್ಟೇ ಮುಖ್ಯವಲ್ಲ ಎಡಭಾಗವೂ ಅಷ್ಟೇ ಮುಖ್ಯ ಇದನ್ನು ಗಮನದಲ್ಲಿಟ್ಟುಕೊ. ಹಾಗೆಯೇ ನಿನಗೊಂದು ಉಂಗುರವನ್ನು ಕೊಡುತ್ತೇನೆ ಇದನ್ನು ನಿನ್ನ ಆಪತ್ಕಾಲದಲ್ಲಿ ಉಪಯೋಗಿಸಬಹುದು. ಆದರೆ ಒಂದು ನಿಬಂಧನೆ ಇದನ್ನು ಕೇವಲ ಒಮ್ಮೆ ಮಾತ್ರ ಉಪಯೋಗಿಸಬಹುದು ಎಂದು ಹೇಳಿ ಆಶೀರ್ವಾದ ಮಾಡಿ ಕಳುಹಿಸಿಕೊಟ್ಟನು.
ಇತ್ತ ಮಾಂತ್ರಿಕ ದ್ವೀಪದಲ್ಲಿ ವಿಕಟಾಕ್ಷ ತನ್ನ ಕಾರ್ಯ ಸಿದ್ಧಿಸಲು ಇನ್ನು ಕೇವಲ ಒಂದು ತಿಂಗಳು ಮಾತ್ರ ಉಳಿದಿರುವುದು ಈ ಬಾರಿ ತನ್ನ ಕಾರ್ಯದಲ್ಲಿ ಯಾವುದೇ ರೀತಿಯ ವಿಘ್ನವಾಗಬಾರದೆಂದು ಬಹಳ ಜಾಗೃತನಾಗಿದ್ದನು. ತನ್ನ ಕೆಲಸಕ್ಕೆ ಬೇಕಾದ ಪೂರ್ವಸಿದ್ಧತೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದನು. ಇತ್ತ ಶೂರಸೇನ ಸಾಗರವನ್ನು ದಾಟಿ ಬೆಟ್ಟದ ಬಳಿ ಬರಲು ಒಂದು ವಾರ ಉರುಳಿಹೋದವು. ಬೆಟ್ಟಕ್ಕೆ ಬಂದನಾದರೂ ಅಲ್ಲಿ ಯಾವುದು ಗುಹೆ ಎಂಬುದೇ ತಿಳಿಯುತ್ತಿಲ್ಲ ಎಲ್ಲಿ ನೋಡಿದರೂ ಬಂಡೆಗಳೇ ಕಾಣಿಸುತ್ತಿತ್ತು. ಎಷ್ಟು ಸುತ್ತಾಡಿದರೂ ಗುಹೆಯ ಸುಳಿವು ಸಿಗುತ್ತಿರಲಿಲ್ಲ. ಅಷ್ಟರಲ್ಲಿ ಅವನ ಬೆನ್ನ ಮೇಲೆ ಬಲವಾದ ಪೆಟ್ಟು ಬಿತ್ತು. ಸುಮಾರು ಆರು ಅಡಿ ದೂರಕ್ಕೆ ಹಾರಿ ಬಿದ್ದ. ಆ ಪೆಟ್ಟಿನಿಂದ ಸುಧಾರಿಸಿಕೊಂಡು ಎದ್ದು ನಿಂತು ತಿರುಗಿ ನೋಡಿದ ಅಲ್ಲೇನೂ ಕಾಣಲಿಲ್ಲ. ಮತ್ತೊಂದು ಪೆಟ್ಟು ಬಿತ್ತು. ಈ ಬಾರಿಯೂ ಅಲ್ಲಿ ಯಾರೂ ಇರಲಿಲ್ಲ. ತಕ್ಷಣ ಅವನಿಗೆ ಅರಿವಾಯಿತು ಇದ್ಯಾವುದೋ ದುಷ್ಟ ಮಾಯಾವಿಯ ಕೆಲಸವಿರಬಹುದು ಎಂದು. ಈ ಬಾರಿ ತನ್ನ ಎರಡೂ ಕೈಗಳನ್ನೂ ಹಿಂದಕ್ಕೆ ಇಟ್ಟುಕೊಂಡಿದ್ದ. ಮತ್ತೊಂದು ಪೆಟ್ಟು ಬಿದ್ದ ತಕ್ಷಣ ತನ್ನೆರಡೂ ಕೈಗಳನ್ನು ಹಿಂದಕ್ಕೆ ಒಂದುಗೂಡಿಸಿದ. ತನ್ನ ಕೈಯ ಮಧ್ಯದಲ್ಲಿ ಇನ್ನೊಂದು ಕೈ ಇರುವುದು ಅರಿವಿಗೆ ಬಂದು ಹಿಂದಕ್ಕೆ ತಿರುಗಿದ ಬೃಹದಾಕಾರದ ರಾಕ್ಷಸನೊಬ್ಬ ನಿಂತಿದ್ದಾನೆ. ಆ ರಾಕ್ಷಸನ ಆಕೃತಿ ನೋಡಿ ಕ್ಷಣ ಕಾಲ ಬೆಚ್ಚಿ ಬಿದ್ದ ಶೂರಸೇನ ಮನದಲ್ಲಿ ತನ್ನ ಇಷ್ಟದೈವವನ್ನು ನೆನೆದು ಹೋರಾಡಲು ನಿಂತನು. ಸತತವಾಗಿ ಎರಡು ದಿನಗಳ ಕಾಲ ಅವರಿಬ್ಬರ ಕಾಳಗ ನಿಲ್ಲಲಿಲ್ಲ. ಆದರೂ ಆ ರಾಕ್ಷಸನನ್ನು ಮಣಿಸಲು ಸಾಧ್ಯವಾಗಲಿಲ್ಲ. ಅಚಾನಕ್ ಆಗಿ ಶೂರಸೇನ ರಾಕ್ಷಸನ ಎಡಕಿವಿಯ ಮೇಲೆ ಬಲವಾದ ಪೆಟ್ಟೊಂದನ್ನು ಕೊಟ್ಟ. ಕೂಡಲೇ ಆ ರಾಕ್ಷಸ ಹೃದಯ ವಿದ್ರಾವಕವಾಗಿ ಕಿರುಚಿಕೊಂಡ. ತಕ್ಷಣ ಪಂಡಿತರು ಹೇಳಿದ ಮಾತು ನೆನಪಾಯಿತು. ದೇಹದ ಬಲಭಾಗದಷ್ಟೇ ಎಡಭಾಗವೂ ಮುಖ್ಯ ಎಂದು. ಸತತವಾಗಿ ರಾಕ್ಷಸನ ದೇಹದ ಎಡಭಾಗದ ಮೇಲೆ ಆಕ್ರಮಣ ಶುರುಮಾಡಿದ ಶೂರಸೇನ ಕೆಲವೇ ಗಂಟೆಗಳಲ್ಲಿ ರಾಕ್ಷಸನ ನೆಲಸಮಮಾಡಿದ. ರಾಕ್ಷಸನ ಅಂತ್ಯವಾಗುತ್ತಿದ್ದಂತೆ ಹಿಂದಿನಿಂದ ಕರ್ಕಶವಾದ ದನಿಯೊಂದು ಬಂದಿತು. ದನಿ ಬಂದಕಡೆ ತಿರುಗಿನೋಡಿದ ಶೂರಸೇನ. ಮುಚ್ಚಿದ್ದ ಗುಹೆಯ ಬಾಗಿಲು ತೆರೆದುಕೊಂಡಿತು. ಒಳಗಡೆ ಅಡಿಯಿಟ್ಟ ಶೂರಸೇನನಿಗೆ ಅಲ್ಲೆಲ್ಲೂ ಏನೂ ಕಾಣುತ್ತಿಲ್ಲ. ಕ್ಷಣಕಾಲ ಏನು ಮಾಡಲೂ ತೋಚದೆ ತಟಸ್ಥವಾಗಿ ನಿಂತುಬಿಟ್ಟ. ಸ್ವಲ್ಪ ಹೊತ್ತು ಆಲೋಚಿಸಿ ಮೆಲ್ಲನೆ ಒಂದು ಹೆಜ್ಜೆ ಇಟ್ಟ ತಕ್ಷಣ ಆತ ಹೆಜ್ಜೆ ಇಟ್ಟಷ್ಟು ಜಾಗದಷ್ಟು ಅಗಲ ಆ ಗುಹೆಯಷ್ಟು ಉದ್ದ ದೂರ ಕಂದಕ ಉಂಟಾಯಿತು. ಅದರಿಂದ ಭಯಬಿದ್ದ ಶೂರಸೇನ ಕೂಡಲೇ ತನ್ನ ಹೆಜ್ಜೆಯನ್ನು ಹಿಂದಕ್ಕೆ ತೆಗೆದ. ಸ್ವಲ್ಪ ಸಮಯ ಬಿಟ್ಟು ಇನ್ನೊಂದು ಹೆಜ್ಜೆ ಇಟ್ಟ ಮತ್ತದೇ ರೀತಿ ಆಯಿತು. ಮತ್ತೆ ಪಂಡಿತರ ಮಾತು ನೆನಪಾಗಿ ಈ ಬಾರಿ ತನ್ನ ಎಡಕಾಲನ್ನು ಇಟ್ಟ ಈ ಬಾರಿ ಏನೂ ಆಗಲಿಲ್ಲ. ನಂತರ ತನ್ನ ಎಡಕಾಲೊಂದನ್ನು ನೆಲದ ಮೇಲಿಟ್ಟು ಇನ್ನೊಂದು ಕಾಲನ್ನು ಮೇಲಕ್ಕೆತ್ತಿ ಕುಂಟುತ್ತಲೇ ಸ್ವಲ್ಪ ದೂರ ಸಾಗಿದ ಮೇಲೆ ದೂರದಲ್ಲಿ ಮಾಂತ್ರಿಕನ ಶೀಶೆ ಇರುವುದು ಕಂಡು ಬಂತು. ಈಗ ತನ್ನ ಎರಡು ಕಾಲನ್ನು ಕೆಳಗೆ ಬಿಟ್ಟು ತನ್ನ ಎಡಗಾಲನ್ನು ಎತ್ತಿ ಮುಂದಕ್ಕೆ ಇಟ್ಟ ದಿಡೀರೆಂದು ನೀರಿನಲ್ಲಿ ಬಿದ್ದುಬಿಟ್ಟ. ಖಾಲಿ ಜಾಗದಂತಿದ್ದ ಜಾಗದಲ್ಲಿ ಇದ್ದಕ್ಕಿದ್ದಂತೆ ನೀರೆಲ್ಲಿಂದ ಬಂದಿತೆಂದು ಆಶ್ಚರ್ಯವಾಗಿ ಹಾಗೆಯೇ ಈಜುತ್ತಾ ಶೀಷೆಯ ಸಮೀಪ ಬರುತ್ತಿದ್ದ ಆದರೆ ಎಷ್ಟು ಈಜಿದರೂ ಶೀಶೆ ಮತ್ತಷ್ಟು ದೂರವಾದಂತೆ ಭಾಸವಾಗುತ್ತಿತ್ತು. ಏನು ಮಾಡಬೇಕೆಂದು ತೋಚದೆ ಪಕ್ಕದಲ್ಲಿ ದಂಡೆಯಂತೆ ಕಂಡುಬಂದ ಕಡೆ ಈಜತೊಡಗಿದ. ದಂಡೆಯ ಬಳಿ ಮೇಲಕ್ಕೆ ಹತ್ತಿದ ನೋಡಿದರೆ ಪಕ್ಕದಲ್ಲೇ ಆ ಶೀಶೆ ಇದೆ. ಅಲ್ಲೇನು ಮಾಯೆ ನಡೆಯುತ್ತಿದೆಯಂದು ಒಂದು ಊಹಿಸಲಾಗುತ್ತಿಲ್ಲವೆಂದು ಯೋಚಿಸುತ್ತ ಶೀಷೆಯನ್ನು ತೆಗೆದುಕೊಳ್ಳಲು ಮುಂದೆ ಹೆಜ್ಜೆ ಇಟ್ಟ. ಇದ್ದಕ್ಕಿದ್ದಂತೆ ಶೀಷೆಯ ಸುತ್ತಲೂ ವಿಷಸರ್ಪಗಳು ಪ್ರತ್ಯಕ್ಷಗೊಂಡವು. ನಿಧಾನವಾಗಿ ಒಂದೊಂದನ್ನೇ ಎತ್ತಿ ಬಿಸಾಡುತ್ತಿದ್ದಂತೆ ಮತ್ತೆ ಮತ್ತೆ ಪ್ರತ್ಯಕ್ಷವಾಗುತ್ತಿತ್ತು. ಕೂಡಲೇ ಪಂಡಿತರು ಕೊಟ್ಟ ಉಂಗುರದ ನೆನಪಾಯಿತು ಉಂಗುರವನ್ನು ತೆಗೆದು ಕೈಯಲ್ಲಿ ಹಿಡಿದು ಪ್ರಾರ್ಥಿಸಿ ಕಣ್ಣು ತೆರೆದನು. ಎಲ್ಲ ಸರ್ಪಗಳೂ ಮಾಯವಾಗಿದ್ದವು. ಕೂಡಲೇ ಆ ಶೀಷೆಯನ್ನು ಎತ್ತಿಕೊಂಡು ಗುಹೆಯ ಆಚೆ ಬಂದನು.
ಇತ್ತ ದ್ವೀಪದಲ್ಲಿ ವಿಕಟಾಕ್ಷ ತನ್ನ ಕಾರ್ಯಸಿದ್ಧಿಗೆ ಉಳಿದಿರುವುದು ಒಂದೇ ವಾರ ಈಗಲೇ ಆ ಬಾಲೆಯನ್ನು ಅಪಹರಿಸಿಕೊಂಡು ಬರಬೇಕು ಎಂದು ನಿರ್ಧರಿಸಿ ಒಬ್ಬ ಬ್ರಾಹ್ಮಣನ ವೇಷ ಧರಿಸಿ ಅರಮನೆಯ ಬಳಿ ಬಂದನು. ಬಿಕ್ಷಾರ್ಥಿಯಾಗಿ ಬಂದ ಬ್ರಾಹ್ಮಣನು ಸೀದಾ ಅರಮನೆಯ ಒಳಗೆ ಬಂದನು. ಆಗಷ್ಟೇ ದೇವಮಂದಿರದಿಂದ ಹೊರಬಂದು ತನ್ನ ಸಖಿಯರೊಡನೆ ಮಾತನಾಡುತ್ತಿದ್ದ ಹಂಸಾನಂದಿನಿಯನ್ನು ಕಂಡ ವಿಕಟಾಕ್ಷ ಸಮಯ ವ್ಯರ್ಥಮಾಡದೇ ಕೂಡಲೇ ಅವಳನ್ನು ಅಪಹರಿಸಿಕೊಂಡು ಮಾಯವಾಗಿಬಿಟ್ಟ
ಇದ್ದಕ್ಕಿದ್ದಂತೆ ಹಂಸಾನಂದಿನಿ ಮಾಯವಾದ ವಿಷಯವನ್ನು ಸಖಿಯರು ವೀರಪ್ರತಾಪನಿಗೆ ತಿಳಿಸಿದರು. ವೀರಪ್ರತಾಪನಿಗೆ ಕೂಡಲೇ ಇದು ಮಾಂತ್ರಿಕನ ಕೆಲಸವೇ ಇರಬಹುದೆಂದು ಊಹಿಸಿ ಪಂಡಿತರಿಗೆ ಕರೆ ಕಳುಹಿಸಿದನು. ಪಂಡಿತರು ಆಗಮಿಸಿದ ಕೂಡಲೇ ವಿಷಯ ತಿಳಿಸಿದ ವೀರಪ್ರತಾಪ ಬಹಳ ಕಂಗಾಲಾಗಿದ್ದನು. ಪಂಡಿತರು ಅವನಿಗೆ ಸಮಾಧಾನ ಹೇಳಿ ನೀನೇನೂ ಯೋಚಿಸಬೇಡ ರಾಜ ನನಗೆ ತಿಳಿದ ಮಟ್ಟಿಗೆ ಈ ವೇಳೆಗೆ ಶೂರಸೇನ ಆ ಶೀಷೆಯನ್ನು ಸಂಪಾದಿಸಿರುತ್ತಾನೆ. ಅವನು ಬರುವಷ್ಟರಲ್ಲಿ ನಾನು ಕೆಲವು ಪೂಜೆಗಳನ್ನು ಮಾಡಿ ವಿಕಟಾಕ್ಷನ ಅಂತ್ಯಕ್ಕೆ ಸಿದ್ಧಮಾಡಿಕೊಳ್ಳುತ್ತೇನೆ. ನೀನೇನೂ ಯೋಚಿಸಬೇಡ ಶೂರಸೇನ ಬಂದೇಬರುತ್ತಾನೆ ಎಂದು ಹೇಳಿ ಪೂಜೆಗೆ ಸಿದ್ಧಮಾಡಿಕೊಳ್ಳಲು ಹೊರಟರು.
ಇತ್ತ ದ್ವೀಪದಲ್ಲಿ ವಿಕಟಾಕ್ಷ ಇನ್ನೇನು ಕೇವಲ ಮೂರು ದಿನಗಳು ಮಾತ್ರ ಉಳಿದಿರುವುದು ತನ್ನ ಕಾರ್ಯ ಸಿದ್ಧಿಗೆ ಆಮೇಲೆ ಈ ಭೂಮಂಡಲಕ್ಕೆ ನಾನೇ ಅಧಿಪತಿ ಎಂದು ಬೀಗುತ್ತ ಪೂಜೆಗೆ ಸಿದ್ಧತೆ ನಡೆಸುತ್ತಿದ್ದಾನೆ. ಹಂಸಾನಂದಿನಿ ಎಚ್ಚರವಾಗಿದ್ದರೂ ತನ್ನ ಸುತ್ತ ಏನು ನಡೆಯುತ್ತಿದೆಯಂದು ಅರಿವಿಲ್ಲದ ಸ್ಥಿತಿಯಲ್ಲಿ ಇದ್ದಳು. ಎರಡು ದಿನಗಳು ಸತತವಾಗಿ ಪೂಜೆಯಲ್ಲಿ ನಿರತರಾಗಿದ್ದರು ವಿಕಟಾಕ್ಷ ಹಾಗೂ ಪಂಡಿತರು.
ಮಾರನೆ ದಿನ ನರಕ ಚತುರ್ದಶಿ ಎಲ್ಲೆಡೆ ಹಬ್ಬದ ವಾತಾವರಣವಿದ್ದರೆ ವಸಂತಪುರದಲ್ಲಿ ಮಾತ್ರ ಸ್ಮಶಾನ ಮೌನ ಆವರಿಸಿತ್ತು. ಯಾರಲ್ಲೂ ಹಬ್ಬದ ಸಂಭ್ರಮ ಇರಲಿಲ್ಲ. ವಿಕಟಾಕ್ಷ ಮಾತ್ರ ಉಲ್ಲಾಸದಲ್ಲಿ ತೇಲಾಡುತ್ತಿದ್ದ. ಮಾರನೆ ದಿನದ ಕನಸಿನಲ್ಲೇ ಯಾವಾಗ ಆ ರಾತ್ರಿ ಕಳೆದು ಸೂರ್ಯ ಉದಯಿಸುತ್ತಾನೋ ಎಂದು ಚಡಪಡಿಸುತ್ತಿದ್ದ. ನರಕ ಚತುರ್ದಶಿ ಕಳೆದು ಅಮಾವಾಸ್ಯೆಯ ಸೂರ್ಯ ಉದಯಿಸಿದ. ಪಂಡಿತರು ತಮ್ಮ ಎಲ್ಲ ಪೂಜೆಗಳನ್ನು ಮುಗಿಸಿ ಕೊನೆಯ ಹಂತಕ್ಕೆ ಕಾಯುತ್ತಿದ್ದರು. ಇತ್ತ ವಿಕಟಾಕ್ಷ ಸಾಗರದಲ್ಲಿ ಮಿಂದು ಹೋಮಕುಂಡದ ಮುಂದೆ ಕುಳಿತು ಪೂಜೆ ಶುರುಮಾಡಿದ್ದಾನೆ. ಹಂಸಾನಂದಿನಿಗೆ ಆದೇಶವಿತ್ತ ಹೋಗಿ ಸಮುದ್ರದಲ್ಲಿ ಮಿಂದು ಬಾ ಎಂದು ಅದರಂತೆಯೇ ಹಂಸಾನಂದಿನಿ ಮಿಂದು ಬಂದು ಅವಳೂ ಹೋಮ ಕುಂಡದ ಮುಂದೆ ಕುಳಿತಿದ್ದಾಳೆ. ವಿಕಟಾಕ್ಷನ ಆರ್ಭಟ ಆ ಗುಹೆಯಲ್ಲಿ ಮೊಳಗುತ್ತಿದ್ದವು. ಇನ್ನೇನು ಸೂರ್ಯ ನಡುನೆತ್ತಿಗೆ ಬರುವ ಸಮಯ. ಅಷ್ಟರಲ್ಲಿ ಶೂರಸೇನ ಅರಮನೆಗೆ ಬಂದು ಆ ಶೀಷೆಯನ್ನು ಪಂಡಿತರ ಕೈಗೆ ಒಪ್ಪಿಸಿದನು. ಸೂರ್ಯ ನಡುನೆತ್ತಿಗೆ ಬರುತ್ತಿದ್ದಂತೆ ವಿಕಟಾಕ್ಷ ಹಂಸಾನಂದಿನಿಗೆ ಆದೇಶವಿತ್ತ ಹೋಗಿ ಬಲಿಪೀಠದ ಮೇಲೆ ಕುಳಿತುಕೋ ಎಂದು. ಅದರಂತೆಯೇ ಹಂಸಾನಂದಿನಿ ಬಂದು ಕುಳಿತಳು ಸರಿಯಾಗಿ ಸೂರ್ಯ ನಡುನೆತ್ತಿಗೆ ಬರುತ್ತಿದ್ದಂತೆ ವಿಕಟಾಕ್ಷ ತನ್ನ ಕತ್ತಿಯನ್ನು ಮೇಲಕ್ಕೆತ್ತಿ ಕೆಳಗಿಳಿಸಬೇಕು ಅಷ್ಟರಲ್ಲಿ ವಿಕಟಾಕ್ಷನ ದೇಹ ಛಿದ್ರ ಛಿದ್ರವಾಯಿತು. ವಿಕಟಾಕ್ಷ ಕತ್ತಿ ಎತ್ತಿದ ಅದೇ ಸಮಯಕ್ಕೆ ಪಂಡಿತರು ಆ ಶೀಷೆಯನ್ನು ಅಗ್ನಿಗೆ ಆಹುತಿ ಮಾಡಿದ್ದರು. ಅಗ್ನಿಗೆ ಆಹುತಿ ಮಾಡಿ ಶೂರಸೇನನಿಗೆ ಆದೇಶವಿತ್ತರು. ಹೋಗು ಶೂರಸೇನ ಆ ಸಾಗರದಾಚೆ ಇರುವ ದ್ವೀಪಕ್ಕೆ ಹೋಗಿ ಹಂಸಾನಂದಿನಿಯನ್ನು ಕರೆದುಕೊಂಡು ಬಾ ಎಂದು. ಅದೇ ರೀತಿ ಶೂರಸೇನ ಆ ದ್ವೀಪಕ್ಕೆ ತೆರಳಿ ಹಂಸಾನಂದಿನಿಯನ್ನು ಕರೆದು ತಂದನು. ಅರಮನೆಗೆ ಬಂದ ಹಂಸಾನಂದಿನಿಗೆ ಪಂಡಿತರು ತಮ್ಮ ಬಳಿ ಇದ್ದ ಪವಿತ್ರ ಜಲವನ್ನು ಅವಳ ಮೇಲೆ ಸಿಂಪಡಿಸಿದ ಮರುಕ್ಷಣದಲ್ಲೇ ವಾಸ್ತವಕ್ಕೆ ಬಂದಳು. ವೀರಪ್ರತಾಪನಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಅವನು ಕೊಟ್ಟ ಮಾತಿನಂತೆ ಶೂರಸೇನನಿಗೆ ಹಂಸಾನಂದಿನಿಯನ್ನು ಕೊಟ್ಟು ಮದುವೆ ಮಾಡಿಕೊಟ್ಟನು.
------------------------------------------------------------------ಶುಭಂ-----------------------------------------------------------------------
Comments
ಉ: ಮಾಯಾದ್ವೀಪ - ಜಾನಪದ ಕಥೆ - ಕೊನೆಯ ಭಾಗ
In reply to ಉ: ಮಾಯಾದ್ವೀಪ - ಜಾನಪದ ಕಥೆ - ಕೊನೆಯ ಭಾಗ by sathishnasa
ಉ: ಮಾಯಾದ್ವೀಪ - ಜಾನಪದ ಕಥೆ - ಕೊನೆಯ ಭಾಗ
ಉ: ಮಾಯಾದ್ವೀಪ - ಜಾನಪದ ಕಥೆ - ಕೊನೆಯ ಭಾಗ
In reply to ಉ: ಮಾಯಾದ್ವೀಪ - ಜಾನಪದ ಕಥೆ - ಕೊನೆಯ ಭಾಗ by gowri parthasarathy
ಉ: ಮಾಯಾದ್ವೀಪ - ಜಾನಪದ ಕಥೆ - ಕೊನೆಯ ಭಾಗ
ಉ: ಮಾಯಾದ್ವೀಪ - ಜಾನಪದ ಕಥೆ - ಕೊನೆಯ ಭಾಗ
In reply to ಉ: ಮಾಯಾದ್ವೀಪ - ಜಾನಪದ ಕಥೆ - ಕೊನೆಯ ಭಾಗ by shreekant.mishrikoti
ಉ: ಮಾಯಾದ್ವೀಪ - ಜಾನಪದ ಕಥೆ - ಕೊನೆಯ ಭಾಗ