ಕಲಾವಿದನ ಕನಸು...

ಕಲಾವಿದನ ಕನಸು...

 

ಅದ್ಯಾವ ರ೦ಗು ತು೦ಬಲಿ

ಕು೦ಚ ನವಿಲುಗರಿಯಲಿ...?

ಅದ್ಯಾವ ರ೦ಗು ತು೦ಬಿ ನಾನು

ಮನಸ ಕನಸ ರಚಿಸಲಿ...?

 

ನೀಲಪಟವ ತನ್ನಲ್ಲೇ

ಹೊತ್ತುನಿ೦ತ ಜಲಧಿಯ

ರ೦ಗು ಹೀರಿ ತು೦ಬಲೇ...?

ಅರಳು ಮಲ್ಲೆ ಸುಮವೊ೦ದು

ಸೌರಭಿಸಿದ ಗಳಿಗೆಯಲಿ

ಅದರ ವರ್ಣ ಅರೆದು ಬಿಡಲೇ...?

 

ಮು೦ಗಾರಿನ ಮೋಡವು

ಗಿರಿಯ ಬಿಗಿದಪ್ಪಿದಾಗ

ಸುಳಿವ ಮಿ0ಚುಗೆರೆಯನು

ಈ ಸ್ವಪ್ನಕೆ ಎಳೆಯಲೇ...?

ಎಲೆಯ ಮ೦ಜ ನೀರ ಬಿ೦ದು

ಹೊಳಪನಲ್ಲಿ ತೋರಲೇ...?

 

ಪೂರ್ಣಚ೦ದ್ರ ಬಿ೦ಬವನ್ನು,

ಅವನ ಸುಧೆಯ ಅ೦ದವನ್ನು

ಹೊತ್ತ ರಮ್ಯ ನದಿಯನ್ನು

ಈ ಕನಸಲಿ ಹರಿಸಲೇ...?

ನದಿಯ ಒನಪು ವಯ್ಯಾರ

ಅದರ ಬಳಕು ಕೈಯಾರ

ಹಿಡಿದು ನಾನು ಬೆರೆಸಲೇ...?

 

ಕರೆದು ಋತುಗಳಾಟವನ್ನು

ಬೆರಗು ಇ೦ದ್ರಧನುಷವನ್ನು

ಮುಕುಟವಾಗಿ ಇರಿಸಲೇ...?

ಮರೆತು ನಿನ್ನೆ ಮೊನ್ನೆಯನ್ನು

ಭರವಸೆಯ ನಾಳೆಯನ್ನು

ನಿರೀಕ್ಷೆಯಾಗಿ ಭರಿಸಲೇ...?

 

ಬಾಳ ಬಣ್ಣ ಹಚ್ಚಿದ ಮನದಿ ಕನಸು ನೂರಿವೆ..

ನನಸ ದಾರಿಯಲ್ಲಿ ನಾನು ಒಲವ ಬೆಳಕ ಕಾದಿಹೆ...

ಕಣ್ತೆರೆಯೋ ಓ ದೀಪಧಾರಿ, ಪ್ರಕಾಶ ಪ್ರವಹವಾಗಲಿ...

ಬಾಳ ದೋಣಿ ಸಾಗಲಿ... ಮತ್ತೆ ಕನಸ ಕಾಣಲಿ...
Rating
No votes yet

Comments