"ಅಣ್ಣಾ" ಸತ್ಯಾಗ್ರಹ ಸುಸ್ಪಷ್ಟ ಸಂದೇಶ ನೀಡುತ್ತಿರುವಂತಿಲ್ಲ.

"ಅಣ್ಣಾ" ಸತ್ಯಾಗ್ರಹ ಸುಸ್ಪಷ್ಟ ಸಂದೇಶ ನೀಡುತ್ತಿರುವಂತಿಲ್ಲ.

ಅಣ್ಣಾ ಹಜಾರೆಯವರು ದೇಶದ ಜನತೆಯನ್ನು ಹುಚ್ಚೆಬ್ಬಿಸಿರುವುದು, ಆಡಳಿತ ಭ್ರಷ್ಟತೆಯ ವಿರುದ್ಧ; ಭ್ರಷ್ಟಾಚಾರದ ವಿರುದ್ಧ. ಕೇಂದ್ರ ಸರಕಾರ ಈ ಬಗ್ಗೆ ಗಾಬರಿ ಗಾಬರಿಯಾಗಿ, ಪರ-ವಿರೋಧದ ವಿರೋಧಾಭಾಸದ ಕ್ರಮಗಳನ್ನು ಕೈಗೊಂಡು ನಗೆಪಾಟಲಿಗೀಡಾಗಿದೆ!
ಪ್ರಧಾನ ವಿರೋಧ ಪಕ್ಷವಾದ ಬಿಜೆಪಿಯವರು, ಚಳುವಳಿಗೆ ಬೆಂಬಲ ಸೂಚಿಸುವ ವೀರಾವೇಶದ ಮಾತುಗಳನ್ನಾಡುತ್ತಿರುವುದು ಸಂತೋಷ. ಆದರೆ ಅದರಲ್ಲಿರುವವರೆಲಾ ಸತ್ಯಹರಿಶ್ಚಂದ್ರನ ಅಪರಾವತಾರರು; ಶಿಸ್ತಿನ ಸಿಪಾಯಿಗಳು ಎಂದು ಪೋಸ್ ಕೊಟ್ಟುಕೊಳ್ಳುತ್ತಿರುವ ಬಗ್ಗೆ ಜನತೆ ಎಚ್ಚರಿಕೆಯಿಂದಲೇ ಇರಬೇಕಾಗುತ್ತದೆ.
ಬಹುಶಃ "ಅಣ್ಣಾ" ನಿಜವಾಗಿ ಕಾಂಗ್ರೆಸ್ ವಿರೋಧಿಯೂ, ಬಿಜೆಪಿ ಪರವೂ ಆಗಿರಲಿಕ್ಕಿಲ್ಲ. ಅವರ ಬದ್ಧ ದ್ವೇಷವೇನಿದ್ದರೂ ಅದು ಭ್ರಷ್ಟಾಚಾರದ ವಿರುದ್ಧ. ಅದರ ಸ್ರೋತವನ್ನೇ ಹುಟ್ಟಡಗಿಸುವ ಸಂದೇಶ ಅದೆಕೋ ಜನತೆಗೆ ಸರಿಯಾಗಿ ರವಾನೆಯಾಗುತ್ತರುವಂತೆನಿಸುವುದಿಲ್ಲ.
ನಮ್ಮ ಪ್ರಜಾಸತ್ತಾ ವ್ಯವಸ್ಥೆಯಲ್ಲಿ ಸಂಸತ್ತೇ ಸುಪ್ರೀಂ. ಬಹುಶಃ ಸುಪ್ರೀಂ ಕೋರ್ಟ್ ಸಹ ಅದಕ್ಕೆ ’ಎಚ್ಚರಿಕೆ ಗಂಟೆ’ ಮಾತ್ರಾ ಆಗಬಹುದು. ಸಂಸತ್ತಿನ ನಾಯಕ ಮತ್ತು ಉನ್ನತ ನ್ಯಾಯಾಂಗವನ್ನೂ ತರಾಟೆಗೆ ತೆಗೆದುಕೊಳ್ಳಬಹುದಾದ ಪರಮಾಧಿಕಾರವೊಂದು ಹುಟ್ಟಿಕೊಂಡರೆ ಅದು ಸರ್ವಾಧಿಕಾರವೇ ಆಗುತ್ತದೆ.
ಅದರ ಬದಲು ನಮ್ಮ ಸಂಸತ್ತು ಮತ್ತಿತರ ಚುನಾಯಿತ ವ್ಯವಸ್ಥೆಗಳನ್ನು ಸಂಪನ್ನಗೊಳಿಸುವುದೇ ಪ್ರಾಥಮಿಕ ಆದ್ಯತೆಯಾದರೆ ಒಳ್ಳಿತೇನೋ? ಇವು ಹಾಗಗಿಲ್ಲದಿರುವುದೇ ನಮ್ಮಲ್ಲಿನ ಭ್ರಷ್ಟಾಡಳಿತ, ಅನಾಡಳಿತ, ದುರಾಡಳಿತಗಳಿಗೆ ಮೂಲಕಾರಣವಾಗಿದ್ದೀತು. ಈಗಲಾದರೋ ಅವು ಅಸಭ್ಯ, ತಲೆಹಿಡುಕ ರಾಜಕಾರಣಿಗಳ ಪ್ರತಿನಿಧಿಯಾಗಿದೆ; ಅವರ ಕೈವಶವಾಗಿದೆ. ಮಹಾಜನತೆಯೇನೂ ಉದ್ದೇಶಪೂರ್ವಕವಾಗಿ ಅಂಥವರನ್ನು ಚುನಾಯಿಸಿರುವುದಿಲ್ಲ. ಆದರೂ ಅಂಥವರೇ ಅಯಕಟ್ಟಿನ ಸ್ಥಾನಗಳನ್ನು ಅಪ-ಅಲಂಕರಿಸಿ, ಪರಮಪವಿತ್ರ ಪ್ರಾತಿನಿಧಿ ಸಂಸ್ಥೆಗಳನ್ನೇ ಭ್ರಷ್ಟಾಚಾರದಕೂಪವಾಗಿಸುವುದೂ, ಇಂಥದರ ವಿರುದ್ಧ ಕ್ಷೀಣ ಪ್ರತಿಭಟನೆಯನ್ನೂ ಅವರು ಹೊಸಕಿಹಾಕುವುದು ನಮ್ಮದೇ ಪ್ರಜಾಸತ್ತಾ ವ್ಯವಸ್ಥೆಯ ಚಮತ್ಕಾರವಾಗಿದೆ! ಊರೆಲ್ಲಾ ಹೋದಮೇಲೆ ದಿಡ್ಡಿಬಾಗಿಲು ಹಾಕಿದಂತೆ ಕೊಳ್ಳೆಯನ್ನೆಲ್ಲಾ ಸಾಂಗವಾಗಿ ಪೂರೈಸಿದಮೇಲೆ ಲೋಕಪಾಲರೋ, ಜನಲೋಕಪಾಲರೊ ಅವರನ್ನು ಬೀದಿಗೆಳೆದರೆ ತುಂಬಿಬರುವ ನಷ್ಟವೆಷ್ಟು?
ಅದರ ಬದಲು ನೈಜ ಪ್ರಾತಿನಿಧ್ಯವು ಸಭೆಗಳಲ್ಲಿ ಬಿಂಬಿತವಾಗುವಂತೆ ಪ್ರಜಾಪ್ರತಿನಿಧಿ ಕಾಯೆಗ್ದೆ ತಿದ್ದುಪಡಿ ತಂದು, ಚುನಾವಣಾ ವ್ಯವಸ್ಥೆ ಸುಧಾರಿಸುವತ್ತ ಸ್ಪೂರ್ತಿ ನೀಡಿದರೆ ಅಣಾ ಹುಟ್ಟ್ಟಿಸಿರುವ ಜನಜಾಗೃತಿ ಸಾರ್ಥಕವಾದೀತು!
 

Rating
No votes yet

Comments