ವರುಷ - ನಿಮಿಷ

ವರುಷ - ನಿಮಿಷ

ಕವನ

ಮರಳಿ ಬಂದಿತೇ ಮತ್ತೊಂದು ಯುಗಾದಿ !
ಮೊನ್ನೆಯಷ್ಟೇ  ಕಳೆದ ಹಾಗಿದೆ ಹೋದ ಯುಗಾದಿ
ನಿಮಿಷ ಕಳೆದಂತೆ ಕಳೆಯುತ್ತಿದೆಯೇ. . .ವರುಷ ?!
ಯೋಚಿಸುವುದಕ್ಕೂ. . .ಇಲ್ಲವಾಗಿದೆಯೇ ನಮಗೆ ಅವಕಾಶ

ನಾನೇ ನೆಟ್ಟ ಪುಟಾಣಿ ಮಾವಿನ ಸಸಿ
ಬೆಳೆದು ಬಿಟ್ಟಿದೆ ಈಗ ವಿಶಾಲವಾಗಿ
ಮೈ ತುಂಬಾ ಹೂ ಬಿಟ್ಟು ಕರೆಯುತ್ತಿದೆ ಕೈ ಬೀಸಿ
ಅದು ಅಷ್ಟು ದೊಡ್ಡದಾದದ್ದು ಯಾವಾಗ ? ಅರಿವಾಗಲೇ ಇಲ್ಲ !?

ಮೊನ್ನೆ ಮೊನೆಯ ತನಕ 'ಬಾಲಗೀತೆ' ಹಾಡುತ್ತಿದ್ದ ಮಗ
ಬೆಳೆದು ಬಿಟ್ಟಿದ್ದಾನೆ ಈಗ ಚಿಗುರು ಮೀಸೆ 'ತರುಣ'ನಾಗಿ
'ಎನ್ನರಸಿ,ಪಟ್ಟದರಿಸಿ'ಎಂದು ರಚಿಸುತ್ತಿದ್ದಾನೆ ಪ್ರೇಮಗೀತೆಗಳ!?
ಅವ ಅಷ್ಟು ದೊಡ್ಡವನಾದದ್ದು ಯಾವಾಗ ?ಅರಿವಾಗಲೇ ಇಲ್ಲ

ಕನ್ನಡಿಯ ಮುಂದೆ ನಿಂತು ಬೈತಲೆ ತೆಗೆವಾಗ ,
ಅಲ್ಲೆಲ್ಲ್ಯೋ. . .ಮರೆಯಲ್ಲಿ ಇಣುಕುತ್ತಿವೆ ಬಿಳಿ ಕೂದಲುಗಳು
ವರುಷ ಕಳೆದುದರ ಸಾರಿ ಹೇಳುತ್ತಿವೆಯೇ ?!
ಅವು ಹುಟ್ಟಿಕೊಂಡದ್ದು ಯಾವಾಗ ? ಅರಿವಾಗಲೇ ಇಲ್ಲ !?
.
 

Comments