ಮಂತ್ರಾಲಯ ರಾಯರ ಆರಾಧನೆ

ಮಂತ್ರಾಲಯ ರಾಯರ ಆರಾಧನೆ

ಪ್ರತೀ ವರ್ಷ ರಾಯರ ಆರಾಧನೆ ಬಂದಾಗ ಮಂತ್ರಾಲಯಕ್ಕೆ ಹೋಗಬೇಕೆಂದು ಅಂದುಕೊಳ್ಳುತ್ತಿದ್ದೆ. ಆದರೆ ಇದುವರೆಗೂ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಅದು ಸಾಧ್ಯವಾಯಿತು. ಈ ಬಾರಿ ಆಗಸ್ಟ್ ೧೪,೧೫, ಹಾಗೂ ೧೬ ರಂದು ರಾಘವೇಂದ್ರ ಸ್ವಾಮಿಗಳ ಆರಾಧನೆ ಇತ್ತು. ಶನಿವಾರ, ಭಾನುವಾರ, ಸೋಮವಾರ ಮೂರು ದಿನ ರಜೆ ಇದ್ದದ್ದರಿಂದ ಎರಡು ದಿವಸದ ಆರಾಧನೆ ನೋಡುವ ಸಲುವಾಗಿ ಮುಂಚೆಯೇ ಕಾಯ್ದಿರಿಸಿದ ರಾಜಹಂಸ ಬಸ್ಸಿಗೆ ಶನಿವಾರ ರಾತ್ರಿ ೮ ಗಂಟೆಗೆ ಹೊರಟೆ. ಬಹಳ ದಿನದ ಮೇಲೆ ರಾತ್ರಿಯ ಸಮಯದಲ್ಲಿ ಅದೂ ವಾರಾಂತ್ಯದಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದಿದ್ದೆ. ಮೂರು ದಿವಸದ ರಜೆಯ ಪ್ರಭಾವ ಜೋರಾಗಿಯೇ ಇತ್ತು. ಎಲ್ಲಿ ನೋಡಿದರೂ ಜನ, ಎಲ್ಲ ಬಸ್ಸುಗಳು ತುಂಬಿಕೊಂಡಿದ್ದವು. ಎಂಟು ಗಂಟೆಗೆ ಹೊರಡಬೇಕಿದ್ದ ನಮ್ಮ ಬಸ್ಸು ಇಬ್ಬರು ಪ್ರಯಾಣಿಕರು ಬಂದಿರದಿದ್ದ ಕಾರಣ ಅರ್ಧ ಗಂಟೆ ತಡವಾಗಿ ೮.೩೦ ಕ್ಕೆ ಹೊರಟಿತು. ರಾತ್ರಿಯ ಹೊತ್ತು ಚಳಿ ಆಗಬಹುದೆಂದು ಊಹಿಸಿದ್ದ ನನಗೆ ಸ್ವಲ್ಪ ದೂರ ಸಾಗುತ್ತಲೇ ನನ್ನ ಊಹೆ ಸುಳ್ಳೆಂದು ಅರ್ಥವಾಯಿತು. ಬೆಂಗಳೂರಿನಲ್ಲಿ ತೆರೆದ ಕಿಟಕಿ ಮಂತ್ರಾಲಯದ ವರೆಗೂ ಮುಚ್ಚಲಿಲ್ಲ. ಅಷ್ಟು ಸೆಖೆ ಇತ್ತು. ಬೆಳಿಗ್ಗೆ ೦೫.೩೦ ಕ್ಕೆಲ್ಲ ಮಂತ್ರಾಲಯ ತಲುಪಿತು ನಮ್ಮ ಬಸ್ಸು.

ಬಸ್ಸಿನಿಂದ ಇಳಿದು ಸೀದಾ ಮನೆಗೆ ಹೋಗಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ನಂತರ ಎದ್ದು ನದಿಯಲ್ಲಿ ಸ್ನಾನ ಮಾಡುವ ಎಂದುಕೊಂಡೆ ಆದರೆ ಕಳೆದ ಬಾರಿಯ ಕಹಿ ನೆನಪು ನದಿಗೆ ಹೋಗುವುದನ್ನು ತಡೆಯಿತು. ಮನೆಯಲ್ಲೇ ಸ್ನಾನ ಮುಗಿಸಿ ಸಿದ್ಧವಾಗಿ ನಾನು ನನ್ನ ಪತ್ನಿ ಮಠಕ್ಕೆ ಹೊರಟೆವು. ಇತ್ತ ಬೆಂಗಳೂರಿನಲ್ಲಿ ದಿನ ಮಳೆ ಬೀಳುತ್ತಿದ್ದರೆ ಮಂತ್ರಾಲಯ ಬಿಸಿಲಿನಿಂದ ಕುದಿಯುತ್ತಿತ್ತು. ವಿಪರೀತ ಬಿಸಿಲು ಸೆಖೆ ಅಬ್ಬಬ್ಬಾ ಎನ್ನುವ ಹಾಗಿತ್ತು.

 ರಾಯರ ಆರಾಧನೆ ಪ್ರಯುಕ್ತ ಮಂತ್ರಾಲಯ ಜನರಿಂದ ತುಂಬಿ ಹೋಗಿತ್ತು. ಎಲ್ಲಿ ನೋಡಿದರು ಜನ ಜನ. ಪ್ರತಿ ಬಾರಿ ಲಾಡ್ಜಿನ ಜನಗಳೇ ಬಂದು ರೂಂ ಬೇಕಾ ಎಂದು ಕೇಳುತ್ತಿದ್ದವರು ಈ ಬಾರಿ ನಾವೇ ಹೋಗಿ ಕೇಳಿದರು ರೂಂ ಇಲ್ಲ ಎನ್ನುವ ಪರಿಸ್ಥಿತಿ ಇತ್ತು. ಒಂದು ವೇಳೆ ರೂಂ ಇದ್ದರೂ ದುಪ್ಪಟ್ಟು ಬಾಡಿಗೆ ಕೇಳುತ್ತಿದ್ದರು. ನಾವು ಮಠದ ಬಳಿ ಬಂದಾಗ ೯.೩೦ ಆಗಿತ್ತು. ಅಂದು ಪೂರ್ವಾರಾಧನೆ ಅಂದರೆ ಮೊದಲನೆಯ ದಿನದ ಆರಾಧನೆ.  ಆ ಸಮಯಕ್ಕೆ ಆಗಲೇ ಅಭಿಷೇಕ ಮುಗಿದಿತ್ತು. ಇನ್ನೂ ಅಲಂಕಾರ ಆಗಿರಲಿಲ್ಲ. ಹಾಗೆಯೇ ರಾಯರ ದರ್ಶನ ಮಾಡಿಕೊಂಡು, ಅಲ್ಲೇ ಎದುರಲ್ಲೇ ಇರುವ ಹನುಮಂತನ ದರ್ಶನ ಮಾಡಿಕೊಂಡು, ರಾಯರ ಪಕ್ಕದಲ್ಲೇ ಇರುವ ವಾದೀಂದ್ರರ ಬೃಂದಾವನ ದರ್ಶನ ಮುಗಿಸಿ ಆಚೆ ಬಂದು ಹೊರಗಿನ ಪ್ರಾಕಾರದಲ್ಲಿ ಇರುವ ಯತಿಗಳ ಬೃಂದಾವನ ದರ್ಶನ ಮಾಡಿಕೊಂಡು ಪಂಚಾಮೃತ ಪ್ರಸಾದ ತೆಗೆದುಕೊಂಡು ಮನೆಗೆ ಬಂದೆವು. ನಂತರ ಮತ್ತೆ ಊಟದ ಸಮಯಕ್ಕೆ ಮಠಕ್ಕೆ ಹೋದೆವು. ಆ ವೇಳೆಗಾಗಲೇ ಬೃಂದಾವನದ ಅಲಂಕಾರ ಮುಗಿದಿತ್ತು. ಆ ದಿನದ ಅಲಂಕಾರ ನೋಡಲು ಎರಡು ಕಣ್ಣುಗಳು ಸಾಲದಾಗಿತ್ತು. ಅದ್ಭುತವಾಗಿತ್ತು. ಬೃಂದಾವನದ ಮುಂದೆ ಪ್ರಹ್ಲಾದ ರಾಯರು ಕುಳಿತಿರುವ ಭಂಗಿಯಲ್ಲಿ ಅಲಂಕಾರ ಮಾಡಿದ್ದರು. ನಿಜವಾಗಿಯೂ ಕಣ್ಣಿಗೆ ಹಬ್ಬ. ದರ್ಶನ ಮುಗಿಸಿ ಊಟ ಮುಗಿಸಿ ಬರುವ ಹೊತ್ತಿಗೆ ಸಂಜೆ ಆರಾಗಿತ್ತು. ಮನೆಗೆ ಬಂದು ಸ್ವಲ್ಪ ಹೊತ್ತು ವಿರಮಿಸಿ ಮಡದಿಯ ಜೊತೆ ಹಾಗೆ ಒಂದು ಸುತ್ತು ಹೋಗಿ ಸ್ವಲ್ಪ ಜೇಬನ್ನು ಖಾಲಿ ಮಾಡಿಕೊಂಡು ಮನೆಗೆ ಹಿಂದಿರುಗಿ ಮತ್ತೆ ಮಠಕ್ಕೆ ಹೊರಡಲು ಅನುವಾದೆವು. ಆರಾಧನೆ ಸಮಯದಲ್ಲಿ ರಾತ್ರಿಯ ಹೊತ್ತಿನ ವಿಶೇಷ ನನಗೆ ಗೊತ್ತಿರಲಿಲ್ಲ. ನಾವು ಮಠಕ್ಕೆ ಹೋದಾಗ ರಾತ್ರಿ ೯ ಗಂಟೆ ಆಗಿತ್ತು. ಆಗಷ್ಟೇ ಪ್ರಹ್ಲಾದ ರಾಯರ ಪಲ್ಲಕ್ಕಿ ಸೇವೆ ನಡೆಯುತ್ತಿತ್ತು. ಭಜನಾ ಮಂಡಳಿಯವರ ಭಜನೆಗಳು, ಚಿಕ್ಕಮಕ್ಕಳ ನೃತ್ಯಗಳು, ಕೋಲಾಟಗಳು ಅದ್ಭುತವಾಗಿದ್ದವು. ಪಲ್ಲಕ್ಕಿ ಸೇವೆಯ ನಂತರ ಮರದ ರಥದಲ್ಲಿ ಮೆರವಣಿಗೆ, ನಂತರ ಬೆಳ್ಳಿ ಹಾಗು ಬಂಗಾರದ ರಥದಲ್ಲಿ ಮೆರವಣಿಗೆ ಆಯಿತು. ರಥ ಸೇವೆಯ ನಂತರ ಎಲ್ಲರೂ ಬೃಂದಾವನದ ಬಳಿ ಬಂದೆವು. ರಾಯರಿಗೆ ಮಹಾ ಮಂಗಳಾರತಿ ಶುರುವಾಯಿತು. ಮಂಗಳಾರತಿ ನಂತರ ಮಂತ್ರಾಕ್ಷತೆ ತೆಗೆದುಕೊಂಡು ಮನೆಗೆ ಬರುವ ವೇಳೆಗೆ ರಾತ್ರಿ ೧೨ ಗಂಟೆ ಆಗಿತ್ತು. ನನ್ನ ಮಡದಿಯನ್ನು ಕೇಳಿದೆ ಪ್ರತಿ ಬಾರಿ ಆರಾಧನೆ ಇಷ್ಟು ತಡವಾಗಿ ಆಗುತ್ತದ ಎಂದು. ಅದಕ್ಕೆ ಅವಳೆಂದಳು ಈ ಬಾರಿ ಬೇಗನೆ ಮುಗಿದಿದೆ ಒಮ್ಮೊಮ್ಮೆ ರಾತ್ರಿ ೧, ೨ ಗಂಟೆ ಆಗುವುದು. ನಾಳೆ ಅದೇ ಹೊತ್ತು ಆಗುವುದು ಎಂದಳು. ಸರಿ ಎಂದು ಮರುದಿನ ಬೇಗನೆ ಎದ್ದು ಅಭಿಷೇಕ ನೋಡಲು ಹೋಗಬೇಕಾಗಿದ್ದರಿಂದ ನಿದ್ರಾದೇವಿಗೆ ಶರಣಾದೆನು

ಮರುದಿನ ರಾಯರ ಮಧ್ಯಾರಾಧನೆ. ಸ್ವಾತಂತ್ರ್ಯ ದಿನಾಚರಣೆ, ಎಲ್ಲೆಡೆ ರಜೆ ಇದ್ದ ಪ್ರಭಾವವೇನೋ ಮಂತ್ರಾಲಯ ಜನಗಳಿಂದ ತುಂಬಿ ಹೋಗಿತ್ತು. ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ೮ ಗಂಟೆ ವೇಳೆಗೆ ಮಠಕ್ಕೆ ಹೋದೆವು. ಆ ಸಮಯಕ್ಕೆ ಮಠದಲ್ಲಿ ಜನ ತುಂಬಿ ಹೋಗಿದ್ದರು. ಅಭಿಷೇಕದ ಸಮಯವಾದ್ದರಿಂದ ಎಲ್ಲರೂ ಗರ್ಭಗುಡಿಯ ದಾರಿಯಲ್ಲೇ ಹೋಗಲು ಕಾದು ನಿಂತಿದ್ದರು. ಆದರೆ ಅಲ್ಲಿ ಯಾರನ್ನೂ ಬಿಡುತ್ತಿರಲಿಲ್ಲ. ನನ್ನ ಮಡದಿಗೆ ತಿಳಿದವರೊಬ್ಬರು ಒಳಗಡೆ ಇದ್ದರು. ಅವರ ಸಹಾಯದಿಂದ ಹೇಗೋ ಕಷ್ಟಪಟ್ಟು ನುಗ್ಗಾಡಿ ಒಳಗಡೆ ಹೋದೆವು. ಇನ್ನೂ ಅಭಿಷೇಕ ಶುರುವಾಗಿರಲಿಲ್ಲ. ಅಲ್ಲೇ ಬೃಂದಾವನದ ಹಿಂಭಾಗದಲ್ಲೇ ಒಂದು ಜಾಗ ನೋಡಿ ನಿಂತುಬಿಟ್ಟೆ. ಅಂದು ರಾಯರ ಬೃಂದಾವನಕ್ಕೆ ನಾಲ್ಕು ಕಡೆಯೂ ಅಭಿಷೇಕ ನಡೆಯುವುದು ಹಾಗೆಯೇ ನಾಲ್ಕು ಕಡೆಯೂ ವಿಶೇಷ ಅಲಂಕಾರ ನಡೆಯುವುದು ವಿಶೇಷ. ಹಾಗಾಗಿ ಬೃಂದಾವನದ ಯಾವ ಕಡೆ ನಿಂತರೂ ಅಭಿಷೇಕ ನೋಡಬಹುದು. ಒಳಗೆ ಹೋಗಿ ಇಪ್ಪತ್ತು ನಿಮಿಷಗಳ ನಂತರ ಅಭಿಷೇಕ ಶುರುವಾಯಿತು. ನಿಜವಾಗಿಯೂ ರಾಯರ ಬೃಂದಾವನದ ಪಕ್ಕದಲ್ಲೇ ನಿಂತು ಅಭಿಷೇಕ ನೋಡುತ್ತಿದ್ದದ್ದು ಕನಸೋ ನನಸೋ ಎಂಬಂತಾಗಿತ್ತು. ಸುಮಾರು ಒಂದು ಘಂಟೆಗಳ ಕಾಲ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಎಳನೀರು, ಸಕ್ಕರೆ, ಹಣ್ಣಿನ ಅಭಿಷೇಕ ನಡೆಯಿತು. ನಿಜಕ್ಕೂ ಜನ್ಮ ಸಾರ್ಥಕವಾದಂತಾಯಿತು. ಅಭಿಷೇಕ ನಂತರ ಪಂಚಾಮೃತ ಪ್ರಸಾದ ಪಡೆದು ರಾಯರಿಗೆ ನಮಸ್ಕಾರ ಹಾಕಿ ಮನೆಗೆ ತೆರಳಿದೆವು. ಅಂದು ವಿಪರೀತ ಜನ ಇದ್ದ ಕಾರಣ ನಾವು ಮನೆಯಲ್ಲೇ ಊಟ ಮಾಡಿದೆವು. ಅಂದು ಸಂಜೆಯೇ ನಾವು ವಾಪಸ್ ಬರಬೇಕಾದ್ದರಿಂದ ಸಂಜೆ ವೇಳೆಗೆ ಮತ್ತೊಮ್ಮೆ ದರ್ಶನಕ್ಕೆ ಹೋದೆವು. ಅಂದು ಬೃಂದಾವನದ ನಾಲ್ಕು ಕಡೆ ಅಲಂಕಾರ ಮಾಡಿದ್ದರು. ಆ ಒಂದೇ ದಿನ ಆ ರೀತಿ ನಾಲ್ಕು ಕಡೆಯೂ ಅಲಂಕಾರ ಮಾಡುವುದು. ನಿಜಕ್ಕೂ ಅದ್ಭುತವಾಗಿತ್ತು. ದರ್ಶನ ಮುಗಿಸಿ ಮಂತ್ರಾಕ್ಷತೆ ಪಡೆದು ವಾಪಸ್ ಬೆಂಗಳೂರಿನ ಹಾದಿ ಹಿಡಿದೆವು. ಕೊನೆಯ ದಿನದ ಆರಾಧನೆ ಇರಬೇಕೆಂಬ ಆಸೆ ಇದ್ದರೂ ರಜೆಯ ಅಭಾವದಿಂದ ಇರಲಾಗಲಿಲ್ಲ. ಕೊನೆಯ ದಿನ ವಿಶೇಷ ರಥೋತ್ಸವ ಇರುವುದು. ಆದಿನ ಮಹಾರಥದಲ್ಲಿ ಮಂತ್ರಾಲಯ ಬೀದಿಗಳಲ್ಲಿ ಮೆರವಣಿಗೆ ಇರುವುದು. ಮುಂದಿನ ಬಾರಿ ನೋಡೋಣ ಎಂದುಕೊಂಡು ವಾಪಸ್ ಬಂದೆವು. ಅಂತೂ ಇಂತೂ ಮೊದಲ ಬಾರಿಗೆ ಮಂತ್ರಾಲಯದಲ್ಲಿ ರಾಯರ ಆರಾಧನೆ ನೋಡುವ ಕನಸು ಸಾಕಾರಗೊಂಡಿತು.

ನನ್ನ ಕ್ಯಾಮೆರಾದಲ್ಲಿ ತೆಗೆದಿರುವ ಫೋಟೋ ಸೈಜ್ ಬಹಳ ದೊಡ್ಡದಾಗಿರುವುದರಿಂದ ಇಲ್ಲಿ ಸೇರಿಸಲು ಸಾಧ್ಯವಾಗಿಲ್ಲ.

ಚಿತ್ರ ಕೃಪೆ : Gururaghavendra .ಓರ್ಗ್ (ಇದು ಹಳೆಯ ಚಿತ್ರ)

 

Comments