ಮಳೆಗಾಲದ ಒಂದು ಸಂಜೆ - ಪ್ರಬಂಧ

ಮಳೆಗಾಲದ ಒಂದು ಸಂಜೆ - ಪ್ರಬಂಧ

 

 

ಮಳೆಗಾಲದ ಆ ಸಂಜೆ ಅಪೂರ್ವವಾಗಿತ್ತು. ಅಪೂರ್ವ ಏಕೆಂದರೆ, ಮೋಡಗಳ ದಟ್ಟಣೆ ಕಡಿಮೆಯಾಗಿ, ಓರೆಯಾಗಿ ಬಿಸಿಲು ಬಿದ್ದು, ಸುತ್ತಲಿನ ಬಯಲು ಮತ್ತು ಕಾಡು ಬೆಳಗಿತ್ತು. ಸಂಜೆಯ ಹೊತ್ತಿನಲ್ಲಿ ಮೋಡಗಳ ನಡುವೆ ತೂರಿಬಂದು, ಮನೆ ಎದುರಿನ ಬಯಲಿನ ಒಂದು ಭಾಗಕ್ಕೆ ಮಾತ್ರ ಬೀಳುವ ಆ ಬಿಸಿಲನ್ನು, ನಮ್ಮ ಊರಿನಲ್ಲಿ "ನೇಸರ ಬಿಸಿಲು" ಎನ್ನುತ್ತಿದ್ದರು. ನೇಸರು ಎಂದರೂ ಬಿಸಿಲು ಎಂದೇ ಅರ್ಥ. ಆ ಪ್ರಯೋಗದಲ್ಲಿರುವ ದ್ವಿರುಕ್ತಿಯ ಕ್ಲೀಷೆಯನ್ನು ಗಮನಿಸದೇ, ಆ "ನೇಸರಬಿಸಿಲಿ"ನಲ್ಲಿ ವಿಚಿತ್ರ ಬಣ್ಣದಿಂದ ಚಂದವಾಗಿ ಕಾಣುತ್ತಿದ್ದ ಎದುರಿನ ಬಯಲನ್ನು ನಾವೆಲ್ಲಾ ಬೆರಗಿನಿಂದ ನೋಡುತ್ತಿದ್ದೆವು. ಸಂಜೆಗೆಂಪಿನ ಬಿಸಿಲಿನಲ್ಲಿ ಹಸಿರು ತುಂಬಿದ ಬಯಲು ಬೇರೆಯದೇ ಬಣ್ಣವನ್ನು ಪಡೆಯುತ್ತದೆ. ಒಂದೆರಡು ತಿಂಗಳುಗಳ ಹಿಂದೆ ನಾಟಿ ಮಾಡಿದ ಬತ್ತದ ಗದ್ದೆಗಳು ಚೆನ್ನಾಗಿ ಬೆಳೆದು ಇನ್ನೇನು ಹೊಡೆ ತುಂಬಿ, ಕದಿರು ಬಿಡುವ ಶ್ರಾಯ. ಬಯಲಿನ ಹಿಂಭಾಗದ ಗುಡ್ಡ,ಬೆಟ್ಟಗಳಲ್ಲೂ ಹಸಿರಿನ ಗಿಡ ಮರಗಳ ದಟ್ಟಣೆ. ಅದರಾಚೆ, ಉದ್ದಕ್ಕೂ ಹರಡಿರುವ ಹಾಡಿಗಳಲ್ಲಿರುವ ಅಳಿದುಳಿದ ಕಾಡು ಸಹಾ, ಮಳೆಗಾಲದ ಜೀವಶಕ್ತಿಯನ್ನು ಕುಡಿದು ಸೊಂಪಾಗಿಬೆಳೆದು, ಸ್ನಿಗ್ದ ಹಸಿರಿನಿಂದ ತುಂಬಿ, ತಾನೂ ಸಹಾ ಸಹ್ಯಾದ್ರಿಯ ದಟ್ಟಕಾಡನ್ನು ಹೋಲಬಲ್ಲೆ ಎನ್ನುತ್ತಿತ್ತು.

 ಹೊಳವಾದ ಅಂತಹ ಸಂಜೆಗಳಲ್ಲಿ, ಒಮ್ಮೊಮ್ಮೆ ಮಳೆ ಬರುವುದೂ ಇತ್ತು. ದಬದಬನೆ ಮಳೆ ಸುರಿದು ಪುನ: ವಾತಾವರಣ ತಿಳಿಯಾಗುವ ಶ್ರಾವಣದ ದಿನಗಳವು. ಸಂಜೆಯ ಚಿನ್ನದ ಬಣ್ಣದ ಮೋಡಗಳ ಮಧ್ಯ ತೂರಿಬರುವ ಮಂದವಾದ ಬಿಸಿಲು, ಸುತ್ತಲಿನ ಪ್ರಪಂಚವನ್ನೇ ಕೆಂಬಣ್ಣದಿಂದ ತುಂಬಿಬಿಡುತ್ತದೆ. ಆ ಕಾಡು, ಆ ಮರ, ಆ ಬಯಲು, ಆ ಗದ್ದೆ, ಆ ಅಂಗಳ, ಆ ಮನೆ ಎಲ್ಲವೂ ಬಣ್ಣ ಬದಲಿಸಿಕೊಂಡು, ಅಪರೂಪದ ಪ್ರಕಾಶದಿಂದ ಮಿನುಗುತ್ತವೆ. ಈ ಸಮಯವೇ ಗೋದೂಳಿ ಸಮಯ - ಮನೆಯ ಹಿಂದಿನ ಗುಡ್ಡಕ್ಕೆ ಮೇಯಲು ಹೋದ ಹಸುಕರುಗಳು ತಮ್ಮ ಕುತ್ತಿಗೆಗೆ ಕಟ್ಟಿದ್ದ ಮರಣಿಗೆಂಡೆಗಳನ್ನು ಸದ್ದು ಮಾಡುತ್ತಾ, ಹಟ್ಟಿಯ ಹಿಂದಿದ್ದ ದರೆಯಲ್ಲಿ ತಿರುವಿಕೊಂಡು ಬರುವ ಮಣ್ಣು ದಾರಿಯನ್ನು ಇಳಿದು, ತೋಡನ್ನು ದಾಟಿ ಹಟ್ಟಿ ಸೇರುತ್ತವೆ. ಹಗಲಿಡೀ ಗುಡ್ಡದ ತುಂಬಾ ಸುತ್ತಾಡಿ, ನಾನಾ ರೀತಿಯ ಸೊಪ್ಪಿನ ಚಿಗುರನ್ನು, ಕುಡಿಗಳನ್ನು, ಹುಲ್ಲುಗಳನ್ನು ತಿಂದು ವಾಪಸಾಗುವ ಆ ದನಕರುಗಳು ಸಾಕಷ್ಟು ಆರೋಗ್ಯಪೂರ್ಣವೆಂದೇ ಹೇಳಬೇಕು. ಪ್ರಕೃತಿಯ ಮಕ್ಕಳು ಅವು. ನೋಡಲು ತೀರಾ ದಢೂತಿಯಾಗಿರುವುದಿಲ್ಲ - ದಿನವೂ ಆರೆಂಟು ಮೈಲಿ ಗುಡ್ಡದಲ್ಲಿ ಸುತ್ತಾಡಿದ ಗಟ್ಟಿಮುಟ್ಟಿನ ದೇಹ. ಗುಡ್ಡ ಬೆಟ್ಟಗಳಲ್ಲಿ ಹುಲ್ಲು, ಹಸಿರು ಕುಡಿಯನ್ನು ತಿಂದು ಬರುವ ನಾಟಿ ಹಸುಗಳ ಹಾಲಿಗೆ ವಿಶಿಷ್ಟ ರುಚಿ ಇರುತ್ತದೆ - ಅವು ತಿನ್ನುವ ವಿವಿಧ ಸಸ್ಯಗಳ ರುಚಿಯೂ ಅವುಗಳು ನೀಡುವ ಹಾಲಿನಲ್ಲಿ ಬೆರೆತಿರುವುದರ ಜೊತೆ, ಅವು ಹಲವಾರು ಮೈಲಿ ಪ್ರಕೃತಿಯಲ್ಲಿ ನಡೆದಾಡಿ ಸಂಚಯನಗೊಂಡ ಶಕ್ತಿಯ ಒಂದು ಭಾಗ ಸಹಾ ಆ ಹಾಲಿಗೆ ರವಾನೆಯಾಗುತ್ತಿತ್ತೇನೊ ಎಂಬ ಭಾವ ಆ ಹಸುಗಳ ಹಾಲನ್ನು ಕುಡಿದಾಗ ಉಂಟಾಗುತ್ತಿತ್ತು.

 ಗುಡ್ಡಗಳಿಗೆ ಮೇಯಲು ಹೋದ ದನಕರುಗಳು ಆಗಾಗ ಮಳೆಗೆ ಸಿಕ್ಕಿಕೊಳ್ಳುವುದುಂಟು. ಜಾಸ್ತಿ ಮಳೆ ಬಂದರೆ, ತೋಟದಾಚೆಯ ತೋಡಿನಲ್ಲಿ ಕೆಂಪನೆಯ ನೀರು ತುಂಬಿಕೊಳ್ಳುತ್ತದೆ - ಅದೊಂದು ಪುಟ್ಟ ಪ್ರವಾಹವೇ ಸರಿ. ಆಗ ಹಸುಕರುಗಳು ಹಟ್ಟಿಗೆ ವಾಪಸಾಗಲು ಸ್ವಲ್ಪ ಕಷ್ಟವಾಗುತ್ತದೆ. ಮನೆಯವರು ಹಗ್ಗದೊಂದಿಗೆ ಹೋಗಿ, ಅವುಗಳ ಕತ್ತಿನ ಸುತ್ತ ಹಗ್ಗ ಬಿಗಿದು, ಪ್ರವಾಹ ತುಂಬಿದ ಆ ತೋಡನ್ನು ದಾಟಿಸಿ ಹಟ್ಟಿಗೆ ಕರೆತರುತ್ತಿದ್ದರು. ಗುಡ್ಡೆಗೆ ಹೋದ ಸಣ್ಣ ಪುಟ್ಟ ಕರುಗಳು ಸಹಾ ಆ ನೀರನ್ನು ದಾಟಿ ಬರಬೇಕಿತ್ತು. ಜೀವನದಲ್ಲೆಂದೂ ಈಜಲು ಅವಕಾಶವೇ ಇಲ್ಲದ ಆ ಕರುಗಳು, ತೋಡಿನ ಪ್ರವಾಹದಲ್ಲಿ ಈಜಿಕೊಂಡು ಈಚಿನ ದಡ ಸೇರುವುದನ್ನು ನೋಡಲು ಕುತೂಹಲಕಾರಿ - ತಾವಾಗಿಯೇ ಈಜಲು ಕಲಿಯಲು ಅವುಗಳಿಗೆ ಯಾವ ಪ್ರೇರಣೆ ದೊರಕಿದ್ದೀತು! ದನಕರುಗಳನ್ನೆಲ್ಲ ಹಟ್ಟಿಗೆ ಸೇರಿಸಿದ ನಂತರ, ಬಿಸಿ ಬಿಸಿ ಅಕ್ಕಚ್ಚು ಅಥವಾ ಬಾಯರನ್ನು ಕುಡಿಸಿ, ಅವುಗಳ ಚಳಿ ತಡೆಯಲು ಮನೆಯವರು ಸಹಾಯ ಮಾಡುತ್ತಾರೆ.

 ನಮ್ಮ ಹಳ್ಳಿಮನೆಯ ಎದುರಿನಲ್ಲಿ ಸುಮಾರು ಒಂದು ಕಿ.ಮೀ.ಯಷ್ಟು ದೂರ ಗದ್ದೆ ಬೈಲು - ಆ ಬೈಲಿನ ಮಧ್ಯೆ, ಗದ್ದೆ ಕಂಟಗಳ ಮೇಲೆ ನಾವು ಶಾಲೆಗೆ ಹೋಗುವ ದಾರಿ! ಮಳೆಗಾಲ ಆರಂಭವಾಗಿ ಒಂದೆರಡು ತಿಂಗಳುಗಳಲ್ಲಿ ಗದ್ದೆ ಕಳೆ ಕೀಳುವ ಕೆಲಸ ಶುರು. ಸಾಮಾನ್ಯವಾಗಿ ಈ ಕೆಲಸ ಹೆಂಗಸರ ಪಾಲಿನದು. ಬತ್ತದ ಗದ್ದೆಗಿಳಿದು, ಬಗ್ಗಿ ನಿಂತು,ಬತ್ತದ ಮಧ್ಯೆ ಬೆಳೆದ ಕಳೆಯನ್ನು ಕಿತ್ತು, ಅವುಗಳನ್ನು ಪುಟ್ಟ ಪುಟ್ಟ ಕಟ್ಟುಗಳ ರೀತಿ ಮಾಡಿ, ಗದ್ದೆ ಕಂಟದ ಮೇಲಿರುವ ದಾರಿಗೆ ಎಸೆಯುತ್ತಿದ್ದರು. ಮೊದಲೇ ನೀರಿನ ಸೆಲೆಯಿಂದ ತುಂಬಿರುವ, ಹುಲ್ಲು ಮುಚ್ಚಿದ ಆ ದಾರಿಯು, ಕಿತ್ತೆಸೆದ ಕಳೆಯಿಂದಾಗಿ, ಈಗ ಮತ್ತಷ್ಟು ಕೆಸರಿನಿಂದ ತುಂಬುತ್ತದೆ. ಅದೇ ದಾರಿಯ ಮೇಲೆ ಶಾಲೆಗೆ ಹೋಗುವ ನಾವೆಲ್ಲಾ ಮಕ್ಕಳು ಸಾಗಬೇಕು - ಬೆಳಿಗ್ಗೆ ಒಮ್ಮೆ, ಸಂಜೆ ಒಮ್ಮೆ, ನಾವೆಲ್ಲ ನಡೆದು ನಡೆದು ಪಿಚ ಪಿಚ ಎಂದು ಕೆಸರಾಗುತ್ತಿದ್ದ ಆ ದಾರಿ ಸವೆಸಿ ಮನೆ ಸೇರಿದಾಗ, ಪಾದ ಪೂರ್ತಿ ಕೆಸರು, ಮಣ್ಣು! ಇಂತಹ ಕೆಸರು ದಾರಿಯಲ್ಲಿ ನಡೆದು ಬರಬೇಕಾದ ನಮ್ಮ ಅನಿವಾರ್ಯತೆಯನ್ನು ಕಂಡು, ಹೆತ್ತವರು ಕನಿಕರ ವ್ಯಕ್ತಪಡಿಸುತ್ತಿದ್ದುದೂ ಉಂಟು. ಕೆಸರು ದಾರಿಯಲ್ಲಿ ನಡೆದು ಮಕ್ಕಳ ಕಾಲು "ಹೇಸಿ" ಹೋಗಿದೆ ಎಂದು ಮನೆಯವರು ಲೊಚಗುಟ್ಟಿದರೂ, ಶಾಲೆಗೆಹೋಗಿ ನಾಲ್ಕು ಇಂಗ್ಲಿಷ್ ಅಕ್ಷರ ಕಲಿಯುವುದು ಬಹಳ ಮುಖ್ಯವೆಂದು ಎಲ್ಲರೂ ಭಾವಿಸಿದ್ದರಿಂದ, ಆ ನಮ್ಮ ದಿನಚರಿ ಮಳೆಗಾಲದುದ್ದಕ್ಕೂ ಅವ್ಯಾಹತವಾಗಿ ಸಾಗಿತ್ತು.

 ಮಳೆಗಾಲದಲ್ಲಿ ಶಾಲೆಮಕ್ಕಳ ದಿರಿಸು ಸಹಾ ಸ್ವಲ್ಪ ಗಮನಾರ್ಹವೇ. ಒಂದು ಕೈಯಲ್ಲಿ ಕಪ್ಪು ಬಟ್ಟೆಯ ಒಂದು ಕೊಡೆ, ಬಗಲಿನಲ್ಲಿ ಶಾಲೆಯ ಪುಸ್ತಕಗಳ ಚೀಲ, ಮತ್ತೊಂದು ಕೈಯಲ್ಲಿ ಊಟದ ಬುತ್ತಿ - ಮಳೆ ಬಿರುಸಾಗಿದ್ದರೆ, ಕೊಡೆಯನ್ನು ಗುರಾಣಿಯಂತೆ ಮೈಗೆ ಇದಿರಾಗಿ ಹಿಡಿದು ಮನೆಯತ್ತ ಸಾಗಬೇಕಿತ್ತು. ಬೈಲುದಾರಿಯಲ್ಲಿ ಮಳೆಬಂದರಂತೂ, ಮೈ ಕೈ ಪೂರ್ತಿ ಒದ್ದೆಯೇ ಸರಿ. ಮನೆಗೆ ಬಂದು, ಒಲೆಯ ಹತ್ತಿರ ಪುಸ್ತಕ ಚೀಲವನ್ನಿಟ್ಟು, ಶಿತವೇರಿದ ಪುಸ್ತಕಗಳನ್ನು ಗರಮ್ ಮಾಡುವಕೆಲಸ. ನಂತರದ ದಿನಗಳಲ್ಲಿ, ರೈನ್ ಕೋಟು ಬಳಕೆಗೆ ಬಂದು, ಮಕ್ಕಳಿಗೆ ಮಳೆಯಿಂದ ಸಾಕಷ್ಟು ರಕ್ಷಣೆ ದೊರೆಯಿತು. ಇನ್ನೂ ನಂತರದ, ಈಚಿನ ದಿನಗಳಲ್ಲಿ ರಸ್ತೆ ಸೌಕರ್ಯ ಮತ್ತು ವಾಹನ ಸೌಕರ್ಯವೂ ಸೇರಿಕೊಂಡು, ಮಕ್ಕಳೆಲ್ಲಾ ಇಂಗ್ಲಿಷ್ ಕಲಿಸುವ ಶಾಲೆಗೆ ವಾಹನದಲ್ಲಿ ಹೋಗುವುದು ಒಂದು ವಾಸ್ತವವಾಗಿಬಿಟ್ಟಿದೆ. ನಡೆದುಹೋಗಿ ಶಾಲೆ ಕಲಿತ ನಾವು ಕೊನೆಯಲ್ಲಿ ಏನು ಮಾಡಿದೆವೋ, ಅದನ್ನು ಈಗಿನ ಮಕ್ಕಳು ಸಹಾ ಮಾಡಲು ತಯಾರಾಗಿದ್ದಾರೆ - ಅದೆಂದರೆ, ಇಂಗ್ಲಿಷ್ ಕಲಿತು, ಪೇಟೆಯಲ್ಲಿ ಕೆಲಸ ಪಡೆದು, ದೂರದೂರಿಗೆ ವಲಸೆ ಹೋಗುವುದು! ಹಳ್ಳಿ ಹುಡುಗರೆಲ್ಲಾ ಪೇಟೆಯವರಾಗಿ ರೂಪಂತರ ಹೊಂದುವ ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿದೇ ಇದೆ. ಒಂದೇ ವ್ಯತ್ಯಾಸವೆಂದರೆ, ಮಳೆಯಲ್ಲಿ ಅರೆಬರೆ ನೆನೆದು ಸಾಗುವ ನಮ್ಮ ಕಾಲದ ಪಚೀತಿ ಈಗ ಕಡಿಮೆಯಾಗಿದೆ ಎನ್ನಬಹುದು.

 ಮಳೆಗಾಲದ ಸಂಜೆಯ ದಿನಗಳು ಭಾವನಾತ್ಮಕ ಯೋಚನೆಗಳಿಗೆ ಉತ್ತಮ ನಾಂದಿ ಹಾಡುತ್ತವೆ. ಸಣ್ಣದಾಗಿ ಸುರಿವ ಮಳೆಯ ತಾಳದೊಂದಿಗೆ, ಮನೆಯೊಳಗೆ ಕುಳಿತು ಮಳೆಯನ್ನು ನೋಡುತ್ತಾ ಇದ್ದರೆ, ಅದ್ಯಾವುದೋ ಲೋಕದ ಭಾವಗಳೆಲ್ಲ ಮನಸ್ಸನ್ನು ತುಂಬುತ್ತವೆ. ಆ ರೀತಿ ಮನದುಂಬುವ ಭಾವಗಳು ಸಂತೋಷದ ಅಲೆಗಳನ್ನೂ ಹೊಮ್ಮಿಸಬಹುದು ಅಥವಾ ಸುಪ್ತ ಮನಸ್ಸಿನ ಮೂಲೆಯಲ್ಲಿ ಅಡಗಿ ಕುಳಿತ ಅದ್ಯಾವುದೋ ಜನ್ಮಾಂತರದ್ದಾಗಿರಬಹುದಾದ ನೆನಪುಗಳನ್ನು ಸಹಾ ಈಚೆ ತರಬಹುದು - ಅಂತಹ ಭಾವನೆಗಳ ತರಂಗಗಳನ್ನು ಸ್ವೀಕರಿಸುವ ರೀತಿಯನ್ನು ಹೊಂದಿಕೊಂಡು, ನಮ್ಮ ಮನಸ್ಸಿನ ಮೇಲೆ ಗಾಢ ಅಚ್ಚೊತ್ತಬಲ್ಲದು ಮಳೆಗಾಲದ ಸಂಜೆ. ಭಾವಜೀವಿಯ ಭಾವನೆಗಳಿಗೆ ಕಾವ್ಯಾತ್ಮಕ ರೆಕ್ಕೆಗಳನ್ನು ಕಟ್ಟಿಕೊಡುವ ಶಕ್ತಿಯುಳ್ಳ ಮಳೆಗಾಲದ ಸಂಜೆಯು, ಅದೆಷ್ಟೋ ಸಂದರ್ಭಗಳಲ್ಲಿ ಎಲ್ಲರ ಮೇಲೂ ಮೋಡಿ ಮಾಡುವುದಂತೂ ದಿಟ.

 (ಹೊಡೆ = ಬತ್ತದ ತೆನೆಯ ಗರ್ಭ. ಶ್ರಾಯ = ಕಾಲ. ಕಂಟ = ಅಂಚು.)

ಚಿತ್ರಕೃಪೆ : ವೆರಿಬೋರ್ ಡ್.ಕಾಮ್

 

Rating
Average: 3.3 (6 votes)

Comments