ಬಾ ಇಲ್ಲಿ ಸಂಭವಿಸು ....
"ಇಲ್ಲಿ ಬಾ ಸಂಭವಿಸು ಇಂದೆನ್ನ ಹೃದಯದಲಿ,
ನಿತ್ಯವೂ ಅವತರಿಪ ಸತ್ಯಾವತಾರ!"
ಎಂದು ಮಹಾಕವಿ ಕುವೆಂಪು ಆ ಭಗವತ್ ಶಕ್ತಿಯನ್ನು ಮತ್ತೆ ಮತ್ತೆ ಭುವಿಯಲಿ ಅವತರಿಸುವಂತೆ ಪ್ರಾರ್ಥಿಸಿದ್ದಾರೆ.
ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಇಂತಹ ಒಂದು ಪ್ರಾರ್ಥನೆಗೈಯ್ಯಲ್ಲು, ಭಾವಪೂರ್ಣ ದರ್ಶನಪೂರ್ಣ ಕವಿತೆಯನ್ನು ನಮಗೆ ದಯಪಾಲಿಸಿದ ಕವಿಗೆ ನಮ್ಮೆಲ್ಲರ ಭಾವಪೂರ್ಣ ನಮನ. ಈ ಕವಿತೆಯ ರಾಗ ಸೌಂದರ್ಯವಲ್ಲದೇ, ಓದುಗರಿಗೆ ಅದರ ಹಿಂದಿರುವ ದರ್ಶನವೂ ಸಾದೃಶ್ಯವಾದರೆ, ಓದುಗ ಸಹೃದಯನಾಗಿ, ಕವಿಯ ಈ ಉತ್ತಮ ಕೃತಿ ಸಾರ್ಥಕತೆಯ ಉತ್ತುಂಗಪೀಠವೇರುವಲ್ಲಿ ಇನ್ನೊಂದು ಮಾತಿಲ್ಲ.
ಪುರಾಣಕವಿ ಭಗವದ್ಗೀತೆಯನ್ನು , ಶ್ರ್ಇಕೃಷ್ಣನನ ಉಪದೇಶ ರೂಪದಲ್ಲಿ ಜಗತ್ತಿಗೆ ಸಮರ್ಪಿಸಿದ್ದಾನೆ. ಪರಮೋತ್ತಮ ದರ್ಶನಗಳಿರುವ ಈ ಗೀತೆಯನ್ನು ಅರ್ಜುನನ ಕಷ್ಟ ಕಾಲದಲ್ಲಿ, ಧರ್ಮಸಂಕಟದಲ್ಲಿ ಭಗವಂತನು ಅವನಿಗೆ ಉಪದೇಶಿಸಿದನು. ಇದು ಕಥೆ. ಆದರೆ ನೈಜದಲ್ಲಿ ಪುರಾಣಕವಿಯ ಉದ್ದೇಶ, ಇಡೀ ಜಗತ್ತಿಗೆ ಶ್ರೀಕೃಷ್ಣನ ಈ ಉಪದೇಶಸಾರ ಹಾಗು ಅದರೊಳಿರುವ ದರ್ಶನಗಳು ಲಭ್ಯವಾಗಬೇಕೆಂಬುದು. ಇಂತಹ ದರ್ಶನಗಳ ಮೊತ್ತವಾದ ಗೀತೆಯನ್ನು ಕೊಟ್ಟ ಶ್ರೀಕೃಷ್ಣನನ್ನು ಮತ್ತೆ ಮತ್ತೆ ಅವತರಿಸಿ, ಜಗತ್ತಿನ ಸರ್ವಕೋಟಿ ಚೈತನ್ಯಗಳ ಉದ್ದಾರವಾಗಬೇಕೆಂಬುದು ನಮ್ಮ ರಸಋಷಿಯ ಮನದಾಸೆ. ಆದುದರಿಂದಲೇ
"ಮೂಡಿಬಂದೆನ್ನ ನರರೂಪ ಚೇತನದಿ ,
ನಾರಯಣತ್ವಕ್ಕೆ ದಾರಿ ತೋರ"
ಎಂದು ಹೇಳಿರುವರು. ಲೋಕ ಲೋಕಗಳಲ್ಲಿ, ದೇಶದೇಶಗಳಲ್ಲಿ ಪ್ರತಿ ಚೇತನ ಚೇತನಗಳಲ್ಲಿಯೂ ಭಗದವತಾರವಾಗಿ ಚೇತನವು ಸನ್ಮಾರ್ಗದಲ್ಲಿ, ಸುಗಣಪೂರ್ಣದಿಂದ ನಡೆಯಬೇಕು. ಅದಕ್ಕಾಗಿಯೆ
"ದೇಶದೇಶದಿ ವೇಷವೇಷಾಂತರವನೆಂತು
ವಿಶ್ವಸಾರಥಿಯಾಗಿ ಲೀಲಾರಥವನೆಂತು
ಚೋದಿಸಿರುವೆಯೋ ಅಂತೆ, ಸೃಷ್ಟಿಲೋಲ,
ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ,
ಹೇ ದಿವ್ಯ ಸಚ್ಚಿದಾನಂದ ಶೀಲ"
ಎಂದು ಹೇಗೆ, ಲೋಕ ಲೋಕಗಳಲಿ ಸಾಮಾನ್ಯ ಮನುಷ್ಯರು ಭಗವತ್ ದರ್ಶನದಿಂದ ಮಹಾಚೇತನಗಳಾಗಿರುವರೋ ಹಾಗೆಯೇ ನನ್ನ ಚೈತ್ಯದಲ್ಲೂ ಅವತರಿಸಿ ಮಹಾಸಾಧನೆಗೈವ ಚೇತನವಾಗಿಸು, ಎಂದು ಪ್ರಾರ್ಥಿಸಿರುವರು. ಕವಿಯ ದರ್ಶನವನ್ನು ನಾವೂ ಪಡೆದರೆ, ಅದಕ್ಕಿಂತ ಮಹಾಭಾಗ್ಯ ಇನ್ನೊಂದಿಲ್ಲ. ಇದರ ಜೊತೆಗೆ ಕುವೆಂಪುರವ "ಶ್ರ್ಈ ಕೃಷ್ಣಜನ್ಮಾಷ್ಟಮಿ" ಪ್ರಬಂಧವನ್ನು ಓದಿದವರಿಗೆ ಮೇಲಿನ ಕವಿತೆಯ ಸಂಪೂರ್ಣ ದೃಷ್ಟಿ ದೊರಕುವುದು. ಅದರಲ್ಲಿ ಭಗವದವತಾರದ ಕಾರ್ಅಣವನ್ನು, ಜನ್ಮಾಷ್ಟಮಿಯ ದಿನ ಭಗವಂತನನ್ನು ಸ್ಮರಿಸುವ ಮಹತ್ವವನ್ನು ಕವಿಯು ಹೀಗೆ ವಿವರಿಸಿರುವರು :-
"ಶ್ರೀಕೃಷ್ಣನು ಜನ್ಮವೆತ್ತಿದ ಈ ರಾತ್ರಿ ಸರ್ವಲೋಕ ಪೂಜ್ಯವಾದ ಪವಿತ್ರ ರಾತ್ರಿ. ಆ ಮತ, ಈ ಮತ, ಆ ಧರ್ಮ, ಆ ದೇಶ, ಈ ದೇಶ, ಆ ಜನಾಂಗ, ಈ ಜನಾಂಗ ಎನ್ನದೆ ಎಲ್ಲರಿಂದಲೂ ಅಲ್ಲ ಕಾಲಕ್ಕೂ ಗೌರವಕ್ಕೂ ಪಾತ್ರವಾಗಿರುವ 'ಭಗವದ್ಗೀತೆ'ಗೆ ಅಂಕುರಾರ್ಪಣೆಯಾದ ದಿವ್ಯ ರಾತ್ರಿ. ಏಕೆಂದೆರೆ ಶ್ರೀಮದ್ ಭಗವದ್ಗೀತೆ ಶ್ರೀಕೃಷ್ಣನ ವಾಕ್-ಕೃತಿಸ್ವರೂಪದ ಅವತಾರವಾಗಿದ್ದರೆ, ಶ್ರೀಕೃಷ್ಣ ಶ್ರೀಮದ್ ಭಗವದ್ಗೀತೆಯ ಪುರುಶೋತ್ತಮ ರೂಪದ ಅವತಾರವಾಗಿದ್ದನೆ. ಭಗವದ್ಗೀತೆಯಲ್ಲಿ ಪ್ರಣೀತವಾದ ಪೂರ್ಣದೃಷ್ಟಿಯ ಪೂರ್ಣದರ್ಶನಕ್ಕೆ ತನ್ನ ಸಮಗ್ರ ಜೀವನವನ್ನೇ ನಿದರ್ಶನವನ್ನಾಗಿ ಒಡ್ಡಿದ್ದಾನೆ ಶ್ರ್ಈಕೃಷ್ಣ. ಶ್ರ್ಈಮದ್ ಭಗವದ್ಗೀತೆ ಶ್ರ್ಈಕೃಷ್ಣನ ವಾಙ್ಮಯ ಶರೀರ. ಶ್ರ್ಈಕೃಷ್ಣ ಶ್ರೀಮದ್ ಭಗವದ್ಗೀತೆಯ ಚಿನ್ಮಯ ಕಳೇವರ!. ಸಮನ್ವಯ, ಸರ್ವೋದಯ ಮತ್ತು ಪೂರ್ಣದೃಷ್ಟಿ - ಈ ತತ್ವಗಳು ನಮ್ಮ ಲೋಕದ ಭವಿತವ್ಯದ ಬಾಳಿಗೆ ಮಾರ್ಗದರ್ಶಕ ದೀಪಗಳಾಗಬೇಕಾದರೆ ಭಗವದ್ಗೀತೆಯ ವ್ಯೋಮವಿಶಾಲವಕ್ಷವನ್ನು ಆಶ್ರಯವಿಲ್ಲದೆ ಗತ್ಯಂತರವಿಲ್ಲ. ದ್ವಾಪರಯುಗದ ಗರ್ಭದಿಂದ ಹೊಮ್ಮಿ ಕಲಿಯುಗದ ಹೃತ್ ಕೇಂದ್ರಕ್ಕೆ ಧುಮುಕುತ್ತಿರುವ ಆ ಕ್ಷೀರಜಲಪಾತದ ಪಾಂಚಜನ್ಯಘೋಷ ನಮ್ಮೆಲ್ಲರ ಪ್ರಾಣಗಳಲ್ಲಿ ಪ್ರತಿಸ್ಪಂದಿಸಿ ಅನುರಣಿತವಾಗಲಿ!! "
Comments
ಉ: ಬಾ ಇಲ್ಲಿ ಸಂಭವಿಸು ....
In reply to ಉ: ಬಾ ಇಲ್ಲಿ ಸಂಭವಿಸು .... by santhosh_87
ಉ: ಬಾ ಇಲ್ಲಿ ಸಂಭವಿಸು ....
ಉ: ಬಾ ಇಲ್ಲಿ ಸಂಭವಿಸು ....
ಉ: ಬಾ ಇಲ್ಲಿ ಸಂಭವಿಸು ....
ಉ: ಬಾ ಇಲ್ಲಿ ಸಂಭವಿಸು ....