ಚಲೋ ಮಲ್ಲೇಶ್ವರ

ಚಲೋ ಮಲ್ಲೇಶ್ವರ

ದೂರದ ಊರಿಂದ ಗೆಳೆಯ ಫೋನ್ ಮಾಡಿ "ಮುಂದಿನವಾರ ಬರುತ್ತಿದ್ದೇನೆ. ಮಲ್ಲೇಶ್ವರದ ನಂದೀಶ್ವರ ದೇವಾಲಯದ ಬಗ್ಗೆ ಬರೆದಿದ್ದೀಯಲ್ಲಾ.. ಸಂಡೆ ಅಲ್ಲಿಗೆ ಹೋಗೋಣ್ವಾ?" ಎಂದು ಕೇಳಿದ್ದ. ಆಕ್ಚ್ಯುವಲಿ ಸಂಡೆ ನನಗೆ ಯಾವಾಗಲೂ ವಿಪರೀತ ಕೆಲಸವಿರುತ್ತದೆ. "ಎಲ್ರೀ, ಪ್ರತೀ ಸಂಡೆ ಹನ್ನೊಂದು ಗಂಟೆಯವರೆಗೆ ಮಲಗಿ, ಎದ್ದ ನಂತರ ನಾಷ್ಟಾ ಊಟ ಸಹ ಮಾಡುವುದು ಟಿ.ವಿ. ಮುಂದೆನೇ ಅಲ್ವಾ? ಏನು ಕೆಲಸ ಮಾಡುತ್ತೀರಿ? " ಎಂದಳು ನಮ್ಮ ಮನೆಯ "ಅಕ್ಕಾ ಹಜಾರಿ". ಇವಳ ಮುಂದೆ ಭೃಷ್ಟಾಚಾರ ಬಿಡಿ, ಒಂದು ಸುಳ್ಳಿಗೂ ಅವಕಾಶವಿಲ್ಲ."ಪ್ಲೀಸ್ ಹಜಾರಿ, ಮಾಡಬೇಡವೆ ಕಿರಿಕಿರಿ" ಎಂದೆ. ಚುಟುಕಿಗೆ ವ್ಹಾವ್ಹಾ ಹೇಳುವುದು ಬಿಟ್ಟು,ಮೊಟಕಿ, "ಏನಂದಿರಿ? ಕಿರಿಕಿರಿನಾ? ಆ ಪಾರ್ಥಸಾರಥಿಯವರನ್ನು ನೋಡಿ ಕಲೀರಿ. ಅವರು ಏನು ಬರೆದರೂ ಹೆಂಡತಿಗೆ ತೋರಿಸಿಯೇ ಪ್ರಕಟಿಸುತ್ತಾರಂತೆ. ನೀವು ನೋಡಿದರೆ ಬಜಾರಿ ಅಂತೀರಿ.."


"ಬಜಾರಿ ಅಲ್ವೇ ಹಜಾರಿ ಅಂದದ್ದು. ನೀನೂ ಹಜಾರೆಯವರಂತೆ ಸರಕಾರದ ಅಂದರೆ ನನ್ನ ತಪ್ಪು ತಿದ್ದುವ ಹಜಾರಿ ಅಂದೆ. ಇನ್ನು ಪಾರ್ಥಸಾರಥಿಯವರಿಗೂ ನನಗೂ ಹೋಲಿಸಬೇಡ. ಅವರು ಬಹಳ ಚುರುಕು. ಎರಡೇ ದಿನದಲ್ಲಿ ಒಂದು ಕಾದಂಬರಿ ಬರೆಯಬಲ್ಲರು. ಮೊನ್ನೆ ೨೬೦ ಪುಟದ "ಸರ್ಪಸುತ್ತು" ಕಾದಂಬರಿ ಬರೆದು ಮುಗಿಸಿದ್ದೇನೆ. ಹೆಂಡತಿ ಓದಿಯಾದ ಮೇಲೆ ಧಾರಾವಾಹಿಯಾಗಿ ಪ್ರತಿ ದಿನ ಸಂಪದದಲ್ಲಿ ಹಾಕುವೆ ಎಂದಿದ್ದರು. ನಾನು ಬರೆಯುವುದೇ ನಾಲ್ಕು ಸಾಲು. ಅದನ್ನೂ ನೀನು ಸೆನ್ಸಾರ್ ಮಾಡಿದರೆ ಏನು ಉಳಿಯುವುದು? ಒಲೆಯಲ್ಲಿ ಹಾಲು ಉಕ್ಕಿದ ವಾಸನೆ ಬರುತ್ತಿದೆ. ಹೋಗಿ ನೋಡು.."ಎಂದೆ.


ಬಿಡಿ. ಈಗ ಮುಖ್ಯ ವಿಷಯಕ್ಕೆ ಬರೋಣ-ಏನು ಹೇಳುತ್ತಿದ್ದೆ - ಸಂಡೆ ನಾನು ಯಾವಾಗಲೂ ಬಿಝಿ. ಇಡೀ ದಿನ ಟಿ.ವಿ. ನೋಡಿದರೇನಾಯಿತು? ಅದೂ ಕೆಲಸಾನೇ ತಾನೆ. ಕಣ್ಣಿಗೆ ಎಕ್ಸರ್‌ಸೈಜ್ ಆಗುವುದು.


"ಆಹಾ..ಕಣ್ಣಿನ ಎಕ್ಸರ್‌ಸೈಜ್ ಅಂತೆ.. (ಪುನಃ ಬಂದಳು :( )..ಹೊಟ್ಟೆ ನೋಡಿದಿರಾ? ಆ ಮಂಜಣ್ಣ ಡೊಳ್ಳು ಹೊಟ್ಟೆ ಗಣೇಸ ಅಂದಾಗಲೂ ನಾಚಿಕೆಯಾಗಲ್ವಾ ನಿಮಗೆ?"


"ಯಾಕೇ? ಯಾಕೆ ನಾಚಿಕೆಯಾಗಬೇಕು? ಗಣೇಶನಿಗೆ ಹೋಲಿಸುವಾಗ ಹೆಮ್ಮೆ ಪಟ್ಟುಕೊಳ್ಳಬೇಕು. ನೋಡು.. ಮೊಬೈಲ್‌ನ ಮೆಮೊರಿ ಜಾಸ್ತಿ ಮಾಡಲು ಅದರ ಸೊಂಟಕ್ಕೆ ಮೆಮೊರಿ ಕಾರ್ಡ್ ಸಿಕ್ಕಿಸುವುದಿಲ್ವಾ..ಹಾಗೇ....


ನಮ್ಮ ಮೆದುಳಿನ ಗಾತ್ರ ಫಿಕ್ಸೆಡ್. ಸೊಂಟದಲ್ಲಿ ಒಂದೊಂದೇ "ಟೈರ್" ಜಾಸ್ತಿಯಾಗುವುದು ಎಂದರೆ ಒಂದೊಂದು ಮೆಮೊರಿ ಕಾರ್ಡ್ ಸಿಕ್ಕಿಸಿದ ಹಾಗೇ.."


"ಹೌದ್ರೀ. ನೀಲೇಕಣಿಗೆ ಫೋನ್ ಮಾಡಿ ಹೇಳುವೆ. ಇಡೀ ದೇಶದ ಆಧಾರ್ ದಾಖಲೆಗಳನ್ನೆಲ್ಲಾ ನಮ್ಮ ಯಜಮಾನರ ಹೊಟ್ಟೆಗೆ ಫೀಡ್ ಮಾಡಿ ಅಂತ...ಮತ್ತೂ ಸ್ಥಳ ಉಳಿಯಬಹುದು.."


"ಹ್ಹ ಹ್ಹ..ಈಗ ನಿನ್ನ ಮೆದುಳು ಕೆಲಸ ಮಾಡುತ್ತಿದೆ. ನಿನಗೂ ಒಂದಾದರೂ ಟೈರ್ ಬರುತ್ತಿದ್ದರೆ ನನ್ನ ಹಾಗೇ ಜಾಣೆಯಾಗುತ್ತಿದ್ದಿ." ಎಂದೆ. ಛೀ ಅಂದು ಕೋಪಿಸಿಕೊಂಡು (ಬಹುಷಃ ಕನ್ನಡಿ ಬಳಿ) ಹೋದಳು.


ಅಂದ ಹಾಗೇ ನಾನು ಎಲ್ಲಿದ್ದೆ..? ಹಾಂ..ಬಿಝಿ.. ಆದರೂ ಗೆಳೆಯ ಕೇಳಿದಾಗ ಇಲ್ಲಾ ಅನ್ನಲು ಆಗುತ್ತಾ? " ಹೋಗೋಣ. ಇನ್ನೂ ಕೆಲವರು ಬರುತ್ತೇನೆ ಅಂದಿದ್ದರು. ಎಲ್ಲರೂ ಒಟ್ಟಿಗೆ ಮುಂದಿನ ಸಂಡೆ ಹೋಗೋಣ. ಎಲ್ಲರಿಗೂ ತಿಳಿಸುವೆ" ಅಂದೆ.


ಯಾರೆಲ್ಲಾ ಬರುತ್ತಾರೆ ನನಗೆ ತಿಳಿಸಬೇಕು, ಮಲ್ಲೇಶ್ವರ ಸುತ್ತುವುದಕ್ಕೆ ಒಂದು ಒಳ್ಳೆಯ ಹೆಸರು ಬೇಕು, ಎಂದದಕ್ಕೆ ನಮ್ಮ ಸುರೇಶರು "ಚಲೋ ಮಲ್ಲೇಶ್ವರ" (ಮಲ್ಲೇಶ್ವರಕ್ಕೆ ಹೋಗೋಣ+ ಸುಂದರ ಮಲ್ಲೇಶ್ವರ ಎರಡೂ ಅರ್ಥ ಬರುತ್ತದೆ ಎಂದು) ಹೆಸರು ಸೂಚಿಸಿ, " ಚಲ್ ಚಲ್ ಚಲ್ ಮೇರೆ ಸಾಥೀ, ಓ ಮೇರೆ.." ಹಾಡಿನ ಭಾವಾನುವಾದನೂ ಕಳುಹಿಸಿದರು. ಹಾಡು ಯಾಕೆ ಗೊತ್ತಾಗಲಿಲ್ಲ. ಬಹುಷಃ ರಸ್ತೆಯಲ್ಲಿ ಹೋಗುವಾಗ ಹಾಡಲು ಇರಬಹುದು.


ಚಲೋ ಮಲ್ಲೇಶ್ವರಕ್ಕೆ ಒಂದೇ ದಿನದಲ್ಲಿ ೫೦೦ಕ್ಕೂ ಮೀರಿ ಪ್ರತಿಕ್ರಿಯೆ ಬಂತು. ಎಲ್ಲವೂ ಹೆಚ್ಚುಕಮ್ಮಿ ಒಂದೇ ತರಹ-" ಚಲೋ ಮಲ್ಲೇಶ್ವರಕ್ಕೆ ಶುಭಾಶಯಗಳು. ನಾನು ಬೆಂಗಳೂರಲ್ಲಿ ಇರುತ್ತಿದ್ದರೆ ಬರುತ್ತಿದ್ದೆ."


"ಗಣೇಸರೆ ಅರ್ಜೆಂಟ್ ಕೆಲಸವಿದ್ದುದರಿಂದ ಬರಲಾಗುವುದಿಲ್ಲ. ಮುಂದಿನಸಲ ತಪ್ಪಿಸುವುದಿಲ್ಲ.."


+೧ 


+೧


(ಮುಂದುವರಿಯುವುದು)


 

Rating
No votes yet

Comments