ದೊರೆಸಾನಿಪಾಳ್ಯದಲ್ಲಿ ಬೇಲಿ ನೆಗೆದು ಅರಣ್ಯ ಕಾಪಾಡಿದ ದಿ.ಡಿ.ದೇವರಾಜ್ ಅರಸ್
ಮಾನ್ಯ ಡಿ.ದೇವರಾಜ್ ಅರಸ್ ಅಂದಿನ ಮುಖ್ಯ ಮಂತ್ರಿಗಳು ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳು. ಅವರನ್ನು ಮಾಜಿ ಅನ್ನಬಹುದು ಆದರೆ ದಿವಂಗತ ಅನ್ನಲು ನನ್ನ ಮನಸ್ಸು ಒಪ್ಪುವುದಿಲ್ಲ. ಜನ ಮಾನಸದಲ್ಲಿ ಚಿರಸ್ಥಾಯಿ ಅವರು. ಅಪರೂಪದ ಅವರನ್ನು ನೆನೆಯಲು ಈ ಕಿರು ಬರಹ.
೧೯೭೯ ನೇ ಇಸವಿ.ನಾನು ಆ ದಿನದಲ್ಲಿ ಅಂದಿನ ಬೆಂಗಳೂರು ಜಿಲ್ಲೆಯ ಆನೇಕಲ್ ವಲಯ ಅರಣ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದೆ. ವಿಶೇಷವೆಂದರೆ ಇಂದು ನಾವೆಲ್ಲಾ ನೋಡುವ (ನೋಡಲು ಗುರುತು ಸಿಗದ) ದೊರೆಸಾನಿಪಾಳ್ಯ ಹಳ್ಳಿ ನನ್ನ ಲೇಖನಕ್ಕೆ ವಸ್ತು. ಅಂದು ಬೆಂಗಳೂರಿನಿಂದ ಬನ್ನೇರುಘಟ್ಟ ಕಡೆ ಅಂದಿನ ಡೈರಿ ಸರ್ಕಲ್ (ಇಂದಿನ ಡೈರಿ ಫ್ಲೈ ಓವರ್ ) ನಿಂದ ಹೊರಟರೆ ಸುಮಾರು ೨ ಕಿ.ಮೀ ದೂರದಲ್ಲಿ ಒಂದು ಚೆಕ್ ಪೋಸ್ಟ್ ಕಟ್ಟಡ ಇತ್ತು. ಅದು ಇಂದು ಇಲ್ಲ.ಆದರೆ ಬಿ ಟಿ ಎಂ ಲೇಔಟ್ಗೆ ಎಡಕ್ಕೆ ತಿರುಗುವಾಗ ಮೂಲೆಯಲ್ಲಿದ್ದ ಕಟ್ಟಡ. ಅದನ್ನು ದಾಟಿ ಇಂದಿನ ಇಂಡಿಯನ್ ಇನ್ಸ್ಟಿಟ್ಯೂಟ್ ನ ಕಟ್ಟಡ (ಅದು ಆಗ ತಾನೇ ಹೊಸತಾಗಿ ಕಟ್ಟಿದ್ದುದ್ದು) ದಾಟಿ ಸುಮಾರುನೂರು ಮೀಟರು ಹೋದಾಗ ಬಲ ಬದಿಯಲ್ಲಿ ಖಾಲಿ ಜಾಗ.ಕತ್ತೆ ಕುದುರೆ ಮೇಯುತ್ತಿದ್ದ ಹಸಿರು ಜೌಗು ಮೈದಾನ.ಮೈದಾನದ ಒಂದು ತುದಿಯಲ್ಲಿ ಕಾಲು ಹಾದಿ. ಅದರಲ್ಲಿ ನಡೆದು ಸುಮಾರು ೧೫೦ ಮೀಟರು ದಾಟಿದರೆ ಅಲ್ಲೇ ಇತ್ತು ಒಂದು ಕೊಳಚೆ ವಾಸದ ತಾಣ .ಅದೇ ದೊರೆಸಾನಿಪಾಳ್ಯ ಹಳ್ಳಿ. ಅದನ್ನು ದಾಟಿ ಕಾಲು ಹಾದಿಯಲ್ಲಿ ಮತ್ತೂ ೨೦೦ ಮೀಟರು ದೂರ ಸಾಗಿದರೆ ಅಲ್ಲೊಂದು ಸುಂದರ ಅರಣ್ಯ. ಅದು ಇಂದೂ ಸಹ ಅರಣ್ಯವೇ ಆಗಿ ಉಳಿದಿದೆ. ಆ ಅರಣ್ಯ ಸದಾ ಮಾನ್ಯ ಡಿ.ದೇವರಾಜ್ ಅರಸ್ ಅಂದಿನ ಮುಖ್ಯ ಮಂತ್ರಿಗಳನ್ನು ಸ್ಮರಿಸುತ್ತದೆ. ಅವರಿಗೆ ಅರಣ್ಯ ಮಂತ್ರಿ ಆಗಿದ್ದ ಇಂದೂ ಸಹ ನಮ್ಮೊಡನೆ ಇರುವ (ಹಾಲಿ ಜೆಡಿಎಸ್) ರಾಜಕೀಯ ನಾಯಕರನ್ನು ನೆನೆಯುತ್ತದೆ.ನಾನೂ ಸಹ ಆ ಪ್ರಕರಣದ ಚರಿತ್ರೆಯ ಒಂದು ಭಾಗವಾಗಿರುವೆ ಎಂದು ಹೆಮ್ಮೆ ಎನಿಸುತ್ತದೆ.
ಅದೊಂದು ದಿನ ನಾನು ಎಂದಿನಂತೆ ವಿಭಾಗೀಯ ಕಚೇರಿಗೆ ಹೋಗಿದ್ದೆ. ನನ್ನ ಬಾಸ್ ಕರೆದು ಹೇಳಿದರು ನೋಡಪ್ಪಾ ನಾಳೆ ಚೀಫ್ ಮಿನಿಸ್ಟರ್ ನಿನ್ನ ದೊರೆಸಾನಿ ಪಾಳ್ಯಕ್ಕೆ ಇನ್ಸ್ಪೆಕ್ಸನ್ ಇಟ್ಟುಕೊಂಡಿದ್ದಾರೆ ಫೈಲ್ಸ್ ಸಹಿತ ರೆಡಿಯಾಗಿ ಬಾ ಅಂದರು.ಸ್ವಲ್ಪ ಗಾಬರಿ ಆಯಿತು.ಕಾರಣ ನನ್ನ ವಲಯದ ಆ ಅರಣ್ಯದಲ್ಲಿ ನಮ್ಮ ಕಾಮಗಾರಿ ಏನೂ ನಡೀತಾ ಇರಲಿಲ್ಲ. ಮೇಲಾಗಿ ಅದೇ ಮಾರ್ಗದಲ್ಲಿ ಆನೇಕಲ್ ಕಡೆ ಓಡಾಡುತ್ತಿದ್ದರೂ ಮೇಲಿಂದ ಮೇಲೆ ಹೋಗಿ ಇನ್ಸ್ಪೆಕ್ಸನ್ ಮಾಡುವ ಪ್ರಮೇಯ ಇರುವಂತಹ ಸ್ಥಳ ಎನ್ನಿಸಿರಲಿಲ್ಲ.
ಹೇಗೂ ಇದ್ದಷ್ಟು ಹಳೆಯ ಕಡತಗಳನ್ನು ಜೋಡಿಸಿಕೊಂಡು ಈಗಿನ ಕೆ.ಆರ್ ಸರ್ಕಲ್ ಹತ್ತಿರವಿದ್ದ ವಿಭಾಗೀಯ ಕಚೇರಿಗೆ ಹೋಗಿ ನಾನೂ ತಯಾರು ಸಾರ್,ಎಂದು ಹೇಳಿದೆ. ಬಾಸ್ ಹೇಳಿದರು ಹುಷಾರ್,ನಮ್ಮ ಮಂತ್ರಿಗಳು ಅಲ್ಲದೆ ರೆವಿನ್ಯೂ ಮಂತ್ರಿಗಳು ಅಲ್ಲದೆ.ಮತ್ತಿತರ ವಿ ಐ ಪಿ ಗಳು ಬರುತ್ತಿದ್ದಾರೆ ಅಂದರು. ನಾನೂ ಮು೦ದೆ ಹೋಗಿ ಆ ಕಾಲು ಹಾದಿಯ ಬಳಿ ಚೀಫ್ ಮಿನಿಷ್ಟರ ಬಳಗವನ್ನು ಸ್ವಾಗತಿಸಲು ಕಾಯುತ್ತಾ ನಿಂತೆ. ಸುಮಾರು ೧೧ ಗಂಟೆಗೆ ಮಾನ್ಯ ಡಿ ದೇವರಾಜ್ ಅರಸ್ ಮುಖ್ಯ ಮಂತ್ರಿಗಳು,ನಮ್ಮ ಅರಣ್ಯ ಮಂತ್ರಿಗಳಾದ ಎಂ ಸಿ ನಾಣಯ್ಯ ಅವರು, ರೆವೆನ್ಯೂ ಮಂತ್ರಿಗಳಾದ ಮಾನಿ ಬಸವಲಿಂಗಪ್ಪ ಅವರು , ಬಿ ಡಿ ಎ ಅಧ್ಯಕ್ಷರಾದ ಮಾನ್ಯ ಬಿ ಟಿ ಸೋಮಣ್ಣನವರು ಮತ್ತು ಎಂದಿನಂತೆ ನಮ್ಮ ಇಲಾಖಾ ಮುಖ್ಯಸ್ತರಾದ ಸಿ ಸಿ ಎಫ್ ಅವರು (ಈಗಿರುವಂತೆ ಆಗ ಪಿ ಸಿ ಸಿ ಎಫ್ ಇರಲಿಲ್ಲ) ಮುಂತಾದವರೆಲ್ಲಾ ಬಂದರು. ಸೆಲ್ಯೂಟ್ ಮಾಡಿ ಅವರೊಟ್ಟಿಗೆ ಕಾಲು ಹಾದಿಯಲ್ಲಿ ಕೊಳಚೆ ವಾಸಿಗಳ ಸ್ಥಳ ಹಾದು ಸಕಲ ವೃಂದವೂ ಹೋಗುತ್ತಿದ್ದೆವು. ಎಲ್ಲರಿಗಿಂತ ಮುಂದಿನ ಸಾಲಿನಲ್ಲಿ ಸೂಟು ಬೂಟಿನ ಕ್ಲೋಸ್ ಕಾಲರಿನಲ್ಲಿ ರಾಜಗಾಂಭೀರ್ಯದಿಂದ ಮ್ಹುಖ್ಯ ಮಂತ್ರಿಗಳು ನಮ್ಮ ಉನ್ನತ ಅಧಿಕಾರಿಗಳೊಡನೆ ಮಾತಾಡುತ್ತಾ ಸಾಗುತ್ತಿದ್ದರು.ಮಾತುಕತೆ ಮೈಸೂರಿನ ಸ್ಯಾಂಡಲ್ ವುಡ್ ಡಿಪೋ ಕುರಿತಾಗಿತ್ತು. ನಾನೂ ಸಹ ಮುಂದಿದ್ದು ಅವರಿಗೆ ದಾರಿ ಮಾಡಿಕೊಡುತ್ತಿದ್ದೆ. ಮೈಸೂರಿನ ಸ್ಯಾಂಡಲ್ ವುಡ್ ಡಿಪೋನಲ್ಲಿರೋ ಶ್ರೀಗಂಧವನ್ನು ಹರಾಜು ಹಾಕುವ ವಿಚಾರದಲ್ಲಿ ತಮಗೆ ಪತ್ರ ಬರೆದಿದ್ದರೂ ಇನ್ನೂ ಅನುಮತಿ ನಿರೀಕ್ಷೆಯಲ್ಲಿದೆ ಎಂದು ನಮ್ಮ ಉನ್ನತ ಅಧಿಕಾರಿ ಹೇಳುತ್ತಿದ್ದಂತೆ ಶಾಂತ ಮೂರ್ತಿಯಂತೆ ಇದ್ದ ಮಾನ್ಯ ಮುಖ್ಯ ಮಂತ್ರಿಗಳು ಕೋಪಗೊಂಡು ನಮ್ಮ ಅಧಿಕಾರಿಗಳ ಮೇಲೆ ಎರಗಿ “ ನೀವೇನಾದರೂ ನನ್ನನ್ನು ಕಂಡು ಚರ್ಚಿಸಿದ್ದಿರಾ “ಎಂಬಿತ್ಯಾದಿ ಗದರಿದರು.
ಕೂಡಲೇ ಎಲ್ಲಾ ಅಧಿಕಾರಿಗಳು ಎದರಿ ಹಿಂದಕ್ಕೆ ಸರಿದರು. ಅದೇಕೋ ಅಂದು ಬಂದಿದ್ದ ನಾಯಕರ್ಯಾರೂ ಮುಂದೆ ಬರಲು ಪ್ರಯತ್ನಿಸಲಿಲ್ಲ.ನಾನೂ ಸ್ಥಳದ ಅಧಿಕಾರಿಯಾಗಿ ನನ್ನ ಹೊಣೆಗಾರಿಕೆ ಹೆಚ್ಚಾಯಿತು. ಕ್ಷಣಾರ್ಧದಲ್ಲಿ ಜಾಗೃತನಾಗಿ ಧೈರ್ಯ ತಂದುಕೊಂಡು ನಾನೊಬ್ಬನೇ ಮುಖ್ಯ ಮಂತ್ರಿಗಳ ಬಳಿ ಹೋಗಿ, ಸಾರ್ ನಾನೂ ಇಲ್ಲಿನ ವಲಯ ಅರಣ್ಯಾಧಿಕಾರಿ ತಮಗೆ ಎಲ್ಲವನ್ನೂ ವಿವರಿಸುತ್ತೇನೆ ಎಂದೆ. ನಾನೂ ಖಾಕಿ ಯುನಿಫಾರ್ಮ್ ನಲ್ಲಿ ಮಿನ್ಚುತ್ತಿದ್ದೆ ಹಾಗು ಧೈರ್ಯದಿಂದ ಮಾತಾಡುವುದನ್ನು ಸ್ವಲ್ಪ ಬಿಗುವಿನಿಂದಲೇ ನೋಡಿದರು.ಆದರೆ ಕ್ಷಣ ಮಾತ್ರದಲ್ಲೇ ಸೌಮ್ಯ ವದನರಾಗಿ ಬಾರಪ್ಪ ಎಂದು ಒ೦ದೆರಡು ಹೆಜ್ಜೆ ಮುಂದೆ ಇಟ್ಟರು. ನಾನು ಒಮ್ಮೆ ಹಿಂತಿರುಗಿ ನೋಡಿದೆ.ಆಶ್ಚರ್ಯ ಆಘಾತ ಅನ್ನುವಂತೆ ಹಿಂದಿದ್ದ ಎಲ್ಲರೂ ಸುಮಾರು ೫೦ ಮೀಟರು ದೂರದಲ್ಲಿ ನಿಧಾನವಾಗಿ ಹೆಜ್ಜೆ ಹಾಕಿ ಗುಂಪು ಗುಂಪಾಗಿ ಬರುತ್ತಿದ್ದರು
.ಆಗ ಮುಖ್ಯ ಮಂತ್ರಿಗಳು ನನ್ನ ಹೆಗಲ ಮೇಲೆ ಕೈ ಇತ್ತು “ನೀನೂ ಕಟ್ ಮಸ್ತಾಗಿದ್ದಿ,ಯಾವ ಊರಿನವ ಎಂದರು.ನನಗೀಗ ಅಸಾಧಾರಣ ಹುಮ್ಮಸ್ಸು ಬಂತು. ಸಾರ್ ಈ ಕಾಡನ್ನು ನಮ್ಮಲ್ಲೇ ಉಳಿಸ ಬೇಕು ,ನೋಡಿ ಸಾರ್ ಎಂದು ಸನಿಹ ದೂರದಲ್ಲಿ ಕಾಣುತ್ತಿದ್ದ ಜೆಪಿ ನಗರವನ್ನು ಅವರಿಗೆ ತೋರಿಸುತ್ತಾ ನಾಳಿನ ನಗರಕ್ಕೆ ಉಸಿರಾಡಲು ಆಮ್ಲಜನಕ ಒದಗಿಸುವ ಕಾಡು ಈ ಭಾಗದಲ್ಲಿ ಇದು ಮಾತ್ರ ಸಾರ್ ಅಲ್ಲದೆ ಈ ಕಾಡಿನಲ್ಲಿ ಬಹಳ ಬೆಲೆ ಬಾಳುವ ಜಾಲಾರಿ ಮರಗಳು ಹೇರಳ ಇವೆ.ಇದು ವೈಜ್ಞಾನಿಕವಾಗಿ ಮತ್ತು ಆರ್ಥಿಕವಾಗಿ ಉಳಿಯ ಬೇಕಾದ ಕಾಡು ದಯವಿಟ್ಟು ಸಾರ್ ಇದನ್ನು ಬಸವಲಿಂಗಪ್ಪನವರು ಅಲ್ಲಿ ಕಾಣುವ ಕೊಳಚೆ ನಿವಾಸಿಗಳಿಗೆ ಭೂಮಿ ಕೊಡಲು ಬೇಕು ಅಂತಿದ್ದಾರೆ ಅದೇ ಸಮಯಕ್ಕೆ ಸೋಮಣ್ಣ ನವರು ಬೆಳೆಯುತ್ತಿರುವ ಸಿಟಿಗಾಗಿ ಬಿಡಿಎ ಗಾಗಿ ಕೇಳ್ತಿದಾರೆ ಎಂದೆಲ್ಲಾ ಒಂದೇ ಸಮನೆ ಅವರಿಗೆ ಕೋರುತ್ತಿದ್ದೇ. ತೀವ್ರವಾಗಿ ನನ್ನತ್ತನೇ ನೋಡುತ್ತಾ ಹೆಜ್ಜೆ ಇಡುತ್ತಿದ್ದರು.
ಕಾಡಿನತ್ತ ಕಣ್ಣು ಹಾಯಿಸಿದೆ.ಎದೆ ದಸಕ್ಕೆಂತು. ಕಾಡಿನ ಸುತ್ತಾ ಮಿರ ಮಿರ ಅನ್ನುವಂತೆ ಹೊಸಾ ತಂತಿ ಬೇಲಿ ಹಾಕಿದೆ!. ಆ ದಿನ ಕ್ರಮೇಣ ಗೊತ್ತಾದ್ದು ಅದನ್ನು ಅರಣ್ಯ ರಿಸರ್ಚ್ ವಿಂಗ್ ನವರು ಹಾಕಿದ್ದಾರೆ ಅಂತ.ನನಗೆ ಅಂದರೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗೆ ಮಾಹಿತಿ ಇರಲಿಲ್ಲ. ಇನ್ನೊಂದು ಮುಖ್ಯ ರಸ್ತೆ ಇದೆ ಆದರೆ ಕಾಡನ್ನು ಬಳಸಿ ಬರಬೇಕು.ಬರುವುದಾದರೆ ಹಿಂದಕ್ಕೆ ಮೇನ್ ರೋಡಿಗೆ ಹೋಗಿ ಸುತ್ತಾಕಿ ಬರಬೇಕು. ಕೊಳಚೆ ನಿವಾಸಿಗಳ ವಾಸಸ್ಥಳವನ್ನು ಮಾನ್ಯ ಮುಖ್ಯ ಮಂತ್ರಿಗಳಿಗೆ ತೋರಿಸಲೆಂದು ಈ ಕಾಲು ಹಾದಿ ಮೂಲಕ ಕರೆತಂದಿದ್ದುದು. ಇದೀಗ ಮುಖ್ಯ ಮಂತ್ರಿಗಳಿಗಿಂತ ನಮ್ಮ ಅಧಿಕಾರಿಗಳ ಪ್ರತಿಕ್ರಿಯೆ ಬಗ್ಗೆ ಭಯವಾಯಿತು. ಸಮಯಕ್ಕೊಂದು ಸುಳ್ಳು ಮತ್ತು ಭಂಡ ಧೈರ್ಯ ಚಲಾಯಿಸಿ ಹೇಳಿದೆ. ಸಾರ್ ಅಲ್ಲಿ ಹೊಸತಾಗಿ ಬೇಲಿ ಹಾಕಿಸಿದ್ದೇವೆ .ಈ ರೀತಿಯ ಬೇಡಿಕೆ ಬಂದು ನಮ್ಮ ಕಾಡು ಕೈತಪ್ಪಿ ಹೋಗಬಾರದೆಂದು ಮುಂಜಾಗ್ರತೆ ತೆಗೆದುಕೊಂಡಿದ್ದೇವೆ ಎಂದೆ. ಮಹದಾಶ್ಚರ್ಯವೆಂಬಂತೆ ಮಾನ್ಯ ಮುಖ್ಯ ಮಂತ್ರಿಗಳು ಸಂತೋಷದಿಂದಲೇ ನನ್ನ ವಾದ ಮಂಡನೆಯನ್ನು ಮುಗುಳ್ನಗೆ ಬೀರಿ ಸ್ವಾಗತಿಸದಂತೆ ಅವರ ಕೈಯಲ್ಲಿ ನನ್ನ ಭುಜವನ್ನು ಒತ್ತಿದರು.
ಅಷ್ಟರಲ್ಲಿ ಅತ್ತ ಕಾಡಿನ ಕಡೆಯಿಂದ ಇಲಾಖಾ ವಾಚ್ಮನ್ ಓಡೋಡಿ ಬಂದ.ಆತುರವಾಗಿ ಅವನಿಗೆ ಹೇಳಿದೆ ಬೇಗ ಮುಳ್ಳು ತಂತಿಯನ್ನು ಕತ್ತರಿಸು ಬೇಗ ಬೇಗ ಅಂದೆ. ಅವನು ಅವನ ಹತ್ತಿರ ಇದ್ದ ಮೊಂಡುಗತ್ತಿಯಲ್ಲಿ ವ್ಯರ್ಥ ಪ್ರಯತ್ನ ಮಾಡುತ್ತಿದ್ದ. ಆಗ ಸ್ವತಃ ಮಾನ್ಯ ಮುಖ್ಯ ಮಂತ್ರಿಗಳೇ ಹೇಳಿದರು “ಬೇಡ ಬಿಡು ನೀವೇನೋ ಬೇಲಿ ಹಾಕ್ಕೊಂಡು ಕಾಡಿನಲ್ಲಿ ಏನೋ ಮಾಡ್ತಿದೀರಿ ,ಬೇಲಿ ಕತ್ತರಿಸಬೇಡಿ ಅಂದರು” ನಾನು ಮತ್ತೆ ಎಂದು ತಲೆ ಕೆರೆದೆ. ಮುಳ್ಳು ತಂತಿಗಳನ್ನು ಒಂದನೊಂದನ್ನು ಹಿಗ್ಗಿಸಲು ಪ್ರಯತ್ನಿಸಿದೆ. ನನ್ನ ಆತುರ ಭಯ ಮತ್ತು ಆತಂಕವನ್ನು ತೋರಿದೆ. ಆಗ ಸ್ವತಃ ಮುಖ್ಯ ಮಂತ್ರಿಗಳು ನನ್ನ ಭುಜದ ಮೇಲೆ ಕೈ ಇಟ್ಟು “ನೀನೂ ಕಟ್ಟು ಮಸ್ತಾಗಿದ್ದಿಯಾ ಬಾ ಅಂತ ನನ್ನನ್ನು ತಂತಿಯ ಒಂದು ಕಂಬದ ಬಳಿಗೆ ಕರೆದೋದರು.ನನ್ನನ್ನು ಹನುಮಂತನಂತೆ ಮಂಡಿಯೂರಿ ಕುಳಿತುಕೊಳ್ಳಲು ಹೇಳಿದರು.ನಾನು ಅವ್ರು ಹೇಳಿದ ರೀತಿ ಕುಳಿತೆ. ನನ್ನ ತೊಡೆಯ ಮೇಲೆ ತೊಟ್ಟಿದ್ದ ಷೂ ಸಹಿತ ಒಂದು ಕಾಲನ್ನು ಇಟ್ಟು ಮತ್ತೊಂದು ಕಾಲನ್ನು ಮುಳ್ಳು ತಂತಿಯ ಮೇಲೆ ಇಟ್ಟು ಮುಳ್ಳು ಕಂಬದ ಕಲ್ಲಿನ ಮೇಲೆ ಅವರ ಹೊಟ್ಟೆಯನ್ನು ಹೊತ್ತಿ ಕೊಂಡು ಆ ಬದಿಗೆ ದಾಟಿದರು. ಆಗ ಮಿರ ಮಿರ ಮಿಂಚುತ್ತಿದ್ದ ಅವರ ಬ್ರೌನ್ ಷೂ ತರಚಿತು. ಈ ವೇಳೆಗೆ ಸ್ವಲ್ಪ ದೂರದಲ್ಲೇ ಇದ್ದ ಗುಂಪುಗಳು ಹತ್ತಿರಕ್ಕೆ ಬಂದವು. ಮುಖ್ಯ ಮಂತ್ರಿಗಳು ಆ ಬದಿ ಇದ್ದಾರೆ ! ನಾನೂ ಸಹ ಆ ಕಡೆಗೆ ತಂತಿ ನೆಗೆದೆ.ಆಗ ತಂತಿಯ ಬಳಿಯೇ ಇದ್ದ ಸೋಮಣ್ಣ ಅವರು ಹುಉಂ ಬೇಲಿ ನೆಗೆಯುದು ನಿನಗೆ ಹೇಳಿಕೊಡಬೇಕೆ?ಅಂತ ಅರಸು ಅವರನ್ನು ಚುಡಾಯಿಸಿದರು .ಮುಖ್ಯ ಮಂತ್ರಿಗಳು ಮುಗುಳ್ನಗೆ ಸೂಸುತ್ತಾ ಮಾತನ್ನು ಸ್ವೀಕರಿಸಿದರು. ಮತ್ತೆ ನನ್ನ ಭುಜದ ಮೇಲೆ ಮಾನ್ಯ ಮುಖ್ಯ ಮಂತ್ರಿಗಳು
ಕೈ ಇಟ್ಟು ಹೆಜ್ಜೆ ಇಟ್ಟರು.ನಾನೂ ಮುಖ್ಯ ಮ೦ತ್ರಿಗಳು ಕಾಡಿನಲ್ಲಿ ಜೊತೆಯಾಗಿ ಹೆಜ್ಜೆ ಇಡುತ್ತಾ ವಿಹಾರಕ್ಕೆ ಬಂದವರಂತೆ ನಡೆದಾಡಿದೆವು. ನಾನು ಮಾತ್ರ ಅರಣ್ಯ ಉಳಿಸಬೇಕೆಂಬ ನನ್ನ ಕಳಕಳಿಯ ಬೇಡಿಕೆಯನ್ನು ಹೇಳುತ್ತಲೇ ಹೊದೆ. ಕಿಂಚಿತ್ತೂ ಬೇಸರ ಕೋಪ ಏನನ್ನೂ ತೋರದ ಆ ಧೀಮಂತ ನಾಯಕ ಘನ ಗಾ೦ಭೀರ್ಯ ತೋರಿದ್ದು ನನ್ನ ಮನದಲ್ಲಿ ಹಚ್ಚ ಹಸಿರಾಗಿದೆ.ಅಷ್ಟೊತ್ತಿಗೆ ಉಳಿದ ಗುಂಪಿನ ಸದಸ್ಯರು ಮುಳ್ಳು ತಂತಿಯನ್ನು ಹಿಗ್ಗಿಸಿ ಒಳಕ್ಕೆ ನುಸಿಳಿದರು .ಅಷ್ಟೊತ್ತಿಗಾಗಲೇ ಮಾನ್ಯ ಮುಖ್ಯ ಮಂತ್ರಿಗಳು ವಾಪಸ್ ಹೋಗುವ ಸೂಚನೆ ನೀಡಿದರೂ ನಾನೂ ಮತ್ತು ಅವರು ಏನೇನು ಮಾತಾಡಿದೆವು ಅನ್ನೋದನ್ನ ಕೇಳುವ ವ್ಯವದಾನ ಆಸಕ್ತಿ ಯಾರಿಗೂ ಉಳಿದಿರಲಿಲ್ಲ. ಈ ಸಾರಿ ಮುಖ್ಯ ಮಂತ್ರಿಗಳು ಎಲ್ಲರಂತೆ ತಂತಿಯ ನಡುವೆ ನುಸಿಳಿ ಹೊರ ಬಂದರು.ಈ ಬದಿಗೆ ಬಂದ ಮೇಲೆ ಸೋಮಣ್ಣ ಮತ್ತು ಬಸವಲಿಂಗಪ್ಪ ನಾನು ಗೆಲ್ಲುತ್ತೇನೆ ಅರಣ್ಯ ನನ್ನ ಕಡೆಗೆ ಆರ್ಡರ್ ಆಗೇ ಆಗುತ್ತೆ ಅಂತ ಒಬ್ಬರಿಗೊಬ್ಬರು ರಾಜಕೀಯದ ವರಸೆಗಳನ್ನು ಮಾತಾಡಿಕೊಂಡರು.ಎಲ್ಲರೂ ವಿರಮಿಸಿದರು. ನನ್ನ ಬಾಸ್ ಮಾತ್ರ ನನ್ನನ್ನು ಅರಣ್ಯ ಮಂತ್ರಿಗಳನ್ನು ಬೆಂಗಳೂರು ಪ್ಯಾಲೇಸ್ನಲ್ಲಿ ಕಡತಗಳ ಸಹಿತ ಭೇಟಿ ಮಾಡಬೇಕೆಂದು ಸೂಚನೆ ನೀಡಿದರು.ನಾನು ಅವರ ಸೂಚನೆಯಂತೆ ಪ್ಯಾಲೇಸ್ ಗೆ ಹೋಗಿ ಮಾನ್ಯ ಅರಣ್ಯ ಸಚಿವರಾಗಿದ್ದ ಎಂ ಸಿ ನಾಣಯ್ಯ ಅವರನ್ನು ಕಂಡು ಸಮಗ್ರವಾಗಿ ಕಡತ ಸಮೇತ ತೋರಿಸಿ ವಿವರಿಸಿದೆ. ನಾನಾದರೋ ಇಂತಹ ಘಟಾನುಘಟಿಗಳ ನಡುವೆ ನನ್ನಂತಹ ಸಾಧಾರಣ ಅಧಿಕಾರಿಯ ಮಂಡನೆ ಏನೂ ಮಾಡಲಾಗದು ಅಂದುಕೊಂಡು ಹಿಂತಿರುಗಿ ಬಂದು ನನ್ನ ಬಾಸ್ ಗೆ ವಿಚಾರ ಮಂಡಿಸಿದೆ. ಮಾರನೆಯ ದಿನ ಮಾಹಿತಿ ಬಂತು ದೊರೆಸಾನಿಪಾಳ್ಯ ಅರಣ್ಯ ಇಲಾಖೆಯಲ್ಲೇ ಉಳಿಯುವಂತೆ ಮಾನ್ಯ ಡಿ.ದೇವರಾಜ್ ಅರಸ್ ಅಂದಿನ ಮುಖ್ಯ ಮಂತ್ರಿಗಳು ಆದೇಶ ಮಾಡಿದರೆಂದು.
ಈಗ ನಮ್ಮ ಪಾಲಿಗೆ ಉಳಿದಿರುವ ದೊರೆಸಾನಿ ಪಾಳ್ಯ ಅರಣ್ಯ ಯಾವ ಶಕ್ತಿಯ ಆಶೀರ್ವಾದದಿಂದ ಉಳಿಯಿತು ?
೧) ಮಾನ್ಯ ಮುಖ್ಯ ಮಂತ್ರಿಗಳ ಕೃಪೆಯಿಂದ
೨) ಮಾನ್ಯ ಅರಣ್ಯ ಮಂತ್ರಿಗಲಾದ ಎಂ ಸಿ ನಾಣಯ್ಯ ಅವರ ಅವಲೋಕನದಿಂದ.
೩) ನನ್ನ ವ್ಯಕ್ತಿಶಃ ವಾದ ಮಂಡನೆಯ ಬೇಡಿಕೆಯಿಂದ.
೪) ಅಥವಾ ನನಗೆ ಗೊತ್ತಾಗದೆ ಹೋಗಿರಬಹುದಾದ ಕಾರಣದಿಂದ.
ಸನ್ಮಾನ್ಯ ಮಾನ್ಯ ಡಿ.ದೇವರಾಜ್ ಅರಸ್ ಅಂದಿನ ಮುಖ್ಯ ಮಂತ್ರಿಗಳು ಅವರ ಆ ದಿನದ ಸರಳತೆ,ಅರಣ್ಯಗಳ ಬಗ್ಗೆ ಅವರು ತೋರಿದ ವಾತ್ಸಲ್ಯ ಹಾಗು ಅಂತಿಮವಾಗಿ ಪ್ರಬಲ ನಾಯಕರ ಒತ್ತಡಗಳನ್ನು ದಾಟಿ ದೊರೆಸಾನಿಪಾಳ್ಯ ಅರಣ್ಯ ಉಳಿಸಿದ್ದು ಒಂದು ಮಹತ್ಕಾರ್ಯ. ಮುಖ್ಯವಾದ ಅ೦ಶ ಅಂದರೆ ಕೊಳಚೆ ನಿವಾಸಿಗಳ ಏಳಿಗೆಗಾಗಿ ತಮ್ಮ ಜೀವನವನ್ನೇ ಸವೆಸಿದ ಅರಸು ಅವರು ದೊರೆಸಾನಿಪಾಳ್ಯದ ಕೊಳಚೆ ನಿವಾಸಿಗಳನ್ನು ಕಣ್ಣೆದುರೇ ನೋಡಿಯೂ ನಾಡಿನ ಅರಣ್ಯ ಉಳಿಯಬೇಕು ಅನ್ನುವತ್ತ ಒಲವು ತೋರಿದ್ದು ನನಗಂತೂ ಮಹದಾಶ್ಚರ್ಯ.
ಆ ದಿನ, ಮಾನ್ಯ ಡಿ.ದೇವರಾಜ್ ಅರಸ್ ಅಂದಿನ ಮುಖ್ಯ ಮಂತ್ರಿಗಳ ಜೊತೆ ಕಳೆದ ಕೆಲ ಘಳಿಗೆಗಳು ಮತ್ತು ಅವರೊಡನೆ ನಡೆದ ಮಹತ್ವದ ಘಟನಾವಳಿಗಳು ನನ್ನ ಮನಸ್ಸಿನಲ್ಲಿ ಸದಾ ರಿಂಗಣಿಸುತ್ತಿದೆ. ಕರ್ನಾಟಕದ ಚರಿತ್ರೆಯಲ್ಲಿ ಧೀಮಂತ ಎನ್ನಿಸಿರುವ ಮಹಾನ್ ವ್ಯಕ್ತಿಯ ಸಂಪರ್ಕವಾದುದಕ್ಕೆ ನಾಡಿಗಾಗಿ ಕಾಡನ್ನು ಉಳಿಸಲು ಅಳಿಲು ಸೇವೆ ಮಾಡಿದುದಕ್ಕೆ ಧನ್ಯತಾ ಭಾವ ತುಂಬಿದೆ.
ನಿಜಕ್ಕೂ ಆ ದೊರೆಸಾನಿಪಾಳ್ಯಕ್ಕೆ ದಿವಂಗತ ಡಿ.ದೇವರಾಜ್ ಅರಸು ಅರಣ್ಯ ಎಂದು ಪುನರ್ ನಾಮಕರಣ ಮಾಡಬೇಕು ಅನ್ನಿಸುತ್ತೆ. ಆದರೆ ಚರಿತ್ರೆಯ ಅಂಗವಾದ ದೊರೆಸಾನಿಪಾಳ್ಯ ಹೆಸರನ್ನು ಬದಲಾಯಿಸುವುದು ಸ್ವತಃ ಅರಸು ಅವರ ಆತ್ಮಕ್ಕೆ ಒಪ್ಪದ ವಿಚಾರ ಎಂಬುದಾಗಿ ಅವರ ವಿಚಾರಧಾರೆಗಳನ್ನು ತುಸು ಓದಿರುವ ನಾನು ನಂಬುತ್ತೇನೆ.
Comments
ಉ: ದೊರೆಸಾನಿಪಾಳ್ಯದಲ್ಲಿ ಬೇಲಿ ನೆಗೆದು ಅರಣ್ಯ ಕಾಪಾಡಿದ ...
In reply to ಉ: ದೊರೆಸಾನಿಪಾಳ್ಯದಲ್ಲಿ ಬೇಲಿ ನೆಗೆದು ಅರಣ್ಯ ಕಾಪಾಡಿದ ... by makara
ಉ: ದೊರೆಸಾನಿಪಾಳ್ಯದಲ್ಲಿ ಬೇಲಿ ನೆಗೆದು ಅರಣ್ಯ ಕಾಪಾಡಿದ ...
ಉ: ದೊರೆಸಾನಿಪಾಳ್ಯದಲ್ಲಿ ಬೇಲಿ ನೆಗೆದು ಅರಣ್ಯ ಕಾಪಾಡಿದ ...
In reply to ಉ: ದೊರೆಸಾನಿಪಾಳ್ಯದಲ್ಲಿ ಬೇಲಿ ನೆಗೆದು ಅರಣ್ಯ ಕಾಪಾಡಿದ ... by manju787
ಉ: ದೊರೆಸಾನಿಪಾಳ್ಯದಲ್ಲಿ ಬೇಲಿ ನೆಗೆದು ಅರಣ್ಯ ಕಾಪಾಡಿದ ...
ಉ: ದೊರೆಸಾನಿಪಾಳ್ಯದಲ್ಲಿ ಬೇಲಿ ನೆಗೆದು ಅರಣ್ಯ ಕಾಪಾಡಿದ ...
In reply to ಉ: ದೊರೆಸಾನಿಪಾಳ್ಯದಲ್ಲಿ ಬೇಲಿ ನೆಗೆದು ಅರಣ್ಯ ಕಾಪಾಡಿದ ... by sasi.hebbar
ಉ: ದೊರೆಸಾನಿಪಾಳ್ಯದಲ್ಲಿ ಬೇಲಿ ನೆಗೆದು ಅರಣ್ಯ ಕಾಪಾಡಿದ ...