ಸಿನಿಮಾ ಕಥೆಗಾರ

ಸಿನಿಮಾ ಕಥೆಗಾರ

-‘ಅಲ್ರಿ ಇದ್ಯಾಕ್ರಿ ಇಷ್ಟು ನಿಧಾನಕ್ಕೆ ಗಾಡಿ ಓಡಿಸ್ತಿದ್ದೀರ, ಒಳ್ಳೆ ಜಟಕ ಗಾಡಿ ಹೋಗೋಹಾಗೆ‘

-‘ಅಯ್ಯೊ ಸ್ವಲ್ಪ ಸುಮ್ನೆ ಕೂತ್ಕೊಳೆ ನನ್ನ ಟೆನ್ಷನ್ ನನಗೆ, ಮಳೆ ಬರ್ತಿದೆ,ಕನ್ನಡಕ
ಬೇರೆ ಮರೆತು ಬಂದಿದ್ದೀನಿ, ಏನೋ ಒಂದು ಅಂದಾಜಿಗೆ ಕಾರು ಓಡಿಸ್ತಿದ್ದೀನಿ, ನೀನ್ ಬೇರೆ ತಲೆ ತಿನ್ಬೇಡ‘

-‘ಯಾಕೆ ಕಣ್ಣು ಅಷ್ಟೊಂದು ಕುರ್ಡೆ, ಹಾಗಾದ್ರೆ ನಿದಾನಕ್ಕೆ ಹೋಗಿ.‘ - ಭಯಕ್ಕೊ ಇಲ್ಲ ಕಾಳಜಿಗೊ ಕಾಣೆ ಅಮ್ಮಾವ್ರ ವರಸೆ ಚೇಂಜ್.

-‘ಅಲ್ವೆ ಮುಂದೆ ವೈಪರ್ ಆಡ್ತಾಇದ್ಯಾ‘-

-‘ಅಯ್ಯೊ ನಿಮ್ಮ ವೈಫ಼ು ಇಲ್ಲಿ ಒಳ್ಗಡೆ ಕೂತ್ಕೊಳ್ಳೋದು ಬಿಟ್ಟು, ಮಳೆ ಬಂದ್ರೆ ಕಾರ್ ಮುಂದೆ ಹೋಗಿ ಆಡ್ಲಾ‘-

-‘ಸರ್ಹೋಯ್ತು ವೈಪರ್ ಅಂದ್ರೆ ನೀನಲ್ಲ, ಮಳೆ ಬಂದಾಗ ಮುಂದ್ಗಡೆ ಗ್ಲಾಸ್ ವರ್ಸೊ ಕಡ್ಡಿ, ಅದು ಆಡ್ತಿದ್ಯಾ? ನೋಡು ಅಂದೆ‘. -

-‘ಗ್ಲಾಸ್ ಮೇಲೆ ಕಡ್ಡಿ ಆಡ್ತಿಲ್ಲ ಮಧ್ಯಕ್ಕೆ ಬಂದು ಹಾಗೆ ನಿಂತಿದೆ‘ -

-‘ಒ.... ಸ್ಟ್ರಕ್ ಆಗಿದೆ ಅಂತ ಕಾಣುತ್ತೆ, ಅದಕ್ಕೆ ಏನೊ ಒಂಥರ ಸುಟ್ಟ ವಾಸ್ನೆ, ನಂಗೂ ಸ್ವಲ್ಪ ಮಂಜ್ ಮಂಜು, ತಡಿ ಅದನ್ನ ಆಫ಼್ ಮಾಡ್ಬಿತೀನಿ‘-

ಅಷ್ಟರಲ್ಲಿ ದಡ್ ಅಂತ ಸದ್ದಾಯ್ತು, -‘ಥೂ ತೇರಿಕೆ ಯಾವೋನೋ ಹೊಡ್ದ ಅಂತ ಕಾಣುತ್ತೆ ಇನ್ನು ಈ ಮಳೆ ಒಳ್ಗೆ ಏನು ರಾಮಾಯ್ಣನೊ‘ - ತುರ್ತು ಬ್ರೇಕ್ ಒತ್ತಿ ನಿಲ್ಲಿಸಿ ಡ್ರೈವರ್ ಸೀಟ್ನಿಂದ ಕೆಳಗಿಳಿದೆ.

ನೋಡಿದ್ರೆ ಯಾರೂ ನನ್ನ ಕಾರಿಗೆ ಗುದ್ದಿಲ್ಲ ನಾನೆ ನನ್ನ ಕಾರಿಂದ, ಮುಂದೆ, ಪಕ್ಕಕೆ ನಿಲ್ಲಿಸಿರುವ ಕಾರಿಗೆ ಗುದ್ದಿದ್ದೇನೆ. ಅದರೊಳಗಿಂದ ಇಳಿದು ಬಂದವ ಆಗ್ಲೆ ಎಲ್ಲಿಗೆ ಏಟು ಬಿದ್ದಿದೆ, ಯಾವ ಮಟ್ಟದ ಡ್ಯಾಮೇಜ್ ಅಂತ ಅಳೆಯುತ್ತಿದ್ದಾನೆ. ಅಷ್ಟರಲ್ಲಿ ಇನ್ನೊಂದಿಬ್ಬರು ಕೆಳಗಿಳಿದು ಬಂದರು,

-‘ಏನ್ಲಾ ಮಚ್ಚ ಏನಾಯ್ತು, ಯಾವೋನು ಅವ್ನು ಡ್ಯಾಸ್ ಇಕ್ಕಿದ್ದು‘-

-‘ಏ ಹಿಂದ್ಗಡೆ ಬಾಡಿ ಒಳ್ಗೋಗಯ್ತಣ್ಣೊ, ಸಕ್ಕತ್ತಾಗೆ ಇಕ್ಕವ್ನೆ ಮಗ‘-

ಸರಿ ಈಗ ಅವರು ನನ ಕಡೆ ತಿರ್ಗಿದ್ರು, ನಾನು ಮನಸ್ಸಿನಲ್ಲಿ ಅಷ್ಟೆ ಇವತ್ತು ನನ್ನ ಕಥೆ ಮುಗೀತು ಇವ್ರೆಲ್ಲ ಸೇರ್ಕೊಂಡ್ರೆ ನನ್ನ ಚಟ್ನಿ ಮಾಡ್ಬಿತಾರೆ ಅನ್ಕೊಂಡೆ. ಹತ್ತಿರ ಬಂದವರಲ್ಲಿ ದೊಡ್ಡ ಮೀಸೆಯವನೊಬ್ಬ,
 -‘ಯಾಕ್ಲಾ ಮಗ ಕಾಣಾಕಿಲ್ವ ನಿಂತಿರೊ ಕಾರ್ಗೆ ಬಂದು ಗುದ್ತಿಯ‘ -
-‘ ಹೆಹೆ... ಹೆ.. ಹಾಗಲ್ಲಪ್ಪ ಮಳೆ ಬರ್ತಿತ್ತಲ್ಲ‘-
 - ‘ಒ.. ಅಂಗಾರೆ ಮಳೆ ಬಂದ್ರೆ ಮುಂದಿರೊ ಗಾಡಿ ಮೇಲೆ ಅತ್ತೊ ಸೊಕಿನಾ ನಿನ್ಕಾರ್ಗೆ.‘-
-‘ಏನಪ್ಪ ಹಾಗೆಲ್ಲ ಅಸಹ್ಯವಾಗಿ ಮಾತಾಡ್ಬೇಡ, ಏನೋ ಸ್ವಲ್ಪ ಹೆಚ್ಚು ಕಡ್ಮೆ ಆಯ್ತು ಬೇಕಂತ್ಲೆ ಮಾಡಿದ್ದಲ್ಲ‘-
- ‘ಒ... ನೋಡ್ದೇನ್ಲಾ ಮಚ್ಚಾ, ಈ ವಯ್ಯಂದು ಹೆಚ್ಚು ಕಡ್ಮೆ ಆಯ್ತಂತೆ ಅದ್ಕೆ ಈ ಪಾಟಿ ನೆಗ್ಗಯ್ತೆ, ಇನ್ನು ಸರ್ಯಾಗಿ ಇಕ್ಕಿದ್ರೆ ಹೆಂಗೊ‘-

-‘ಏನೊ ಗೊತ್ತಿಲ್ದೆ ಆಗೋಯ್ತಪ್ಪ, ಮುಬ್ಗತ್ಲು, ಮಳೆ ಬೇರೆ ಬರ್ತಿದ್ಯಲ್ಲ, ಸ್ವಲ್ಪ ತಪ್ಪಾಯ್ತು, ಅದೇನಾಗುತ್ತೊ ರಿಪೇರಿ ಮಾಡ್ಸೋಣಂತೆ‘ - ಅಂದೆ

-‘ಒ.. ವರ್ಕ್ಸಾಪ್ ಬೇರೆ ಮಡ್ಗಿದಿರೊ ಪರ್ವಾಗಿಲ್ಲ ಮಗ, ಕುಳ ಜೋರಾಗೆ ಇದೆ, ಏಷ್ಟ್ ತೆಗಿತಿಯ ಸಿಪ್ಪೆ‘-

ಅಷ್ಟರಲ್ಲಿ ಅಲ್ಲೆ ನಡೆದು ಹೋಗುತ್ತಿದ್ದವರು ಹತ್ತಿರ ಬಂದು, ಸ್ವಲ್ಪ ಜನ ಸೇರಿದ್ರು. ಅದರಲ್ಲಿ ಒಬ್ಬ -‘ಹೋಗ್ಲಿ ಬಿಡಿ ಸಾರ್ ಏನೊ ಆಗೋಯ್ತು ಸದ್ಯ ಏನಾ ಅಪಾಯ ಆಗಿಲ್ವಲ್ಲ - ಅಂದೋನೆ - ಸಾರ್ ನೀವು, ನೀವು....  ಅದೆ ಸಂಪದದಲ್ಲಿ ಕತೆ ಬರ್ದೋರು ಅಲ್ವಾ‘ ಅಂದ ನನ್ನನ್ನು ನೋಡಿ.

ನಂಗೆ ಈಗ ಸ್ವಲ್ಪ ದೈರ್ಯ ಬಂತು, ಯಾರೊ ಒಬ್ರು ನನ್ನ ಸಹಾಯಕ್ಕೆ ಇದ್ದಾರೆ, ಜೊತೆಗೆ ನನ್ನನ್ನು ಕಥೆಗಾರ ಅನ್ನೊ ಪಟ್ಟ ಕೊಟ್ಟು ಅಭಿಮಾನ ಇಟ್ಕೊಂಡಿದ್ದಾರೆ ಅನ್ನೊ ಬಿರುಸಿನಲ್ಲಿದ್ದೆ ಅಷ್ಟರಲ್ಲಿ ಆ ಕಾರಿನವ

-‘ಒ... ತಾವು ಕಥೆ ಬರ್ಯೊರಾ,‘ - ಅಂದವನೆ ಅವನ ಸಂಗಡಿಗರನ್ನ ಹತ್ತಿರ ಕರೆದು ಏನೊ ಮೀಟಿಂಗ್ ಮಾಡ್ಕೊಂಡು, ಮತ್ತೆ ನನ್ನತ್ತ ತಿರುಗಿ - ‘ಏನೊ ಗೊತ್ತಿಲ್ದೆ ತಮ್ತಾವ ಒಲ್ಟಾಗಿ ಮಾತಾಡ್ಬಿಟ್ವಿ ಬೇಜಾರ್ ಮಾಡ್ಕೊ ಬೇಡಿ ಸಾ, ತಾವು ವಸಿ ನಂಜೊತೆ ಬರ್ಬೇಕಲ್ಲ‘ ಅಂದ.

ನನ್ನ ಮನಸ್ಸಿನಲ್ಲಿ ಸ್ವಲ್ಪ ಹೊತ್ತಿಗೆ ಮುಂಚೆ ಕಥೆಗಾರ ಅನ್ನುವ ಅಹಂ ಮೂಡಿಸಿದ ಅಭಿಮಾನಿಯ ಮಾತುಗಳು ಈಗ, ಇವ್ರು ಏನೊ ಸ್ಕೆಚ್ ಹಾಕ್ತಿದಾರೆ ಬಹುಷಃ  ನನ್ನನ್ನ ದೊಡ್ಡ ಕಥೆಗಾರ ಅಂನ್ಕೊಂಡು ಕಿಡ್ನ್ಯಾಪ್ ಮಾಡೊ ಪ್ಲಾನ ಏನಾದ್ರೂ ಮಾಡ್ತಿದ್ದಾರಾ ಅನ್ನೊ ಭಯ ಹುಟ್ಟು ಹಾಕಿತು.

-‘ಅಯ್ಯೊ ಅವ್ರೇನೊ ಸುಮ್ಮನೆ ತಮಾಷೆಗೆ ಹೇಳ್ತಿದ್ದಾರಪ್ಪ ನಾನೇನು ಕಥೆಗಾರ ಅಲ್ಲ, ಇಷ್ಟಕ್ಕೂ ಅದೆಲ್ಲ ಯಾಕೆ, ನಿಂಗೇನೀಗ ನಿಮ್ಮ ಕಾರು ರೆಡಿ ಮಾಡ್ಸಿ ಕೊಟ್ರೆ ಆಯ್ತಲ್ವಾ?‘-

ನನ್ನ ಅಭಿಮಾನಿ ಸುಮ್ಮನಾಗಲಿಲ್ಲ - ‘ಏ ನೀವೇನ್ಸಾರ್ ಇರೋದುನ್ನ ಹೇಳ್ಕೋಳಕ್ಕೆ ನಾಚ್ಕೆ ಯಾಕೆ?, ನಾನೆ ಸಂಪದದಲ್ಲಿ ನೋಡಿದ್ದೀನಿ, ಎಷ್ಟೊಂದು ಜನ ಕಥೆ ಚೆನ್ನಾಗಿದೆ ಅಂತ ಬರ್ದಿದ್ದಾರೆ, ದೊಡ್ಡ ಕಥೆಗಾರರೆಲ್ಲ ಹಾಗೆ ತೋರ್ಸಿಕೊಳ್ಳೋಕ್ಕೆ ಇಷ್ಟ ಪಡೊಲ್ಲ‘- ಅಂದ್ಬಿಟ್ಟ.

ಅದೇನೊ ಹೇಳ್ತಾರಲ್ಲ ‘ಬೆಣೆ ಕೀಳೋಕ್ಕೆ ಹೋಗಿ ಬೆರ್ಳು ಸಿಕ್ಕಿ ಹಾಕೊಳ್ತು‘ ಅಂದಹಾಗಾಯ್ತು ನನ್ನ ಪರಿಸ್ಥಿತಿ. ಎಲ್ಲೊ ಒಂದೆರಡು ಸಣ್ಣಪುಟ್ಟ ಕವಿತೆ ಬರೆದು ಒಂದೆ ಒಂದು ಕಥೆ ಬರೆದಿದ್ದು, ಇವತ್ತು ಈ ಪರಿಸ್ಥಿತಿ ತಂತಲ್ಲಪ್ಪ ಅನ್ಕೊಂಡೆ. ಎಲ್ಲೊ ಸ್ವಲ್ಪ ಎಡವಟ್ಟಾಗಿ ಮುಂದೆ ನಿಂತಿದ್ದ ಕಾರಿಗೆ ತಗಲಿಸಿಬಿಟ್ಟೆ, ಸದ್ಯ ಯಾರೊ ಒಬ್ಬರು ಸಪೋರ್ಟಿಗಿದ್ದಾರೆ ಅನ್ಕೊಂಡ್ರೆ ಅವರ ಸಪೋರ್ಟೂ ಕೂಡ ತೊಂದ್ರೆ ತರೊ ಹಾಗೆ ಕಾಣಿಸ್ತಿದೆ ಅಂತ ಎಣಿಸುತ್ತಿದ್ದೆ.

‘ಸಾ ನೋಡಿ ನಾವು ಏಳ್ದಂಗೆ ಕೇಳಿದ್ರೆ ಸರಿ ಇಲ್ಲಾಂದ್ರೆ ಎತ್ತಾಕಂಡೊಯ್ತಿವಿ ಅಸ್ಟೆ‘ ಅಂದ ದಪ್ಪ ಮೀಸೆಯವ.

‘ಅಲ್ರಪ್ಪ ನಾನು ಹೇಳೊದು ಸ್ವಲ್ಪ ಕೇಳಿ ನಿಮ್ಮ ಕಾರು ನಾನು ರಿಪೇರಿ ಮಾಡ್ಸಿ ಕೊಡ್ತೀನಿ, ನಿಮ್ಮ ಜೊತೆ ಬರೊ ಅವಶ್ಯಕತೆ ಏನಿದೆ?....‘

‘ಲೆ ಮಚ್ಚ ಈ ವಯ್ಯ ಬಿಟ್ರೆ ಮಾತಾಡ್ತಾನೇ ಇರ್ತಾನೆ ಬರ್ಯೊರೆಲ್ಲ ಇಂಗೇನೆ ಬಾಸ್ಣ ಮಾಡ್ತಾನೆ ಇರ್ತಾರೆ ಎತ್ತಾಕಳ್ಳಾ ಮಚ್ಚ‘ ಅಂದೋನೆ, ಅವರೆಲ್ಲ ಸೇರಿ ನನ್ನನ್ನು ಅವರ ಕಾರಿನಲ್ಲಿ ಬಲವಂತವಾಗಿ ನೂಕಿ ಕೊಂಡು ಹೊರಟೆ ಬಿಟ್ರು, ಅಲ್ಲಿದ್ದೋರೆಲ್ಲ ಏನಾಯ್ತು ಅಂತ ಅರ್ಥ ಮಾಡಿಕೊಳ್ಳೊ ಅಷ್ಟರಲ್ಲಿ ನನ್ನನ್ನು ಕದ್ದ ಕಾರು ಆ ಜಾಗದಿಂದ ಹೊರಟಿದ್ದಾಗಿತ್ತು. ನನ್ನ ಹೆಂಡತಿ ಏನಾದಳೊ, ಅಲ್ಲೆ ಕಾರಿನಲ್ಲಿ ಕೂತಿದ್ದಳು ಅನ್ನೊ ಆತಂಕ ಬೇರೆ. ಇವ್ರು ನನ್ನ ಯಾಕೆ ಕಿಡ್ನಾಪ್ ಮಾಡ್ತಿದ್ದಾರೆ, ಬಹುಷಃ ದೊಡ್ಡ ಕಥೆಗಾರ ಅನ್ಕೊಂಡು, ಸರ್ಕಾರದ ಮುಂದೆ ದೊಡ್ಡ ಮೊತ್ತದ ಹಣ ಕೇಳ್ಬೇಕು ಅನ್ಕೊಂಡಿದ್ದಾರೊ ಏನೊ ಅಂತ ಒಮ್ಮೆ ಒಳಗೊಳಗೆ ನಗೂನೂ ಬಂತು. ನಾನವರಿಗೆ ‘ನೋಡ್ರಪ್ಪ ನೀವೆಲ್ಲ ತಪ್ಪು ತಿಳ್ಕೊಂಡಿದ್ದೀರ ನನ್ನಿಂದ ನಿಮಗೆ ಏನೇನೂ ಉಪಯೋಗ ಇಲ್ಲ, ಅನಾವಶ್ಯಕವಾಗಿ ಗುಡ್ಡ ಗುದ್ದಿ ಮೈ ನೋವು ಮಾಡ್ಕೊತಾ ಇದ್ದೀರಿ‘ ಅಂತ ಅವರಿಗೆ ತಿಳಿಸಿ ಹೇಳೋಕ್ಕೆ ಹೋದೆ, ನನ್ನ ಅಕ್ಕ ಪಕ್ಕ ಇದ್ದವರು ಒಬ್ಬರನ್ನೊಬ್ಬರು ನೋಡಿಕೊಂಡು ಕಣ್ಣಲ್ಲೆ ಮಾತನಾಡಿ, ತಕ್ಷಣವೆ ಒಬ್ಬ ನನ್ನ ಬಾಯಿಗೆ ಬಟ್ಟೆ ಕಟ್ಟಿಬಿಟ್ಟ. ‘ಸುಮ್ಕೆ ಕೂತ್ಕಳಿ ಇಲ್ಲಾಂದ್ರೆ ಕಣ್ಣು ಕೈ ಕಾಲು ಎಲ್ಲ ಕಟ್ಬಿಡ್ತೀವಿ‘ ಅಂದ. ನಾನು ಅವನನ್ನು ನೋಡಿ ಹಾಗೆ ಆಯ್ತು ಸುಮ್ಮನೆ ಇರುತ್ತೇನೆ ಅಂತ ಕತ್ತು ಅಲ್ಲಾಡಿಸಿದೆ. ಅವನು ‘ಏನ್ ತಲೆ ತಿಂತಾವ್ನೆ ಮಗ, ಇನ್ನು ಇವ್ನ ಜೊತೆ ಅದೆಂಗೆ ಏಗ್ತನೊ ಇನ್ಮುಂದೆ ನಮ್ಮಣ್ಣ‘ ಅಂದ.

ನನಗೆ ಕುತೂಹಲ, ಇವ್ರು ನನ್ನ ಯಾಕೆ ಕರ್ಕೊಂಡು ಹೋಗ್ತಿದ್ದಾರೆ? ಎಲ್ಲಿಗೆ ಹೋಗ್ತಿದ್ದಾರೆ? ಅದ್ಯಾರೊ ‘ಅಣ್ಣ‘ ಅಂತ ಬೇರೆ ಹೇಳ್ತಿದ್ದಾರೆ, ಯಾರದು? ಏನಿದು? ಒಂದು ಗೊತ್ತಗ್ತಾ ಇಲ್ವಲ್ಲ, ಸರಿ ನೋಡೇ ಬಿಡೋಣ ಅದಂಗಾಗ್ಲಿ ಅಂತ ಸುಮ್ನೆ ಕೂತ್ಬಿಟ್ಟೆ.

ಸುಮಾರು ಹೊತ್ತು ಪ್ರಯಾಣಮಾಡಿದ ಕಾರು ಒಂದು ದೊಡ್ಡ ಬಂಗಲೆಯ ಗೇಟಿನ ಒಳಗೆ ಪ್ರವೇಶಿಸಿ ಪೋರ್ಟಿಕೊಗೆ ಬಂದು ನಿಂತಿತು. ಕಾರಿನಿಂದ ಕೆಳಗಿಳಿದೆ, ಸುತ್ತಲೂ ಅಲ್ಲಲ್ಲೆ ಸೆಕ್ಯುರಿಟಿ ಗಾರ್ಡ್ಗಳು ಓಡಾಡುತ್ತಿದ್ದರು, ಒಹೊ.. ಯಾರೊ ದೊಡ್ಡ ಪರೋಡಿ ಮನೇನೆ ಇರ್ಬೇಕು ಅನ್ಕೊಂಡೆ, ಅಷ್ಟರಲ್ಲಿ ನನ್ನನ್ನು ಕರೆ ತಂದಿದ್ದವರು ‘ಹ್ಮ್... ನಡಿರಿ ಒಳ್ಕೆ‘ ಅಂದವರೆ ತಳ್ಳಿ ಕೊಂಡು ಒಳಗೆ ಕರೆದೊಯ್ದು ಹಾಲಿನಲ್ಲಿ ಸೋಪಾದ ಮೇಲೆ ಕುಳಿತು ಕೊಳ್ಳುವಂತೆ ಕೈ ತೋರ್ಸಿದ್ರು, ನಾನು ಬಾಯಿಗೆ ಕಟ್ಟಿದ್ದ ಬಟ್ಟೆ ಬಿಚ್ಚಿ ಕಾಲ್ಮೇಲೆ ಕಾಲು ಹಾಕಿ ಜರ್ಬಾಗಿ ಕುಳಿತೆ ನೋಡೇಬಿಡೋಣ ಇವರ ವರ್ಸೇನ ಅನ್ಕೊಂಡು.

ನನ್ನ ಜೊತೆ ಬಂದಿದ್ದವರಲ್ಲಿ ಒಬ್ಬ ಒಳಗೆ ಹೋಗಿ ಮತ್ತೆ ಹೊರಬಂದು ಸಂಗಡಿಗರ ಜೊತೆ ನಿಂತ, ಸ್ವಲ್ಪ ಸಮಯ ಕಳೆದ ಮೇಲೆ, ಒಳಗಿನಿಂದ ದಡೂತಿ ಅಸಾಮಿಯೊಬ್ಬ ಹೊರಗೆ ಬಂದ, ಅವನನ್ನು ನೋಡಿ ನಿಂತಿದ್ದ ಅವನ ಚೇಲಾಗಳು ಸಲಾಂ ಹೊಡೆದ್ರು, ನಾನು ಮಾತ್ರ ಅವನಿಗೆ ಸೊಪ್ಪು ಹಾಕದೆ ವಿಲನ್ಗಳ ಎದುರಿಗೆ ಸಿನಿಮಾದಲ್ಲಿ ಎನ್ ಎಸ್ ರಾವ್ ಕುಳಿತುಕೊಳ್ಳುವಹಾಗೆ ಕುಳಿತಿದ್ದೆ. ಅವ ನನ್ನನ್ನು ನೋಡಿ,

‘ಒ... ನೀನೆನಾ ಇಸ್ಟೋರಿರೈಟ್ರು‘ ಅಂದ

‘ಯಾ ಯಾ ನಾನೆ‘

‘ನಾನು ಒಂದು ಪಿಚ್ಚರ್ ತೆಗೀಬೇಕು ಅಂತ ಹೊಂಟಿವ್ನಿ ಅದ್ಕೆ ಒಂದು ಸ್ಟೋರಿ ಬರ್ಕೊಡು‘

‘ಏನು ಪಿಚ್ಚರ್ ಸ್ಟೋರಿನಾ, ಹೆಹೆ.. ನಂಗೆ ಅವೆಲ್ಲ ಬರೊಲ್ಲಾ ನಾನು ಹವ್ಯಾಸಕ್ಕೆ ಬರ್ಯೋದು, ರೆಗ್ಯುಲರ್ ರೈಟರ್ ಅಲ್ಲ, ನಾನು ಅವಾಗ್ಲಿಂದ ನಿನ್ನ ಚೇಲಾಗಳಿಗೆ ಹೇಳ್ತಾನೆ ಇದ್ದೀನಿ, ತಲೆ ಹರ್ಟೆ ಮಾಡ್ಕಂಡು ಕರ್ಕೊಂಬಂದಿದ್ದಾರೆ, ಸರಿ ಸರಿ ನಿಮ್ಮೋರ್ಗೆ ಹೇಳಿ ಎಲ್ಲಿಂದ ಕರ್ಕೊಂಬಂದ್ರೊ ಅಲ್ಲಿಗೆ ಬಿಟ್ಬಿಡಿ ಗೊತ್ತಾಯ್ತಾ?‘

‘ಒ.... ಅಷ್ಟೊಂದು ಚರ್ಬಿನಾ ನಿಂಗೆ, ಸುಮ್ಕೆ ಕತೆ ಬರ್ಕೊಡಯ್ಯ ಅಂದ್ರೆ ತಲೆ ಎಲ್ಲ ಮಾತಾಡ್ತೀಯ?‘

ಪಕ್ಕದಲ್ಲಿದ್ದ ಅವನ ಚೇಲಾಗಳು, ‘ಹ್ಮ್.... ಕಣಣ್ಣ ಅಲ್ಲೂ ಇಂಗೆ ಅಂದ ಈ ವಯ್ಯ ಸುತಾರಾಂ ಒಪ್ಕಳಿಲ್ಲ ಕೊನೆಗೆ ಎತ್ತಾಂಕಂಡು ಬರ್ಬೇಕಾಯ್ತು‘

‘ರೀ ರೈಟ್ರೆ ನಮ್ವಿಷ್ಯ ನಿಂಗೆ ಗೊತ್ತಿಲ್ಲ, ಸುಮ್ಕೆ ಬೇಗ ಒಂದು ಕತೆ ಬರ್ದ್ಬಿಡು ಜಾಸ್ತಿ ಟೆನ್ಷನ್ ಮಾಡ್ಬೇಡ‘

‘ಅಯ್ಯೊ ರಾಮ ಕತೆ ಬರ್ಯೋದು ಅಂದ್ರೆ ಸುಮ್ನೆ ಆಗುತ್ತೇನ್ರಿ ಅದಕೊಂದು ಪ್ಲಾಟ್ ಬೇಡ್ವಾ‘

‘ಒ... ಏನ್ಲಾ ಮಗ ಇನ್ನೂ ಕತೇನೇ ಬರ್ದಿಲ್ಲ, ಸಿನ್ಮಾ ಆಗೋಕ್ಕೆ ಮುಂಚೇನೆ ಪ್ಲಾಟ್ ಅಂತ ಅಡ್ವಾನ್ಸ್ ಕೇಳ್ತಾವ್ನೆ, ಈ ವಯ್ಯ ಅಷ್ಟೊಂದು ಪಿಗರ್ರಾ?‘

‘ರೀ ಪ್ಲಾಟ್ ಅಂದ್ರೆ ನಾನು ಹೇಳಿದ್ದು ನೀವಂದ್ಕೊಂಡ ಹಾಗೆ ಮನೆ ಅಲ್ಲ, ಕಥೆ ಬರ್ಯಕ್ಕೆ ಒಂದು ವಿಷ್ಯ ಬೇಕು, ಸುಮ್ಸುಮ್ನೆ  ಕೂತ್ಕಡೆ ಹಾಗೆಲ್ಲ ಹೊಳ್ಯೋಲ್ಲ ಅಂತ‘

‘ಒ... ಅಂಗಾ, ಸರಿ ಹಂಗಾದ್ರೆ ಇವಾಗ ಇಲ್ಲೆ ಕೂತ್ಕೊಂಡು ಯೋಚ್ನೆ ಮಾಡಿ ಬರಿ‘

‘ಒಳ್ಳೆ ತಿಕ್ಲು ಸಹ್ವಾಸ ಆಯ್ತಲ್ಲ, ಛೆ.. ಬೆಳಿಗ್ಗೆ ಎದ್ದು ಯಾರ ಮುಖ ನೋಡಿದ್ನೊ?‘

‘ಏ... ಯಾರ್ಲಾ ಮೆಂಟ್ಲು‘

‘ಹಾಗಲ್ರಿ, ನನ್ನ ಹಣೆ ಬರ್ಹ ಅಂನ್ಕೊಂಡೆ, ನೋಡ್ರಿ ಕಥೆ ಬರ್ಯೊಕ್ಕೆ ಹಾಗೆಲ್ಲ ಬಲವಂತ ಮಾಡಿದ್ರೆ ಬರೋಲ್ಲ, ಅದಕ್ಕೆ ಸರಿಯಾದ ವಾತಾವರಣ ಇರ್ಬೇಕು, ಜೊತೆಗೆ ನನಗೆ ಮೂಡ್ ಬರ್ಬೇಕು, ಗೊತ್ತಾಯ್ತಾ?‘

‘ಅಯ್ಯೊ ತೇರಿ ಬುಟ್ರೆ ಮಾತಾಡ್ತಲೇಅವ್ನೆ, ನಿಂಗೆ ಮೂಡ್ ಇಲ್ವಾ, ತಡಿ ಈಗ ಬರುತ್ತೆ‘ ಅಂದವನೆ ಅವನು ಕುಳಿತಿದ್ದ ಕುರ್ಚಿಯ ಹಿಂದಿನಿಂದ ದೊಡ್ಡ ಲಾಂಗ್ ಮಚ್ಚನ್ನು ಎಳೆದು ನನಗೆ ತೋರಿಸುತ್ತಾ ‘ಈಗ ಬಂತಾ ಮೂಡ್, ಲೇ ಮಚ್ಚ ಕೊಡ್ಲಾ ಪೆನ್ನು ಹಾಳೆಯ‘ ಅಂದ

ಏನೂ ಮಾಡಲಾಗದ ಪರಿಸ್ಥಿತಿ ನನ್ನದು, ಒಳ್ಳೆ ಕಿರ್ಬನ ಕೈಲಿ ಸಿಕ್ಕಿಕೊಂಡೆ ಅನ್ಕೊಂಡು ಪ್ರಯತ್ನ ಪಟ್ಟು ನೋಡೋಣ ಅಂತ ಅವರು ಕೊಟ್ಟ ಪೇಪರ್ ಪೆನ್ನು ತೆಗೆದು ಕೊಂಡು ಬರೆಯುವ ಹಾಗೆ ನಟಿಸುತ್ತಾ ಮೂತಿಯನ್ನು ಅತ್ತ ಇತ್ತ ತಿರುಗಿಸ ತೊಡಗಿದೆ.

‘ನೊಡ್ದೇನ್ಲಾ ಮಚ್ಚ ಎಂಗೆ ಬಂದಯ್ತೆ ಮೂಡು ರೈಟ್ರಿಗೆ, ಸರಿ ಇನ್ನರ್ದ ಗಂಟೆ ಟೇಮು ಅಸ್ಟ್ರಾಗೆ ಕತೆ ರಡಿ ಇರ್ಬೇಕ್ ಗೊತ್ತಾತಾ‘ ಅಂದವನೆ ಒಳಕ್ಕೆ ಹೊರಟು ಹೋದ.

ಅವನ ಚೇಲಾಗಳೆಲ್ಲ ನನ್ನನ್ನು ಗುರಾಯಿಸಿ ನೋಡಿ ಕಣ್ಣಲ್ಲೆ ಬರಿ ಬರಿ ಅಂತ ಹೇಳಿ ಏನೊ ಮಾತಾಡ್ಕಂಡು ಆ ಕಡೆ ತಿರ್ಗಿದ್ರು.

ಯಾರು ನನ್ನನ್ನು ಗಮನಿಸುತ್ತಿಲ್ಲ ಎಂಬುದನ್ನು ನಿಧಾನವಾಗಿ ಅವಲೋಕಿಸಿ, ಮೆತ್ತಗೆ ಹೆಜ್ಜೆಗಳನ್ನಿಡುತ್ತಾ ಹೊರಬಾಗಿಲಿಗೆ ಬಂದು ಇನ್ನೇನು ಹೊರಗಡಿ ಇಡಬೇಕು, ಹಿಂದಿನಿಂದ ಸ್ವರ ಕೇಳಿಬಂತು, ‘ಲೆ..... ಮಚ್ಚ ಹೋಯ್ತವನೆ ಹಿಡ್ಕೊಳ್ರೊ, ತದುಕ್ರೂ ನನ್ಮಗ ತಪ್ಸಿಕೊಳ್ತವಾನೆ‘ ಅವರೆಲ್ಲ ನನ್ನ ಬಳಿ ಬಂದವರೆ ನನ್ನನ್ನು ಹಿಡಿದು ಹೊಡೆಯಲಿಕ್ಕೆ ಕೈ ಎತ್ತಿದರು, ನಾನು ಗಾಬರಿಯಿಂದ ‘ಅಯ್ಯೊ.. ಅಯ್ಯಯ್ಯೊ... ಬಿಟ್ಬಿಡ್ರಪ್ಪ ನಾನು ಕತೆಗಾರ ಅಲ್ಲ, ಕತೆ ಬರ್ಯಲ್ಲ, ನಿಮ್ಮ ದಮ್ಮಯ್ಯ ಬಿಟ್ಬಿಡ್ರಪ್ಪ...... ಹೊಡಿಬೇಡಿ.....‘

‘ಏ ಅಪ್ಪ... ಅಪ್ಪಾ.... ಎಚ್ಚರ ಮಾಡ್ಕೋಳಪ್ಪ, ಏನು ಕನಸು ಕಾಣ್ತಿದ್ಯ ಆಗ್ಲೆ ಬೆಳ್ಕಾಯ್ತು, ನೀನು ಹೀಗೆ ಕೂಗಾಡಿದ್ರೆ ಪಕ್ಕದ ಮನೆಯೊರಿಗೆಲ್ಲ ಕೇಳುತ್ತೆ‘ ಅಂತಿದ್ಲು ಮಗಳು.

ನಾನು ನನ್ನ ಮಗಳ ಮುಖ ನೋಡಿ ನಕ್ಕೆ, ‘ಲೆ ಪುಟ್ಟಿ ನಿಮ್ಮಮ್ಮ ಕೇಳಿಸ್ಕೊಳಿಲ್ವಾ? ಸದ್ಯ ಬದುಕ್ದೆ, ಅವ್ಳಿಗೇನಾದ್ರೂ ಸಿಕ್ಕಿದ್ರೆ ಹುರೀನ ಹಗ್ಗ ಮಾಡ್ಬಿಡ್ತಾಳೆ‘

‘ಅಯ್ಯೊ ಅಮ್ಮ ಆಗ್ಲಿಂದ ಇಲ್ಲೆ ಇತ್ತು, ನೀನು ಅಸ್ಪಷ್ಟವಾಗಿ ಗೊಣಗುತ್ತಿದ್ದುದ್ದನ್ನು ಕೇಳಿಸ್ಕೊಂಡು, ನೀನು ಕೂಗಕ್ಕೆ ಶುರು ಮಾಡಿದ್ಮೇಲೆ, ನಿಮ್ಮಪ್ಪನ್ನ ಎಬ್ಸೆ ಅಂತ ನಂಗೆ ಹೇಳಿ ಬಾಗ್ಲು ಸಾರ್ಸಕ್ಕೆ ಹೊರ್ಗಡೆ ಹೋಯ್ತು ಗೊತ್ತಾ?‘

ಅಷ್ಟರಲ್ಲಿ ಪಕ್ಕದಮನೆ ‘ಪ..‘ ಅವ್ರು ನಮ್ಮನೆ ‘ಸ..‘ ಜೊತೆ ಮಾತಾಡೋದು ಕಿಟಕಿಂದ ಕೇಳಿಸ್ತು.

‘ಏನ್ರಿ ನಿಮ್ಮೆಜ್ಮಾನ್ರು ಏನೊ ಹೊಡಿಬೇಡಿ ಅಂತ ಕೂಗಾಡ್ತಿದ್ರು? ಯಾಕೆ ಯಾರಾದ್ರೂ ಕಳ್ರು ಬಂದಿದ್ರಾ?‘

‘ಅಯ್ಯೊ ಕಳ್ರು ಇಲ್ಲ ಏನೂ ಇಲ್ಲ, ಇನ್ನೊಂಸಾರ್ತಿ ಕಥೆ ಬರಿದ್ರೆ ಕಾಲ್ಮುರಿತಿನಿ ಅಂತ ಯಾರೊ ಅವರ ಕನಸಿನಲ್ಲಿ ಹೆದ್ರಿಸಿದಾರೆ ಅಂತ ಕಾಣುತ್ತೆ, ಅದಕ್ಕೆ ಹೊಡಿಬೇಡಿ, ನಾನು ಕತೆಗಾರ ಅಲ್ಲ, ಕತೆ ಬರ್ಯೊಲ್ಲ ಅಂತ ಕನವರ್ಸ್ತಿದ್ರು ಅಷ್ಟೆ‘

‘ಹೌದೇನ್ರಿ ನಿಮ್ಮೆಜ್ಮಾನ್ರು ಸಾಹಿತಿಗಳಾ, ಕತೆ ಬೇರೆ ಬರಿತರಾ.. ನಂಗೆ ಗೊತ್ತೆ ಇರ್ಲಿಲ್ಲ‘.

‘ನಿಮ್ಗೆಲ್ಲೊ ಬ್ರಾಂತಿ, ಕತೆಗಾರರೂ ಅಲ್ಲ ಏನ್ ಮಣ್ಣೂ ಇಲ್ಲ, ಯವ್ದೊ ಒಂದು ಕತೆ ಬರ್ದು ಅದೆಂತದೊ ಸಂಪದದಲ್ಲಿ ಹಾಕಿದ್ರಂತೆ, ಅದನ್ನ ನೋಡಿ ಒಂದಿಬ್ರು, ಕಥೆ ಚೆನ್ನಾಗಿದೆ ಇಷ್ಟ ಆಯ್ತು ಅಂತ ಕಾಮೆಂಟ್ ಮಾಡಿದ್ರಂತೆ, ಅದನ್ನು ನೋಡಿ ಇವ್ರು ನಾನು ದೊಡ್ಡ ಕಥೆಗಾರ ಹಾಗೆ ಹೀಗೆ ಅಂತ ಏನೇನೊ ಕನ್ಸು ಕಾಣ್ತಿರ್ತಾರೆ, ಅದಕ್ಕೆ ಕನ್ಸಿನಲ್ಲಿ ಯಾರೊ ಎರ್ಡು ಕೊಟ್ಟಿದಾರೆ ಅಂತ ಕಾಣುತ್ತೆ‘

‘ನಿಮ್ಮೆಜ್ಮಾರು ಪರ್ವಾಗಿಲ್ಲರಿ ಸ.. ಪ್ರತಿಭಾವಂತರು, ಸಂಗೀತ ಅಂತಾರೆ ಕತೆ ಬರಿತಾರೆ, ಇನ್ನು ಏನೇನ್ ಮಾಡ್ತಾರಿ?‘

‘ಹ್ಮ್.. ಸಂಗಿತ, ಸಂಗೀತ ಅಂತ ಶ್ರುತಿ ಪೆಟ್ಗೆ ಮುಂದೆ ಕೂತಿದಾಯ್ತು, ಕೊನೆಗೆ ಇವ್ರ ಶ್ರುತಿಗೆ ಆ ಪೆಟ್ಗೆ ಶ್ರುತಿ ಸೇರ್ಲೆ ಇಲ್ಲ, ಇನ್ನು ಈಗ ಕಥೆಗಾರರಾಗೊಕ್ಕೆ ಹೋಗಿ ಕನಸಿನಲ್ಲಿ ವದೆ ತಿಂದಿದ್ದಾರೆ, ಇನ್ನು ಏನೇನು ನವರಂಗಿ ಆಟ ಆಡ್ತಾರೊ ನೋಡೋಣ‘

ಇವರ ಸಂಭಾಷಣೆ ಕೇಳಿ, ಇವತ್ತು ೩ ಗಂಟೆಗೆ ವಾಕ್ಪಾತ ಕಾರ್ಯಕ್ರಮ ಇದೆ, ನನ್ನ ಮತ್ತೊಂದು ಪ್ರತಿಭೆಯ ಬಗ್ಗೆ ಪಕ್ಕದಮನೆ ‘ಪ..‘ ಅವರಿಗೆ ಕಿಟಕಿಯಿಂದ ಹೇಳೋಣ ಅನ್ಕೊಂಡೋನು, ಇನ್ನು ಈಗ್ಲೆ ಅಲ್ಲಿಗೆ ಹೋಗೊ ಕಾರ್ಯಕ್ರಮ ಹೇಳಿದ್ರೆ, ಇನ್ನೇನು ಕಾಮೆಂಟ್ ಬರುತ್ತೊ,   ಬೇಡ ಆಮೇಲೆ ಹೇಳೋಣ ಅಂತ, ಟವಲ್ ತೆಗೆದು ಕೊಂಡು ಸ್ನಾನದ ಕೋಣೆಯ ಕಡೆ ಹೊರೆಟೆ, ಅವರಮ್ಮನ ಸಂಭಾಷಣೆ ಕೇಳಿದ್ದ ನನ್ನ ಮಗಳು, ಕತ್ತು ಬಗ್ಗಿಸಿಕೊಂಡು ಮುಸಿಮುಸಿ ನಗುತ್ತಿರುವುದು ಗೊತ್ತಾದರೂ, ಏನೂ ಗೊತ್ತಿಲದವನಂತೆ ನಡೆದೆ.      






 

Rating
No votes yet

Comments