ರಾಘವೇಂದ್ರ ಪಾಟೀಲರು ೬೦

ರಾಘವೇಂದ್ರ ಪಾಟೀಲರು ೬೦

ರಾಘವೇಂದ್ರ ಪಾಟೀಲರು ೬೦
ಒಬ್ಬೊಬ್ಬರಿಗೆ ಒಬ್ಬೊಬ್ಬರು ಒಂದು ಹೆಚ್ಚಿನ ವಿಚಾರಕ್ಕೆ ಸಂಬಂಧಿಸಿದಂತೆ ಅಂಟಿ ಬರುತ್ತಾರೆ. ಹಾಗೆ ರಾಘವೇಂದ್ರ ಪಾಟೀಲರು ನನಗೂ, ನನ್ನಂಥ ಹಲವರಿಗಾದರೂ ಸಂವಾದದ ಸಂಪಾದಕರಾಗಿಯೇ ಮೊದಲು ಪರಿಚಿತರಾಗಿದ್ದು. (ಸಂವಾದವನ್ನು ಮೊದಲಿಗೆ ಪಾಟೀಲರ ಜೊತೆಗೆ ಇನ್ನು ಕೆಲವರೂ ಕೂಡಿ ನಿರ್ವಹಿಸುತ್ತಿದ್ದರೂ ಅವರೆಲ್ಲ ನನಗೆ ಪರಿಚಿತರಲ್ಲದ ಕಾರಣ ನಾನು ಪಾಟೀಲರಿಗೇ ಅಂಟಿಕೊಂಡೆ. ಆಗಿನ್ನೂ ಸಂವಾದಕ್ಕೆ ಸಾಹಿತ್ಯ ಸಂವಾದವೆಂಬ ಅಭಿದಾನ ದೊರೆತಿರಲಿಲ್ಲ. ನಾಮ ಬದಲಾದ ಆ ನಂತರ ಅದು ಹೊಸ ಆಕೃತಿಯನ್ನು ಪಡೆಯಿತೆಂದು ಹೇಳಲಾರೆ. ಏನೇ ಇದ್ದರೂ ಪಾಟೀಲರ ಸಂವಾದವೆನ್ನುವುದು ಮಾತ್ರ ಹಾಗೆಯೆ ಮುಂದುವರಿಯಿತು.
ಸಂವಾದದ ಸಂಪಾದಕರಾಗಿಯೇ ರಾಘವೇಂದ್ರ ಪಾಟೀಲರು ನನಗೆ ಮೊದಲು ಪರಿಚಿತರಾಗಿದ್ದು ಎಂದೆನಷ್ಟೆ. ಆ ಬಳಿಕವೇ ನಾನು ಅವರ ಕೃತಿಗಳನ್ನು ಓದಲು ಶುರುಮಾಡಿದ್ದು ಮತ್ತು ಅವರ ವಿಚಾರದ ಜೊತೆ ದೂರಸಂವಾದವನ್ನು ಏರ್ಪಡಿಸಿಕೊಂಡಿದ್ದು. ಪಾಟೀಲರು ಎದುರಿಗೆ ಕಾಣದ ಓದುಗರನ್ನು ಇರಿಸಿಕೊಂಡು, ತಮ್ಮ ಮತ್ತು ತಾವು ಬರೆಯಿಸಿಕೊಂಡ ಲೇಖಕರ ಮುಖಾಂತರ ಕನ್ನಡದ ಸಂವಾದದಲ್ಲಿ ತೊಡಗಿದ್ದು ಸ್ಪಷ್ಟವಾಗಿತ್ತು.
ಪಾಟೀಲರು ತಮ್ಮ ಆಸ್ಥೆಯನ್ನು ಕನ್ನಡದ ಬಾವುಟದ ಆಚೆಗೂ ಹರಡಿ ಬಹುಮುಖೀ ಸಂಸ್ಕೃತಿಯ ಸಂಭವದ ಬಗ್ಗೆ, ಈ ಸಮಾಜವನ್ನು ಅತಿಕ್ರಮಿಸಿಕೊಂಡು ಬರುತ್ತಿರುವ ಬಗೆಬಗೆಯ ಹಿಂಸೆಗಳ ಸುನಾಮಿ ಅಲೆಗಳ ಬಗ್ಗೆ ಚಿಂತಿಸಿದ್ದನ್ನು ಅವರು ಸಂವಾದಕ್ಕೆ ಕ್ರಮವಾಗಿ ಬರೆದ ಸಂಪಾದಕನ ಟಿಪ್ಪಣಿಗಳಲ್ಲಿ ಕಾಣಬಹುದು. ಸತ್ಯಜಿತ್ ರೇ ಕುರಿತು ಸಣ್ನ ಸಾಹಿತ್ಯ ಪತ್ರಿಕೆಯ ಮಟ್ಟಿಗೆ ಸ್ಮರಣೀಯವೆನ್ನಬಹುದಾದ ಸಂಚಿಕೆ ರೂಪಿಸಿದ ಸಂದರ್ಭದಲ್ಲಿ ಅವರು ಸಂವಾದವು ಕನ್ನಡ ಸಂಸ್ಕೃತಿಯ ಬಹುಮುಖ ಅಭಿವ್ಯಕ್ತಿಯ ಸಾಧನವಾಗಿ ಬೆಳೆಯುವ ಆಶಯ ಹೊಂದಿರುವುದನ್ನು ಹಾಗೂ ಅದರ ಪ್ರಯತ್ನದಲ್ಲಿ ತಮಗೆ ಆಗಬೇಕಿರುವುದು ಏನು ಎನ್ನುವುದನ್ನು ಬರೆದಿದ್ದರು. ಸಂವಾದವು ಅಂಥ ಕನ್ನಡ ಸಂಸ್ಕೃತಿಯ ಬಹುಮುಖ ಅಭಿವ್ಯಕ್ತಿಯ ಸಾಧನವಾಗಿತ್ತು ಎನ್ನಲು ಆಲನಹಳ್ಳಿ, ಮಾಸ್ತಿ, ರೇ, ಕುರ್ತಕೋಟಿ, ಲಂಕೇಶ್ ಮುಂತಾದವರನ್ನು ಸ್ಮರಿಸಿ ಸಂವಾದ ರೂಪಿಸಿದ ಸಂಚಿಕೆಗಳೇ ಸಾಕ್ಷಿ. ಅವುಗಳಲ್ಲಿ ೨೦೦೦ರಲ್ಲಿ ಬಂದ ಲಂಕೇಶರ ಕುರಿತ ಸಂಚಿಕೆಯಂತೂ ಆಗ್ಗೆ ಎರಡು ತಲೆಮಾರುಗಳ ಸೂಕ್ಷ್ಮಜ್ಞರ ಚಿಂತನೆಗಳನ್ನು ಒಳಗೊಂಡ ನಳಪಾಕ. ಇದರ ಗುಂಗಿಂದ ಹೊರಬರಲು ಅವರು ಅದಕ್ಕೆ ಇನ್ನಷ್ಟು ಕೂಡಿಸಿ, ಬೋದಿಲೇರನ ಸಖ ಎಂಬ ಸಂಕಲನವನ್ನು ತಂದರು. ಇದೆಲ್ಲ ನನಗೆ ಪಾಟೀಲರು ಸಾಹಿತ್ಯದ ಯಾವೊಂದು ಸಂಪ್ರದಾಯಕ್ಕೆ ಸಲ್ಲುವುದರ ಎಲ್ಲೆ ಮೀರಿ ಸಾಂಸ್ಕೃತಿಕ ಅಗತ್ಯಗಳೆಲ್ಲವೂ ಸಲ್ಲುವ ಪರಿಚಾರಿಕೆಯಲ್ಲಿ ತೊಡಗಿಕೊಂಡಿರುವುದನ್ನು ಮನಗಾಣಿಸಿದೆ. ಅವರ ಈ ಮನೋಭಾವದಿಂದಲೇ ಅವರು ಸಂವಾದದ ಮೂಲಕ ಬಹಳ ಮಂದಿ ಕಾವ್ಯ ಮುಂತಾಗಿ ಬರೆಯಲು, ಸಂವಾದವನ್ನು ಅವರು ನಿಲ್ಲಿಸಿದ ಬಳಿಕವೂ ಬರೆಯುತ್ತಿರಲು ಕಾರಣರಾದರು.
ಪಾಟೀಲರ ಕೆಲಸವನ್ನು ಹಿಂದೆ ಹೋಗಿ ನೆನೆದಾಗಲೆಲ್ಲ ಒಂದು ಹೆದ್ದಾರಿಯ ಬಗಲಿನ ಬಸ್‌ಶೆಲ್ಟರಿನ ರೂಪಕವೊಂದು ನನ್ನ ಕಣ್ಣೆದುರು ಬಂದು ನಿಲ್ಲುತ್ತದೆ. ಕಾವ್ಯಶ್ರದ್ಧೆಯು ಸದಾಕಾಲ ಗಿಡಗಂಟೆ ಸವರಿ ಹಳುವಿನಲ್ಲಿ ದಾರಿಮಾಡಿಕೊಂಡು ಹೋಗುತ್ತಿರಬೇಕಾದ ಪ್ರಕ್ರಿಯೆ. ಅಲ್ಲಲ್ಲಿ ಹೊರೆಯಿಳಿಸುವ ಮಂಟಪವನ್ನೋ, ನೀರುಕುಡಿಯಲು ಅರವಟ್ಟಿಕೆಗಳನ್ನೋ ಇಡುವುದು, ಮಳೆಗಾಳಿಗೊಂದು ಆಸರೆ ನಿರ್ಮಿಸುವುದು ಸುಸಂಸ್ಕೃತರ ಕೆಲಸ. ಅಲ್ಲಿ ಕೂಳಿಸಿ ಒಂದು ವೀಳೆಯದ ಜೊತೆ ಹೊಸ ಆಲೋಚನೆಯ ಮಂದಿಗೆ ಹೊಸದಾಗಿ ಆಲೋಚಿಸುವುದಕ್ಕೆ ಒಂದು ಬಸ್ ಶೆಲ್ಟರ್ ಅನ್ನು ಸಂವಾದದ ಮೂಲಕ ಅವರು ಕಟ್ಟಿದರು, ಎಷ್ಟೊಂದು ಜನ ಅಲ್ಲಿ ನಿಂತು, ಕೂತು ಮುಂದಿನ ವಿಸ್ತಾರಗಳಿಗೆ ಕೈಚಾಚಿ ಹೊರಟಿದ್ದಾರೆ. ಅಂತಹ ಎಷ್ಟೋ ಶೆಲ್ಟರುಗಳನ್ನು ದಾಟಿ ಮುಂದೆ ಹೋಗಿದ್ದರೆ.
ಸಂವಾದವನ್ನು ನಿಲ್ಲಿಸಿರುವ ಪಾಟೀಲರು ಸದ್ಯಕ್ಕೆ ಆ ಶೆಲ್ಟರ್ ಅನ್ನು ಕಿತ್ತು ಹಾಕಿದ್ದಾರೆ. ಅವರು ಅಲ್ಲಿ ಇನ್ನಷ್ಟು ವಿಸ್ತಾರವಾದ ಶೆಲ್ಟರ್ ನಿರ್ಮಾಣ ಮಾಡುವ ಅಗತ್ಯವಿದೆ. ಅವರ ಜೊತೆ ಕೈಗೂಡಿಸುವುದು ನಮ್ಮೆಲ್ಲರ ಕೆಲಸವೂ ಹೈದು. ಶಂಕರ ಮೊಕಾಶಿ ಪುಣೇಕರ್ ಅವರು ನೂರು ರುಪಾಯಿ ನೋಟು ಅಂಗಿಯ ಕಿಸೆಯಿಂದ ತೆಗೆದು ಏ . . . ಆನಂದಕಂದರ ನೆನಪುಗಳನ್ನು ಮೊದಲ ಪುಸ್ತಕ ಮಾಡ್ರೆಪಾ. . . . . ಇದ ತಗೋರಿ ನನ್ನ ಕಾಂಟ್ರಿಬ್ಯೂಶನ್ನು . . . ಎಂದು ತಮ್ಮ ಮುಂದೆ ಹಿಡಿದಿದ್ದರು ಎಂದು ಪಾಟೀಲರು ನೆನಪು ಮಾಡಿಕೊಳ್ಳುತ್ತಾರೆ. ಹಾಗೆ ಆನಂದಕಂದ ಗ್ರಂಥಮಾಲೆ ಹುಟ್ಟಿರಬೇಕು. ಸಂವಾದದ ಹುಟ್ಟಿಗೂ ಅಂಥದೇ ಒತ್ತಾಸೆ ಇದ್ದಿರಲು ಸಾಧ್ಯ. ಇಲ್ಲದಿದ್ದರೆ ಅಗಾಧವಾದ ಜವಾಬ್ದಾರಿ ಬೇಡುವ ಸಾಹಿತ್ಯ ಪತ್ರಿಕೆಯನ್ನು ಹೊರತರಲು ನಿರ್ಧರಿಸುವುದೇನು ಸುಲಭವೇ?. ಆದರೆ ಆನಂದಕಂದ ಗ್ರಂಥಮಾಲೆಯ ಜೊತೆಗಿನ ಪಾಟೀಲರ ಒಡನಾಟ ಹೆಚ್ಚಿ ಸಂವಾದ ಸೊರಗಿತೆಂದು ನನಗೆ ಸಹಜವಾಗಿ ಅನ್ನಿಸಿದೆ. ಅಂದಕೂಡಲೆ ನಾನು ನೆಗೆಟಿವ್ ಆಗಿ ಯೋಚಿಸಿದ್ದೇನೆ ಎಂದಲ್ಲ. ಗ್ರಂಥಮಾಲೆಯ ಜೊತೆಜೊತೆಗೇ ಸಂವಾದವನ್ನೂ ಅವರು ಒಂದಷ್ಟು ದೂರ ಎಳೆದರು, ಚೆನ್ನಾಗೇ ಎಳೆದರು ಎನ್ನಲು ಸಂಕೋಚವೇನೂ ಇಲ್ಲ. ಅವರ ಹಲವು ಟಿಪ್ಪಣಿಗಳಲ್ಲಿ ಈ ತೇರನೆಳೆಯುತೇವೆ ತಂಗಿ, ಕೈಗೂಡಿಸಲು ನೀನೂ ಬಾ ಎನ್ನುವ ಕರೆಯಿದೆ. ಅವರಿಗೆ ಸಂವಾದದ ತೇರನೆಳೆಯಲು ಜೊತೆ ಕೈಗೂಡಿಸುವವರು ಸಿಕ್ಕದೆ ಹೋಗಿರಬಹುದು. ಆದರೆ, ಅದೇ ಸಮಯ ಆನಂದಕಂದ ಗ್ರಂಥಮಾಲೆ ಹೊರತಂದಿರುವ ಪುಸ್ತಕಗಳ ಹರವು ಮತ್ತು ವೈವಿಧ್ಯಗಳನ್ನು ಗಮನಿಸಿದರೆ, ಕನ್ನಡಕ್ಕೆ ಬಹುಮುಖೀ ಚಿಂತನೆಗಳನ್ನು ದೇಸೀಯವಾಗಿ ಒದಗಿಸುವುದೇ ಅಲ್ಲದೆ ಅನ್ಯರೆಡೆಯಿಂದಲೂ ಅವನ್ನು ಹೆಕ್ಕಿ ತಂದು ಕನ್ನಡದಲ್ಲಿರಿಸಿರುವುದನ್ನು ನಾವು ನೋಡಬಹುದು.
ಕಾವ್ಯವನ್ನು ಇಷ್ಟಪಡುವ ಪಾಟೀಲರು- ಸಂವಾದದಲ್ಲಿ ಅದಕ್ಕೆ ತಕ್ಕ ಸ್ಥಾನಮಾನ ಒದಗಿಸಿದ್ದರು. ಹಿರಿಯರ-ಕಿರಿಯರ ಕವಿತೆಗಳು ಅಲ್ಲಿ ಪ್ರಕಟವಾಗುತ್ತಿರುವಾಗ, ಕಾವ್ಯಕುರಿತ ಸಂವಾದಗಳೂ ಅಲ್ಲಿ ನಡೆಯುತ್ತಿರುವಾಗ ಕಿರಿಯರಿಗೆ ಕೆಲವು ಅನುಕೂಲಗಳು ಒದಗಿ ಬರುತ್ತವೆ. ಒಂದು ಕಾಲದಲ್ಲಿ (ಸ್ಥೂಲವಾಗಿ ೧೯೯೦-೨೦೦೫) ಭಿನ್ನ ಧಾರೆಗಳ ಕನ್ನಡ ಕಾವ್ಯ ಸ್ವರೂಪದ ಬಗ್ಗೆ ಒಂದಿಷ್ಟು ಗಲಿಬಿಲಿ ಉಂಟಾಗಿತ್ತು. ೨೦೦೪-೨೦೦೫ರಲ್ಲಿ ಬಿ.ಆರ್. ಲಕ್ಷ್ಮಣರಾವ್ ಅವರ ಇವಳು ನದಿಯಲ್ಲ ಸಂಕಲನಕ್ಕೆ ಪಾಟೀಲರು ಬರೆದ ಮುನ್ನುಡಿಯಲ್ಲಿ ಈ ಗಲಿಬಿಲಿಯಿಂದ ಕನ್ನಡ ಕಾವ್ಯ ಪಾರಾಗುತ್ತಿರುವ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ. ಆದರೆ ನನ್ನಲ್ಲಿ ಒಂದು ಕುತೂಹಲವಿದೆ. ಪಾಟೀಲರು ಕವಿತೆ ಬರೆದರೆ? ಇಲ್ಲವಾದರೆ ಬರೆಯಲಿಲ್ಲವೇಕೆ? ಖಿhis is ಟಿoಣ mಥಿ ಜಿoಡಿಣe ಎಂದೇನಾದರೂ ಅವರು ತೀರ್ಮಾನಿಸಿದರೆ? ಆ ತೀರ್ಮಾನ ಆಗಿದ್ದರೆ ಅದೇಕೆ ಹಾಗಾಯಿತು?ಆಕಸ್ಮಾತ್ ಅವರು ಕಾವ್ಯವೆನ್ನುವುದನ್ನು ಬರೆಯದಿದ್ದರೂ ತೊಂದರೆಯಿಲ್ಲ. ಅವರಲ್ಲಿರುವ ಕವಿಯೇ ಅವರ ತೇರನ್ನು ಕಾವ್ಯವಾಗಿಸಿದ್ದಾನೆ. ತೇರಿನ ಆಶಯವನ್ನು ರಥವಾಗುವುದರಿಂದ ಪಾರುಮಾಡಿದ್ದಾನೆ.
ಪಾಟೀಲರಿಗೆ ಅರವತ್ತು ವರ್ಷ ಅಂದಾಗ ಹಳೆಯ ದೇಶಕಾಲದ ಸಂಚಿಕೆಗೆಳ ಕೆದಕಿ, ಎರಡನೇ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಅವರು ಅನುವಾದಿಸಿದ ಶೆರೆವುಡ್ ಆಂಡರ್ಸನ್ನರ ಮೊಟ್ಟೆ ಕತೆಯನ್ನು ಅದರಲ್ಲಿ ಏನೋ ನನಗೆ ಈ ಸಂದರ್ಭಕ್ಕೆ ಪ್ರಸ್ತುತವಾಗುವಂಥದು ಇದೆಯೆಂಬ ಒತ್ತಾಸೆ ಮೂಡಿ ಮತ್ತೆ ಓದುವ ಮನಸ್ಸಾಗಿ ಓದಿದೆ. ತುಂಬ ಒಳ್ಳೆಯ ಕತೆ. ಸೊಗಸಾದ ಅನುವಾದ. ಜೊತೆಗೆ ಅದರ ಈ ಸಾಲುಗಳು ನನಗೆ ಪಾಟೀಲರಂಥ ಜನರ ಬಗ್ಗೆ ಒಂದು ಇನ್‌ಸೈಟನ್ನು ಒದಗಿಸಿಬಿಟ್ಟವು: ಈ ಮೊಟ್ಟೆಗಳು ಯಾಕಿರಬೇಕು. ಮೊಟ್ಟೆಯಿಂದ ಕೋಳಿಗಳು ಬಂದು ಅವು ಮತ್ತೆ ಯಾಕೆ ಮೊಟ್ಟೆಗಳನ್ನಿಡಬೇಕು ಎನ್ನುವುದು ನನಗೆ ಸೋಜಿಗವೆನ್ನಿಸಿತು. ಪಾಟೀಲರು ನಿರ್ವಹಿಸುವ ಹಲವು ವಿಷಯಗಳು ಅವರದೇ ಬೇರೆ ಎಲ್ಲೋ ಒಂದೆಡೆ ಮರುಹುಟ್ಟು ಪಡೆಯುವುದಿದೆ. ದೇಸಗತಿಯು ಊರಾಗಿ ಮತ್ತಷ್ಟು ಬಣ್ಣ ಪಡೆದುಕೊಂಡು ತೇರಾಗುವಂತೆ. ಅವರ ಸಣ್ಣಕಥೆಗಳಂತೂ ಅದೆಷ್ಟು ಶಕ್ತಿಯುತವಾಗಿರುವವೆಂದರೆ ನನಗೆ ಬಹಳ ಸಲ ಕಥೆಯ ಹುಚ್ಚಿನ ಕರಿಟೊಪಿಗೀರಾಯ ಬೇರೆ ಯಾರೂ ಅಲ್ಲ, ಅವರು ನಮ್ಮ ಪಾಟೀಲರೇ ಅನ್ನಿಸಿಬಿಟ್ಟಿದೆ. ಅವರ ಇನ್ನೊಂದು ಮುಖ್ಯಗುಣವೆಂದರೆ ಅವರಿಗೆ ಪ್ರಸಂಗಗಳನ್ನು ಹೇಳುವ ಹುಚ್ಚಿರುವ ಹಾಗೆಯೇ ಹೇಳಿಸುವ ಹುಚ್ಚು ಸಹ ಪ್ರಬಲವಾಗಿಯೇ ಅಂಟಿಕೊಂಡಿದೆ. ಅವರ ಒತ್ತಾಯದಿಂದ ಬರೆದ ಹಲವು ಮೌಲಿಕ ಬರೆಹಗಳನ್ನು ಸಂವಾದದ ಸ್ಮರಣ ಸಂಚಿಕೆಗಳಲ್ಲಿ ನಾವು ಓದಬಹುದಾಗಿದೆ.
ಪಾಟೀಲರು ವಾಗ್ವಾದದ (೧೯೯೩) ಪೀಠಿಕೆಯಲ್ಲಿ ತಾವು ವಿಜ್ಞಾನದ ವಿದ್ಯಾರ್ಥಿಯೆಂದೂ, ಸಾಹಿತ್ಯವನ್ನು ಒಂದು ಶಿಸ್ತಾಗಿ ಅಭ್ಯಸಿಸದ ತಾವು ಸಾಹಿತ್ಯವನ್ನು ಅರಿತುಕೊಳ್ಳಲು ಮಾಡಿದ ಪ್ರಯತ್ನಗಳು ವಾಗ್ವಾದದಲ್ಲಿನ ಬರಹಗಳೆಂದೂ ಬಿನ್ನವಿಸಿಕೊಂಡಿದ್ದಾರೆ. ಅವರಿಗೆ ಇಂಥ ಸಂಕೋಚಗಳ ಅಗತ್ಯವಿಲ್ಲವೆಂಬುದನ್ನೂ, ಅವರು ಅದನ್ನೆಲ್ಲಾ ಮೀರಿದ್ದಾರೆನ್ನುವುದನ್ನೂ ವಾಗ್ವಾದದ ಮತ್ತು ಅನಂತರದ ಅವರ ಆಲೋಚನೆಗಳು ರುಜುವಾತು ಮಾಡಿವೆ. ಈಗ ಅವರಿಗೆ ಅರವತ್ತಾಗಿ ಮಾಗಿದ ಮನಸ್ಸಿನ ಅವರು ತುಂಬು ಯೌವನದ ಉತ್ಸಾಹದಲ್ಲಿರುವವರು. ಹೊಸವಸಂತನಂತೆ ಕಾಲದ ಜೊತೆ ಹೊಸತಾಗುತ್ತ ಬರುತ್ತಿರುವವರು. ಜೊತೆಗೆ ಅವರು ಇನ್‌ಕ್ಲೂಸಿವ್ ಆಗಲು ನಿರಂತರ ಪ್ರಕ್ರಿಯೆಯಲ್ಲಿರುವವರು. ಸಣ್ಣ ಸಂಗತಿಯೂ ಅವರ ಗಮನವನ್ನು ತಪ್ಪಿಕೊಳ್ಳದು. ಪಾಟೀಲರ ಗೆಳೆಯರ ಬಳಗ ಎಷ್ಟು ದೊಡ್ಡದೆಂದರೆ ಅವರ ತೇರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಾಗ ಅವರ ಫೋನ್ ಹಾದಿ ತೆರವಾಗಲಿಕ್ಕೆ ಒಂದೂವರೆ ತಾಸು ಪ್ರಯತ್ನ ಬೇಕಾಯಿತು ನನಗೆ.
ನಾನು ನನ್ನ ಇರುವ ಸಂಗತಿ ಪ್ರಕಟವಾದಾಗ ಅದನ್ನು ವಿಮರ್ಶಿಸಲು ಪಾಟೀಲರಿಗೆ ಕಳುಹಿಸಿದ್ದೆ. ನನ್ನ ಕವಿತೆಗಳನ್ನು ಸಂವಾದದಲ್ಲಿ ಪ್ರಕಟಿಸಿ ನನ್ನ ರೆಕ್ಕೆಗೆ ನೀರು ಬಿಟ್ಟಿದ್ದ(ನನ್ನ ಊರಿನಲ್ಲಿ ಈ ರೂಪಕಕ್ಕೆ ಬಲತುಂಬು ಎಂಬ ಅರ್ಥವಿದೆ) ಪಾಟೀಲರು ಒಂದಷ್ಟು ಕಾಲದ ಬಳಿಕ ತಮ್ಮ ವಾಗ್ವಾದದ ಪ್ರತಿ ಕಳುಹಿಸಿ ಅದರ ಮೊದಲ ಪುಟದಲ್ಲೇ ತಾವು ಯಾವುದೋ ತಪ್ಪು ಮಾಡಿರುವೆವೆಂಬ ಭಾವದಲ್ಲಿ ತಡವಾಯಿತೆಂದೂ, ಆ ಸಂಕಲನದ ಬಗ್ಗೆ ತಾವೇ ಬರೆಯುವುದಾಗಿಯೂ ಟಿಪ್ಪಣಿ ಬರೆದು ಕಳಿಸಿದ್ದರು. ನನಗೆ ಅದೇ ಒಂದು ವಿಮರ್ಶೆಯಾಗಿ ತೋರಿತ್ತು.
ಬರೆಯುವೆನೆಂದರು. ಆದರೆ ಅವರಿಗೆ ಬರೆಯಲು ಸಾಧ್ಯವಾಗಲಿಲ್ಲ. ಅದಿನ್ನಷ್ಟು ಕಾಲವಾದ ಮೆಲೆ ಅಪ್ರಸ್ತುತವೂ ಆಗಿಬಿಡುತ್ತದೆ. ಅದರ ಚಿಂತೆಯೇನೂ ಇಲ್ಲ. ಬಳಿಕ ಪುಸ್ತಕ ಪ್ರಕಟಣೆಗೆ ತೆತ್ತುಕೊಂಡಿದ್ದು ಕಾರಣವೋ ಉದ್ಯೋಗದ ಕಾರ್ಯಭಾರವೋ, ಪತ್ರಿಕೆಯ ಓದುವ ಬಹುಸಂಖ್ಯಾತರಿಗೆ ತಾವು ಪ್ರಕಾಶಕರಿಗೆ ಹಣ ಕಳುಹಿಸಬೇಕಾದಾಗ ಉಂಟಾಗುವ ವಿಸ್ಮೃತಿಯ ಕಾರಣವಾದ ಆರ್ಥಿಕ ಜಾಗೃತಿಯೋ, ಅವರು ಸಾಹಿತ್ಯ ಸಂವಾದ ನಿಲ್ಲಿಸಿಬಿಟ್ಟರು. ಹಾಗಾಗಿ ಅಸಂಖ್ಯ ಓದುಗರ ಜೊತೆ, ಕೃತಿ-ಕೃತಿಕಾರರ ಜೊತೆ ಇದ್ದ ಸಂವಾದದ ಅವಕಾಶವೊಂದು ಮುಚ್ಚಿಕೊಂಡಿತು. ಅವರು ಮತ್ತೆ ಸಂವಾದದ ಬಾಗಿಲು ತೆರೆಯುವರೆಂದು, ಅದರ ಬಾಗಿಲು ಮುಚ್ಚಿಹೋಗಬಾರದೆಂದೂ ಆಶಿಸುವವರು ಬಹುಮಂದಿ ಇರುವರೆಂದು ನನಗೆ ಗೊತ್ತಿದೆ. ಅದು ನನಸಾಗಬೇಕೆಂದು ನಾನೂ ಆಶಿಸುತ್ತೇನೆ.
ಲೇಖಕನೊಬ್ಬ ಮತ್ತೊಬ್ಬ ಲೇಖಕನ ಬಗ್ಗೆ ಬರೆಯುವುದೆಂದರೆ ತನ್ನ ಬಗ್ಗೆ ಬರೆದುಕೊಳ್ಳುವುದು ಎಂದು ನಾನು ತಿಳಿಯುತ್ತೇನೆ. ಆದರೆ ಅದು ಬಹುತೇಕ ಕನ್‌ವರ್ಸ್ ಆಗಿರುತ್ತದೆ. ತನ್ನಲ್ಲಿ ಇನ್ನೂ ಏನೇನು ಇರಬೇಕಿತ್ತು ಎಂಬುದನ್ನು ಬರೆಯುವುದು. ಬರೆಯುವಿಕೆ ಒಂದು ಬಗೆ ಬಗೆಯುವಿಕೆ. ಹಾದಿ ಎದುರಿಗಿದ್ದರೂ ಅಡಿ ಎತ್ತಿಡದವನು ನಾನೆಂಬ ಭಾವ ಮುಸುರಿ ನನ್ನ ಕುರಿತು ನನ್ನೊಳಗೇ ಒಂದು ಕೊರತೆಯ ಅನುಭವವಾಗತೊಡಗುತ್ತದೆ. ಹೀಗೆ ಯೋಚಿಸುತ್ತ ಪಾಟೀಲರ ಸಾಧನೆಯನ್ನು ನಿರುಕಿಸಿದರೆ ಅವರು ಎಷ್ಟು ದೂರ ನಡೆದಿರುವರೆಂದು ತಿಳಿದು ಅಚ್ಚರಿಯಾಗುತ್ತದೆ. ಅವರು ಮತ್ತಷ್ಟು ದೂರ ಕ್ರಮಿಸುವಂತಾಗಲಿ ಎಂಬ ಹಾರೈಕೆಯನ್ನು ಮನಸ್ಸು ಅವರಿಗೆ ದೂರಸಂವಾದದ ಮೂಲಕ ಹೇಳಿಬಿಡುತ್ತದೆ.
ನನಗೆ ಗೊತ್ತಿದೆ. ಅಚ್ಚಾದ ಮೇಲೆ ಈ ಲೇಖನವನ್ನು ಓದುವಾಗ ಖಂಡಿತ ನನಗೇನೆ ಅನ್ನಿಸುತ್ತೆ, ಹೇಳದೆ ಎಷ್ಟೊಂದು ಬಾಕಿ ಉಳಿದುಹೋಯಿತು ಎಂದು. ಆಮೇಲೆ ಹೇಳಿಕೊಳ್ಳಲು ಇಂಥ ಅವಕಾಶವೇ ಇರುವುದಿಲ್ಲ; ಹೀಗೆ ಎಲ್ಲರ ಜೊತೆ ತುಂಬಾ ತುಂಬಾ ಅವರ ಬಗ್ಗೆ ಹೇಳಬಹುದು ಎನ್ನುವಷ್ಟು ಸೊಗಸಾಗಿ ಬದುಕುವವರು ಪಾಟೀಲರು. ಅವರ ಸಂತತಿ ಸಾವಿರವಾಗಲಿ.
ಆರ್. ವಿಜಯರಾಘವನ್
 

Comments