ಅಮರ ಚಿತ್ರಕಥೆಗಳ ಅಮರ ನೆನಪುಗಳೂ! ಇಂದ್ರಜಾಲ ಪುಸ್ತಕಗಳ ಇಂದ್ರಜಾಲಗಳೂ!

ಅಮರ ಚಿತ್ರಕಥೆಗಳ ಅಮರ ನೆನಪುಗಳೂ! ಇಂದ್ರಜಾಲ ಪುಸ್ತಕಗಳ ಇಂದ್ರಜಾಲಗಳೂ!

ಅದೊಂದು ಸುಂದರ ಪ್ರಪಂಚ, ಚಿಣ್ಣರ ಪುಸ್ತಕಗಳಾದರೂ, ವಯಸ್ಸಿನ ತಾರತಮ್ಯವಿಲ್ಲದೇ ದೊಡ್ಡವರನ್ನೂ ಓದುಗರಾಗಿ ತನ್ನೆಡೆಗೆ ಸೆಳೆಯುತ್ತಿದ್ದ ಮಾಂತ್ರಿಕ ಪ್ರಪಂಚ, ಅದೇ ಅಮರಚಿತ್ರಕಥೆಗಳ ಕಾಮಿಕ್ಸ್ ಪ್ರಪಂಚ!! ಇಷ್ಟೊಂದು ಜನಮನ್ನಣೆ ಪಡೆದು, ವರ್ಷಾನುಗಟ್ಟಲೆ ಓದಿಸಿಕೊಂಡು, ಒಂದು ಬಾರಿ  ನಿಂತೇ ಹೋಗುವುದೇನೋ ಎಂದು ಭಯ ಹುಟ್ಟಿಸಿದ್ದವು ಅಮರ ಚಿತ್ರ ಕಥೆಗಳು ಒಮ್ಮೆಗೇ ನಾಪತ್ತೆಯಾಗಿ!

ಹೀಗೆ ಕೆಲ ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದರೂ, ಛಲ ಬಿಡದ ತ್ರಿವಿಕ್ರಮನಂತೆ, ಮಕ್ಕಳ ಇತರ ಪುಸ್ತಕಗಳ ನಡುವೆಯೂ ಮತ್ತೆ ಮೇಲುಗೈ ಸಾಧಿಸುತ್ತಿದೆ ಈ “ಅಮರ ಚಿತ್ರ ಕಥೆಗಳು. ಇವೇನೂ ನಶಿಸಿಹೋಗದಿದ್ದರೂ, ಎಲ್ಲೋ ಮರೆಯಾಗಿದ್ದಂತೂ ಖಂಡಿತ... ಈಗ ಬಿಗ್ ಬಜಾರ್, ಸಪ್ನ ಪುಸ್ತಕ ಮಳಿಗೆ ಎಲ್ಲೆಲ್ಲೂ ಪುನರ್ ಮುದ್ರಣಗೊಂಡ ಇವುಗಳದ್ದೇ ಕಾರು ಬಾರು.

 ಮಕ್ಕಳಿಗಾಗಿ ಇವನ್ನು ಕೊಂಡಾಗ, ಎಂದಿನಂತೆ ಮತ್ತೆ ಮರುಕಳಿಸಿದ್ದು ಬಾಲ್ಯದ ನೆನಪುಗಳು. ಇಷ್ಟು ದಿನ ನಾನೊಬ್ಬಳೇ ನಾಸ್ಟಾಲ್ಜಿಕ್ ಅಂದುಕೊಂಡವಳಿಗೆ ಮನೆಯ ಇತರರ ಸಾಥ್ ಕೂಡಾ ಈ ಬಾರಿ ಸಿಕ್ಕಿತು. ಎಲ್ಲರ ಮಾತಿನ ಸಾರಾಂಶ ಸುಮಾರು ಇಪ್ಪತ್ತು ವರ್ಷಗಳಷ್ಟು ಸಮಯವನ್ನ ರೀವೈಂಡ್ ಮಾಡಿದ್ದು ಸುಳ್ಳಲ್ಲ J

 ಅವೆನ್ಯೂ ರಸ್ತೆಯ ಸರಸ್ವತೀ ರತ್ನಾಕರ ಬುಕ್ ಡಿಪೋ ದಿಂದ, ಅಪ್ಪನ ಬಳಿ ಕಾಡಿ, ಬೇಡಿ ಪಡೆಯುತ್ತಿದ್ದ ದುಡ್ಡಿನಿಂದ ತರುತ್ತಿದ್ದ, ಅನಂತ ಪೈಯವರ ನೇತೃತ್ವದಲ್ಲಿ ಅಚ್ಚಾಗುತ್ತಿದ್ದ ಅಮರ ಚಿತ್ರಕಥೆಗಳು, ಇಂದ್ರಜಾಲ ಕಾಮಿಕ್ಸ್-ಗಳು, ಚಂದಮಾಮ, ಬಾಲಮಿತ್ರ, ದಿನಕ್ಕೊಂದು ಕಥೆ ಇವೆಲ್ಲಾ ಆಗ ಜೀವನದ ಅವಿಭಾಜ್ಯ ಅಂಗಗಳು ಅನ್ನಿಸಿಬಿಟ್ಟಿದ್ದಂತೂ ಉತ್ಪ್ರೇಕ್ಷೆಯಲ್ಲ! ಇವತ್ತು ಪುರಾಣ ಪಂಚತಂತ್ರಗಳ ಅಲ್ಪ ಸ್ವಲ್ಪ ತಿಳುವಳಿಕೆ ಏನಾದರೂ ಬಂದಿದ್ರೆ ಅದು ಈ ಪುಸ್ತಕಗಳಿಂದ್ಲೇ ನಿಜ. ಒಬ್ಬರ ಮೇಲೊಬ್ಬರು ಜಿದ್ದಿಗೆ ಬಿದ್ದವರಂತೆ, ಊಟ ತಿಂಡಿಯ ಸಮಯದಲ್ಲೂ ಪುಸ್ತಕ ಹಿಡಿದು ಕೂತು ಅದೆಷ್ಟು ಬಾರಿ ಬಯ್ಯಿಸಿಕೊಂಡಿದ್ದೇವೋ ಲೆಕ್ಕವೇ ಇಲ್ಲ...

 ಅಮರಚಿತ್ರಕಥೆಯಲ್ಲಿನ ಸುಂದರ ನಯನ ಮನೋಹರ ಬಣ್ಣ ಬಣ್ಣದ ಚಿತ್ರಗಳು, ಪಾತ್ರಗಳ ಮುಖಗಳಲ್ಲಿ ಅಭಿವ್ಯಕ್ತವಾಗುತ್ತಿದ್ದ ಭಾವನೆಗಳು, ಅವು ನಮ್ಮೊಡನೆಯೇ ಮಾತನಾಡುತ್ತಿವೆಯೇನೋ ಎಂಬಂತೆ ತಲ್ಲೀನಗೊಳಿಸುತ್ತಿದ್ದವು, ಒಂದು ಹೊಸ ಪ್ರಪಂಚವನ್ನೇ ಸೃಷ್ಟಿಸುತ್ತಿದ್ದವು. ರಾಮಾಯಣ ಮಹಾಭಾರತದ ಕಥೆಗಳಲ್ಲದೇ, ಪಂಚತಂತ್ರ ಹಿತೋಪದೇಶದ ಕಥೆಗಳು, ಬೀರಬಲ್, ತೆನಾಲಿರಾಮನ ಕಥೆಗಳು ಕೆಲವೊಮ್ಮೆ ಶಾಲೆಯಲ್ಲೂ ಕಲಿಸದ ಪಾಠವನ್ನು ಕಲಿಸುತ್ತಿದ್ದವು. ಉದಾತ್ತತೆ, ತ್ಯಾಗ, ತಾಳ್ಮೆ, ನಿರ್ಧರಿಸೋ ಜಾಣ್ಮೆ, ಬಲಿದಾನ, ಸ್ನೇಹ, ಪ್ರೀತಿ, ನಿಸ್ವಾರ್ಥತೆ ಇವುಗಳ ಜೊತೆ ಇನ್ನೂ ಬಹಳಷ್ಟು ಕಥೆಯ ವಿಷಯಗಳು, ನೀತಿಗಳು.

 ಅಮರ ಚಿತ್ರಕಥೆಗಳಂತೇ ಇಂದ್ರಜಾಲವನ್ನು ಸೃಷ್ಟಿಸಿದ್ದು ಇಂದ್ರಜಾಲ  ಕಾಮಿಕ್ಸ್ ಗಳು, ಇವುಗಳದ್ದೇ ಇನ್ನೊಂದು ಮಾಯಾ ಲೋಕ, ಫ್ಯಾಂಟಮ್ ಅವನ ಹಿಂದಿನ ೨೧ ತಲೆಮಾರುಗಳು,ಅವನ ಹ್ಯಾಮ್ ರೇಡಿಯೋ, ತಲೆಬುರುಡೆಯಂಥಾ ಮನೆಯ ಆರಂಭದಲ್ಲಿ ದೊಡ್ಡ ಜಲಪಾತ, ಫಿರಾನ್ಹಾ ಮೀನುಗಳು, ಢೋಲಿನ ಸದ್ದಿನಿಂದ ಕಳುಹಿಸಿತ್ತಿದ್ದ ಸಂದೇಶಗಳು, ಫ್ಯಾಂಟಮನ ಹೊಡೆತದ ಪ್ರಭಾವದಿಂದ ಮೂಡುತ್ತಿದ್ದ ತಲೆಬುರುಡೆಯ ಗುರುತು, ಅವನ ನಾಯಿ ಜಟ್ಟಿ,............. ಮಾಂಡ್ರೇಕ್, ನಾರ್ದಾ, ಅಷ್ಟಮರು, ಇವರು ವಾಸಿಸುತ್ತಿದ್ದ ಮನೆಗಳು,ಆಗಲೇ ಅದ್ರಲ್ಲಿ ಸಿಸಿಟಿವಿ, ಮಾಂಡ್ರೇಕನ ಇಂದ್ರಜಾಲಗಳು, ಇವರೇ ಅಲ್ಲದೇ, ಬಹಾದ್ದೂರ್,ಬುಜ್ ಸಾಯರ್, ರಿಪ್ ಕಿರ್ಬಿ ಇವರ ಕಥೆಗಳು ಹೊರಜಗತ್ತಿನ ಕಿಂಡಿಗಳೇ ಆಗಿದ್ದವು. ನಿಜಕ್ಕೂ, ಓದಿದ ಎಷ್ಟೋ ಹೊತ್ತಿನ ನಂತರವೂ ಮನದಲ್ಲೇ ಗಿರಕಿ ಹೊಡೆಯುತ್ತಿದ್ದ ಪಾತ್ರಗಳು ಇವು. ಈ ಪುಸ್ತಕಗಳೇಕೆ  ಪುನರ್ಮುದ್ರಣವನ್ನೇಕೆ ಕಂಡಿಲ್ಲವೋ ಅರಿಯೆ:-(

 ಫ್ಯಾಂಟಮ್, ಮಾಂಡ್ರೇಕ್ ಕತೆಗಳಿಗಾಗಿ ಕಾದು ಕೂರೋ ಆಸಕ್ತಿ. ಕಥೆಯೇನಾದ್ರೂ ಮೂರು ಭಾಗಗಳಲ್ಲಿ ಬಂದ್ರೆ ಇನ್ನೊ ಒಂದು-ಎರಡು ತಿಂಗಳು ಕಾಯಬೇಕಲ್ಲಾ ಎಂಬ ಆತಂಕ! ಗ್ರಂಥಾಲಯಗಳಿಂದ ತಂದು ಓದುವ ಪುಸ್ತಕ ಗಳಲ್ಲಿ ಇವುಗಳದ್ದೇ ಹಿರಿಪಾಲು,

 ಆಸ್ಟ್ರಿಕ್ಸ್ ಮತ್ತು ಒಬೆಲಿಕ್ಸ್ , ಟಿಂಕಲ್ ಮೊದಲಾದ ಪುಸ್ತಕಗಳನ್ನು ಕೈಗೆತ್ತಿಕೊಂಡು ಪುಟ ತೆರೆಯುವಾಗ, ಎಲ್ಲಿ  ಹರಿಯುತ್ತದೆಯೋ ಈ ದುಬಾರಿ ಪುಸ್ತಕ ಎಂಬ ಜಾಗ್ರತೆ, ಎಂಥಾ ಒಡ್ಡರಿಗೂ ನಾಜೂಕಿನಿಂದ ಪುಟ ತೆಗೆಯಲು  ಹಿರಿಯರಿಂದ ಆದೇಶ!

 ಆಗಿನ ಕಾಲದಲ್ಲೇ ದುಬಾರಿ ಎನ್ನಿಸಿದ್ದ ಈ ಪುಸ್ತಕಗಳನ್ನ ನೋಡಿಕೊಂಡಿದ್ದು ಒಬ್ಬೊಬ್ಬರು ಒಂದೊಂದು ವಿಧದಲ್ಲಿ, ಕಡ ಕೇಳಿ ಹಿಂತಿರುಗಿಸದವರಿಂದ ಅಥವಾ ಕೇಳದೇ ತೆಗೆದುಕೊಳ್ಳುವ ಅತಿಥಿಗಳಿಂದ ಪುಸ್ತಕಗಳನ್ನು ಬಚಾವು ಮಾಡಲು ಕೆಲವರು ಸೂಟ್ ಕೇಸಿನಲ್ಲಿಟ್ಟು ಜಾಗ್ರತೆ ಮಾಡಿದರೆ, ಪುಸ್ತಕಗಳನ್ನೆಲ್ಲಾ ಸುಂದರವಾಗಿ ಬೈಂಡ್ ಮಾಡಿಸಿ ಮುಂದಿನ ಓದುವಿಕೆಗಳಿಗಾಗಿ ಆಸ್ತಿಯಂತೆ ಕಾಪಿಡುವವರು ಕೆಲವರು.

 ಅಪರೂಪಕ್ಕೆ ಮನೆಗೆ ಬಂದು ಚಿಕ್ಕ ಮಕ್ಕಳು ಸವಿ ಮಾತನಾಡದೇ ಓದಲು ಕುಳಿತುಕೊಳ್ಳುವರೆಂಬ ಕೋಪದಿಂದ ಪುಸ್ತಕಗಳನ್ನು ಕಪಾಟುಗಳಲ್ಲಿ ಭದ್ರ ಮಾಡುವ ಹಿರಿಯಕ್ಕಂದಿರು. ಕಾಮಿಕ್ಸಗಳನ್ನು ಓದಿ ಓದಿ, ಫ್ಯಾಂಟಮನ ಫ್ಯಾಂಟಸಿ ಪ್ರಪಂಚದಲ್ಲೇ ತೇಲುವವರು ಕೆಲವರು.

 ಇವೆಲ್ಲದರ ನಡುವೆ ಗಮನಾರ್ಹವೆಂದರೆ ಹೀಗೆ ಪುಸ್ತಕ ಪ್ರಪಂಚದಲ್ಲಿ ಮುಳುಗಿದ ಇವರೆಲ್ಲರೂ ಕೇವಲ ಪುಸ್ತಕದ ಹುಳುಗಳಾಗದೇ, ಶಾಲೆಯ ಆಟ-ಪಾಠಗಳಲ್ಲೂ ಸಹ ಅಷ್ಟೇ ಆಸಕ್ತಿಯಿಂದ ಪಾಲ್ಗೊಂಡು ಉತ್ತಮ ಅಂಕಗಳನ್ನು ಗಳಿಸುತ್ತಿದ್ದುದು.

 ಇಂದಿನ ಮಕ್ಕಳ ಓದಿನ ಹವ್ಯಾಸ ಕಮ್ಮಿಯಾಗಿದೆಯೆಂದು ದೂರುವವರು, ಈಗಿನ ಮಕ್ಕಳಿಗೆ ಈಗಿರುವ ಮತ್ತು ನಮಗಿದ್ದ ಆಗಿನ  ಪರಿಸ್ಥಿತಿಯನ್ನ ಅರ್ಥೈಸಿಕೊಳ್ಳಲೇಬೇಕು,

 ಶಾಲೆಯಿಂದ ನೇರವಾಗಿ ಮನೆಗೆ ಬಂದು, ಇದ್ದ ಕೊಂಚ ಹೋಮ್ ವರ್ಕ್ ಪೂರೈಸಿ, ಆಡಿದ ನಂತರವೂ ಢಾಳಾಗಿ ಬಿದ್ದಿರುತ್ತಿದ್ದ ಸಮಯ ಪುಸ್ತಕಗಳನ್ನು ಓದಲು ಪ್ರಚೋದಿಸುತ್ತಿತ್ತು, ಕೇಬಲ್ ಟೀವಿಯ ಹಾವಳಿಯಿಲ್ಲದೇ, ನಮ್ಮ ದೂರದರ್ಶನದಲ್ಲಿ, ಇದೀಗ ದೆಹಲಿಗೆ / ಅಡಚಣೆಗಾಗಿ ಕ್ಷಮಿಸಿ ಗಳ ನಡುವೆ ವಾರಕ್ಕೊಮ್ಮೆ ಬರುತ್ತಿದ್ದ ಚಿತ್ರಹಾರ್, ಚಿತ್ರಮಂಜರಿ, ಹೀ ಮ್ಯಾನ್, ವಿಕ್ರಮ್ ಔರ್ ಭೇತಾಲ್, ದಾದಾ ದಾದೀ ಕೀ ಕಹಾನಿಯಾ, ರಾಮಾಯಣ, ಮಹಾಭಾರತ ಗಳ ಆರ್ಕರ್ಷಣೆಯಿದ್ದರೂ ದಿನದ ಬಹಳಷ್ಟು ಸಮಯ ಇಂಥಾ ಓದಿಗಾಗಿ ಮೀಸಲಿರುತ್ತಿತ್ತು. ಅಕ್ಕಪಕ್ಕದ ಮನೆಯಲ್ಲಿ, ಸ್ನೇಹಿತರ ಮನೆಯಲ್ಲಿ ,ಎಲ್ಲ ಕಡೆಯಿದ್ದರೂ ನಮ್ಮ ಮನೆಗಂತೂ ಮನೆಗೆ ಕೇಬಲ್ ಟಿ.ವಿ. ಬಂದಿದ್ದೇ ನನ್ನ ಪದವಿ ದ್ವಿತೀಯ ವರ್ಷದಲ್ಲಿ.

 ಆದರೆ ಈಗಿನ ಸ್ಪರ್ಧಾತ್ಮಕ-ಧಾವಂತದ ಯುಗದಲ್ಲಿ ದುಡಿಯುವ ಅಪ್ಪ ಅಮ್ಮಂದಿರ ಮಕ್ಕಳು ಗೂಡು ಸೇರುವುದೇ ೮ ಗಂಟೆಯ ನಂತರ, ಶಾಲೆಯ ಕೆಲಸ ಪೂರೈಸುವಷ್ಟರಲ್ಲಿ ಊಟ, ನಿದ್ದೆ, ಅವ್ಯಾಹತವಾಗಿ ಟೀವಿಯ ಠೀವಿ. ಅತಿಯಾದರೆ ಅಮೃತವೂ ವಿಷ ಅನ್ನೋ ಹಾಗೆ, ಟಿವಿ ಕಾರ್ಯಕ್ರಮಗಳನ್ನು ಕೂಡ, ನಾವು ಆಗ ಮಾಡಿದಷ್ಟು ಅವರು ಎಂಜಾಯ್ ಮಾಡಲೂ ಆಗುತ್ತಿಲ್ಲ... ಇದರ ನಡುವೆಯೂ ಸಮಯದ ಸದುಪಯೋಗ ಮಾಡಿ ಮಕ್ಕಳಿಗೆ ಓದುವ ರುಚಿ ಹತ್ತಿಸಿದರೆ ನಾವು ಚೂರೇ ಚೂರು ಗೆದ್ದಂತೆ!

 ಒಟ್ಟಿನಲ್ಲಿ ಕೊನೆಗೆ ಆಗುತ್ತಿರುವುದೆಲ್ಲಾ ಒಳ್ಳೆಯದಕ್ಕೇ ಅಂದುಕೊಂಡು, ಮತ್ತೆ ಬಂದ ಅಮರ ಚಿತ್ರಕಥೆಗಳನ್ನು ಮಕ್ಕಳೊಡನೆ ನಾವೂ ಸೇರಿ ಓದಿ, ಹಳೆಯ ನೆನಪುಗಳನ್ನ ಮೆಲುಕು ಹಾಕುತ್ತಾ, ಜೀವನವನ್ನ ಸುಲಭವಾಗಿ ಸ್ವೀಕರಿಸುವ ನಿರ್ಧಾರ ತಳೆದು(!!??), ಅಮರ ನೆನಪುಗಳನ್ನ ಬ್ಲಾಗಿಸಿದೆ.

Rating
No votes yet

Comments