ಸನ್ಮಾನ್ಯ ಡಾ ಎಚ್ ಎಸ್ ವೆಂಕಟೇಶ ಮೂರ್ತಿಯವರ ಕನ್ನಡಿಯ ಸೂರ್ಯ

ಸನ್ಮಾನ್ಯ ಡಾ ಎಚ್ ಎಸ್ ವೆಂಕಟೇಶ ಮೂರ್ತಿಯವರ ಕನ್ನಡಿಯ ಸೂರ್ಯ

ಕನ್ನಡಿಯ ಸೂರ್ಯ    ಎಚೆಸ್ವೀಯವರ ಇತ್ತೀಚೆಗಿನ ಕವನ ಸಂಕಲನ
 

          

 

 

 



ಮಹಾಭಾರತ ರಾಮಾಯಣದ ಒಂದೊಂದೇ ಪಾತ್ರಗಳು ನಮ್ಮ ದಿನ ನಿತ್ಯದ ಆಗುಹೋಗಿನಲ್ಲೂ ಪಾತ್ರವಹಿಸಿಬಿಡುತ್ತವೆ ಸುಮ್ಮನೆ. ಹಕ್ಕಿ ಹಿಡಿಯುತ್ತಿರುವ ನಳ, ಅಡಿಗೆ ಮನೆಯ ಪಾಂಚಾಲಿ, ಮರದಿಂದ ಕೆಳಕ್ಕೆ ಬೀಳುವ ದುರು, ತಲೆಗೆಣ್ಣೆ ತೀಡುವ ಅಮ್ಮ, ನಮ್ಮ ದೈನಂದಿನ ಚಟುವಟಿಕೆಗಳ ಜತೆಯಲ್ಲೇ ಸಾಗಿ ಥಟ್ಟನೆ ನಮ್ಮನ್ನು ಬೆಚ್ಚಿ ಬೀಳಿಸುವ, ದೃವಿಸುವ, ವಿಲವಿಲನೆ ಒದ್ದಾಡಿಸುವ ಶಕ್ತಿಯುಳ್ಳ ಕವಿತೆಗಳಿವು. ಸುಮಾರು ಒಂದೂವರೆ ವರುಷದ್ದಷ್ಟೇ ನನ್ನ ಮತ್ತು ಸನ್ಮಾನ್ಯ ಗುರುಗಳ ಸಂಭಂಧ. ಆದರೆ ಈಗ ಅದೆಷ್ಟೋ ಹಿಂದಿನಿಂದಲೂ ಇದ್ದ ಹಾಗೆ ಆತ್ಮೀಯವಾಗಿ ದಟ್ಟೈಸಿದೆ ನನ್ನಲ್ಲಿ. ಒಮ್ಮೊಮ್ಮೆ ನನಗಚ್ಚರಿಯ ಜತೆ ತಡೆಯಲಾರದಷ್ಟು ಸಂತಸವೂ ಜಿನುಗಿ ಬಿಡುತ್ತದೆ ಅವರ ಹತ್ತಿರದವನೆನ್ನುವ ಭಾವ ಬರುತ್ತಿದ್ದಾಗಲೆಲ್ಲ, ಮತ್ತು ಅವರ ಹತ್ತಿರ ಕುಳಿತು ಕಳೆಯಲವಕಾಶ ಸಿಕ್ಕಿದಾಗಲೆಲ್ಲಾ. ಹೀಗೇ ಲೋಕಾಭಿರಾಮವಾಗಿ ಕುಳಿತು ಮಾತನಾಡುತ್ತಿರಬೇಕಾದರೆ ಕನ್ನಡಿಯ ಸೂರ್ಯನ ಬಗ್ಗೆ ಬರೆಯಿರಿ ಎಂದರು. ನಾನೂ ಹಿಂದೆ ಮುಂದೆ ಯೋಚಿಸದೇ ಹ್ಞೂಂ ಅಂದು ಬಿಟ್ಟೆ. ಆಗ ಪ್ರಾಯಶಃ  ನಾನು ನನ್ನ ಮೇಲಾಧಿಕಾರಿಗಳ ಆರ್ಡರ್ ತೆಗೆದುಕೊಳ್ಳುತ್ತಿರುವ ಯೋಧನೋ,ಇಲ್ಲಾ ಮೊದಲ ಬೆಂಚಿನಲ್ಲೇ ಸದಾ ಮೊದಲಿಗನಾಗಿ ಕುಳಿತಿರಬಯಸುವ ಉಡುಪರ ಪಟ್ಟದ ಶಿಷ್ಯನೋ ಆಗಿದ್ದೆ ಅನ್ನಿಸುತ್ತಿದೆ.


ಎಚೆಸ್ ವೀಯವರ ಕವನಗಳು ತುಂಬಾ ಆಪ್ತವಾಗಿದ್ದು ನಮ್ಮೊಡನೆ ನೇರ ಸಂಭಂಧ ಕಲ್ಪಿಸಿಕೊಳ್ಳುತ್ತವೆ. ಕವನಗಳು ಪುರಾತನ ಪರಂಪರೆಯಾದ ರಾಮಾಯಣ ಮಹಾ ಭಾರತಗಳ ಪಾತ್ರಗಳನ್ನು ಹೊಂದಿದ್ದರೂ ಎಲ್ಲಿಯೋ ಪ್ರಾಚೀನವಾಗಿ ನಡೆಯುಂತವುಗಳಲ್ಲ, ಇವುಗಳು ಇಲ್ಲಿಯೇ ನಮ್ಮ ನಿಮ್ಮೆಲ್ಲರ ನಡುವೆಯೇ ನಡೆಯುವಂತಹ ಘಟನೆಗಳೇ ಆಗಿರುವ ಹಾಗೆ ಅನ್ನಿಸಿ ಬಿಡುತ್ತವೆ ಇವರ ಕವಿತೆಗಳನ್ನು ಓದುವಾಗ. ಕೃಷ್ಣ, ಅರ್ಜುನ, ಕುಂತಿ ರಾಮ ಲಕ್ಷ್ಮಣ, ಸೀತೆ ಹನುಮಂತ ,ಭರತ ಮುಂತಾದವರು ನಮ್ಮ ನಡುವೆಯೇ ಇದ್ದವರು ಎನ್ನುವ ಭಾವನೆ ಬರುತ್ತದೆ. ಅಷ್ಟೆ ಏಕೆ, ಹಲಕೆಲವೊಮ್ಮೆ ನಾವೇ ಈ ಕವಿತೆಗಳಲ್ಲಿನ ಪಾತ್ರದೊಳಗೊಂದಾಗಿ  ನಮಗರಿವಿಲ್ಲದಂತೆ ಅದರಲ್ಲಿ ಮುಳುಗಿ ಎದ್ದಿರುತ್ತೇವೆ. ಕೆಲವೊಂದು ಕವಿತೆಗಳು ನಮ್ಮನ್ನು ದೃವಿಸಿ ಬಿಡುತ್ತವೆ. ಈ ಕವಿತೆಗಳಲ್ಲಿ ಅಂತಹದ್ದೇನಿದೆಯಪ್ಪಾ ಅನ್ನಿಸುವಂತೆ ನಮ್ಮನ್ನು ಅವುಗಳೊಡನೆಯೇ ಆಪ್ತವಾಗಿಸಿಬಿಡುತ್ತವೆ, ಅವರ ವ್ಯಕ್ತಿತ್ವದಂತೆ. ಹಲವೊಂದು  ಚಿಂತನೆಗೊಳಪಡಿಸುತ್ತವೆಯಾದರೆ ಇನ್ನು ಕೆಲವು ಹಲವು ಕಾಲ ಕಾಡುತ್ತವೆ.  ಕೆಲವು ಕವಿತೆಗಳು ಅವರ ಹಲವು ಮಾಹಾನುಭಾವರೊಡಗಿನ ಸಂಭಂಧದ ಅನಿಸಿಕೆಗಳಾದರೆ. ಕೆಲವು ಕಥನ ಕಾವ್ಯಗಳು. ಇನ್ನುಳಿದವು ಪ್ರಕೃತಿಯೊಡನೆ ಮನುಜನ ಅನೂಚಾನ ಗುದ್ದಾಟದ ಫಲಶೄತಿಯಾಗಿದ್ದು ಎಚ್ಚೆಸ್ವೀಯವರ ನೇರ ಶೈಲಿಯಲ್ಲಿದ್ದು ಮನಸ್ಸಿಗೆ ಹೃದಯಕ್ಕೆ ನೇರ ರಾಚುತ್ತ ನಾಟುವವು.

ನಾನೇನು ಕವಿಯಲ್ಲ ವಿಮರ್ಶಕನೂ ಅಲ್ಲ, ಡಾ ಎಚ್ ಎಸ್ ವೀಯವರ ಕವಿತೆಗಳನ್ನು ವಿಮರ್ಶೆ ಮಾಡುವಷ್ಟು ಕಲಿತೂ ಇಲ್ಲ. ಇದು ನನ್ನ ಮನಸ್ಸಿನ ಭಾವನೆಯಷ್ಟೆ. ಅವರ ಈ ಸಂಕಲನ ಓದಿದಾಗ, ಓದುತ್ತಿರುವಾಗ, ಓದಬೇಕೆನಿಸುವಾಗ  ನನಗನಿಸಿದ ಭಾವನೆಗಳ ಯಥಾ ನಕಲಿದು ಅಷ್ಟೇ.ಎಚ್ಚೆಸ್ವೀಯವರ ಕವಿತೆಗಳನ್ನು ಪ್ರತೀ ಸಾರಿ ಓದುವಾಗಲೂ ನನಗೆ ಹೊಸ ಹೊಸ ಅರ್ಥ ಸ್ಪುರಿಸುತ್ತಿರುತ್ತವೆ. ಈ ಸಂಕಲನದ ಎಲ್ಲಾ ಕವಿತೆಗಳ ಬಗೆಗೂ ಬರೆಯುವುದೆಂದರೆ ಕಷ್ಟ ಸಾಧ್ಯ. ಆದರೂ ಪ್ರಯತ್ನಿಸುತ್ತಿದ್ದೇನೆ.




ಸುಬ್ರಾಯ ಚೊಕ್ಕಾಡಿಯವರ ಸ್ಪಷ್ಟ  ಆತ್ಮೀಯ ಮುನ್ನುಡಿ ಗುರುಗಳ ಬಗೆಗಿನ ನಮ್ಮ ಗೌರವ ಹೆಚ್ಚಿಸಿದರೆ, ರಾಘವೇಂದ್ರ ಪಾಟೀಲರ  ಮಾತುಗಳು
ಕೈಯ್ಯಿಗೆ ದೂರ ಕರುಳಿಗೆ ದೂರವೇ ಕರುಣಾ ಸಾಗರಗೆ ಎನ್ನುವ ಸಾಲುಗಳಲ್ಲಿನ ತುಡಿತ ಎಚ್ಚೆಸ್ವೀಯವರ ಕಾವ್ಯದ ತುಡಿತವೆನ್ನುತ್ತವೆ.
ಎಚ್ಚೆಸ್ವೀಯವರೇ ಸಾಹಿತ್ಯದ ಕವಿತೆಯ ಕವಿಗಳ ಕೃಷಿಯ ಬಗೆಗೂ ಹೇಳುತ್ತಾ ತಮ್ಮ ಪ್ರಧಾನ ಆಶಯವನ್ನು ತಿಳಿಸುತ್ತಾರೆ.





ಅಂಕಿ ಅಂಶಕ್ಕಾಗಿ

ಪುರಾಣ ಕಥೆಗಳ ಪಾತ್ರ ಸನ್ನಿವೇಶಗಳನ್ನು ಸಮಕಾಲೀನವಾಗಿಸಿಕೊಂಡು ನಮ್ಮೆದುರಲ್ಲಿಡುವಂತಹ ಕೌಶಲದ ಕವಿತೆಗಳನ್ನು ಹೆಚ್ಚಾಗಿಯೇ ಈ ಸಂಕಲನದಲ್ಲಿ ಕಾಣಬಹುದು.
ಇದರಲ್ಲಿ ೪೪ ಕವನಗಳೂ ಬೋನಸ್ಸಾಗಿ ೧೮ ಗೀತೆಗಳೂ ಇವೆ, ಈ ಗೀತೆಗಳಲ್ಲಿ ಯಶೋದ (೫) ರಾಧ(೪) ರುಕ್ಮಿಣಿ ಸತ್ಯಭಾಮ (೫) ಮತ್ತು ದ್ರೌಪದಿ( ೪) ಹಾಡುಗಳಿವೆ.


ಸಂಕಲನದ ಮೊದಲ ೪೪ ಕವಿತೆಗಳಲ್ಲಿ ಅವರು ಬದುಕಿನ ದ್ವಂದ್ವಗಳನ್ನು ಪುರಾಣಗಳ ಚೌಕಟ್ಟಿನಲ್ಲಿಳಿಸಿದ ಕವಿತೆಗಳ ಸಂಖ್ಯೆ ೧೫, ಮನುಷ್ಯನ ಅಂತಕರಣದ ಬಗೆಗೆ, ಪ್ರಕೃತಿಯ ಬಗೆಗೆ ಬರೆದ ಕವಿತೆಗಳು ಹಲವು, ತನ್ನೊಳಗಿನ ದ್ವಂದ್ವ , ಸ್ಮೃತಿ, ಚಿಂತನೆ, ಮಂಥನೆಗಳ ಬಗೆಗೆ, ಕಂಬಾರರು, ಪುತಿನ, ರಾಘವೇಂದ್ರ ಪಾಟೀಲರು, ಡಾ ನರಹಳ್ಳಿಯವರು,  ಡಾ ಮೂರ್ತಿ, ತಮ್ಮ ಪತ್ನಿ, ಮುಂತಾದವರ ಬಗೆಗಿನ ತಮ್ಮ ಅನಿಸಿಕೆಯ ಭಾವದ ಹರವಿದೆ ಇನ್ನು ಕೆಲವು ಕವಿತೆಗಳಲ್ಲಿ.

ಮೊದಲಿನ ಕವನ ಹಕ್ಕಿ ಮತ್ತು ನಳ ಕವಿತೆ( ಹಕ್ಕಿ) ಹಿಡಿಯುವ ಕಾಯಕದ ನಳ( ಕವಿ) ತನ್ನ ಕಾಯಕವನ್ನು ಹೇಗೆ ಮತ್ತು ಎಷ್ಟು ಶೃದ್ಧೆಯಿಂದ ಮಾಡಬೇಕು ಅನ್ನುವುದನ್ನು ನಮ್ಮ ಒಳಗಿರುವ ನಳನನ್ನು ಎಚ್ಚರಿಸುತ್ತಿರುವಂತಿದೆ. ಕಣ್ಣಿಗೆ ಕಟ್ಟುವಂತಿರುವ ಅವರ ನೇರ ಆಪ್ತ ಬರವಣಿಗೆ. ಪುರಾಣದ ನಳ ತನ್ನ ರಾಜ್ಯ ಕೋಶ ಬಿಟ್ಟು ದಮಯಂತಿಯೊಡನೆ ಉಟ್ಟ ಬಟ್ಟೆಯಲ್ಲೇ ಹೊರ ಹೊರಟ ಸ್ಥಿತಿಯನ್ನು ಕವನ ಜ್ಞಾಪಿಸುತ್ತದಾದರೂ ಈ ನಳನ ಮತ್ತು ನಮ್ಮ ಈಗಿನ ಕವಿಗಳ ಮತ್ತು ಕವಿತೆ ಹಾಗೂ ಹಕ್ಕಿಯ ನಡುವೆಯೇ ಇರುವ ಸಾಮ್ಯ  ಗಮನಿಸುವಂತಿದೆ. ಕೊನೆಯ ಪಂಕ್ತಿಗಳು ಹೀಗಿವೆ

ಕವಿತೆ ಹಿಡಿಯುವದಕ್ಕೆ ಹೀಗೆ ಉಟ್ಟ ಬಟ್ಟೆ ಬಿಚ್ಚಿ
ನಿಲ್ಲ ಬೇಕು ಹುಟ್ಟು ರೂಹಲ್ಲಿ. ಬೀಸಬೇಕು ಬಲೆ
ಹಾರುವ ಹಕ್ಕಿಯ ಹಿಂಡಿನ ಮೇಲೆ. ಸಿಕ್ಕರೆ
ಒಂದೋ ಎರಡೋ ಹಕ್ಕಿ ಬಟ್ಟೆ ಬಿಚ್ಚಿದವನ ಭಾಗ್ಯ.

ಅಕಸ್ಮಾತ್ ಹಕ್ಕಿಗಳೇ ಎತ್ತೊಯ್ದರೆ ಉಟ್ಟಿದ್ದೇಕ ವಸ್ತ್ರ
ನಿಲ್ಲಬೇಕು ಬರೀ ಕತ್ತಲಲ್ಲೇಕಾಕಿ
ನೋಡುತ್ತಾ ಬಾನಲ್ಲಿ ಕರಗುತ್ತಿರುವ ರಂಗವಲ್ಲಿ ಚುಕ್ಕಿ. ಬತ್ತಲಾದರೂ
ಗ್ಯಾರಂಟಿಯಿಲ್ಲ ಸಿಕ್ಕೇ ಸಿಕ್ಕಿತೆಂದು ಬಟ್ಟಂಬಯಲಲ್ಲಾಡುವ ಪುಟ್ಟ ಹಕ್ಕಿ.

ನಿರ್ಗಮನದಲ್ಲಿ ಅಯೋಧ್ಯೆ ಮತ್ತು ಮಧುರೆಯ ಘಟನಾವಳಿಯ ಸಾಲುಗಳು ರಾಮ ಕೃಷ್ಣರ ಜೀವನವನ್ನು ಸಂಕ್ಷಿಪ್ತವಾಗಿ ತಿಳಿಸುತ್ತಾ ಕೊನೆಯಲ್ಲಿ ಪ್ರಕೃತಿ ಮನುಜರ ಕದನದ ಪ್ರತೀಕವೆಂಬಂತೆ ಈಗಿನ ಸಮಾಜ, ಸನ್ನಿವೇಶವನ್ನೂ ಬತ್ತಲು ಮಾಡುತ್ತಾ ಅವರ ಕೊನೆಯನ್ನು ಕಣ್ಣಿಗೆ ಕಟ್ಟುತ್ತದೆ ಮಾರ್ಮಿಕವಾಗಿ.

ಜತೆಗೆ ಅವಧಾ ತಾಯಿ ಚಿಂದಿ ಸೀರೆ ಭಿಕಾರಿ, ಪ್ರೇಮ
ಮಯಿ ರಾಧೆಯವಧೆಯರ ಕಂಬನಿಯೊರೆಸಿ ಅಂಗಿ ಚುಂಗಿಂದ
ಎಬ್ಬಿಸಿ ಮೇಲೆ, ನಟ್ಟಿರುಳಲ್ಲಿ ಕೊಂಡೊಯ್ದರವರನ್ನ
ರಾಮಕೃಷ್ಣರು , ಸಾಕಿನ್ನ ನಿಮಗೆ ಮಣ್ಣಿನ ನೆರೆಯೆಂದು
ನಿಟ್ಟುಸಿರು ಬಿಡುತ್ತ, ದಕ್ಷಿಣೇಶ್ವರದತ್ತ, ಸಾತ್ವಿಕರ ಮಾನಸದ
ಧ್ಯಾನಮೌನದ ನಗ್ನ ನೆರಳ ಕಡೆಗೆ....

ಸಂಕಲದ ಶೀರ್ಶಿಕೆ ಗೀತೆಯನ್ನು ಓದುತ್ತಿದ್ದರೆ ಕನ್ನಡಿಯ ಸೂರ್ಯ  ಪ್ರಖರ ಸೂರ್ಯನನ್ನೇ ನಮ್ಮ ಮನದಾಳದಲ್ಲಿಟ್ಟು ನಾವೇ ದೃವಿಸಿ ಹೋಗುತ್ತೇವೆ, ವಿಧವೆ ಅಮ್ಮ ತನ್ನ ಹಣೆಯಲ್ಲಿ ಕುಂಕುಮ ವಿಟ್ಟುಕೊಳ್ಳಲಾಗದೇ ಆ ಮನಸ್ಸನ್ನು ಕನ್ನಡಿಯ ಮೇಲೇ ಸೂರ್ಯನಂತೆ ದುಂಡಗೆ ಕುಂಕುಮ ತಿದ್ದುವುದರ ಮೂಲಕ ಸಂತೈಸಿಕೊಳ್ಳುವ ದಾರುಣತೆ ನಮ್ಮನ್ನು ವಿಲವಿಲನೆ ಒದ್ದಾಡಿಸಿ ಬಿಡುತ್ತದೆ.

ಬೋಳುಗನ್ನಡಿ ತೊಟ್ಟಿಕ್ಕುವ ಮಳೆ
ಇನ್ನೂ ಹದಿನೆಂಟು ತುಂಬದ ನನ್ನ ಅಮ್ಮ
ಮಳೆನಿಂತು ತೊಳೆದ ಕನ್ನಡಿಯಂತ ಆಕಾಶ
ತನ್ನ ಮುಖವನ್ನೇ ನೋಡುತ್ತಾ ಮೆಲ್ಲಗೆ ಅಮ್ಮ
ತಿದ್ದಿದಳು ಕನ್ನಡಿಯಲ್ಲಿ ದುಂಡಗೆ ಹೊಳೆವ
ಸೂರ್ಯನ್ನ.

 

(ಮುಂದುವರಿದುದು)

 

Comments