ನೆನಪಿನ ಚಿತ್ರಕಲಾ ಶಾಲೆ: ಭಾಗ ೧೧--ಕಾಲದ ಯು-ಟರ್ನ್

ನೆನಪಿನ ಚಿತ್ರಕಲಾ ಶಾಲೆ: ಭಾಗ ೧೧--ಕಾಲದ ಯು-ಟರ್ನ್

 

(೨೯)
 ಸೋಕು ಅಥವ ಕಲಾ.ಕೆ, ೨೦೧೧: 
 
೫ನೇ ಸೆಪ್ಟೆಂಬರ್ ೧೯೮೮, ಹೆಸರಲ್ಲೇನಿದೆಮಹಾ, ಓನಾಮಿ ಕುಟ್ಟಿ ಅಡಿಯಾರ್ ಮತ್ತು ಶೃತಿ ಮೆಹ್ತಾ, ಈ ನಾಲ್ಕು ಪದಗಳು: ಒಂದು ದಿನಾಂಕ, ಒಂದು ಅನಾಮಿಕ ನಾಮಧೇಯ, ಇಬ್ಬರು ಆರೋಪಿತ (ಸೂಡೋನಿಮ್) ಹೆಂಗಸರ ಹೆಸರುಗಳು ಸಾಕಷ್ಟು ತಲೆನೋವಿನ ಸಾಮಗ್ರಿಯಾಗಿದ್ದವೇ ಹೊರತು ನನಗೆ ತಲೆನೋವೇನೂ ಬಂದಿರಲಿಲ್ಲ. ನನ್ನಲ್ಲಿ ಸಮಸ್ಯೆಗಳು ತಲೆನೋವಿಗೆ ಮೂಲವಾಗಲು ಸಾಧ್ಯವೇ ಇರಲಿಲ್ಲವೆಂದು ಎದೆ ತಟ್ಟಿ ಹೇಳಲಾರೆ. ಆದರೆ ಭೌತಿಕವಾಗಿ ಬರುತ್ತಿದ್ದ ಪಿತ್ಥ ತಲೆನೋವು ಮಾತ್ರ ನನಗೊಂದು ವಿಶೇಷ ವ್ಯಕ್ತಿತ್ವವನ್ನೇ ತಂದುಕೊಟ್ಟಿತ್ತು. ಸಿಗರೇಟು-ಟೀಗಳ ಸಹವಾಸದ ಪರಿಣಾಮವದಾಗಿದ್ದು, ನಾನು ಗಂಡಾಗಿದ್ದಿದ್ದಲ್ಲಿ ಇನ್ನೂ ಹೆಚ್ಚು ಸೇವಿಸುತ್ತಿದ್ದೆ ಅವುಗಳನ್ನು. ಬಹಿರಂಗವಾಗಿ ಬತ್ತಿ ಹೊಡೆಯುವುದು ಸಾಧ್ಯವಿಲ್ಲದಿದ್ದರಿಂದಲೇ ಎಷ್ಟೋ ಪಟ್ಟು ಸಿಗರೇಟನ್ನು ಕಡಿಮೆಗೊಳಿಸಿದ್ದೆ. ಉಂಬರ್ಟೋ ಈಕೊನ ಲೇಖನವಿದೆಯಲ್ಲಿ, ದಿನಕ್ಕೆ ೮೦ ಸಿಗರೇಟು ಸೇದುವ ಆ ಲೇಖಕ ಮಹಾಶಯ, ಯಾವ್ಯಾವ ಸಂದರ್ಭಗಳಲ್ಲಿ ಬತ್ತಿ ಸೇದುತ್ತಾನೆ, ಅದರಿಂದ ಏನೇನು ಸ್ಪೂರ್ತಿ ಬರುತ್ತದೆ ಎಂದು ಹೇಳುತ್ತ, ಬತ್ತಿ ಹೊಡೆವುದನ್ನು ನಿಲ್ಲಿಸಬೇಕು ಎಂದುಕೊಂಡು, ಆಸಾಮಿ ಸಾಕ್ಷಾತ್ಕಾರದ ಹಾದಿಯಲ್ಲಿ ತಲೆಕೆಡಿಸಿಕೊಂಡು ಆ ಟೆನ್ಶನ್ನಿನಲ್ಲೇ ಮತ್ತೊಂದು ಬತ್ತಿ ಹೊಡೆಯುತ್ತಾನೆ.

 

 
ಸುಮ್ಮನೆ ತಮಾಷೆಯಾಗಿ ಗಂಭೀರವಾಗಿ ಯೋಚಿಸತೊಡಗಿದೆ. ತಮಾಷೆಯಾಗಿ ಮತ್ತು ಗಂಭೀರವಾಗ ಚಿಂತಿಸುವ, ಅವೆರಡರ ನಡುವೆ ಸ್ವಿಚ್ ಆಫ್ ಆಗುವ, ಆನ್ ಆಗುವ ತಂತ್ರಗಾರಿಕೆಯನ್ನು ಮೈಗೂಡಿಸಿಕೊಂಡುಬಿಟ್ಟಿದ್ದೆ. ಎಷ್ಟೋ ಬಾರಿ ಬಾಯ್ಸ್ ಕಲಾಶಾಲೆಯ ನನ್ನ ಕೆಲವು ವಿದ್ಯಾರ್ಥಿಗಳು, ಮಿಸ್ ನಿಮ್ಮ ಜೋಕ್ ಎಲ್ಲಿ ಕೊನೆಗೊಂಡು, ಗಂಭೀರ ತಾತ್ವಿಕ ಸಂವಾದ ಯಾವಾಗ ಆಗುತ್ತದೆಂಬುದು ನಿಮ್ಮ ಮಾತುಗಳಲ್ಲಿ ತಿಳಿಯುವುದೇ ಇಲ್ಲ ಎನ್ನುತ್ತಿದ್ದರು. ರಾಮಾನೂ ಸೀತೇನೂ ಬೇರೇನ? ಎನ್ನುವಂತಿರುತ್ತಿತ್ತದು. ನಿಜವಾಗಿಯೂ ಆ ಹೆಸರಲ್ಲೇನಿದೆಮಹಾನ ಪತ್ರವು ೧೯೮೮ರ ಕಾಲದಿಂದ ಈಗಷ್ಟೇ ನನ್ನ ಫೇಸ್‌ಬುಕ್ ಅಕೌಂಟಿಗೆ ಬರುವಂತಿದ್ದರೆ ಹೇಗಿರುತ್ತದೆ ಎಂಬ ಫ್ಯಾಂಟಸಿಯ ಕಲ್ಪನಾಲಹರಿಯೊಂದನ್ನು ತೇಲಿಬಿಟ್ಟೆ. ಪತ್ರದ ಒಕ್ಕಣೆಯ ಶೈಲಿ, ಬರವಣಿಗೆಯ ರೀತಿ, ಎಲ್ಲವೂ ಹಾರ್ಡ್‌ಕಾಪಿಯಲ್ಲಿದೆಯೇನೋ ಸರಿ. ಅಕ್ಷರದ ಫಾಂಟ್ ಸಹ ಸ್ವಲ್ಪ ವಿಶೇಷವಾಗಿತ್ತು. ಖಚಿತವಾಗಿ ಹೇಳಬಹುದಾದರೆ, ಆಗೆಲ್ಲಾ ಇಪ್ಪತ್ತು ವರ್ಷದ ಹಿಂದೆ ಟೈಪಿಂಗ್ ಮಷಿನ್ನಿನಲ್ಲಿ ಕುಟ್ಟಿದಂತಿದ್ದವಲ್ಲ ಆ ಅಕ್ಷರಗಳಂತಿದ್ದವಿವು. ಆದರೆ ಕೈಬರವಣಿಗೆಯು ಕಂಪ್ಯೂಟರ್ ಬಂದ ನಂತರ ಬದಲಾಗಿಹೋಯಿತೆ? ಫೇಸ್‌ಬುಕ್ಕಿನಲ್ಲಿ ಬಂದ ಈ ಮೆಸೇಜಿನ ಹಸ್ತಪ್ರತಿಯಂತಹ ಫಾಂಟನ್ನು ನಾನು ಎಂದೂ ಎಲ್ಲಿಯೂ ನೋಡಿರಲಿಲ್ಲ. 
 
ಛಾಯಾಚಿತ್ರಣದ ಅನ್ವೇಷಣೆಯ ನಂತರ ಜನ ಭಾವಚಿತ್ರಗಳನ್ನು ಚಿತ್ರಿಸುವ ರೀತಿ ಬದಲಾಗಿ ಹೋಯಿತೆ? ಈ ಎರಡೂ ಪ್ರಶ್ನೆಗಳಿಗೇನೂ ಸಾಂಗತ್ಯವಿದ್ದಂತಿದ್ದು, ಅದೇನೆಂದು ತಿಳಿಯದಾದೆ. ಹೃದಯಕ್ಕೆ ಗೋಚರಿಸಿದ್ದು ಬುದ್ಧಿಗೆ ಎಟುಕದೇ ಹೋದಲ್ಲಿ ಅದು ಅಸ್ತಿತ್ವದಲ್ಲೇ ಇಲ್ಲವೆಂಬಂತೆ ವಾದಿಸುತ್ತಾರಲ್ಲ ಮಂದಿ ಹಾಗಾಯಿತಿದು. ಕುದುರೆ ಓಡುವಾಗ ನಾಲ್ಕೂ ಕಾಲುಗಳು ಒಂದೆಡೆ ಕೂಡಿ ನಂತರ ಒಮ್ಮೆಲೆ ಪರಸ್ಪರ ದೂರವಾಗುವ ಸರಳ ಚಲನೆಯು ಕಲಾವಿದರಿಗೆ ತಿಳಿದು ಬಂದದ್ದೇ ಛಾಯಾಚಿತ್ರಣ ಹುಟ್ಟಿಕೊಂಡ ಮೇಲೆ ಎಂಬ ಇ.ಎ.ಗಾಂಬ್ರಿಚ್ ಎಂಬ ಕಲಾಇತಿಹಾಸಕಾರನ ನಿರೂಪಣೆ ನಿಜವಾದರೆ ಅದರ ಆತ್ಯಂತಿಕ ಪರಿಣಾಮ ಹೇಗಿರಬಹುದು, ಅಲ್ಲವೆ? ನಾಳೆ ನನ್ನ ಮುತ್ತಾತ ಮತ್ತು ಮರಿಮೊಮ್ಮೊಗ ಒಟ್ಟಿಗೆ ಬಂದು ನನಗೆ ಎದುರಾದರೆ, ನಾನು ತ್ರಿಕಾಲಜ್ಞಾನಿಯಾಗಿಬಿಡಬಹುದಲ್ಲ. ಕಾಣುವ ಪ್ರತಿಯೊಂದು ದೃಶ್ಯವೂ ಸಹ ತ್ರಿಕಾಲದ ಗುಣವನ್ನು ಹೊಂದಿರುತ್ತವೆ. ಕಂಡ ದೃಶ್ಯಕ್ಕೂ, ಗಮನಿಸಿ ನೋಡಲಾದ ಚಿತ್ರಕ್ಕೂ ಇರುವ ವ್ಯತ್ಯಾಸ ಇದೇ. ತ್ರಿಕಾಲದ ಸಾಂಗತ್ಯ ದೊರಕದ ಚಿತ್ರ ಕೇವಲ ಚಿತ್ತಾರವಾಗುತ್ತದೆ. ಮನುಷ್ಯರಿಗೆ ಪ್ರಾಣವಾಯು ಹೇಗೆ ಮುಖ್ಯವೋ ಹಾಗೆಯ ತ್ರಿಕಾಲದ ಗೆಳೆತನ ಕಲಾಕೃತಿಗಳಿಗೆ. 
 
ಹೀಗೆ ಮನೋವರ್ತನೆಯನ್ನು ಇಷ್ಟಬಂದಂತೆ, ಬಂದಾಗ ಹರಿಯಬಿಡುವುದು ನನಗೆ ಭಾರಿ ಅಪ್ಯಾಯಮಾನವಾದ, ನಾನೇ ರೂಢಿಸಿಕೊಂಡ ಅಭ್ಯಾಸ. ಭೌತಿಕವಾಗಿ ದಕ್ಕದ್ದನ್ನು ಉಪಮೆಯಾಗಿ ದಕ್ಕಿಸಿಕೊಳ್ಳುವ ಇಂತಹ ಉಪಾಯಗಳೇ ಒಬ್ಬಂಟಿಯಾದ ನನ್ನ ಬದುಕಿಗೆ ಸ್ಪೂರ್ತಿಚಿಲುಮೆಯಾಗಿರುವುದು. ಈ ಮೆಸೇಜು ಸುಮ್ಮನೆ ಯಾರೋ ಗೆಳೆಯರು ಕಳಿಸಿದ ತರಲೆಯಾಗಿರಬಹುದು, ಇಲ್ಲವೇ ಕಾಲವನ್ನು ಸಣ್ಣ ಪೊಟ್ಟಣದಲ್ಲಿ ಹುದುಗಿಸಿಟ್ಟ ಸೃಷ್ಟಿವೈಚಿತ್ರ್ಯವೂ ಆಗಿರಬಹುದು ಎಂಬ ಎರಡೂ ಚಿಂತನೆಗೆ ಒಮ್ಮೆಲೆ ಅವಕಾಶವಿತ್ತೆ ನನ್ನ ಮನಸ್ಸಿನಲ್ಲಿ. ಹಾಸಿಗೆಯಲ್ಲಿ ಬಿದ್ದುಕೊಂಡೇ ನೋಟ್‌ಬುಕ್ಕನ್ನು ತೆರೆದು, ಫೇಸ್‌ಬುಕ್ಕಿನಲ್ಲಿ ಪ್ರತಿಕ್ರಿಯೆಯಾಗಿ ಹೀಗೆ ಬರೆದೆ, ಓಂ, ಶ್ರೀ. ಡಿಯರ್ ಹೆಸರಲ್ಲೇನಿದೆಮಹಾ, ನಿನ್ನ ಹೆಸರಿನಲ್ಲೇ ಎಂತಹ ವಿನಯ ಅಡಗಿಸಿಟ್ಟಿದ್ದೀಯಲ್ಲೋ ಮಹಾಶಯ (ನೀನು ಗಂಡು ಎಂದು ಭಾವಿಸಿದ್ದೇನೆ). ಆಗಲಿ, ಹದಿನೈದು ದಿನಗಳಲ್ಲೇ ನೀನು ಕೇಳಿರುವ ಕಲಾಕಮ್ಮಟಕ್ಕೆ ಪೂರಕವಾಗಿ ಆರ್.ಎಂ.ಹಡಪದರು ಕ್ಯುರೇಟ್ ಮಾಡಿದ ಸಮೂಹ ಶಿಲ್ಪದ ಬಗ್ಗೆ ಲೇಖನವನ್ನು ಬರೆದು ಕಳಿಸುವ, ಮತ್ತು ಸೆಮಿನಾರಿನಲ್ಲಿ ಬಾಯ್ ಕಲಾಶಾಲೆಯಲ್ಲಿ ಈ ಒಂದೊಮ್ಮೆ-ಗರ್ಲ್-ಆಗಿದ್ದು-ಈಗ-ಹೆಣ್ಣಾಗಿರುವ ಈಕೆ ಭಾಗವಹಿಸುವಳು. ಆದರೆ ಒಂದು ತೊಡಕಿದೆ. ನಾನಿರುವುದು ೨೦೧೧ರಲ್ಲಿ. ನೀನಾದರೆ ೧೯೮೮. ಜೋಕಾ? ನನ್ನ ಲೇಖನವನ್ನು ತಿರುವು ಮರುವು ಕಾಲದಲ್ಲಿ ಹೇಗೆ ತಲುಪಿಸುವುದು ಇಲ್ಲಿಂದ ಅಲ್ಲಿಗೆ ಎಂಬುದನ್ನು ತಿಳಿಸಬೇಕಾಗಿ ವಿನಂತಿ, ಎಂಬ ವ್ಯಂಗ್ಯವನ್ನು ಹೆಸರಲ್ಲೇನಿದೆಮಹಾನ ಫೇಸ್‌ಬುಕ್ ಅಕೌಂಟಿಗೆ ಕಳಿಸಿ, ಎಂಟರ್ ಬಟನ್ ಒತ್ತಿದೆ. ಒಂದು ಬತ್ತಿ ಹತ್ತಿಸಿ, ಅರ್ಧ ಕಪ್ ಚಹಾ ಮಾಡಿಕೊಂಡು ಕುಡಿಯುವಷ್ಟರಲ್ಲಿ--ಸಿಗರೇಟ್ ಸೇದಿದ ನಂತರ ಚಾಯ್ ಕುಡಿವವರನ್ನು ಮೊದಲ ಬಾರಿಗೆ ನಾನು ನೋಡಿದ್ದು ನನ್ನನ್ನೇ, ಎಲ್ಲರೂ ವದಲು ಕುಡಿದು ಆಮೇಲೆ ಸೇದುತ್ತಾರೆ--ನನ್ನ ಅಕೌಂಟಿಗೆ ಆತನ ಉತ್ತರ ಬಂದಿತ್ತು! 
 
ಅದರ ಒಕ್ಕಣೆ ಹೀಗಿತ್ತು: ಸೋಖು ಉರುಫ್ ಖಲಾ ಕೃತಿ, ಉರುಫ್ ಖಲಾ.ಕೆ, ಲೇಖನ ಖಳಿಸಲು ಒಪ್ಪಿದ್ದಕ್ಕೆ ಧನ್ಯವಾದಗಳು. ಜೋಕಾ? ಎಂದು ನೀವು ಖೇಳಿರುವುದನ್ನು ನಾನೂ ಒಪ್ಪುತ್ತೇನೆ. ಇದೇನು ಜೋಕಾ? ನೀವು ಹದಿಮೂರು ವರ್ಷ ಮುಂದಖ್ಖೆ, ೧೯೮೮ರಿಂದ ೨೦೧೧ ಹೋಗಿದ್ದಾದರೂ ಹೇಗೆ? ಅಲ್ಲಿ ನಮ್ಮ ನಿಮ್ಮ ಮಖ್ಖಳುಗಳೆಲ್ಲ ಚೆನ್ನಾಗಿದ್ದಾರ? ನಾನು ನೀವು ಮದುವೆಯಾಗಿದ್ದೇವಾ? ಪರಸ್ಪರರನ್ನಾ ಅಥವ ಬೇರೆಬೇರೆಯವರನ್ನಾ? ಖೂಡಲೆ ತಿಳಿಸಿದಲ್ಲಿ ೧೯೮೮ರಲ್ಲಿ ವಾಸವಾಗಿರುವ ನಾನು ನಿಮಗೆ ಪ್ರೇಮಪತ್ರ ಖೊಡಬಹುದಾ ಇಲ್ಲವಾ ಎಂಬುದನ್ನು ನಿರ್ಧರಿಸಲು ಸುಲಭವಾಗುತ್ತದೆ. ಅಂದ ಹಾಗೆ ಆ ನಿಮ್ಮ ೨೦೧೧ ಖಾಲದಲ್ಲಿ ನಾನು ಬದುಖಿದ್ದೇನೆಯೆ, ಹಾಗಿದ್ದಲ್ಲಿ ಹೇಗೆ ಕಾಣುತ್ತಿದ್ದೇನೆ ಎಂದು ಒಂದು ಫೋಟೋ ತೆಗೆದು ಖಳಿಸಬೇಕಾಗಿ ವಿನಂತಿ. ಇಂತಿ ವಿಶ್ವಾಸಿ, ಹೆಸರಲ್ಲೇನಿದೆಮಹಾ ಉರುಫ್ ಅನೇಖ.
(೩೦)
ಈ ತರಲೆಯನ್ನು ಮುಂದುವರೆಸಬೇಕು ಎಂಬ ಹಠವನ್ನು ನಾನೇ ನಾನಾಗಿ ಹುಟ್ಟಿಹಾಕಿಕೊಂಡೆ. ಇತ್ತೀಚಿನ ವರ್ಷಗಳಲ್ಲಿ ನಾನು ಬ್ಯಾಟರಿ ಶೆಲ್ ಹಾಕಿದ ಬೊಂಬೆಯಂತೆ. ಬೇಕಾದಾಗ ಸ್ವಿಚ್ ಆಫ್ ಮತ್ತು ಆನ್ ಆಗುವುದನ್ನು ಚೆನ್ನಾಗಿ ರೂಢಿಸಿಕೊಂಡುಬಿಟ್ಟಿದ್ದೆ ಮತ್ತು ಅದರ ಬಗ್ಗೆ ಬಹಳ ಹೆಮ್ಮೆಪಡುವ ಆಸೆಯನ್ನೂ ಬೆಳೆಸಿಕೊಳ್ಳತೊಡಗಿದ್ದೇನೆ, ಅದೂ ಕನ್ನಡದ ಟಿವಿ ಧಾರಾವಾಹಿಗಳ ಧಾರಾಕಾರವಾದ ಕಾಲದ ಎಳೆದಾಟವನ್ನು ವರುಷಗಟ್ಟಲೆ ಗಮನಿಸಿದ ಪರಿಣಾಮವೋ ಎಂಬಂತೆ. ಒಬ್ಬಳೇ ಸಿನೆಮ ನೋಡುವಾಗ, ಕ್ರಿಕೆಟ್ ನೋಡುವಾಗ, ಸಂತಸದಿಂದ ಖುಷಿಯಾದಾಗ ಅಳುವುದು, ದುಃಖವಾದಾಗ ಅಳುವುದು, ಅದನ್ನು ತಿರುವುಮರುವು ಮಾಡುವುದು-ಇವೆಲ್ಲವೂ ಆ ನನ್ನ ರೂಢಿಯ ಆಫರಿನ ಪ್ಯಾಕೇಜಿನ ಭಾಗವಾಗತೊಡಗಿದೆ ಕೂಡ.
 
ಫೇಸ್‌ಬುಕ್ಕಿನಲ್ಲಿ ಮತ್ತೆ ಚಾಟ್ ಮಾಡತೊಡಗಿದೆ ಅನೇಖನೊಂದಿಗೆ. ನಾನು ಪ್ರತಿಕ್ರಿಯೆ ಬರೆದೆ, ಹಾಯ್ ಅನೇಖ. ಎಲ್ಲಿದ್ದೀಯೋ ಮಾರಾಯ. ಬಿ.ಎಫ್.ಎ ಡಿಗ್ರಿ ಮುಗಿದ ನಂತರ, ೧೯೯೦ರ ನಂತರ ಎಲ್ಲಿ ಹಾಳಾಗಿಹೋದ್ಯೋ? ಇಪ್ಪತ್ತೊಂದು ವರ್ಷದ ನಂತರ, ಈಗ, ಅಚಾನಕ್ಕಾಗಿ, ವಾಹ್!.
ಪರಿಚಯ ಮತ್ತು ಸಲುಗೆ ಉಂಟಾದ ಕೆಲವೇ ದಿನಗಳಲ್ಲಿ ಒಂದು ಸಾಲಿನ ಪತ್ರ ಬರೆಯುವಷ್ಟು ಶ್ರೀಮಂತಳಾಗಿಬಿಟ್ಟಿದ್ದೀರ ಸೋಕುಮಾರಿಯರೆ?
ಅದೇನ್ ಮಾತಾಡ್ತೀಯೋ ಗೊತ್ತಿಲ್ಲ. ನಾವಿಬ್ಬರೂ ಕಲಾಶಾಲೆ ಸೇರಿದ್ದು ೧೯೮೫ರಲ್ಲಿ. ಅಂದರೆ ನಮ್ಮಿಬ್ಬರ ಪರಿಚಯವಾಗಿ ಇಪ್ಪತ್ತಾರು ವರ್ಷವಾದರೂ ಕೆಲವೇ ದಿನಗಳ ಪರಿಚಯವೆನ್ನುತ್ತೀಯಲ್ಲ!
ನಿಮ್ಮ ಗಣಿತದ ಲೆಕ್ಕಾಚಾರವೆ ತಪ್ಪಾದಂತಿದೆ ಸೋಕುಮಾರಿಯವರೆ. ೧೯೮೫ರಲ್ಲಿ ಖಲಾಶಾಲೆ ಸೇರಿದ್ದರಿಂದ ಈಗ ನಮ್ಮ ಖಂಗಳು ಮಾತನಾಡಲು ಶುರುವಾಗಿ ಮೂರು ವರ್ಷಗಳಾಯಿತಷ್ಟೇ, ಅಲ್ಲವೆ? ಈ ಇಪ್ಪತ್ತಾರು ವರ್ಷ ಎಂದರೇನು? ನಮ್ಮಿಬ್ಬರ ವಯಸ್ಸೇ ಈಗ ಇಪ್ಪತ್ತಮೂರು ಅಲ್ಲವೆ? ಎಂದು ಬರೆದಿದ್ದ ಅನೇಖ.
 
ನಾನು ಒಂದು ಕನ್ನಡಕ ತೊಟ್ಟ ಸ್ಮೈಲಿಯನ್ನು ಕುಟ್ಟಿ ಚಾಟಿ ಬಾಕ್ಸಿಗೆ ಹಾಕಿದೆ. ಕೂಡಲೆ ಪ್ರತಿಕ್ರಿಯೆಯೊಂದು ನನ್ನ ಬಾಕ್ಸಿಗೆ ಬಂದು ಬಿದ್ದಿತು.
ಒಂದೆರೆಡು ಸಾಲಿನ ಪತ್ರಗಳನ್ನು ಬರೆವುದು ನನಗೆ ತುಂಬಾ ಕಾಸ್ಟ್ಲಿಯಾಗುತ್ತೆ, ನಾವಿನ್ನೂ ವಿದ್ಯಾರ್ಥಿಗಳಲ್ಲವೆ ಪರಿಷತ್ತಿನಲ್ಲಿ. ಕಾರ್ಡಿನಲ್ಲಿ ಬರೆದರೆ ಗೆಳೆಯರು ಓದಿ,--ಓದಲು ನೀಡದಿದ್ದಲ್ಲಿ, ಓದದೆಯೇ-ರೇಗಿಸುತ್ತಾರೆ, ಸೋಕುಮಾರಿಯವರೆ. ಯಾಕೆ ಒಂದು ವಾರದಿಂದ, ಅಂದರೆ ಈ ಪತ್ರವ್ಯವಹಾರವು ನಮ್ಮಿಬ್ಬರ ನಡುವೆ ಆರಂಭಗೊಂಡ ದಿನದಿಂದ ನೀವು ಪರಿಷತ್ತಿನಲ್ಲಿ ಕಾಣುತ್ತಿಲ್ಲವಲ್ಲ. ಟೀಚರ್‌ಗಳೂ ಸಹ, ನೀವು ಅವರುಗಳ ನೆಚ್ಚಿನ ವಿದ್ಯಾರ್ಥಿನಿಯಾದ್ದರಿಂದ, ನಿಮ್ಮನ್ನು ಕುರಿತು ವಿಚಾರಿಸುತ್ತಿದ್ದಾರೆ, ಎಂದು ಬರೆದ ಅನೇಖ. ವಿಕ್ಷಿಪ್ತ ವ್ಯಕ್ತಿ ಈತ. ತೀರ ಭಾವುಕವಾದಾಗ, ಒಮ್ಮೊಮ್ಮೆ ಸಮಚಿತ್ತದಿಂದ ಬರೆದಾಗ, ಕವನ್ನು ಖವನ್ನಾಗಿಸುತ್ತಾನೆ. ಖ ಅಂತ ಬರೆದಾಗ ಈತ ಭಾವುಕನಾಗಿರುತ್ತಾನಾ ಅಥವ ಕ ಬಳಸುವಾಗ ಕಗ್ಗವಾಗಿರುತ್ತಾನೆ ಎಂಬುದನ್ನು ನಾನೇ ನನ್ನ ಬಗ್ಗೆ ನಿರ್ಧರಿಸಲಾರದವನಾಗಿದ್ದೇನೆ ಎಂಬ ಅನೇಖನ ಹೇಳಿಕೆ ಆಗೆಲ್ಲಾ ಪರಿಷತ್ತಿನಲ್ಲಿ ಪ್ರಸಿದ್ಧವಾಗಿತ್ತು. ನಾನು ಆತನ ಖತರ್ನಾಕ್ ಭಾಷಾ ಬಳಕೆಯನ್ನು ಜೀರ್ಣಿಸಿಕೊಂಡು ಉತ್ತರಿಸಿದೆ, 
ನೀನು ಸ್ಟೂಡೆಂಟ್ ಆಗಿದ್ದಾಗಿ ಎಷ್ಟು ಸೀರಿಯಸ್ಸಾಗಿದ್ದೆ, ಈಗ ಯಾಕೆ ಈ ಪ್ರಾಕ್ಟಿಕಲ್ ಜೋಕುಗಳೆಲ್ಲ. ೧೯೮೮ರಲ್ಲಿದ್ದೇನೆ ಎಂದು ನೀನು ಬರೆಯುತ್ತಿರುವುದರ ಅರ್ಥವೇನು. ಆಗ ಇಂಟರ್ನೆಟ್ ಎಲ್ಲಿತ್ತು?
ಇಂಟರ್ ನೆಟ್ಟ? ನಮಗೆ ಗೊತ್ತಿರುವುದು ಸೈಕಲ್ ಚೈನು, ನಟ್ಟು ಬೋಲ್ಟುಗಳೇ. ಏನು ಇಂತರ್ನೆಟ್ಟು ಅಂದ್ರೆ? ಎಂದು ಉತ್ತರ ರೂಪದ ಪ್ರಶ್ನೆ ಕೇಳಿದ್ದ ಅನೇಖ.
 
ನನಗೆ ಏನೋ ಅನುಮಾನವಾದಂತಾಯಿತು. ಆ ಅನುಮಾನ ಹುಟ್ಟಿ, ಸ್ವಲ್ಪ ಬೆಳೆಯಲು ಹಲವು ಗಂಟೆಗಳೇ ತೆಗೆದುಕೊಂಡಿತ್ತು. ಸ್ವಲ್ಪ ತಡೆದು ಅಂದೆ ಸಂಜೆ ಚಾಟ್-ಬಾಕ್ಸಿನಲ್ಲಿ ಬರೆದೆ, ಅನೇಖ, ಒಂದು ಸೀರಿಯಸ್ ಪ್ರಶ್ನೆ.
ದಯವಿಟ್ಟು ಕೇಳಿ.
ಈಗ ನಾನು ಬರೆಯುತ್ತಿರುವ ವಾಕ್ಯ ನಿನಗೆ ಹೇಗೆ ಕಾಣುತ್ತಿದೆ?
ಇದೇನು ಬರೆಯುತ್ತಿರುವ ಎಂಬ ಭಾಷಾ ಪ್ರಯೋಗ. ನೀವು ಇನ್‌ಲ್ಯಾಂಡ್ ಕಾಗದದ ಮೇಲೆ ಬರೆದು ಆದ ಮೇಲೆಯೇ ಅಲ್ಲವೆ ಅದನ್ನು ನಾನು ಓದುತ್ತಿರುವುದು, ಅಂಚೆಯ ಮೂಲಕ ನನ್ನ ಕೈಸೇರಿಯಾದ ಮೇಲೆ?!
ಯಾವ ಕಲರ್ ಇಂಕ್ ಬಳಸಿ ಬರೆದಿದ್ದೇನೆ?
ಬರೆದ ನಿಮಗೇ ಅದು ಗೊತ್ತಿಲ್ಲವೋ?
ಪೆನ್ ಇಲ್ಲದೆ ಬರೆಯುತ್ತಿದ್ದೇನೆ, ಫೇಸ್‌ಬುಕ್ಕಿನ ಚಾಟಿನಲ್ಲಿ.
ಅಂದರೆ ನೀವು ಮಾತನಾಡಿ, ಅದು ತಾನೆ ತಾನಾಗಿ ಇನ್‌ಲ್ಯಾಂಡ್ ಪತ್ರದ ಮೇಲೆ ನಿಮ್ಮ ಹಸ್ತಪ್ರತಿ ಶೈಲಿಯಲ್ಲಿ ಮೂಡಿ, ಆ ಪತ್ರವು ತಾನೇ ಅಂಚೆಪೆಟ್ಟಿಗೆಯನ್ನು ಸೇರಿ, ಅದು ನನಗೆ ತಲುಪುತ್ತಿದೆಯೇ? ಅಂದ ಹಾಗೆ ಈ ಫೇಸು, ಬುಕ್ಕು, ಚಾಟು-ಇವೆಲ್ಲವೂ ನನಗೆ ಅರ್ಥವಾಗುತ್ತಿಲ್ಲ. ನಾನು ಕಾನ್ವೆಂಟ್ ಶಾಲೆ ಓದಿದವನಲ್ಲ, ಸ್ವಲ್ಪ ವಿವರಿಸುತ್ತೀರ?
ನಾನು ಇನ್ನೂ ಅಸ್ವಸ್ತಗೊಂಡೆ. 
ಅನೇಖ, ಬೀ ಸೀರಿಯಸ್. ದಯವಿಟ್ಟು ಗಮನವಿಟ್ಟು ಹೇಳು. ಈ ನಮ್ಮ ಸಂಭಾಷಣೆಯ ಆರಂಭವಾಕ್ಯವು ಎಲ್ಲಿ ಯಾವಾಗ-ಅಂದರೆ ಎಷ್ಟು ನಿಮಿಷಗಳ ಅಥವ ಗಂಟೆಗಳ ಕಾಲದ ಹಿಂದೆ ಆರಂಭಗೊಂಡಿತು ಸ್ವಲ್ಪ ವಿವರಿಸುವೆಯ? ನನಗೇನೋ ಅನುಮಾನ, ಎಂದು ಸ್ವಲ್ಪ ಗರಂ ಆದೆ.
ಸುದೀರ್ಘ ಮೌನದ ನಂತರ ಉತ್ತರ ಬಂದಿತು, ಸೋಕು ಉರುಫ್ ಕಲಾಕೃತಿ ಉರುಫ್ ಕಲಾ.ಕೆ, ನಿಮಗೆ ನಾನು ಬರೆದ ಮೊದಲ ಪತ್ರ ೧೯೮೮ರ ಸೆಪ್ಟೆಂಬರ್ ೫ಕ್ಕೆ ಅಂಚೆಗೆ ಹಾಕಲಾಗಿದ್ದು. ಇಂದು ೩೦ನೇ ಸೆಪ್ಟೆಂಬರ್ ೧೯೮೮. ನಡುವೆ ಬರೆದ ಒಂದೊಂದೇ ಸಾಲಿನ ಪತ್ರಗಳು ಒಂದೊಂದು ದಿನದ್ದು. ಅವುಗಳನ್ನೆಲ್ಲ ಇತ್ತೀಚಿನ ಲೇಟೆಸ್ಟ್ ತಂತ್ರಜ್ಞಾನವಾದ ಝೆರಾಕ್ಸಿನಲ್ಲಿ ಪ್ರತಿಕೃತಿ ತೆಗೆದು, ಎಲ್ಲವನ್ನೂ ನಿನಗೆ ಪೋಸ್ಟ್ ಮಾಡಿರುವೆ. ದಯವಿಟ್ಟು ಪರಾಂಭರಿಸಬೇಕಾಗಿ ವಿನಂತಿ, ಎಂದು ಅನೇಖನು ಅನೇಕ ವಾಕ್ಯಗಳನ್ನು ಒಟ್ಟಿಗೆ ಚಾಟಿಗೆ ಹಾಕಿದ್ದ. 
 
ನಾನು ಸ್ವಲ್ಪ ಇರಿಸುಮುರಿಸಿನಿಂದ ಎಲ್ಲವನ್ನೂ ಸಾಂಗೋಪಾಂಗವಾಗಿ ಓದಿದೆ, ಯಾವುದೋ ಆಂಟಿಕ್ ಬೆಲೆಬಾಳುವ ಕಲಾಕೃತಿಯೊಂದನ್ನು ಅಂಗುಲಂಗುಲವೂ ಪರಾಮರ್ಶಿಸುವಂತೆ. ಹಾಯ್ ಅನೇಖ. ಎಲ್ಲಿದ್ದೀಯೋ ಮಾರಾಯ. ಬಿ.ಎಫ್.ಎ ಡಿಗ್ರಿ ಮುಗಿದ ನಂತರ, ೧೯೯೦ರ ನಂತರ ಎಲ್ಲಿ ಹಾಳಾಗಿಹೋದ್ಯೋ? ಇಪ್ಪತ್ತೊಂದು ವರ್ಷದ ನಂತರ, ಈಗ, ಅಚಾನಕ್ಕಾಗಿ, ವಾಹ ಎಂಬ ವಾಕ್ಯವು ೬ನೆ ಸೆಪ್ಟೆಂಬರ್ ೧೯೮೮ರದ್ದೆಂದು ನಮೂದುಗೊಂಡಿದ್ದರೆ, ಅನೇಖ, ಬೀ ಸೀರಿಯಸ್. ದಯವಿಟ್ಟು ಗಮನವಿಟ್ಟು ಹೇಳು. ಈ ನಮ್ಮ ಸಂಭಾಷಣೆಯ ಆರಂಭವಾಕ್ಯವು ಎಲ್ಲಿ ಯಾವಾಗ ಆರಂಭಗೊಂಡಿತು ಸ್ವಲ್ಪ ವಿವರಿಸುವೆಯ? ಎಂಬ ವಾಕ್ಯವು ೨೯ನೇ ಸೆಪ್ಟೆಂಬರ್ ೧೯೮೮ರಂದು ಪೋಸ್ಟ್ ಆಗಿತ್ತು. ಇಂಟರ್ ನೆಟ್ಟ? ನಮಗೆ ಗೊತ್ತಿರುವುದು ಸೈಕಲ್ ಚೈನು, ನಟ್ಟು ಬೋಲ್ಟುಗಳೇ. ಏನು ಇಂತರ್ನೆಟ್ಟು ಅಂದ್ರೆ? ಎಂಬ ವಾಕ್ಯ ೨೩ನೇ ಸೆಪ್ಟೆಂಬರ್ ೧೯೮೮ರದ್ದಾಗಿತ್ತು!
(೩೧)
ಕಂಪ್ಯೂಟರ್ ತಂತ್ರಜ್ಞಾನ ಚೆನ್ನಾಗಿ ಗೊತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಸಂಪರ್ಕಿಸಿದೆ. ಆತ ನನ್ನ ನೋಟ್‌ಬುಕ್ಕಿನಲ್ಲಿ ಅನೇಖ ಮತ್ತು ನನ್ನ ನಡುವೆ ನಡೆದ ಎಲ್ಲವಿವರವದ ಮೂಲವನ್ನೂ ಹೆಕ್ಕಿ ತೆಗೆದ. ಯಾವ ಐ.ಪಿ ಅಡ್ರೆಸ್ಸಿನಿಂದ ಅನೇಖ ಬರೆಯುತ್ತಿದ್ದಾನೆ ಎಂದು ತೀವ್ರವಾಗೇ ಶೋಧಿಸಿದೆ. ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ, ಮ್ಯೂಸಿಯಂ ಕಟ್ಟಡದ ಪ್ರವೇಶದಲ್ಲಿರುವ ಮರ (ಪ್ರಸ್ತುತ ಎಂ.ಎಸ್.ನಂಜುಂಡರಾವ್ ಅವರ ಭಾವಶಿಲ್ಪವಿರುವ ಕೈತೋಟವನ್ನು ಪ್ರವೇಶಿಸಲಿರುವ ಕಾಲುಹಾದಿಯ ಪ್ರವೇಶದ್ವಾರದ ಬಲಕ್ಕಿರುವ ಮರ)ದ ಬಳಿಯಿಂದ ಅನೇಖ ಮೆಸೇಜುಗಳನ್ನು ಫೇಸ್‌ಬುಕ್ಕಿನಲ್ಲಿ ರಚಿಸಿದ್ದ. ಐ.ಪಿ ವಿಳಾಸದಲ್ಲೇ ಒಂದು ವಿಚಿತ್ರವಿದೆ ಎಂದು ಆ ತಂತ್ರಜ್ಞಾನ ಚೆನ್ನಾಗಿ ತಿಳಿದ ವಿದ್ಯಾರ್ಥಿ ನನಗೆ ತಿಳಿಸಿದ. ಉದಾಹರಣೆಗೆ ಐಪಿ ವಿಳಾಸವು ೨೨.೩೫.೭೩ ಇತ್ಯಾದಿಯಾಗಿರುತ್ತದೆ ಎಂದೂ, ಅನೇಖನು ಚಾಟ್ ಮಾಡಿರುವ ವಿಳಾಸವು ಹಾಗಲ್ಲವೆಂದು ಹೇಳಿದ. ಒಂದು ಚೀಟಿಯಲ್ಲಿ ಅನೇಖನ ಐ.ಪಿ ವಿಳಾಸವನ್ನು ಬರೆದು ನನ್ನ ಟೇಬಲ್ ಮೇಲಿಟ್ಟು ಕ್ಲಾಸಿಗೆ ಹೋಗಿದ್ದ ಆ ವಿದ್ಯಾರ್ಥಿ. ಅನೇಖನ ಐ.ಪಿ ವಿಳಾಸವನ್ನು ಸಾಫ್ಟ್‌ಬೋರ್ಡಿಗೆ ಅಂಟಿಸಿ ಅದನ್ನೇ ದಿಟ್ಟಿಸತೊಡಗಿದ್ದೆ. ಅದು ಹೀಗಿತ್ತು: ೧೫.೦೯.೧೯.೮೮-೩೦.೦೯.೨೦.೧೧. ಕೂಡಲೆ ಅದನ್ನು ಅರ್ಥ ಮಾಡಿಕೊಂಡೆ. ನಮ್ಮ ಫೇಸ್‌ಬುಕ್ ಸಂಭಾಷಣೆಯು ೧೯೮೮ರಲ್ಲಿ ಎಂದಿನಿಂದ ಎಂದಿನವರೆಗೂ ನಡೆಯಿತೆಂದು ಅನೇಖ ತಿಳಿಸಿದ್ದನೋ ಆ ದಿನಾಂಕಗಳನ್ನು ಸೂಚಿಸುತ್ತಿದ್ದವು ಈ ಐ.ಪಿ ವಿವರ. ಅಥವ ಹಾಗೆಂದು ನಾನು ಭಾವಿಸಿದ್ದೆ. ಅದನ್ನು ಹೊರತುಪಡಿಸಿ ಬೇರೆ ಯಾವ ತರ್ಕವೂ ಆ ಗಣಿತದಲ್ಲಿ ಕಾಣಲಿಲ್ಲ. ಪರಿಷತ್ತಿನ ಸಮೀಪವಿದ್ದ ಗಾಲ್ಫ್ ಮೈದಾನದ ಆ ಕಡೆಯಿದ್ದ ಬಾಯ್ ಕಲಾಶಾಲೆಯಲ್ಲಿ ಪಾಠ ಮಾಡುತ್ತಿದ್ದ ನಾನು ಎದ್ದು, ರಸ್ತೆ ದಾಟಿ, ಪರಿಷತ್ತನ್ನು ಪ್ರವೇಶಿಸಿ, ಆ ನಿರ್ಧರಿತ ಮರದ ಬಳಿಬಂದೆ. ಅಲ್ಲಿ ಅನೇಖ ಲ್ಯಾಪ್‌ಟಾಪ್ ಇರಿಸಿಕೊಂಡು, ಮರದ ಬುಡದಲ್ಲಿ ಕುಳಿತು ಚಾಟ್ ಮಾಡುವುದನ್ನು ಕಲ್ಪಿಸಿಕೊಂಡೆ. ಇಪ್ಪತ್ತೊಂದು ವರ್ಷದ ನಂತರ ಆತ ಹೇಗಿರಬಹುದು ಎಂದೂ ಕಲ್ಪಿಸಿಕೊಳ್ಳತೊಡಗಿದೆ. ತಲೆಕೂದಲು ಉದುರಿ, ಸ್ವಲ್ಪ ಬೊಜ್ಜು ದೇಹದ ಮಧ್ಯಪ್ರದೇಶದಲ್ಲಿ ಸೇರಿಹೋಗಿ, ಇರುವ ಕೂದಲೂ ಸಹ ಬೆಳ್ಳಗೋ, ಗ್ರೇಬಣ್ಣದ್ದೋ ಆಗಿರುವಂತೆ ನೆನೆಸಿಕೊಂಡು ಒಳಗೊಳಗೇ ಮಜಾತೆಗೆದುಕೊಂಡೆ. ತೀರ ಆಕರ್ಷಕವಾಗಿದ್ದು ಅಪರಿಚಿತರಾಗಿದ್ದರೂ ಸಹ ಅವರೊಂದಿಗೆ ಅಥವ ಅವರ ಬಗ್ಗೆ-ಅವರುಗಳು ಹೆಣ್ಣಿರಲಿ ಅಥವ ಗಂಡೇ ಆಗಿರಲಿ--ಸುಮ್ಮನೆ ಮಾತನಾಡುವಾಗಲೂ ಸಹ ನಮ್ಮಲ್ಲಿ ಒಂದು ಅತಾರ್ಕಿಕ ಈರ್ಷ್ಯೆ ಉಂಟಾಗುವುದು ಸಹಜ. ಅದೇ ಸ್ವಲ್ಪ ಐಬು ಅಲ್ಲಲ್ಲಿ ಇದ್ದಲ್ಲಿ ಇವರೂ ನಮ್ಮ ರೇಂಜಿನವರೇ ಎಂದು ಸ್ವತಃ ಆಕರ್ಷಕವಾಗಿದ್ದು, ಅದರ ಬಗ್ಗೆ ಉದಾಸೀನರಾಗಿರುವವರಲ್ಲಿ ಒಂದು ನಿಶ್ಚಿಂತ ಭಾವವು ಉದ್ಭವವಾಗುವುದು ಸುಳ್ಳಲ್ಲ.
 
ಹಾಗೇ ಕಾರ್ಯಕಾರಣ ಸಂಬಂಧವಿಲ್ಲದಂತೆ ಆ ಮರದ ಸುತ್ತಲೇ ನನ್ನ ದೇಹ ಮತ್ತು ಮನಸ್ಸುಗಳನ್ನು ಗಿರಕಿಹಾಕುತ್ತಿರುವಾಗ ಚಕ್ಕನೆ ಒಂದು ಅಂಶ ಹೊಳೆಯಿತು. ೧೯೯೦ರಲ್ಲಿ, ಅಂದರೆ ಇಪ್ಪತ್ತೊಂದು ವರ್ಷದ ಹಿಂದೆ, ಈ ಮರಕ್ಕೆ ಒಂದು ವಿಶೇಷತೆ ಇತ್ತು. ಈಗಿಲ್ಲ. ವಿದ್ಯಾರ್ಥಿಗಳು ಅದರ ಸುತ್ತಲೇ ಹೆಚ್ಚಿರುತ್ತಿದ್ದರು. ಪರಿಷತ್ತಿನಲ್ಲಿ ಮೊದಲಿಂದಲೂ ಕೆಲಸ ಮಾಡುತ್ತಿದ್ದವರಿಗಾಗಿ ಹುಡುಕಾಡಿದೆ. ತೋಟದಲ್ಲಿ ಕೆಲಸ ಮಾಡುವ ಸಾಕಮ್ಮ ಸಿಕ್ಕಳು. ಏನ್ರಮ್ಮಾ ಚೆನ್ನಾಗಿದ್ದೀರ, ಈ ಕಡೆ ಜಾಸ್ತಿ ಬರದೇ ಇಲ್ಲ ನೀವು ಎಂದ ಆಕೆಯನ್ನು ಕರೆದೊಯ್ದು ಕ್ಯಾಂಟೀನಿನಲ್ಲಿ ಅರ್ಧ ಟೀ ಕುಡಿಸಿದೆ. ಅಷ್ಟಕ್ಕೇ ನಿಧಿ ಸಿಕ್ಕಷ್ಟು ಖುಷಿಗೊಂಡಳು, ಆಕೆಯ ಮ್ಯಾನೇಜರ್ ದೊಡ್ಡಯ್ಯ ಅಲ್ಲಿಂದಲೇ ಗುಟುರು ಹಾಕುತ್ತಿದ್ದರೂ ಸಹ. 
ಒಂದು ಮಾತು ಕೇಳಬೇಕಿತ್ತು ಸಾಕಮ್ಮ
ಕೇಳ್ರವ್ವ ಎಂದಳಾಕೆ.
ಆ ಮರಕ್ಕೆ ಒಂದು ಪೋಸ್ಟ್ ಡಬ್ಬ ಕಟ್ಟಿದ್ದರು ಗೊತ್ತಾ?
ಹೌದಲ್ಲ. ತುಂಬಾ ವರ್ಷ ಇತ್ತದು.
ಈಗ ಎಲ್ಲಿದೆ ಅದು?
ಗೊತ್ತಿಲ್ಲ.
ಎಷ್ಟು ವರ್ಷ ಆಯ್ತು ಆ ಡಬ್ಬಾ ತೆಗೆದು?
ಅದೇನೋಪ್ಪ ಗೊತ್ತಿಲ್ಲ ಎಂದು ಸಾಕಮ್ಮ ಮತ್ಯಾರನ್ನೋ ವಿಚಾರಿಸಲಾಗಿ, ಅಷ್ಟರಲ್ಲಿ ರಾಮಾಯಣ್ಣ ಎಂದು ಕರೆಸಿಕೊಳ್ಳುತ್ತಿದ್ದ ನಾರಾಯಣ ಬಂದ. ಆಗಿಂದಲೂ, ನಾವು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಅಲ್ಲಿ ಪೀವನ್ ಆಗಿದ್ದನಾತ. ಪೀವನ್‌ಗಳಲ್ಲೇ ಏವನು ನಾನು ಎನ್ನುತ್ತಿದ್ದ ಎಸ್.ಎಸ್.ಎಲ್.ಸಿ ಓದಿದ್ದ, ನನಗಿಂತಲೂ ಒಂದೆರೆಡು ವರ್ಷ ಕಿರಿಯನಾದ ರಾಮಾಯಣ್ಣ.
ಐದು ವರ್ಷ ಆಯ್ತು ಮೇಡಂ, ಪೋಸ್ಟಾಫೀಸ್ನೋರು ಆ ಕೆಂಪುಡಬ್ಬಾನ ತೆಗೆದುಹಾಕಿ. ಈಗೆಲ್ಲಾ ಯಾರು ಪೋಸ್ಟ್ ಮಾಡ್ತಾರೆ ಮೇಡಂ, ಎಲ್ಲಾ ಈಮೇಲ್, ಆರ್ಕುಟ್ಟು, ಫೇಸ್‌ಬುಕ್ಕು, ಎಸ್ಸೆಮ್ಮೆಸ್ಸು, ಐಪಾಡು ಅಂತೆಲ್ಲಾ ಇಮ್ಮೀಡಿಯಟ್ ಆಗಿ ಸುದ್ದಿ ಕಳಿಸಬಹುದಲ್ಲಾ. ಪೋಸ್ಟ್ ಡಬ್ಬವನ್ನು ಮರಕ್ಕೆ ಕಟ್ಟುವ ನಾಯಿಪಾಡು ಯಾರಿಗೆ ಬೇಕು ಹೇಳಿ, ಎಂದ ರಾಮಾಯಣ್ಣ.
 
ನನ್ನ ಅನುಮಾನ ತೀವ್ರವಾಗತೊಡಗಿತ್ತು. ನಿಜವೇ, ನಿಜಕ್ಕೂ? ಎಂದು ಎಂದೂ ಸಾಧಾರಣವಾಗಿ ಗಾಭರಿಯಾಗದ ನಾನು ಆ ಮರದ ಬಳಿ ಹೋಗಿ, ಒಮ್ಮೆ ಅದನ್ನು ಮುಟ್ಟಿ ಅದುಮತೊಡಗಿದೆ. ಕಾಮನ್ ಸೆನ್ಸಿಗೆ ಏಕಮುಖಿಯಾಗಿ, ನಿರ್ದಿಷ್ಟ ವೇಗದಲ್ಲೇ ಚಲಿಸುವ ಕಾಲವು ಅದಾವ ಕಾರಣಕ್ಕೋ ಈ ನನ್ನ ವಿಷಯದಲ್ಲಿ ಸ್ವಲ್ಪ ಏರುಪೇರು, ತಿರುವು ಮರವು ಆಗತೊಡಗಿದಂತೆನಿಸಿತ್ತು. ಈ ಸೈನ್ಸ್ ಫಿಕ್ಷನ್ನಿನ ಕಾಲಪಯಣ ಅಥವ ಟೈಮ್ ಟ್ರಾವಲ್ಲಿಗೂ ಕಲಾವಿಮರ್ಶಕಿ, ಕ್ಯುರೇಟರ್ ಆಗಿರುವ ನನ್ನ ವೃತ್ತಿಗೂ ಏನು ಸಂಬಂಧ, ನಾನ್ಸೆನ್ಸ್ ಎಂದುಕೊಂಡು ವಾಪಸ್ ಬಾಯ್ಸ್ ಕಲಾಶಾಲೆಗೆ ಹಿಂದಿರುಗಿದೆ. ಅಲ್ಲಿ ಒಂದೆರೆಡು ಕ್ಲಾಸುಗಳನ್ನು ತೆಗೆದುಕೊಂಡು ಮಧ್ಯಾಹ್ನದ ಊಟ ಮುಗಿಸಿ ಸುಮ್ಮನೆ ಕುಳಿತು ಕಪ್ಪಿಗೆ ಟೀಪುಡಿ, ಹಾಲು ಹಾಗೂ ಸಕ್ಕರೆಗಳನ್ನು ಬೆರೆಸುತ್ತಿದ್ದಾಗ ನನ್ನ ಕಲ್ಪನೆ, ನಂಬಿಕೆ ಮತ್ತು ಅನುಮಾನಗಳು ಕ್ರಮಬದ್ಧವಾಗಿ ಸಮ್ಮಿಶ್ರಗೊಳ್ಳಲು ತವಕಗೊಳ್ಳುತ್ತಿದ್ದವು. ಈ ಪರಿಕಲ್ಪನೆ ನಿಜವಾದರೆ ಎಷ್ಟು ಚೆನ್ನ: ನಾನು ೨೦೧೧ರಲ್ಲಿ ಫೇಸ್‌ಬುಕ್ಕಿನಲ್ಲಿ ಕಳಿಸುತ್ತಿರುವ ಮೆಸೇಜನ್ನು ೧೯೮೮ರಲ್ಲಿರುವ ಅನೇಖನಿಗೆ ಪತ್ರರೂಪದಲ್ಲಿ ತಲುಪುತ್ತ, ಆತ ಪ್ರತ್ಯುತ್ತರ ನೀಡುತ್ತಿದ್ದ ಕಾಗದವು ನನ್ನ ಫೇಸ್‌ಬುಕ್ ಮೆಸೇಜ್ ಆಗಿ, ನಾನು ಹಲವು ಕ್ಷಣಗಳ ವ್ಯತ್ಯಾಸದಲ್ಲಿ ಕಳಿಸುತ್ತಿದ್ದ ಮೆಸೇಜು, ೧೯೮೮ರಲ್ಲಿ ಹಲವು ದಿನಗಳಾಗಿ ಹರಡಿಕೊಳ್ಳುವ ಪರಿಯು, ಅಣುವಿನಲ್ಲಿ ಬ್ರಹ್ಮಾಂಡವನ್ನು ಸೂಚಿಸುವ ಗಾಭರಿಯ ಥ್ರಿಲ್ ಅನುಭವಿಸತೊಡಗಿದೆ. 
ನಿಜಕ್ಕೂ ಕಲ್ಪನೆಗೂ ಹೆಚ್ಚು ವ್ಯತ್ಯಯವಿಲ್ಲದ ನನ್ನ ಬದುಕಿನಲ್ಲಿ ಹೊಸದೊಂದು ರೋಮಾಂಚಕಾರಿ ಅಧ್ಯಾಯ ಆರಂಭವಾದಂತೆನಿಸುತ್ತಿತ್ತು.// 

Comments