ಕಾಲು ಬಂದ ಕವಿತೆ

ಕಾಲು ಬಂದ ಕವಿತೆ

 

ಮಳೆಗಾಲದಲ್ಲಿ ಎದ್ದೇಳುವ ಅಣಬೆಮರಿಯಂತೆ
ನಿನ್ನೆ ರಾತ್ರಿ ಬರೆಯುತ್ತಿದ್ದ ಕವನಕ್ಕೊಂದು
ಗುಲಾಬಿ ಬಣ್ಣದ ಕಾಲು ಬಂತು..

ಎಲ್ಲರಿಗೂ ಇರುವಂತೆ ಐದು ಬೆರಳುಗಳು ಮತ್ತು
ಆ ಬೆರಳುಗಳಿಗೆ ಹಾಲುಬಣ್ಣದ ಉಗುರುಗಳೂ
ಇದ್ದವು.

ಇದೇನಪ್ಪಾ , ಕವಿತೆಗೆಲ್ಲಾ ಕಾಲು
ಬಂದುಬಿಟ್ಟಿದೆ, ಇನ್ನೂ ಕವಿತೆ ಪೂರ್ಣ ಬೇರೆ ಆಗಿಲ್ಲ
ಎಂದು ಆಲೋಚಿಸುತ್ತಿದ್ದಂತೆ
ಕವಿತೆ ಎದ್ದು ಹೊರಟು
ಬಿಟ್ಟಿತು

ಈಗ ತಾನೇ ಹುಟ್ಟಿದ ಕಾಲು
ಎಲ್ಲಾದ್ರೂ ಎಡವಿ ಬಿದ್ದುಬಿಟ್ಟೀತು
ಅಯ್ಯಯ್ಯೋ ಎಂದುಕೊಂಡು
ಆ ಕತ್ತಲಲ್ಲಿ ಅದನ್ನೇ ಹಿಂಬಾಲಿಸಿದೆ

ನೋಡಿದರೆ, ಈ ಕವಿತೆ ದೂರ ಓಡುತ್ತಿತ್ತು..
ಕತ್ತಲಲ್ಲೂ ಕಾಣುವಂತೆ..
ಹೆಸರಿಡಿದು ಕರೆಯೋಣ ಎಂದರೆ
ಇನ್ನೂ ಹೆಸರು ಇಟ್ಟಿಲ್ಲ..
ಪೂರ್ಣವೇ ಆಗಿಲ್ಲ ಅಂತೀನಿ..

’ಕಾಣೆಯಾಗಿದೆ’ ಎಂದು ನಾಳೆ
ಪೇಪರಿನಲ್ಲಿ ಹಾಕಿದರಾಯಿತು ಎಂದು ಮನೆಗೆ ಬಂದು ಮಲಗಿದೆ
ಬೆಳಿಗ್ಗೆ ಎದ್ದು ನೋಡಿದರೆ..

ಪಠ್ಯ ಪುಸ್ತಕ ಸಮಿತಿಯವರು
ಬಂದು ಬೈದರು
ಆ ನನ್ನ ಕವಿತೆ ಮೂರನೇ ಕ್ಲಾಸ್ 
ಪುಸ್ತಕದಲ್ಲಿ ಹೋಗಿ ಕೂತುಬಿಟ್ಟಿದೆಯಂತೆ..

ಬಿ.ಎ. ಅಂತಿಮ ತರಗತಿಯವರಿಗೂ
ಕಷ್ಟ ಅರ್ಥವಾಗುವುದು..ಮೂರನೇ ಕ್ಲಾಸ್ ಮಕ್ಕಳು
ಅಳುತ್ತಿದ್ದಾರಂತೆ..
ಪೆನ್ಸಿಲ್ನಲ್ಲಿ ಬರೆದಿದ್ದರೆ ಅಳಿಸಬಹುದಿತ್ತೇನೋ..
ಹಾಳಾದ್ ಪೆನ್ನಲ್ಲಿ ಬರೆದುಬಿಟ್ಟೆ..
ಅಲ್ಲ, ನಂಗೇನು ಗೊತ್ತಿತ್ತು..
ಹೀಗೆ ಕವಿತೆಗೆಲ್ಲಾ ಕಾಲು ಬಂದು ಓಡಿಹೋಗುತ್ತದೆ ಎಂದು..

ಹೇಗೂ ಮುಂದಿನವರ್ಷ ಸಿಲೆಬಸ್ ಬದಲಾಗುತ್ತದೆ
ಆವಾಗ ಕಿತ್ತು ಹಾಕಿದ್ರಾಯ್ತು ಅಂತ ಬೈದವರಿಗೇನೋ
ಸಮಾಧಾನ ಮಾಡಿದೆ..

ಆದರೆ ಒಂದು ವರ್ಷದ ತರುವಾಯ..

ನನ್ನ ಕವಿತೆ ಮತ್ತೆ ಸಿಕ್ಕಿತು..
ಈಗ ಗುರ್ತವೇ ಸಿಗ್ತಿಲ್ಲ.. 
ಕವಿತೆಯ ಕಾಲಿಗೆ ಬೆಳ್ಳಿ ಗೆಜ್ಜೆ..
ಆ ಕವಿತೆ ಈಗ ಸಿನಿಮಾ ಸೇರಿದೆಯಂತೆ..
"ಯಾರೇ ಕವಿತೆ, ನಿನ್ನ ಸಿನಿಮಾ ಹಾಡು
ಮಾಡ್ದೋರು" ಎಂದು ಕೇಳಲಾಗಿ,

"ನೀ ಬರೆದ ಚಂದಕ್ಕೆ, ನನ್ನನ್ನು
ಸಿನಿಮಾ ಹಾಡು ಯಾರ್ ಮಾಡ್ತಾರೆ..
ನಿನ್ ಬಿಟ್ ಓಡಿ ಹೋಗಿದ್ದಕ್ಕೆ
ಯಾವ್ದೋ ಹಾಡಿನ ಮಧ್ಯೆ
ಕೋರಸ್ ಆಗಿ ಸೇರಿಕೊಂಡಿದ್ದೇನೆ.."

ಹೀಗೆಂದು ಹೇಳುತ್ತಾ ಬೆಳೆದ ಪಾದದ ಕವಿತೆ 
ತನ್ನನ್ನು ಪೂರ್ಣ
ಮಾಡುವ ಕವಿಯನ್ನರಸುತ್ತಾ 
ಹಾರಿಹೋಯಿತು.

Rating
No votes yet

Comments